ಬಿಗ್ ಬಾಸ್ ಖ್ಯಾತಿಯ ನಟಿ ಚೈತ್ರಾ ಕೋಟೂರು ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಕೋಲಾರ ನಗರದ ಕುರುಬರ ಪೇಟೆಯಲ್ಲಿರುವ ತಮ್ಮ ಮನೆಯಲ್ಲಿ ಗುರುವಾರ ಬೆಳಗ್ಗೆ ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಾರೆ. ಸದ್ಯಕ್ಕೆ ಕೋಲಾರದ ಖಾಸಗಿ ಆಸ್ಪತ್ರೆಯಲ್ಲಿ ಅವರನ್ನು ಚಿಕಿತ್ಸೆಗಾಗಿ ಸೇರಿಸಲಾಗಿದ್ದು, ಚೇತರಿಸಿಕೊಳ್ಳುತ್ತಿದ್ದಾರೆಂದು ಹೇಳಲಾಗಿದೆ.
ಚೈತ್ರಾ ಕೋಟೂರು ವಿಷ ಸೇವಿಸಿ ಆತ್ಮಹತ್ಯೆಗೆ ಯತ್ನಿಸಿದ್ದಕ್ಕೆ ನಿರ್ಧಿಷ್ಟವಾದ ಕಾರಣ ಇದುವರೆಗೂ ಗೊತ್ತಾಗಿಲ್ಲವಾದರೂ, ಇತ್ತೀಚೆಗೆ ಅವರು ಮದುವೆ ಆಗಿ ಆನಂತರ ಆದ ಬೆಳವಣಿಗೆಗಳೇ ಕಾರಣ ಎನ್ನಲಾಗಿದೆ.
ಶಿವರಾಜಕುಮಾರ್ ಹೇಗೋ ಅವರ ಅಭಿಮಾನಿಗಳು ಕೂಡ ಹಾಗೆಯೇ. ಹೌದು, ಶಿವರಾಜಕುಮಾರ್ ಈಗಾಗಲೇ ಹಲವಾರು ಸಾಮಾಜಿಕ ಕೆಲಸ ಮಾಡಿದ್ದಾರೆ. ಅದೆಷ್ಟೋ ನೊಂದ ಜೀವಗಳಿಗೂ ಸಹಾಯಕ್ಕೆ ನಿಂತಿದ್ದಾರೆ. ಅವರಂತೆಯೇ, ಅವರ ಅಭಿಮಾನಿಗಳೂ ಸಹ ಹಲವು ಸಾಮಾಜಿಕ ಕಾರ್ಯ ಮಾಡುತ್ತಲೇ ಇದ್ದಾರೆ. ಈಗ ಶಿವರಾಜಕುಮಾರ್ ಅವರ ಶಿವಸೈನ್ಯ ಮತ್ತು ಶಿವು ಅಡ್ಡ ಬನಶಂಕರಿ ಫ್ಯಾನ್ಸ್ ಸೇರಿ ಖಾಯಿಲೆಯಿಂದ ಬಳಲುತ್ತಿದ್ದ ಮಗುವೊಂದರ ಪೋಷಕರಿಗೆ ಧನಸಹಾಯ ಮಾಡಿದ್ದಾರೆ.
ಇಷ್ಟಕ್ಕೂ ಆ ಅಭಿಮಾನಿಗಳು ಸಹಾಯ ಮಾಡಿದ್ದು, ಇತ್ತೀಚೆಗೆ ಶಿವಣ್ಣ ಪ್ರೀಮಿಯರ್ ಕ್ರಿಕೆಟ್ ಲೀಗ್‌ನಿಂದ ಸಂಗ್ರಹಿಸಿದ ಹಣ ಎಂಬುದು ವಿಶೇಷ. ಶಿವರಾಜಕುಮಾರ್ ಅಭಿಮಾನಿಗಳು, ಇತ್ತೀಚೆಗೆ ಶಿವರಾಜಕುಮಾರ್ ಅವರ ಮನೆಗೆ ತೆರಳಿ, ಶಿವರಾಜಕುಮಾರ್ ಅವರಿಂದಲೇ ಆ ಮಗುವಿನ ತಾಯಿಗೆ ಧನ ಸಹಾಯ ಮಾಡಿದೆ.
ಶಿವಣ್ಣ ಪ್ರೀಮಿಯರ್ ಕ್ರಿಕೆಟ್ ಲೀಗ್ (SPL) ನಿಂದ ಸಂಗ್ರಹಿಸಿದ ಹಣವನ್ನು ಖಾಯಿಲೆಯಿಂದ ಬಳಲುತ್ತಿರುವ ಮಗುವಿನ ಚಿಕಿತ್ಸೆಗೆ ನೀಡಿದ್ದು, ಖುಷಿ ಇದೆ ಎಂದು ಶಿವಸೈನ್ಯ ಮತ್ತು ಶಿವು ಅಡ್ಡ ಬನಶಂಕರಿ ಅಭಿಮಾನಿಗಳು ಹೇಳಿಕೊಂಡಿದ್ದಾರೆ. ಶಿವರಾಜಕುಮಾರ್ ಅವರೂ ಸಹ ಅಭಿಮಾನಿಗಳ ಈ ಕೆಲಸವನ್ನು ಮೆಚ್ಚಿದ್ದಾರೆ.
ಕನ್ನಡದಲ್ಲಿ ಹೊಸಬರೇ ಸೇರಿ ಮಾಡಿದ “ಮೋಕ್ಷ” ಚಿತ್ರ ಈಗಾಗಲೇ ಬಿಡುಗಡೆಯ ದಿನವನ್ನು ಘೋಷಿಸಿತ್ತು. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಏಪ್ರಿಲ್ ೧೬ರಂದು ರಾಜ್ಯಾದ್ಯಂತ ಬಿಡುಗಡೆ ಕಾಣಬೇಕಿತ್ತು. ಆದರೆ, ಕೊರೊನಾ ಭಯ ಹೆಚ್ಚಾಗಿದ್ದರಿಂದ ಚಿತ್ರತಂಡ, “ಮೋಕ್ಷ” ಚಿತ್ರದ ಬಿಡುಗಡೆಯನ್ನು ಸ್ವಲ್ಪ ದಿನಗಳ ಕಾಲ ಮುಂದಕ್ಕೆ ಹಾಕಿದೆ.
ಹೌದು, ಈಗಾಗಲೇ ಟ್ರೇಲರ್ ಮೂಲಕ ಜೋರು ಸದ್ದು ಮಾಡಿರುವ ಸಸ್ಪೆನ್ಸ್ ಥ್ರಿಲ್ಲರ್ “ಮೋಕ್ಷ” ಚಿತ್ರ ಏಪ್ರಿಲ್ 16 ರಂದು ಬಿಡುಗಡೆ ಮಾಡಲು ನಿರ್ದೇಶಕ ಸಮರ್ಥ್ ನಾಯಕ್ ಅವರು ತಯಾರಾಗಿದ್ದರು. ರಾಜ್ಯದಲ್ಲಿ ಪುನಃ ಕೊರೊನಾ ಮಹಾಮಾರಿ ತನ್ನ ಅಟ್ಟಹಾಸ ತೋರಿಸುತ್ತಿರುವುದರಿಂದ ಚಿತ್ರವನ್ನು ಸ್ವಲ್ಪ ದಿನಗಳ ಕಾಲ ಕಾದು ಆ ನಂತರ ಬಿಡುಗಡೆ ಮಾಡಲು ಯೋಚಿಸಿದ್ದಾಗಿ ಹೇಳಿದ್ದಾರೆ ನಿರ್ಮಾಪಕ ಕಮ್ ನಿರ್ದೇಶಕ ಸಮರ್ಥ್ ನಾಯಕ್. ಚಿತ್ರದ ಹಾಡುಗಳಿಗೆ ಕಿಶನ್ ಮೋಹನ್ ಹಾಗೂ ಸಚಿನ್ ಬಾಲು ಸಂಗೀತ ನೀಡಿದ್ದಾರೆ.
