ರಕ್ತಪಾತದೊಳ್ ಕಾಳಿದಾಸನ ಆರ್ಭಟಂ ಜಯಂ!

ಚಿತ್ರ ವಿಮರ್ಶೆ : ವಿಭ

ರೇಟಿಂಗ್ : 5/3.5

ಚಿತ್ರ: ಕೆಡಿ
ನಿರ್ದೇಶನ: ಪ್ರೇಮ್
ನಿರ್ಮಾಣ: ಕೆವಿಎನ್ ಪ್ರೊಡಕ್ಷನ್
ತಾರಾಗಣ: ಧ್ರುವ ಸರ್ಜಾ, ಸಂಜಯ್ ದತ್, ರವಿಚಂದ್ರನ್, ಶಿಲ್ಪಾಶೆಟ್ಟಿ, ರಮೇಶ್ ಅರವಿಂದ್,
ರೀಷ್ಮಾ‌ ನಾಣಯ್ಯ,
ರವಿಶಂಕರ್, ಯಶ್ ಶೆಟ್ಟಿ ಇತರರು.

ಕಂಪ್ಲೇಂಟ್ ಕೊಡೋಕೆ ಬಂದಿದೀನಿ. ಬರ್ಕೋ, ತಲೆ ಸಿಕ್ಕಿದೆ ‌ ಬಾಡಿ ಸಿಕ್ಕಿಲ್ಲ…’

ಕತ್ತರಿಸಿದ ತಲೆ ಹಿಡಿದು ಪೊಲೀಸ್ ಸ್ಟೇಷನ್ ಗೆ ಬರುವ ಅ ರೌಡಿ ಈ ಡೈಲಾಗ್ ಹೇಳ್ತಾನೆ. ಅಲ್ಲಿಗೆ ಇದೊಂದು ರೌಡಿಸಂ ಸಿನಿಮಾ ಅಂತ ಪ್ರತ್ಯೇಕವಾಗಿ ಹೇಳಬೇಕಿಲ್ಲ.

ನಿರ್ದೇಶಕ ಪ್ರೇಮ್ ಈ ಬಾರಿ ರೌಡಿಸಂ ಕತೆಯಲ್ಲಿ ಒಂದಷ್ಟು ಹೊಸ ವಿಷಯ ಹೇಳಿದ್ದಾರೆ. ತುಸು ಹೊಸತನ ಕಟ್ಟಿಕೊಟ್ಟಿದ್ದಾರೆ. ಹಾಗಂತ ಇಲ್ಲೂ ಮತ್ತದೇ ತಾಯಿ ಸೆಂಟಿಮೆಂಟ್ ಇಟ್ಟಿದ್ದಾರೆಯೇ? ಈ ಪ್ರಶ್ನೆಗೆ ಉತ್ತರ ಒಮ್ಮೆ ಸಿನಿಮಾ ನೋಡಬೇಕು.

ತಾಯಿಗಾಗಿ ಮಚ್ಚು ಹಿಡಿಯೋ ಹೀರೋ ಕಥೆಯನ್ನ ಸೃಷ್ಟಿ ಮಾಡಿದ್ದ ಪ್ರೇಮ್, ಇಲ್ಲಿ ತನ್ನ ಹುಡುಗಿಗಾಗಿ, ತನ್ನ ಕುಟುಂಬದವರಿಗಾಗಿ ಮಚ್ಚು ಹಿಡಿದು ರುಂಡ-ಮುಂಡ ಚೆಂಡಾಡುವ ಹೀರೋ ಕಥೆ ಹೆಣೆದು ಬಂದಿದ್ದಾರೆ. ಹಾಗಂತ ಇಡೀ ಸಿನಿಮಾ ನಿಮಗೆ ರುಚಿಸಲ್ಲ. ಅಲ್ಲಲ್ಲಿ ಹೂರಣ ಸಿಗುತ್ತಷ್ಟೇ. ಇನ್ನಷ್ಟು ಬಿಗಿಯಾದ ನಿರೂಪಣೆ ಬೇಕಿತ್ತು. ಆದರೂ ಮನರಂಜನೆಗೆ ಏನೆಲ್ಲಾ‌ ಬೇಕೋ ಅದನ್ನಿಟ್ಟಿದ್ದಾರೆ. ಹಾಗಾಗಿ ಅವರು ನೋಡೋರ ದೃಷ್ಟಿಯಲ್ಲಿ ಕೆಡಿಯಾಗಿ ಕಾಣಲ್ಲ!

