Categories
ಸಿನಿ ಸುದ್ದಿ

ಮೆಡಿಕಲ್ ಮಾಫಿಯಾದ ಕರಾಳತೆ: ಅಪ್ಪ ಮಗಳ ಭಾವುಕತೆ

ವಿಜಯ್ ಭರಮಸಾಗರ

ರೇಟಿಂಗ್: 3/5

ಚಿತ್ರ ವಿಮರ್ಶೆ
ಚಿತ್ರ: ಸಿ
ನಿರ್ದೇಶನ: ಕಿರಣ್ ಸುಬ್ರಮಣಿ
ನಿರ್ಮಾಣ: ಎಜಿಎಸ್ ಪ್ರೊಡಕ್ಷನ್
ತಾರಾಗಣ: ಕಿರಣ್, ಪ್ರಶಾಂತ್ ನಟನಾ, ಸಾನ್ವಿಕಾ, ಶ್ರೀಧರ್ ರಾಮ್, ಮಧುಮಿತ ಇತರರು.

“ಅಪ್ಪ ನನಗೆ ಕಣ್ ಬರುತ್ತಾ? ನನ್ನನ್ನು ಮೈಸೂರಿಗೆ ರ‍್ಕೊಂಡ್ ಹೋಗ್ತೀಯಾ? ಯಾವಾಗ ಹೋಗೋದು…?
ಹೀಗೆ ಆ ಬಾಲಕಿ ತನ್ನ ಅಪ್ಪನನ್ನು ಪ್ರಶ್ನಿಸುವಾಗ ಆ ಕ್ಷಣ ಭಾವುಕತೆಗೆ ದೂಡುತ್ತೆ. ಆಕೆ ಈ ಮಾತು ಹೇಳುವ ಹೊತ್ತಿಗೆ, ಘಟನೆಯೊಂದರಲ್ಲಿ ಏನೂ ಅರಿಯದ ಆ ಮುಗ್ಧ ಹುಡುಗಿ ತನ್ನ ಎರಡೂ ಕಣ್ಣುಗಳನ್ನು ಕಳೆದುಕೊಂಡಿರುತ್ತಾಳೆ. ಇಷ್ಟಕ್ಕೂ ಆ ಹುಡುಗಿ ತಾನು ಇಷ್ಟಪಟ್ಟಂತೆ ಮೈಸೂರು ಅರಮನೆ ನೋಡ್ತಾಳಾ? ತನ್ನ ತಂದೆ ಆ ಮಗಳಿಗೆ ಪುನಃ ಕಣ್ಣು ಬರಲು ಶ್ರಮಿಸುತ್ತಾನಾ? ಮುಂದೇನಾಗುತ್ತೆ ಅನ್ನುವ ಕುತೂಹಲದೊಂದಿಗೆ ಸಿ ಸಿನಿಮಾ ಸಾಗುತ್ತೆ.
ಇದೊಂದು ಅಪ್ಪ ಮಗಳ ಬಾಂಧವ್ಯದ ಕಥೆ. ಅಷ್ಟೇ ಅಲ್ಲ, ಅಲ್ಲೊಂದು ಭಾವುಕ ಪಯಣವೂ ಇದೆ. ಕಥೆಯ ಬಗ್ಗೆ ಹೇಳುವುದಾದರೆ, ಅಪಘಾತವೊಂಧರಲ್ಲಿ ತನ್ನ ಎರಡೂ ಕಣ್ಣುಗಳನ್ನು ಕಳೆದುಕೊಳ್ಳುವ ಬಾಲಕಿ, ಬದುಕೇ ಮುಗಿದು ಹೋಯ್ತು ಅಂದುಕೊಳ್ಳುತ್ತಾಳೆ. ಆದರೆ, ತನ್ನ ಮಗಳು ಪುನಃ ಈ ಜಗತ್ತನ್ನು ನೋಡಬೇಕು, ಅವಳಿಗೆ ಮತ್ತೆ ಕಣ್ಣು ಬರುವಂತೆ ಮಾಡಬೇಕು ಅಂತ ಒದ್ದಾಡುವ ತಂದೆ, ಆಸ್ಪತ್ರೆ ವೈದ್ಯರ ಬಳಿ ಹೋಗಿ, ಚಿಕಿತ್ಸೆ ಕೊಡಿಸುತ್ತಾನೆ. ಅಲ್ಲಿ ತನ್ನ ಮಗಳಿಗೆ ಕಣ್ಣು ಬರುತ್ತೆ ಎಂಬ ವಿಷಯ ಕೇಳುವ ತಂದೆಗೆ ಎಲ್ಲಿಲ್ಲದ ಖುಷಿ. ಆದರೆ, ಮನೆಯಲ್ಲಿ ಕಿತ್ತು ತಿನ್ನುವ ಬಡತನ, ಲಕ್ಷಗಟ್ಟಲೆ ಹಣ ಹೊಂದಿಸೋಕೆ ಕಷ್ಟಪಡ್ತಾನೆ. ಕೊನೆಗೆ ಒಂದು ಕೆಲಸ ಒಪ್ಪಿಕೊಂಡರೆ ಅವನಿಗೆ ಲಕ್ಷಗಟ್ಟಲೆ ಹಣ ಸಿಗುತ್ತೆ. ಅದನ್ನು ಒಪ್ಪಿಕೊಳ್ತಾನೆ. ಅವನಿಗೆ ಗೊತ್ತಿಲ್ಲದಂತೆಯೇ ಮೆಡಿಕಲ್ ಮಾಫಿಯಾ ಒಂದರಲ್ಲಿ ಸಿಲುಕುತ್ತಾನೆ. ಅಲ್ಲಿಯ ಕರಾಳತೆ ಕಂಡು ಅವನು ಬೆಚ್ಚಿಬೀಳುತ್ತಾನೆ. ಅಲ್ಲಿಂದ ಹೊರಬರುತ್ತಾನಾ? ತನ್ನ ಮಗಳಿಗೆ ಕಣ್ಣು ಬರುವಂತೆ ನೋಡಿಕೊಳ್ಳುತ್ತಾನಾ ಅನ್ನೋದು ಕಥೆಯ ಎಳೆ.

ಮೊದಲರ್ಧ ಸಿನಿಮಾ ಸಾಗುವುದೇ ಗೊತ್ತಾಗಲ್ಲ. ದ್ವಿತಿಯಾರ್ಧ ಒಂದಷ್ಟು ತಿರುವುಗಳಿಗೆ. ಹೀಗೆ ಆಗುತ್ತೆ ಅಂದುಕೊAಡರೆ ಅದು ಬೇರೇನೋ ಆಗುತ್ತೆ. ಕಥೆಯ ಎಳೆ ಸಿಂಪಲ್. ಆದರೆ, ನಿರ್ದೇಶಕರ ನಿರೂಪಣೆ ಶೈಲಿ ಭಿನ್ನವಾಗಿದೆ. ಕೆಲವು ಕಡೆ ಕೆಲ ದೃಶ್ಯಗಳು ಬೇಕಿರಲಿಲ್ಲ. ಎಲ್ಲೋ ಒಂದು ಕಡೆ ಕಥೆ ಎತ್ತಲೋ ಸಾಗುತ್ತೆ ಅಂದುಕೊಳ್ಳುವಷ್ಟರಲ್ಲಿ ಹಾಡೊಂದು ಕಾಣಿಸಿಕೊಂಡು ಮತ್ತದೇ ಟ್ರಾö್ಯಕ್‌ಗೆ ಕರೆದುಕೊಂಡು ಬಂದು ನೋಡುಗರನ್ನು ಸುಮ್ಮನೆ ನೋಡಿಸಿಕೊಂಡು ಹೋಗುತ್ತೆ. ಇಡೀ ಸಿನಿಮಾದಲ್ಲಿ ಕೆಲವು ನ್ಯೂನ್ಯತೆಗಳಿದ್ದರೂ, ಒಂದೊಳ್ಳೆಯ ಎಮೋಷನ್ಸ್ ನೋಡುಗರ ಕಣ್ಣು ಒದ್ದೆ ಮಾಡುತ್ತೆ. ಸಸ್ಪೆನ್ಸ್, ಥ್ರಿಲ್ಲರ್ ಜೊತೆಗೆ ಮನರಂಜಿಸುವ ಗುಣ ಕೂಡ ಈ ಚಿತ್ರದಲ್ಲಿದೆ. ಇನ್ನು ತಾಂತ್ರಿಕ ವಿಚಾರಕ್ಕೆ ಬಂದರೆ, ಸ್ವಲ್ಪ ಮಬ್ಬು ಮಬ್ಬು ಎನಿಸುತ್ತೆ. ಒಂದು ಮೆಡಿಕಲ್ ಮಾಫಿಯಾದ ಕರಾಳತೆ ಹೇಗೆಲ್ಲಾ ಇರುತ್ತೆ ಅನ್ನುವುದನ್ನು ತಕ್ಕಮಟ್ಟಿಗೆ ತೋರಿಸಿದ್ದಾರಾದರೂ, ಅದನ್ನು ಇನ್ನಷ್ಟು ಚುರುಕಾಗಿ ತೋರಿಸಲು ಸಾಧ್ಯವಿತ್ತು. ಆದರೂ, ಇಲ್ಲೊಂದು ಭಾವುಕತೆಯ ದೃಶ್ಯಗಳಿರುವುದರಿಂದ ಕೆಲ ತಪ್ಪುಗಳೆಲ್ಲವೂ ಮರೆಯಾಗುತ್ತವೆ. ಬಹುತೇಕ ತೆರೆ ಮೇಲೆ ಹೊಸ ಮುಖಗಳಿದ್ದರೂ, ಸಿನಿಮಾ ನೋಡಿಸಿಕೊಂಡು ಹೋಗುತ್ತೆ ಅನ್ನೋದು ಸಮಾಧಾನದ ವಿಷಯ.

