ಚಿತ್ರ ವಿಮರ್ಶೆ
ವಿಜಯ್ ಭರಮಸಾಗರ
ಚಿತ್ರ : ರಾಜು ಜೇಮ್ಸ್ ಬಾಂಡ್
ನಿರ್ದೇಶನ: ದೀಪಕ್ ಮಧುವನಹಳ್ಳಿ
ನಿರ್ಮಾಣ: ಮಂಜುನಾಥ್ ವಿಶ್ವಕರ್ಮ, ಕಿರಣ್ ಭರ್ತೂರ್
ತಾರಾಗಣ: ಗುರುನಂದನ್, ಅಚ್ಯುತ್ ರಾವ್, ಚಿಕ್ಕಣ್ಣ, ರವಿಶಂಕರ್, ಮೃದುಲಾ, ಜೈ ಜಗದೀಶ್ ಇತರರು.
ಕನ್ನಡದಲ್ಲಿ ಈಗಾಗಲೇ ಅನೇಕ ಬಾಂಡ್ ಸಿನಿಮಾಗಳು ಬಂದಿವೆ. ಅವೆಲ್ಲಾ ಪಕ್ಕಾ ಬಾಂಡ್ ಛಾಯೆಯ ಸಿನಿಮಾಗಳು. ಆ ಸಾಲಿಗೆ ಈ ರಾಜು ಜೇಮ್ಸ್ ಬಾಂಡ್ ಕೂಡ ಸೇರಿಸಲು ಅಡ್ಡಿಯಿಲ್ಲ. ಆದರೆ, ಈ ಬಾಂಡ್ ಪಕ್ಕಾ ಲೋಕಲ್! ಹಾಗಂತ ತುಂಬಾ ಸೀರಿಯಸ್ ಜೇಮ್ಸ್ ಬಾಂಡ್ ಅಂತೂ ಅಲ್ಲ. ನೋಡುಗರನ್ನು ಮನರಂಜಿಸಿ, ಕಳಿಸುವ ಬಾಂಡ್ ಇವನು.
ಇಲ್ಲಿರುವ ಹೀರೋಗೆ ಬ್ಯಾಂಕ್ ವೊಂದರಲ್ಲಿ ಕೆಲಸ ಹಿಡಿದು ತಾನು ಪ್ರೀತಿಸೋ ಹುಡುಗಿನ ಮದ್ವೆ ಆಗಿ ಸೆಟ್ಲ್ ಆಗುವ ಅಸೆ. ಆದರೆ ಅವನ ಲೈಫಲ್ಲಿ ನಡೆಯೋದೇ ಬೇರೆ. ಅದೇ ಸಿನಿಮಾದ ಹೈಲೆಟ್.

ಆರಂಭದಿಂದ ಅಂತ್ಯದವರೆಗೆ ನಗಿಸುವ ಸಿನಿಮಾ ಇದು. ಹಾಗಂತ ಬರೀನಗು ತುಂಬಿಲ್ಲ. ಅಲ್ಲಲ್ಲಿ ಬೋಧನೆಯೂ ಇದೆ. ಬದುಕಿನ ಪಾಠವಿದೆ. ಗೆಳೆತನ, ಪ್ರೀತಿ, ತಾಯಿ ಸೆಂಟಿಮೆಂಟ್ ಇತ್ಯಾದಿ ಅಂಶಗಳು ಸಿನಿಮಾದ ಆಕರ್ಷಣೆ.
ಕಥೆ ಸರಳವಾಗಿದೆ. ಚಿತ್ರಕಥೆ ಇನ್ನಷ್ಟು ಬಿಗಿಯಾಗಿರಬೇಕಿತ್ತು. ಚಿತ್ರದ ವೇಗಕ್ಕೆ ಸಿನಿಮಾದ ಡೈಲಾಗ್ಸ್ ಸಾಥ್ ಕೊಟ್ಟಿವೆ. ಎಲ್ಲೋ ಒಂದು ಕಡೆ ಸಣ್ಣ ಪುಟ್ಟ ಕೊರತೆಗಳು ಕಾಣುತ್ತವೆ. ಹಾಗಂತ ಸಿನಿಮಾ ನೋಡುಗರಿಗೆ ಬೋರ್ ಎನಿಸಲ್ಲ. ಮಕ್ಕಳಿಂದ ಹಿಡಿದು ವಯಸ್ಸಾದವರೂ ಈ ಬಾಂಡ್ ಅವಾಂತರಗಳನ್ನು ಒಮ್ಮೆ ನೋಡಬಹುದು.