ಹಿನ್ನೆಲೆ ಸಂಗೀತ ಕಿಶನ್ ಮೋಹನ್ ಮಾಡಿದ್ದಾರೆ. ಗುರುಪ್ರಶಾಂತ್ ರೈ, ಜೋಮ್ ಜೋಸಫ್, ಕಿರಣ್ ಹಂಪಾಪುರ ಛಾಯಾಗ್ರಹಣ ಮಾಡಿದರೆ, ವರುಣ್ ಕುಮಾರ್ ಅವರ ಸಂಕಲನವಿದೆ. ಚಿತ್ರದಲ್ಲಿ ಮೋಹನ್ ಧನರಾಜ್ ಮತ್ತು ಆರಾಧ್ಯ ಲಕ್ಷ್ಮಣ್ ಪ್ರಮುಖ ಆಕರ್ಷಣೆಯಾಗಿದ್ದಾರೆ. ಉಳಿದಂತೆ ತಾರಕ್ ಪೊನ್ನಪ್ಪ, ಭೂಮಿ ಅಜ್ಞಾನಿ, ಪ್ರಶಾಂತ್ ನಟನ ಇತರರು ಇದ್ದಾರೆ.
ಯುವ ನಿರ್ದೇಶಕ ಸಂಗಮೇಶ್ ಸಜ್ಜನ್ ಈಗ ಮತ್ತೊಂದು ಚಿತ್ರದ ಮೂಲಕ ಸುದ್ದಿಯಲ್ಲಿದ್ದಾರೆ. ಈ ಹಿಂದೆ ಇವರು ಮಂತ್ರಂ ಹೆಸರಿನ ಚಿತ್ರಕ್ಕೆ ಆಕ್ಷನ್ ಕಟ್ ಹೇಳಿದ್ದರು. ಹಾರರ್ ಜಾನರ್ ಕಥಾ ಹಂದರ ಈ ಚಿತ್ರ ಸಾಕಷ್ಟು ಸೌಂಡ್ ಮಾಡಿತ್ತು. ಆ ನಂತರವೀಗ ಮತ್ತೊಂದು ಹಾರರ್ ಕಥಾ ಹಂದರದ ಕಥೆಯುಳ್ಳ “ಮೃತ್ಯುಂಜಯ್ಯʼ ಹೆಸರಿನ ಚಿತ್ರವನ್ನು ನಿರ್ದೇಶಿಸಿ, ತೆರೆಗೆ ತರಲು ರೆಡಿ ಆಗಿದ್ದಾರೆ. ಚಿತ್ರದ ಶೀರ್ಷಿಕೆಯೇ ಹೇಳುವ ಹಾಗೆ ಇದು ಮೃತ್ಯುವನ್ನು ಗೆಲ್ಲುವವನ ಕಥೆ. ಅವನೇ ಮೃತ್ಯುಂಜಯ್ಯ. ಸಸ್ಪೆನ್ಸ್, ಥ್ರಿಲ್ಲರ್ ಅಂಶಗಳ ಜತೆಗೆ ಹಾರರ್ ಈ ಚಿತ್ರದ ಹೈಲೈಟ್ಸ್. ಚಿತ್ರದ ಕಥಾ ನಾಯಕ ಕಷ್ಟದ ಸಂದರ್ಭವೊಂದನ್ನು ಎದುರಿಸಲಾಗದೆ, ಆತ್ಮಹತ್ಯೆಗೆ ಯತ್ನಿಸುತ್ತಾನೆ. ಆದರೆ ಒಂದು ಹಂತದಲ್ಲಿ ಅದು ತಪ್ಪು ಅಂತ ಅರಿವಾಗುತ್ತದೆ. ಅದು ಹೇಗೆ ಅನ್ನೋದನ್ನು ಈ ಚಿತ್ರದಲ್ಲಿ ತೋರಿಸಲು ಹೊರಟಿದ್ದಾರಂತೆ ನಿರ್ದೇಶಕ ಸಂಗಮೇಶ್ ಸಜ್ಜನ್.
ಚಿತ್ರೀಕರಣ ಮುಗಿದಿದೆ. ಒಂದ್ರೀತಿ ದಾಖಲೆ ಎನ್ನುವ ಹಾಗೆ ಚಿತ್ರ ತಂಡ 192 ಗಂಟೆಗಳಲ್ಲಿ ಈ ಚಿತ್ರದ ಚಿತ್ರೀಕರಣ ಮುಗಿಸಿದೆ. ಲಾಕ್ ಡೌನ್ ದಿನಗಳಲ್ಲಿಯೇ ಚಿತ್ರ ತಂಡ ಸೂಕ್ತ ಮುನ್ನೆಚ್ಚರಿಕೆ ಕ್ರಮಗಳನ್ನು ಕೈಗೊಂಡು ಚಿತ್ರೀಕರಣ ಮುಗಿಸಿದೆಯಂತೆ. ವಿಶೇಷ ಅಂದ್ರೆ ಚಿತ್ರದ ಕ್ಲೈಮ್ಯಾಕ್ಸ್ ಚಿತ್ರೀಕರಣಕ್ಕೆ 800 ಜನರನ್ನು ಬಳಸಿಕೊಳ್ಳಲಾಗಿತ್ತಂತೆ. ಆಗಲೂ ಸೂಕ್ತ ಕೊರೋನಾ ಮುನ್ನೆಚ್ಚರಿಕೆ ಕೈಗೊಂಡಿದ್ದಾಗಿ ನಿರ್ದೇಶಕ ಸಂಗಮೇಶ್ ಸಜ್ಜನ್ ಹೇಳುತ್ತಾರೆ.
ಚಿತ್ರೀಕರಣದ ಜತೆಗೆ ಚಿತ್ರ ತಂಡ ಪೋಸ್ಟ್ ಪ್ರೊಡಕ್ಷನ್ ಕೆಲಸ ಕೂಡ ಮುಗಿಸಿದೆ. ರಿಲೀಸ್‌ಗೆ ಸಿದ್ಧತೆ ನಡೆಸಿದೆ. ಇದೀಗ ಟ್ರೇಲರ್ ಲಾಂಚ್ ಮೂಲಕ ಚಿತ್ರ ತಂಡ ಮಾಧ್ಯಮದ ಮುಂದೆ ಬಂದಿತ್ತು. ಅಲ್ಲಿ ಚಿತ್ರ ತಂಡ ಚಿತ್ರದ ವಿಶೇಷತೆ ಕುರಿತು ಮಾತನಾಡಿತು. ಚಿತ್ರಕ್ಕೆ ಹೊಸ ಪ್ರತಿಭೆ ಹಿತೇಶ್ ನಾಯಕ ನಟ. ಶ್ರೇಯಾ ಶೆಟ್ಟಿ ನಾಯಕಿ. ಅವರೊಂದಿಗೆ ಸುಮನ್ ನಗರ್ ಕರ್, ಆಟೋ ರಾಜ, ದುರ್ಗಾ ಪ್ರಸಾದ್, ಚೇತನ್ ದುರ್ಗ, ಶಿವು ಮಜಾ ಭಾರತ, ಚೈತ್ರಾ, ಪವಿತ್ರಾ, ಬಾಬಣ್ಣ ಮತ್ತಿತರರು ಇದ್ದಾರೆ. ಬೆಳದಿಂಗಳ ಬಾಲೆ ಅಂತಲೇ ಜನಪ್ರಿಯತೆ ಪಡೆದಿರುವ ನಟಿ ಸುಮನ್ ನಗರ್ಕರ್ ಇಲ್ಲಿ ಪ್ರಮುಖ ಪಾತ್ರವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಇದೇ ಮೊದಲು ಅವರು ಸೈಕ್ಯಾಟ್ರಿಸ್ಟ್ ಆಗಿ ಕಾಣಿಸಿಕೊಂಡಿದ್ದಾರಂತೆ. ಚಿತ್ರತಂಡ ಮಾತಿಗಿಳಿದಾಗ ಮೊದಲು ಮಾತು ಶುರು ಮಾಡಿದ್ದೇ ನಟಿ ಸುಮನ್ ನಗರ್ಕರ್ ಅವರು. ” ಲಾಕ್ ಡೌನ್ ದಿನಗಳಲ್ಲಿ ಮೊಟ್ಟ ಮೊದಲ ಬಾರಿಗೆ ಸಿಕ್ಕ ಅವಕಾಶ ಇದು. ನಾನಿಲ್ಲಿ ಒಬ್ಬ ಸೈಕ್ಯಾಟ್ರಿಸ್ಟ್ . ತುಂಬಾ ಪ್ರಾಮುಖ್ಯತೆ ಇರುವಂತಹ ಪಾತ್ರ. ಇಡೀ ತುಂಬಾ ಸಪೋರ್ಟ್ ಮಾಡಿದೆʼ ಎಂದರು.
