ಚಿತ್ರ ವಿಮರ್ಶೆ: ಜಾಲಿಯಾಗಿ ನೋಡಲು ಅಪಾಯವಿಲ್ಲ!

ರೇಟಿಂಗ್: 3.5/5

ಚಿತ್ರ: ಅಪಾಯವಿದೆ ಎಚ್ಚರಿಕೆ
ನಿರ್ದೇಶಕ: ಅಭಿಜಿತ್ ತೀರ್ಥಹಳ್ಳಿ
ನಿರ್ಮಾಣ: ವಿ.ಜಿ.ಮಂಜುನಾಥ್, ಪೂರ್ಣಿಮಾ ಎಂ.ಗೌಡ
ತಾರಾಗಣ: ವಿಕಾಸ್ ಉತ್ತಯ್ಯ, ಅಶ್ವಿನ್ ಹಾಸನ್, ರಾಧಾ ಭಗವತಿ, ರಾಘವ್ ಕೊಡಚಾದ್ರಿ, ಮಿಥುನ್ ತೀರ್ಥಹಳ್ಳಿ, ಹರಿಣಿ, ಲಂಕೇಶ್ ರಾವಣ, ಕುಮಾರ್ ಶಿವಮೊಗ್ಗ ಇತರರು.

ಜೀವನದಲ್ಲಿ ಹಣವೇ ಮುಖ್ಯ. ಹಣ ಇಲ್ಲದಿದ್ದರೆ ಬದುಕೇ ಬರಡು. ಉದ್ಯೋಗ ಇರದ ಮೂವರು ಹುಡುಗರು ಹಣ ಮಾಡಬೇಕು ಅಂತ ನಿರ್ಧರಿಸಿ ಕಗತ್ತಲ ಕಾನನದಲ್ಲಿರೋ ಗಂಧದ ಮರ ಕಡಿಯೋಕೆ ಹೊರಡುವ ಕಥೆಯೇ ಒಂದು ರೋಚಕ. ಲೈಫಲ್ಲಿ ಹಣ ಮಾಡಬೇಕು ಅಂತ ಡಿಸೈಡ್ ಮಾಡುವ ಮೂವರು ಯುವಕರು ಕತ್ತಲ ಕಾಡೊಳಗೆ ಹೋಗಿ ಗಂಧದ ಮರ ಕಡಿದು ತರುತ್ತಾರಾ ಅಥವಾ ಇಲ್ಲವಾ ಅನ್ನುವ ಕುತೂಹಲವಿದ್ದರೆ ಮಿಸ್ ಮಾಡದೆ ಒಂದೊಮ್ಮೆ ಈ ಸಿನಿಮಾ ನೋಡಬಹುದು.

ಇತ್ತೀಚೆಗೆ ಬರುವ ಕಥೆಗಳಲ್ಲಿ ಅದಿಲ್ಲ, ಇದು ಮಿಸ್ ಆಗಿದೆ, ಅದೊಂದಷ್ಟು ಬೇಕಿತ್ತು, ಇದು ಬೇಡವಾಗಿತ್ತು ಅನ್ನುವ ಮಾತುಗಳೇ ಹೆಚ್ಚಾಗಿ ಕೇಳಿಬರುತ್ತಿದ್ದವು. ಆದರೆ, ಈ ಸಿನಿಮಾದೊಳಗಿನ ಕಥೆಯಲ್ಲಾಗಲಿ, ನಿರೂಪಣೆಯಲ್ಲಾಗಲಿ ಅಥವಾ ಚಿತ್ರಕಥೆಯಲ್ಲಾಗಲಿ ಯಾವುದೂ ಹೆಚ್ಚೆನಿಸಿಲ್ಲ. ಯಾವುದೂ ಕಮ್ಮಿ ಅನಿಸಿಲ್ಲ. ಎಷ್ಟು ಬೇಕೋ, ಏನು ಬೇಕೋ ಅದನ್ನು ಹೇಳುವ ಮೂಲಕ ನೋಡುಗರನ್ನು ಹಿಡಿದಿಟ್ಟುಕೊಂಡು ಸುಮ್ಮನೆ ಸಿನಿಮಾ ನೋಡುವಂತೆ ಮಾಡುವ ಗುಣ ಈ ಚಿತ್ರದಲ್ಲಿದೆ. ಸ್ವಲ್ಪ ಗಂಭೀರತೆಗೆ ದೂಡುವ ಈ ಕಥೆಯಲ್ಲಿ ಮಜವೆನಿಸುವ ಹಲವು ರೂಪಕಗಳಿವೆ. ಒಂದಷ್ಟು ರೋಚಕ ಎನಿಸುವ ಸಂಗತಿಗಳಿವೆ. ಬೆಚ್ಚಿಬೀಳಿಸುವ ದೃಶ್ಯಗಳೂ ಇವೆ. ಅವೆಲ್ಲವನ್ನು ಅನುಭವಿಸುವ ಆಸೆ ಇದ್ದರೆ, ಚಿತ್ರ ನೋಡಿ ಹೊರಬರಬಹುದು.

