Categories
ಸಿನಿ ಸುದ್ದಿ

ಬಾಲಿವುಡ್‌ಗೆ ಸಮರ್ಥ – ಶಕೀಲಾ ಜೊತೆ ಮುಂಬೈ ಫ್ಲೈಟ್‌ ಏರಿದ ಕನ್ನಡದ ವೀರ!

ಇಂದ್ರಜಿತ್‌ ಚಿತ್ರಕ್ಕೆ ಸಮರ್ಥ ಸಂಗೀತ

ವೀರ್‌ ಸಮರ್ಥ್

ಚಿತ್ರರಂಗಕ್ಕೆ ಸಂಬಂಧಿಸಿದ ಯಾವುದೇ ಕಲಾವಿದನಿರಲಿ, ತಾಂತ್ರಿಕ ವರ್ಗದವರಿರಲಿ ನಾನು ಗುರುತಿಸಿಕೊಳ್ಳಬೇಕು, ಸಾಧಿಸಬೇಕು ಎಂಬ ಅಸೆ ಇದ್ದೇ ಇರುತ್ತೆ. ಕೆಲವರು ಆ ಆಸೆಯ ಬೆನ್ನತ್ತಿ ಹೋಗಿದ್ದಾರೆ, ಇನ್ನೂ ಕೆಲವರು ಹೋಗಲು ಪ್ರಯತ್ನಿಸುತ್ತಲೇ ಇದ್ದಾರೆ. ಕೆಲವರು ಗೆದ್ದಿದ್ದಾರೆ, ಕೆಲವರೂ ಗೆಲ್ಲಲಾಗದೆ ಸುಮ್ಮನಾಗಿದ್ದಾರೆ. ಈಗ ಇಲ್ಲಿ ಹೇಳಹೊರಟಿರುವ ವಿಷಯ, ಕನ್ನಡ ಚಿತ್ರರಂಗದಲ್ಲಿ ಗುರುತಿಸಿಕೊಂಡು ತಮ್ಮದೇ ಆದ ಒಂದು ಜಾಗ ಮಾಡಿಕೊಂಡಿರುವ ಸಂಗೀತ ನಿರ್ದೇಶಕ ವೀರ್‌ ಸಮರ್ಥ್.‌ ಹೌದು, ವೀರ್‌ಸಮರ್ಥ್‌ ಈಗಾಗಲೇ ಕನ್ನಡದ ಅನೇಕ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ. ಸೂಪರ್‌ ಹಿಟ್‌ ಸಾಂಗ್‌ ಕೊಟ್ಟಿದ್ದಾರೆ. ಅನೇಕ ನಿರ್ದೇಶಕ, ನಿರ್ಮಾಪಕರ ಮೆಚ್ಚಿನ ಸಂಗೀತ ನಿರ್ದೇಶಕರಾಗಿಯೂ ಸೈ ಎನಿಸಿಕೊಂಡಿದ್ದಾರೆ. ಇದೇ ಮೊದಲ ಬಾರಿಗೆ ಅವರೀಗ ಬಾಲಿವುಡ್‌ಗೆ ಕಾಲಿಟ್ಟಿದ್ದಾರೆ ಎಂಬುದೇ ಈ ಹೊತ್ತಿನ ಸುದ್ದಿ.

‌1998 ರಲ್ಲಿ ವೀರ್‌ ಗಾಯಕ ಸುರೇಶ್‌ ವಾಡ್ಕರ್‌ ಬಳಿ ಸಂಗೀತ ಕಲಿತರು. ಅದಕ್ಕೂ ಮೊದಲು ಬೀದರ್‌ನಲ್ಲಿ 8 ವರ್ಷ ಶಾಸ್ತ್ರೀಯ ಸಂಗೀತ ಕರಗತ ಮಾಡಿಕೊಂಡಿದ್ದರು. ಸುರೇಶ್‌ ವಾಡ್ಕರ್‌ ‌ ಬಳಿ ಆಡಿಷನ್‌ ಮೂಲಕ ಆಯ್ಕೆಯಾದರು. ಅವರ ಹಾಡು ಕೇಳಿದ ಅವರು, ಹಾಡು ಕಲಿಸಿದರು. ನಂತರ ಅಲ್ಲೇ ಕೆಲಸ ಶುರುಮಾಡಿದರು. 1998 ರಲ್ಲಿ ವೀರ್‌ ಅವರಿಗೆ ವಿಜಯಪ್ರಕಾಶ್‌ ಪರಿಚಯ ಆಗಿದ್ದು ಅಲ್ಲೇ. ನಂತರ ಭಾರತೀಯ ಚಿತ್ರರಂಗದ ಯಶಸ್ವಿ ಸಂಗೀತ ನಿರ್ದೇಶಕ, ಗಾಯಕ, ಗೀತ ಸಾಹಿತಿ ರವೀಂದ್ರ ಜೈನ್‌ ಬಳಿ ಐದು ವರ್ಷ ಜೊತೆಗಿದ್ದರು. ಆ ಬಳಿಕ ಹಿಂದಿಯಲ್ಲಿ ಹಿಟ್‌ ಎನಿಸಿಕೊಂಡ “ಕಭೀ ಖುಷ್‌ ಕಭೀ ಗಮ್‌” ಚಿತ್ರದ ಸಂಗೀತ ನಿರ್ದೇಶಕ ಸಂದೇಶ್‌ ಶಾಂಡಿಲ್ಯ ಅವರ  ಹಾಡೊಂದರಲ್ಲಿ ಕೋರಸ್‌ ಹಾಡುವ ಅವಕಾಶ ಗಿಟ್ಟಿಸಿಕೊಂಡು, ಜೊತೆಗೆ ಮೂರನೇ ಬಿಜಿಎಂನಲ್ಲಿ ವಿಷಲ್‌ ಹಾಕುವ ಅವಕಾಶವೂ ಅವರದಾಗಿತ್ತು

 

ವೀರ್‌ ಸಮರ್ಥ್‌ ಹಿಂದಿ ಸಿನಿಮಾಗೆ ಸಂಗೀತ ನೀಡಿದ್ದಾರೆಂಬುದೇ ವಿಶೇಷ. ಅದು “ಶಕೀಲಾ” ಸಿನಿಮಾಗೆ. ಶಕೀಲಾ ಅಂದಾಕ್ಷಣ, ಪಡ್ಡೆಗಳಿಗೆ ಬಿಡಿಸಿ ಹೇಳಬೇಕಿಲ್ಲ. ಯುವಕರೂ ಸೇರಿದಂತೆ ವಯಸ್ಕರನ್ನೂ ನಿದ್ದೆಗೆಡಿಸಿದ ಶಕೀಲಾ ಅವರ ಬಯೋಗ್ರಫಿ ಚಿತ್ರವೇ “ಶಕೀಲಾ”. ಈ ಚಿತ್ರಕ್ಕೆ ಇಂದ್ರಜಿತ್‌ ಲಂಕೇಶ್‌ ನಿರ್ದೇಶಕರು. ಈ ಚಿತ್ರವೀಗ ಡಿಸೆಂಬರ್‌ ೨೫ರ ಕ್ರಿಸ್ಮಸ್‌ಗೆ ದೇಶಾದ್ಯಂತ ಬಿಡುಗಡೆಯಾಗುತ್ತಿದೆ. ಇದೇ ಮೊದಲ ಸಲ‌ ಬಾಲಿವುಡ್‌ ಚಿತ್ರವೊಂದಕ್ಕೆ ಸಂಗೀತ ನೀಡಿರುವ ವೀರ್‌ಸಮರ್ಥ್, ತಮ್ಮ ಬಾಲಿವುಡ್‌ ಪಯಣ ಕುರಿತು “ಸಿನಿಲಹರಿ” ಜೊತೆ ಮಾತನಾಡಿದ್ದಾರೆ.