ನಿರ್ದೇಶಕ ಸಜ್ಜನ್ ಮಾತನಾಡಿ, ಚಿತ್ರದ ಹಾರರ್ ಎಳೆಗಳ ಬಗ್ಗೆ ವಿವರಿಸಿದರು. ಹಾರರ್ ಎಲಿಮೆಂಟ್ ಹ್ಯಾಂಡಲ್ ಮಾಡೋದಂದ್ರೆ ತಮಗೆ ತುಂಬಾನೆ ಇಷ್ಟ ಅಂತಲೂ ಹೇಳಿಕೊಂಡರು. ಚಿತ್ರಕ್ಕೆ ಅವರೇ ಚಿತ್ರಕಥೆ, ಸಂಭಾಷಣೆ, ಸಾಹಿತ್ಯ ಬರೆದು ನಿರ್ದೇಶನ ಮಾಡಿದ್ದಾರೆ. ನಾಯಕ ಹಿತೇಶ್, ನಾಯಕಿ ಶ್ರೇಯಾ ಶೆಟ್ಟಿ, ಛಾಯಾಗ್ರಾಹಕ ವಡ್ಡೆ ದೇವೇಂದ್ರ ರೆಡ್ಡಿ, ಸಂಗೀತ ನಿರ್ದೇಶಕ ಆನಂದ್ ರಾಜ್ ಜತೆಗೆ ನಿರ್ಮಾಪಕ ಶೈಲಜಾ ಪ್ರಕಾಶ್ ಹಾಜರಿದ್ದರು.ನಟ ಯಶಸ್ಸು ಸೂರ್ಯ ಅಥಿತಿಯಾಗಿ ಬಂದಿದ್ದರು. ಹೊಸಬರ ಚಿತ್ರ ತಂಡಕ್ಕೆ ಶುಭ ಹಾರೈಸಿದರು. ಸದ್ಯಕ್ಕೆ ಕ್ಯೂಯಾರಿಟಿ ಹುಟ್ಟಿಸುವ ಟ್ರೇಲರ್ ಲಾಂಚ್ ಮಾಡಿರುವ ಚಿತ್ರ ತಂಡ ಇಷ್ಟರಲ್ಲಿಯೇ ಚಿತ್ರವನ್ನು ತೆರೆಗೆ ತರುವ ಉತ್ಸಾಹದಲ್ಲಿದೆ.
ಸಿನಿಮಾ ಅಂದರೆ ಬೆಳಕಲ್ಲಿ ಚಿತ್ರೀಕರಿಸಿ, ಕತ್ತಲಲ್ಲಿ ತೋರಿಸುವ ಪ್ರಕ್ರಿಯೆ ಅನ್ನೋದು ಎಲ್ಲರಿಗೂ ಗೊತ್ತಿದೆ. ಇಲ್ಲಿ ನಗುವಿನಷ್ಟೇ ನೋವು ಇದೆ. ಗೆಲುವಿನಷ್ಟೇ ಸೋಲು ಇದೆ. ಇಲ್ಲೀಗ ಹೇಳಹೊರಟಿರುವ ವಿಷಯ, ಹಲವು ನಟರು ಸಿನಿಮಾಗಳಲ್ಲಿ ಸಾಕಷ್ಟು ರಿಸ್ಕ್ ತೆಗೆದುಕೊಳ್ಳಲೇಬೇಕು. ಒಂದಷ್ಟು ಎಚ್ಚರ ತಪ್ಪಿದರೂ ಇಲ್ಲಿ ಅಪಾಯ ಕಟ್ಟಿಟ್ಟ ಬುತ್ತಿ. ಇತ್ತೀಚೆಗಷ್ಟೇ, ನಟ ಉಪೇಂದ್ರ ಅವರು “ಕಬ್ಜ” ಚಿತ್ರದ ಸಾಹಸ ಚಿತ್ರೀಕರಣದಲ್ಲಿ ಪೆಟ್ಟು ಮಾಡಿಕೊಂಡಿದ್ದರು. ಫೈಟ್ ಸೀನ್ ವೇಳೆ, ಖಳನಾಯಕರ ಜೊತೆ ಹೊಡೆದಾಡುವಾಗ, ಆಕಸ್ಮಿಕವಾಗಿ ತಲೆಗೆ ಪೆಟ್ಟು ಬಿದ್ದಿತ್ತು. ಕ್ಷಣಾರ್ಧದಲ್ಲೇ ಅವರು ಚೇತರಿಸಿಕೊಂಡಿದ್ದರು. ಈಗ ನಟ ಶ್ರೀಮುರಳಿ ಅವರೂ ಕೂಡ ಸ್ಟಂಟ್ ಮಾಡುವ ವೇಳೆ ಕಾಲಿಗೆ ಪೆಟ್ಟು ಮಾಡಿಕೊಂಡಿದ್ದಾರೆ.
ಹೌದು, “ಮದಗಜ” ಚಿತ್ರದ ಚಿತ್ರೀಕರಣ ವೇಳೆ ಈ ಅವಘಡ ನಡೆದಿದೆ. ಕಂಠೀರವ ಸ್ಟುಡಿಯೋದಲ್ಲಿ “ಮದಗಜ” ಚಿತ್ರದ ಚಿತ್ರೀಕರಣ ಕಳೆದ ಎರಡು ದಿನಗಳಿಂದಲೂ ಜೋರಾಗಿಯೇ ನಡೆಯುತ್ತಿತ್ತು. ನಿರ್ದೇಶಕ ಮಹೇಶ್ ಕುಮಾರ್ ಅವರು, ಸಾಹಸಮಯ ದೃಶ್ಯಗಳನ್ನು ಚಿತ್ರೀಕರಿಸುತ್ತಿದ್ದರು. ಸಾಹಸ ನಿರ್ದೇಶಕ ಅರ್ಜುನ್ ಅವರು ಸಾಹಸ ನಿರ್ದೇಶನ ಮಾಡುತ್ತಿದ್ದರು. ರಾತ್ರಿ ವೇಳೆ ಚಿತ್ರೀಕರಣವಾಗಿದ್ದರಿಂದ ಮೊದಲ ದಿನದ ಚಿತ್ರೀಕರಣವಂತೂ ಜಾತ್ರೆಯೇ ಆಗಿತ್ತು. ಅಷ್ಟೊಂದು ಜೂನಿಯರ್ ಕಲಾವಿದರೊಂದಿಗೆ ಶ್ರೀಮುರಳಿ ಅವರು ಹೊಡೆದಾಡಿದ್ದರು.
ಎರಡನೇ ದಿನದ ಚಿತ್ರೀಕರಣ ಕೂಡ ಬಿರುಸಾಗಿಯೇ ನಡೆದಿತ್ತು. ಈ ವೇಳೆ ಅವರ ಕಾಲಿಗೆ ಪೆಟ್ಟು ಬಿದ್ದಿದೆ. ರಾತ್ರಿಯೇ ಈ ಘಟನೆ ನಡೆದಿದ್ದರಿಂದ ತಕ್ಷಣವೇ ಚಿಕಿತ್ಸೆ ಕೊಡಿಸಲಾಗಿದೆ. ಸದ್ಯ ಮನೆಯಲ್ಲಿ ವಿಶ್ರಾಂತಿ ಪಡೆಯುತ್ತಿರುವ ಶ್ರೀಮುರಳಿ ಅವರಿಗೆ ವೈದ್ಯರು ಸುಮಾರು ಹದಿನೈದು ದಿನಗಳ ಕಾಲ ವಿಶ್ರಾಂತಿಗೆ ಸೂಚಿಸಿದ್ದಾರೆ. ಸುಮಾರು 30 ಜನ ಖಳರೊಂದಿಗೆ ಫೈಟ್ ಮಾಡುವಾಗ ಈ ಘಟನೆ ಸಂಭವಿಸಿದೆ. ಫೈಟರ್ ಜಂಪ್ ಹೈಟ್ ಮಾಡಿದ್ದರಿಂದ ಮಂಡಿಯ ಕೆಳಗೆ ಜೋರಾಗಿ ಪೆಟ್ಟು ಬಿದ್ದಿದೆ.