ಸಿನಿಮಾದಲ್ಲಿ ನಾಯಕರಾಗಿ ಕಾಣಿಸಿಕೊಂಡರುವ ಕಿರಣ್ ಸುಬ್ರಮಣಿ, ಒಬ್ಬ ಅಸಹಾಯಕ ತಂದೆಯಾಗಿ ಇಷ್ಟವಾಗುತ್ತಾರೆ. ಪಾತ್ರಕ್ಕೆ ಎಷ್ಟು ಬೇಕೋ ಅಷ್ಟು ಸರಳ ನಟನೆ ಮಾಡಿದ್ದಾರೆ. ಅಲ್ಲಲ್ಲಿ ಅಳಿಸುವುದರ ಜೊತೆಗೆ ಮಗಳ ಮೇಲಿನ ಪ್ರೀತಿಯನ್ನೂ ಎತ್ತಿತೋರಿಸುತ್ತಾ ಹೋಗುತ್ತಾರೆ. ಅಂಧೆಯಾಗಿ ಬಾಲನಟಿ ಸಾನ್ವಿಕಾ ಗಮನ ಸೆಳೆಯುತ್ತಾರೆ. ಪ್ರಶಾಂತ್ ನಟನಾ ಅವರಿಲ್ಲಿ ಖಳನ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ಉಳಿದಂತೆ ಶ್ರೀಧರ್ ರಾಮ್, ಮಧುಮಿತ ಇತರರು ಕೂಡ ಸಿಕ್ಕ ಪಾತ್ರವನ್ನು ಅಂದಗಾಣಿಸಿದ್ದಾರೆ.
ಬಿ.ಮುರಳೀಧರನ್ ಸಂಗೀತದ ಎರಡು ಹಾಡುಗಳು ಇಷ್ಟವಾಗುತ್ತವೆ. ನವೀನ್ ಸೂರ್ಯ ಮತ್ತು ವೀರೇಶ್ ಕುಮಾರ್ ಅವರ ಕ್ಯಾಮೆರಾ ಕೈಚಳಕದಲ್ಲಿ ಇನ್ನಷ್ಟು ಜಾದು ಬೇಕಾಗಿತ್ತು. ನವೀನ್ ಸುಂದರ್ ರಾವ್ ಅವರ ಸಂಕಲನ ಚಿತ್ರದ ವೇಗ ಹೆಚ್ಚಿಸಿದೆ. ಒಟ್ಟಾರೆ, ಮೆಡಿಕಲ್ ಮಾಫಿಯಾ ಒಳಗಿನ ಅಪ್ಪ ಮಗಳ ಎಮೋಷನಲ್ ಜರ್ನಿ ಹೇಗಿದೆ ಎಂಬ ಕುತೂಹಲವಿದ್ದರೆ ಒಮ್ಮ ವಾಚ್ ಅಂಡ್ ಸಿ…

Categories
ಸಿನಿ ಸುದ್ದಿ

ಇರುವೆ ಬಿಟ್ಟುಕೊಂಡವರು! The Script Room ಯೂಟ್ಯೂಬ್ ನಲ್ಲಿ ಕಿರುಚಿತ್ರ ರಿಲೀಸ್…

ಜಾಹೀರಾತು ನಿರ್ದೇಶಕ ರಾಜೇಶ್ ರಾಮಸ್ವಾಮಿ ಕಿರುಚಿತ್ರ ನಿರ್ದೇಶಕರಾಗಿ ಮೊದಲ ಹೆಜ್ಜೆ ಇಟ್ಟಿದ್ದಾರೆ. 17 ನಿಮಿಷಗಳ ಅವಧಿಯ ‘ಇರುವೆ’ ಕನ್ನಡ ಕಿರುಚಿತ್ರವನ್ನು ಅವರು ಬರೆದು ನಿರ್ದೇಶಿಸಿದ್ದಾರೆ. ಬೆಂಗಳೂರು ಮೂಲದ ಬರಹಗಾರರ ಕೇಂದ್ರವಾದ ‘ದಿ ಸ್ಕ್ರಿಪ್ಟ್ ರೂಮ್‌’ನ ಸಂಸ್ಥಾಪಕರಾಗಿರುವ ರಾಜೇಶ್ ರಾಮಸ್ವಾಮಿ ಉರೂಫ್ ರಾಮ್‌ಸಂ ಎಂದು ಪ್ರೀತಿಯಿಂದ ಕರೆಯಲಾಗುತ್ತದೆ. ಅವರ ನಿರ್ದೇಶನದ ಇರುವೆ ಕಿರುಚಿತ್ರದಲ್ಲಿ ದತ್ತಣ್ಣ ಮತ್ತು ಮಹಾಂತೇಶ್ ಪ್ರಮುಖ ಪಾತ್ರಗಳಲ್ಲಿ ನಟಿಸಿದ್ದಾರೆ. ಪ್ರಕಾಶ್ ತುಮಿನಾಡ್, ರೋಹಿತ್ ಶ್ರೀನಾಥ್, ಸೋನು ವೇಣುಗೋಪಾಲ್ ಮತ್ತು ಅನಿರುದ್ಧ್ ಆಚಾರ್ಯ ಒಳಗೊಂಡ ತಾರಾಬಳಗವಿದೆ.

ಎರಡು ದಶಕಗಳ ಹಿಂದೆ ಉಪೇಂದ್ರ ಕಾಣಿಸಿಕೊಂಡಿದ್ದ ಎಲ್ಲಾ ಓಕೆ ಕೂಲ್ ಡ್ರಿಂಕ್ ಯಾಕೆ ಎಂಬ ಜಾಹೀರಾತು ಹಿಂದಿನ ಮಾಸ್ಟರ್ ಮೈಂಡ್ ರಾಜೇಶ್ ರಾಮಸ್ವಾಮಿ, “ನಾನು ಮಾಲ್ಗುಡಿ ಡೇಸ್‌ನ ದೊಡ್ಡ ಅಭಿಮಾನಿ ಮತ್ತು ಆರ್‌ಕೆ ನಾರಾಯಣ್ ಅವರ ಕಥೆಯನ್ನು ಇಷ್ಟಪಟ್ಟಿದ್ದೇನೆ. ಈ ಕಥೆಗಳನ್ನು ಶಂಕರ್ ನಾಗ್ ಅವರು ತೆರೆಗೆ ಅಳವಡಿಸಿದ ರೀತಿ ನನಗೂ ಮೆಚ್ಚುಗೆಯಾಯಿತು. ಈ ಸಾಮಾನ್ಯ ಜನರ ಸರಳ ನಿರೂಪಣಾ ಶೈಲಿ, ಸೂಕ್ಷ್ಮವಾದ ಅವಲೋಕನಗಳು ನಾನು ವೀಕ್ಷಕ ಅಥವಾ ಓದುಗನಾಗಿ ನಿಜವಾಗಿಯೂ ಆನಂದಿಸುವ ಸಂಗತಿಯಾಗಿದೆ. ಅಂದಿನಿಂದ, ನನಗೆ ಪ್ರತಿದಿನ ಭೇಟಿಯಾಗುವ ಈ ಸಾಮಾನ್ಯ ಜನರ ಬಗ್ಗೆ ಕುತೂಹಲವಿದೆ. ಆ ಕಥೆಗಳನ್ನು ಇಟ್ಟುಕೊಂಡು ಇರುವೆ ಕಿರುಚಿತ್ರ ತಯಾರಿಸಲಾಗಿದೆ. ಸರಳವಾಗಿ ಹೇಳುವುದಾದರೆ, ಸಾಮಾನ್ಯ ಜನರ ಅಸಾಮಾನ್ಯ ಕಥೆಗಳು. ಇರುವೆ ಚಿತ್ರವು ಜಯನಗರದಲ್ಲಿ ನಡೆಯುವ ಇಂತಹ ಕಥೆಗಳಲ್ಲಿ ಒಂದಾಗಿದೆ”.

ಇರುವೆ 70 ವರ್ಷ ವಯಸ್ಸಿನ ಗೋವಿಂದಯ್ಯನ ಬಗ್ಗೆ. ಅವರ ಮನೆಯಲ್ಲಿನ ಕೆಂಪು ಇರುವೆಗಳು ಸುತ್ತ ಸಾಗುವ ಕಥೆ. ಇದು ದಿ ಸ್ಕ್ರಿಪ್ಟ್ ರೂಮ್‌ನ ಚೊಚ್ಚಲ ನಿರ್ಮಾಣವಾಗಿದೆ. ಇರುವೆ ಕಿರುಚಿತ್ರದ ಬಗ್ಗೆ ಮಾತನಾಡುವ ರಾಮ್‌ಸಂ, “ನಾವು ಮೊದಲ ಬಾರಿಗೆ ಕಥೆಯೊಂದಿಗೆ ದತ್ತಣ್ಣ ಅವರನ್ನು ಸಂಪರ್ಕಿಸಿದಾಗ, ಅವರು “ಹ ಹ್ಹ. ಸರಿ…ನನಗೆ ಕಥೆ ಇಷ್ಟವಾಯಿತು. ಆದರೆ ಈ ಸಿನಿಮಾ ಮಾಡಲು ನಿಮ್ಮ ಮುಖ್ಯ ‘ಉದ್ದೇಶ’ ಯಾವುದು? ಆ ಪ್ರಶ್ನೆ ನನ್ನನ್ನೂ ಕಾಡಲು ಪ್ರಾರಂಭವಾಯ್ತು.

ಆದರೆ ಪ್ರಾಮಾಣಿಕವಾದ ಉತ್ತರ ಮಾತ್ರ, “ಸರ್, ತಮಾಷೆಗಾಗಿ.” ಮತ್ತು ಹೌದು, ನಾವು ಅದನ್ನು ಶೂಟ್ ಮಾಡುವಾಗ ಬಹಳಷ್ಟು ಆನಂದಿಸಿದ್ದೇವೆ. ಮತ್ತು ಅದನ್ನು ನೋಡುವಾಗ ಪ್ರತಿಯೊಬ್ಬರೂ ಒಂದೇ ರೀತಿಯ ಮಜಾವನ್ನು ಹೊಂದಿರುತ್ತಾರೆ ಎಂದು ನಾವು ಭಾವಿಸುತ್ತೇವೆ. ಅದಕ್ಕಾಗಿಯೇ ನಾವು ಅದನ್ನು ಉಚಿತವಾಗಿ ವೀಕ್ಷಿಸಲು YouTube ನಲ್ಲಿ ವೀಕ್ಷಿಸಲು ಅವಕಾಶ ಮಾಡಿಕೊಟ್ಟಿದ್ದೇವೆ’ ಎಂದರು.

Categories
ಸಿನಿ ಸುದ್ದಿ

ಇದು ಶೆಟ್ಟರ ಲಂಡನ್ ಕೆಫೆ! ಆಪರೇಷನ್ ಲಂಡನ್ ಕೆಫೆ ಟೀಸರ್ ರಿಲೀಸ್

ಕವೀಶ್ ಶೆಟ್ಟಿ ಮತ್ತು ಮೇಘಾ ಶೆಟ್ಟಿ ಕಾಂಬಿನೇಷನ್ನಿನ ಕನ್ನಡ, ಮರಾಠಿ, ಹಿಂದಿ, ತೆಲುಗು, ತಮಿಳು ಹಾಗೂ ಮಲಯಾಳಂ ಭಾಷೆಗಳಲ್ಲಿ ನಿರ್ಮಾಣವಾಗಿರುವ ‘ಆಪರೇಷನ್ ಲಂಡನ್ ಕೆಫೆ’ ಚಿತ್ರದ ಚಿತ್ರೀಕರಣ ಈಗಾಗಲೇ ಮುಕ್ತಾಯಗೊಂಡು ಪೋಸ್ಟ್ ಪ್ರೊಡಕ್ಷನ್ ಕೆಲಸ ಬಿರುಸಿನಿಂದ ಸಾಗಿದೆ. ಆರಂಭದಿಂದಲೂ ಸಾಕಷ್ಟು ಕುತೂಹಲ ಮೂಡಿಸಿರುವ ಈ ಚಿತ್ರದ ಟೀಸರ್ ಬಿಡುಗಡೆಯಾಗಿ ಸೋಶಿಯಲ್ ಮೀಡಿಯಾದಲ್ಲಿ ಪ್ರೇಕ್ಷಕರಿಂದ ಭರ್ಜರಿ ಮೆಚ್ಚುಗೆ ಪಡೆದಿದೆ.