 

‌ಓವರ್‌ ಟು ವೀರ್…
“ನನಗೆ ಬಾಲಿವುಡ್‌ ಹೊಸದೇನಲ್ಲ. ಹಾಗೆ ಹೇಳುವುದಾದರೆ, ‌1998 ರಲ್ಲಿ ನಾನು ಹೆಸರಾಂತ ಗಾಯಕ ಸುರೇಶ್‌ ವಾಡ್ಕರ್‌ ಬಳಿ ಸಂಗೀತ ಕಲಿಯೋಕೆ ಸೇರಿಕೊಂಡೆ. ಅದಕ್ಕೂ ಮೊದಲು ಬೀದರ್‌ನಲ್ಲಿ 8 ವರ್ಷ ಶಾಸ್ತ್ರೀಯ ಸಂಗೀತ ಕರಗತ ಮಾಡಿಕೊಂಡಿದ್ದೆ. ಸುರೇಶ್‌ ವಾಡೇಕರ್‌ ಬಳಿ ಆಡಿಷನ್‌ ಮೂಲಕ ಆಯ್ಕೆಯಾದೆ. ನನ್ನ ಹಾಡು ಕೇಳಿದ ಅವರು, ಕಲಿಸ್ತೀನಿ ಅಂದ್ರು. ಅಲ್ಲೇ ಕೆಲಸ ಶುರುಮಾಡಿದೆ. 1998 ರಲ್ಲಿ ವಿಜಯಪ್ರಕಾಶ್‌ ಪರಿಚಯ ಆಗಿದ್ದು ಅಲ್ಲೇ. ನಂತರ ಭಾರತೀಯ ಚಿತ್ರರಂಗದ ಯಶಸ್ವಿ ಸಂಗೀತ ನಿರ್ದೇಶಕ, ಗಾಯಕ, ಗೀತ ಸಾಹಿತಿ ರವೀಂದ್ರ ಜೈನ್‌ ಬಳಿ ಐದು ವರ್ಷ ಜೊತೆಗಿದ್ದು ಕೆಲಸವನ್ನೂ ಕಲಿತೆ. ಆ ಬಳಿಕ ಹಿಂದಿಯಲ್ಲಿ ಹಿಟ್‌ ಎನಿಸಿಕೊಂಡ “ಕಭೀ ಖುಷ್‌ ಕಭೀ ಗಮ್‌” ಚಿತ್ರದ ಸಂಗೀತ ನಿರ್ದೇಶಕ ಸಂದೇಶ್‌ ಶಾಂಡಿಲ್ಯ ಅವರು, ಹಾಡೊಂದರಲ್ಲಿ ಕೋರಸ್‌ ಹಾಡುವ ಅವಕಾಶ ಕೊಟ್ಟರು. ಜೊತೆಗೆ ಮೂರನೇ ಬಿಜಿಎಂನಲ್ಲಿ ವಿಷಲ್‌ ಹಾಕುವ ಅವಕಾಶವೂ ನನ್ನದಾಗಿತ್ತು.

ಗುರು ರವೀಂದ್ರ ಜೈನ್‌ ಜೊತೆ ವೀರ್

ಆ ಸಿನಿಮಾದಲ್ಲಿ ನನ್ನದೂ ಒಂದು ವಾಯ್ಸ್‌ ಇದೆ ಅನ್ನೋದೇ ಖುಷಿ. ಅದಾದ ಮೇಲೆ, ಹಿಂದಿಯ ಸುಮಾರು ಸಿನಿಮಾಗಳಲ್ಲಿ ಕೋರಸ್‌ ಹಾಡಿದ್ದೂ ಉಂಟು.‌ ಅನೇಕ ಹಿಂದಿ ಆಲ್ಬಂಗಳಲ್ಲೂ ಕೆಲಸ ಮಾಡಿದ್ದೇನೆ. ನನ್ನ ಗುರುಗಳಾದ ರವೀಂದ್ರ ಜೈನ್‌ ಜೊತೆ ಸಾಕಷ್ಟು ಸ್ಟೇಜ್‌ ಶೋ ಕೊಟ್ಟಿದ್ದೂ ಇದೆ. ಇವೆಲ್ಲದರ ಜೊತೆಯಲ್ಲಿ ನಾನು ಭೀಮ್‌ಸೇನ್‌ ಜೋಶಿ ಅವರ ಬಳಿ ಕೆಲಸ ಮಾಡುವ ಅವಕಾಶವೂ ಪಡೆದುಕೊಂಡೆ. ದೊಡ್ಡ ಲೆಜೆಂಡರಿ ಜೊತೆ ಇದ್ದೆ ಅನ್ನೋದು ಹೆಮ್ಮೆಯ ವಿಷಯ. ಕ್ಲಾಸಿಕಲ್‌ ಮತ್ತು ಸಿನಿಮಾ ಈ ಎರಡೂ ಕಡೆ ಕೆಲಸ ಮಾಡಿದ ಅನುಭವ ಅನನ್ಯ. ಬಾಲಿವುಡ್‌ನಲ್ಲೇ ಕೆಲಸ ಮಾಡಬೇಕು ಎಂಬ ಆಸೆ ಕಳೆದ ಐದಾರು ವರ್ಷಗಳಿಂದಲೂ ಇತ್ತು. ಅದಕ್ಕಾಗಿಯೇ ನಾನು ಮಹೇಶ್‌ ಭಟ್‌, ವಿಕ್ರಮ್‌ ಭಟ್‌, “ಹಮ್‌ ಆಪ್‌ಕೆ ಹೈ ಕೌನ್”‌ ನಿರ್ದೇಶಕ ಸೂರಜ್‌ ಬರ್ಜಾತ್ಯ ಅವರನ್ನು ಭೇಟಿ ಮಾಡಿ ಚರ್ಚಿಸಿದ್ದೂ ಆಗಿತ್ತು. ಆದರೆ, ಮಾತುಕತೆ ನಡೆದಿತ್ತಾದರೂ ಕೆಲ ಕಾರಣಗಳಿಂದ ಸಾಧ್ಯವಾಗಿರಲಿಲ್ಲ. ಆ ಪ್ರಯತ್ನದಲ್ಲಿದ್ದ ನನಗೆ “ಶಕೀಲಾ” ಅಂಥದ್ದೊಂದು ಅವಕಾಶ ಮಾಡಿಕೊಟ್ಟಿದೆ” ಎಂದು ವಿವರ ಕೊಡುತ್ತಾರೆ ವೀರ್‌ ಸಮರ್ಥ್.‌‌