ಈ ಘಟನೆ ನಂತರ ನಿರ್ದೇಶ ಮಹೇಶ್ ಕುಮಾರ್ ಅವರು, ತಕ್ಷಣವೇ ಶೂಟಿಂಗ್ ಪ್ಯಾಕಪ್ ಮಾಡಿದ್ದಾರೆ. ಅದೇನೆ ಇರಲಿ, ಶ್ರೀಮುರಳಿ ಅವರು, ತುಂಬಾನೇ ಶಿಸ್ತಿನ ನಟ, ಅಷ್ಟೇ ಶ್ರದ್ಧೆಯಿಂದಲೇ ಕೆಲಸ ಮಾಡುವವರು. ಆದಷ್ಟು ಬೇಗ ಚೇತರಿಸಿಕೊಂಡು ಪುನಃ “ಮದಗಜ” ಚಿತ್ರೀಕರಣದಲ್ಲಿ ಪಾಲ್ಗೊಳ್ಳುವಂತಾಗಲಿ ಎಂಬುದೇ “ಸಿನಿಲಹರಿ” ಆಶಯ.
ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರೀಗ “ಯುವರತ್ನ” ಚಿತ್ರದ ಯಶಸ್ಸಿನಲ್ಲಿದ್ದಾರೆ. ಆ ಸಂಭ್ರಮದಲ್ಲಿರುವಾಗಲೇ ಅವರೀಗ ಕೊರೊನಾ ಲಸಿಕೆ ಹಾಕಿಸಿಕೊಂಡಿದ್ದಾರೆ. ಹೌದು, ಸರ್ಕಾರ ೪೫ ವರ್ಷ ಮೇಲ್ಪಟ್ಟವರು ಕೊರೊನಾ ಲಸಿಕೆ ಹಾಕಿಸಿಕೊಳ್ಳಬಹುದು ಎಂದು ಹೇಳಿದ ಬೆನ್ನಲ್ಲೇ ಹಲವು ಗಣ್ಯರು ಕೂಡ ಲಸಿಕೆ ಹಾಕಿಸಿಕೊಳ್ಳುವ ಮೂಲಕ ಕೊರೊನಾ ವಿರುದ್ಧ ಎಲ್ಲರೂ ಜಾಗೃತರಾಗಿ ಹೋರಾಡಬೇಕು ಎಂದು ಮನವಿ ಮಾಡಿದ್ದರು. ಈಗಾಗಲೇ ಹಲವು ಸಿನಿಮಾ ನಿರ್ದೇಶಕರು, ನಿರ್ಮಾಪಕರು ಸಹ ಲಸಿಕೆ ಹಾಕಿಸಿಕೊಂಡು ಜಾಗೃತಿ ಮೂಡಿಸಿಕೊಳ್ಳುತ್ತಿದ್ದಾರೆ. ಈಗ ಪುನೀತ್ ರಾಜಕುಮಾರ್ ಅವರೂ ಕೂಡ ಸದಾಶಿವನಗರದ ಪಿಎಚ್‌ಸಿಯಲ್ಲಿ (ಸರ್ಕಾರಿ ಪ್ರಾಥಮಿಕ ಆರೋಗ್ಯ ಕೇಂದ್ರ) ಕೊರೊನೊ ಲಸಿಕೆ ಹಾಕಿಸಿಕೊಂಡಿದ್ದಾರೆ.
ಈ ಮೂಲಕ ೪೫ ವರ್ಷ ಮೇಲ್ಪಟ್ಟವರೆಲ್ಲರೂ ಕೊರೊನೊ ಲಸಿಕೆ ಹಾಕಿಸಿಕೊಂಡು ಜಾಗೃತರಾಗಿರಿ ಎಂದು ಪುನೀತ್ ಮನವಿ ಮಾಡಿದ್ದಾರೆ. ಪುನೀತ್ ಅಭಿನಯದ “ಯುವರತ್ನ” ಚಿತ್ರ ಸದ್ಯ ಹೌಸ್‌ಫುಲ್ ಪ್ರದರ್ಶನ ನಡೆಯುತ್ತಿದೆ. ಏಪ್ರಿಲ್ ೧ರಂದು ತೆರೆಕಂಡ ಸಿನಿಮಾಗೆ ಮರುದಿನವೇ ಶೇ.೫೦ರಷ್ಟು ಭರ್ತಿಗೆ ಸರ್ಕಾರ ಆದೇಶಿಸಿತ್ತು. ಇದನ್ನು ವಿರೋಧಿಸಿದ ಪುನೀತ್, ಶೇ.೧೦೦ರಷ್ಟು ಭರ್ತಿಗೆ ಮನವಿ ಮಾಡಿಕೊಂಡಿದ್ದರು. ಸಿಎಂ ಅವರನ್ನು ಭೇಟಿ ಮಾಡಿ ಸಿನಿಮಾ ಚೆನ್ನಾಗಿ ಪ್ರದರ್ಶನ ಕಾಣುತ್ತಿದೆ. ಪ್ರೇಕ್ಷಕರು ಕೂಡ ಮುಂಜಾಗ್ರತೆ ವಹಿಸಿಕೊಂಡೇ ಬರುತ್ತಿದ್ದಾರೆ.
ಚಿತ್ರಮಂದಿರಗಳಲ್ಲೂ ಕೂಡ ಎಚ್ಚರಿಕೆ ವಹಿಸಲಾಗಿದೆ. ಒಳ್ಳೆಯ ಸಿನಿಮಾ ನೋಡಲು ಬರುವ ಪ್ರೇಕ್ಷಕರಿಗೆ ಯಾವುದೇ ಸಮಸ್ಯೆ ಇಲ್ಲದಂತೆ ಚಿತ್ರಮಂದಿರಗಳಲ್ಲಿ ಕ್ರಮ ಕೈಗೊಳ್ಳಲಾಗಿದೆ. ದಯವಿಟ್ಟು ಅವಕಾಶ ಮಾಡಿ ಕೊಡಿ ಎಂದು ಮನವಿ ಮಾಡಿದ್ದರು. ಅವರ ಮನವಿಗೆ ಸ್ಪಂದಿಸಿದ ಸರ್ಕಾರ, ಪುನಃ ಶೇ.೧೦೦ರಷ್ಟು ಭರ್ತಿಗೆ ಅವಕಾಶ ಕಲ್ಪಿಸಿತ್ತು.
ನಾವ್ಯಾರು ಎಲ್ಲಿಂದ ಬಂದಿದೀವಿ… ನಾವ್ಯಾಕೆ ಸ್ವಾಮಿ ಹೀಂಗ್ ಇದೀವಿ…ಅರೆ, ಹೀಗಂತ ಹೇಳ್ತಿರೋದು ನಾವಲ್ಲ, ಬದಲಿಗೆ ಹೀಗೆ ಇಲ್ಲಿ ಹೇಳ್ತೀರೋದು ನಟ ಸತೀಶ್ ನೀನಾಸಂ.ಸಿನಿಮಾಗಳಲ್ಲಿ ಸ್ಟಾರ್‌ಗಳು ನಟಿಸೋದು ಮಾಮೂಲು. ನಟನೆಯೇ ಅವರ ವೃತ್ತಿ ಬಿಡಿ. ಅದರ ಜತೆಗೆ ಕನ್ನಡದ ಹಲವು ನಟರು ಹಾಗೂ ನಟಿಯರು ನಟನೆ, ನಿರ್ದೇಶನ ಹಾಗೂ ನಿರ್ಮಾಣದಂತೆಯೇ ಗಾಯಕರಾಗಿಯೂ ಸುದ್ದಿ ಮಾಡುತ್ತಲೇ ಬಂದಿದ್ದಾರೆ. ಸದ್ಯಕ್ಕೆ ಅಂತಹದೊಂದು ಪ್ರಯತ್ನದಲ್ಲೀಗ ʼಡಿಎನ್ ಎʼ ಹೆಸರಿನ ಚಿತ್ರದ ಟೈಟಲ್ ಸಾಂಗ್ ಗೆ ನಟ ಸತೀಶ್ ನೀನಾಸಂ ಧ್ವನಿ ನೀಡಿದ್ದು, ಅದೀಗ ಸಿಕ್ಕಾಪಟ್ಟೆ ಸದ್ದು ಮಾಡುತ್ತಿರುವುದು ವಿಶೇಷ.
