ರುದ್ರಕಾಲದಲ್ಲಿ ದಿಗಂತ್: ಬಂಡೆ ಮಹಾಕಾಳಿ ದೇವಾಲಯದಲ್ಲಿ ಪೂಜೆ

ದಿಗಂತ್ ಅಭಿನಯದ “ರುದ್ರ ಕಾಲ” ಚಿತ್ರದ ಮುಹೂರ್ತ ಸಮಾರಂಭ ಬುಧವಾರ ಬೆಳಗ್ಗಿನ ಸುಮುಹೂರ್ತದಲ್ಲಿ ಬಂಡೆ ಮಹಾಕಾಳಿ ದೇವಸ್ಥಾನದಲ್ಲಿ ನೆರವೇರಿತು. ನಿರ್ದೇಶಕ ಯೋಗರಾಜ್ ಭಟ್ ಚಿತ್ರದ ಮೊದಲ ಸನ್ನಿವೇಶಕ್ಕೆ ಆರಂಭ ಫಲಕ ತೋರುವ ಮೂಲಕ ಚಾಲನೆ ನೀಡಿದರು. ನಿರ್ದೇಶಕ ರಾಜ್ ಗುರು ಕ್ಯಾಮೆರಾ ಚಾಲನೆ ಮಾಡಿದರು.

ಇದು ನನ್ನ ನಿರ್ದೇಶನದ ನಾಲ್ಕನೇ ಚಿತ್ರ ಎಂದು ಮಾತನಾಡಿದ ನಿರ್ದೇಶಕ ಗೋಪಿ, ನಾನು ತೆಲುಗಿನಲ್ಲಿ ಎರಡು, ಕನ್ನಡದಲ್ಲಿ ಒಂದು ಚಿತ್ರ ನಿರ್ದೇಶನ ಮಾಡಿದ್ದೇನೆ‌. “ರುದ್ರ ಕಾಲ” ನನ್ನ ನಿರ್ದೇಶನದ ನಾಲ್ಕನೇ ಚಿತ್ರ. ಈ ಚಿತ್ರ ಕೂಡ ಕನ್ನಡ ಹಾಗೂ ತೆಲುಗು ಭಾಷೆಗಳಲ್ಲಿ ನಿರ್ಮಾಣವಾಗುತ್ತಿದೆ. ಇದು ಕ್ರೈಮ್ ಥ್ರಿಲ್ಲರ್ ಹಾಗೂ ಫ್ಯಾಮಿಲಿ ಎಮೋಷನ್ ಕಥಾಹಂದರ ಹೊಂದಿರುವ ಚಿತ್ರ.

ಇತ್ತೀಚೆಗೆ ಖ್ಯಾತ ನಟಿ ಸಮಂತ ನಮ್ಮ ಚಿತ್ರದ ಶೀರ್ಷಿಕೆ ಅನಾವರಣ ಮಾಡಿಕೊಟ್ಟಿದ್ದರು. ನನ್ನ ಸಹೋದರ ರಮೇಶ್ ಅವರೆ ಈ ಚಿತ್ರಕ್ಕೆ ಕಥೆ ಬರೆದಿದ್ದಾರೆ. ದಿಗಂತ್ ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳಲಿದ್ದಾರೆ. “ಅಧ್ಯಕ್ಷ” ಚಿತ್ರದ ನಾಯಕಿ ಹೆಬಾ ಪಟೇಲ್ ಬಹಳ ವರ್ಷಗಳ ನಂತರ ಈ ಚಿತ್ರದಲ್ಲಿ ನಟಿಸುತ್ತಿದ್ದಾರೆ. ನಟಿ ವಂಶಿ, ನಟ ಗೋವಿಂದೇ ಗೌಡ ಮುಂತಾದವರು ತಾರಾಬಳಗದಲ್ಲಿದ್ದಾರೆ‌.

ಕ್ರಿಸ್ಟೋಫರ್ ಜೋಸೆಫ್ ಛಾಯಾಗ್ರಹಣ, ರುದ್ರ ಮಾಸ್ಟರ್ ನೃತ್ಯ ನಿರ್ದೇಶನ ಹಾಗೂ ಚನ್ನಯ್ಯ ಅವರ ಸಾಹಸ ನಿರ್ದೇಶನವಿರುವ ಈ ಚಿತ್ರವನ್ನು ರಮೇಶ್ ನಾಯ್ಕ ಅವರು ನಿರ್ಮಿಸುತ್ತಿದ್ದಾರೆ. ರಂಜಿತ ನವೀನ್ ಸಹ ನಿರ್ಮಾಪಕರು. ಮೇ ತಿಂಗಳಲ್ಲಿ ಬೆಂಗಳೂರಿನಲ್ಲೇ ಈ ಚಿತ್ರದ ಚಿತ್ರೀಕರಣ ಆರಂಭವಾಗಲಿದೆ. ಚಿತ್ರಕ್ಕೆ ಚಾಲನೆ ನೀಡಿದ ಯೋಗರಾಜ್ ಭಟ್ ಹಾಗೂ ರಾಜ್ ಗುರು ಅವರಿಗೆ ಧನ್ಯವಾದ ಎಂದರು.