ನಿರ್ದೇಶಕ ಸಡಗರ ರಾಘವೇಂದ್ರ ಮಾತಾಡಿ, ನಾನು ಕನ್ನಡದ ಹೆಸರಾಂತ ನಿರ್ದೇಶಕರ ಜೊತೆ ಹಲವಾರು ವರ್ಷಗಳಿಂದ ಕೆಲಸ ಮಾಡಿದ ನಂತರ ಇದೇ ಮೊದಲ ಬಾರಿಗೆ ತನ್ನ ಚೊಚ್ಚಲ ಚಿತ್ರದ ನಿರ್ದೇಶನ ಮಾಡಿದ್ದೇನೆ. ಈ ಚಿತ್ರದ ನಾಯಕನಾಗಿ ನಟಿಸಿರುವ ಕವೀಶ್ ಶೆಟ್ಟಿ ಈ ಅವಕಾಶವನ್ನು ಕಲ್ಪಿಸಿಕೊಟ್ಟಿದ್ದಾರೆ. ಈ ಸಂದರ್ಭದಲ್ಲಿ ಅವರಿಗೆ ಹಾಗೂ ಚಿತ್ರದ ನಿರ್ಮಾಪಕರಿಗೆ ಧನ್ಯವಾದ ತಿಳಿಸುತ್ತೇನೆ. ಇನ್ನು ಇದೊಂದು ನಕ್ಸಲಿಸಂ ಬೇಸಾಗಿಟ್ಟಿಕೊಂಡು ಹೆಣೆದಿರುವ ಕಥೆ‌.‌ ಹಾಗಂತ ನಕ್ಸಲಿಸಂನ ವೈಭವಿಕರಿಸಿಲ್ಲ.

ಯಾವುದೇ ಒಬ್ಬ ವ್ಯಕ್ತಿಯ ಕುರಿತಾದ ಚಿತ್ರವೂ ಇದಲ್ಲ. ಇದು ಆಫ್ಟರ್ “ಆಪರೇಷನ್ ಲಂಡನ್ ಕೆಫೆ”. ನೀವು ಮೊದಲು ನೋಡುವುದು ಚಿತ್ರದ ಪ್ರೀಕ್ವೆಲ್. ಮೊದಲ ಭಾಗ ಆನಂತರ ಬರಲಿದೆ. ಆ ಚಿತ್ರದ ಕುರಿತು ಈಗಾಗಲೇ ಕಾರ್ಯ ಆರಂಭವಾಗಿದೆ. ಕನ್ನಡ ಹಾಗೂ ಮರಾಠಿ ಎರಡೂ ಭಾಷೆಯಲ್ಲಿ ನೇರವಾಗಿ ಚಿತ್ರೀಕರಣ ಮಾಡಲಾಗಿದೆ‌. ಉಳಿದಂತೆ ಹಿಂದಿ, ತೆಲುಗು, ತಮಿಳು ಹಾಗೂ ಮಲೆಯಾಳಂನಲ್ಲೂ ಚಿತ್ರ ಬಿಡುಗಡೆಯಾಗಲಿದೆ. ಕನ್ನಡ ಕಲಾವಿದರು ಮರಾಠಿ ಕಲಿತು, ಮರಾಠಿ ಕಲಾವಿದರು ಕನ್ನಡ ಕಲಿತು ಅಭಿನಯಿಸಿರುವುದು ಈ ಚಿತ್ರದ ವಿಶೇಷ.

“ಮುಂಗಾರು ಮಳೆ 2” ಚಿತ್ರದಿಂದ ನನ್ನ ಸಿನಿ ಜರ್ನಿ ಆರಂಭವಾಯಿತು. ನಂತರ 2020 ರಲ್ಲಿ “ಜಿಲ್ಕಾ” ಚಿತ್ರದಲ್ಲಿ ನಟಿಸಿದ್ದೆ. ಸಡಗರ ರಾಘವೇಂದ್ರ ಅವರ ಕಾರ್ಯವೈಖರಿಯನ್ನು ಹತ್ತಿರದಿಂದ ಕಂಡಿದ್ದ ನನಗೆ ಅವರ ಮೊದಲ ನಿರ್ದೇಶನದಲ್ಲಿ ನನ್ನದೊಂದು ಚಿತ್ರ ಮಾಡುವ ಆಸೆಯಿತ್ತು. ಈ ಚಿತ್ರದ ಮೂಲಕ ಅದು ಈಡೇರಿದೆ. ವಿಜಯ ಕುಮಾರ್ ಶೆಟ್ಟಿ, ರಮೇಶ್ ಕೊಠಾರಿ, ಹವರಾಲ್ ಹಾಗೂ ದೀಪಕ್ ರಾಣೆ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಮೇಘಾ ಶೆಟ್ಟಿ ನಾಯಕಿಯಾಗಿ ಅಭಿನಯಿಸಿದ್ದಾರೆ ಎಂದು ನಾಯಕ ಕವೀಶ್ ಶೆಟ್ಟಿ ತಿಳಿಸಿದರು.

ನಾನು ಮರಾಠಿ ಕಲಿತು ಈ ಚಿತ್ರದಲ್ಲಿ ಅಭಿನಯಿಸಿದ್ದೇನೆ. ನಿರ್ದೇಶಕರಾಗಿ ಸಡಗರ ರಾಘವೇಂದ್ರ ಅವರು ತಮ್ಮ ಮೊದಲ ನಿರ್ದೇಶನದಲ್ಲೇ ಉತ್ತಮವಾಗಿ ಕೆಲಸ ಮಾಡಿದ್ದಾರೆ. ಒಳ್ಳೆಯ ತಂಡದ ಜೊತೆಗೆ ಕೆಲಸ ಮಾಡಿರುವ ಖುಷಿಯಿದೆ ಎಂದರು ಮೇಘಾ ಶೆಟ್ಟಿ.

ಇಂಡಿಯನ್ ಫಿಲ್ಮ್ ಫ್ಯಾಕ್ಟರಿ ಮತ್ತು ದೀಪಕ್ ರಾಣೆ ಫಿಲಂ ಲಾಂಛನದಡಿಯಲ್ಲಿ ಈ ಚಿತ್ರವನ್ನು ನಿರ್ಮಿಸುತ್ತಿರುವ ವಿಜಯ್ ಕುಮಾರ್ ಶೆಟ್ಟಿ ಹವರಾಲ್, ರಮೇಶ್ ಕೊಠಾರಿ ಮತ್ತು ದೀಪಕ್ ರಾಣೆ ಮಾತನಾಡಿ ಈ ಚಿತ್ರಕ್ಕೆ ಹೆಚ್ಚಿನ ಪ್ರೋತ್ಸಾಹ ನೀಡಿ ಎಂದರು. ಛಾಯಾಗ್ರಾಹಕ ಎನ್ ಡಿ ನಾಗಾರ್ಜುನ್, ಸಾಹಸ ನಿರ್ದೇಶಕ ಮಾಸ್ ಮಾದ ಹಾಗೂ ಚಿತ್ರದಲ್ಲಿ ನಟಿಸಿರುವ ಅರ್ಜುನ್ ಕಾಪಿಕ್ಕಾಡ್, ವಿರಾಟ್ ಮಡಕೆ ಮುಂತಾದವರು “ಆಪರೇಷನ್ ಲಂಡನ್ ಕೆಫೆ” ಹಾಗೂ ತಮ್ಮ ಪಾತ್ರದ ಬಗ್ಗೆ ಮಾತನಾಡಿ, ಚಿತ್ರದ ಮೇಕಿಂಗ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ.

Categories
ಸಿನಿ ಸುದ್ದಿ

ರಿಷಿಯ ಹೊಸ ಪುರಾಣ: ರುದ್ರ ಗರುಡ ಪುರಾಣ ಟೀಸರ್ ಬಂತು

ನಟ ರಿಷಿ ನಾಯಕನಾಗಿ ನಟಿಸಿರುವ ಬಹು ನಿರೀಕ್ಷಿತ “ರುದ್ರ ಗರುಡ ಪುರಾಣ” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಕರುನಾಡ ಚಕ್ರವರ್ತಿ ಶಿವರಾಜಕುಮಾರ್ ಈ ಚಿತ್ರದ ಟೀಸರ್ ಬಿಡುಗಡೆ ಮಾಡಿ ಶುಭ ಕೋರಿದ್ದಾರೆ. ನಿರ್ದೇಶಕ ಜೇಕಬ್ ವರ್ಗೀಸ್ ಮುಂತಾದವರು ಟೀಸರ್ ಬಿಡುಗಡೆಗೆ ಸಾಕ್ಷಿಯಾದರು.

914 ವಿಮಾನ 1955 ರಲ್ಲಿ ನ್ಯೂಯಾರ್ಕ್ ನಿಂದ ಮಿಯಾನ್ ಸಿಟಿಗೆ ಹೊರಟಿದ್ದ ವಿಮಾನ ಮಿಸ್ ಆಗುತ್ತದೆ. ವಿಮಾನದ ಸುಳಿವು ಸಿಕ್ಕಿರುವುದಿಲ್ಲ. ಇದಾದ ಮೂವತ್ತು ವರ್ಷಗಳ(1985 ರಲ್ಲಿ)ನಂತರ ಮತ್ತೆ ಆ ವಿಮಾನ ವಾಪಸ್ ಬರುತ್ತದೆ ಅದು ಹೇಗೆ…? ಹಾಗೂ ಒಬ್ಬ ರಾಜ ಇಡೀ ಭೂಮಂಡಲನೇ ಗೆಲ್ಲಬೇಕು ಅಂತ ಆಸೆಯಿಂದ ತನ್ನ‌ ಪಕ್ಕದ ದೇಶದ ಮೇಲೆ ಯುದ್ದಕ್ಕೆ ಹೋಗಿ‌ ಲಕ್ಷಾಂತರ ಜನರನ್ನು ಕೊಂದು ಜಯ‌ ಸಾಧಿಸಿರುತ್ತಾನೆ.‌ ಯುದ್ದ ಮುಗಿದ ಮೇಲೆ‌ ರಣರಂಗಕ್ಕೆ‌ ಹೋಗುತ್ತಾನೆ.

