ಚಿತ್ರ ವಿಮರ್ಶೆ: ರೇಟಿಂಗ್ 3.5/5
ಚಿತ್ರ: #ಪಾರು ಪಾರ್ವತಿ
ನಿರ್ಮಾಣ : ಪಿ.ಬಿ.ಪ್ರೇಮ್ ನಾಥ್
ನಿರ್ದೇಶನ : ರೋಹಿತ್ ಕೀರ್ತಿ
ತಾರಾಗಣ: ದೀಪಿಕಾ ದಾಸ್, ಪೂನಂ, ಫವಾಜ್ ಅಶ್ರಫ್ ಇತರರು.
ಎಲ್ಲಿ ಬೇಕೋ ಅಲ್ಲಿ ನುಗ್ಗೋ ಕಾರು. ಅದರ ಮೇಲೊಂದು ಸ್ಟೈಲಿಶ್ ಬುಲೆಟ್. ಆ ಕಾರಲ್ಲಿ ಉತ್ಸಾಹ ತುಂಬಿದ 60ರ ಯುವತಿ! ಜೊತೆಗೊಬ್ಬ ಜೊತೆಗಾತಿ. ಅವರಿಬ್ಬರ ಸುಂದರ ಪಯಣ. ಖುಷಿ, ದುಃಖ, ನೋವು, ನಲಿವು, ಅದಮ್ಯ ಉತ್ಸಾಹದ ಬದುಕು ಇದಿಷ್ಟೂ ಈ ಸಿನಿಮಾದ ಹೈಲೆಟ್.
ಒಂದೇ ಮಾತಲ್ಲಿ ಹೇಳುವುದಾದರೆ ಬದುಕು ಮುಗಿದೇ ಹೋಯ್ತು. ನಾಲ್ಕು ಗೋಡೆ ನಡುವಿನ ಜೀವನ ಅಷ್ಟೇ ಅಂದುಕೊಂಡ ಮನಸುಗಳೊಮ್ಮೆ ಈ ಚಿತ್ರದೊಳಗಿನ ಆಶಯ ನೋಡಬೇಕು. ಇಲ್ಲಿ ಬದುಕಿನ ಪ್ರೀತಿ ಇದೆ, ನಂಬಿಕೆ ಇದೆ, ಕನಸಿನ ಸಾಕಾರವಿದೆ, ಆತ್ಮ ವಿಶ್ವಾಸವೂ ಇದೆ. ಎಲ್ಲಕ್ಕಿಂತ ಹೆಚ್ಚಾಗಿ ಇರುವುದೊಂದು ಬದುಕು ಪರಿಪೂರ್ಣವಾಗಿಸಿಕೊಳ್ಳಬೇಕು ಅನ್ನೋ ಅರ್ಥವಿದೆ.

ನಿತ್ಯ ಜಂಜಾಟದ ಬದುಕಿಗೆ ರೋಸಿ ಹೋದ ಜೀವಕ್ಕೆ ತನ್ನದೇ ಆದ ಕನಸಿದೆ. ಮನಸ್ಸಿಗೆ ಬಂದಂತೆ ಪುಟಿದೇಳಬೇಕೆಂಬ ಆಸೆ ಇದೆ. ಮನೆಯೊಳಗಿನ ಯಾತನಮಯ ಬದುಕಿಂದಾಚೆಗೆ ಬರಬೇಕೆಂಬ ತುಡಿತವಿದೆ. ಈ ಕಥಾ ನಾಯಕಿ ಪಾರ್ವತಿ ಕೂಡ ತನ್ನಿಚ್ಛೆಯಂತೆ ಹೊರ ಜಗತ್ತಿಗೆ ಮೈವೊಡ್ಡಿ ನಿಲ್ಲುತ್ತಾಳೆ. ಆಕೆಯ ಕನಸುಗಳು ಗರಿಗೆದರುತ್ತವೆ. ಮನೆಯ ನರಕದಿಂದ ಹೊರ ಬರುವ ಪಾರ್ವತಿಗೆ ಇಷ್ಟದಂತೆ ಬದುಕಿ ಬಿಡುವ ಆಸೆ. ಅವಳಿಗೆ ಜೊತೆ ಆಗುವ ಪಾಯಲ್ ಅಲಿಯಾಸ್ ಪಾರು ಅನ್ನೋ ಸಾಹಸಿ ಹುಡುಗಿಯದ್ದೂ ಅದೇ ಹಾದಿ. ಇಬ್ಬರ ಪಯಣ ಕೂಡ ಹೊಸ ದಿಕ್ಕಿನತ್ತ ಸಾಗುತ್ತೆ.
ವಯಸ್ಸು ಅರ್ಧ ದಾಟಿದರೂ ಪಾರ್ವತಿಗೆ ಅದೇನೋ ಕೊರತೆ. ಆಕೆಗೆ ಬೇಕಿದ್ದು ಹಿಡಿಯಷ್ಟು ಪ್ರೀತಿ. ಆ ಪ್ರೀತಿಯ ವಂಚಿತೆಯಾದ ಆಕೆಗೆ ಬದುಕೇ ಬೇಡ ಅನ್ನುವಷ್ಟು ಜಿಗುಪ್ಸೆ.

