Categories
ಸಿನಿ ಸುದ್ದಿ

ರೂಮ್‌ ಬಾಯ್‌ ಗೆಟಪ್‌ನಲ್ಲಿ ನಟ ಲಿಖಿತ್‌ ಸೂರ್ಯ, ನಟನೆಯ ಆಚೆ ಹೊಸ ಸಾಹಸಕ್ಕಿಳಿದ ಮಲೆನಾಡಿನ ಹುಡುಗ

ಮುಹೂರ್ತ ಮುಗಿಸಿಕೊಂಡು ಚಿತ್ರೀಕರಣಕ್ಕಿಳಿದ ಯುವ ಪಡೆ

ಯುವ ನಟ ಲಿಖಿತ್‌ ಸೂರ್ಯ ಅಭಿನಯದ “ರೂಮ್ ಬಾಯ್‌ʼ ಚಿತ್ರ ಅಧಿಕೃತವಾಗಿ ಸೆಟ್ಟೇರಿದೆ. ಬೆಂಗಳೂರಿನ ರಾಜರಾಜೇಶ್ವರಿ ನಗರದ ಗಣೇಶ್‌ ದೇವಸ್ಥಾನದಲ್ಲಿ ಶುಕ್ರವಾರ ಬೆಳಗ್ಗೆ ಮಹೂರ್ತ ಮುಗಿಸಿಕೊಂಡು, ಚಿತ್ರೀಕರಣ ಶುರುಮಾಡಿದೆ. ಐ ಕ್ಯಾನ್‌ ಪ್ರೊಡಕ್ಷನ್ಸ್‌ ಮೂಲಕ ನಿರ್ಮಾಣವಾಗುತ್ತಿರುವ ಈ ಚಿತ್ರಕ್ಕೆ ನಟ ಲಿಖಿತ್‌ ಸೂರ್ಯ ನಿರ್ಮಾಪಕ ಕಮ್‌ ನಾಯಕ ನಟ.

ಇದು ಲಿಖಿತ್‌ ಸೂರ್ಯ ಅಭಿನಯದ  ನಾಲ್ಕನೇ ಸಿನಿಮಾ. “ಲೈಫ್‌ ಸೂಪರ್‌ʼ, ʼಆಪರೇಷನ್‌ ನಕ್ಷತ್ರʼ ಹಾಗೂ ʼಗ್ರಾಮʼ ಹೆಸರಿನ ಚಿತ್ರಗಳಲ್ಲಿ  ನಾಯಕರಾಗಿ ಅಭಿನಯಿಸಿದ್ದಾರೆ.   ಈಗಾಗಲೇ ಲೈಫ್‌ ಸೂಪರ್‌ ಹಾಗೂʼ ಆಪರೇಷನ್‌ ನಕ್ಷತ್ರʼ ತೆರೆ ಕಂಡಿವೆ. “ಗ್ರಾಮʼಬಿಡುಗಡೆಗೆ ಸಜ್ಜಾಗಿದೆ. ಇದೇ ಚಿತ್ರ ” ರಾಮಪುರಂʼ ಹೆಸರಲ್ಲಿ ತೆಲುಗಿನಲ್ಲೂ ನಿರ್ಮಾಣವಾಗಿದೆ. ಅದರಲ್ಲೂ ಲಿಖಿತ್‌ ಸೂರ್ಯ ನಾಯಕ ನಟ. ಅದರಾಚೆ ಈಗ ರೂಮ್‌ ಬಾಯ್‌ ಎನ್ನುವುದು ಹೊಸ ಅವತಾರ. ಈ ಚಿತ್ರಕ್ಕೆ ಲಿಖಿತ್‌ ಸೂರ್ಯ ನಾಯಕ ಕಮ್‌ ನಿರ್ಮಾಪಕ. ಸಿನಿ ಪಯಣದಲ್ಲಿ ನಟನೆಯಾಚೆ ಅವರಿಗಿದು ನಿರ್ಮಾಣದ ಹೊಸ  ಸಾಹಸ.

ತಾರಾಗಣದಲ್ಲಿ ಲಿಖಿತ್‌ ಅವರೊಂದಿಗೆ ಚಿತ್ರದಲ್ಲಿ ಯಶ್‌ ಶೆಟ್ಟಿ, ವರ್ಧನ್‌ ತೀರ್ಥಹಳ್ಳಿ, ವಜರಂಗ್‌ ಶೆಟ್ಟಿ ಹಾಗೂ ರೋಶನ್‌ ಕೊಡಗು ಸೇರಿದಂತೆ ರಜನಿ, ಪದ್ಮಿನಿ, ಚಂದನಾ, ಪ್ರಗ್ಯಾ ಹಾಗೂ ಜನನಿ ನಾಯಕಿರಾಗಿ ಅಭಿನಯಿಸುತ್ತಿದ್ದಾರೆ. ಐವರು ನಾಯಕರು ಹಾಗೂ ಅಷ್ಟೇ ಸಂಖ್ಯೆಯ ನಾಯಕಿಯರ ಸುತ್ತ ನಡೆಯುವ ಕತೆ ಇದು. ಯುವ ಪ್ರತಿಭೆ ರವಿ ನಾಗಡದಿನ್ನಿ ಇದಕ್ಕೆ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಅವರಿಗಿದು ಚೊಚ್ಚಲ ಸಿನಿಮಾ. ಸಿನಿಮಾ ಮೇಲಿನ ಪ್ರೀತಿ, ಮೋಹ ಮತ್ತು ಆಸಕ್ತಿಗೆ ಎಂಜಿನಿಯರ್‌ ವೃತ್ತಿಯನ್ನೇ ಬಿಟ್ಟು ಬಂದು ನಿರ್ದೇಶಕ ಹ್ಯಾಟ್‌ ಹಾಕಿಕೊಂಡಿದ್ದಾರೆ.

ಹಲವು ನಿರ್ದೇಶಕರ ಬಳಿ ಸಹಾಯಕ ನಿರ್ದೇಶಕರಾಗಿ ದುಡಿದು, ನಿರ್ದೇಶನದ ಪಟ್ಟು ಕಲಿತುಕೊಂಡು ಈಗ ತಾವೇ ಸ್ವತಂತ್ರ ನಿರ್ದೇಶಕರಾಗಿದ್ದಾರೆ. ನಾಯಕ ನಟ ಲಿಖಿತ್‌ ಅವರಿಗೂ ಇಂತಹದೇ ವೃತ್ತಿ ಬದುಕಿನ ಹಿನ್ನೆಲೆ ಇದೆ. ಒಳ್ಳೆಯ ಕೆಲಸ ಗಿಟ್ಟಿಸಿಕೊಂಡು ವಿದೇಶಕ್ಕೆ ಹಾರಿ, ಕೈತುಂಬಾ ಸಂಪಾದನೆ ಮಾಡಿಕೊಂಡಿದ್ದ ಲಿಖಿತ್‌ ಈಗ ನಟ ಆಗಿದ್ದು ಕೂಡ ಸಿನಿಮಾದ ಮೇಲಿನ ಪ್ರೀತಿಗಾಗಿಯೇ. ಇವರಿಬ್ಬರು ಹಣ ಮಾಡುವುದಕ್ಕಾಗಿ ಸಿನಿಮಾ ಜಗತ್ತಿಗೆ ಬಂದವರಲ್ಲ ಎನ್ನುವುದನ್ನು ಅವರ ವೃತ್ತಿಯ ಹಿನ್ನೆಲೆಯೇ ಹೇಳುತ್ತೆ. ಒಟ್ಟಿನಲ್ಲಿ ಈ ಜೋಡಿ ಸಿನಿಮಾ ಮೇಲಿನ ಪ್ರೀತಿ, ಕಾಳಜಿ, ಮೋಹಕ್ಕಾಗಿಯೇ ಒಂದಾಗಿ ಈಗ ʼರೂಮ್‌ ಬಾಯ್‌ʼ ಚಿತ್ರ ಶುರು ಮಾಡಿದೆ. ಈ ಜೋಡಿಯ ಸಾಹಸಕ್ಕೆ ಸಂಕಲನಕಾರಾಗಿ ಕಿರಣ ಕುಮಾರ್‌, ಛಾಯಾಗ್ರಾಹಕರಾಗಿ ಧನ್‌ಪಾಲ್‌ , ಸಂಗೀತ ನಿರ್ದೇಶಕರಾಗಿ ರೋಣದ ಬಕ್ಕೇಶ್‌ ಸಾಥ್‌ ನೀಡಿದ್ದಾರೆ. ವಿಶೇಷ ಅಂದ್ರೆ ಈ ತಂಡಕ್ಕೆ ʼಸಿನಿ ಲಹರಿʼ ಕೂಡ ಕೈ ಜೋಡಿಸಿದೆ.

ಜ. 8 ರಿಂದಲೇ ಚಿತ್ರೀಕರಣ ಶುರುವಾಗಿದೆ. ನಂದಿಬೆಟ್ಟದ ಬಳಿಯ ರೆಸಾರ್ಟ್‌ ವೊಂದರಲ್ಲಿ ಚಿತ್ರದ ಮೊದಲ ಹಂತದ ಚಿತ್ರೀಕರಣ ಶುರುವಾಗಿದೆ. ಜ. 13 ರವರೆಗೂ ಅಲ್ಲಿಯೇ ಚಿತ್ರೀಕರಣ ನಡೆಯಲಿದೆಂತೆ. ಆ ನಂತರ ಎರಡನೇ ಹಂತದ ಚಿತ್ರೀಕರಣವನ್ನು ಬೆಂಗಳೂರು ಸುತ್ತ ಮುತ್ತ ನಡೆಸಲು ಪ್ಲಾನ್‌ ಹಾಕಿಕೊಂಡಿದೆ. ಇನ್ನು ರೂಮ್‌ ಬಾಯ್‌ ಎನ್ನುವ ಚಿತ್ರದ ಶೀರ್ಷಿಕೆಯೇ ವಿಭಿನ್ನವಾಗಿದೆ. ಉಳಿದಂತೆ ಚಿತ್ರದ ಕತೆ ಹೇಗೆ ಎನ್ನುವುದರ ಕುರಿತು ನಿರ್ದೇಶಕ ರವಿ ನೀಡುವ ವಿವರಣೆ ಏನು? ” ಇದೊಂದು ಸೈಕಾಲಜಿಕಲ್‌ ಸಸ್ಪೆನ್ಸ್‌ ಥ್ರಿಲ್ಲರ್‌ ಸಿನಿಮಾ. ಸಾಮಾನ್ಯವಾಗಿ ರೂಮ್‌ ಬಾಯ್‌ ಅಂದ್ರೆ ಒಂದು ಹೊಟೇಲ್‌ ಅಥವಾ ರೆಸಾರ್ಟ್‌ ನಲ್ಲಿ ನಡೆಯುವ ಕತೆ ಎನ್ನುವುದು ಎಲ್ಲರಿಗೂ ಗೊತ್ತಾಗುವ ವಿಚಾರ. ಆ ಪ್ರಕಾರ ಇಲ್ಲೊಂದು ರೆಸಾರ್ಟ್‌ ನಲ್ಲಿ ಒಂದು ಘಟನೆ ನಡೆಯುತ್ತೆ. ಅದೇನು, ರೂಮ್‌ ಬಾಯ್‌ಗೂ ಅದಕ್ಕೂ ಕನೆಕ್ಷನ್‌ ಎಂತಹದು ಎನ್ನುವುದೇ ಈ ಚಿತ್ರ. ಸೈಕಾಲಜಿಕಲ್‌ ಸಸ್ಪೆನ್ಸ್‌ ಮತ್ತು ಥ್ರಿಲ್ಲರ್‌ ಇದರ ವಿಶೇಷ ಎನ್ನುತ್ತಾರೆ ನಿರ್ದೇಶಕ ರವಿ.