ಅಲ್ಲಿ ಸಾಲುಸಾಲು ಹೆಣದ ರಾಶಿಗಳಿರುತ್ತಿದೆ.‌ ಸತ್ತಿದ್ದ ಸೈನಿಕನೊಬ್ಬನ ಮಾಂಸವನ್ನು ಮನುಷ್ಯನೊಬ್ಬ ತಿನ್ನುತ್ತಿರುತ್ತಾನೆ.‌ ಆ ಸಮಯಕ್ಕೆ‌ ರಾಜ ಅಲ್ಲಿಗೆ ಬರುತ್ತಾನೆ‌. ಆ‌ ಮನುಷ್ಯ ರಾಜನನ್ನು ಕುರಿತು, ಕ್ಷಮಿಸು ರಾಜ ನಾನು ನಿನ್ನ ಆಹಾರವನ್ನು ‌ತಿನ್ನುತ್ತಿದ್ದೇನೆ ಎನ್ನುತ್ತಾನೆ. ಆಗ ರಾಜ ನಾನು ನಿನ್ನ ಹಾಗೆ ನರಭಕ್ಷಕ ಅಲ್ಲ‌ ಏನುತ್ತಾನೆ.‌ ಆಗ ಆ ಮನುಷ್ಯ ಹಾಗಾದರೆ ಇಷ್ಟು ಜನರನ್ನು ಏಕೆ‌ ಸಾಯಿಸಿದಿಯಾ ಎಂದು ರಾಜನನ್ನು ಕೇಳುತ್ತಾನೆ?‌.‌ ಈ ಎರಡು ಉಪಕಥೆಗಳೇ ನಮ್ಮ‌ ಚಿತ್ರದ ಕಥೆಗೆ ಸ್ಪೂರ್ತಿ. ಇಂದು ಟ್ರೇಲರ್ ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರ ತೆರೆಗೆ ಬರಲಿದೆ. ಸಹಕಾರ ನೀಡಿದ ಚಿತ್ರತಂಡಕ್ಕೆ ಧನ್ಯವಾದ ಎಂದರು ನಿರ್ದೇಶಕ ನಂದೀಶ್.

ನಮ್ಮ‌ ಸುತ್ತಮುತ್ತ ನಡೆಯುವ ಅನೇಕ ಸಮಸ್ಯೆಗಳನ್ನಿಟ್ಟುಕೊಂಡು ನಂದೀಶ್ ಈ ಚಿತ್ರದ ಕಥೆ ಮಾಡಿದ್ದಾರೆ. ಪುನೀತ್ ರಾಜಕುಮಾರ್ ಅವರ ನಿರ್ಮಾಣದ “ಕವಲುದಾರಿ” ಚಿತ್ರದ ನಂತರ ನಾನು ಈ ಚಿತ್ರದಲ್ಲಿ ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. ರುದ್ರ ನನ್ನ ಪಾತ್ರದ ಹೆಸರು ಎಂದರು ನಟ ರಿಷಿ.

ಇದು ನನ್ನ ಅಭಿನಯದ ಎರಡನೇ ಚಿತ್ರ.‌ ನನ್ನ‌ ಪಾತ್ರ ಕೂಡ ಚೆನ್ನಾಗಿದೆ‌ ಎಂದು ನಾಯಕಿ ಪ್ರಿಯಾಂಕ ಕುಮಾರ್‌ ತಿಳಿಸಿದರು. ‌

ಜೇಕಬ್ ವರ್ಗೀಸ್‌ ಹಾಗೂ ನಾನು ಸ್ನೇಹಿತರು. ಜೇಕಬ್ ಅವರ ಜೊತೆಗೆ ಕೆಲಸ ಮಾಡುತ್ತಿದಾಗಿನಿಂದಲೂ ನನಗೆ ನಂದೀಶ್ ಪರಿಚಯ.‌‌ ನಂದೀಶ್ ಈ ಚಿತ್ರದ ಕಥೆ ಹೇಳಿದಾಗ ಇಷ್ಟವಾಯಿತು. ಅಭಿನಯಿಸಿದ್ದೇನೆ ಎಂದರು ನಟ ವಿನೋದ್ ಆಳ್ವಾ.

ಚಿತ್ರದಲ್ಲಿ ನಟಿಸಿರುವ ಕೆ.ಎಸ್ ಶ್ರೀಧರ್, ಗಿರೀಶ್ ಶಿವಣ್ಣ, ಶಿವರಾಜ ಕೆ.ಆರ್ ಪೇಟೆ, ಸಂಗೀತ ನಿರ್ದೇಶಕ ಕೆಪಿ, ಛಾಯಾಗ್ರಾಹಕ ಸಂದೀಪ್ ಕುಮಾರ್ ಹಾಗೂ ಸಂಭಾಷಣೆ ಬರೆದಿರುವ ರಘು ನಿಡವಳ್ಳಿ ಮುಂತಾದವರು ಚಿತ್ರದ ಕುರಿತು ಮಾತನಾಡಿದರು.

ಅಶ್ವಿನಿ ಆರ್ಟ್ಸ್ ಲಾಂಛನದಲ್ಲಿ ಅಶ್ವಿನಿ ಲೋಹಿತ್ ಅವರು ಈ ಚಿತ್ರವನ್ನು ನಿರ್ಮಾಣ ಮಾಡಿದ್ದಾರೆ. ಅಶ್ವಿನಿ ಅವರ ಪತಿ ಲೋಹಿತ್ ಅವರು ಚಿತ್ರ ಚೆನ್ನಾಗಿ ಮೂಡಿಬರಲು ಸಹಕಾರ ನೀಡಿದ ಪ್ರತಿಯೊಬ್ಬರಿಗೂ ಧನ್ಯವಾದ ತಿಳಿಸಿದರು.

Categories
ಸಿನಿ ಸುದ್ದಿ

ಕನ್ನಡದ ಮೈ ಹೀರೋ ಸಿನಿಮಾಗೆ ಹಾಲಿವುಡ್ ಕಲಾವಿದರ ಸಾಥ್: ಆಗಸ್ಟ್ 30ಕ್ಕೆ ರಿಲೀಸ್

ಅವಿನಾಶ್ ವಿಜಯಕುಮಾರ್ ನಿರ್ಮಿಸಿ, ನಿರ್ದೇಶಿಸಿರುವ “ಮೈ ಹೀರೋ” ಚಿತ್ರ ಆಗಸ್ಟ್ 30 ರಂದು ಬಿಡುಗಡೆಯಾಗಲಿದೆ. ಬಿಡುಗಡೆಗೆ ಪೂರ್ವಭಾವಿಯಾಗಿ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು “ಮೈ ಹೀರೋ” ಬಗ್ಗೆ ಮಾತನಾಡಿದರು. ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಅವಿನಾಶ್ ವಿಜಯ ಕುಮಾರ್, ನಟಿ ಅಂಕಿತ ಅಮರ್ ಹಾಗೂ ಸಂಗೀತ ನಿರ್ದೇಶಕ ಗಗನ್ ಭಡೇರಿಯಾ ಇದ್ದರು.

ಹಾಲಿವುಡ್ ಕಲಾವಿದರಾದ ಜ್ಯೂಲಿಯೋ, ಎರಿಕ್ ರಾಬರ್ಟ್ ಹಾಗೂ ಬಾಲನಟ ವೇದಿಕ್ ಕೌಶಿಕ್ ಮೈ ಹೀರೋ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಕಾಶ್ ಬೆಳವಾಡಿ ಅವರು ಜಿಲ್ಲಾಧಿಕಾರಿಯಾಗಿ, ಹಿರಿಯನಟ ದತ್ತಣ್ಣ ಅವರು ಪುರೋಹಿತರ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಟಿ ಅಂಕಿತ ಅಮರ್ ಮಧ್ಯಪ್ರದೇಶದ ಯುವತಿಯಾಗಿ ನಟಿಸಿದ್ದಾರೆ.

ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಅವಿನಾಶ್ ವಿಜಯಕುಮಾರ್, ನಾನು ಮೂಲತಃ ರಂಗಭೂಮಿ ಕಲಾವಿದ. ನನ್ನ ನಿರ್ದೇಶನದ ಮೊದಲ ಚಿತ್ರವಿದು. ಎ.ವಿ. ಸ್ಟುಡಿಯೋಸ್ ಮೂಲಕ ಈ ಚಿತ್ರವನ್ನು ನಿರ್ಮಿಸಿದ್ದೇವೆ. ನಮ್ಮ ತಾಯಿ 2009ರಲ್ಲಿ “ಚಿಲಿಪಿಲಿ ಹಕ್ಕಿಗಳು” ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಹಿಂದುಳಿದವರ ಮೇಲೆ ನಡೆಯುವ ಶೋಷಣೆ ಕುರಿತಂತೆ ಮಾಡಿರುವ ಕಾನ್ಸೆಪ್ಟ್ ಇದು. ಇತ್ತೀಚೆಗೆ ಉತ್ತರ ಕರ್ನಾಟಕದಲ್ಲಿ ಒಂದು ಘಟನೆ ನಡೆದಿತ್ತು.

ಅದನ್ನು ಇಟ್ಟುಕೊಂಡು ಈ ಚಿತ್ರಕಥೆ ರಚಿಸಿದ್ದೇನೆ. ಕನ್ನಡ, ಇಂಗ್ಲೀಷ್ ಹಾಗೂ ಹಿಂದಿ ಭಾಷೆಗಳಲ್ಲಿ ಸಂಭಾಷಣೆ ಇರುತ್ತದೆ. ಹಳ್ಳಿಗಳಲ್ಲಿ ಈಗಲೂ ಜಾತಿ ಪದ್ದತಿ ಇದೆ, ಬೇರೆ ಬೇರೆ ದೇಶಗಳಲ್ಲೂ ಸಹ ಇದೆ. ಇದನ್ನೇ ಪ್ರಮುಖವಾಗಿಟ್ಟಿಕೊಂಡು ಸಿನಿಮಾ‌ ಮಾಡಿದ್ದೇನೆ. ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ನಿರ್ಮಾಣವಾಗಿರುವ ಈ ಕಂಟೆಂಟ್ ಓರಿಯಂಟೆಡ್ ಚಿತ್ರ “ಮೈ ಹೀರೋ” ಆಗಸ್ಟ್ 30ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಪಿ.ವಿ.ಆರ್ ಐನಾಕ್ಸ್ ಅವರು ವಿತರಣೆ ಮಾಡುತ್ತಿದ್ದಾರೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.