ಈ ಸಾಂಗ್ ತುಂಬಾ ಸ್ಪೆಷಲ್. ಮನುಷ್ಯನ ಮೂಲಗಳನ್ನು ಹುಡುಕಿ ಹೊರಡುವ ಈ ಹಾಡು ಕೇಳುವುದಕ್ಕೂ ಇಂಪಾಗಿದೆ. ಹಾಗೆಯೇ ವಿಶೇಷವಾದ ಸಾಹಿತ್ಯದ ಮೂಲಕವೂ ಗಮನ ಸೆಳೆಯುತ್ತದೆ. ಯೋಗರಾಜ್ ಭಟ್ ಸಾಹಿತ್ಯ ಅಂದ್ರೆ ಹೆಚ್ಚೇನು ಹೇಳಬೇಕಿಲ್ಲ. ಅದಕ್ಕಿಂತ ಮುಖ್ಯವಾಗಿ ಇಲ್ಲಿ ಸತೀಶ್ ನೀನಾಸಂಹಾಗೂ ನಿರ್ದೇಶಕ ಯೋಗರಾಜ್ ಭಟ್ಟರ ಜುಗಲ್ ಬಂಧಿಯೇ ಫುಲ್ ಡಿಫೆರೆಂಟ್. ಡಿಎನ್ ಎ ಎನ್ನುವ ಚಿತ್ರದ ಶೀರ್ಷಿಕೆಯನ್ನು ಬಗೆ ಬಗೆಯಲ್ಲಿ ವಿವರಿಸುವ ಸಾಲುಗಳು ಇವು. ಡಿಎನ್ ಎ ಅನ್ನೋದು ಏನು ಅನ್ನೋದು ಈ ಹಾಡಿನ ತಿರುಳು. ಸಿನಿಮಾದ ಕಥಾ ಹಂದರವೂ ಅದೇ ಆಗಿದೆ.ಕಮರ್ಷಿಯಲ್ ಮಾದರಿ ಅಂತ ಚಿತ್ರರಂಗ ಸಂಬಂದವೇ ಇಲ್ಲದ ಸಂಗತಿಗಳನ್ನು ತೆರೆಗೆ ತರಲು ಹೊರಟರೆ, ನಿರ್ದೇಶಕ ಪ್ರಕಾಶ್ ರಾಜ್ ಮೇಹು ಅವರು ಮನುಷ್ಯ ಸಂಬಂಧಗಳ ಎಳೆಗಳನ್ನು ಹಿಡಿದು ಹೊರಟಿರುವುದೇ ಇಲ್ಲಿ ಹೈಲೈಟ್ಸ್.
ಬಂಜ ಅನ್ನೋದು ದೊಡ್ಡದು ಕನಾ… ಅನ್ನೋದು ಸಾಹಿತಿ ದೇವನೂರು ಮಹಾದೇವ ಅವರ ಮಾತು. ಅದನ್ನು ತಿರುಳಾಗಿ ಇಟ್ಟುಕೊಂಡು ನಿರ್ಮಾಣವಾದ ಸಿನಿಮಾ ಇದು. ಈ ಹಾಡು ಕೂಡ ಅದನ್ನೇ ಧ್ವನಿಸುತ್ತಾ ಸಾಗುತ್ತದೆ. ಚೇತನ್ ಕೃಷ್ಣ ಸಂಗೀತ ಸಂಯೋಜನೆ ಮಾಡಿದ್ದಾರೆ. ಈ ಹಾಡಿಗೆ ಚಿತ್ರತಂಡವು ನಟ ಸತೀಶ್ ನೀನಾಸಂ ಅವರನ್ನೇ ಆಯ್ಕೆ ಮಾಡಿಕೊಂಡಿದ್ದು ಕೂಡ ಸೊಗಸಾಗಿದೆ. ಪಂಚರಂಗಿ ಆಡಿಯೋ ಯೂಟೂಬ್ ಚಾನೆಲ್ ಮೂಲಕ ಸೋಮವಾರವಷ್ಟೇ ಈ ಹಾಡು ಅಧಿಕೃತವಾಗಿ ಹೊರ ಬಂದಿದೆ. ಹೆಸರಾಂತ ಸಂಗೀತ ನಿರ್ದೇಶಕ ವಿ. ಮನೋಹರ್ ಈ ಹಾಡು ಅನಾವರಣ ಮಾಡಿ ಶುಭ ಹಾರೈಸಿದರು. ಈಗಾಗಲೇ ನಿರ್ದೇಶಕರಾದ ನಾಗಾಭರಣ, ಜಗ್ಗೇಶ್, ದುನಿಯಾ ಸೂರಿ, ಶಶಾಂಕ್, ಜಯತೀರ್ಥ, ಸಂತೋಷ್ ಆನಂದ್ ರಾಮ್, ನಿರ್ಮಾಪಕ ಹಾಗೂ ನಟ ರಾಘವೇಂದ್ರ ರಾಜ್ ಕುಮಾರ್, ನಟ ಸೃಜನ್ ಲೋಕೇಶ್ ಸೇರಿದಂತೆ ದೊಡ್ಡ ತಂಡವೇ ಈ ಹಾಡು ಮೆಚ್ಚಿಕೊಂಡು ಮಾತನಾಡಿದೆ.ಇದೀಗ ಇದು ಸೋಷಲ್ ಮೀಡಿಯಾದಲ್ಲಿ ಭರ್ಜರಿಯಾಗಿ ಸದ್ದು ಮಾಡುತ್ತಿದೆ.
ಮನುಷ್ಯ ಸಂಬಂಧಗಳ ಎಳೆಯ ಕಥಾ ಹಂದರ ಹೊಂದಿರುವ ʼಡಿಎನ್ ಎʼಚಿತ್ರಕ್ಕೆ ಪ್ರಕಾಶ್ ರಾಜ್ ಮೇಹು ನಿರ್ದೇಶಕರು. ಇದು ಅವರ ಚೊಚ್ಚಲ ಚಿತ್ರ. ಹಲವಾರು ವರ್ಷಗಳ ಕಾಲದ ಸಿನಿಮಾ ಒಡನಾಟದ ಮೂಲಕ ತಾವೇ ಒಂದೊಳ್ಳೆಯ ಕಥೆ ಮಾಡಿಕೊಂಡು ಈ ಸಿನಿಮಾ ಮಾಡಿದ್ದಾರೆ. ಎಸ್ತರ್ ನರೋನ್ಹಾ, ಅಚ್ಯುತ್ ಕುಮಾರ್, ರೋಜರ್ ನಾರಾಯಣ್, ನಟಿ ಯಮುನಾ ಸೇರಿದಂತೆ ದೊಡ್ಡ ತಾರಾಬಳಗವೇ ಚಿತ್ರದಲ್ಲಿದೆ. ರವಿಕುಮಾರ ಸಾನಾ ಛಾಯಾಗ್ರಹಣ, ಶಿವರಾಜ್ ಮೇಹು ಸಂಕಲನ ಚಿತ್ರಕ್ಕಿದೆ. ಯೋಗರಾಜ್ ಭಟ್ ಹಾಗೂ ಡಾ. ಕೆ. ವೈ. ನಾರಾಯಣ ಸ್ವಾಮಿ ಸಾಹಿತ್ಯ ಚಿತ್ರಕ್ಕಿದೆ. ಎಲ್ಲಾ ಅಂದುಕೊಂಡಂತಾಗಿದ್ದರೆ ಈ ಚಿತ್ರ ಇದೇ ತಿಂಗಳು 20 ರಂದು ತೆರೆಗೆ ಬರಬೇಕಿತ್ತು. ಕೊರೋನಾ ಕಾರಣಕ್ಕೆ ರಿಲೀಸ್ ಡೇಟ್ ಮುಂದಕ್ಕೆ ಹೋಗಿದೆ. ಅಲ್ಲಿವರೆಗೂ ಚಿತ್ರದ ಪ್ರಮೋಷನ್ ಗೆ ಚಿತ್ರ ತಂಡ ಪ್ಲಾನ್ ಹಾಕಿಕೊಂಡಿದೆ. ಸದ್ಯಕ್ಕೆ ಪ್ರಮೋಷನ್ ಸಾಂಗ್ ಮೂಲಕ ಸದ್ದು ಮಾಡಿದೆ.