ತೀರಾ ಸರಳ ಕಥೆ ಇದು. ಹಾಗಂತ ಒಂದೇ ಸಮನೆ ನೋಡಿಸಿಕೊಂಡು ಹೋಗುತ್ತೆ ಅಂತ ಹೇಳುವುದಿಲ್ಲ. ಮೊದಲರ್ಧ ಅತ್ತಿತ್ತ ಓಡಾಡಿಸಿಕೊಂಡೇ ಸಾಗುವ ಈ ಸಿನಿಮಾ, ದ್ವಿತಿಯಾರ್ಧದಲ್ಲಿ ಸಾಕಷ್ಟು ಗಂಭೀರತೆ ಪಡೆದುಕೊಳ್ಳುತ್ತೆ. ಎಷ್ಟರಮಟ್ಟಿಗೆ ಅಂದರೆ, ನೋಡುಗರ ಕಣ್ಣು ತದೇಕಚಿತ್ತದಿಂದ ಇರುವಷ್ಟು, ಮನಸ್ಸು ಮೌನವಾಗಿರುವಷ್ಟು, ಕಿವಿ ಅದೇನನ್ನೋ ಆಲಿಸುವಷ್ಟು. ನೋಡುವ ಮನಸ್ಸುಗಳಿಗೆ ಅಲ್ಲಲ್ಲಿ ಕಚಗುಳಿಯ ದೃಶ್ಯಗಳಿವೆ, ಮಾತುಗಳಿವೆ. ಹಾಗೆಯೇ, ಒಮ್ಮೊಮ್ಮೆ ಬೆಚ್ಚಿಬೀಳಿಸುವಂತಹ ದೃಶ್ಯಗಳು ಎರಗುತ್ತವೆ. ಅದೆಲ್ಲೋ ಕೇಳಿದ ದೃಶ್ಯಗಳು ಎದುರಾಗುತ್ತವೆ. ಏನೇನೋ ಅಂದುಕೊಂಡು ನೋಡುವ ಮನಸ್ಸುಗಳನ್ನು ಆಗಾಗ ಭಯ ಹುಟ್ಟಿಸುವ ಸನ್ನಿವೇಶಗಳು ರಾಚುತ್ತವೆ. ಹಾಗಾಗಿ ಈ ಚಿತ್ರ ಒಂದಷ್ಟು ಖುಷಿ ಕೊಡುತ್ತೆ, ಮತ್ತಷ್ಟು ಭಯ ಹುಟ್ಟಿಸುತ್ತೆ. ಎಚ್ಚರಿಕೆಯಿಂದ ನೋಡಿದವರಿಗೂ ಒಮ್ಮೊಮ್ಮೆ ಢವ ಢವ ಎನಿಸದಿರದು.

ನಿರ್ದೇಶಕರ ಕಥೆ ವಿಶೇಷವಾಗಿದೆ. ನಿರೂಪಣೆ ಶೈಲಿ ಇಷ್ಟವಾಗುತ್ತೆ. ಚಿತ್ರಕಥೆಯಲ್ಲಿ ಒಂದಷ್ಟು ಬಿಗಿ ಹಿಡಿತ ಇದ್ದಿದ್ದರೆ, ಇನ್ನಷ್ಟು ಭಯಾನಕವಾಗಿ ಸಿನಿಮಾವನ್ನು ಕಟ್ಟಿಕೊಡಬಹುದಿತ್ತು. ಇದನ್ನು ಥ್ರಿಲ್ಲರ್ ಎನ್ನಬೇಕೋ, ಹಾರರ್ ಎನ್ನಬೇಕೋ, ಕಾಮಿಡಿ ಎನ್ನಬೇಕೋ ಎಂಬ ಕನ್ ಫ್ಯೂಸ್ ನೋಡುಗರಿಗಿದ್ದರೂ, ಒಂದೊಳ್ಳೆಯ ಮನರಂಜನೆ ಸಿನಿಮಾ ಅಂತ ಸಾಬೀತುಪಡಿಸುತ್ತದೆ. ಮೊದಲರ್ಧ ಇನ್ನಷ್ಟು ಬಿಗಿ ಬೇಕಿತ್ತು. ಸಿನಿಮಾದಲ್ಲಿ ಮಜ ಇರೋದೇ ದ್ವಿತಿಯಾರ್ಧದಲ್ಲಿ. ಅದನ್ನು ಹೇಳುವುದಕ್ಕಿಂತ ನೋಡುವುದೇ ಒಳಿತು.

