ವೆಬ್ ಸೀರಿಸ್ ವಿಮರ್ಶೆ : ವಿಭ
ವೆಬ್ ಸೀರಿಸ್: ಜೆರಾಕ್ಸ್
ನಿರ್ದೇಶನ: ಶ್ರೀನಿಧಿ ಬೆಂಗಳೂರು
ನಿರ್ಮಾಣ: ಡಾಲಿ ಪಿಕ್ಚರ್ಸ್
ತಾರಾಗಣ: ನಾಗಭೂಷಣ್, ಪಾಯಲ್, ಓಂ ಪ್ರಕಾಶ್ ರಾವ್, ಮಂಜು ಪಾವಗಡ, ವಿಜಯ ಪ್ರಸಾದ್, ಉಷಾ ಭಂಡಾರಿ, ಸುಧಾಕರ್, ಜಗ್ಗಪ್ಪ ಇತರರು.
ಇದು ಭ್ರಮೇನಾ…? ಆ ಜೆರಾಕ್ಸ್ ಅಂಗಡಿ ಪ್ರಕಾಶನಿಗೆ ಇಂಥದ್ದೊಂದು ಪ್ರಶ್ನೆ ಎದುರಾಗೋಕೆ ಕಾರಣ ಆ ಜೆರಾಕ್ಸ್ ಮೆಷಿನ್ ಮಾಡುವ ಪವಾಡ!
ಹೌದು, ಜೀ5 ಒರಿಜಿನಲ್ಸ್ ನಲ್ಲಿ ಏಪ್ರಿಲ್ 24ಕ್ಕೆ ಜೆರಾಕ್ಸ್ ವೆಬ್ ಸೀರಿಸ್ ಪ್ರಸಾರವಾಗಲಿದೆ. ಅದಕ್ಕೂ ಮುನ್ನ ಪ್ರದರ್ಶನಗೊಂಡ ಜೆರಾಕ್ಸ್ ವೆಬ್ ಸೀರಿಸ್ ನ ಮೂರು ಎಪಿಸೋಡ್ ಕಂಪ್ಲೀಟ್ಲಿ ಹೊಸತಾಗಿದೆ. ಅಷ್ಟೇ ಅಲ್ಲ, ಇಲ್ಲಿ ಹೊಸ ಐಡಿಯಾ ಇದೆ, ಅಷ್ಟೇ ಜಾಣತನ ಎದ್ದು ಕಾಣುತ್ತೆ ಆ ಕಾರಣಕ್ಕೆ ಜೆರಾಕ್ಸ್ ಪಕ್ಕಾ ಒರಿಜಿನಲ್ ಕಥೆಯಾಗಿ ನೋಡುಗರನ್ನ ಕುತೂಹಲಕ್ಕೆ ಕರೆದೊಯ್ಯುತ್ತೆ.

ವೆಬ್ ಸೀರಿಸ್ ಅಂದರೆ ಅಲ್ಲೊಂದ್ ಥ್ರಿಲ್ ಇರಬೇಕು. ಮಜ ಅನಿಸಬೇಕು. ಏನೋ ಇದೆ ಅನ್ನೋ ಕಾಯುವಿಕೆ ಇರಬೇಕು. ಹೀಗೆ ಇನ್ನು ಹತ್ತು ಹಲವು ಅಂಶಗಳು ಇಲ್ಲಿ ನೋಡುಗರನ್ನ ಸೆಳೆಯುತ್ತಾ ಹೋಗುತ್ತವೆ.
ಜೆರಾಕ್ಸ್ ಸಿಂಪಲ್ ಸ್ಟೋರಿ ಅನ್ನುವಂತಿಲ್ಲ. ಇದೊಂದು ಹೊಸ ಕ್ರೇಜಿತನದಿಂದ ಹುಟ್ಟಿಕೊಂಡ ಕಥೆ. ಹಾಗಾಗಿ ಇದು ರುಚಿಸುತ್ತಾ ಹೋಗುತ್ತೆ. ಕಥೆ, ನಿರೂಪಣೆ, ಪಾತ್ರಗಳು, ಮಾತುಗಳು, ದೃಶ್ಯ ವೈಭವ ಎಲ್ಲವೂ ಜೆರಾಕ್ಸ್ ವೇಗಕ್ಕೆ ಹೆಗಲು ಕೊಟ್ಟಿವೆ. ಇಪ್ಪತ್ತು ನಿಮಿಷದ ಎಪಿಸೋಡ್ ಮುಗಿಯೋದೆ ಗೊತ್ತಾಗದಂತೆ ಥ್ರಿಲ್ಲಿಂಗ್ ರೈಡ್ ಮಾಡಿಸುವ ತಾಕತ್ತು ಜೆರಾಕ್ಸ್ ಗಿದೆ.
ಕಥೆ ಏನು?