ಇಲ್ಲಿ ಎಲ್ಲರೂ ಮಚ್ಚು ಹಿಡಿಯುತ್ತಾರೆ. ಹಾಗಾಗಿ ಎಲ್ಲರೂ ರೌಡಿಗಳಾಗುತ್ತಾರೆ. ಇಡೀ ಸಿನಿಮಾದುದ್ದಕ್ಕೂ ರಕ್ತದ ಕೋಡಿ. ಗಲ್ಲಿ ಗಲ್ಲಿಯಲ್ಲೂ ಹೆಣಗಳ ರಾಶಿ. ಹೊಡಿ ಬಡಿ ಕಡಿ ನಡುವೆ ಅಲ್ಲಲ್ಲಿ ‘ಕಾಮಿಡಿ’. ಆದರೆ, ಕರೆಕ್ಟ್ ಆಗಿ ಸಿನಿಮಾ ಗಮನಿಸಿದರೆ ನೋಡುಗರಿಗೆ ‘ಕಾಮಿಡಿ’ ಶೋ ಅನಿಸುತ್ತದೆ. ಇಲ್ಲಿ ಲಾಜಿಕ್ ಹುಡುಕುವಂತಿಲ್ಲ. ಎಲ್ಲವೂ ಪ್ರೇಮ್ ಮ್ಯಾಜಿಕ್ ಅಷ್ಟೇ. ಹಿಂದೆ ಅವರು ಮಾಡಿದ್ದ ಮ್ಯಾಜಿಕ್ ನೋಡಿದ್ದರಿಂದ ಎಕ್ಸೈಟ್ಮೆಂಟ್ ಆಗುವಂಥದ್ದೇನಿಲ್ಲ.

ಇಡೀ ಸಿನಿಮಾ ರೆಟ್ರೋ ಫೀಲ್ ನಲ್ಲಿ ಸಾಗುತ್ತೆ. ಹಾಗಂತ ಆ ಫೀಲ್ ಸಿಗುತ್ತಾ? ನೋಡಿದಾಗ ಫೀಲ್ ಬಗ್ಗೆ ಮಾತಾಡಬಹುದು.

ಸಿನಿಮಾದ ಕಥೆ ಸರಳವಾಗಿದೆ. ಕಟ್ಟಿಕೊಟ್ಟಿರುವ ರೀತಿ ಸಿನಿಮಾವನ್ನು ಶ್ರೀಮಂತವಾಗಿಸಿದೆ. ಚಿತ್ರದ ಹೈಲೆಟ್ ಅಂದರೆ ಕಲಾ ನಿರ್ದೇಶನ. 1980 ರ ಕಾಲಘಟ್ಟದ ಫೀಲ್ ಕಟ್ಟಿಕೊಟ್ಟಿರುವುದು ಚಿತ್ರ ಕೊಂಚ ವಿಶೇಷ ಅನಿಸುತ್ತೆ. ದೊಡ್ಡದ್ದಾಗಿ ಬಜೆಟ್ ಇರುವುದರಿಂದ ಮೇಕಿಂಗ್ ಹಬ್ಬದಂತಿದೆ. ಇನ್ನಷ್ಟು ಅಂದಗಾಣಿಸುವ ಅವಕಾಶ ಇತ್ತು. ಆದರೂ ಕನ್ನಡಕ್ಕಿಷ್ಟು ಸಾಕು. ಪ್ಯಾನ್ ಇಂಡಿಯಾ ಲೆವೆಲ್ ಸಿನಿಮಾನ ಅಂತ ನೋಡುಗರೇ ಉತ್ತರಿಸಬೇಕು.