ಅಂತಹ ಸಂದರ್ಭದಲ್ಲೇ ಹೊಸ ಪಯಣದ ಹಾದಿ ಸಿಗುತ್ತೆ. ಪಾರು ಮತ್ತು ಪಾರ್ವತಿ ಇವರಿಬ್ಬರ ಗುಡ್ ಬ್ಯಾಡ್ ಜರ್ನಿಯಲ್ಲಿ ಹೊಸ ಜಗತ್ತು ತೆರೆಯುತ್ತಾ ಹೋಗುತ್ತೆ. ಇಲ್ಲಿ ಅವರಿಬ್ಬರ ಮಾತಿನ ಜುಗಲ್ ಬಂದಿ ಜೊತೆ ಬದುಕಿನ ಅರ್ಥ ಹುಡುಕುವ ಪ್ರಯತ್ನ ಸಣ್ಣ ಕೋಪ, ಮುನಿಸು, ತಮಾಷೆ, ಎಲ್ಲವೂ ನೋಡುಗರಲ್ಲಿ ಖುಷಿ ಕೊಡುತ್ತೆ.
ಅದೊಂದು ಭಾವುಕ ಪಯಣ ಅನ್ನಬಹುದು. ನೋಡುಗರಲ್ಲೂ ಕಣ್ಣು ಒದ್ದೆ ಆಗುವ ಅಂಶಗಳಿವೆ. ವಯಸ್ಸಾದರೂ ಚಿಮ್ಮುವ ಪಾರ್ವತಿಯ ಅದಮ್ಯ ಉತ್ಸಾಹ. ನೋವಿದ್ದರೂ ಹೇಳಲಾಗದೆ ನಗು ಹೊರಹಾಕುವ ಪಾಯಲ್ ಮನಸ್ಸು.

ನಾಲ್ಕು ಗೋಡೆಯ ಮಧ್ಯ ಸಿಗುವ ಕೃತಕ ಪ್ರೀತಿಗೆ ಬೆನ್ನು ಹಾಕಿ ಹೊರ ಜಗತ್ತಿಗೆ ಅಡಿ ಇಡುವ ಪಾರ್ವತಿಯ ಸಂಪ್ರೀತಿ,ಸಂಕಷ್ಟಗಳನ್ನು ಸೂಕ್ಷ್ಮವಾಗಿ ತೆರೆ ಮೇಲೆ ಇರಿಸುವಲ್ಲಿ ನಿರ್ದೇಶಕರು ಯಶಸ್ವಿ.
ಸಿನಿಮಾದಲ್ಲಿ ದೀಪಿಕಾ ದಾಸ್, ಪೂನಂ ಸರ್ ನಾಯಕ್ ಗಮನ ಸೆಳೆದರೆ, ಫವಾಜ್ ಅಶ್ರಫ್ ಇರುವಷ್ಟು ಸಮಯ ಇಷ್ಟ ಆಗುತ್ತಾರೆ. ಇನ್ನು ಕಾರು ಕೂಡ ಇಲ್ಲಿ ವಿಶೇಷ ಎನಿಸುತ್ತೆ.
ಅಬಿನ್ ರಾಜೇಶ್ ಅವರ ಕ್ಯಾಮರಾ ಕೈಚಳಕದಲ್ಲಿ ಇಂಡಿಯಾದ ಅದ್ಭುತ ತಾಣಗಳನ್ನು ಅಂದಗಾಣಿಸಿದೆ. ಹರಿ ಸಂಗೀತವೂ ಕಥೆಗೆ ಪೂರಕ. ಸಿ.ಕೆ.ಕುಮಾರ ಅವರ ಕತ್ತರಿ ಪ್ರಯೋಗ ಚಿತ್ರದ ವೇಗಕ್ಕೆ ಹೆಗಲು ನೀಡಿದೆ.