ವಿಜಯ್ ಭರಮಸಾಗರ
ಚಿತ್ರ:ಗಜರಾಮ
ನಿರ್ದೇಶನ: ಸುನೀಲ್ ಕುಮಾರ್
ನಿರ್ಮಾಣ: ನರಸಿಂಹಮೂರ್ತಿ
ತಾರಾಗಣ: ರಾಜ್ ವರ್ಧನ್, ತಪಸ್ವಿನಿ ಪೊಣಚ್ಚ, ಸ್ವಾತಿ, ಶರತ್ ಲೋಹಿತಾಶ್ವ, ದೀಪಕ್, ಕಬೀರ್, ಬಲರಾಜವಾಡಿ ಇತರರು.
ನಾನು ಸವಾಲು ಹಾಕಲ್ಲ. ಸವಾಲು ಹಾಕಿದವರನ್ನ ಸೋಲಿಸೋವರೆಗೂ ಬಿಡೋದಿಲ್ಲ… ಈ ಸಿನಿಮಾ ನಾಯಕ ರಾಮ ಈ ಡೈಲಾಗ್ ಹೇಳುವ ಹೊತ್ತಿಗೆ ಅಲ್ಲೊಂದು ಅಖಾಡ ಸಿದ್ಧವಾಗಿರುತ್ತೆ. ಈ ಡೈಲಾಗ್ ಅರ್ಥ ಮಾಡಿಕೊಂಡವರಿಗೆ ಇದೊಂದು ಪಕ್ಕಾ ಕಮರ್ಷಿಯಲ್ ಸಿನಿಮಾ ಅನ್ನೋದು ಅರ್ಥವಾಗುತ್ತೆ. ಇದು ತೀರ ಸರಳ ಕಥೆ. ಹಾಗಂತ ಹಿಂದೆಂದೂ ಈ ರೀತಿಯ ಕಥೆಗಳು ಬಂದಿಲ್ಲ ಅಂದುಕೊಳ್ಳುವಂತಿಲ್ಲ. ಎಲ್ಲೋ ಒಂದಷ್ಟು ಬೇರೆ ಬೇರೆಯ ಛಾಯೆ ಅಲ್ಲಲ್ಲಿ ಕಾಣಸಿಗುತ್ತಾದರೂ, ಸಿನಿಮಾದ ನಿರೂಪಣೆ ಇಷ್ಟವಾಗುತ್ತೆ. ಕಥೆಯನ್ನು ಕಟ್ಟಿಕೊಟ್ಟಿರುವ ನಿರ್ದೇಶಕರ ಜಾಣತನ ಗಮನಸೆಳೆಯುತ್ತೆ. ಎರಡು ತಾಸು ಎಲ್ಲೂ ಬೋರ್ ಎನಿಸದೆ, ನೋಡುಗರನ್ನು ಹಿಡಿದಿಟ್ಟುಕೊಳ್ಳುವಲ್ಲಿ ಚಿತ್ರ ಯಶಸ್ವಿ ಅನ್ನಬಹುದು. ಕೆಲವು ದೃಶ್ಯಗಳು ಅನಗತ್ಯ ಎನಿಸುತ್ತವೆ. ಅದಕ್ಕೆ ಕತ್ತರಿ ಬಿದ್ದರೆ ಸಿನಿಮಾ ಇನ್ನಷ್ಟು ಸಲೀಸಾಗಿ ನೋಡಿಸಿಕೊಂಡು ಹೋಗುತ್ತೆ.

ನಿರ್ದೇಶಕರ ಮೊದಲ ಪ್ರಯತ್ನ ಇದಾಗಿರುವುದರಿಂದ ಸಣ್ಣ ಪುಟ್ಟ ದೋಷಗಳು ಸಹಜ. ಅವೆಲ್ಲವನ್ನು ಪಕ್ಕಕ್ಕಿಟ್ಟು ನೋಡುವುದಾದರೆ, ಒಂದೊಮ್ಮೆ ಸಿನಿಮಾ ನೋಡಲು ಅಡ್ಡಿಯಿಲ್ಲ. ಇಲ್ಲಿ ಪ್ರೀತಿ ಇದೆ. ತಾಯಿ ಸಂಬಂಧವಿದೆ. ಸಣ್ಣ ಅಪಾರ್ಥವಿದೆ. ಚೂರು ಗೆಳೆತನವಿದೆ. ಆಸೆ, ಕನಸು, ಗುರಿ ಇವೆಲ್ಲವೂ ಮೇಳೈಸಿ ಗಜರಾಮನಿಗೆ ಇನ್ನಷ್ಟು ಬಲ ಕೊ್ಟ್ಟಿವೆ ಎನ್ನಬಹುದು. ಮೊದಲರ್ಧ ಸಾಧನೆಯ ಬೆನ್ನೇರಿ ಹೊರಡುವ ನಾಯಕ, ದ್ವಿತಿಯಾರ್ಧ ಆ ಸಾಧನೆಯ ಹಿಂದೆ ಹೋಗೋದು ಬಿಟ್ಟು ಬೇರೆಡೆ ಮುಖ ಮಾಡುತ್ತಾನೆ. ಹಾಗಂತ ಅವನ ಬದುಕಿನ ಸಾಧನೆಗಿಂತಲೂ ಬೇರೆ ವಿಷಯ ದೊಡ್ಡದಾ ಅನ್ನುವ ಪ್ರಶ್ನೆ ಎದುರಾಗುತ್ತೆ. ಹಾಗಾದರೆ, ತನ್ನ ಗುರಿ ಬಿಟ್ಟು ಬೇರೆಲ್ಲೋ ಹೋಗುವ ಹೀರೋ, ತನ್ನ ಗುರಿ ತಲುಪುತ್ತಾನೋ ಇಲ್ಲವೋ ಅನ್ನೋದೇ ಕಥೆ. ಆ ಕುತೂಹಲವಿದ್ದರೆ ಸಿನಿಮಾ ನೋಡಬಹುದು.