ಚಿತ್ರಕಥೆಯಲ್ಲಿ ಇನ್ನಷ್ಟು ಚುರುಕುತನ ಇರಬೇಕಿತ್ತು. ಮೊದ ಲರ್ಧ ಏನಾಗುತ್ತೆ ಅಂತ ಅರ್ಥ ಮಾಡಿಕೊಳ್ಳುವಷ್ಟರಲ್ಲಿ ದ್ವಿತಿಯಾರ್ಧ ಬರುತ್ತೆ. ಮೊದಲರ್ಧದ ಕಥೆಗೆ ದ್ವಿತಿಯಾರ್ಧ ಪೂರಕ. ಕ್ಲೈಮ್ಯಾಕ್ಸ್ ಚಿತ್ರದ ಸ್ಪೆಷಲ್ ಅನ್ನಬಹುದು. ಹಾಗಂತ ಅದ್ಭುತ ಕ್ಲೈಮ್ಯಾಕ್ಸ್ ಅಲ್ಲದಿದ್ದರೂ ಕೊನೆಯಲ್ಲಿ ಇಟ್ಟಿರುವ ಟ್ವಿಸ್ಟ್ ಸ್ವಲ್ಪ ಹುಬ್ಬೇರಿಸುವಂತೆ ಮಾಡುತ್ತೆ. ಕತ್ತರಿ ಪ್ರಯೋಗ ಸಿನಿಮಾದ ವೇಗಕ್ಕೆ ಸಾಕ್ಷಿಯಾಗಿದೆ. ಎಲ್ಲೋ ಒಂದು ಕಡೆ ಟ್ರ್ಯಾಕ್ ನಿಧಾನ ಅನಿಸುತ್ತಿದ್ದಂತೆ ಹಾಡುಗಳು ಕಾಣಿಸಿಕೊಂಡು ಮನರಂಜಿಸುತ್ತವೆ. ಆಗಾಗ ಬರುವ ದೃಶ್ಯಗಳು, ಡೈಲಾಗ್ ಗಳು ನೋಡುಗರನ್ನು ಖುಷಿಗೊಳಿಸುತ್ತವೆ. ಒಂದು ರೌಡಿಸಂ ಕಥೆಯಲ್ಲಿ ಪ್ರೀತಿ, ಒಂದು ಸುಂದರ ಫ್ಯಾಮಿಲಿ, ಪಟ ಪಟ ಮಾತು, ಡ್ಯಾನ್ಸು, ಫೈಟು, ಲಾಂಗು, ಮಚ್ಚು ಇತ್ಯಾದಿ ತುಂಬಿವೆ. ಅಲ್ಲಲ್ಲಿ ಭಾವನಾತ್ಮಕ ಅಂಶಗಳಿವೆ ಅನ್ನೋದು ಬಿಟ್ಟರೆ ಬೇರೆ ನಿರೀಕ್ಷಿಸುವಂತಿಲ್ಲ.

ಕಥೆ ಏನು?

ಅವನು ದೇವ (ಸಂಜಯ್ ದತ್) ದೊಡ್ಡ ರೌಡಿ. ಗರಡಿ ಮನೆಯ ಹಳೇ ಕುಸ್ತಿ ಪಟು. ಚಿಕ್ಕಂದಿನಿಂದ ದೇವನನ್ನು ನೋಡಿಕೊಂಡು ಬೆಳೆದ ಕಾಳಿದಾಸ (ಧ್ರುವ ಸರ್ಜಾ) ಹಾಲು ಹಾಗು ಸೀಮೆಎಣ್ಣೆ ವ್ಯಾಪಾರಿ. ಕಾಳಿದಾಸನಿಗೆ ಒಂದು ಸುಂದರ ಕುಟುಂಬ ಅಣ್ಣ ರಮೇಶ್ ಅರವಿಂದ್ ಆತ ಮೇಷ್ಟ್ರು. ಓದದ ಕಾಳಿದಾಸನಿಗೆ ಅಣ್ಣ ಅಂದ್ರೆ ಭಯ. ಭಯಂಕರ ರೌಡಿ ದೇವ ಅಂದ್ರೆ ಅಷ್ಟೇ ಪ್ರೀತಿ ಗೌರವ. ಅತ್ತ ಅಣ್ಣಯ್ಯಪ್ಪ (ರವಿಚಂದ್ರನ್) ಮೇಷ್ಟ್ರು ಗೆಳೆಯ. ಎಂಎಲ್ಎ ಆಗೋ ಕನಸು. ಅವನ‌ ವಿರುದ್ಧ ದೇವ ಚುನಾವಣೆಗೆ ನಿಲ್ತಾನೆ. ಈ ಮಧ್ಯೆ ಗಂಡುಬೀರಿಯಂತಿರುವ ಮಚ್ ಲಕ್ಷ್ಮೀ (ರೀಷ್ಮಾ ) ಅಂದ್ರೆ ಕಾಳಿದಾಸನಿಗೆ ಪ್ರೀತಿ. ಆ ಪ್ರೀತಿ ಹುಡುಗಿ‌ ಮೇಲೆ‌ ದೇವನ ಬಂಟ‌ಕವಿ ( ಯಶ್ ಶೆಟ್ಟಿ) ಕಣ್ಣು. ಅಲ್ಲಿಗೆ ಮಾರಾಮಾರಿ. ಯಾರು ಯಾರನ್ನ ಹೇಗೆ ಹೊಡಿತಾರೆ. ಯಾರು ಯಾರ ತಲೆ ತೆಗಿತಾರೆ ಅನ್ನೋದು ಕಥೆ. ಮುಂದೇನಾಗುತ್ತೆ ಅನ್ನೋಕು ಕುತೂಹಲ ಇದ್ದರೆ ಸಿನಿಮಾ ನೋಡಿ.