ನಿರ್ದೇಶಕ ಲಂಕೇಶ್‌ ಜೊತೆ ವೀರ್

ಮಜಾ ಕೊಟ್ಟ ಅವಕಾಶ..
ಈ ಪ್ರಯತ್ನದ ನಡುವೆಯೇ ಶಿವರಾಜಕುಮಾರ್‌ ಅಭಿನಯದ “ಮಾಸ್‌ ಲೀಡರ್‌” ಚಿತ್ರಕ್ಕೆ ಸಂಗೀತ ನೀಡಿದ್ದೆ. ಅದರಲ್ಲೊಂದು ಅರೇಬಿಕ್‌ ಶೈಲಿಯ ಸಂಗೀತ ಸ್ಪರ್ಶಿಸಿ ಹಾಡೊಂದನ್ನು ಮಾಡಿದ್ದೆ. ಆ ಹಾಡು ಹಿಟ್‌ ಆಗಿತ್ತು. ಜೊತೆಗೆ “ಮಜಾ ಟಾಕೀಸ್‌” ವೇದಿಕೆಯಲ್ಲಿ ಪ್ರಚಾರಕ್ಕಾಗಿ ಹೋಗಿದ್ದಾಗ, ಆ ಶೋನಲ್ಲಿದ್ದ ನಿರ್ದೇಶಕ ಇಂದ್ರಜಿತ್‌ ಲಂಕೇಶ್ ಅವರು, ವೇದಿಕೆ ಮೇಲೇರಿ ಗ್ರೂಪ್‌ ಫೋಟೋ ತೆಗೆಸಿಕೊಳ್ಳುವಾಗ, ಸಾಂಗ್‌ ಕುರಿತು ಮಾತಾಡಿದ್ದರು. ಚೆನ್ನಾಗಿ ಕಂಪೋಸ್‌ ಮಾಡಿದ್ದೀರಿ ಎಂಬ ಮೆಚ್ಚುಗೆ ವ್ಯಕ್ತಪಡಿಸಿದ್ದರು. ಆಗ ನನ್ನ‌ ಫೋನ್‌ ನಂಬರ್‌ ಪಡೆದಿದ್ದರು. ಕೆಲ ತಿಂಗಳ ಬಳಿಕ ನಿರ್ದೇಶಕ ಮೋಹನ್‌ಗೆ ಕಾಲ್‌ ಮಾಡಿದ ಇಂದ್ರಜಿತ್‌ ಲಂಕೇಶ್‌ ಅವರು, ವೀರ್‌ಸಮರ್ಥ್‌ ಅವರಿಗೆ ಕಾಲ್‌ ಮಾಡಲು ಹೇಳು ಎಂದಿದ್ದರು. ಆಗ ಮೋಹನ್‌ ಅವರ “ಡಬಲ್‌ ಎಂಜಿನ್‌” ಚಿತ್ರಕ್ಕೆ ನಾನು ಸಂಗೀತ ನೀಡುತ್ತಿದ್ದೆ. ಅಲ್ಲೇ ಜೊತೆಗಿದ್ದ ಮೋಹನ್‌, ವಿಷಯ ತಿಳಿಸಿದರು.‌

ಹೀರೋ ರಾಜು ಪಿಳೈ ಜೊತೆ

ಇಂದ್ರಜಿತ್‌ ಸ್ಟೈಲಿಶ್‌ ಸಿನ್ಮಾ ಮೇಕರ್

ನಾನು ಸಂಜೆ ಇಂದ್ರಜಿತ್‌ ಅವರಿಗೆ ಕಾಲ್‌ ಮಾಡಿ ಮಾತಾಡಿದೆ. ಇವತ್ತು ಸಿಕ್ಕು ಮಾತಾಡೋಣ ಅಂತ ಕೋರಮಂಗಲ ಬಳಿಯ ಹೋಟೇಲ್‌ವೊಂದಕ್ಕೆ ಆಹ್ವಾನಿಸಿದ್ದರು. ಹೊಸ ಕನ್ನಡ ಸಿನಿಮಾ ಮಾಡುತ್ತಿರಬಹುದೆಂದು ಭಾವಿಸಿ ಹೋದೆ. ಹೋದವನಿಗೆ ಒಂದು ಸರ್‌ಪ್ರೈಸ್‌ ಕಾದಿತ್ತು. ಹಿಂದಿ ಸಿನಿಮಾ ಮಾಡುತ್ತಿದ್ದೇನೆ. ಅದು “ಶಕೀಲಾ” ಬಯೋಗ್ರಫಿ. ನೀವೇ ಸಂಗೀತ ಕೊಡಬೇಕು ಅಂದರು. ನನ್ನೊಳಗಿದ್ದ ಆಸೆಗೂ ಜೀವ ಬಂತು. ಇಂದ್ರಜಿತ್‌ ಅವರ ಜೊತೆ ಕೆಲಸ ಮಾಡಿದೆ. ಅವರೊಬ್ಬ ಸ್ಟೈಲಿಶ್‌ ಸಿನಿಮಾ ಮೇಕರ್ ಅಷ್ಟೇ ಅಲ್ಲ, ಅವರೊಳಗೊಬ್ಬ ಸಂಗೀತ ಪ್ರೇಮಿಯೂ ಇದ್ದಾರೆ. ಸಂಗೀತದ ಬಗ್ಗೆ ಸಾಕಷ್ಟು ತಿಳಿದುಕೊಂಡಿದ್ದ ಅವರು, ನನ್ನಿಂದ ಕೆಲಸ ತೆಗೆಸಿದರು. ಒಂದು ಅರೇಬಿಕ್‌ ಸಾಂಗ್‌ ಬಂತು. ಮೆಲೋಡಿ ಹಾಡು ಕೊಟ್ಟೆ. ಮತ್ತೊಂದು ಆಪ್ಷನ್‌ ಇಲ್ಲದೆ ಓಕೆ ಮಾಡಿದರು. ಅವರ ಟೇಸ್ಟ್‌ಗೆ, ಸಿನಿಮಾ ಕಥೆಯ ಕಲ್ಪನೆಗೆ ಸಂಗೀತ ಮಾಡಿದೆ. ಒಳ್ಳೆಯ ಹಾಡುಗಳು ಮೂಡಿಬಂದವು. ಹಿನ್ನೆಲೆ ಸಂಗೀತ ಕೂಡ ಅಷ್ಟೇ ಅದ್ಭುತವಾಗಿ ಮೂಡಲು ಕಾರಣ, ಮತ್ತದೇ ಇಂದ್ರಜಿತ್‌ ಲಂಕೇಶ್. ಚಿತ್ರದಲ್ಲಿ ಮೀಟ್‌ ಬ್ರದರ್ಸ್‌ ಕೂಡ ಒಂದು ಪ್ರಮೋಷನಲ್‌ ಸಾಂಗ್‌ ಮಾಡಿದ್ದಾರೆ.