ಕನ್ನಡ ಚಿತ್ರರಂಗದ ಹಿರಿಯ ನಟಿ ಪ್ರತಿಮಾ ದೇವಿ (88) ನಿಧನರಾಗಿದ್ದಾರೆ. ವಯೋಸಹಜ ಖಾಯಿಲೆಯಿಂದ ಬಳಲುತ್ತಿದ್ದ ಅವರು, ಇಹಲೋಕ ತ್ಯಜಿಸಿದ್ದಾರೆ. ಮೈಸೂರಿನ ಸರಸ್ವತಿಪುರಂ ನಿವಾಸದಲ್ಲಿ ಮೃತರ ಅಂತಿಮ ದರ್ಶನಕ್ಕೆ ವ್ಯವಸ್ಥೆ ಮಾಡಲಾಗಿದ್ದು, ನಂತರ ವಿದ್ಯುತ್ ಚಿತಾಗಾರದಲ್ಲಿ ಅಂತ್ಯಕ್ರಿಯೆ ನೆರವೇರಲಿದೆ ಎಂದು ಮೂಲಗಳು ತಿಳಿಸಿವೆ. ಕನ್ನಡದ ಹಿರಿಯ ನಿರ್ದೇಶಕ ಎಸ್.ವಿ. ರಾಜೇಂದ್ರ ಸಿಂಗ್ ಬಾಬು, ನಟಿ ಹಾಗೂ ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಅವರ ತಾಯಿಯಾಗಿರುವ ಪ್ರತಿಮಾ ದೇವಿ ಅವರು, 1947ರಲ್ಲಿ “ಕೃಷ್ಣಲೀಲಾ” ಚಿತ್ರದಲ್ಲಿ ನಟಿಸುವ ಮೂಲಕ ವೃತ್ತಿ ಜೀವನ ಶುರುಮಾಡಿದರು. 1951ರಲ್ಲಿ ತೆರೆಕಂಡ ‘ಜಗನ್ಮೋಹಿನಿ’ ಚಿತ್ರದಲ್ಲಿ ನಾಯಕಿಯಾಗಿ ನಟಿಸಿ ಜನಪ್ರಿಯಗೊಂಡರು. ಈ ಚಿತ್ರ ಕನ್ನಡದಲ್ಲಿ ಮೊದಲ ಶತದಿನ ಪೂರೈಸಿದ ಸಿನಿಮಾ ಎಂಬ ದಾಖಲೆ ಪಡೆದಿದೆ. ಡಾ. ರಾಜ್ ಕುಮಾರ್, ಡಾ. ವಿಷ್ಣುವರ್ಧನ್ ಅವರ ಸಿನಿಮಾಗಳಲ್ಲಿ ನಟಿಸಿದ್ದರು.
“ಶ್ರೀ ಶ್ರೀನಿವಾಸ ಕಲ್ಯಾಣ”, “ಚಂಚಲ ಕುಮಾರಿ”, “ಮುಟ್ಟಿದ್ದೆಲ್ಲಾ ಚಿನ್ನ”, “ಶಿವಶರಣೇ ನಂಬಿಯಕ್ಕ”, “ಮಂಗಳ ಸೂತ್ರ”, “ಧರ್ಮಸ್ಥಳ ಮಹಾತ್ಮೆ”, “ಪಾತಳಾ ಮೋಹಿನಿ”, “ನಾಗರಹಾವು”, “ರಾಮ ಶಾಮಾ ಭಾಮಾ” ಸೇರಿದಂತೆ ಸುಮಾರು 60 ಚಿತ್ರಗಳಲ್ಲಿ ಪ್ರತಿಮಾ ದೇವಿ ನಟಿಸಿದ್ದಾರೆ. ಮಹಾತ್ಮೆ ಪಿಕ್ಚರ್ಸ್ ಸಂಸ್ಥೆಯ ಸ್ಥಾಪಕರಾದ ಶಂಕರ್ ಸಿಂಗ್ ಅವರನ್ನು ವಿವಾಹವಾಗಿದ್ದ ಪ್ರತಿಮಾ ದೇವಿ ಅವರಿಗೆ ಎಸ್.ವಿ. ರಾಜೇಂದ್ರ ಸಿಂಗ್ ಬಾಬು, ಸಂಗ್ರಾಮ್ ಸಿಂಗ್, ಜಯರಾಜ್ ಸಿಂಗ್, ವಿಜಯಲಕ್ಷ್ಮಿ ಸಿಂಗ್ ಮಕ್ಕಳು. ಸಂತಾಪ: ಮೃತರ ಸುದ್ದಿ ತಿಳಿದು ನಟಿ, ಸಂಸದೆ, ಸುಮಲತಾ ಅಂಬರೀಶ್, ಪುನೀತ್ ರಾಜಕುಮಾರ್ ಸೇರಿದಂತೆ ಕನ್ನಡ ಚಿತ್ರರಂಗದ ಅನೇಕ ನಟ, ನಟಿಯರು, ನಿರ್ಮಾಪಕ, ನಿರ್ದೇಶಕರು ಸಂತಾಪ ಸೂಚಿಸಿದ್ದಾರೆ. ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷರಾದ ಜೈರಾಜ್ ಅವರು ಕೂಡ “ಕನ್ನಡ ಚಿತ್ರರಂಗಕ್ಕೆ ಕಲಾವಿದೆಯಾಗಿ ತಮ್ಮದೇ ಆದ ಸೇವೆ ಸಲ್ಲಿಸಿದ್ದ, ಖ್ಯಾತ ನಟಿ ಪ್ರತಿಮಾದೇವಿ ಅವರ ಪತಿ ಶಂಕರ್ ಸಿಂಗ್ ಅವರ ಜನ್ಮ ಶತಮಾನೋತ್ಸವ ಆಚರಣೆಯ ವರ್ಷವಿದು. ಇದೇ ಸಮಯದಲ್ಲಿ ಅವರು ನಿಧನರಾಗಿದ್ದು, ದುಖದ ಸಂಗತಿ. ಕನ್ನಡ ಚಿತ್ರರಂಗಕ್ಕೆ ಇವರ ಕುಟುಂಬ ನೀಡಿರುವ ಕೊಡುಗೆ ಅಪಾರ. ಕನ್ನಡ ಚಿತ್ರರಂಗದ ಖ್ಯಾತ ನಿರ್ದೇಶಕ ರಾಜೇಂದ್ರಸಿಂಗ್ ಬಾಬು, ನಟಿ, ನಿರ್ದೇಶಕಿ ವಿಜಯಲಕ್ಷ್ಮಿ ಸಿಂಗ್ ಸೇರಿದಂತೆ ನಾಲ್ಕು ಮಕ್ಕಳನ್ನು ಪ್ರತಿಮಾ ದೇವಿ ಅವರು ಅಗಲಿದ್ದಾರೆ. ಅವರ ನಿಧನದ ದುಃಖವನ್ನು ತಡೆದುಕೊಳ್ಳುವ ಶಕ್ತಿಯನ್ನು ಅವರ ಕುಟುಂಬಕ್ಕೆ ದೇವರು ಕರುಣಿಸಲಿ ಎಂದು ಹೇಳಿದ್ದಾರೆ.
ಕನ್ನಡದ ಬಹಳಷ್ಟು ನಟಿಯರು ಅವಕಾಶಗಳನ್ನು ಅರಸಿ ಪರಭಾಷೆಗೆ ಕಾಲಿಟಿರುವುದೇನು ಹೊಸದಲ್ಲ. ಹಾಗೆಯೇ ಅವಕಾಶಗಳನ್ನು ಹುಡುಕುತ್ತಾ ಟಾಲಿವುಡ್, ಕಾಲಿವುಡ್‌ಗೂ ಕಾಲಿಟ್ಟಿದ್ದ ಅಪ್ಪಟ ಮಲೆನಾಡಿನ ಹುಡುಗಿ ಮೇಘಾಶ್ರೀ ಈಗ ಅವೆರೆಡು ಭಾಷೆಯ ಕಿರುತೆರೆಯಲ್ಲೂ ಮಿಂಚಲು ರೆಡಿಯಾಗಿದ್ದಾರೆ. ಅದಕ್ಕಂತಲೇ ಬಿಲ್ಲು, ಬಾಣ ಹಿಡಿದು ಭರ್ಜರಿಯಾಗಿ ನಿಂತಿದ್ದಾರೆ. ಅವರ ಹಾಗೊಂದು ಲುಕ್ ಈಗ ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಿದೆ. ಇದು ʼ ಜ್ಯೋತಿ ʼ ಹೆಸರಿನ ಬಹುಭಾಷೆ ಸೀರಿಯಲ್ ಸಮಾಚಾರ. ರಾಜ್ ಕಪೂರ್ ಇದರ ನಿರ್ದೇಶಕ. ಹೆಸರಾಂತ ನಟಿ ಖುಷ್ಬೂ ಇದರ ನಿರ್ಮಾಪಕರಂತೆ.