Categories
ಸಿನಿ ಸುದ್ದಿ

ಕೆಜಿಎಫ್ 2 ಟೀಸರ್ ಲೀಕ್ ಆಯ್ತು….!

ನಾಳೆ ಬರಬೇಕಾಗಿದ್ದು, ಇಂದೇ ಬಂದಿದ್ದರ ಹಿಂದಿನ ಕೈಗಳು ಯಾವು? ಇದೇನು ಗಿಮಿಕಾ?

ಬಹು ನಿರೀಕ್ಷಿತ ಕೆಜಿಎಫ್ 2 ಚಿತ್ರದ ಟೀಸರ್ ಲೀಕ್ ಆಗಿದೆ.ರಾಕಿಂಗ್ ಸ್ಟಾರ್ ಯಶ್ ಹುಟ್ಟು ಹಬ್ಬದ ಅಂಗವಾಗಿ ಆಗಿ ನಾಳೆ( ಜ.8) ಬೆಳಗ್ಗೆ 10.18ಕ್ಕೆ ಲಾಂಚ್ ಆಗಬೇಕಿದ್ದ ಇಂದು ( ಜ.7) ರಾತ್ರಿ 9 ಗಂಟೆಗೆ ಸೋಷಲ್ ಮೀಡಿಯಾದಲ್ಲಿ ಕಾಣಿಸಿಕೊಂಡಿದೆ. 2 ನಿಮಿಷ 17ಸೆಕೆಂಡ್ ಗಳ ಈ ಟೀಸರ್ ವಿಡಿಯೋದಲ್ಲಿ ‘ ಕೆಜಿಎಫ್ 2 ‘ ಖದರ್ ಜೋರಾಗಿದೆ. ಚಿತ್ರದ ಕೆಲವು ಪಾತ್ರಗಳ ಪರಿಚಯದ ತುಣುಕುಗಳನ್ನು ತೋರಿಸುವ ಮೂಲಕ ನಾಯಕ ರಾಕಿಂಗ್ ಸ್ಟಾರ್ ಯಶ್ ಗೆ ಹುಟ್ಟು ಹಬ್ಬದ ಶುಭಾಶಯ ಕೋರಲಾಗಿದೆ.

.‌ಸದ್ಯಕ್ಕೆ ಅದು ಹೇಗೆ ಬಂತು‌ ಅಂತ ಗೊತ್ತಿಲ್ಲ‌. ಆದರೆ ಸೋಷಲ್ ಮೀಡಿಯಾದಲ್ಲಿ ಅದು ವೈರಲ್ ಆಗುತ್ತಿದ್ದಂತೆ ಎಚ್ವೆತ್ತುಕೊಂಡ ಚಿತ್ರ ತಂಡ 9.28ಕ್ಕೆ ಅಧಿಕೃತ ವಾಗಿ ಸೋಷಲ್ ಮೀಡಿಯಾದಲ್ಲಿ  ಟೀಸರ್ ಲಾಂಚ್ ಮಾಡಿತು. ಇದು ತೀವ್ರ ಕುತೂಹಲಕ್ಕೆ ಕಾರಣವಾಯಿತು. ಹೊಂಬಾಳೆ ಫಿಲಂಸ್ ನ‌ ಅಧಿಕೃತ ಯುಟ್ಯೂಬ್ ಮೂಲಕ ಲಾಂಚ್ ಆಗಬೇಕಿದ್ದ  ಈ ಟೀಸರ್, ಸೋಷಲ್ ಮೀಡಿಯಾಕ್ಕೆ ಅನಧಿಕೃತ ವಾಗಿ ಹೇಗೆ ಬಂತು? ಇದೊಂದು ಯಕ್ಷ ಪ್ರಶ್ನೆ.

ರವೀನಾ ಟಂಡನ್

ಚಿತ್ರತಂಡ ಅಧಿಕೃತ ವಾಗಿ ನೀಡಿದ ಮಾಹಿತಿ ಪ್ರಕಾರ ಜ.8 ರಂದು ಬೆಳಗ್ಗೆ 10.18 ಕ್ಕೆ ಲಾಂಚ್ ಆಗಬೇಕಿತ್ತು.‌ಅದಕ್ಕೆ ಚಿತ್ರ ತಂಡ ಭರ್ಜರಿ ತಯಾರಿ‌ನಡೆಸಿತ್ತು. ಅದಕ್ಕಾಗಿಯೇ ಇಂಟ್ರೋಡಕ್ಷನ್ ಟೀಸರ್ ಬಿಟ್ಟಿತ್ತು. ಈ ಲಾಂಚ್ ಕುರಿತು ನಿರ್ದೇಶಕ ಪ್ರಶಾಂತ್ ನೀಲ್ ಟ್ವಿಟ್ಟರ್ ನಲ್ಲೂ ಅಧಿಕೃತ ಮಾಹಿತಿ ನೀಡಿದ್ದರು. ಆದರೆ ಆಗಿದ್ದೇನು?

ಯಾರು ಕಾರಣವೋ ಗೊತ್ತಿಲ್ಲ, ಟೀಸರ್ ಒಂದು ದಿನ ಅಂದ್ರೆ ನಿಗದಿತ ಸಮಯಕ್ಕಿಂತ ಹಲವು ತಾಸುಗಳು ಮುಂಚೆಯೇ  ಅದೀಗ ಸೋಷಲ್ ಮೀಡಿಯಾಕ್ಕೆ ತೂರಿ ಬಂದಿದೆ. ಅದರ ಪರಿಣಾಮ ಅನಿವಾರ್ಯ ಎಂಬಂತೆ ಚಿತ್ರ ತಂಡ‌ಅದನ್ನೇ ಅಧಿಕೃತ ವಾಗಿ ಸೋಷಲ್ ಮೀಡಿಯಾದಲ್ಲಿ  ಶೇರ್ ಮಾಡಿಕೊಂಡಿದೆ. ಅದರಾಚೆ ಅದಕ್ಕೆ ನಿಜವಾಗಿಯೂ ಕಾರಣರಾರು? ಅದು ಹೇಗೆ ಬಂತು? ಇದ್ಯಾವುದಕ್ಕೂ ಚಿತ್ರ ತಂಡ ಪ್ರತಿಕ್ರಿಯೆ ನೀಡಿಲ್ಲ.

ಬದಲಿಗೆ ಸೋಷಲ್ ಮೀಡಿಯಾಕ್ಕೆ ಲೀಕ್ ಆಗಿದ್ದ ಟೀಸರ್ ಅನ್ನೇ ಅಧಿಕೃತ ಗೊಳಿಸಿದ್ದು, ಮೊದಲ ಭಾಗದಷ್ಟೇ’ ಕೆಜಿಎಫ್ 2 ‘ಕೂಡ ಫವರ್ ಫುಲ್ ಆಗಿದೆ ಎನ್ನುವುದರ ಸ್ಯಾಂಪಲ್ ಎನ್ನುವುದನ್ನು ಈ ಟೀಸರ್ ತೋರಿಸಿದೆ. ಆದರೆ ಇದೆಲ್ಲ ನಿಜಕ್ಕೂ ಆಗಿದ್ದಾದರೂ ಹೇಗೆ ಎನ್ನುವುದು ಸೋಜಿಗ. ಇದು ಗಿಮಿಕ್ ಕೂಡ ಆಗಿರಬಹುದು ಎನ್ನುತ್ತಿವೆ ಗಾಂಧಿನಗರದ ಮೂಲಗಳು.

Categories
ಸಿನಿ ಸುದ್ದಿ

ರಾತ್ರೋರಾತ್ರಿ ಹೆದರಿಸಲು ಬಂದ ಹೊಸಬರು !

ಹೀರೋ ಆಗಿ ಬರುತ್ತಿದ್ದಾರೆ ಫೈಟರ್‌ ದಾಸ್‌ ಪುತ್ರ ಪವನ್‌ಕುಮಾರ್‌

ಅಪ್ಪ-ಅಮ್ಮ ಕಲಾವಿದರು ಎನ್ನುವ ಕಾರಣವೋ, ಇಲ್ಲವೇ ನಿರ್ದೇಶಕ ಅಥವಾ ನಿರ್ಮಾಪಕರು ಎನ್ನುವ ಪ್ರಭಾವವೋ, ಸಿನಿಮಾ ರಂಗಕ್ಕೆ ಅವರ ಮಕ್ಕಳು ಬಂದ ಕತೆಗಳಿಗೇನು ಇಲ್ಲಿ ಕಮ್ಮಿ ಇಲ್ಲ. ಅದಕ್ಕೆ ಕಾರಣ ಸಿನಿದುನಿಯಾದ ಆಕರ್ಷಣೆ. ದಾರಿಯಲ್ಲಿ ಸುಮ್ಮನೆ ಹೊರಟವರನ್ನು ತನ್ನತ್ತ ಆಕರ್ಷಿಸುವ ಶಕ್ತಿ ಸಿನಿಮಾ ಜಗತ್ತಿಗಿದೆ. ಆ ಕಾರಣಕ್ಕಾಗಿಯೇ ತುಂಬಾ ಜನ ಇಲ್ಲಿಗೆ ಬಂದಿದ್ದಾರೆನ್ನುವುದು ಹೊಸದೇನಲ್ಲ. ಅಂದ ಹಾಗೆ ಇದಿಷ್ಟು ಯಾಕೆ ಹೇಳಬೇಕಾಗಿ ಬಂತು ಅಂದ್ರೆ, ಫೈಟರ್‌ ದಾಸ್‌ ಪುತ್ರ ಪವನ್‌ ಕುಮಾರ್‌ ಸಿನಿಮಾ ಎಂಟ್ರಿ ಕಾರಣಕ್ಕೆ.