ಆರಂಭದಲ್ಲಿ ಸಿನಿಮಾ ಟೇಕಾಫ್ ಆಗೋಕೆ ಕೊಂಚ ಸಮಯ ಪಡೆದುಕೊಳ್ಳುತ್ತೆ. ಎಲ್ಲೋ ಒಂದು ಕಡೆ ಸಿನಿಮಾ ವೇಗಮಿತಿ ಕಡಿಮೆ ಆಯ್ತು ಅಂದುಕೊಳ್ಳುತ್ತಿದ್ದಂತೆಯೇ ಒಂದಷ್ಟು ಫೈಟ್ ಮತ್ತು ಹಾಡು ಎದುರಾಗಿ ಸಿನಿಮ ಕಥೆಯ ಓಟ ತಹಬದಿಗೆ ಬಂದು ನಿಲ್ಲುತ್ತೆ. ಇಲ್ಲಿ ಪ್ರೀತಿಯ ಜೊತೆ ಫೈಟ್ ಸನ್ನಿವೇಶಗಳೇ ಹೆಚ್ಚಾಗಿ ಗಮನಸೆಳೆಯುತ್ತವೆ. ಎಷ್ಟು ಬೇಕೋ ಅಷ್ಟು ಹಾಸ್ಯವಿದೆ. ರುಚಿಗೆ ತಕ್ಕಷ್ಟು ಉಪ್ಪು ಹೇಗಿರಬೇಕೋ ಅಷ್ಟೇ ತಾಯಿ ಸೆಂಟಿಮೆಂಟ್ ಕೂಡ ಇದೆ. ಅದನ್ನು ಇನ್ನಷ್ಟು ಗಟ್ಟಿಗೊಳಿಸಲು ಸಾಧ್ಯವಿತ್ತು. ಉಳಿದಂತೆ ಇದೊಂದು ಕುಸ್ತಿಪಟುವಿನ ಕಥೆ. ಹಾಗಾಗಿ ಕುಸ್ತಿಯ ಅಖಾಡ, ಪೈಲ್ವಾನ್ ಗಳ ಅಬ್ಬರ, ಕುಸ್ತಿಯ ಚಾಂಪಿಯನ್ ಶಿಪ್ ಎಲ್ಲವೂ ಸಿನಿಮಾದ ತೂಕವನ್ನು ಹೆಚ್ಚಿಸಿದೆ. ಕಾಸು ಕೊಟ್ಟು ಒಳಬರುವ ಪ್ರೇಕ್ಷಕನಿಗೆ ಮೋಸವಂತೂ ಇಲ್ಲ. ಒಂದು ಮನರಂಜನೆಗೆ ಏನೆಲ್ಲಾ ಇರಬೇಕೋ ಅವೆಲ್ಲವೂ ಇಲ್ಲಿವೆ.

ಕಥೆ ಏನು?