ಇಲ್ಲೊಂದು ಟ್ವಿಸ್ಟ್ ಇದೆ. ಕಾಳಿದಾಸ ಕೆಡಿ ಆಗ್ತಾನೆ. ರೌಡಿಗಳ ರುಂಡ ಚೆಂಡಾಡುತ್ತಾನೆ. ಕಾಳಿದಾಸನ ತಲೆ ಕಡಿದು ತಂದವರಿಗೆ ದೇವನ ಸಾಮ್ರಾಜ್ಯ ಕೊಡುವ ಭರವಸೆ. ಅಲ್ಲೊಂದು ಟ್ವಿಸ್ಟ್ ಇದೆ.ಅದೇ ಸಿನಿಮಾದ ಹೈಲೆಟ್. ಕಾಳಿದಾಸನ ತಲೆ ಕಡಿಯಲು ಹೊರಡುವ ರೌಡಿಗಳಿಗೆ ಕಾಲಭೈರವನ (ಸುದೀಪ್) ದರ್ಶನ ಆಗುತ್ತೆ. ಅಲ್ಲೇನಾಗುತ್ತೆ ಅನ್ನೋದು ಸಸ್ಪೆನ್ಸ್.

ಯಾರು‌ ಹೇಗೆ?

ಧ್ರುವ ಸರ್ಜಾ ಎಂದಿಗಿಂತ ಎನರ್ಜಿ ತುಂಬಿಕೊಂಡು ನಟಿಸಿದ್ದಾರೆ. ಪಾತ್ರದ ಮೂಲಕ ಇಷ್ಟ ಆಗ್ತಾರೆ. ಕಾಮಿಡಿ, ಡೈಲಾಗು, ಫೈಟು, ಡ್ಯಾನ್ಸು ಎಲ್ಲದರಲ್ಲೂ ಸೈ. ಸಂಜಯ್ ದತ್ ದೇವ ಪಾತ್ರದಲ್ಲಿ ಅಬ್ಬರಿಸಿದ್ದಾರೆ. ನಾಯಕ್ ನಹೀ ಖಳ್ ನಾಯಕ್ ಹು ಮೈ ಅಂತ ಮತ್ತೆ ಸಾಬೀತುಪಡಿಸಿದ್ದಾರೆ.
ರವಿಚಂದ್ರನ್ ಇರುವಷ್ಟು ಕಾಲ ರೆಟ್ರೋ ಸ್ಟೈಲ್ ನಲ್ಲಿ ಚೆನ್ನಾಗ್ ಕಾಣ್ತಾರೆ. ರಮೇಶ್ ಅರವಿಂದ್ ಖಡಕ್ ಮೇಷ್ಟ್ರು ಆಗಿ ಇಷ್ಟ ಆಗ್ತಾರೆ. ಹೀಗೂ ಮಾಡಬಲ್ಲೆ ಅನ್ನೋದನ್ನು ತೋರಿಸಿದ್ದಾರೆ. ಶಿಲ್ಪಾಶೆಟ್ಟಿ ಗ್ಲಾಮರ್ ಇನ್ನೂ ಮಾಸಿಲ್ಲ. ಸತ್ಯ ಪಾತ್ರದಲ್ಲಿ ಖಡಕ್ ಹೆಣ್ಣಾಗಿ ಗಮನಸೆಳೆಯುತ್ತಾರೆ. ಇನ್ನು ರೀಷ್ಮಾ ಗಂಡುಬೀರಿಯಾಗಿ ಇಷ್ಟ ಆಗುತ್ತಾರೆ. ಉಳಿದಂತೆ ರವಿಶಂಕರ್, ಮುನಿ, ಯಶ್ ಶೆಟ್ಟಿ , ದೊಡ್ಡಣ್ಣ ಎಲ್ಲರೂ ಗಮನ ಸೆಳೆಯುತ್ತಾರೆ. ಕೊನೆಯಲ್ಲಿ ಸುದೀಪ್ ಬಂದು ಶಿಳ್ಳೆ, ಚಪ್ಪಾಳೆಗೆ ಕಾರಣ ಆಗ್ತಾರಷ್ಟೇ. ಅರ್ಜುನ್ ಜನ್ಯ ಸಂಗೀತದಲ್ಲಿ ಇವನ್ಯಾರೋ ಹಾಗು ಸೆಟ್ ಆಗಲ್ಲ ನಂಗು‌ ನಿಂಗು ಹಾಡುಗಳು ಗುನುಗುವಂತಿವೆ. ವಿಲಿಯಮ್ ಡೇವಿಡ್ ಕ್ಯಾಮರಾ ಕೈಚಳಕದಲ್ಲಿ ಕಾಳಿದಾಸನ ಸೊಬಗಿದೆ.

Related Posts

error: Content is protected !!