ಪ್ರಕಾಶ (ನಾಗಭೂಷಣ) ಎಂಬ ಹುಡುಗನಿಗೆ ಆತನ ದೊಡ್ಡಪ್ಪ ( ಓಂಪ್ರಕಾಶ್ ರಾವ್) ಒಂದು ಹಳೆಯ ಜೆರಾಕ್ಸ್ ಮೆಷಿನ್ ಅಂಗಡಿಯೊಂದನ್ನು ಹಾಕಿ ಕೊಟ್ಟಿರುತ್ತಾರೆ. ಹಳೇ ಜೆರಾಕ್ಸ್ ಮೆಷಿನ್ ಜೊತೆ ಒದ್ದಾಡಿ ರೋಸಿ ಹೋಗುವ ಪ್ರಕಾಶನಿಗೆ ಸೂಜಿ ( ಪಾಯಲ್) ಎಂಬ ಹುಡುಗಿ ಮೇಲೆ ಲವ್. ಆಕೆಗೆ ಇನ್ನೊಬ್ಬನ ಮೇಲೆ ಲವ್.

ಈ ನಡುವೆ ಪ್ರಕಾಶನ ಬಾಲ್ಯದ ಫ್ಲ್ಯಾಶ್ ಬ್ಯಾಕ್. ಅಲ್ಲಿ ಅವನ ಅಪ್ಪ ಅಮ್ಮ ಬಾಲಕ ಪ್ರಕಾಶನಿಗೆ ದೇವರೊಂದರ ಬಳಿ ಹೋಗಿ ಆಶೀರ್ವಾದ ಪಡೆದಿರುತ್ತಾರೆ. ಆ ಪೂಜಾರಿ ದೈವದ ಮುಂದೆ ನಿಲ್ಲಿಸಿ ತಾಯತವೊಂದನ್ನು ಕಟ್ಟುತ್ತಾರೆ. ಆ ತಾಯತಕ್ಕೆ ಅಗಾಧ ಶಕ್ತಿ. ಇಪ್ಪತ್ತು ವರ್ಷದವರೆಗೆ ಆ ತಾಯತದ ಶಕ್ತಿ ಅರಿಯದ ಪ್ರಕಾಶನಿಗೆ ಒಂದು ಹಂತದಲ್ಲಿ ಪವಾಡ ನಡೆಯುತ್ತೆ. ಅದೇ ಜೆರಾಕ್ಸ್ ನ ಸಸ್ಪೆನ್ಸ್.
ಇಲ್ಲಿ ಜೆರಾಕ್ಸ್ ಮೆಷಿನ್ ಕೂಡ ಒಂದು ಪಾತ್ರ. ಆ ಮೆಷಿನ್ ವಿಶೇಷತೆ ಏನಪ್ಪಾ ಅಂದರೆ, ಯಾವುದೇ ಫೋಟೋ ಜೆರಾಕ್ಸ್ ಇಟ್ಟರೆ ಆ ಫೋಟೋದಲ್ಲಿ ಇರುವ ವ್ಯಕ್ಯಿ ಪ್ರತ್ಯಕ್ಷನಾಗ್ತಾನೆ. ಅದು ಆ ತಾಯತದ ಶಕ್ತಿ. ಆಮೇಲೆ ಏನೆಲ್ಲಾ ಗೊಂದಲ, ಅವಘಡ ನಡೆಯುತ್ತೆ ಅಂತ ಗೊತ್ತಾಗಬೇಕಾದರೆ ಒಮ್ಮೆ ಜೆರಾಕ್ಸ್ ನೋಡಿ.
ಜೆರಾಕ್ಸ್ ವಾಸ್ತವದ ಕಥೆ ಅಲ್ಲದಿದ್ದರೂ, ವಾಸ್ತವ ಸನ್ನಿವೇಶಗಳನ್ಬು ಸೂಕ್ಷ್ಮವಾಗಿ ಬಿಂಬಿಸಲಾಗಿದೆ.
ಇಲ್ಲಿ ಅಸಹಾಯಕತೆ ಇದೆ, ಗೆಳೆತನವಿದೆ, ಪ್ರೀತಿ ಇದೆ, ಆಸೆ, ದುರಾಸೆ, ಇತ್ಯಾದಿ ವಿಷಯಗಳಿವೆ. ಎಲ್ಲವನ್ನೂ ಪೋಣಿಸಿ ಜೆರಾಕ್ಸ್ ಮಾಡಿರುವ ನಿರ್ದೇಶಕರ ಪ್ರಯತ್ನ ಸಾರ್ಥಕ.
ಯಾರು ಹೇಗೆ?
ನಾಗಭೂಷಣ ಜೆರಾಕ್ಸ್ ಮಾಡುವ ಹುಡುಗನಾಗಿ ಇಷ್ಟ ಆಗ್ತಾರೆ.
ಪಾಯಲ್ ಕೂಡ ತನ್ನ ಫ್ಯಾನ್ಸ್ ಗೆ ಮೋಸ ಮಾಡಿಲ್ಲ. ಉಳಿದಂತೆ ಓಂ ಪ್ರಕಾಶ್ ರಾವ್ , ಸುಧಾಕರ್, ವಿಜಯ ಪ್ರಸಾದ್, ಜಗ್ಗಪ್ಪ ಇತರೆ ಪಾತ್ರಗಳು ಸಾಥ್ ನೀಡಿವೆ.
ಸಂಗೀತ ಪೂರಕವಾಗಿದೆ. ಕ್ಯಾಮರಾ ಕೈಚಳಕ ಕೂಡ ಜೆರಾಕ್ಸ್ ಅಂದವನ್ನು ಹೆಚ್ಚಿಸಿದೆ.