ಅಪ್ಪ ಸಿನಿಮಾರಂಗದಲ್ಲಿದ್ದಾರೆನ್ನುವ ಕಾರಣಕ್ಕೆ ದಾಸ್‌ ಪುತ್ರ ಪವನ್‌ ಕುಮಾರ್‌, ಒಳ್ಳೆಯ ಉದ್ಯೋಗ ಬಿಟ್ಟು ಸಿನಿಮಾ ರಂಗಕ್ಕೆ ಎಂಟ್ರಿ ಆಗುತ್ತಿದ್ದಾರೆ. ಸದ್ದಿಲ್ಲದೆ ಸುದ್ದಿ ಮಾಡದೆ ಗೆಳೆಯರ ಜತೆಗೆ ಸೇರಿಕೊಂಡು ʼರಾತ್ರೋರಾತ್ರಿʼ ಹೆಸರಿನ ಚಿತ್ರವೊಂದನ್ನು ನಿರ್ಮಾಣ ಮಾಡಿದ್ದಾರೆ. ನಿರ್ಮಾಣದ ಜತೆಗೆ ಚಿತ್ರದಲ್ಲಿ ಅವರೇ ನಾಯಕ ನಟರಾಗಿ ಅಭಿನಯಿಸಿದ್ದಾರೆ. ಇದೀಗ ಸಿನಿಮಾ ಚಿತ್ರೀಕರಣ ಅದರ ಜತೆಗೆ ಪೋಸ್ಟ್‌ ಪ್ರೊಡಕ್ಷನ್‌ ಕೆಲಸ ಮುಗಿಸಿ ರಿಲೀಸ್‌ಗೆ ರೆಡಿ ಆಗಿದೆ. ಸದ್ಯಕ್ಕೆ ಚಿತ್ರ ತಂಡ ಘೋಷಿಸಿರುವ ಪ್ರಕಾರ ಸಂಕ್ರಾಂತಿಗೆ ಇದು ಬಿಡುಗಡೆ ಆಗುತ್ತಿದೆ. ಸರಿ ಸುಮಾರು ನೂರು ಚಿತ್ರ ಮಂದಿರಗಳಲ್ಲಿ ತೆರೆ ಕಾಣುವುದಾಗಿಯೂ ಚಿತ್ರ ತಂಡ ಹೇಳಿದೆ.

ಬಹುತೇಕ ಹೊಸಬರೇ ಸೇರಿಕೊಂಡು ಸಿದ್ಧಪಡಿಸಿದ ಚಿತ್ರ ಇದು. ಪವನ್‌ ನಾಯಕರಾಗಿ ಕಾಣಸಿಕೊಂಡರೆ, ರಚಿಕಾ ಹಾಗೂ ಡಯಾನ ಚಿತ್ರದ ನಾಯಕಿಯರು. ತಾಯಿ ಪಾತ್ರದಲ್ಲಿ ಗಂಗಮ್ಮ ಅಭಿನಯಿಸಿದ್ದಾರೆ. ರಾಜ್‌ಕಾಂತ್ ಹಾಗೂ ವಿನಯ್‌ಕುಮಾರ್.ವಿ.ನಾಯಕ್ ಖಳ ನಟರಾಗಿ ಕಾಣಸಿಕೊಂಡಿದ್ದಾರೆ. ಮಂತ್ರವಾದಿ ಪಾತ್ರದಲ್ಲಿ ದಿವಾಕರ್ ಇದ್ದರೆ, ಹಾಸ್ಯ ಪಾತ್ರಗಳಿಗೆ ಹರೀಶ್‌, ಪ್ರಸನ್ನ, ಮನೋಜ್‌, ಸುನೀಲ್‌ ಇದ್ದಾರೆ. ಪವನ್‌ ಚಿತ್ರಾಲಯ ಮೂಲಕ ಪವನ್‌ ಅವರೇ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹೂಡಿದ್ದಾರೆ. ಡೀಲ್‌ ಮುರಳಿ ಕತೆ, ಚಿತ್ರಕತೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿದ್ದಾರೆ. ಶ್ರೀಧರ್‌ನರಸಿಂಹನ್‌ ಸಂಗೀತ ನೀಡಿದ್ದಾರೆ. ಕಿರಣ್‌ ಗಜ ಛಾಯಾಗ್ರಣ ಹಾಗೂ ಸಾಲೋಮನ್‌ ಸಂಕಲನ, ಅಕ್ಷಯ್‌ ಮೂರ್ತಿ ಸಾಹಸ ಚಿತ್ರಕ್ಕಿದೆ.

ಚಿತ್ರಕ್ಕೆ ಬಿಡದಿ, ರಾಮನಗರ, ಮಂಡ್ಯ ಹಾಗೂ ಮೈಸೂರು ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದೊಂದು ಹಾರರ್‌, ಥ್ರಿಲ್ಲರ್‌ ಕಥಾ ಹಂದರದ ಚಿತ್ರ. ಸಾಯಂಕಾಲ ಆರು ಗಂಟೆಯಿಂದ ಬೆಳಿಗ್ಗೆ ಆರು ಗಂಟೆವರೆಗೆ ನಡೆಯುವ ಕತೆ. ಟೆಂಪೋ ಚಾಲಕನಾದ ಚಿತ್ರದ ಕಥಾ ನಾಯಕ ಒಮ್ಮೆ ಸಂಕಷ್ಟಕ್ಕೆ ಸಿಲುಕಿರುತ್ತಾನೆ. ಆತನ ತಾಯಿ ಅನಾರೋಗ್ಯದಲ್ಲಿರುತ್ತಾಳೆ. ಚಿಕಿತ್ಸೆಗೆ ಸುಮಾರು 50 ಸಾವಿರದ ರೂ. ಗಳ ಅಗತ್ಯ ವಿರುತ್ತದೆ. ಯಾರಿಂದಲೂ ಸಹಾಯ ದೊರೆಯದಿದ್ದಾಗ ಆತ ದೇವರ ಮೊರೆ ಹೋಗುತ್ತಾನೆ. ಅಲ್ಲಿ ಒಬ್ಬ ಪರಿಚಿತ ಸಿಗುತ್ತಾನೆ. ಒಂದು ಹೆಣ ಇದೆ. ಅದನ್ನು ತಾನು ಹೇಳಿದ ಜಾಗಕ್ಕೆ ಸಾಗಿಸಿದರೆ, ಕೇಳಿದಷ್ಟು ಹಣ ಸಿಗಲಿದೆ ಎನ್ನುತ್ತಾನೆ. ಆತ ಅದಕ್ಕೆ ಓಕೆ ಎನ್ನುತ್ತಾನೆ. ಅಲ್ಲಿಂದ ಮುಂದೇನಾಗುತ್ತೆ ಎನ್ನುವುದೇ ಚಿತ್ರದ ಕತೆಯಂತೆ.

Categories
ಸಿನಿ ಸುದ್ದಿ

ರಾಧಿಕಾ ಕುಮಾರಸ್ವಾಮಿಗೆ ಕನ್ನಡದಲ್ಲಿ 90 ಲಕ್ಷ ಸಂಭಾವನೆ! ಇದು ಕನ್ನಡದ ಮಟ್ಟಿಗೆ ದಾಖಲೆ

ನಾಟ್ಯರಾಣಿ ಶಾಕುಂತಲಾ ಚಿತ್ರದ ನಟನೆಗೆ ಈ ಸಂಭಾವನೆ!

ಕನ್ನಡ ಚಿತ್ರರಂಗ ಈಗಾಗಲೇ ಸಾಕಷ್ಟು ದಾಖಲೆ ಬರೆದಿದೆ. ಅದು ಯಶಸ್ವಿ ಸಿನಿಮಾಗಳಿರಬಹುದು, ಒಳ್ಳೆಯ ಕಥೆಗಳಿರಬಹುದು, ತಾಂತ್ರಿಕ ವರ್ಗವೇ ಇರಬಹುದು. ಕಲಾವಿದರ ಸಂಭಾವನೆಯಲ್ಲೂ ಕೂಡ ಕನ್ನಡ ಚಿತ್ರರಂಗ ಹಿಂದೆ ಬಿದ್ದಿಲ್ಲ.
ಈಗ ಇಲ್ಲಿ ಹೇಳ ಹೊರಟಿರುವ ವಿಷಯ, ಕನ್ನಡ ಚಿತ್ರರಂಗದಲ್ಲಿ ನಟಿಯೊಬ್ಬರು ಅತೀ ಹೆಚ್ಚು ಸಂಭಾವನೆ ಪಡೆದಿದ್ದಾರೆ.


ಹೌದು, ಅಷ್ಟೊಂದು ದುಬಾರಿ ನಟಿ ಬೇರಾರೂ ಅಲ್ಲ, ರಾಧಿಕಾ ಕುಮಾರಸ್ವಾಮಿ. ಸದ್ಯದ ಮಟ್ಟಿಗೆ ರಾಧಿಕಾ ಕುಮಾರಸ್ವಾಮಿ ಅವರು ಸುದ್ದಿಯಲ್ಲಿದ್ದಾರೆ. ಅದರ ಜೊತೆಗೆ ಅವರು ಚಿತ್ರವೊಂದರಲ್ಲಿ ನಟಿಸಲು ಬರೋಬ್ಬರಿ 90 ಲಕ್ಷ ಸಂಭಾವನೆ ಪಡೆದುಕೊಂಡಿದ್ದಾರೆ ಎಂಬುದೇ ಈ ಹೊತ್ತಿನ ಬಿಗ್ ನ್ಯೂಸ್.
ಅಂದಹಾಗೆ, ರಾಧಿಕಾ ಕುಮಾರಸ್ವಾಮಿ ಅವರು ಅತೀ ಹೆಚ್ಚು ಸಂಭಾವನೆ ಪಡೆದಿರುವ‌ ಸಿನಿಮಾ, “ನಾಟ್ಯರಾಣಿ ಶಾಕುಂತಲಾ’ ಸಿನಿಮಾ.


ಈ ಚಿತ್ರದಲ್ಲಿ ಅವರು ನಟಿಸಲು 90 ಲಕ್ಷ ರೂಪಾಯಿ ಕೇಳಿದ್ದು, ಈಗಾಗಲೇ 60 ಲಕ್ಷ ರುಪಾಯಿ ಸಂದಾಯ ಕೂಡ ಆಗಿದೆ ಎಂಬುದು‌ ಸುದ್ದಿ.
ಅದೇನೆ ಇರಲಿ, ಸೌತ್ ಇಂಡಿಯಾದಲ್ಲಿ ಅತೀ ಹೆಚ್ಚು ಸಂಭಾವನೆ ಪಡೆಯುವ ನಟಿಮಣಿಯರಲ್ಲಿ ಕನ್ನಡದ ರಾಧಿಕಾ ಕುಮಾರಸ್ವಾಮಿ ಕೂಡ ಸೇರಿದ್ದಾರೆ ಅನ್ನುವುದೇ ವಿಶೇಷ.


ಸದ್ಯ ಆ ಚಿತ್ರದ ಬಗ್ಗೆ ಹೆಚ್ಚೇನೂ ಮಾಹಿತಿ ಇಲ್ಲ‌. ಇನ್ನುಳಿದ ಮಾಹಿತಿಗಳು ಕೂಡ ಒಂದೊಂದೇ ಹೊರಬೀಳುವ ಸಾಧ್ಯತೆ ಇದೆ.
ನಮ್ ಕನ್ನಡ‌ ನಟಿಯರು ಬಾಲಿವುಡ್ ರೇಂಜ್ ನಲ್ಲಿದ್ದಾರೆ ಅನ್ನುವುದಕ್ಕೆ ಈ ಸಂಭಾವನೆ ಸುದ್ದಿಯೇ ಸಾಕು.

Categories
ಸಿನಿ ಸುದ್ದಿ

ಭಟ್ಟರ ಸಿನಿಮಾಗೆ ನಟರಾಜ್‌ʼ ಮೇಷ್ಟ್ರುʼ !