ಗಾಯಕಿ ಪ್ರಕೃತಿ ಕಕ್ಕರ್‌ ಜೊತೆ

ಬಾಲಿವುಡ್‌ ಮಂದಿಯ ಮೆಚ್ಚುಗೆ ಸುಲಭವಲ್ಲ‌

ಸದ್ಯ ಈಗ ಸಿನಿಮಾದ ಹಾಡುಗಳ ತುಣುಕು ರಿಲೀಸ್‌ ಆಗಿದೆ. ಎಲ್ಲೆಡೆಯಿಂದ ಒಳ್ಳೆಯ ಮೆಚ್ಚುಗೆಯೂ ಸಿಕ್ಕಿದೆ. ಒಬ್ಬ ಸಂಗೀತ ನಿರ್ದೇಶಕನಿಗೆ ತಾನು ಮಾಡಿದ ಕೆಲಸಕ್ಕೆ ಮೆಚ್ಚುಗೆ ಸಿಕ್ಕರೆ ಅದು ದೊಡ್ಡ ಪ್ರಶಸ್ತಿ ಸಿಕ್ಕಂತೆ. ಅಲ್ಲದೆ, ಬಾಲಿವುಡ್‌ ಮಂದಿಯನ್ನು ಮೆಚ್ಚಿಸುವುದು ಸುಲಭದ ಮಾತಲ್ಲ. ಹಿಂದಿಯಲ್ಲಿ ವಿಶಾಲ್‌ ಮಿಶ್ರ ನನ್ನ ಸಾಂಗ್‌ ಹಾಡಿದ್ದು ವಿಶೇಷತೆಗಳಲ್ಲೊಂದು. ವಿಶಾಲ್‌ ಮಿಶ್ರ ಸಲ್ಮಾನ್‌ ಖಾನ್‌ ಅವರ ಅನೇಕ ಸಿನಿಮಾಗಳಿಗೆ ಸಂಗೀತ ನೀಡಿದ್ದಾರೆ, ಹಾಡಿದ್ದಾರೆ. ನನ್ನ ಹಾಡನ್ನು ಯಾರಿಂದ ಹಾಡಿಸಬೇಕು ಎಂಬ ಯೋಚನೆ ಬಂತು. ಅದರಲ್ಲೂ ಕುಮಾರ್‌ ಅವರ ಎಲ್ಲಾ ಹಾಡಿಗೂ ಸಾಹಿತ್ಯವಿತ್ತು. ಕುಮಾರ್‌ ಅವರು ಬಾಲಿವುಡ್‌ನ ಲೀಡಿಂಗ್‌ ಗೀತ ಸಾಹಿತಿಯರ ಪೈಕಿ ಟಾಪ್‌ ಫೈವ್‌ನಲ್ಲಿದ್ದಾರೆ.

ವಿಶಾಲ್ ಮಿಶ್ರ ಜೊತೆ ರೆಕಾರ್ಡಿಂಗ್‌ ಟೈಮ್

ಅವರ ಒಳ್ಳೆಯ ಸಾಹಿತ್ಯಕ್ಕೆ ವಿಶಾಲ್‌ ಮಿಶ್ರ ಅವರ ವಾಯ್ಸ್‌ ಇದ್ದರೆ ಚೆನ್ನಾಗಿರುತ್ತೆ ಅಂತ ಯೋಚಿಸಿ ಅವರನ್ನು ಫೋನ್‌ನಲ್ಲಿ ಮಾತಾಡಿಸಿದೆ. ಸಾಂಗ್‌ ಹಾಡಬೇಕು ಅಂದಾಗ, ಟ್ಯೂನ್‌ ಕಳಿಸಿ ಅಂದ್ರು. ಕೇಳಿದ ಕೂಡಲೇ ಫೋನ್‌ ಮಾಡಿ, ಸಾಂಗ್‌ ಕಂಪೋಸ್‌ ಚೆನ್ನಾಗಿದೆ ಹಾಡ್ತೀನಿ ಅಂದ್ರು. ಆದರೆ, ತುಂಬಾ ದುಬಾರಿನಾ ಎಂಬ ಕಾರಣಕ್ಕೆ ಪೇಮೆಂಟ್‌ ಹೇಳಿ ಸರ್‌ ಅಂದೆ, ನೀವು ಎಷ್ಟಾದರೂ ಕೊಡಿ ತಕರಾರು ಇಲ್ಲ. ಸಾಂಗ್‌ ಚೆನ್ನಾಗಿದೆ ಹಾಡಬೇಕಷ್ಟೇ ಅಂದ್ರು. ಆಗ ಮುಂಬೈಗೆ ಹೋಗಿ “ಓ ಲಮ್ಹಾ..” ಸಾಂಗ್‌ ಹಾಡಿಸಿದೆ. ಹಾಡು ಹಾಡಿದ ಅವರು ಹಾಡಿನ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದರು. ಸ್ವತಃ ಇಂದ್ರಜಿತ್‌ ಲಂಕೇಶ್‌ ಅವರೂ ನನ್ನ ಕೆಲಸ ಕೊಂಡಾಡಿ ತಬ್ಬಿಕೊಂಡರು.

ಗಾಯಕ ಕೇಶವ್‌ ಕುಮಾರ್

ಬಾಲಿವುಡ್‌ ಸಿನಿಮಾ ಕೆಲಸ ತೃಪ್ತಿ ಕೊಡ್ತು ಎಂಬ ಖುಷಿ ನನ್ನದಾಯ್ತು. ಇನ್ನು, ಕನ್ನಡದಲ್ಲಿ “ಹವಾಮಾನಕೆ ಏನಾಗಿದೆ…” ಎಂಬ ಅದೇ ರಾಗಕ್ಕೆ ಜಯಂತ್‌ ಕಾಯ್ಕಿಣಿ ಅವರು ಹಾಡು ಬರೆದಿದ್ದಾರೆ. ಆ ಹಾಡನ್ನು ಕೇಶವ ಕುಮಾರ್‌ ಹಾಡಿದ್ದಾರೆ. ಕನ್ನಡದ ಈ ಹುಡುಗ ಮುಂಬೈನಲ್ಲಿದ್ದಾರೆ. ಈ ಹಾಡು ಈಗಾಗಲೇ ಬಿಡುಗಡೆಯಾಗಿದ್ದು, ಒಳ್ಳೆಯ ಮೆಚ್ಚುಗೆ ಪಡೆದುಕೊಳ್ಳುತ್ತಿದೆ ಎಂದು ಹೇಳುವ ವೀರ್‌ ಸಮರ್ಥ್‌, “ಶಕೀಲಾʼ ಬಗ್ಗೆ ದೊಡ್ಡ ನಿರೀಕ್ಷೆ ಇದೆ. ಸಾಕಷ್ಟು ಕುತೂಹಲ ಕೆರಳಿಸಿರುವ ಸಿನಿಮಾ ಅದು ಅನ್ನೋದು ಅವರ ಮಾತು.

