ಚಿತ್ರ: ಶೇರ್
ನಿರ್ದೇಶನ: ಪ್ರಸಿದ್ಧ್
ನಿರ್ಮಾಣ: ಡಾ. ಸುದರ್ಶನ್ ಸುಂದರ್ ರಾಜ್
ತಾರಾಗಣ: ಕಿರಣ್ ರಾಜ್
ಸುರೇಖಾ, ನಮ್ರತಾ, ಕ್ರಿಸ್
ತನಿಷಾ ಕುಪ್ಪಂಡ, ಬಲರಾಜ್ ವಾಡಿ, ಶೋಭರಾಜ್, ಯಶ್ ಶೆಟ್ಟಿ, ವೀಣಾ ಸುಂದರ್ ಇತರರು.
‘ಅಣ್ಣ ಇವನು ವರವ ಕೊಡೋ ಗಾಡು,
ಶಾಪ ಕೊಟ್ರೆ ಸೀದಾ ಸುಡುಗಾಡು!
‘ತಮಟೆನಾ ಕಾಯಿಅನ್ನೋದು ಸೌಂಡ್ ಜಾಸ್ತಿ
ನನ್ನನ್ನ ಕೆಣಕಿದಷ್ಟು ಏಟು ಜಾಸ್ತಿ…
ಮೇಲಿನ ಈ ಡೈಲಾಗ್ ಕೇಳಿದಾಕ್ಷಣ ಇದು ಪಕ್ಕಾ ಮಾಸ್ ಸಿನಿಮಾ ಅಂತ ಮುಲಾಜಿಲ್ಲದೆ ಹೇಳಬಹುದು. ಕನ್ನಡದಲ್ಲಿ ಈಗಾಗಲೇ ಹಲವು ಮಾಫಿಯಾ ಕುರಿತು ಸಿನಿಮಾಗಳು ಬಂದು ಹೋಗಿವೆ. ಆ ಸಾಲಿಗೆ ಇದೂ ಕೂಡ ಒಂದು ಯಾವ ಮಾಫಿಯಾ ಅನ್ನುವ ಕುತೂಹಲಕ್ಕೆ ಒಮ್ಮೆ ಸಿನಿಮಾ ನೋಡಬಹುದು.
ಇಲ್ಲಿ ಗೆಳೆತನವಿದೆ, ಪ್ರೀತಿ ಇದೆ, ಒಗ್ಗಟ್ಟಿನ ಮಂತ್ರವಿದೆ, ಆಸೆ,ದುರಾಸೆ, ಅಸೂಯೆ, ದ್ವೇಷ ಎಲ್ಲವೂ ಒಳಗೊಂಡ ಮನರಂಜನೆಯ ಸಿನಿಮಾ.

ಆರಂಭದಲ್ಲಿ ಸರಾಗವಾಗಿ ಸಾಗುತ್ತೆ ಅಂದುಕೊಂಡರೆ ಆ ಊಹೆ ತಪ್ಪು. ಅಲ್ಲಲ್ಲಿ ಮಂದಗತಿ ಅನಿಸುತ್ತೆ. ಕೆಲವು ಕಡೆ ಕಂಟಿನ್ಯುಟಿ ಮಿಸ್ ಅನಿಸುತ್ತೆ. ಕೆಲ ಅನಗತ್ಯ ದೃಶ್ಯಗಳು ಬೇಕಿತ್ತಾ ಎಂಬ ಪ್ರಶ್ನೆ ಎದುರಾಗುತ್ತೆ. ಆದರೂ ಸಿನಿಮಾದ ಹಾಡು ಎದುರಾಗಿ ಸಣ್ಣಪುಟ್ಟ ಮಿಸ್ಟೇಕ್ ಗಳನ್ನು ಮರೆಮಾಚಿಸುತ್ತೆ.
ದ್ವಿತಿಯಾರ್ಧದಲ್ಲಿ ಒಂದು ಟ್ವಿಸ್ಟ್ ಇದೆ. ಹಾಗಂತ ಅದು ದೊಡ್ಡದ್ದೇನಲ್ಲ. ಒಂದು ಮಾಫಿಯಾ ಕತೆ ಹೇಳೋಕೆ ಅಷ್ಟೊಂದು ಹರಸಾಹಸ ಪಟ್ಟಿದ್ದಾರೆ ನಿರ್ದೇಶಕರು.
ಕಥೆ ಸರಳವಾಗಿದೆ. ಚಿತ್ರಕಥೆಯಲ್ಲಿ ಇನ್ನಷ್ಟು ಬಿಗಿ ಹಿಡಿತ ಬೇಕಿತ್ತು. ಮಾಫಿಯಾ ಕಥೆಯಲ್ಲಿ ಎಲ್ಲವೂ ಮಿಕ್ಸ್ ಆಗಿದೆ. ಹಾಗಾಗಿ ಒಂದೇ ನೋಟಕ್ಕೆ ನೋಡಿಸಿಕೊಂಡು ಹೋಗುವ ತಾಕತಗತು ಕಮ್ಮಿ.
ಕಥೆ ಏನು?
