ಚಿತ್ರ: ಬೇಗೂರು ಕಾಲೋನಿ
ನಿರ್ದೇಶಕ: ಫ್ಲೈಯಿಂಗ್ ಕಿಂಗ್ ಮಂಜು.
ನಿರ್ಮಾಣ: ಶ್ರೀನಿವಾಸ ಬಾಬು
ತಾರಾಗಣ: ರಾಜೀವ್ ಹನು, ಫ್ಲೈಯಿಂಗ್ ಕಿಂಗ್ ಮಂಜು, ಪಲ್ಲವಿ ಪರ್ವ, ಕೀರ್ತಿ ಭಂಡಾರಿ, ಪೋಸಾನಿ ಕೃಷ್ಣ ಇತರರು.
ಆ ಕಾಲೋನಿಗೆ ಯಾರೇ ಸಹಾಯಕ್ಕೆ ಬಂದ್ರೂ ಅಲ್ಲಿನ ಜನರಿಗೆ ಆ ರಾಘವ ದೇವರಿದ್ದಂತೆ. ಆತ ಯಾರಿಗೂ ಮೋಸ ಆಗೋಕೆ ಬಿಡಲ್ಲ. ಆದರೆ, ಅವನೇ ರಾಜಕೀಯ ಬಣ್ಣದ ಮಾತುಗಳಿಗೆ ಮೋಸ ಹೋಗ್ತಾನೆ. ವಾಸ್ತವ ಬದುಕಲ್ಲಿ ನಿಯತ್ತಿಗೆ ಬೆಲೆ ಸಿಗದೆ ಅಸಹಾಯಕನಾಗುವ ರಾಘವ ಲೈಫಲ್ಲಿ ನೂರೆಂಟು ವಿಘ್ನ ಎದುರಾಗುತ್ತವೆ. ಅವೆಲ್ಲವನ್ನೂ ಮೆಟ್ಟಿ ನಿಲ್ತಾನ? ಈ ಪ್ರಶ್ನೆಗೆ ಉತ್ತರ ಬೇಕಾದರೆ ಒಮ್ಮೆ ಸಿನಿಮಾ ನೋಡಬಹುದು.

ಇದೊಂದು ಕಾಲೋನಿ ಕಥೆ. ಅದರಲ್ಲೂ ಒಂದು ಹೋರಾಟದ ಕಥೆ. ಕಾಲೋನಿಯಲ್ಲಿರುವ ಮಧ್ಯಮ ವರ್ಗದ ಜನರ ಕಥೆಯೂ ಹೌದು. ಇಲ್ಲಿ ಹೋರಾಟ ನಡೆಯೋದು ಆಟದ ಮೈದಾನಕ್ಕಾಗಿ. ಅವರೆಲ್ಲರ ಹೋರಾಟಕ್ಕೆ ಜಯ ಸಿಗುತ್ತಾ ಅಥವಾ ಆ ಹೋರಾಟ ವ್ಯರ್ಥ ಆಗುತ್ತಾ ಅನ್ನೋದೇ ಕಥೆ.
ಉಳ್ಳವರ ಮಧ್ಯೆ ಕೊರಗುವವರ ವ್ಯಥೆ ಇಲ್ಲಿ ಹೈಲೆಟ್. ಬಡವರ ಮೇಲಿನ ದಬ್ಬಾಳಿಕೆ ದೌರ್ಜನ್ಯ ಸಿನಿಮಾದ ಪ್ರಮುಖ ಅಂಶ. ಜಾತಿ ಧರ್ಮ ದಾಟಿದ ರಾಘವ ಒಂದು ಕಡೆಯಾದರೆ, ಕಾಲೋನಿ ಜನರೇ ನನ್ನ ಆಸ್ತಿ ಅಂಬೇಡ್ಕರ್ ವಾದವೇ ನನ್ನ ಶಕ್ತಿ ಅಂತ ನಂಬಿರುವ ಶಿವ ಅಲಿಯಾಸ್ ಗಲ್ಲಿ ಶಿವ ಇನ್ನೊಂದು ಕಡೆ. ಇಬ್ಬರದೂ ಒಂದೇ ಯೋಚನೆ. ಇಬ್ಬರೂ ಆಪ್ತ ಗೆಳೆಯರು. ಆದರೆ ಗೆಳೆಯರ ಮಧ್ಯೆ ಸಣ್ಣ ವಿಷಯಕ್ಕೆ ಬಿರುಕು, ಇಬ್ಬರೂ ದೂರ ದೂರ. ಆಮೇಲೆ ಅವರ ಕನಸು ಈಡೇರುತ್ತಾ ಎಂಬ ಕುತೂಹಲ, ಪ್ರಶ್ನೆ ಇದ್ದರೆ ಕಾಲೋನಿಗೆ ಭೇಟಿ ಕೊಡಬಹುದು.
ಕಾಲೋನಿ ಮಂದಿಯ ಅಸಹಾಯಕತೆಗೆ ಪಾರವೇ ಇಲ್ಲ. ಅಲ್ಲಿರುವ ಶಿವನದು ಒಂದೇ ವಾಕ್ಯ, ಆಟದ ಮೈದಾನಕ್ಕೆ ರಕ್ತ ಸುರಿಸಬೇಕು ಇಲ್ಲ, ರಕ್ತ ಹರಿಸಬೇಕು. ಇದು ಅವನ ವಾದ.