 

Categories
ಸಿನಿ ಸುದ್ದಿ

ಅಲೆಯಾಗಿ ಬಂದ ಹುಡುಗನ ಅಲೆ‌‌ ಅಲೆಯ ಮಾತು!

ಆ್ಯಕ್ಟರ್ ಆಗಲು ಗಾಂಧಿನಗರಕ್ಕೆ ಬಂದ ಡಾಕ್ಟರ್

ಪುನೀತ್ ರಾಜ್ ಕುಮಾರ್ ಜತೆಗೆ ರಥ ಕಿರಣ್

ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅವರ ಪಿಆರ್ ಕೆ ಸಂಸ್ಥೆ ಈಗಾಗಲೇ ಚಿತ್ರ ನಿರ್ಮಾಣದ ಜತೆಗೆ ಕನ್ನಡ ಅನೇಕ ಸಿನಿಮಾಗಳ ಆಡಿಯೋ ಹೊರ ತಂದಿರುವುದು ನಿಮಗೆಲ್ಲ ಗೊತ್ತಿರುವ ವಿಚಾರ. ಆದರೆ ಇದೇ ಮೊದಲ ಬಾರಿಗೆ ಪಿಆರ್ ಕೆ ಸಂಸ್ಥೆ‌ ಒಂದು ವಿಡಿಯೋ ಸಾಂಗ್ ಆಲ್ಬಂವೊಂದನ್ನು ಲಾಂಚ್ ಮಾಡುವ ಮೂಲಕ‌ ಸೋಷಲ್ ಮೀಡಿಯಾದಲ್ಲಿ ಸಂಚಲನ ಮೂಡಿಸಿದೆ.

 

‘ಅಲೆಯಾಗಿ ಬಾ ‘ ಎನ್ನುವುದು ಆ ವಿಡಿಯೋ ಸಾಂಗ್ ಆಲ್ಬಂ ಹೆಸರು. ಅದರಲ್ಲಿರುವುದು ಒಂದೇ ಒಂದು ಸಾಂಗ್.‌ಅದೀಗ ಸೋಷಲ್ ಮೀಡಿಯಾದಲ್ಲಿ‌ ಸಖತ್ ವೈರಲ್ ಆಗಿದೆ. ಅದಕ್ಕೆ , ಪಿಆರ್ ಕೆ ಸಂಸ್ಥೆ ಎನ್ನುವುದು ಹೇಗೆ ಕಾರಣವೋ,ಹಾಗೆಯೇ ಆ ಸಾಂಗ್ ಗುಣಮಟ್ಟವೂ ಅದಕ್ಕೆ ಅಷ್ಟೇ ಕಾರಣ. ಹಾಡಿನ ಸಾಹಿತ್ಯ ನಿರ್ದೇಶಕ ಸಿಂಪಲ್ ಸುನಿಯವರದ್ದು, ರಾಜೇಶ್ ಕೃಷ್ಣನ್ ಮತ್ತು ಆಶಾ ಭಟ್ ಇದರ ಗಾಯಕರು. ಬಿ.ಜೆ.‌ಭರತ್ ಸಂಗೀತ ನೀಡಿದ್ದಾರೆ. ಈ‌ಆಲ್ಬಂ ಥೀಮ್ ಡಾ. ಸಹನಾ ಸುಧಾಕರ್ ಅವರದ್ದು. ಆ ಮೂಲಕ ಭರ್ಜರಿ ಸದ್ದು ಮಾಡುತ್ತಿದೆ ‘ಅಲೆಯಾಗಿ ಬಾ’ ಹಾಡು.

ಕೇಳುಗನ ಮನಸ್ಸಿಗೆ ಹಿತ ಕೊಡುವ ಆ ಹಾಡಿನ ಸಾಹಿತ್ಯ, ಕಣ್ಣಿಗೆ ಮುದ‌ ನೀಡುವ ಅದರ ಚಿತ್ರೀಕರಣ, ಹಾಗೆಯೇ ಕೇಳುವುದಕ್ಕೂ ಖುಷಿ ನೀಡುವ ಅದರ ಸಂಗೀತವೂ ಅದು ಸೋಷಲ್ ಮೀಡಿಯಾದಲ್ಲಿ ವೈರಲ್ ಆಗಲು ಕಾರಣ. ಅದು ಪಿಆರ್ ಕೆ ಆಡಿಯೋ ಸಂಸ್ಥೆಯ ಅಧಿಕೃತ ಯುಟ್ಯೂಬ್ ಚಾನೆಲ್ ಮೂಲಕ ಹೊರ ಬಂದ ಮೂರು ದಿನದಲ್ಲಿ ಎರಡೂವರೆ ಲಕ್ಷ ವಿವ್ಯೂಸ್ ಪಡೆದಿದೆ.

ಕುಂದಾಪುರದ ಸುಂದರ ನಿಸರ್ಗದ ಮಧ್ಯೆ ಅಷ್ಟೇ ಸೊಗಸಾಗಿ ಚಿತ್ರೀಕರಣಗೊಂಡಿರುವ ಈ ಹಾಡು, ಪ್ರೇಮ ಅರಸಿ ಹೋಗುವ ಹುಡುಗನ ಖುಷಿಯನ್ನು ಕಟ್ಟಿಕೊಡುತ್ತಿದೆ. ಹಾಡಿನ ಅಂತ್ಯದಲ್ಲಿ ಸಿಹಿ ನೋವನ್ನೂ ಸವರುತ್ತಿದೆ. ಅದೇ ಕಾರಣಕ್ಕೆ ಸೋಷಲ್ ಮೀಡಿಯಾದಲ್ಲಿ ಇದು ವೈರಲ್ ಆಗುತ್ತಿದೆ. ಅದೇ ವೇಳೆ ಈ ಹಾಡಿನ ಕ್ವಾಲಿಟಿಗೂ ಅಪಾರ ಮೆಚ್ಚುಗೆ ಸೂಚಿಸುತ್ತಿರುವ ಜನರ ಕಣ್ಣು ಈಗ, ಈವಿಡಿಯೋ ಆಲ್ಬಂ ರೂವಾರಿಯ ಮೇಲೂ ಬಿದ್ದಿದೆ.