ಕಥೆ ಒಂದೇ ಊರಲ್ಲಿ ನಡೆಯುತ್ತೆ. ಇಲ್ಲಿ ಬಾಂಡ್ ಛಾಯೆ ಬದಲು ಆ ಹೀರೋನ ಆಸೆ ಆಕಾಂಕ್ಷೆಗಳು ಕಾಣಸಿಗುತ್ತವೆ. ಮೊದಲರ್ಧ ಕಾಮನ್ ಆಗಿ ಸಾಗುವ ಸಿನಿಮಾ ದ್ವಿತಿಯಾರ್ಧ ಮಜವೆನಿಸುತ್ತೆ. ಅಲ್ಲಲ್ಲಿ ಕುತೂಹಲದ ಜೊತೆ ಸ್ವಲ್ಪ ಟ್ವಿಸ್ಟ್ ಕೊಟ್ಟು ನೋಡುಗರನ್ನು ಟೆಸ್ಟ್ ಮಾಡುತ್ತೆ.
ಸಿನಿಮಾದಲ್ಲಿ ಮನರಂಜನೆ ಗ್ಯಾರಂಟಿ. ಸಿನಿಮಾ ಟೈಟಲ್ ನೋಡಿ ಒಳಬಂದರೆ ಜೇಮ್ಸ್ ಶೈಲಿಯ ಕಂಟೆಂಟ್ ಮರೆಯಬೇಕು. ಇದು ಹಿರೋ ತನಗೆ ತಾನು ಇಟ್ಟುಕೊಂಡಿರೋ ಹೆಸರಷ್ಟೇ. ಹಾಗಂತ ನೋಡೋಕೆ ಯಾವ ಮೋಸನು ಇಲ್ಲ.
ರಾಜುಗೆ ತನ್ನ ತಾಯಿ ಮನೆ ಪ್ರಾಣ. ಅತ್ತ ಪ್ರೀತಿಸೋ ಹುಡುಗಿ ಕೈ ಹಿಡಿಯುವ ಛಲ. ಇವೆರೆಡರ ಮಧ್ಯೆ ಹಣ ಆಸ್ತಿ ಅಡ್ಡಿಯಾಗುತ್ತೆ. ಆಗ ಬದುಕಲ್ಲಿ ತಾಯಿ ಕಟ್ಟಿದ ಮನೆ ಉಳಿಸಿಕೊಳ್ಳಬೇಕು. ಲವ್ವು ಮಾಡಿದ ಹುಡುಗಿ ಮದ್ವೆ ಆಗಬೇಕು. ಆಗ ಅವನ ಮುಂದೆ ಒಂದು ಐಡಿಯಾ ಬರುತ್ತೆ. ಅದೇ ಸಿನಿಮಾದ ಟ್ವಿಸ್ಟು. ಇಡೀ ಸಿನಿಮಾ ಅದರ ಮೇಲೆನೆ ಸಾಗುತ್ತೆ. ಕೊನೆಗೆ ಅವನು ಅಂದುಕೊಂಡಿದ್ದು ಆಗುತ್ತಾ ಅನ್ನೋದೇ ಕಥೆ. ಆ ಕುತೂಹಲ ಇದ್ದರೆ ಸಿನಿಮಾ ನೋಡಿ.

ಗುರುನಂದನ್ ಇಲ್ಲಿ ಎಂದಿಗಿಂತ ಇಷ್ಟವಾಗುತ್ತಾರೆ. ಅವರ ಪಾತ್ರವನ್ನು ಅಚ್ಚುಕಟ್ಟಾಗಿ ನಿರ್ವಹಿಸಿದ್ದಾರೆ. ಡ್ಯಾನ್ಸ್, ಫೈಟಲ್ಲೂ ಹಿಂದೆ ಬಿದ್ದಿಲ್ಲ. ಮೃದುಲಾ ಪಾತ್ರ ಮೃದುವಾಗಿದೆ. ಸಿಕ್ಕ ಪಾತ್ರಕ್ಕೆ ಮೋಸ ಮಾಡಿಲ್ಲ. ಉಳಿದಂತೆ ಅಚ್ಯುತ, ಚಿಕ್ಕಣ್ಣ, ಸಾಧುಕೋಕಿಲ ಎಲ್ಲರೂ ನಗಿಸುವಲ್ಲಿ ಹಿಂದೆ ಬಿದ್ದಿಲ್ಲ. ರವಿಶಂಕರ್ ವಿಶೇಷ ಪಾತ್ರದ ಮೂಲಕ ಗಮನ ಸೆಳೆದಿದ್ದಾರೆ. ಸಂಗೀತದ ಎರಡು ಹಾಡು ಚೆನ್ನಾಗಿವೆ. ಛಾಯಾಗ್ರಹಣ ಇಡೀ ಚಿತ್ರದ ಅಂದವನ್ನು ಹೆಚ್ಚಿಸಿದೆ.