ನಿರ್ದೇಶಕರಿಗೆ ನೋಡುಗರ ನಾಡಿಮಿಡಿತದ ಅರಿವಿದೆ. ಆ ಕಾರಣಕ್ಕೆ ಅವರಿಲ್ಲಿ ಸರಳ ಕಥೆಗೆ ಹಾರರ್ ಟಚ್ ಮಾಡಿದ್ದಾರೆ. ಅದು ಸುಮ್ಮನೆ ನೋಡಿಸಿಕೊಂಡು ಹೋಗುತ್ತೆ. ಅವರ ಜಾಣತನದ ಕೆಲಸಕ್ಕೆ ಆ ದೊಡ್ಡ ಕಾಡು, ಕತ್ತಲು, ಪಾತ್ರಗಳು, ಸಂಗೀತ, ಕ್ಯಾಮೆರಾ ಎಲ್ಲವೂ ಸಾಥ್ ಕೊಟ್ಟಿವೆ. ಹಾಗಾಗಿ ಸಿನಿಮಾ ರುಚಿಸುತ್ತಾ ಹೋಗುತ್ತೆ. ಇಂತಹ ಸಿನಿಮಾಗಳಿಗೆ ಕಥೆಗಿಂತ ದೃಶ್ಯಗಳು ಪ್ರಮುಖವಾಗಿ ಆಕರ್ಷಿಸಬೇಕು. ಜೊತೆಗೆ ಸಂಗೀತವೂ ಕೂಡ. ಅವೆರೆಡು ಇಲ್ಲಿ ಮೇಳೈಸಿವೆ. ಒಂದು ಹಾರರ್ ಫೀಲ್ ಕಟ್ಟಿಕೊಡುವ ಕೆಸಲ ಸುಲಭವಲ್ಲ. ಅದನ್ನು ನಿರ್ದೇಶಕರು ಪರಿಪೂರ್ಣವಾಗಿ ಕಟ್ಟಿಕೊಡುವ ಮೂಲಕ ನೋಡುಗರಲ್ಲಿ ಒಂದಷ್ಟು ಥ್ರಿಲ್ ಕೊಡುತ್ತಾ ಹೋಗುತ್ತಾರೆ. ಹಾಗಾಗಿ ಸಿನಿಮಾ ನೋಡುವ ಮನಸ್ಸುಗಳಿಗೆ ಎಲ್ಲೂ ಬೋರ್ ಎನಿಸೋದಿಲ್ಲ.

ಕಥೆ ತುಂಬಾನೇ ಸಿಂಪಲ್. ಉದ್ಯೋಗ ಇರದ ಮೂವರು ಗೆಳೆಯರು, ಸದಾ ಕುಡಿಬೇಕು, ಲೈಫ್ ಎಂಜಾಯ್ ಮಾಡಬೇಕು ಅದಷ್ಟೇ ಬದುಕು ಅಂದುಕೊಂಡವರು. ಆದರೆ, ಬದುಕಲು ಹಣ ಬೇಕು ಅದಕ್ಕೆ ಕಂಡುಕೊಳ್ಳುವ ದಾರಿ ಹಲವು. ಒಂದು ವಿಚಿತ್ರ ಸನ್ನಿವೇಶದಲ್ಲಿ ಅವರು ಕಾಡಿಗೆ ಹೋಗುವ ಮನಸ್ಸು ಮಾಡ್ತಾರೆ. ಅಲ್ಲಿ ಅಚ್ಚರಿಯ ಬೆಳವಣಿಗೆ ಕಾಣುತ್ತಾರೆ. ಕಂಡರಿಯದ ದೃಶ್ಯಗಳು ಎದುರಾಗುತ್ತವೆ. ಅವರು ಕಾಡಿಗೆ ಹೋಗಿದ್ದು ಯಾಕೆ, ಅಲ್ಲಿ ಅವರನ್ನು ಆವರಿಸಿದ್ದು ಏನು? ಮುಂದೆ ಅವರು ಅಂದುಕೊಂಡಿದ್ದನ್ನು ಸಾಧಿಸುತ್ತಾರಾ? ಇದು ಕಥೆ. ಈ ಕಥೆಯ ಜಾಡು ಹಿಡಿದು ಹೋಗುವ ಮನಸ್ಸಿದ್ದರೆ ಮುಲಾಜಿಲ್ಲದೆ ಬಂದು ಸಿನಿಮಾ ನೋಡಬಹುದು. ನೋಡುವ ಅಷ್ಟೂ ಗಂಟೆಗಳು ಕೂಡ ಮೋಸ ಆಗುವುದಿಲ್ಲ ಎಂಬ ಗ್ಯಾರಂಟಿಯನ್ನು ಸಿನಿಮಾ ಕೊಡುತ್ತದೆ.