ಅಂದ ಹಾಗೆ, ಈ ಆಲ್ಬಂ ಸಾಂಗ್ ನ ರೂವಾರಿ ರಥ ಕಿರಣ್. ಇವರ ಮೂಲ‌ ಹೆಸರು ಕಿರಣ್. ಆನ್ ಸ್ಕ್ರೀನ್ ಪರಿಚಯಕ್ಕೆ ರಥ ಕಿರಣ್ ಎಂಬುದಾಗಿ ಬದಲಾಯಿಸಿಕೊಂಡಿದ್ದಾರೆ. ಹುಟ್ಟಿದ್ದು ಮೈಸೂರು, ಬೆಳೆದಿದ್ದು ವೃತ್ತಿಯಲ್ಲಿ ವೈದ್ಯರು. ಜೆಎಸ್ಎಸ್ ನಲ್ಲಿ ಮೆಡಿಕಲ್ ಶಿಕ್ಷಣ ಮುಗಿಸಿ, ವೈದ್ಯ ವೃತ್ತಿಯಲ್ಲಿ ತೊಡಗಿಸಿಕೊಂಡಿದ್ದಾರೆ. ಆದರೆ ಈಗ ವೈದ್ಯ ವೃತ್ತಿಗೆ ಒಂದಷ್ಟು ವಿಶ್ರಾಂತಿ ಕೊಟ್ಟು, ಸಿನಿಮಾ ನಟನಾಗುವ ಮಹತ್ತರ ಆಸೆಯಿಂದ ಬೆಂಗಳೂರಿಗೆ ಬಂದಿದ್ದಾರೆ. ಅದರ ಮೊದಲ ಪ್ರಯತ್ನವೇ ‘ಅಲೆಯಾಗಿ ಬಾ’.

ಸಿನಿಮಾ ನನ್ನ‌ ಕನಸು, ಉಸಿರು‌. ಮೆಡಿಕಲ್ ಓದಿದರೂ ನನಗೆ ಸಿನಿಮಾ ನಟ ಆಗ್ಬೇಕು ಎನ್ನುವ ಆಸೆಗೆ ಕಾರಣ ಡಾ. ರಾಜ್ ಕುಮಾರ್. ಹಾಗೆಯೇ ಪುನೀತ್ ರಾಜ್ ಕುಮಾರ್ ನನ್ನ ನೆಚ್ಚಿನ ನಟ. ಅವರ ಪ್ರಭಾವದಿಂದಲೇ ನನಗೆ ಸಿನಿಮಾ ಹುಚ್ವು ಹತ್ತಿಸಿಕೊಂಡೆ‌. ಈಗ ನನಗೆ ಅದೇ ಮೈನ್ ಟಾರ್ಗೆಟ್. ಹಾಗಾಗಿಯೇ ನಾನು ಗಾಂಧಿನಗರಕ್ಕೆ ಬಂದೆ. ನನ್ನನು ನಾನು ತೋರಿಸಿಕೊಳ್ಳುವ ಮೊದಲ ಪ್ರಯತ್ನವಾಗಿ ಈ ವಿಡಿಯೋ ಸಾಂಗ್ ಆಲ್ಬಂ ಹೊರ ತಂದಿದ್ದೇನೆ’

– ರಥ ಕಿರಣ್, ಯುವ ನಟ

ಅವರೇ ಹೇಳುವ ಹಾಗೆ ರಥ ಕಿರಣ್ ನಟನಾಗಲು ಗಾಂಧಿನಗರಕ್ಕೆ ಬಂದವರು. ಬಂದ ಹೊಸತರಲ್ಲಿಯೇ ಅವರಿಗೆ ನಿರ್ದೇಶಕ‌ ಸಿಂಪಲ್ ಸುನಿ ಬೆಂಬಲ‌ಸಿಕ್ಕಿದೆ. ಈ ಹಾಡು ಬರುವುದಕ್ಕೆ ಸುನಿ ಅವರೇ ಕಾರಣವಂತೆ. ರಥ ಕಿರಣ್ ಗಾಂಧಿನಗರಕ್ಕೆ ಬಂದ ಹೊಸಬರಾದರೂ, ಅಭಿನಯದ ತಿಳಿವಳಿಕೆ ಬಲ್ಲವರು‌.‌  ಧನಂಜಯ್ ಅವರಿಂದ ಖಾಸಗಿಯಾಗಿ ಅಭಿನಯದ ಪಟ್ಟುಗಳನ್ನು ಕಲಿತುಕೊಂಡಿದ್ದಾರಂತೆ.‌ಅದೇ ಅನುಭವದಲ್ಲಿ ಕಿರುಚಿತ್ರವೊಂದರಲ್ಲೂ ಅಭಿನಯಿಸಿದ್ದಾರೆ‌. ಈಗ ಅಲೆಯಾಗಿ ಹಾಡಿಗೂ ನಾಯಕ ಆಗಿದ್ದಾರೆ‌. ಈ ಮೂಲಕ ನಟನಾಗಿ ಇಲ್ಲಿಯೇ ನೆಲೆ ನಿಲ್ಲುವ ಅಚಲ ವಿಶ್ವಾಸದಲ್ಲಿದ್ದಾರೆ ರಥ ಕಿರಣ್.

ಸದ್ಯಕ್ಕೆ‌’ ಅಲೆಯಾಗಿ‌‌‌‌ ಬಾ’ ಹಾಡು ‌ಭಾರೀ ಮೆಚ್ಚುಗೆ ಪಡೆದಿದೆ.ಜ‌ನ‌ಕೂಡ ಮೆಚ್ಚುಗೆ ಪಡೆದಿದ್ದಾರೆ. ಅದೇ ಥೀಮ್ ಅನ್ನು ಮುಂದುವರೆಸಲು ಸಹ ಕೆಲವರು ಸಲಹೆ ಕೊಟ್ಟಿದ್ದಾರಂತೆ.‌ಅದನ್ನೇ ಯಾಕೆ ಮಾಡಬಾರದು ಅಂತ, ಕಾತರದಲ್ಲಿರುವ ರಥ ಕಿರಣ್, ಯಾರೇ ಅವಕಾಶ ಕೊಟ್ಟರು ಸಿನಿಮಾ‌ಮಾಡಲು ರೆಡಿ ಇದ್ದಾರೆ.ಅಂತಹ ಅವಕಾಶ ಸಿಕ್ಕಿತೇ ಎನ್ನುವುದು ಮುಂದಿರುವ ಕುತೂಹಲ.

