ಚಿತ್ರ: ಭುವನಂ ಗಗನಂ
ನಿರ್ಮಾಣ:ಎಂ.ಮುನೇಗೌಡ
ನಿರ್ದೇಶನ:ಗಿರೀಶ್ ಮೂಲಿಮನಿ
ತಾರಾಗಣ:ಪ್ರಮೋದ್, ಪೃಥ್ವಿ ಅಂಬರ್, ರೇಚಲ್ ಡೇವಿಡ್, ಶರತ್ ಲೋಹಿತಾಶ್ವ, ಅಚ್ಯುತ್ ಕುಮಾರ್, ಪೊನ್ನು ಅಶ್ವತಿ ಇತರರು.
ನೀವು ಎಲ್ಲಿಗೆ ಹೋಗೋದು?
ನಾನು ಕನ್ಯಾಕುಮಾರಿಗೆ ಹೋಗ್ತಾ ಇದೀನಿ…
ನಾನು ಅಲ್ಲಿಗೇ ಬರ್ತೀನಿ…
ಸಿನಿಮಾ ಶುರುವಾದ ಸ್ವಲ್ಪ ಹೊತ್ತಿಗೆ ಬರುವ ಆ ಇಬ್ಬರ ನಡುವಿನ ಸಂಭಾಷಣೆ ಇದು. ಅವರಿಬ್ಬರೂ ಕನ್ಯಾಕುಮಾರಿಯತ್ತ ಪಯಣ ಬೆಳೆಸುತ್ತಾರೆ. ಆ ಜರ್ನಿ ನಡುವೆ ಅವರಿಬ್ಬರ ಮಾತು, ತುಂಟತನ, ಎಮೋಷನ್, ನಗು, ಅಳು ಎಲ್ಲವೂ ಮೇಳೈಸುತ್ತಲೇ ನೋಡುಗರನ್ನು ಭಾವುಕತೆಗೆ ದೂಡುತ್ತಾ ಹೋಗುತ್ತೆ. ಸಿನಿಮಾದ ಕಥೆ ತುಂಬಾ ಸಿಂಪಲ್. ಆದರ, ಅದರ ಆಶಯ ಹೊಸದಾಗಿದೆ. ಪ್ರೀತಿ ಮಾಡುವುದು ದೊಡ್ಡದ್ದಲ್ಲ. ಅದನ್ನು ಕೊನೆಯವರೆಗೆ ಉಳಿಸಿಕೊಳ್ಳೋದು ದೊಡ್ಡದು ಅನ್ನುವ ಸಾರಾಂಶ ಇಲ್ಲಿದೆ. ಇದೊಂದು ಮನಸ್ಸಿಗೆ ನಾಟುವ ಲವ್ ಸ್ಟೋರಿ. ಇಲ್ಲಿ ಇಬ್ಬರು ಹೀರೋಗಳಿದ್ದಾರೆ. ಅವರಿಬ್ಬರಿಗೂ ಒಬ್ಬೊಬ್ಬ ನಾಯಕಿಯರಿದ್ದಾರೆ. ಇಬ್ಬರದೂ ಲವ್ ಸ್ಟೋರಿ ಇದೆ. ಆ ಎರಡು ಲವ್ ಸ್ಟೋರಿ ಟ್ರಾಕ್ ಮಾತ್ರ ಬೇರೆ ಬೇರೆ. ಕೊನೆಯವರೆಗೂ ಅವರಿಬ್ಬರ ಪ್ರೇಮಕಥೆ ಕಾಡುತ್ತೆ, ಅಲ್ಲಲ್ಲಿ ಅಳಿಸುತ್ತೆ, ಕೊಂಚ ಭಾವನಾಲೋಕಕ್ಕೆ ದೂಡುತ್ತೆ. ಅಷ್ಟಕ್ಕೂ ಅವರಿಬ್ಬರ ಲವ್ ಎಂಥದ್ದು ಅನ್ನುವುದಕ್ಕೆ ಒಮ್ಮೆ ಸಿನಿಮಾ ನೋಡಲ್ಲಡ್ಡಿಯಿಲ್ಲ.