ಸಿನಿಮಾದಲ್ಲಿ ಒಬ್ಬೊಬ್ಬರದ್ದು ಒಂದೊಂದು ರೀತಿಯ ಪಾತ್ರ. ಎಲ್ಲಾ ಪಾತ್ರಗಳೂ ಇಲ್ಲಿ ಗಮನಸೆಳೆಯುತ್ತವೆ. ಮುಖ್ಯವಾಗಿ ವಿಕಾಸ್ ಉತ್ತಯ್ಯ ತಮ್ಮ ಪಾತ್ರದ ಮೂಲಕ ಮೆಚ್ಚುಗೆಯಾಗುತ್ತಾರೆ. ಮಿಥುನ್ ತೀರ್ಥಹಳ್ಳಿ ನೋಡುಗರನ್ನೂ ಗಾಬರಿಪಡಿಸುತ್ತಾರೆ. ರಾಘವ್ ಕೊಡಚಾದ್ರಿ ಪಾತ್ರಕ್ಕೆ ಮೋಸ ಮಾಡಿಲ್ಲ. ಇಲ್ಲಿ ಮೂವರಿಗೂ ಒಂದೊಂದು ವಿಭಿನ್ನ ಪಾತ್ರಗಳಿವೆ. ಅದನ್ನು ಅವರು ಸರಿಯಾಗಿಯೇ ನಿರ್ವಹಿಸಿದ್ದಾರೆ. ಇನ್ನು, ಪ್ರಮುಖವಾಗಿ ಸಿನಿಮಾದ ಆಕರ್ಷಣೆ ಅಂದರೆ ಅದು ಅಶ್ವಿನ್ ಹಾಸನ್. ಅವರಿಲ್ಲಿ ವಿಭಿನ್ನವಾಗಿ ಕಾಣಿಸಿಕೊಂಡಿದ್ದಾರೆ. ಅವರೇ ಸಿನಿಮಾದ ತಿರುವು ಅನ್ನಬಹುದು. ಅವರ ಪಾತ್ರದಲ್ಲಿ ಧಮ್ ಇದೆ. ಖಡಕ್ ಅಭಿನಯವೂ ತುಂಬಿದೆ. ಇನ್ನು, ರಾಧಾ ಪಾತ್ರ ಕೂಡ ಇರುವಷ್ಟು ಕಾಲ ಇಷ್ಟವಾಗುತ್ತದೆ. ಹರಿಣಿ ಪಾತ್ರ ಕೂಡ ಗಮನಸೆಳೆಯುತ್ತೆ. ಇನ್ನು, ಆಗಾಗ ಕಾಣಿಸಿಕೊಳ್ಳುವ ಕೆಲ ಪಾತ್ರಗಳು ಕಥೆಗೆ ಪೂರಕವಾಗಿವೆ.

ಇಂತಹ ಸಿನಿಮಾಗಳಿಗೆ ತಾಂತ್ರಿಕತೆ ಮುಖ್ಯವಾಗಿ ಬೇಕು. ಅದಿಲ್ಲಿ ಮಾತಾಡುವಂತಿದೆ. ಸುನಾದ್ ಗೌತಮ್ ಅವರ ಸಂಗೀತ ಇಲ್ಲಿ ಚೆನ್ನಾಗಿಯೇ ಮಾತಾಡಿದೆ. ಅದು ನೋಡುಗರನ್ನು ಬೆಚ್ಚಿಬೀಳುವಷ್ಟರ ಮಟ್ಟಿಗೆ. ಸುನಾದ್ ಅವರ ಕ್ಯಾಮೆರಾ ಕೈಚಳಕ ಕೂಡ ಸೊಗಸಾಗಿದೆ. ಒಟ್ಟಾರೆ, ಈ ಸಿನಿಮಾವನ್ನು ಜಾಲಿಯಾಗಿ ನೋಡೋಕೆ ಯಾವುದೇ ಅಪಾಯವಂತೂ ಇಲ್ಲ.

Related Posts

error: Content is protected !!