ಮೊದಲರ್ಧ ನೋಡಿಸಿಕೊಂಡು ಹೋಗುತ್ತೆ. ದ್ವಿತಿಯಾರ್ಧ ಸ್ವಲ್ಪ ತಿರುವುಗಳೊಂದಿಗೆ ಹಲವು ಪ್ರಶ್ನೆಗಳಿಗೂ ಕಾರಣವಾಗುತ್ತೆ. ಸಿನಿಮಾದ ಸಂಕಲನ ವೇಗಕ್ಕೆ ಕಾರಣವಾಗಿದೆ. ಇನ್ನಷ್ಟು ಬಿಗಿ ನಿರೂಪಣೆ ಬೇಕಿತ್ತು. ಎಲ್ಲೋ ಒಂದು ಕಡೆ ತಮಿಳು ಸಿನಿಮಾಗಳ ಮೇಕಿಂಗ್ ನೆನಪಿಸುತ್ತೆ. ಕನ್ನಡದಲ್ಲಿ ಇಂತಹ ಪ್ರಯತ್ನಕ್ಕೆ ಬೆಂಬಲ ಸಿಗಬೇಕಷ್ಟೇ.
ದನಿ ಕಳೆದುಕೊಂಡವರ ಬದುಕು ಬವಣೆಯನ್ನು ಅಷ್ಟೇ ಸೂಕ್ಷ್ಮವಾಗಿ ನಿರೂಪಿಸಿರುವ ನಿರ್ದೇಶಕರ ಜಾಣತನ ಮೆಚ್ಚಬೇಕು. ಅಮಾಯಕ ಜನರನ್ನು ಅದರಲ್ಲೂ ಕಾಲೋನಿಯ ಮುಗ್ಧರನ್ನು ಹೋರಾಡೋಕೆ ಧರಣಿ ಮಾಡೋಕೆ ಬೆಂಕಿ ಹಚ್ಚೋಕೆ ಮಾತ್ರ ಇಂತಹವರ ಬಳಕೆ ಆಗುತ್ತೆ ಅನ್ನೋ ನಿರ್ದೇಶಕರ ಥಾಟ್ ಚೆನ್ನಾಗಿದೆ. ಅದು ವಾಸ್ತವ ಕೂಡ.
ಇಬ್ಬರು ಗೆಳೆಯರು ಒಂದೊಂದು ದಿಕ್ಕಿನತ್ತ ಹೋರಾಟಕ್ಕಿಳಿಯುತ್ತಾರೆ. ಒಬ್ಬನದು ಶಾಂತಿಯ ಹೋರಾಟ ಮತ್ತೊಬ್ಬರದು ಕ್ರಾಂತಿ ಹೋರಾಟ. ಈ ನಡುವೆ ಯಾರು ಗೆಲ್ಲುತ್ತಾರೆ ಅನ್ನೋದು ಸಸ್ಪೆನ್ಸ್.

ಇಲ್ಲಿ ರಾಜೀವ್ ಹನು ಪಾತ್ರ ಗಮನ ಸೆಳೆದರೆ, ಫ್ಲೈಯಿಂಗ್ ಕಿಂಗ್ ಮಂಜು ದ್ವಿಪಾತ್ರ ಮೂಲಕ ಇಷ್ಟ ಆಗುತ್ತಾರೆ. ಉಳಿದಂತೆ ಬರುವ ಪ್ರತಿ ಪಾತ್ರಕ್ಕೂ ಧಮ್ ಇದೆ.
ಚಿತ್ರದಲ್ಲಿ ಕೇಳೋಂಗಿಲ್ಲ ಯಾರು ಕೇಳೋಂಗಿಲ್ಲ ಹಾಡು ಚೆನ್ನಾಗಿದೆ. ಜೈ ಭೀಮ್ ಸಾಂಗ್ ಜೋಶ್ ಕೊಡುತ್ತೆ.
ಅಭಿನಂದನ್ ಕಶ್ಯಪ್ ಸಂಗೀತ ಮತ್ತು ಹಿನ್ನೆಲೆ ಸಂಗೀತದಲ್ಲಿ ಧಮ್ ಇದೆ. ಕಾರ್ತಿಕ್ ಕ್ಯಾಮೆರಾ ಕೈ ಚಳಕದಲ್ಲಿ ಕಾಲೋನಿಯ ಸೊಗಸಿದೆ.