ʼರಾಮಾ ರಾಮಾ ರೇ ʼ ಖ್ಯಾತಿಯ ನಟ ಈಗ ಫುಲ್‌ ಬ್ಯುಸಿ

ʼರಾಮಾ ರಾಮಾ ರೇʼ ಚಿತ್ರದ ಖ್ಯಾತಿಯ ನಟ ನಟರಾಜ್‌ ಈಗ ಯೋಗರಾಜ್‌ ಭಟ್‌ ಅಂಗಳಕ್ಕೆ ಜಿಗಿದಿದ್ದಾರೆ. ಯೋಗರಾಜ್‌ ಸಿನಿಮಾಸ್‌ ಹಾಗೂ ರವಿ ಶಾಮನೂರ್‌ ಫಿಲಂಸ್‌ ಜಂಟಿಯಾಗಿ ನಿರ್ಮಾಣ ಮಾಡುತ್ತಿರುವ “ಪದವಿ ಪೂರ್ವʼ ಚಿತ್ರಕ್ಕೆ ನಟರಾಜ್‌ ಎಂಟ್ರಿ ಆಗಿದ್ದಾರೆ. ಹರಿ ಪ್ರಸಾದ್‌ ಜಯಣ್ಣ ನಿರ್ದೇಶನದ ಈ ಚಿತ್ರದಲ್ಲಿ, ನಟರಾಜ್‌ ಪ್ರಮುಖ ಪಾತ್ರದಲ್ಲಿ ಅಭಿನಯಿಸುತ್ತಿದ್ದಾರೆ. ಈಗಾಗಲೇ ಚಿತ್ರದ ಚಿತ್ರೀಕರಣದಲ್ಲಿ ಪಾಲ್ಗೊಂಡು ತಂಡದ ಉತ್ಸಾಹ ಮತ್ತು ಚಿತ್ರೀಕರಣದ ಕಾರ್ಯ ವೈಖರಿಗೆ ಮಾರು ಹೋಗಿದ್ದಾರಂತೆ. ಸದ್ಯಕ್ಕೆ ಈ ಚಿತ್ರದಲ್ಲಿ ನಟರಾಜ್‌ ಅವರ ಪಾತ್ರ ಎಂತಹದು ಎನ್ನುವುದನ್ನು ಚಿತ್ರ ತಂಡ ರಿವೀಲ್‌ ಮಾಡಿಲ್ಲ. ಆದರೆ ಚಿತ್ರ ತಂಡದಿಂದಲೇ ರಿವೀಲ್‌ ಆಗಿರುವ ನಟರಾಜ್‌ ಅವರ ಪಾತ್ರದ ಫಸ್ಟ್‌ ಲುಕ್‌ ಫೋಟೋ ನೋಡಿದರೆ ಅವರೊಬ್ಬ ಕಾಲೇಜ್‌ ಉಪನ್ಯಾಸಕ ಎನ್ನುವುದು ಗ್ಯಾರಂಟಿ.

ಈ ಚಿತ್ರದಲ್ಲಿ ಅಭಿನಯಿಸಲು ಅವಕಾಶ ಸಿಕ್ಕಿದ್ದಕ್ಕೆ ಸಂತಸ ವ್ಯಕ್ತಪಡಿಸಿರುವ ನಟ ನಟರಾಜ್‌, ಇದೊಂದು ಸುವರ್ಣಾವಕಾಶ ಅಂತ ಹೇಳಿದರು. ” ಇದೆಲ್ಲ ಹೇಗಾಯಿತು ಗೊತ್ತಿಲ್ಲ. ಟೀಮ್ ಕಡೆಯಿಂದ ಆಫರ್‌ ಬಂತು. ಒಳ್ಳೆಯ ಅವಕಾಶ, ಯಾಕೆ ಬಿಡುವುದು ಅಂತ ಒಂದೇ ಮಾತಿನಲ್ಲಿ ಓಕೆ ಅಂದೆ. ಜತೆಗೆ ಯೋಗರಾಜ್‌ ಮೂವೀಸ್‌ ನಿರ್ಮಾಣದ ಚಿತ್ರ ಎನ್ನುವುದು ಕೂಡ ಹೆಚ್ಚು ಇಂಪ್ರೆಸ್‌ ಮಾಡಿತು. ಚಿತ್ರದಲ್ಲಿ ಪಾತ್ರವೂ ಅದ್ಭುತವಾಗಿದೆ. ಒಂದೊಳ್ಳೆಯ ಸಿನಿಮಾ ಹಾಗೂ ಟೀಮ್‌ ನಲ್ಲಿ ಅಭಿನಯಿಸಿದ ಖುಷಿಯಿದೆʼ ಎನ್ನುತ್ತಾರೆ ನಟರಾಜ್.‌ ಈಗಾಗಲೇ ಈ ಚಿತ್ರಕ್ಕೆ ಎರಡನೇ ಹಂತದ ಚಿತ್ರೀಕರಣವು ಮುಗಿದಿದೆ. ಮಲೆನಾಡಿನ ಸುತ್ತಮುತ್ತಲಿನ ಅತ್ಯಂತ ಸುಂದರ ತಾಣಗಳಲ್ಲಿ ಚಿತ್ರದ ಸಂದರ ದೃಶ್ಯಗಳನ್ನು ಚಿತ್ರ ತಂಡ ಚಿತ್ರೀಕರಿಸಿಕೊಂಡು ಬಂದಿದೆ. ಇದೀಗ ಮೂರನೇ ಹಂತದ ಚಿತ್ರೀಕರಣಕ್ಕಾಗಿ ಚಿತ್ರ ತಂಡ ಭರ್ಜರಿ ತಯಾರಿ ನಡೆಸಿದೆ. ಈ ಹಂತದಲ್ಲಿ ನಟರಾಜ್‌ ಎಂಟ್ರಿ ಬಹಿರಂಗಗೊಂಡಿದೆ.

Categories
ಸಿನಿ ಸುದ್ದಿ

ನಿರ್ದೇಶಕ ಸೃಷ್ಟಿಸಿದ ದೇವರ ಕಾಲೋನಿ! ಬರಲಿದೆ ಚಂದ್ರಶೇಖರ್‌ ಬಂಡಿಯಪ್ಪ ಬರೆದ ಹೊಸ ಪುಸ್ತಕ

ನಿರ್ದೇಶಕರ ಹೊಸ ಹೆಜ್ಜೆ

ಕನ್ನಡ ಚಿತ್ರರಂಗದಲ್ಲಿ ಹಲವು ನಿರ್ದೇಶಕರು ಸಾಕಷ್ಟು ಪುಸ್ತಕಗಳನ್ನು ಹೊರತಂದಿರುವುದುಂಟು. ಆ ಸಾಲಿಗೆ ಈಗ ನಿರ್ದೇಶಕ ಚಂದ್ರಶೇಖರ್‌ಬಂಡಿಯಪ್ಪ ಅವರು ಕೂಡ ಹೊಸದೊಂದು ಪುಸ್ತಕ ಹೊರತರುವ ತಯಾರಿಯಲ್ಲಿದ್ದಾರೆ. ಹೌದು, “ಆನೆ ಪಟಾಕಿ”,”ರಥಾವರ” ಮತ್ತು “ತಾರಕಾಸುರ” ಸಿನಿಮಾ ನಿರ್ದೇಶಿಸಿದ್ದ ಚಂದ್ರಶೇಖರ್‌ಬಂಡಿಯಪ್ಪ, ಒಳ್ಳೆಯ ಬರಹಗಾರರೂ ಹೌದು. ಅವರೀಗೆ ಸಿನಿಮಾ ನಿರ್ದೇಶನದ ಜೊತೆಯಲ್ಲೊಂದು ಪುಸ್ತಕವನ್ನೂ ಬರೆದಿದ್ದಾರೆ ಅನ್ನೋದೇ ಖುಷಿಯ ವಿಷಯ. ಅವರು ಒಂದು ಕಥೆಯನ್ನಿಟ್ಟುಕೊಂಡು, ಅದನ್ನು ಪುಸ್ತಕ ರೂಪದಲ್ಲಿ ಹೊರತರುವ ಪ್ರಯತ್ನ ಮಾಡುತ್ತಿರುವುದು ಒಳ್ಳೆಯ ಬೆಳವಣಿಗೆಯೇ. ಅವರು ಬರೆದಿರುವ ಕಥೆಯ ಪುಸ್ತಕಕ್ಕೆ “ದೇವರ ಕಾಲೋನಿ” ಎಂದು ನಾಮಕರಣ ಮಾಡಿದ್ದಾರೆ. ಈ ಪುಸ್ತಕದ ವಿಶೇಷತೆ ಅಂದರೆ, ನಿರ್ದೇಶಕರಾದ ನಾಗತಿಹಳ್ಳಿ ಚಂದ್ರಶೇಖರ್‌ ಮುನ್ನುಡಿ ಬರೆದರೆ, ಯೋಗರಾಜ್‌ಭಟ್‌ ಬೆನ್ನುಡಿ ಬರೆದಿದ್ದಾರೆ. ತಮ್ಮ ಚೊಚ್ಚಲ ಪುಸ್ತಕ “ದೇವರ ಕಾಲೋನಿ” ಕುರಿತು ಚಂದ್ರಶೇಖರ್‌ ಬಂಡಿಯಪ್ಪ “ಸಿನಿ ಲಹರಿ” ಜೊತೆ ಒಂದಷ್ಟು ಮಾತನಾಡಿದ್ದಾರೆ.


“ನನ್ನ ಬದುಕಿನಲ್ಲಿ ನಿರ್ದೇಶನ ಮತ್ತು ವ್ಯವಸಾಯ ಈ ಎರಡನ್ನು ತುಂಬಾನೇ ಇಷ್ಟಪಡ್ತೀನಿ. ಅದರೊಂದಿಗೆ ಈಗ ಪುಸ್ತಕ ಬರಹಕ್ಕೂ ಇಳಿದಿದ್ದೇನೆ. “ದೇವರ ಕಾಲೋನಿ” ಎಂಬ ಹೆಸರಿನ ಪುಸ್ತಕಕ್ಕೆ ಕಥೆ ಬರೆಯುತ್ತಿದ್ದೇನೆ. ಈ ಮೂಲಕ ಲೇಖಕ ಎನಿಸಿಕೊಳ್ಳುತ್ತಿದ್ದೇನೆ ಎಂಬ ಖುಷಿ ಇದೆ. ಸಿನಿಮಾ ಅಂತ ಬಂದಾಗ ಅಲ್ಲಿ ಒಂದಷ್ಟು ಚೌಕಟ್ಟು ಇರುತ್ತೆ. ಅದರದ್ದೇ ಆದ ಕಟ್ಟುಪಾಡುಗಳಿರುತ್ತವೆ. ಅಲ್ಲಿ ಕಮರ್ಷಿಯಲ್‌ ಫಾರ್ಮೆಟ್‌ ಇರುತ್ತೆ. ಇನ್ನೇನಾದರೂ ಅಲ್ಲಿ ಮಾಡೋಕೆ ಹೋದರೆ, ಅದು ಜನರಿಗೆ ರೀಚ್‌ ಆಗೋದಿಲ್ಲ. ಆದರೆ, ಈ ಪುಸ್ತಕ ವಿಚಾರಕ್ಕೆ ಬಂದರೆ, ಅಲ್ಲಿ ಬರಹಗಾರರನಿಗೆ ಸಂಪೂರ್ಣ ಸಹಕಾರ ಇರುತ್ತೆ. ಅವನಿಗೆ ಏನು ತೋಚುತ್ತೋ, ಅದನ್ನು ಗೀಚಬಹುದು. ಎಷ್ಟೇ ನೇರವಾಗಿ, ಖಾರವಾಗಿಯಾದರೂ ಪ್ರತಿಕ್ರಿಯಿಸಬಹುದು. ಒಂದು ರೀತಿಯಲ್ಲಿ ಲೇಖಕ ಸ್ವತಂತ್ರ. ಇನ್ನು ಸಿನಿಮಾದಲ್ಲಿ ಕೆಲ ಕಥಾವಸ್ತು ಇಟ್ಟುಕೊಂಡು ಸಿನಿಮಾ ಮಾಡೋಕೂ ಧೈರ್ಯ ಬೇಕು. ನನಗೆ ಪುಸ್ತಕ ಬರೆಯುವ ಯೋಚನೆ ಹಲವು ವರ್ಷಗಳಿಂದ ಇತ್ತು. ಸಾಕಷ್ಟು ಸಂಶೋಧನೆ ಮಾಡಿಯೇ ನಾನು ಕಥೆ ಬರೆಯೋಕೆ ಮುಂದಾಗಿದ್ದೇನೆ. ಸದ್ಯ ಈ “ದೇವರ ಕಾಲೋನಿ” ಪುಸ್ತಕಕ್ಕೆ ತಯಾರಿ ನಡೆಯುತ್ತಿದೆ. ಬರವಣಿಗೆ ಕೆಲಸ ಆದಾಗಲೇ ಮುಗಿದಿದ್ದು, ಡಿಟಿಪಿ ಕೆಲಸ ನಡೆಯುತ್ತಿದೆ. ದೊಡ್ಡ ಪಬ್ಲಿಕೇಷನ್‌ ಮೂಲಕ ಈ ಪುಸ್ತಕ ಇಷ್ಟರಲ್ಲೇ ಹೊರಬರಲಿದೆʼ ಎಂಬುದು ಚಂದ್ರಶೇಖರ್‌ ಬಂಡಿಯಪ್ಪ ಅವರ ಮಾತು.