ತೆಲುಗು, ತಮಿಳು ಹಾಗೂ ಕನ್ನಡ ಸೇರಿದಂತೆ ಇದು ಐದು ಭಾಷೆಗಳಲ್ಲಿ ಬರುತ್ತಿದೆ ಅನ್ನೋದು ಸುದ್ದಿಯಿತ್ತು. ಆದರೆ ಅದು ಮುಂದೇನಾಯಿತೋ ಗೊತ್ತಿಲ್ಲ, ಸದ್ಯಕ್ಕೀಗ ಇದು ತೆಲುಗಿನಲ್ಲಿ ಮೊದಲು ನಿರ್ಮಾಣಗೊಂಡು ತೆರೆಗೆ ಬರುತ್ತಿದೆ. ಅಲ್ಲಿನ ಜೆಮಿನಿ ವಾಹಿನಿಯಲ್ಲಿ ಪ್ರಸಾರಕ್ಕೆ ಸಿದ್ಧತೆ ನಡೆಸಿದೆ. ಏಪ್ರಿಲ್ ೧೨ ರಿಂದ ಪ್ರಸಾರವಾಗಲಿದೆ ಅಂತ ಸುದ್ದಿಯೂ ಇದೆ. ʼಜ್ಯೋತಿʼ ಸೂಪರ್ ನ್ಯಾಚುರಲ್ ಕಥಾ ಹಂದರದ ಧಾರಾವಾಹಿ. ಇದರ ಪ್ರಧಾನ ಪಾತ್ರಧಾರಿ ಕನ್ನಡದ ನಟಿ ಮೇಘಾಶ್ರೀ. ಈಗಾಗಲೇ ಕನ್ನಡದಲ್ಲಿ ಹಿರಿತೆರೆ ಹಾಗೂ ಕಿರುತೆರೆ ಎರಡರಲ್ಲೂ ಸಾಕಷ್ಟು ಹೆಸರು ಮಾಡಿದ ನಟಿ. ಹಾಗೆಯೇ ತೆಲುಗಿನಲ್ಲೂ ಈಗಾಗಲೇ ಮೂರು ಸಿನಿಮಾಗಳಿಗೆ ಬಣ್ಣ ಹಚ್ಚಿದ್ದಾರೆ. ಈಗಷ್ಟೇ ತಮಿಳಿನಲ್ಲೂ ಒಂದು ಚಿತ್ರದಲ್ಲಿ ಅಭಿನಯಿಸುವ ಅವಕಾಶ ಅವರಿಗೀಗ ಸಿಕ್ಕಿದೆಯಂತೆ. ಸದ್ಯ ಅದರ ಚಿತ್ರೀಕರಣದಲ್ಲೂ ಬ್ಯುಸಿ ಇದ್ದಾರಂತೆ. ಈ ನಡುವೆಯೇ ಈಗ ತೆಲುಗು ಹಾಗೂ ತಮಿಳು ಕಿರುತೆರೆಯಲ್ಲೂ ಕಾಣಿಸಿಕೊಳ್ಳಲು ರೆಡಿ ಆಗಿದ್ದಾರೆ.
ಸದ್ಯ ಅದರ ತೆಲುಗು ವರ್ಷನ್ ಪ್ರೋಮೋ ಹೊರ ಬಂದಿದೆ. ಅಲ್ಲಿ ನಟಿ ಮೇಘಾ ಶ್ರೀ ಅವರ ಲುಕ್ ಭರ್ಜರಿ ಆಗಿದೆ. ಒನಕೆ ಒಬವ್ವ ನಂತೆ ಅಲ್ಲಿ ಉಡುಗೆ ತೊಟ್ಟಿರುವ ಮೇಘಾಶ್ರೀ, ಜಿಂಕೆ ಭೇಟೆಗೆ ಬಿಲ್ಲು ಹೂಡುತ್ತಾರೆ. ಆದರೆ ಅದು ಬಂಗಾರದ ಮಾಯಾ ಜಿಂಕೆ ಅನ್ನೋದು ಗೊತ್ತಾಗಿ ಶಾಕ್ ಆಗುತ್ತಾರೆ. ಮುಂದೇನು ಅನ್ನೋದು ಧಾರಾವಾಹಿಯ ಕುತೂಹಲ. ಫಸ್ಟ್ ಟೈಮ್ ಇಂತಹದೊಂದು ವಿಭಿನ್ನ ಹಾಗೂ ವಿಶಿಷ್ಟ ಕಥೆಯ ಧಾರಾವಾಹಿಯ ಮೂಲಕ ತೆಲುಗು ಕಿರುತೆರೆ ವೀಕ್ಷಕರ ಮನೆ -ಮನ ಮುಟ್ಟಲು ಹೊರಟಿರುವ ನಟಿ ಮೇಘಾಶ್ರೀ, ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ.” ಕತ್ತಿ, ವರಸೆ ಬಗ್ಗೆ ತಿಳಿದುಕೊಂಡು, ತರಬೇತಿ ಪಡೆದುಕೊಂಡಿದ್ದೇನೆ, ಬಿಲ್ಲುಗಾರಿಕೆಯ ಬಗ್ಗೆ ನನಗೆ ಒಂದಿಷ್ಟು ಗೊತ್ತಿರಲಿಲ್ಲ. ನಾನು ಶ್ರಮ ಪಟ್ಟು ತರಬೇತಿಗಳನ್ನು ಮಾಡಿದ್ದೇನೆʼ ಎನ್ನುತ್ತಾರೆ ಮೇಘಾಶ್ರೀ.
ಪ್ರಕಾಶ್‌ರಾಜ್ ಮೇಹು ನಿರ್ದೇಶನದ ʼಡಿ ಎನ್ ಎʼ ಚಿತ್ರದ ರಿಲೀಸ್ ಗೆ ರೆಡಿ ಆಗಿದೆ. ಸದ್ಯಕ್ಕೆ ಅದರ ರಿಲೀಸ್ ಡೇಟ್ ಇನ್ನು ಯಾವಾಗ ಎನ್ನುವುದು ಫಿಕ್ಸ್ ಆಗಿಲ್ಲ. ಆದರೆ ಎಲ್ಲಾ ಹಂತದಲ್ಲೂ ರಿಲೀಸ್‌ಗೆ ರೆಡಿಯಾಗಿರುವ ಚಿತ್ರ ತಂಡ, ಈಗ ಚಿತ್ರದ ಪ್ರಚಾರಕ್ಕೆ ನಾಂದಿ ಹಾಡಿದೆ. ಅದರ ಮೊದಲ ಹಂತದಲ್ಲೀಗ ಚಿತ್ರ ತಂಡ ಸೋಮವಾರ, ಪ್ರಮೋಷನಲ್ ಸಾಂಗ್ ಲಾಂಚ್ ಮಾಡಿತು.