ನಾಯಕ ಶಿವು (ಕಿರಣ್ ರಾಜ್) ಅನಾಥ. ಅವರ ಜೊತೆ ಅನಾಥರಾಗಿರುವ ನಾಲ್ಕೈದು ಗೆಳೆಯರು. ಅವರೆಲ್ಲರಿಗೂ ಒಂದು ಮಾರ್ಕೆಟ್ ನಲ್ಲಿ ಕೂಲಿ ಕೆಲಸ ಕೊಟ್ಟು ಸಲಹುವ ಬಲರಾಜವಾಡಿ. ಮಾರ್ಕೆಟ್ ಸುತ್ತವೇ ನಡೆಯೋ ಕಥೆಯಲ್ಲಿ ಒಂದಷ್ಟು ಸಾಲು ಸಾಲು ಮರ್ಡರ್ ಆಗುತ್ತವೆ. ಆ ಮರ್ಡರ್ ಮಾಡಿದ್ದು ಯಾರು? ಯಾಕಾಗಿ ಆಗುತ್ತವೆ ಅನ್ನೋದು ಸಸ್ಪೆನ್ಸ್. ಮುಂದೇನಾಗುತ್ತೆ ಎಂಬ ಕುತೂಹಲ ಇದ್ದರೆ ಸಿನಿಮಾ ನೋಡಬಹುದು.

ಯಾರು ಹೇಗೆ?
ಕಿರಣ್ ರಾಜ್ ಸಿಕ್ಕ ಪಾತ್ರಕ್ಕೆ ಜೈ ಎಂದಿದ್ದಾರೆ. ಆದರೆ, ಅವರಿಗೆ ಆ ಕೂಲಿ ಪಾತ್ರ ಒಗ್ಗಿಲ್ಲ. ತೆರೆ ಮೇಲೆ ಕೂಲಿ ಅಂತ ಕಾಣಿಸಿಕೊಳ್ಳೋದು ಇಲ್ಲ. ಫೈಟು, ಡ್ಯಾನ್ಸು ಓಕೆ, ಡೈಲಾಗ್ ಬಿಡುವಾಗ ಸ್ವಲ್ಪ ಧ್ವನಿ ಜೋರಾಗಿರಬೇಕಿತ್ತು ಅನಿಸುತ್ತೆ. ಇನ್ನು ಸಿನಿಮಾದಲ್ಲಿ ಕಾಡುವ ಹಾಗು ಹೈಲೆಟ್ ಪಾತ್ರ ಅಂದರೆ ಅದು ಸೈಕೋ ಆಗಿ ಕಾಣಿಸಿಕೊಂಡಿರುವ ಗಿಲ್ಲಿ (ಕ್ರಿಸ್) ಪಾತ್ರ. ಸಿಕ್ಕ ಅವಕಾಶವನ್ನು ಚೆನ್ನಾಗಿ ಬಳಸಿಕೊಂಡಿದ್ದಾರೆ. ಇಡೀ ಸಿನಿಮಾದಲ್ಲಿ ಕ್ರಿಸ್ ಕಾಡುತ್ತಾರೆ. ಹೀಗೆ ಮುಂದೆ ಒಳ್ಳೆಯ ಆಯ್ಕೆ ಮಾಡಿಕೊಂಡಲ್ಲಿ ಭವಿಷ್ಯ ಇದೆ. ಉಳಿದಂತೆ ಬಲರಾಜವಾಡಿ, ಶೋಭರಾಜ್ ಪಾತ್ರದಲ್ಲಿ ಆವರಿಸಿಕೊಂಡಿದ್ದಾರೆ. ತನಿಷಾ ಕುಪ್ಪಂಡ ಖಡಕ್ ಪೊಲೀಸ್ ಅಧಿಕಾರಿಯಾಗಿ ಪರವಾಗಿಲ್ಲ. ಯಶ್ ಶೆಟ್ಟಿ ಕೊನೆಯಲ್ಲಿ ಆರ್ಭಟಿಸಿದ್ದಾರೆ. ಸುರೇಖಾ, ನಮ್ರತಾ ಹಾಗು ಇತರರು ಕೊಟ್ಟ ಪಾತ್ರವನ್ನು ನಿರ್ವಹಿಸಿದ್ದಾರೆ.
ಗುಮ್ಮಿನೇನಿ ವಿಜಯ್ ಸಂಗೀತ ದಲ್ಲಿ ಅರೇ ಇದೇ ಮೊದಲು ಮನದಲ್ಲಿ ಬೆಳದಿಂಗಳು ಹಾಡು ಚೆನ್ನಾಗಿದೆ. ಹಿನ್ನೆಲೆ ಸಂಗೀತಕ್ಕೆ ಇಮ್ನಷ್ಟು ಧಮ್ ಬೇಕಿತ್ತು. ವಿನೋದ್ ಸಾಹಸ ಕ್ಕೆ ಒಳ್ಳೆಯ ಮಾರ್ಕ್ಸ್ ಕೊಡಬಹುದು.
ಕಿಟ್ಟಿ ಕೌಶಿಕ್ ಅವರ ಕ್ಯಾಮರದಲ್ಲಿ ಶೇರ್ ಆರ್ಭಟದ ಸೊಗಸಿದೆ.