ಅದೇನೆ ಇರಲಿ, ಚಂದ್ರಶೇಖರ್‌ ಬಂಡಿಯಪ್ಪ ಅವರ ನಿರ್ದೇಶನದ ಚಿತ್ರಗಳಲ್ಲಿ ಒಂದಷ್ಟು ವಿಲಕ್ಷಣ ಕಥೆಗಳು, ಪಾತ್ರಗಳು ಕಾಣಿಸಿಕೊಂಡಿವೆ. ವಿಚಿತ್ರ ಕಥೆಗಳನ್ನು ತಂದು ಜನರ ಮುಂದಿಟ್ಟಾಗ, ಜನರು ಕೂಡ ಒಪ್ಪಿ ಅಪ್ಪಿಕೊಂಡಿದ್ದುಂಟು. ಆ ಮೂಲಕ ಅವರು ಹೊಸ ಪ್ರತಿಭೆಗಳನ್ನು ಹೊರತಂದಿದ್ದಾರೆ. ಅಂದಹಾಗೆ, ಚಂದ್ರಶೇಖರ್‌ ಬಂಡಿಯಪ್ಪ ಅವರ “ದೇವರ ಕಾಲೋನಿ” ಟೋಟಲ್‌ ಕನ್ನಡ ಮೂಲಕ ರಿಲೀಸ್‌ ಆಗುತ್ತಿದೆ. ಇದು ನಿರ್ದೇಶಕರ ಮತ್ತೊಂದು ಹೊಸ ಹೆಜ್ಜೆ. ಅವರ ಹೊಸ ಪ್ರಯತ್ನಕ್ಕೆ ಗೆಲುವು ಸಿಗಲಿ ಎಂಬುದು “ಸಿನಿಲಹರಿ” ಹಾರೈಕೆ.

Categories
ಸಿನಿ ಸುದ್ದಿ

ಲಡ್ಡು ಸವಿಯಲು ರೆಡಿ, ರಿಲೀಸ್‌ಗೆ ರೆಡಿಯಾದ ಹೊಸಬರ ಚಿತ್ರ

ಉದ್ಯಮಿ ಮೇಘನಾ ನಿರ್ಮಾಣದ ಮೊದಲ  ಸಿನಿಮಾ 

ʼಲಡ್ಡುʼ ಸವಿಯಲು ರೆಡಿಯಾಗಿದೆ. ಇದು ಕನ್ನಡದ ಸಿನಿಮಾ ಪ್ರೇಕ್ಷಕರಿಗೆ ಹೊಸಬರು ನೀಡುತ್ತಿರುವ ಮನಜರಂಜನೆಯ “ಲಡ್ಡುʼ. ಉದ್ಯಮಿ ವಿ. ಮೇಘನಾ ಇದೇ ಮೊದಲು ನಿರ್ಮಾಣ ಮಾಡಿರುವ ಈ ಚಿತ್ರಕ್ಕೆ ರಮಾನಂದ್‌ ನಿರ್ದೇಶಕ. ಹಲವು ವರ್ಷಗಳಿಂದ ನಿರ್ದೇಶಕರಾದ ಕೆ. ರಾಮ್‌ ನಾರಾಯಣ್‌, ಮದನ್‌ ಹಾಗೂ ಕಿಶನ್‌ ಬಳಿ ಕೆಲಸ ಮಾಡಿದ್ದ ಅನುಭವ ರಮಾನಂದ್‌ ಅವರಿಗಿದೆ. ಅದೇ ಅನುಭವದಲ್ಲೀಗ ಸ್ವತಂತ್ರ ನಿರ್ದೇಶಕರಾಗಿ ಆಕ್ಷನ್‌ ಕಟ್‌ ಹೇಳಿದ್ದಾರೆ. ಇದೊಂದು ರೊಮ್ಯಾಂಟಿಕ್ ಕಾಮಿಡಿ ಹಾಗೂ ಸಸ್ಪೆನ್ಸ್ ಕಥಾಹಂದರ ಹೊಂದಿರುವ ಈ ಚಿತ್ರ. ಐವರು ಯುವಕರು ಹಾಗೂ ಒಬ್ಬ ಯುವತಿಯ ಸುತ್ತ ನಡೆಯುವ ಕತೆ. ಇಂತಹ ಕತೆಯ ಚಿತ್ರವು ʼಲಡ್ಡುʼ ಅಂತ ಟೈಟಲ್‌ ಹೊತ್ತಿದ್ದು ಯಾಕೆ ಅನ್ನೋದು ಸಸ್ಪೆನ್ಸ್.‌ ಇದು ಬಹುತೇಕ ಹೊಸಬರ ಪಯತ್ನದ ಫಲ.

ಸದ್ಯಕ್ಕೆ ರಿಲೀಸ್‌ಗೆ ರೆಡಿಯಾಗಿರುವ ಚಿತ್ರದ ಟ್ರೈಲರ್‌ ಕಳೆದ ವಾರವಷ್ಟೇ ಬಿಡುಗಡೆ ಆಗಿದೆ. ಈಗಾಗಲೇ ಸೋಷಲ್‌ ಮೀಡಿಯಾದಲ್ಲಿ ಎರಡು ಲಕ್ಷಕ್ಕೂ ತಲುಪಿದೆ. ಚಿತ್ರ ತಂಡಕ್ಕೆ ಇದು ಖುಷಿ ಕೊಟ್ಟಿದೆ. ಹರ್ಷಿತ್, ನವೀನ್, ಸಮೀರ್ ನಗರದ್, ಮಧು ಮತ್ತು ವಿಶಾಲ್ ಈ ಚಿತ್ರದ ನಾಯಕರು. ಹಾಗೆಯೇ ಬಿಂದುಶ್ರೀ ಈ ಚಿತ್ರದ ನಾಯಕಿ. ಉಳಿದಂತೆ ʼಪಾರುʼ ಖ್ಯಾತಿಯ ಪವಿತ್ರಾ ಬಿ. ನಾಯಕ್‌, ಮಂಜುಳಾ ರೆಡ್ಡಿ , ರಾಕ್‌ಲೈನ್‌ ಸುಧಾಕರ್‌ ಚಿತ್ರದ ಪೋಷಕ ಪಾತ್ರಗಳಿಗೆ ಬಣ್ಣ ಹಚ್ಚಿದ್ದಾರೆ. ಬೆಂಗಳೂರು, ಶನಿವಾರಸಂತೆ, ಭಟ್ಕಳ ಸುತ್ತಮುತ್ತ ಸುಮಾರು 45 ದಿನಗಳ ಕಾಲ ಚಿತ್ರೀಕರಣ ನಡೆದಿದೆ. ಚಿತ್ರದಲ್ಲಿ ೩ ಹಾಡುಗಳಿದ್ದು, ನಂದು ತಿಪ್ಪು ಸಂಗೀತ ಸಂಯೋಜನೆ ಮಾಡಿದ್ದಾರೆ. ಪುರುಷೋತ್ತಮ್‌ ಛಾಯಾಗ್ರಹಣ ಮಾಡಿದ್ದಾರೆ. ನಿಖಿಲ್‌ ಸಂಭಾಷಣೆ ಬರೆದಿದ್ದಾರೆ. ಚಿತ್ರಕತೆಗೆ ರುದ್ರೇಶ್‌ ಸಾಥ್‌ ನೀಡಿದ್ದಾರೆ. ವೆಂಕಿ ಸಂಕಲನ ಮಾಡಿದ್ದಾರೆ.

Categories
ಸಿನಿ ಸುದ್ದಿ

ನಮಗಿಲ್ಲದ ಧೈರ್ಯ, ತಮಿಳು ಸಿನ್ಮಾ ಮಂದಿಗೆ  ಬಂದಿದ್ದಾರೂ  ಹೇಗೆ   ?

ಪೊಂಗಲ್‌ ಗೆ ಮಾಸ್ಟರ್‌ ಎಂಟ್ರಿ, ಇದು ಸಿಹಿಯೋ, ಕಾರವೋ…..

ಕನ್ನಡದ ಸ್ಟಾರ್‌ ಸಿನಿಮಾಗಳು ಈಗಲೂ ಚಿತ್ರಮಂದಿರಕ್ಕೆ ಬರಲು ಮೀನಾಮೇಷ ಎಣಿಸುತ್ತಿವೆ. ಕೊರೋನಾ ಆತಂಕದಿಂದ ಚಿತ್ರಮಂದಿರಕ್ಕೆ ಪ್ರೇಕ್ಷಕರು ಬರುತ್ತಾರೋ, ಇಲ್ಲವೋ ಎನ್ನುವ ಭಯ ಕನ್ನಡದ ನಿರ್ಮಾಪಕರನ್ನು ಕಾಡುತ್ತಿದೆ. ಸ್ಟಾರ್‌ ನಟರು ಕೂಡ ಅದೇ ಆತಂಕದಲ್ಲಿದ್ದಾರೆ. ಆದರೆ, ನೆರೆ ರಾಜ್ಯಗಳ ಸ್ಟಾರ್‌ ಸಿನಿಮಾಗಳು ಈಗ ಕನ್ನಡದ ಪ್ರೇಕ್ಷಕರನ್ನು ಭರಪೂರ ರಂಜಿಸಲು ಚಿತ್ರಮಂದಿರಕ್ಕೆ ಲಗ್ಗೆ ಹಾಕುತ್ತಿವೆ. ಇದೇ ಸಂಕ್ರಾಂತಿಗೆ ತಮಿಳಿನ ಸೂಪರ್‌ ಸ್ಟಾರ್‌ ದಳಪತಿ ವಿಜಯ್‌ ಅಭಿನಯದ ʼಮಾಸ್ಟರ್‌ʼ ಕನ್ನಡದಲ್ಲೂ ತೆರೆ ಕಾಣುತ್ತಿದೆ.