Categories
ಸಿನಿ ಸುದ್ದಿ

ಕನ್ನಡ, ತೆಲುಗಿನಲ್ಲಿ ಹೊಸಬರ ಚರಿತ್‌

ಚರಿತ್‌ ಚೊಚ್ಚಲ ಚಿತ್ರಕ್ಕೆ ಸೃಜನ್‌ ಲೋಕೇಶ್‌ ಸಾಥ್‌

ಮೈಸೂರು ಹುಡುಗನ ಹೀರೋ ಆಗುವ ಕನಸು ಕೊನೆಗೂ ನನಸಾಗಿದೆ. ಚರಿತ್‌ ಅಭಿನಯದ ಚೊಚ್ಚಲ ಚಿತ್ರ ʼ ಚರಿತ್‌ʼ ಅಧಿಕೃತವಾಗಿ  ಸೆಟ್ಟೇರಿದೆ. ಚಿತ್ರ ತಂಡ ಅಂದುಕೊಂಡಂತೆ ಮೊನ್ನೆ ಈ ಚಿತ್ರದ ಫಸ್ಟ್‌ ಲುಕ್‌ ಪೋಸ್ಟರ್‌ ಅನ್ನು ಟಾಕಿಂಗ್‌ ಸ್ಟಾರ್‌ ಸೃಜನ್‌ ಲೋಕೇಶ್‌ ಆನಾವರಣಗೊಳಿಸಿ, ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

 

ಕಳೆದ ಏಳೆಂಟು ವರ್ಷಗಳಿಂದ ಚಿತ್ರರಂಗದಲ್ಲಿ ಬ್ಯಾಕ್‌ ಗ್ರೌಂಡ್‌ ಡಾನ್ಸರ್‌ ಆಗಿ ಕೆಲಸ ಮಾಡಿದ್ದ ಚರಿತ್‌, ಈಗ ಹೀರೋ ಆಗಿ ಆಭಿನಯಿಸುತ್ತಿರುವ ಚೊಚ್ಚಲ ಚಿತ್ರ ಇದು. ಮೈಸೂರು ಮೂಲದವರೇ ಆದ ಭರತ್‌ ನಿರ್ಮಾಣ ಮಾಡುತ್ತಿದ್ದು, ಎ.ಆರ್.‌ ಕೃಷ್ಣ ಆಕ್ಷನ್‌ ಕಟ್‌ ಹೇಳುತ್ತಿದ್ದಾರೆ. ಈ ಹಿಂದೆ ಇವರು ʼಅಥರ್ವʼ ಚಿತ್ರಕ್ಕೆ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದ್ದರು. ಅದೇ ಅನುಭದಲ್ಲೀಗ ಚರಿತ್‌ ಚಿತ್ರದ ನಿರ್ದೇಶನದ ಜವಾಬ್ದಾರಿ ಹೊತ್ತುಕೊಂಡಿರುವುದು ವಿಶೇಷ.

ಕನ್ನಡದ ಜತೆಗೆ ತೆಲುಗಿನಲ್ಲೂ ನಿರ್ಮಾಣವಾಗುತ್ತಿದೆ. ಈಗ ಎರಡು ಭಾಷೆಯಲ್ಲೂ ಚಿತ್ರ ತಂಡ ಫಸ್ಟ್‌ ಲುಕ್‌ ಪೋಸ್ಟರ್‌ ಲಾಂಚ್‌ ಮಾಡಿದೆ. ಚಿತ್ರಕ್ಕಾಗಿಯೇ ಸಿಕ್ಸ್‌ ಪ್ಯಾಕ್‌ ಮೂಲಕ ದೇಹವನ್ನು ಸರಿಯಾಗಿ ಹುರಿಗಟ್ಟಿಸಿಕೊಂಡಿರುವ ಚರಿತ್‌, ಇಲ್ಲಿ ತನ್ನ ಬಾಡಿ ಪ್ರದರ್ಶನದ ಚಿತ್ರಣದೊಂದಿಗೆ ಫಸ್ಟ್‌ ಲುಕ್‌ ಲಾಂಚ್‌ ಆಗಿದೆ. ಹಾಗಂತ ಇದು ಗಿಮಿಕ್‌ ಅಲ್ಲ, ಚಿತ್ರದ ನಾಯಕನ ನಿಜ ಲುಕ್‌ ಅದು. ಯಾಕಂದ್ರೆ ಚಿತ್ರದಲ್ಲಿ ಚರಿತ್‌ ನಿರ್ವಹಿಸುತ್ತಿರುವ ಪಾತ್ರ ಹಾರ್ಸ್‌ ರೈಡರ್.‌ ಅದನ್ನು ಪರಿಚಯಿಸುವ ಪರಿಕಲ್ಪನೆಯ ಮೂಲಕ ಚಿತ್ರ ಫಸ್ಟ್‌ ಲುಕ್‌ ಲಾಂಚ್‌ ಪೋಸ್ಟರ್‌ ಲಾಂಚ್‌ ಮಾಡಿದೆ.

 

ಪೊಸ್ಟರ್‌ ಲಾಂಚ್‌ ಮಾಡಿ ಮಾತನಾಡಿದ ಸೃಜನ್‌ ಲೋಕೇಶ್‌, ಸಿನಿಮಾ ಅನ್ನೋದೇ ಒಂದು ಅಕರ್ಷಣೀಯ ಜಗತ್ತು. ಹಾಗಂತ ಬರೀ ಆಕರ್ಷಣಿಗೆ ಇಲ್ಲಿ ಬರುವುದಲ್ಲ, ಟ್ಯಾಲೆಂಟ್‌ ಇಂಫಾರ್ಟೆಂಟ್.‌ ಟ್ಯಾಲೆಂಟ್‌ ಇದ್ದರೆ ಇಲ್ಲಿ ಒಳ್ಳೆಯ ಸಿನಿಮಾ ಮಾಡಿ ಗೆಲ್ಲಬಹುದು. ಈಗ ಕಂಟೆಂಟ್‌ ಆಧರಿತ ಸಿನಿಮಾಗಳು ಹೆಚ್ಚು ಸದ್ದು ಮಾಡುತ್ತಿವೆ. ಹೊಸಬರಾದ ನೀವು ಕೂಡ ಆ ಕಡೆ ಹೆಚ್ಚು ಗಮನ ಹರಿಸಿ ಅಂತವ ಕಿವಿ ಮಾತು  ಹೇಳುವ ಮೂಲಕ ಚಿತ್ರ ತಂಡಕ್ಕೆ ಶುಭ ಹಾರೈಸಿದ್ದಾಗಿ ಚಿತ್ರದ ನಾಯಕ ನಟ ಚರಿತ್’‌ ಸಿನಿಲಹರಿ’ ಗೆ ತಿಳಿಸಿದರು.