ನಾನು ಈ ಚಿತ್ರದಲ್ಲಿ ಮಧ್ಯಪ್ರದೇಶದ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. “ಮೈ ಹೀರೋ” ಚಿತ್ರದಲ್ಲಿ ಎನ್ ಜಿ ಓ ಪಾತ್ರ ನನ್ನದು. ಮಧ್ಯಪ್ರದೇಶದ ಮಹೇಶ್ವರ ಎಂಬ ಸ್ಥಳದಲ್ಲಿ ವಾರಣಾಸಿಯಲ್ಲಿರುವಂತೆ ಅನೇಕ ಘಾಟ್ ಗಳಿದೆ. ಅಹಿಲ್ಯ ಬಾಯಿ ಎಂಬ ಮಹಾರಾಣಿ ಈ ಘಾಟ್ ಗಳನ್ನು ನಿರ್ಮಿಸಿದ್ದರು. ಅಲ್ಲಿ ಅವರ ಪ್ರತಿಮೆ ಕೂಡ ಇದೆ. ಈ ಚಿತ್ರದಲ್ಲಿ ನಟಿಸುವುದಕ್ಕೆ ಮುಂಚೆ ನಾನು ಅಲ್ಲಿನ ವಿಷಯಗಳನ್ನು ತಿಳಿದುಕೊಂಡು ನಟಿಸಿರುವುದಾಗಿ ನಟಿ ಅಂಕಿತ ಅಮರ್ ಹೇಳಿದರು.

ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ಗಗನ್ ಭಡೇರಿಯಾ ಮಾತನಾಡಿದರು.

Categories
ಸಿನಿ ಸುದ್ದಿ

ಕನ್ನಡದ ಮೈ ಹೀರೋಗೆ ಹಾಲಿವುಡ್ ಕಲಾವಿದರ ಸಾಥ್: ಆಗಸ್ಟ್ 30ಕ್ಕೆ ರಿಲೀಸ್

ಅವಿನಾಶ್ ವಿಜಯಕುಮಾರ್ ನಿರ್ಮಿಸಿ, ನಿರ್ದೇಶಿಸಿರುವ “ಮೈ ಹೀರೋ” ಚಿತ್ರ ಇದೇ ಆಗಸ್ಟ್ 30 ರಂದು ಬಿಡುಗಡೆಯಾಗಲಿದೆ. ಬಿಡುಗಡೆಗೆ ಪೂರ್ವಭಾವಿಯಾಗಿ ಟ್ರೇಲರ್ ಬಿಡುಗಡೆಯಾಗಿದೆ. ಟ್ರೇಲರ್ ಬಿಡುಗಡೆ ನಂತರ ಚಿತ್ರತಂಡದ ಸದಸ್ಯರು “ಮೈ ಹೀರೋ” ಬಗ್ಗೆ ಮಾತನಾಡಿದರು. ಚಿತ್ರಕ್ಕೆ ಕಥೆ, ಚಿತ್ರಕಥೆ ಹಾಗೂ ಸಂಭಾಷಣೆ ಬರೆದು ನಿರ್ದೇಶನ ಮಾಡಿರುವ ಅವಿನಾಶ್ ವಿಜಯ ಕುಮಾರ್, ನಟಿ ಅಂಕಿತ ಅಮರ್ ಹಾಗೂ ಸಂಗೀತ ನಿರ್ದೇಶಕ ಗಗನ್ ಭಡೇರಿಯಾ ಇದ್ದರು.

ಹಾಲಿವುಡ್ ಕಲಾವಿದರಾದ ಜಿಲಾಲಿ ರಜ್ ಕಲ್ಲಹ್, ಎರಿಕ್ ರಾಬರ್ಟ್ ಹಾಗೂ ಬಾಲನಟ ವೇದಿಕ್ ಕೌಶಿಕ್ ಮೈ ಹೀರೋ ಚಿತ್ರದ ಪ್ರಮುಖ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಪ್ರಕಾಶ್ ಬೆಳವಾಡಿ ಅವರು ಜಿಲ್ಲಾಧಿಕಾರಿಯಾಗಿ, ಹಿರಿಯನಟ ದತ್ತಣ್ಣ ಅವರು ಪುರೋಹಿತರ ಪಾತ್ರದಲ್ಲಿ ಅಭಿನಯಿಸಿದ್ದಾರೆ. ನಟಿ ಅಂಕಿತ ಅಮರ್ ಮಧ್ಯಪ್ರದೇಶದ ಯುವತಿಯಾಗಿ ನಟಿಸಿದ್ದಾರೆ.

ಚಿತ್ರದ ಕುರಿತು ಮಾತನಾಡಿದ ನಿರ್ದೇಶಕ ಅವಿನಾಶ್ ವಿಜಯಕುಮಾರ್, ನಾನು ಮೂಲತಃ ರಂಗಭೂಮಿ ಕಲಾವಿದ. ನನ್ನ ನಿರ್ದೇಶನದ ಮೊದಲ ಚಿತ್ರವಿದು. ಎ.ವಿ. ಸ್ಟುಡಿಯೋಸ್ ಮೂಲಕ ಈ ಚಿತ್ರವನ್ನು ನಿರ್ಮಿಸಿದ್ದೇವೆ. ನಮ್ಮ ತಾಯಿ 2009ರಲ್ಲಿ “ಚಿಲಿಪಿಲಿ ಹಕ್ಕಿಗಳು” ಎಂಬ ಚಿತ್ರವನ್ನು ನಿರ್ಮಾಣ ಮಾಡಿದ್ದರು. ಹಿಂದುಳಿದವರ ಮೇಲೆ ನಡೆಯುವ ಶೋಷಣೆ ಕುರಿತಂತೆ ಮಾಡಿರುವ ಕಾನ್ಸೆಪ್ಟ್ ಇದು. ಇತ್ತೀಚೆಗೆ ಉತ್ತರ ಕರ್ನಾಟಕದಲ್ಲಿ ಒಂದು ಘಟನೆ ನಡೆದಿತ್ತು. ಅದನ್ನು ಇಟ್ಟುಕೊಂಡು ಈ ಚಿತ್ರಕಥೆ ರಚಿಸಿದ್ದೇನೆ.

ಕನ್ನಡ, ಇಂಗ್ಲೀಷ್ ಹಾಗೂ ಹಿಂದಿ ಭಾಷೆಗಳಲ್ಲಿ ಸಂಭಾಷಣೆ ಇರುತ್ತದೆ. ಹಳ್ಳಿಗಳಲ್ಲಿ ಈಗಲೂ ಜಾತಿ ಪದ್ದತಿ ಇದೆ, ಬೇರೆ ಬೇರೆ ದೇಶಗಳಲ್ಲೂ ಸಹ ಇದೆ. ಇದನ್ನೇ ಪ್ರಮುಖವಾಗಿಟ್ಟಿಕೊಂಡು ಸಿನಿಮಾ‌ ಮಾಡಿದ್ದೇನೆ. ಕನ್ನಡ ಹಾಗೂ ಇಂಗ್ಲೀಷ್ ಭಾಷೆಯಲ್ಲಿ ನಿರ್ಮಾಣವಾಗಿರುವ ಈ ಕಂಟೆಂಟ್ ಓರಿಯಂಟೆಡ್ ಚಿತ್ರ “ಮೈ ಹೀರೋ” ಆಗಸ್ಟ್ 30ರಂದು ರಾಜ್ಯಾದ್ಯಂತ ಬಿಡುಗಡೆಯಾಗುತ್ತಿದೆ. ಪಿ.ವಿ.ಆರ್ ಐನಾಕ್ಸ್ ಅವರು ವಿತರಣೆ ಮಾಡುತ್ತಿದ್ದಾರೆ. ನಮ್ಮ ಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.

ನಾನು ಈ ಚಿತ್ರದಲ್ಲಿ ಮಧ್ಯಪ್ರದೇಶದ ಮಹಿಳೆಯ ಪಾತ್ರದಲ್ಲಿ ಕಾಣಿಸಿಕೊಂಡಿದ್ದೇನೆ. “ಮೈ ಹೀರೋ” ಚಿತ್ರದಲ್ಲಿ ಎನ್ ಜಿ ಓ ಪಾತ್ರ ನನ್ನದು. ಮಧ್ಯಪ್ರದೇಶದ ಮಹೇಶ್ವರ ಎಂಬ ಸ್ಥಳದಲ್ಲಿ ವಾರಣಾಸಿಯಲ್ಲಿರುವಂತೆ ಅನೇಕ ಘಾಟ್ ಗಳಿದೆ. ಅಹಿಲ್ಯ ಬಾಯಿ ಎಂಬ ಮಹಾರಾಣಿ ಈ ಘಾಟ್ ಗಳನ್ನು ನಿರ್ಮಿಸಿದ್ದರು. ಅಲ್ಲಿ ಅವರ ಪ್ರತಿಮೆ ಕೂಡ ಇದೆ. ಈ ಚಿತ್ರದಲ್ಲಿ ನಟಿಸುವುದಕ್ಕೆ ಮುಂಚೆ ನಾನು ಅಲ್ಲಿನ ವಿಷಯಗಳನ್ನು ತಿಳಿದುಕೊಂಡು ನಟಿಸಿರುವುದಾಗಿ ನಟಿ ಅಂಕಿತ ಅಮರ್ ಹೇಳಿದರು.

ಹಾಡುಗಳ ಬಗ್ಗೆ ಸಂಗೀತ ನಿರ್ದೇಶಕ ಗಗನ್ ಭಡೇರಿಯಾ ಮಾತನಾಡಿದರು.

Categories
ಸಿನಿ ಸುದ್ದಿ

ಇದು ಒಂದು ಲಂಗೋಟಿ ಕಥೆ: ಲಂಗೋಟಿ ಹುಡುಗನಿಗೆ ಸಾಥ್ ಕೊಟ್ಟ ಶರಣ್

ಸಂಜೋತ ಭಂಡಾರಿ ನಿರ್ದೇಶನದ “ಲಂಗೋಟಿ ಮ್ಯಾನ್” ಚಿತ್ರದ ಟೀಸರ್ ಬಿಡುಗಡೆಯಾಗಿದೆ. ತನು ಟಾಕೀಸ್ ನಿರ್ಮಾಣದ ಈ ಚಿತ್ರದ ಟೀಸರ್ ಅನ್ನು ಶರಣ್ ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಕೋರಿದರು.

ನಾನು ಹತ್ತು ವರ್ಷಗಳ ಹಿಂದೆ “ಮಿರ್ಚಿ ಮಂಡಕ್ಕಿ ಖಡಕ್ ಚಾಯ್” ಚಿತ್ರವನ್ನು ನಿರ್ದೇಶಿಸಿದ್ದೆ. ಇದು ಎರಡನೇ ಚಿತ್ರ ಎಂದು ಮಾತನಾಡಿದ ನಿರ್ದೇಶಕಿ ಸಂಜೋತ ಭಂಡಾರಿ, ನಾನು ಬೇರೆ ಒಂದು ಚಿತ್ರದ ಕಥೆ ಮಾಡುತ್ತಿದ್ದಾಗ ಈ ಕಾನ್ಸೆಪ್ಟ್ ಬಂತು‌. ಆ ಚಿತ್ರದ ಕಥೆ ಮಾಡುತ್ತಿದ್ದಾಗಲೂ ನನಗೆ ಇದೇ ಕಥೆ ತಲೆಗೆ ಬರುತ್ತಿತ್ತು. ಕೊನೆಗೆ “ಲಂಗೋಟಿ ಮ್ಯಾನ್” ಸಿನಿಮಾ ಸ್ವರೂಪ ಪಡೆದುಕೊಂಡಿತು.