ತಮಿಳು, ತೆಲುಗು, ಹಿಂದಿ ಹಾಗೂ ಮಲಯಾಳಂ ವರ್ಷನ್‌ ಜತೆಗೆ ಇದು ಕನ್ನಡಕ್ಕೂ ಡಬ್‌ ಆಗಿದೆ. ರಾಜ್ಯದಲ್ಲಿ ಇದರ ವಿತರಣೆಯ ಹಕ್ಕನ್ನು ಧೀರಜ್‌ ಎಂಟರ್‌ ಪ್ರೈಸಸ್‌ ಪಡೆದಿದೆ. ತಮಿಳುನಾಡು ಮಾದರಿಯಲ್ಲೇ, ಈ ಚಿತ್ರದ ಪ್ರದರ್ಶನಕ್ಕೆ ಬೆಂಗಳೂರಿನಲ್ಲೂ ನಾಳೆ (ಜ.6)ಯಿಂದಲೇ ಮಲ್ಟಿಪ್ಲೆಕ್ಸ್‌ ಸೇರಿದಂತೆ ಎಲ್ಲಾ ಚಿತ್ರ ಮಂದಿರಗಳಲ್ಲಿ ಆನ್‌ಲೈನ್‌ ಬುಕ್ಕಿಂಗ್‌ ಶುರುವಾಗಲಿದೆ. ಸದ್ಯಕ್ಕೆ ಸಿಕ್ಕ ಮಾಹಿತಿ ಪ್ರಕಾರ ಈ ಚಿತ್ರವು ರಾಜ್ಯಾದ್ಯಂತ 150 ಕ್ಕೂ ಹೆಚ್ಚು ಚಿತ್ರಮಂದಿರಗಳಲ್ಲಿ ತೆರೆ ಕಾಣುವುದು ಗ್ಯಾರಂಟಿ ಆಗಿದೆ. ಇಲ್ಲಿ ಮೂಡುವುದು ಒಂದೇ ಪ್ರಶ್ನೆ, ಕನ್ನಡ ಸಿನಿಮಾ ಮಂದಿಗೆ ಇಲ್ಲದ ಧೈರ್ಯ, ತಮಿಳು ಸಿನಿಮಾ ಮಂದಿಗೆ ಹೇಗೆ ಬಂತು ಅಂತ.

ಅದು ಬಿಡಿ, ” ಮಾಸ್ಟರ್‌ʼ ಸಿನಿಮಾದ ಮಾದರಿಯಲ್ಲೇ ಅನ್ಯ ಭಾಷೆಯ ಸ್ಟಾರ್‌ ಸಿನಿಮಾಗಳೆಲ್ಲ ಬ್ಯಾಕ್‌ ಟು ಬ್ಯಾಕ್ ಹೀಗೆಯೇ ಡಬ್‌ ಆಗಿ ಕನ್ನಡಕ್ಕೆ ಬರುತ್ತಿದ್ದರೆ, ಕನ್ನಡ ಚಿತ್ರೋದ್ಯಮದ ಪರಿಸ್ಥಿತಿ ಹೇಗಾಗಬಹುದು ? ಹತ್ತಾರು ಕೋಟಿ ಸಂಭಾವನೆ ಪಡೆದು ವರ್ಷಕ್ಕೆ ಒಂದೋ, ಎರಡೋ ಅಂತ ಸಿನಿಮಾ ಮಾಡಿಕೊಂಡು ಕೂರುವ ಸ್ಟಾರ್ಸ್‌ ಗತಿ ಏನಾಗಬಹುದು ? ಕನ್ನಡ ಚಿತ್ರರಂಗ ಅದೆಷ್ಟರ ಮಟ್ಟಿಗೆ ಗಮನಿಸಿದೆಯೋ ಗೊತ್ತಿಲ್ಲ, ಡಬ್ಬಿಂಗ್‌ ಹಾಗೂ ಕೊರೋನಾ ಕಾರಣದ ಲಾಕ್‌ಡೌನ್‌ ನಂತರ ಮನರಂಜನಾ ಉದ್ಯಮದಲ್ಲಿ ಸಾಕಷ್ಟು ಬದಲಾವಣೆ ಆಗಿವೆ.

ಈ ಹಿಂದಿನಂತೆ ಈಗ ಕನ್ನಡದ ಪ್ರೇಕ್ಷಕರಿಗೆ ಪರಭಾಷೆಗಳ ಸಿನಿಮಾ ನೋಡಲು ಭಾಷೆಯ ತೊಂದರೆ ಇಲ್ಲ. ಅಲ್ಲಿನ ಸೂಪರ್‌ ಸ್ಟಾರ್‌ ಸಿನಿಮಾಗಳೆಲ್ಲ ಕನ್ನಡಕ್ಕೆ ಡಬ್‌ ಆಗಿ ಬರುತ್ತಿವೆ. ಸಹಜವಾಗಿಯೇ ಅಲ್ಲಿನ ಸ್ಟಾರ್‌ಗಳೆಲ್ಲ ಇಲ್ಲಿನವರಿಗೂ ಪರಿಚಯ ಇರೋದ್ರಿಂದ ಅವರ ಸಿನಿಮಾ ಕನ್ನಡದ ಪ್ರೇಕ್ಷಕರಿಗೂ ತಲುಪುವುದರಲ್ಲಿ ಅನುಮಾನ ಇಲ್ಲ. ಡಬ್ಬಿಂಗ್‌ ಸಿನಿಮಾ ಕನ್ನಡದಲ್ಲಿ ಇದುವರೆಗೂ ಗೆದ್ದಿಲ್ಲ ಅಂತೆನ್ನುವ ಜಂಭ ಇಲ್ಲಿನ ನಿರ್ಮಾಪಕರು ಹಾಗೂ ಸ್ಟಾರ್‌ಗಳಿಗಿದೆ. ಆದರೆ ಕೊರೋನಾ ನಂತರದ ಪರಿಣಾಮ ಬೇರೆಯೇ ಆಗಲಿದೆ. ಅದು ವಿಜಯ್‌ ಅಭಿನಯದʼ ಮಾಸ್ಟರ್‌ʼ ಮೂಲಕ ಗೊತ್ತಾಗಲಿದೆ. ಇದು ಗೆದ್ದರೆ ಕನ್ನಡಕ್ಕೆ ನಿಜಕ್ಕೂ ಮಾಸ್ಟರ್‌ ಸ್ಟ್ರೋಕ್!

ಇನ್ನು ಕನ್ನಡದ ಸ್ಟಾರ್‌ಗಳೆಲ್ಲ ಹಿಂದಿನ ದಿನಗಳ ಮೂಡ್‌ನಲ್ಲಿಯೇ ಇದ್ದಾರೆ. ಕೊರೋನಾ ಮಾಯವಾಗಿ, ಮತ್ತೆ ಚಿತ್ರಮಂದಿರಗಳು ತೆರೆದುಕೊಂಡರೆ ಹಿಂದಿನ ಹಾಗೆಯೇ ಚಿತ್ರಮಂದಿರಗಳಲ್ಲಿ ತಮ್ಮ ಕಟೌಟ್‌ ಗಳಿಗೆ ಅಭಿಮಾನಿಗಳಿಂದ ಹಾರ, ತೂರಾಯಿಗಳು ಬೀಳುತ್ತವೆ. ಸಿನಿಮಾ ಹೇಗಿದ್ರೂ ಸರಿಯೇ ಚಿತ್ರ ಮಂದಿರಗಳು ತುಂಬಿಕೊಳ್ಳುತ್ತವೆ, ಕಲೆಕ್ಷನ್‌ ಜೋರಾಗಿರುತ್ತೆ ಅಂತಲೇ ಭಾವಿಸಿಕೊಂಡಂತಿದೆ. ಅದೇ ಕಾರಣಕ್ಕೆ ಸ್ಟಾರ್‌ ಸಿನಿಮಾಗಳನ್ನು ನಿರ್ಮಾಪಕರು ತಮ್ಮ ತಿಜೂರಿಗಳಲ್ಲಿ ಭದ್ರವಾಗಿಟ್ಟುಕೊಂಡಿದ್ದಾರೆ. ಕೊರೋನಾ ಆತಂಕ ದೂರವಾದ ತಕ್ಷಣವೇ ತೆರೆಗೆ ತರೋಣ ಅಂತ ಹೇಳುತ್ತಿದ್ದಾರೆ. ಆದರೆ ಲೆಕ್ಕಾಚಾರ ಹಾಗೆಯೇ ಇರುತ್ತಾ ?

ಸದ್ಯಕ್ಕೆ ಕನ್ನಡದ ಪ್ರೇಕ್ಷಕನ ಮನರಂಜನೆಯ ಅಭಿರುಚಿ ಈಗ ಈ ಹಿಂದೆ ಇದ್ದಂತೆ ಇಲ್ಲ. ಚಿತ್ರಮಂದಿರಗಳು ಬಂದ್‌ ಆಗಿ, ಸಿನಿಮಾ ಬಿಡುಗಡೆಯಾಗದೆ ಇಷ್ಟು ದಿನವಾದರೂ, ಕನ್ನಡ ಸಿನಿಮಾ‌ ಬಿಡುಗಡೆ ಆಗುತ್ತಿಲ್ಲ, ಸ್ಟಾರ್ ಸಿನಿಮಾ ಬರುತ್ತಿಲ್ಲ ಅಂತ‌ ಪ್ರೇಕ್ಷಕರಾರು ಸ್ಟಾರ್ ನಟರ ಮನೆ ಬಾಗಿಲಿಗೆ ಬಂದು‌ ಧರಣಿ ಕುಳಿತಿಲ್ಲ. ಬದಲಿಗೆ, ಮನರಂಜನೆ ಎನ್ನುವುದಕ್ಕೆ ಆತನಿಗೀಗ ಹಲವು ಮಾರ್ಗಗಳು ಲಭ್ಯ ಇವೆ. ಹಾಗಾಗಿ ಚಿತ್ರಮಂದಿರ ಎನ್ನುವುದು ಇನ್ನು ಮುಂದೆ ಆತನಿಗೆ ಕೊನೆಯ ಆಪ್ಸೆನ್ ಕೂಡ ಆಗಬಹುದು.‌

 

ಬರಬೇಕಾದವರು ಇವರು..