ಇಲ್ಲಿ ಆಳವಾದ ಪ್ರೀತಿ ಇದೆ. ಒರಟುತನದೊಳಗಿನ ಮೃದುಧೋರಣೆಯ ಮನಸ್ಸಿದೆ. ಮುಗ್ಧತೆ ಇದೆ. ದಡ್ಡತನವಿದೆ. ಜಾಣತನವೂ ಇದೆ. ಒಟ್ಟಾರೆ. ಇಡೀ ಸಿನಿಮಾ ಮುದ ಕೊಡುವಂತಹ ವಾತಾವರಣ ಸೃಷ್ಟಿಸುತ್ತೆ ಅನ್ನುವುದರಲ್ಲಿ ಎರಡು ಮಾತಿಲ್ಲ. ಪ್ರೀತಿಯ ಕಥೆಗಳಿಗೆ ಅದರದ್ದೇ ಆದ ಶಕ್ತಿ ಇರುತ್ತೆ. ಅಂಥದ್ದೊಂದು ಶಕ್ತಿ, ಸೆಳೆತ ಈ ಕಥೆಯಲ್ಲಿದೆ. ನಿರ್ದೇಶಕರ ನಿರೂಪಣೆಯಲ್ಲಿ ಇನ್ನಷ್ಟು ಬಿಗಿ ಹಿಡಿತ ಬೇಕಿತ್ತು. ಅದನ್ನು ಹೊರತು ಪಡಿಸಿದರೆ ಚಿತ್ರಕಥೆಯ ವೇಗ ಸಿನಿಮಾವನ್ನು ನೋಡುವಂತೆ ಮಾಡಿದೆ. ಉಳಿದಂತೆ ಚಿತ್ರದುದ್ದಕ್ಕೂ ಬರುವ ಕೆಲ ಟ್ವಿಸ್ಟುಗಳು ಸಿನಿಮಾದ ಹೈಲೆಟ್ ಅನ್ನಬಹುದು. ಇಲ್ಲೂ ಕೆಲವು ಅನಗತ್ಯ ದೃಶ್ಯಗಳಿವೆ. ಅದನ್ನು ಬದಿಗೊತ್ತಿ ನೋಡಿದರೆ, ಸಿನಿಮಾ ಆಪ್ತವಾಗುತ್ತ ಹೋಗುತ್ತದೆ.
ಕಥೆ ಏನು?
ನಾಯಕ ಅಭಿ (ಪ್ರಮೋದ್) ಓದುವ ಕಾಲೇಜಿನಲ್ಲೇ ನಾಯಕಿ ರಚೇಲ್ ಡೇವಿಡ್ ಇರ್ತಾಳೆ. ಆಕೆಯನ್ನು ನೋಡಿದ ಕೂಡಲೇ ಅವನು ನೇರವಾಗಿ ಮದ್ವೆ ಆಗ್ತೀಯಾ ಅಂತ ಕೇಳ್ತಾನೆ. ಇಬ್ಬರ ನಡುವೆ ಪ್ರೀತಿ ಹುಟ್ಟುತ್ತೆ. ಅದು ಮದ್ವೆಗೂ ತಿರುಗುತ್ತೆ. ಎಲ್ಲಾ ಪ್ರೇಮಿಗಳ ಕಥೆಯಲ್ಲಿ ಅಪ್ಪಂದಿರೇ ವಿಲನ್. ಇಲ್ಲೂ ನಾಯಕಿಯ ಅಪ್ಪನೇ ವಿಲನ್. ಅವರ ವಿರೋಧದ ನಡುವೆಯೂ ಮದ್ವೆ ಆಗುತ್ತೆ. ಆ ಮದ್ವೆ ಕೊನೆಯವರೆಗೆ ಉಳಿಯುತ್ತಾ ಇಲ್ಲವಾ ಅನ್ನೋದೇ ಒಂದು ಕಥೆ. ಇದು ಒಂದು ಜೋಡಿಯ ಕಥೆಯಾದರೆ, ಇನ್ನೊಂದು ಜೋಡಿಯ ಕಥೆ ಇದಕ್ಕಿಂತಲೂ ಭಿನ್ನ. ಅವನ ಹೆಸರು ರಾಮ್. ತುಂಬ ಮುಗ್ಧ, ಒಂದು ರೀತಿ ಜಾಣದಡ್ಡ! ಬಾಲ್ಯದಲ್ಲಿ ಸಿಗುವ ಗೆಳತಿ ಜೊತೆ ಹೆಚ್ಚು ಒಡನಾಟ. ಯೌವ್ವನಕ್ಕೆ ಬರುವ ಹೊತ್ತಿಗೆ ಇಬ್ಬರ ನಡುವೆ ಚಿಗುರಿದ ಪ್ರೀತಿ. ಆ ಪ್ರೀತಿ ಮೇಲೆ ಒಬ್ಬನ ಕಣ್ಣು. ಈ ಮಧ್ಯೆ ಅವರಿಬ್ಬರ ಪ್ರೀತಿ ಉಳಿಯುತ್ತಾ ಇಲ್ಲವಾ ಅನ್ನೋದು ಕಥೆ. ಇಲ್ಲಿ ಎಮೋಷನಲ್ ಅಂಶಗಳು ತುಂಬಿರುವುದರಿಂದ ನೋಡುಗರ ಕಣ್ಣು ಒದ್ದೆ ಮಾಡುತ್ತದೆ. ಎಲ್ಲೋ ಒಂದು ಕಡೆ ಸಿನಿಮಾದ ವೇಗ ಕಮ್ಮಿ ಆಯ್ತು ಅನ್ನುವ ಹೊತ್ತಿಗೆ ಹಾಡು, ಫೈಟು ಎದುರಾಗಿ ವೇಗಮಿತಿ ಹೆಚ್ಚುತ್ತದೆ. ಒಂದು ನವಿರಾದ ಲವ್ ಸ್ಟೋರಿಯನ್ನು ತುಂಬಾ ಭಾವನಾತ್ಮಕವಾಗಿ ಕಟ್ಟಿಕೊಡುವ ಪ್ರಯತ್ನವನ್ನು ನಿರ್ದೇಶಕರು ಮಾಡಿದ್ದಾರೆ. ಎರಡು ಲವ್ ಸ್ಟೋರಿ ಇಲ್ಲಿದ್ದರೂ, ಎರಡಕ್ಕೂ ತನ್ನದೇ ಆದ ಗಟ್ಟಿತನವಿದೆ. ನೋಡುಗರನ್ನು ಅತ್ತಿತ್ತ ಅಲ್ಲಾಡಿಸದಂತೆ ನೋಡಿಸಿಕೊಂಡು ಹೋಗುವ ತಾಕತ್ತು ಈ ಸ್ಟೋರಿಗಿದೆ.
ಸಿನಿಮಾದಲ್ಲಿ ಪ್ರಮೋದ್ ರಗಡ್ ಆಗಿ ಕಾಣಿಸಿಕೊಂಡಿದ್ದಾರೆ. ಒರಟು ಪಾತ್ರವಾದರೂ, ಅಲ್ಲಲ್ಲಿ ಪಾಪ ಎನಿಸುವಷ್ಟರ ಮಟ್ಟಿಗೆ ಇಷ್ಟವಾಗುತ್ತಾರೆ. ಅವರ ಡೈಲಾಗ್ ಡಿಲವರಿ, ಬಾಡಿಲಾಂಗ್ವೇಜ್ ಎರಡರಲ್ಲೂ ಸೈ ಎನಿಸಿಕೊಂಡಿದ್ದಾರೆ. ಫೈಟ್ ವಿಚಾರದಲ್ಲಿ ಹಿಂದೆ ಬಿದ್ದಿಲ್ಲ. ಇನ್ನು ಪೃಥ್ವಿ ಅಂಬರ್ ಅವರ ಪಾತ್ರ ವಿಶೇಷ ಎನಿಸುತ್ತೆ. ಪೃಥ್ವಿ ಆ ಪಾತ್ರವನ್ನು ಜೀವಿಸಿದ್ದಾರೆ. ನೋಡುಗರಿಗೂ ಇಷ್ಟವಾಗುತ್ತಾರೆ. ಉಳಿದಂತೆ ರಚೇಲ್ ಡೇವಿಡ್ ಅಂದವಾಗಿರುವಷ್ಟೇ ಪಾತ್ರವನ್ನು ಕಟ್ಟಿಕೊಟ್ಟಿದ್ದಾರೆ. ಅಶ್ವತಿ ಪಾತ್ರದ ಮೂಲಕ ಗಮನಸೆಳೆಯುತ್ತಾರೆ. ಉಳಿದಂತೆ ಇಲ್ಲಿ ಶರತ್ ಲೋಹಿತಾಶ್ವ ಮತ್ತು ಅಚ್ಯುತ್ ಕುಮಾರ್ ಪಾತ್ರಕ್ಕೆ ನ್ಯಾಯ ಸಲ್ಲಿಸಿದ್ದಾರೆ.
ಸಿನಿಮಾದಲ್ಲಿ ಎರಡು ಹಾಡು ಗುನುಗುವಂತಿದೆ. ಹಿನ್ನೆಲೆ ಸಂಗೀತಕ್ಕಿನ್ನೂ ಧಮ್ ಇರಬೇಕಿತ್ತು. ಛಾಯಾಗ್ರಹಣದಲ್ಲಿ ಸೊಬಗಿದೆ.