ಈ ಚಿತ್ರದಲ್ಲಿ ನಿಜವಾದ ಹೀರೋ ಅಂದರೆ “ಲಂಗೋಟಿ” ನೇ. ಆಕಾಶ್ ರಾಂಬೊ, ಧೀರೇಂದ್ರ, ಮಹಾಲಕ್ಷ್ಮಿ, ಹುಲಿ ಕಾರ್ತಿಕ್, ಸಂಹಿತ ವಿನ್ಯ, ಗಿಲ್ಲಿ ನಟ, ಸ್ನೇಹ ಋಷಿ, ಪವನ್, ಆಟೋ ನಾಗರಾಜ್ ಮುಂತಾದವರು ತಾರಾಬಳಗದಲ್ಲಿದ್ದಾರೆ‌.

ಕಥೆ ಹಾಗೂ ಸಂಭಾಷಣೆಯಲ್ಲೂ ಅನೇಕ ಮಿತ್ರರು ಸಹಾಯ ಮಾಡಿದ್ದಾರೆ. ಚಿತ್ರ ಗೆಲುವ ವಿಶ್ವಾಸ ನನಗಂತೂ ಇದೆ‌. ಟೀಸರ್ ಬಿಡುಗಡೆ ಮಾಡಿಕೊಟ್ಟ ಶರಣ್ ಅವರಿಗೆ ಹಾಗೂ ಸಹಕಾರ ನೀಡಿದ ನನ್ನ ತಂಡಕ್ಕೆ ಧನ್ಯವಾದ ಎಂದರು‌.

ಈ ಸಮಾರಂಭಕ್ಕೆ ಬಂದು ನಿರ್ದೇಶಕರ ಮಾತು ಕೇಳಿದ ಮೇಲೆ ಅವರಿಗೆ ಚಿತ್ರದ ಮೇಲಿರುವ ಭರವಸೆ ಹಾಗೂ ತಾವೊಬ್ಬರೆ ಕ್ರೆಡಿಟ್ ತೆಗೆದುಕೊಳ್ಳದೆ, ಚಿತ್ರತಂಡದ ಪ್ರತಿಯೊಬ್ಬರನ್ನು ಪರಿಚಯಿಸಿದ ರೀತಿ ಕಂಡು ಸಂತೋಷವಾಯಿತು. ಈಗಂತೂ ಕಂಟೆಂಟ್ ಓರಿಯಂಟೆಡ್ ಚಿತ್ರಗಳನ್ನೇ ಜನ ಹೆಚ್ಚು ಇಷ್ಟಪಡುತ್ತಿದ್ದಾರೆ. ಆ ಸಾಲಿಗೆ ಲಂಗೋಟಿ ಮ್ಯಾನ್” ಸಹ ಸೇರಲಿ ಎಂದು ಶರಣ್ ಹಾರೈಸಿದರು.

ಮುಖ್ಯ ಅತಿಥಿಗಳಾಗಿ ಆಗಮಿಸಿದ್ದ ಸೌತ್ ಡಿಸಿಸಿ ಪ್ರೆಸಿಡೆಂಟ್ ಓ ಮಂಜುನಾಥ್ ಅವರು ಚಿತ್ರತಂಡಕ್ಕೆ ಶುಭ ಹಾರೈಸಿದರು.
ಚಿತ್ರದಲ್ಲಿ ನಟಿಸಿರುವ ಆಕಾಶ್ ರಾಂಬೊ, ಧೀರೇಂದ್ರ, ಸಂಹಿತ ವಿನ್ಯ ಮುಂತಾದ ಕಾಲವಿದರು ಚಿತ್ರದ ಕುರಿತು ಮಾತನಾಡಿದರು.

“ಲಂಗೋಟಿ ಮ್ಯಾನ್” ಚಿತ್ರದ ಟೀಸರ್ ‌ಹಾಗೂ ಪೋಸ್ಟರ್ ಗೆ ಮೆಚ್ಚುಗೆಯ ಮಹಾಪೂರವೇ ಹರಿದು ಬರುತ್ತಿದೆ
ಟೀಸರ್ ನೋಡಿದಾಗ ಮನೋರಂಜನಾ ಪ್ರಧಾನ ಚಿತ್ರ ಎನಿಸಿದರೂ, ಚಿತ್ರದ ಮೂಲಕ‌‌ ಬೇರೊಂದು ವಿಷಯವನ್ನು ಹೇಳ ಹೊರಟಿರುವುದು ತಿಳಿಯುತ್ತದೆ.‌

Categories
ಸಿನಿ ಸುದ್ದಿ

ಗೆಲುವಿಗೆ ಚಾಮುಂಡಿ ಮೊರೆ ಹೋದ ಪೌಡರ್ ಟೀಮ್

ಸಿನಿಮಾ ರಿಲೀಸ್ ಗೂ ಮೊದಲೇ ನಿರ್ಮಾಪಕದ್ವಯರಾದ ಕಾರ್ತಿಕ್ ಗೌಡ ಹಾಗೂ ಯೋಗಿ ಜಿ ರಾಜ್, ನಾಯಕ ದಿಗಂತ್ ಹಾಗೂ ಇಡೀ ತಂಡದಿಂದ ಟೆಂಪಲ್ ರನ್ ಮಾಡಿದೆ.

ಮೈಸೂರಿನ ಚಾಮುಂಡಿ ದೇವಿ, ಶ್ರೀರಂಗಪಟ್ಟಣದ ನಿಮಿಷಾಂಬ ದೇವಿ ಹಾಗೂ ಕಾರ್ತಿಕ್ ಗೌಡ ಹುಟ್ಟೂರು ಕೊಡಗಳ್ಳಿ ರಾಮಗಿರಿ ಅಮ್ಮನ ದರ್ಶನ ಪಡೆದು ಗೆಲುವಿಗಾಗಿ ಆಶೀರ್ಚಿವಾದ ಪಡೆದಿದೆ ಚಿತ್ರತಂಡ.

ಆಗಸ್ಟ್ 23ಕ್ಕೆ ಸಿನಿಮಾ ರಾಜ್ಯಾದ್ಯಂತ ತೆರೆಗೆ ಬರುತ್ತಿದೆ. ಈ ಹಿಂದೆ ಗುಲ್ಟು ನಿರ್ದೇಶಿಸಿದ್ದ ಜನಾರ್ದನ್ ಚಿಕ್ಕಣ್ಣ ಈ ಸಿನಿಮಾದ ನಿರ್ದೇಶಕ. ಕಾರ್ತಿಕ್ ಗೌಡ, ಯೋಗಿ ಜಿ. ರಾಜ್, ವಿಜಯ್ ಸುಬ್ರಹ್ಮಣ್ಯಂ ನಿರ್ಮಾಣದ ಸಿನಿಮಾವಿದು.

ಸದ್ಯ ದೇವರ ಮೊರೆ ಹೋಗಿರುವ ಸಿನಿಮಾ ತಂಡ ಗೆಲುವಿಗೆ ಬಲವಾಗಿ ಪ್ರಾರ್ಥಿಸಿದೆ. ಚಿತ್ರಮಂದಿರಕ್ಕೆ ಜನರೇ ಬರುತ್ತಿಲ್ಲ ಎಂಬ ಕೂಗು ಇತ್ತು. ಈಗ ಒಂದಷ್ಟು ಸಿನಿಮಾ ಮಂದಿ ಮೊಗದಲ್ಲಿ ಮಂದಹಾಸ ಮೂಡಿದೆ. ಒಳ್ಳೆಯ ಸಿನಿಮಾಗಳನ್ನು ಕೊಟ್ಟರೆ ಖಂಡಿತ ಜನ ಚಿತ್ರಮಂದಿರದತ್ತ ಮುಖ ಮಾಡುತ್ತಾರೆ ಎಂಬುದಕ್ಕೆ ಕೃ಼ಷ್ಣಂ ಪ್ರಣಯ ಸಖಿ ಹಾಗು ಭೀಮ ಸಿನಿಮಾಗಳು ಸಾಬೀತುಪಡಿಸಿವೆ.

Categories
ಸಿನಿ ಸುದ್ದಿ

ಚಿತ್ರರಂಗದ ಚಿನ್ನದ ಗಣಿ! ಗಾಂಧಿನಗರಕ್ಕೆ ಭೀಮ ಬಲ

ವಿಜಯ್ ಭರಮಸಾಗರ

ಕನ್ನಡ ಚಿತ್ರರಂಗ ಇದೀಗ ಗರಿಗೆದರಿದೆ. ಹೌದು, ಚಿತ್ರಮಂದಿರಕ್ಕೆ ಜನ ಬರುತ್ತಿಲ್ಲ. ಒಳ್ಳೆಯ ಸಿನಿಮಾಗಳೇ ಬರುತ್ತಿಲ್ಲ. ಹೀಗಾಗಿ ಕನ್ನಡ ಚಿತ್ರರಂಗದ ಸ್ಥಿತಿಗತಿ ಡೋಲಾಯಮಾನದಲ್ಲಿದೆ. ಹೀಗೆ ಅಂತೆ-ಕಂತೆಗಳ ಮಾತುಗಳೇ ಕೇಳಿ ಬರುತ್ತಿದ್ದವು. ನಿಜ, ಕನ್ನಡ ಚಿತ್ರರಂಗಕ್ಕೂ ಗರಬಡಿದಿತ್ತು. ಒಳ್ಳೆಯ ಸಿನಿಮಾ ಇಲ್ಲದೆ ನೋಡುಗನಿಗೂ ತೀವ್ರ ಬೇಸರವಾಗಿತ್ತು. ಆದರೆ, ಜನರೇ ಚಿತ್ರಮಂದಿರಕ್ಕೆ ಬರುತ್ತಿಲ್ಲ ಅನ್ನುವ ದೂರು ಮಾತ್ರ ನಿರಂತರವಾಗಿತ್ತು. ಆದರೆ, ಅದು ಸುಳ್ಳು. ಸಿನಿಮಾ ಪ್ರೇಮಿ ಯಾವತ್ತಿಗೂ ಒಳ್ಳೆಯ ಸಿನಿಮಾವನ್ನು ಬಿಟ್ಟುಕೊಟ್ಟಿಲ್ಲ. ನೋಡುಗನಿಗೆ ಒಳ್ಳೆಯ ಸಿನಿಮಾ ಬೇಕಿತ್ತು. ಅದನ್ನು ಎದುರು ನೋಡುತ್ತಿದ್ದ. ಈಗ ಗೋಲ್ಡನ್ ಸ್ಟಾರ್ ಗಣೇಶ್ ಅಭಿನಯದ ಕೃಷ್ಣಂ ಪ್ರಣಯ ಸಖಿ ಪ್ರೇಕ್ಷಕನ ಸಿನಿಮಾ ದಾಹ ನೀಗಿಸಿದೆ.

ಯೆಸ್, ಕನ್ನಡ ಚಿತ್ರರಂಗದಲ್ಲೀಗ ಪರ್ವ ಕಾಲ. ಒಂದೆಡೆ ದುನಿಯಾ ವಿಜಯ್ ಅಭಿನಯದ ಭೀಮ ಒಂದು ಕಡೆ ವಿಜೃಂಭಿಸುತ್ತಿದ್ದರೆ, ಇನ್ನೊಂದು ಕಡೆ ಗೋಲ್ಡನ್ ಸ್ಟಾರ್ ಗಣೇಶ್ ನಟನೆಯ ಕೃಷ್ಣಂ ಪ್ರಣಯ ಸಖಿ ಕೂಡ ರಾರಾಜಿಸುತ್ತಿದೆ. ಈ ಎರಡೂ ಸಿನಿಮಾಗಳು ದೊಡ್ಡ ಗೆಲುವು ಕೊಡುವುದರ ಮೂಲಕ ಗಾಂಧಿನಗರದಲ್ಲಿ ವಿಜಯ ಪತಾಕೆ ಹಾರಿಸಿವೆ.

ಸರಿ ಸುಮಾರು ಹದಿನೆಂಟು ವರ್ಷಗಳ ಹಿಂದೆ ಕನ್ನಡ ಚಿತ್ರರಂಗದಲ್ಲಿ ಹೊಸ ಗಾಳಿ ಎಬ್ಬಿಸಿದ್ದು ಮುಂಗಾರು ಮಳೆ ಮತ್ತು ದುನಿಯಾ ಚಿತ್ರಗಳು. ಆ ಸಿನಿಮಾಗಳ ಮೂಲಕ ಗಾಂಧಿನಗರದಲ್ಲಿ ಗಟ್ಟಿ ನೆಲೆ ಕಂಡುಕೊಂಡಿದ್ದು ಇದೇ ಗಣೇಶ್ ಮತ್ತು ವಿಜಯ್. ಆಗ ಕನ್ನಡ ಚಿತ್ರರಂಗದಲ್ಲಿ ಅತೀವೃಷ್ಠಿ ಆಗಿದ್ದಂತೂ ಸುಳ್ಳಲ್ಲ ಬಿಡಿ. ಹಾಗಂತ, ಅದೇ ಸಕ್ಸಸ್ ರೇಷಿಯೋ ಕಾಪಾಡಿಕೊಳ್ಳಲು ಈ ಇಬ್ಬರು ಹೀರೋಗಳು ಒದ್ದಾಡಿದ್ದು ಮಾತ್ರ ಸುಳ್ಳಲ್ಲ. ಕಾಲ ಕ್ರಮೇಣ ಚಂದನವನ ಚೆನ್ನಾಗಿಯೇ ಇತ್ತು. ಅದು ಯಾರ ದೃಷ್ಠಿ ತಾಕಿತೋ ಏನೋ, ಕೊರೊನೊ ಸಂದರ್ಭದಲ್ಲಿ ತತ್ತರಿಸಿದ್ದ ಚಿತ್ರರಂಗ ಸುಧಾರಿಸಿಕೊಳ್ಳೋಕೆ ವರ್ಷಗಳೇ ಬೇಕಾಯ್ತು.

ಈ ಮಧ್ಯೆ ವರ್ಷಕ್ಕೆ ಇನ್ನೂರು ಪ್ಲಸ್ ಸಿನಿಮಾಗಳೂ ತೆರೆಗೆ ಬಂದರೂ, ಥಿಯೇಟರ್ ನಲ್ಲಿ ಗಟ್ಟಿಯಾಗಿ ನಿಲ್ಲೋಕೆ ಪರದಾಡುವಂತಹ ಸ್ಥಿತಿ ಇತ್ತು. ಕೋಟಿ ಕೋಟಿ ಹಣ ಸುರಿದ ನಿರ್ಮಾಪಕರು ಕೂಡ ಬೀದಿಗೆ ಬಂದು ನಿಲ್ಲುವಂತಹ ಪರಿಸ್ಥಿತಿ ನಿರ್ಮಾಣವಾಗಿದ್ದು ಸುಳ್ಳಲ್ಲ. ಇದರಿಂದ ಕನ್ನಡ ಚಿತ್ರರಂಗ ಸೊರಗಿ ಹೋಯ್ತ ಅನ್ನೋ ಅನುಮಾನ ಕೂಡ ಹರಡಿದ್ದು ನಿಜ.

ಆದರೆ, ಒಂದೇ ಒಂದು ಗೆಲುವಿಗಾಗಿ ಇಡೀ ಚಿತ್ರರಂಗ ಹಪಾಹಪಿಸುತ್ತಿತ್ತು. ಈ ಸಿನಿಮಾ ಹಿಟ್ ಆಗಬಹುದಾ? ಆ ಸಿನಿಮಾ ಗೆಲ್ಲಬಹುದಾ? ಎಂಬ ಆಸೆಕಂಗಳಲ್ಲೇ ದಿನ ಸವೆಸುತ್ತಿತ್ತು. ಕೊರೊನಾ ವೇಳೆ ಸೊರಗಿ ಕೂತಿದ್ದ ಚಿತ್ರರಂಗಕ್ಕೆ ಸಲಗ ಆನೆಬಲ ತಂದುಕೊಟ್ಟಿದ್ದು ಎಷ್ಟು ನಿಜಾನೋ, ಈಗ ಭೀಮ ಕೂಡ ಚಿತ್ರರಂಗಕ್ಕೆ ಭೀಮಬಲ ತಂದುಕೊಟ್ಟಿದ್ದು ಅಷ್ಟೇ ನಿಜ.

ಇನ್ನು, ಚಂದನವದ ಚಿನ್ನದ ಗಣಿ ಮೇಲೆ ಕೂಡ ಭರವಸೆ ಇತ್ತು. ಆ ಭರವಸೆ ನಿಜಕ್ಕೂ ಸುಳ್ಳಾಗಲಿಲ್ಲ. ಭೂಮಿ ಮೇಲಿನ ಗೋಲ್ಡ್ ರೇಟ್ ಏರಿಳಿಕೆ ಕಂಡಂತೆ, ಚಿತ್ರರಂಗದಲ್ಲೂ ಗಣೇಶ್ ನಟನೆಯ ಸಿನಿಮಾಗಳು ಕೂಡ ಗೆಲುವು-ಸೋಲಿನ ಲೆಕ್ಕಾಚಾರದಲ್ಲಿದ್ದವು. ಒಂದು ಸಕ್ಸಸ್ ಸಿನಿಮಾಗಾಗಿ ಎದುರು ನೋಡುತ್ತಿದ್ದವರಿಗೆ ಕೃಷ್ಣಂ ಪ್ರಣಯ ಸಖಿ ಸಿನಿಮಾ ಕಣ್ಮುಂದೆ ಬಂತು. ನಿಜಕ್ಕೂ ಆ ದಿನಗಳ ವೈಭವ ಕಣ್ಣೆದುರಿಗೆ ಕಾಣುತ್ತಿದೆ. ರಾಜ್ಯದ ಎಲ್ಲಾ ಥಿಯೇಟರ್ ಗಳ ಮುಂದೆ ಕಂಡ ಜನಜಂಗುಳಿ ಮನರಂಜನೆ ಯಾವತ್ತೂ ಸಾಯೋದಿಲ್ಲ ಅನ್ನುವುದನ್ನು ಸಾರಿ ಹೇಳಿದಂತಿತ್ತು.

ಪುನೀತ್ ರಾಜಕುಮಾರ್ ಅವರು ಪಕ್ಕಾ ಫ್ಯಾಮಿಲಿ ಹೀರೋ. ಅವರು ಮಾಸ್ ಮತ್ತು ಕ್ಲಾಸ್ ಹೀರೋ ಎನಿಸಿಕೊಂಡವರು. ಅವರ ಬಳಿಕ ಫ್ಯಾಮಿಲಿ ಆಡಿಯನ್ಸ್​ ಅನ್ನು ಥಿಯೇಟರ್ ಗೆ ಕರೆಸಿಕೊಳ್ಳುವ ತಾಕತ್ತು ಯಾರಿಗೆ ಇದೆ ಎಂಬ ಪ್ರಶ್ನೆ ಸಾಮಾನ್ಯವಾಗಿ ಕೇಳಿಬರುತ್ತಲೇ ಇತ್ತು. ಇದೀಗ ಗಣೇಶ್ ಅದನ್ನು ಸಾಬೀತುಪಡಿಸಿದ್ದಾರೆ. ಮೊದಲಿನಿಂದಲೂ ಫ್ಯಾಮಿಲಿ ಅಷ್ಟೇ ಅಲ್ಲ, ಅತೀ ಹೆಚ್ಚು ಹುಡುಗಿಯರೂ ಕೂಡ ಗಣಿ ಅವರ ಸಿನಿಮಾಗಳನ್ನು ಪ್ರೀತಿಯಿಂದ ಅಪ್ಪಿಕೊಂಡವರು. ಈಗ ಫ್ಯಾಮಿಲಿ ಆಡಿಯನ್ಸ್ ಗೂ ಹೆಚ್ಚು ಕನೆಕ್ಟ್ ಆಗುವ ನಟ ಅಂತ ಮತ್ತೊಮ್ಮೆ ಪ್ರೂವ್ ಮಾಡಿದ್ದಾರೆ ಗಣೇಶ್.

ಇನ್ನು, ಈ ಮಾತು ಅತಿಶಯೋಕ್ತಿಯಲ್ಲ. ರಾಜ್ಯದ ಸುಮಾರು ನೂರೈವತ್ತಕ್ಕೂ ಹೆಚ್ಚು ಚಿತ್ರಮಂದಿರಗಳೂ ಕೃಷ್ಣಂ ಪ್ರಣಯ ಸಖಿ ಹೌಸ್ ಫುಲ್ ಅಂದರೆ ನಂಬಲೇಬೇಕು. ಅಷ್ಟೇ ಅಲ್ಲ, ಬ್ಲಾಕ್ ನಲ್ಲಿ ಟಿಕೆಟ್ ಓಡುತ್ತಿವೆ ಅನ್ನೋದು ಕೂಡ ಖುಷಿಯ ವಿಷಯವಲ್ಲದೆ ಮತ್ತೇನು? ಒಳ್ಳೆಯ ಸಿನಿಮಾಗಳೇ ಬರುತ್ತಿಲ್ಲ ಎಂದು ದೂರುತ್ತಿದ್ದವರಿಗೆ ಇದೊಂದು ಅದ್ಭುತ ಚಿತ್ರವಾಗಿ ಹೊರಹೊಮ್ಮಿದೆ. ಕನ್ನಡದಲ್ಲಿ ಮತ್ತೆ ಗೆಲ್ಲುವ ಸಿನಿಮಾಗಳ ಓಟ ಶುರುವಾಗಿದೆ ಎಂಬುದಕ್ಕೆ ಈ ಸಿನಿಮಾಗಳು ಕಣ್ಣೆದುರಿಗಿನ ಸಾಕ್ಷಿ.