ಕನ್ನಡದಲ್ಲೀಗ ಬಹುನಿರೀಕ್ಷಿತ ಸ್ಟಾರ್‌ ಸಿನಿಮಾಗಳದ್ದು ದೊಡ್ಡ ಪಟ್ಟಿ ಇದೆ. ದರ್ಶನ್‌ ಅಭಿನಯದ “ರಾಬರ್ಟ್‌ʼ, ಪುನೀತ್‌  ಅಭಿನಯದ “ಯುವರತ್ನʼ, ಧ್ರುವಸರ್ಜಾ ಅಭಿನಯದ “ ಪೊಗರುʼ, ಸುದೀಪ್‌ ಅಭಿನಯದ “ಕೋಟಿಗೊಬ್ಬ 3ʼ , ಶಿವರಾಜ್‌ ಕುಮಾರ್‌ ಅಭಿನಯದʼ ಭಜರಂಗಿ 2ʼ ಯಶ್‌ ಅಭಿನಯದ ʼಕೆಜಿಎಫ್‌ 2ʼ ತೆರೆ ಕಾಣಬೇಕಿದೆ. ಕನ್ನಡ ಸಿನಿಮಾ ಪ್ರೇಕ್ಷಕ ಈ ಸಿನಿಮಾಗಳ ರಿಲೀಸ್‌ಗೆ ಕಾಯುತ್ತಿದ್ದಾರೆ. ಆದರೆ ಇವೆಲ್ಲ ಬರುವುದು ಯಾವಾಗ?

ಅದರಲ್ಲೂ ಲಾಕ್‌ಡೌನ್‌ ದಿನಗಳಿಂದ ಒಟಿಟಿ ಪ್ಲಾಟ್‌ ಫಾರ್ಮ್‌ ಎನ್ನುವುದು ಸಿನಿಮಾಸಕ್ತರ ತಾಣವಾಗಿದೆ. ಅಲ್ಲಿಯೇ ಸಿನಿಮಾ ನೋಡುವವರ ಸಂಖ್ಯೆ ಹೆಚ್ಚಾಗಿದೆ. ಅಮೆಜಾನ್‌, ನೆಟ್‌ಫ್ಲಿಕ್ಸ್ ಸೇರಿದಂತೆ ಒಟಿಟಿ ಆಪ್‌ಗಳು ಪ್ರತಿಯೊಬ್ಬರ ಮೊಬೈಲ್‌ನಲ್ಲೂ ಇವೆ. ಅಲ್ಲಿಯೇ ಈಗ ಒಳ್ಳೆಯ ಸಿನಿಮಾ ಸಿಗುವಾಗ ಇನ್ಯಾಕೆ ಚಿತ್ರಮಂದಿರ ಅಂದೊಕೊಳ್ಳುತ್ತಿರುವವರ ಸಂಖ್ಯೆ ದಿನೇ ದಿನೆ ಹೆಚ್ಚಾಗುತ್ತಿದೆ. ಲಾಕ್‌ಡೌನ್‌ ನಂತರ ಈ ಸಂಖ್ಯೆ ದುಪ್ಪಟ್ಟು ಆಗಿದೆ ಎನ್ನುತ್ತಿವೆ ಮೂಲಗಳು.

ಹಾಗೆಯೇ ಭಾಷೆ ಯಾವುದಾದರೇನು ಮನರಂಜನೆ ಸಿಕ್ಕರೆ ಸಾಕು ಎನ್ನುವರೂ ಹೆಚ್ಚಾಗುತ್ತಿದ್ದಾರೆ. ಇದಿಷ್ಟರ ನಡುವೆ ನಮ್ಮ ಸ್ಟಾರ್‌ಗಳು, ನಮ್ಮದೇ ಭಾಷೆ ಅಂತೆಲ್ಲ ಅಭಿಮಾನ ಇಟ್ಟುಕೊಂಡವರನ್ನು ಮತ್ತೆ ಚಿತ್ರಮಂದಿರಗಳಿಗೆ ಕರೆ ತರಬೇಕಾದ್ರೆ, ಎಲ್ಲಾ ರೀತಿಯಲ್ಲೂ ಗುಣಮಟ್ಟದ ಸಿನಿಮಾಗಳು ಬರಬೇಕು. ಜತೆಗೆ ಆದಷ್ಟು ಬೇಗ ಸ್ಟಾರ್‌ ಸಿನಿಮಾಗಳು ತೆರೆ ಕಾಣಬೇಕಿದೆ ಎನ್ನುವ ಮಾತು ಸಿನಿಮಾ ತಜ್ಣರಿಂದಲೇ ಕೇಳಿಬರುತ್ತಿದೆ. ಅದರ ಜತೆಗೆಯೇ ಈಗ ಪರಭಾಷೆಯ ಸ್ಟಾರ್‌ ಸಿನಿಮಾಗಳಿಗೆ ಪೈಪೋಟಿಯಾಗಿ ಕನ್ನಡ ಸಿನಿಮಾಗಳು ಬರಬೇಕಿದೆ. ಸ್ಟಾರ್‌ಗಳು ಕೂಡ ತಾವು ಕೋಟಿ ಸಂಭಾವನೆಯ ಶೂರರು ಎನ್ನುವ ಜಂಭ ಬಿಟ್ಟು, ವರ್ಷಕ್ಕೆ ಎಷ್ಟು ಸಾಧ್ಯವೋ ಅಷ್ಟು ಕಂಟೆಂಟ್‌ ಆಧರಿತ ಸಿನಿಮಾಗಳಲ್ಲಿ ಕಾಣಿಸಿಕೊಳ್ಳಬೇಕಿದೆ. ಆಗ ಮಾತ್ರ, ಕನ್ನಡ ಚಿತ್ರೋದ್ಯಮ ಉಳಿಯುತ್ತೆ, ಕನ್ನಡದ ಪ್ರೇಕ್ಷಕ ಇರುತ್ತಾನೆ.  ಅದು ʼಮಾಸ್ಟರ್‌ʼ ನಂತಹ ಪರಭಾಷೆಯ ಸಿನಿಮಾದೆದುರು ಕೂಡ.

Categories
ಸಿನಿ ಸುದ್ದಿ

ಯಜಮಾನನಿಗೆ ಮತ್ತೊಂದು ಚಿತ್ರ ಫಿಕ್ಸ್ -ರಾಜವೀರ ಮದಕರಿನಾಯಕ ಬಳಿಕ  ದರ್ಶನ್‌ ಹರಿಕೃಷ್ಣ ಜೋಡಿಯ ಮೋಡಿ

ಯಜಮಾನ ನಿರ್ಮಾಪಕರಿಂದ ಇನ್ನೊಂದು ಕಾಣಿಕೆ

ಕನ್ನಡದ ಮಟ್ಟಿಗೆ ಚಾಲೆಂಜಿಂಗ್‌ ಸ್ಟಾರ್‌ ದರ್ಶನ್‌ ಕೂಡ ಅತೀ ಹೆಚ್ಚು ಅಭಿಮಾನಿ ಬಳಗವನ್ನು ಹೊಂದಿದವರು. ಸದ್ಯಕ್ಕೆ ಅವರ ಕೈಯಲ್ಲಿ ಒಂದಷ್ಟು ಸಿನಿಮಾಗಳಿವೆ. “ರಾಬರ್ಟ್‌” ಈಗ ರಿಲೀಸ್‌ಗೆ ರೆಡಿಯಾಗಿದೆ. ಅದರ ಬೆನ್ನಲ್ಲೇ “ರಾಜವೀರ ಮದಕರಿನಾಯಕ” ಚಿತ್ರ ಕೂಡ ಸೆಟ್ಟೇರಿದ್ದು, ಇನ್ನೇನು ಚಿತ್ರೀಕರಣಕ್ಕೆ ಹೊರಡಬೇಕಿದೆ. ಇನ್ನು, “ರಾಬರ್ಟ್‌” ತಂಡದ ಜೊತೆ ಮತ್ತೊಂದು ಸಿನಿಮಾ ಮಾಡುವುದಾಗಿಯೂ ಈಗಾಗಲೇ ದರ್ಶನ್‌ ಅನೌನ್ಸ್‌ ಮಾಡಿದ್ದಾಗಿದೆ. ಇವುಗಳ ಜೊತೆಯಲ್ಲಿ ದರ್ಶನ್‌ಗೆ ಮತ್ತೊಂದು ಸಿನಿಮಾ ಕೂಡ ಆಗುತ್ತಿದೆ ಅನ್ನೋದೇ ಈ ಹೊತ್ತಿನ ವಿಶೇಷ. ಹೌದು, ದರ್ಶನ್‌ ಅವರಿಗೆ ಹೊಸ ಸಿನಿಮಾ ಕಥೆ ರೆಡಿಯಾಗುತ್ತಿದೆ. ಮತ್ತೊಂದು ಅದ್ಧೂರಿ ಬಜೆಟ್‌ನ ಚಿತ್ರ ಆಗಲಿದೆ ಎಂಬುದು ವಿಶೇಷತೆಗಳಲ್ಲೊಂದು.


ಹೌದು, ಈ ಹಿಂದೆ ದರ್ಶನ್‌ ಅವರಿಗೆ “ಯಜಮಾನ” ಚಿತ್ರ ನಿರ್ಮಿಸಿದ್ದ ಶೈಲಜಾ ನಾಗರಾಜ್‌ ಅವರೇ ದರ್ಶನ್‌ ಅವರಿಗೆ ಮತ್ತೊಂದು ದೊಡ್ಡ ಚಿತ್ರ ಮಾಡಲು ತಯಾರಿ ನಡೆಸಿದ್ದಾರೆ. ಹಾಗೆ ನೋಡಿದರೆ, “ಯಜಮಾನ” ಸಿನಿಮಾ ಆಗುವ ಸಂದರ್ಭದಲ್ಲೇ ನಿರ್ಮಾಪಕರು ದರ್ಶನ್‌ ಅವರಿಗೆ ಅಡ್ವಾನ್ಸ್‌ ಕೊಟ್ಟಿದ್ದರು ಎನ್ನಲಾಗಿದ್ದು, ಆ ಚಿತ್ರದ ಕಥೆಯ ಕೆತ್ತನೆಯ ಕೆಲಸ ಜೋರಾಗಿಯೇ ನಡೆಯುತ್ತಿದೆ. ಇನ್ನು, ದರ್ಶನ್‌ ಅವರ ಮುಂದಿನ ಸಿನಿಮಾಗೆ ನಿರ್ದೇಶಕರು ಯಾರು? ಈ ಪ್ರಶ್ನೆಗೆ ಉತ್ತರವೂ ಸಿಕ್ಕಿದೆ. “ಯಜಮಾನ” ಚಿತ್ರವನ್ನು ನಿರ್ದೇಶನ ಮಾಡಿದ್ದ ಹರಿಕೃಷ್ಣ ಅವರೇ ದರ್ಶನ್‌ ಅವರಿಗೆ ಹೊಸ ಚಿತ್ರ ಮಾಡುತ್ತಿದ್ದಾರೆ ಎಂಬ ಸುದ್ದಿಯೂ ಇದೆ. ಈಗಾಗಲೇ ಹರಿಕೃಷ್ಣ ಅವರು ತಮ್ಮದ್ದೊಂದು ತಂಡ ಕಟ್ಟಿಕೊಂಡು ಕಥೆ, ಚಿತ್ರಕಥೆ ಬರೆಯುವಲ್ಲಿ ನಿರತರಾಗಿದ್ದಾರೆ ಎಂದು ಹೇಳಲಾಗುತ್ತಿದ್ದು, ಸದ್ಯಕ್ಕೆ ದರ್ಶನ್‌ ಅವರು “ರಾಬರ್ಟ್‌” ರಿಲೀಸ್‌ ಎದುರು ನೋಡುತ್ತಿದ್ದಾರೆ.