ಅದೊಂದು ಗ್ರಾಮ. ಆ ಊರಲ್ಲೊಬ್ಬ ಗಟ್ಟಿಮುಟ್ಟಾದ ಯುವಕ. ಹೆಸರು ರಾಮ. ಅಮ್ಮ ಮಗನ ಬಾಂಧವ್ಯ ಜೊತೆ ಜೊತೆಗೆ ಅಲ್ಲಿ ಕುಸ್ತಿಯ ಛಾಯೆಯೂ ಇದೆ. ಆ ಊರಲ್ಲೊಬ್ಬ ಉಸ್ತಾದ್. ಗಟ್ಟಿಮುಟ್ಟಾದ ಯುವಕರ ತಂಡ ಕಟ್ಟಿಕೊಂಡು ಗರಡಿ ಮನೆಯಲ್ಲಿ ಕುಸ್ತಿ ಕಲಿಸಿಕೊಡುವಾತ. ಅಂತಹ ಗರಡಿ ನಡೆಸುವ ಉಸ್ತಾದ್ ಕಣ್ಣಿಗೆ ರಾಮ ಬೀಳುತ್ತಾನೆ. ರಾಮನ ಕುಸ್ತಿ ಹೇಗೆಂದರೆ, ಅವನು ಸುಮ್ನೆ ಅಖಾಡಕ್ಕೆ ಇಳಿಯೋದಿಲ್ಲ. ಅಖಾಡಕ್ಕಿಳಿದರೆ ಅವನೇ ಗೆಲುವಿನ ಪೈಲ್ವಾನ. ರಾಮ ಹೇಗೆಂದರೆ, ಬಾಲ್ಯದ ಗೆಳತಿಯನ್ನು ಯಾರು ನೋಡಬಾರದು, ಕೆಣಕಬಾರದು. ಹಾಗೇನಾದರೂ ಮಾಡಿದರೆ ಅಂತಹವರ ಪಾಲಿಗೆ ಅವನು ರಾಮನ ಬದಲು ರಾವಣ ಆಗುತ್ತಾನೆ. ಅತ್ತ ತನ್ನನ್ನು ಗೆಳತಿ ಪ್ರೀತಿಸುತ್ತಾಳೆ ಅಂದುಕೊಳ್ಳುವ ರಾಮನಿಗೆ ಬಿಗ್ ಶಾಕ್ ಆಗುತ್ತೆ. ಅದೇನೆಂಬುದನ್ನು ಸಿನಿಮಾದಲ್ಲಿ ನೋಡಬೇಕು. ಇನ್ನು, ಆ ಉಸ್ತಾದ್ ಗೆ ಒಂದು ಆಸೆ. ಒಮ್ಮೆ ನ್ಯಾಷನಲ್ ಚಾಂಪಿಯನ್ ಶಿಪ್ ನಲ್ಲಿ ತನ್ನ ಶಿಷ್ಯ ಗೆಲ್ಲಬೇಕು ಅನ್ನೋದು. ಅವನ ಆಸೆಯನ್ನು ಆ ಗಜರಾಮ ಈಡೇರಿಸುತ್ತಾನಾ ಇಲ್ಲವಾ ಅನ್ನೋದೇ ಸಸ್ಪೆನ್ಸ್.

ರಾಜವರ್ಧನ್ ಅವರ ಹಿಂದಿನ ಸಿನಿಮಾಗಳಿಗೆ ಹೋಲಿಸಿದರೆ ಈ ಸಿನಿಮಾದ ಪಾತ್ರದಲ್ಲಿ ಫೋರ್ಸ್ ಇದೆ. ಪಾತ್ರವನ್ನು ನಿರ್ವಹಿಸಿದ್ದರ ಹಿಂದಿನ ಶ್ರಮ ಎದ್ದು ಕಾಣುತ್ತೆ. ಗಜರಾಮನಾಗಿ ಅವರು ಇಷ್ಟವಾಗುತ್ತಾರೆ. ಥೇಟ್ ಕುಸ್ತಿಪಟುವಾಗಿಯೇ ಕಾಣುವ ರಾಜವರ್ಧನ್, ಡ್ಯಾನ್ಸ್ ಮತ್ತು ಫೈಟ್ ನಲ್ಲೂ ಗಮನಸೆಳೆದಿದ್ದಾರೆ. ತಪಸ್ವಿನಿ ಸಿಕ್ಕ ಪಾತ್ರಕ್ಕೆ ತೃಪ್ತಿ ಪಟ್ಟಿದ್ದಾರೆ. ಪಾತ್ರವನ್ನು ಇನ್ನಷ್ಟು ಚೆನ್ನಾಗಿ ಕಟ್ಟಿಕೊಡಬಹುದಿತ್ತು. ಶರತ್ ಅಶ್ವತ್ಥ್ ಉಸ್ತಾದ್ ಆಗಿ ಇಷ್ಟವಾಗುತ್ತಾರೆ. ಕಬೀರ್ ವಿಲನ್ ಆಗಿ ಅಬ್ಬರಿಸಿದರೆ, ದೀಪಕ್ ಖಡಕ್ ಪೊಲೀಸ್ ಅಧಿಕಾರಿಯಾಗಿ ಸೈ ಎನಿಸಿಕೊಂಡಿದ್ದಾರೆ. ಉಳಿದಂತೆ ಬರುವ ಪಾತ್ರಗಳು ನ್ಯಾಯ ಒದಗಿಸಿವೆ.
ಮನೋಮೂರ್ತಿ ಅವರ ಸಂಗೀತದಲ್ಲಿ ಎಲ್ಲಾ ಹೇಳಬೇಕಿದೆ ಹಾಡು ಮತ್ತೆ ಸಾರಾಯಿ ಶಾಂತಮ್ಮ ಈ ಎರಡು ಹಾಡುಗಳು ಗುನುಗುವಂತಿವೆ. ಕೆ.ಎಸ್. ಚಂದ್ರಶೇಖರ್ ಅವರ ಕ್ಯಾಮೆರಾ ಕೈಚಳಕದಲ್ಲಿ ಗಜರಾಮನ ಅಂದವಿದೆ.