ನಾನು ಕಳೆದವರ್ಷ ಎರಡು ಹೊಸಚಿತ್ರಗಳನ್ನು ಒಪ್ಪಿಕೊಂಡಿದ್ದೆ. ಆದರೆ ಚಿತ್ರರಂಗದ ಈಗಿನ ಪರಿಸ್ಥಿತಿ ನೋಡಿ ಅವರು ಇನ್ನೂ ಚಿತ್ರ ಆರಂಭ ಮಾಡಿಲ್ಲ. ಆದರೆ ಈ ಚಿತ್ರದ ನಿರ್ಮಾಪಕ ರಮೇಶ್ ನಾಯ್ಕ ಅವರು “ರುದ್ರ ಕಾಲ” ಚಿತ್ರವನ್ನು ಆರಂಭ ಮಾಡಿದ್ದಾರೆ. ಇದೊಂದು ಕ್ರೈಮ್ ಥ್ರಿಲ್ಲರ್ ಜೊತೆಗೆ ಕೌಟುಂಬಿಕ ಕಥಾಹಂದರ ಹೊಂದಿರುವ ಚಿತ್ರ‌‌. ರಮೇಶ್ ಅವರು ಒಳ್ಳೆಯ ಕಥೆ ಬರೆದಿದ್ದಾರೆ.

ನಿರ್ದೇಶಕ ಗೋಪಿ ಅವರು ಕಥೆ ಹೇಳುವಾಗಲೇ ನನಗೆ ಕಥೆ ಬಹಳ ಇಷ್ಟವಾಯಿತು‌. ನಾನು ಈವರೆಗೂ ಮಾಡಿರದ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದೇನೆ. ಯೋಗರಾಜ್ ಭಟ್ ಅವರು ಬಂದು ಚಿತ್ರಕ್ಕೆ ಚಾಲನೆ ನೀಡಿದ್ದು ಬಹಳ ಖುಷಿಯಾಗಿದೆ ಎಂದು ನಾಯಕ ದಿಗಂತ್ ತಿಳಿಸಿದರು.

“ಅಧ್ಯಕ್ಷ” ನಂತರ ಹತ್ತು ವರ್ಷಗಳ ಬಳಿಕ ನಾನು ಈ ಚಿತ್ರದಲ್ಲಿ ನಟಿಸುತ್ತಿದ್ದೇ‌ನೆ. ಆ ಚಿತ್ರಕ್ಕೆ ಕನ್ನಡಿಗರು ತೋರಿದ ಪ್ರೋತ್ಸಾಹ ಈ ಚಿತ್ರಕ್ಕೂ ಮುಂದುವರೆಯಲಿ ಎಂದರು ನಾಯಕಿ ಹೆಬಾ ಪಟೇಲ್.
ನಿರ್ದೇಶಕ ಗೋಪಿ ಅವರು ಹೇಳಿದ ಕಥೆ ಇಷ್ಟವಾಯಿತು. ದಿಗಂತ್ ಅವರೆ ಈ ಚಿತ್ರಕ್ಕೆ ಸೂಕ್ತ ನಾಯಕ ಎನಿಸಿತು. ಇಂದು ನಮ್ಮ ಚಿತ್ರದ ಮುಹೂರ್ತ ಸಮಾರಂಭ ನಡೆದಿದೆ. ಆಗಮಿಸಿದ ಗಣ್ಯರಿಗೆ ಹಾಗೂ ಚಿತ್ರತಂಡದವರಿಗೆ ಧನ್ಯವಾದ ಎಂದರು ನಿರ್ಮಾಪಕ ರಮೇಶ್ ನಾಯ್ಕ. ಸಹ ನಿರ್ಮಾಪಕಿ ರಂಜಿತ ನವೀನ್ ಮಾತನಾಡಿ, ನಮ್ಮ ಹೊಸಚಿತ್ರಕ್ಕೆ ನಿಮ್ಮೆಲ್ಲರ ಪ್ರೋತ್ಸಾಹವಿರಲಿ ಎಂದರು.


ಕಥೆಯ ಬಗ್ಗೆ ರಮೇಶ್ ಮಾಹಿತಿ ನೀಡಿದರು. ಕಾರ್ಯಕಾರಿ ನಿರ್ಮಾಪಕ ಶಿವರಾಜ್, ನಟಿ ವಂಶಿ, ನಟ ಗೋವಿಂದೇಗೌಡ, ಛಾಯಾಗ್ರಾಹಕ ಕ್ರಿಸ್ಟೋಫರ್ ಜೋಸೆಫ್, ಸಾಹಸ ನಿರ್ದೇಶಕ ಚನ್ನಯ್ಯ ಮುಂತಾದವರು ಪತ್ರಿಕಾಗೋಷ್ಠಿಯಲ್ಲಿ ಉಪಸ್ಥಿತರಿದ್ದರು.

Related Posts

error: Content is protected !!