ಇದರ ಜೊತೆ ಜೊತೆಯಲ್ಲೇ ಅವರು “ರಾಜವೀರ ಮದಕರಿನಾಯಕ” ಸಿನಿಮಾ ಚಿತ್ರೀಕರಣದಲ್ಲೂ ತೊಡಗಿಕೊಳ್ಳಲಿದ್ದಾರೆ. ಆ ಬಳಿಕ ಅವರು, ತರುಣ್‌ ಸುಧೀರ್‌ ನಿರ್ದೇಶನದಲ್ಲಿ ಮತ್ತೊಂದು ಹೊಸ ಸಿನಿಮಾಗೆ ಮುಂದಾಗುತ್ತಾರೋ ಅಥವಾ ಹರಿಕೃಷ್ಣ ಅವರ ಹೊಸ ಚಿತ್ರದಲ್ಲಿ ಎಂಟ್ರಿಯಾಗುತ್ತಾರೋ ಎಂಬುದು ಗೌಪ್ಯ. ಆದರೆ, ಹರಿಕೃಷ್ಣ ಅವರೊಂದಿಗೆ ಮತ್ತೊಂದು ಸಿನಿಮಾ ಆಗುತ್ತಿರುವುದಂತೂ ನಿಜ. “ಯಜಮಾನ” ಬಳಿಕ ಹೊಸ ಸಿನಿಮಾ ಇನ್ನೂ ಹೊಸತನದಲ್ಲಿರಲ್ಲಿದ್ದು, ಪಕ್ಕಾ ಮಾಸ್‌ ಅಂಶಗಳೊಂದಿಗೆ ಪಡ್ಡೆಗಳೂ ಸೇರಿದಂತೆ ದರ್ಶನ್ ಅಭಿಮಾನಿಗಳಿಗೊಂದು ರಗಡ್‌ ಸಿನಿಮಾ ಮಾಡಬೇಕೆಂಬ ಹಠದಲ್ಲೇ ಹರಿಕೃಷ್ಣ ಸದ್ಯಕ್ಕೆ ಸ್ಕ್ರಿಪ್ಟ್‌ನಲ್ಲಿ ಮಗ್ನರಾಗಿದ್ದಾರೆ.

ಹರಿಕೃಷ್ಣ ಅಂದಾಕ್ಷಣ, ನೆನಪಾಗೋದೇ ಅದ್ಭುತ ಹಾಡುಗಳ ಮೋಡಿಗಾರ ಅನ್ನೋದು. ಅವರು ಸಂಗೀತ ನಿರ್ದೇಶನದ ಜೊತೆ ಜೊತೆಯಲ್ಲೇ ನಿರ್ದೇಶನಕ್ಕೂ ಬಂದಿದ್ದು ಮತ್ತೊಂದು ಪ್ಲಸ್‌ ಪಾಯಿಂಟ್.‌ ಬಹಳಷ್ಟು ಮಂದಿ ಹರಿಕೃಷ್ಣ ಸಂಗೀತ ನಿರ್ದೇಶನದಲ್ಲಿ ಪಳಗಿದವರು, ನಿರ್ದೇಶನವನ್ನು ಎಷ್ಟರಮಟ್ಟಿಗೆ ನಿಭಾಯಿಸುತ್ತಾರೋ ಏನೋ ಎಂಬ ಪ್ರಶ್ನೆಗಳನ್ನು ಹಾಕುತ್ತಿದ್ದರು. ಯಾವಾಗ,”ಯಜಮಾನ” ಹೊರಬಂತೋ, ಅದರೊಳಗಿರುವ ಗತ್ತುಗೈರತ್ತು ನೋಡಿದ ಮಂದಿ, ಒಂದು ಮಾತನ್ನೂ ಆಡೋಕೆ ಮುಂದಾಗಲಿಲ್ಲ.

ಅಷ್ಟರಮಟ್ಟಿಗೆ “ಯಜಮಾನ” ಸಿನಿಮಾವನ್ನು ಕಟ್ಟಿಕೊಡುವ ಮೂಲಕ ಗೆಲುವು ತಂದುಕೊಡುವಲ್ಲಿ ಯಶಸ್ವಿಯಾಗಿದ್ದುಂಟು. ಈಗ ಅದೇ ಹುಮ್ಮಸ್ಸಿನಲ್ಲೇ ದರ್ಶನ್‌ ಅವರಿಗೆ ಮತ್ತೊಂದು ಸಿನಿಮಾ ಮಾಡೋಕೆ ಅಣಿಯಾಗುತ್ತಿದ್ದಾರೆ ಹರಿಕೃಷ್ಣ. ಅದಕ್ಕೆ ಬೇಕಾದ ಎಲ್ಲಾ ತಯಾರಿಯನ್ನೂ ಹರಿಕೃಷ್ಣ ಮಾಡಿಕೊಳ್ಳುತ್ತಿದ್ದಾರೆ ಅನ್ನೋದು ಗೌಪ್ಯವಾಗಿ ಉಳಿದಿಲ್ಲ. ಇನ್ನು ಶೈಲಜಾ ನಾಗ್‌ ಅವರು ಕೂಡ ದರ್ಶನ್‌ ಜೊತೆ ಭರ್ಜರಿಯಾಗಿಯೇ ಹೊಸ ಸಿನಿಮಾ ಮಾಡಲು ಉತ್ಸುಕರಾಗಿದ್ದಾರೆ ಎನ್ನಲಾಗಿದ್ದು, ಇಷ್ಟರಲ್ಲೇ ಆ ಚಿತ್ರದ ಒಂದಷ್ಟು ಹೊಸ ಸುದ್ದಿಗಳು ಹೊರಬಿದ್ದರೆ ಅಚ್ಚರಿ ಇಲ್ಲ.

Categories
ಆಡಿಯೋ ಕಾರ್ನರ್ ಸಿನಿ ಸುದ್ದಿ

‘ ಸಲಗ’ ಟೈಟಲ್ ಟ್ರ್ಯಾಕ್ ಗೆ ಚೆನ್ನೈ‌ನಲ್ಲಿ ಫೈನಲ್ ಟಚ್

ಸ್ಯಾಂಡಲ್ ವುಡ್ ನಲ್ಲಿ ಭರ್ಜರಿ ಧೂಳೆಬ್ಬಿಸುವುದು ಖಾತರಿ ಆಗಿದೆ ದುನಿಯಾ ವಿಜಯ್ ನಿರ್ದೇಶನದ ಮೊದಲ ಸಿನಿಮಾ

ನಟ ದುನಿಯಾ ವಿಜಯ್ ನಿರ್ದೇಶಿಸಿ, ನಾಯಕರಾಗಿ ಅಭಿನಯಿಸಿರುವ ‘ಸಲಗ’ ರಿಲೀಸ್ ಗೆ ರೆಡಿಯಾಗುತ್ತಿದೆ. ಅದಕ್ಕೆ ತಕ್ಕಂತೆ ಚಿತ್ರ ತಂಡ ಎಲ್ಲಾ ರೀತಿಯಲ್ಲೂ ರೆಡಿಯಾಗುತ್ತಿದೆ. ಸದ್ಯಕ್ಕೆ ಚಿತ್ರ ತಂಡ ಚಿತ್ರದ ಟೈಟಲ್ ಟ್ರ್ಯಾಕ್ ಫೈನಲ್ ಕಂಪೋಸಿಂಗ್ ಕೆಲಸದಲ್ಲಿ ಬ್ಯುಸಿಯಾಗಿದೆ. ಚಿತ್ರ ತಂಡದ ಮಾಹಿತಿ ಪ್ರಕಾರ ಟ್ರೇಲರ್ ಲಾಂಚ್ ಗೂ ಮುನ್ನ ಟೈಟಲ್ ಟ್ರ್ಯಾಕ್ ಹೊರ ತಂದು, ಅದರದ್ದೇ ಒಂದು ಹವಾ ಸೃಷ್ಟಿಸಿದ ನಂತರವೇ ಚಿತ್ರ ತೆರೆಗೆ ಬರಲಿದೆಯಂತೆ. ಹಾಗಾಗಿಯೇ ಚಿತ್ರದ ನಿರ್ದೇಶಕ ಕಮ್ ನಾಯಕ ನಟ ದುನಿಯಾ ವಿಜಯ್,ಸಂಗೀತ ನಿರ್ದೇಶಕ ಚರಣ್ ರಾಜ್ ಮತ್ತತವರ ತಂಡ ಚೆನ್ನೈಗೆ ಪ್ರಯಾಣ ಬೆಳಸಿ, ಅಲ್ಲಿ ಟೈಟಲ್ ಟ್ರ್ಯಾಕ್ ಗೆ ಫೈನಲ್ ಟಚ್ ನೀಡುವ ಕೆಲಸದಲ್ಲಿ ಬ್ಯುಸಿಯಾಗಿದೆ. ಆ ಕೆಲಸದ ಒಂದು ಝಲಕ್ ಇಲ್ಲಿದೆ.


‘ ಟಗರು ‘ ಖ್ಯಾತಿಯ ನಿರ್ಮಾಪಕ ಕೆ.ಪಿ ಶ್ರೀಕಾಂತ್ ನಿರ್ಮಾಣದಲ್ಲಿ ತಯಾರಾಗಿರೋ ಈ ಚಿತ್ರ ಈಗಾಗ್ಲೇ ಹತ್ತು ಹಲವು ವಿಶೇಷಗಳಿಂದ ಚಿತ್ರೋದ್ಯಮದಲ್ಲಿ ಹಾಗೂ ಸಿನಿಮಾಸಕ್ತರಲ್ಲಿ ದೊಡ್ಡ ನಿರೀಕ್ಷೆ ಹುಟ್ಟಿಸಿದೆ. ಅದಕ್ಕೆ ಕಾರಣ ದುನಿಯಾ ವಿಜಯ್ ಜತೆಗೆ ಸಂಗೀತ ನಿರ್ದೇಶಕ. ಚರಣ್ ರಾಜ್. ಇದುವರೆಗೂ ಬೆಳ್ಳಿತೆರೆಯಲ್ಲಿ ನಾಯಕರಾಗಿ ಅಬ್ಬರಿಸಿದ ನಟ ದುನಿಯಾ ವಿಜಯ್, ಇದೇ ಮೊದಲು ಆ್ಯಕ್ಷನ್ ಕಟ್ ಹೇಳಿದ ಸಿನಿಮಾ‌. ಹಾಗೆಯೇ ಟಗರು ಚಿತ್ರದೊಂದಿಗೆ ಸ್ಯಾಂಡಲ್ ವುಡ್ ನಲ್ಲಿ ಸೆನ್ಸೆಷನಲ್ ಸಂಗೀತ ನಿರ್ದೇಶಕ ಎಂದೆನಿಸಿಕೊಂಡ ಯುವ ಸಂಗೀತ ನಿರ್ದೇಶಕ ಚರಣ್ ರಾಜ್, ಸಲಗ ಮೂಲಕವೂ ದೊಡ್ಡ ಹವಾ ಎಬ್ಬಿಸುತ್ತಾರೆನ್ನುವ ನಿರೀಕ್ಷೆ ಇದೆ‌.

error: Content is protected !!