ಸದ್ಯದ ಮಟ್ಟಿಗೆ ಬೆಳವಣಿಗೆ ಕನ್ನಡ ಚಿತ್ರರಂಗಕ್ಕೆ ಚೈತನ್ಯ ತಂದಿರೋದಂತೂ ಸತ್ಯ. ಯಾರು ಏನೇ ಅಂದುಕೊಂಡರೂ, ಗಣೇಶ್ ಈಗ ಪಕ್ಕಾ ಫ್ಯಾಮಿಲಿ ಆಡಿಯನ್ಸ್ ಹೀರೋ ಅನ್ನುವುದನ್ನು ಮತ್ತೆ ಸಾಬೀತುಪಡಿಸಿದ್ದಾರೆ. ಅದೇನೆ ಇರಲಿ, ಕನ್ನಡ ಚಿತ್ರರಂಗ ಈಗ ಗೆಲುವಿನ ನಗೆ ಬೀರಿದೆ. ಅದೇ ಮೂಡ್ ನಲ್ಲಿ ಒಂದಷ್ಟು ಸಿನಿಮಾಗಳು ನೋಡುಗರನ್ನು ಗೆಲ್ಲೋದ್ದಕ್ಕೆ ಬರಲು ಸಜ್ಜಾಗಿವೆ. ಇದು ಬರೀ ಟ್ರೇಲರ್ ಅಷ್ಟೇ…. ಮುಂದೆ ಇನ್ನೂ ಸಾಲು ಸಾಲು ನಿರೀಕ್ಷೆಯ ಸಿನಿಮಾಗಳಿವೆ. ಅವೆಲ್ಲವೂ ಕನ್ನಡ ಚಿತ್ರರಂಗದ ಹೊಸ ಮಜಲಿಗೆ ಸಾಕ್ಷಿಯಾಗುವುದಂತೂ ನಿಜ.

Categories
ಸಿನಿ ಸುದ್ದಿ

ಮಂಸೋರೆ ಹೊಸ ಯಾನ: ಪ್ರೀತಿಯ ಹೊಸ ದಾರಿ

ಕನ್ನಡ ಚಿತ್ರರಂಗಕ್ಕೆ ಈಗಾಗಲೇ ಸಾಕಷ್ಟು ಸದಭಿರುಚಿಯ ಚಿತ್ರಗಳನ್ನು ನೀಡಿರುವ ದೇವರಾಜ್ ಆರ್ ನಿರ್ಮಾಣದ ಹಾಗೂ “ಹರಿವು”, ” ನಾತಿಚರಾಮಿ”, “ಆಕ್ಟ್ 1978”, “19.20.21” ನಂತಹ ಜನಮೆಚ್ಚುಗೆ ಪಡೆದ ಚಿತ್ರಗಳ ನಿರ್ದೇಶಕ ಮಂಸೋರೆ ನಿರ್ದೇಶಿಸುತ್ತಿರುವ ಮುಂದಿನ ಚಿತ್ರ “ದೂರ ತೀರ ಯಾನ”. ವಿಜಯ್ ಕೃಷ್ಣ ಹಾಗೂ ಪ್ರಿಯಾಂಕ ಕುಮಾರ್ ಈ ಚಿತ್ರದ ನಾಯಕ – ನಾಯಕಿಯಾಗಿ ಅಭಿನಯಿಸುತ್ತಿದ್ದಾರೆ. ಇತ್ತೀಚೆಗೆ ಈ ಚಿತ್ರದ ಟೈಟಲ್ ಟೀಸರ್ ಅನಾವರಣಗೊಂಡಿದೆ.

ನನ್ನ ಹಿಂದಿನ ಚಿತ್ರಗಳನ್ನು ನೀವು ನೋಡಿದ್ದೀರಾ. ಅದನ್ನು ಮೀರಿಸುವ ಪ್ರಯತ್ನ “ದೂರ ತೀರ ಯಾನ” ಎಂದು ಮಾತನಾಡಿದ ನಿರ್ದೇಶಕ ಮಂಸೋರೆ, ಈಗ ಪ್ರೇಕ್ಷಕರ ಅಭಿರುಚಿ ಬದಲಾಗಿದೆ. ಅವರ ನಿರೀಕ್ಷೆಗಳು ಸಾಕಷ್ಟಿದೆ. ಹೀಗೆ ನಾವು ಬದಲಾದ ಪರಿಸ್ಥಿತಿಗೆ ಹೊಂದುಕೊಂಡು‌,‌ ಅವರಿಗೆ ಬೇಕಾದ ರೀತಿಯ ಸಿನಿಮಾ ಮಾಡಬೇಕು. ಆ ನಿಟ್ಟಿನಲ್ಲಿ‌ ಈಗ ನಾನು ಮಾಡಲು ಹೊರಟಿರುವ ಸಿನಿಮಾ “ದೂರ ತೀರ ಯಾನ”. ಇದೊಂದು ದಾರಿಯಲ್ಲಿ ಸಾಗುತ್ತಾ ನಡೆಯುವ ಪ್ರೇಮಕಥೆ.

ಚಿತ್ರದ ಮೊದಲ ಹತ್ತು ನಿಮಿಷ ಮಾತ್ರ ಬೆಂಗಳೂರಿನಲ್ಲಿ ನಡೆಯುತ್ತದೆ. ಉಳಿದೆಲ್ಲಾ ದಾರಿಯಲ್ಲಿ ಸಾಗುತ್ತದೆ. ಬೆಂಗಳೂರಿನಿಂದ ಗೋವಾಕ್ಕೆ ಹೊರಟ ಹುಡುಗ – ಹುಡುಗಿ ಹೊಸರೀತಿಯ ಪ್ರೀತಿಯನ್ನು ಕಂಡುಕೊಳ್ಳುವ ಕಥೆಯೂ ಹೌದು. ಈಗಾಗಲೇ ಹಿಂದಿ ಸೇರಿದಂತೆ ಅನೇಕ ಭಾಷೆಗಳ ವೆಬ್ ಸಿರೀಸ್ ಗಳಲ್ಲಿ ಹಾಗೂ ನನ್ನ ನಿರ್ದೇಶನದ ” ಆಕ್ಟ್ 1978″ ಚಿತ್ರದಲ್ಲಿ ಸಣ್ಣ ಪಾತ್ರದ ಮೂಲಕ ಗುರುತಿಸಿಕೊಂಡಿದ್ದ ನನ್ನ ಕಾಲೇಜು ಗೆಳೆಯ ವಿಜಯ್ ಕೃಷ್ಣ ನಾಯಕನಾಗಿ, “ರುದ್ರ ಗರುಡ ಪುರಾಣ” ಚಿತ್ರದ ಖ್ಯಾತಿಯ ಪ್ರಿಯಾಂಕ ಕುಮಾರ್ ನಾಯಕಿಯಾಗಿ ನಟಿಸುತ್ತಿದ್ದಾರೆ. ಬೇರೆ ಪಾತ್ರಗಳು ಇರುತ್ತದೆ. ಮುಂದೆ ಅದರ ಬಗ್ಗೆ ತಿಳಿಸುತ್ತೇನೆ.

“ದೂರ ತೀರ ಯಾನ” ದಲ್ಲಿ ಬಕೇಶ್ ಹಾಗೂ ಕಾರ್ತಿಕ್ ಸಂಗೀತ ಸಂಯೋಜಿಸುತ್ತಿರುವ ಆರು ಹಾಡುಗಳಿರುತ್ತದೆ‌. ಶೇಖರ್ ಚಂದ್ರ ಛಾಯಾಗ್ರಹಣ, ನಾಗೇಂದ್ರ ಕೆ ಉಜ್ಜನಿ ಸಂಕಲನವಿರುವ ಈ ಚಿತ್ರಕ್ಕೆ ಚೇತನ ತೀರ್ಥಹಳ್ಳಿ ಸಂಭಾಷಣೆ ಬರೆಯುತ್ತಿದ್ದಾರೆ. ಸೆಪ್ಟೆಂಬರ್ ನಿಂದ ಚಿತ್ರೀಕರಣ ಆರಂಭವಾಗಲಿದೆ. ಟೈಟಲ್ ಟೀಸರ್ ಗೆ ಡಾಲಿ ಧನಂಜಯ ಧ್ವನಿ ನೀಡಿದ್ದಾರೆ ಎಂದು ತಿಳಿಸಿದರು.

ತುಂಬಾ ದಿನಗಳಿಂದ ಒಳ್ಳೆಯ ಪಾತ್ರಕ್ಕಾಗಿ ಕಾಯುತ್ತಿದ್ದೆ. ಈಗ ಕಾಲ ಕೂಡಿ ಬಂದಿದೆ. ಗೆಳೆಯ ಮಂಸೋರೆ ಒಂದೊಳ್ಳೆ ಕಥೆ ಮಾಡಿದ್ದಾರೆ. ನನ್ನ ಪಾತ್ರ ಕೂಡ ಚೆನ್ನಾಗಿದೆ ಎಂದರು ನಾಯಕ ವಿಜಯಕೃಷ್ಣ.

“ರುದ್ರ ಗರುಡ ಪುರಾಣ” ದ ನಂತರ ಒಳ್ಳೆಯ ಪಾತ್ರಕ್ಕಾಗಿ ಕಾಯುತ್ತಿದ್ದೆ. ಈ ಚಿತ್ರದಲ್ಲಿ ಆ ಪಾತ್ರ ಸಿಕ್ಕಿದೆ ಎಂದರು ನಾಯಕಿ ಪ್ರಿಯಾಂಕ ಕುಮಾರ್.

ನಿರ್ಮಾಪಕ ದೇವರಾಜ್, ಸಂಗೀತ ನಿರ್ದೇಶಕರಾದ ಬಕೇಶ್ – ಕಾರ್ತಿಕ್, ಛಾಯಾಗ್ರಾಹಕ ಶೇಖರ್ ಚಂದ್ರ ಮುಂತಾದ ಚಿತ್ರತಂಡದ ಸದಸ್ಯರು ಹಾಗೂ ಸತ್ಯ ಹೆಗಡೆ ಸೇರಿದಂತೆ ಅನೇಕ ಗಣ್ಯರು ಕಾರ್ಯಕ್ರಮದಲ್ಲಿ ಉಪಸ್ಥಿತರಿದ್ದರು.

error: Content is protected !!