ಮಾತೃಶ್ರೀ ಎಂಟರ್ ಪ್ರೈಸಸ್ ಬ್ಯಾನರ್ನಲ್ಲಿ ನಿರ್ಮಾಣವಾಗಿರುವ ಈ ಚಿತ್ರಕ್ಕೆ ನಿರ್ಮಾಪಕ ಎಂ. ಮೈಲಾರಿ ಬಂಡವಾಳ ಹಾಕಿದ್ದು, ಅಚ್ಯುತ್ ಕುಮಾರ್, ರೋಜರ್ ನಾರಾಯಣ್, ಎಸ್ಟರ್ ನರೋನ್ಹಾ, ಯುಮನಾ, ಮಾಸ್ಟರ್ ಆನಂದ್ ಪುತ್ರ ಮಾಸ್ಟರ್ ಕೃಷ್ಣ ಚೈತನ್ಯ ಪ್ರಮುಖ ಪಾತ್ರಗಳಲ್ಲಿ ಕಾಣಿಸಿಕೊಂಡಿದ್ದಾರೆ. ಒಂದ್ರೀತಿ ಇದು ಮಲ್ಟಿಸ್ಟಾರ್ ಸಿನಿಮಾ. ಅನೇಕ ಅನುಭವಿ ಕಲಾವಿದರ ಸಮಾಗಮ ಇಲ್ಲಿದೆ. ಹಾಗೆಯೇ ಇದು ಬಿಗ್ ಬಜೆಟ್ ಸಿನಿಮಾವೂ ಹೌದು. ಕಥೆಗೆ ತಕ್ಕಂತೆ ನಿರ್ಮಾಪಕರು ಅದ್ದೂರಿ ವೆಚ್ಚದಲ್ಲಿಯೇ ಸಿನಿಮಾ ನಿರ್ಮಾಣ ಮಾಡಿದ್ದಾರೆ. ಸದ್ಯಕ್ಕೆ ಅದರ ಛಾಯೆ ಚಿತ್ರದ ಪ್ರಮೋಷನಲ್ ಹಾಡಿನಲ್ಲಿ ಅನಾವರಣ ಗೊಂಡಿದೆ.ತಾರಾಗಣ, ನಿರ್ಮಾಣದ ವೈಶಿಷ್ಟ್ಯತೆಗಳ ಜತೆಗೆ ಈ ಸಿನಿಮಾದ ಹೈಲೈಟ್ಸ್ ಅಂದ್ರೆ ಕಥೆ. ಇದೊಂದು ವಿಶೇಷವಾದ ಕಥಾ ಹಂದರದ ಚಿತ್ರ. ಅದರ ಮೇಲೆಯೇ ನಿರ್ದೇಶಕ ಪ್ರಕಾಶ್ ಮೇಹು ಅವರಿಗೆ ಅತೀವ ವಿಶ್ವಾಸವಿದೆ. “ಇದು ನನ್ನ ಮೊದಲ ಸಿನಿಮಾ. ಸಾಕಷ್ಟು ಸಿನಿಮಾಗಳನ್ನು ನೋಡಿಕೊಂಡು ಬಂದಿದ್ದರಿಂದ ನನ್ನ ಸಿನಿಮಾ ಒಂದೇ ವರ್ಗಕ್ಕಷ್ಟೇ ಸೀಮಿತ ಆಗಬಾರದು ಎಂಬ ನಿಟ್ಟಿನಲ್ಲಿ ಆರ್ಟ್ ಅಥವಾ ಕಮರ್ಷಿಯಲ್ ಎನ್ನುವ ಯಾವುದೇ ಫಾರ್ಮೆಟ್ ಗೆ ಸಿಲುಕಿಸದೆ ಅವುಗಳ ಬ್ರಿಡ್ಜ್ ಮೂವೀ ಆಗಿ ತೆರೆಗೆ ತಂದಿದ್ದೇನೆ ಎನ್ನುವುದು ಅವರ ಮೊದಲ ಮಾತು.
ಇನ್ನು ಚಿತ್ರದ ಕಥಾ ಹಂದರದ ಕುರಿತು ಮಾತಿಗಿಳಿದ ಅವರು, ಶೀರ್ಷಿಕೆಯೇ ಹೇಳುವಂತೆ ಇದೊಂದು ಗುರುತಿನ ಕಣದ ಸಿನಿಮಾ. ಸಂಪೂರ್ಣ ಸಂದೇಶದೊಂದಿಗೆ ತಯಾರಾಗಿದೆ ಎಂದರು. ಬಹುಭಾಷೆ ನಟಿ ಎಸ್ಟರ್ ನರೋನ್ಹಾ ಚಿತ್ರದಲ್ಲಿನ ತಮ್ಮ ಪಾತ್ರದ ಕುರಿತು ಮಾತನಾಡಿದರು. “ನಾನೂ ಕನ್ನಡದಲ್ಲಿ ಸಿನಿಮಾ ಬೇಕು ಅಂತ ತುಂಬಾ ದಿನಗಳಿಂದ ಕಾಯುತ್ತಿದ್ದೆ. ಅದೀಗ ಈ ಚಿತ್ರದ ಮೂಲಕ ಈಡೇರಿದೆ. ಒಂದು ಗಟ್ಟಿ ಕಥೆ ಇಲ್ಲಿದೆ. ಸಂಬಂಧಗಳ ಬಗ್ಗೆ ಸಿನಿಮಾ ಮಾತನಾಡಲಿದೆ. ನಮ್ಮ ನಡುವೆಯೇ ನಡೆಯುವ ಕಥೆ ಆಗಿದೆ ಅಂದರು.
” ನಾನು ಮತ್ತು ನಿರ್ದೇಶಕರು ಒಂದೇ ಶಾಲೆಯಲ್ಲಿ ಓದಿದವರು. ಆದರೆ ಒಟ್ಟಿಗೆ ಕೆಲಸ ಮಾಡಿರಲಿಲ್ಲ. ಈ ಸಿನಿಮಾ ಮೂಲಕ ಅದು ಸಾಕಾರವಾಗಿದೆ. ಇದು ಸಂಬಂಧಗಳ ಕುರಿತು ಮಾಡಿದ ಸಿನಿಮಾ. ತಂಡಕ್ಕೆ ಯಶಸ್ಸು ಸಿಗಲಿ ಎಂದು ಹಾರೈಸಿದರು ನಟ ಅಚ್ಯುತ್ ಕುಮಾರ್. ಹಾಗೆಯೇ ಈ ಚಿತ್ರದ ಪ್ರಮೋಷನಲ್ ಸಾಂಗ್ ಲಾಂಚ್ ಮಾಡಿ ಮಾತನಾಡಿದ ಹಿರಿಯ ಸಂಗೀತ ನಿರ್ದೇಶಕ ವಿ ಮನೋಹರ್, ಸಿನಿಮಾ ಮಾಡುವುದು ಈಗಿನ ಕಾಲದಲ್ಲಿ ಕಷ್ಟದ ಕೆಲಸ. ಅದನ್ನು ಡಿಎನ್ಎ ತಂಡ ಮಾಡಿದೆ. ಇಡೀ ತಂಡಕ್ಕೆ ಶುಭವಾಗಲಿ ಎಂದರು.
ಚೇತನ್ ಕೃಷ್ಣ ಈ ಚಿತ್ರಕ್ಕೆ ಸಂಗೀತ ನೀಡಿದ್ದು, ನಾಲ್ಕು ಹಾಡು, ಎರಡು ಬಿಟ್ ಚಿತ್ರದಲ್ಲಿವೆ. ರಾಜೇಶ್ ಕೃಷ್ಙ, ಅನುರಾಧಾ ಭಟ್, ಪುಟಾಣಿ ಕೃತಿ ಹಾಡಿದ್ದಾರೆ. ಮತ್ತೊಂದು ಹಾಡನ್ನು ಸಂಗೀತ ನಿರ್ದೇಶಕ ಚೇತನ್ ಕೃಷ್ಣ ಅವರೇ ಹಾಡಿದ್ದಾರಂತೆ. ನಿರ್ಮಾಪಕ ಎಂ ಮೈಲಾರಿ ಮಾತನಾಡಿ, ಸಂಪೂರ್ಣ ಕುಟುಂಬ ಕುಳಿತು ನೋಡುವ ಸಿನಿಮಾ ಇದು. ಈಗಾಗಲೇ ಸೆನ್ಸಾರ್ ಮಂಡಳಿಯೂ ಚಿತ್ರವನ್ನು ಮೆಚ್ಚಿ “ಯುʼ ಸರ್ಟಿಫಿಕೇಟ್ ನೀಡಿದೆ. ಇದೇ ತಿಂಗಳ 16ಕ್ಕೆ ಅಥವಾ 30ಕ್ಕೆ ಸಿನಿಮಾ ತೆರೆಗೆ ಬರಲು ಸಿದ್ಧತೆ ನಡೆಸಿದ್ದೇವು. ಕೊವೀಡ್ ಕಾರಣಕ್ಕೆ ಮುಂದಕ್ಕೆ ಹೋಗಲು ಚಿಂತಿಸಿದ್ದೇವೆ ಅಂದ್ರು. ಚಿತ್ರಕ್ಕೆ ಶಿವರಾಜ್ ಮೇಹು ಸಂಕಲನ, ರವಿಕುಮಾರ್ ಛಾಯಾಗ್ರಹಣ, ಯೋಹರಾಜ್ ಭಟ್ ಹಾಗೂ ಜಯಂತ್ ಕಾಯ್ಕಿಣಿ ಸಾಹಿತ್ಯ ಬರೆದಿದ್ದಾರೆ.