 

ಸದ್ಯಕ್ಕೆ ಚಿತ್ರಕ್ಕೆ ತಂತ್ರಜ್ನರ ಜತೆಗೆ ಹೀರೋ ಮಾತ್ರ ಸೆಲೆಕ್ಟ್‌ ಆಗಿದ್ದಾರೆ. ನಾಯಕಿ ಸೇರಿದಂತೆ ಉಳಿದ ಕಲಾವಿದರ ಆಯ್ಕೆ ಬಾಕಿ ಇದೆ. ಚರಿತ್‌ ಫಸ್ಟ್‌ ಲುಕ್‌ ಗೆ ಅಪಾರ ಮೆಚ್ಚುಗೆ ಕೂಡ ಸಿಕ್ಕಿದೆ. ನಟಿಯರಾದ ಮಾನ್ವಿತಾ ಹರೀಶ್‌ ಹಾಗೂ ನಭಾ ನಟೇಶ್‌ ಸೇರಿದಂತೆ ಹನವರು ತಮ್ಮ ಫೇಸ್‌ ಬುಕ್‌ ಹಾಗೂ ಟ್ವಿಟರ್‌ ಖಾತೆಗಳಲ್ಲಿ ಪೋಸ್ಟರ್‌ ಶೇರ್‌ ಮಾಡುವ ಮೂಲಕ ಚಿತ್ರ ತಂಡಕ್ಕೆ ಬೆಂಬಲವಾಗಿ ನಿಂತಿದ್ದಾರೆ. ಇದು ಚಿತ್ರ ತಡಕ್ಕೆ ಖುಷಿ ಕೊಟ್ಟಿದೆ.

Categories
ಸಿನಿ‌ ಆ್ಯಡ್ ಸಿನಿ ಸುದ್ದಿ

ಅಂದು ದ್ವಾರಕೀಶ್-‌ ಇಂದು ಶರಣ್! ಮತ್ತೆ ಗುರುಶಿಷ್ಯರು

ತರುಣ್‌ ಸುಧೀರ್‌ ನಿರ್ಮಾಣದ ಮೊದಲಚಿತ್ರ

ಇದೇ ಮೊದಲ ಬಾರಿಗೆ ತರುಣ್‌ ಸುಧೀರ್‌ ನಿರ್ಮಾಣದ ಚಿತ್ರವೊಂದು ಸೆಟ್ಟೇರುತ್ತಿದ್ದು, ಆ ಚಿತ್ರಕ್ಕೆ “ಗುರುಶಿಷ್ಯರು” ಎಂದು ನಾಮಕರಣ ಮಾಡಲಾಗಿದೆ. ೧೯೯೫ರಲ್ಲಿ ಬಿಡುಗಡೆಯಾಗಿದ್ದ “ಗುರುಶಿಷ್ಯರು” ದ್ವಾರಕೀಶ್‌ ಅಭಿನಯದ ಯಶಸ್ವಿ ಚಿತ್ರವಾಗಿತ್ತು. ಈ ಚಿತ್ರದ ಶೀರ್ಷಿಕೆಯಡಿ ನಟ ಶರಣ್‌ ಅಭಿನಯಿಸುತ್ತಿರುವುದು ವಿಶೇಷ. ದ್ವಾರಕೀಶ್‌ ಅವರೇ ಈ ಚಿತ್ರದ ಶೀರ್ಷಿಕೆ ಅನಾವರಣಗೊಳಿಸಿದ್ದಾರೆ. ಈ ಹಿಂದೆ  ಶರಣ್‌ ಅವರ ವಿಡಿಯೋ ಒಂದು ವೈರಲ್ ಆಗಿತ್ತು. ಶರಣ್ ಅಮ್ಮಂದಿರ ಮಾತಿಗೆ ಶರಣ್ ಉತ್ತರಿಸದೆ, ಬರೀ ವಿಷಲ್ ಹಾಕುವ ಮೂಲಕ ಹೊಸದೊಂದು ಕುತೂಹಲ ಮೂಡಿಸಿದ್ದರು. ಅದು ಹೊಸ ಚಿತ್ರದ ಸೂಚನೆ ಎಂದು ಹೇಳಲಾಗಿತ್ತು. ಇತ್ತೀಚೆಗಷ್ಟೇ ನಿರ್ಮಾಪಕ ಕಮ್‌ ನಿರ್ದೇಶಕ ತರುಣ್‌ ಸುಧೀರ್‌ ಅವರು, ಚಿತ್ರದ ಶೀರ್ಷಿಕೆ ಬಿಡುಗಡೆ ಮಾಡುವುದಾಗಿ ಹೇಳಿದ್ದರು. ಡಿಸೆಂಬರ್‌ ೨೧ರಂದು “ಗುರುಶಿಷ್ಯರು” ಶೀರ್ಷಿಕೆ ಅನಾವರಣಗೊಂಡಿದೆ.

 

ಜಡೇಶ್ ಹಂಪಿ ನಿರ್ದೇಶನದ ಈ ಚಿತ್ರವನ್ನು ಲಡ್ಡು ಸಿನಿಮಾ ಹೌಸ್ ಹಾಗೂ ತರುಣ್ ಸುಧೀರ್ ಕ್ರಿಯೇಟಿವ್ಸ್  ಮೂಲಕ ನಿರ್ಮಾಣ ಮಾಡಲಾಗುತ್ತಿದೆ. ಸದ್ಯಕ್ಕಿಷ್ಟು ಚಿತ್ರದ ಮಾಹಿತಿ. ಇನ್ನುಳಿದಂತೆ, ತಾಂತ್ರಿಕ ವರ್ಗ, ಕಲಾವಿದರು ಇತರೆ ವಿಷಯವನ್ನು ಇಷ್ಟರಲ್ಲೇ ಅನೌನ್ಸ್‌ ಮಾಡಲಿದ್ದಾರೆ.

Categories
ಸಿನಿ ಸುದ್ದಿ

ಎರಡು ದಶಕದ ರೈತರ ಕಥೆಗೆ ದೃಶ್ಯರೂಪ – ಕೊಳಗ ಎಂಬ ಹೋರಾಟದ ಚಿತ್ರಣ

ಇದು ನಾ.ಡಿಸೋಜಾ ಕಥೆಯ ಸಿನಿಮಾ

ಕನ್ನಡ ಚಿತ್ರರಂಗದಲ್ಲಿ ಈಗಾಗಲೇ ಹಲವು ಹೋರಾಟದ ಕಥೆಗಳು ತೆರೆಯ ಮೇಲೆ ರಾರಾಜಿಸಿವೆ. ಆ ಸಾಲಿಗೆ ರೈತ ಹೋರಾಟದ ಕಥೆಗಳೂ ಹೊಸದೇನಲ್ಲ. ಈಗ ಮತ್ತೊಂದು ರೈತರ ಹೋರಾಟದ ಕಥೆಯೊಂದು ಚಿತ್ರವಾಗಲು ಸಜ್ಜಾಗಿದೆ. ಹೌದು, ಇತ್ತೀಚೆಗೆ ಆ ಚಿತ್ರಕ್ಕೆ ಮುಹೂರ್ತವೂ ನೆರವೇರಿದೆ. ಅಂದಹಾಗೆ, ಆ ಚಿತ್ರದ ಹೆಸರು “ಕೊಳಗ”. ಇದು ನಾ.ಡಿಸೋಜಾ ಅವರ ಕಾದಂಬರಿ ಆಧಾರಿತ ಚಿತ್ರ. ಈ ಚಿತ್ರವನ್ನು ಪ್ರಸನ್ನ ಗೊರಲಕೆರೆ ನಿರ್ದೇಶಿಸುತ್ತಿದ್ದಾರೆ. ಸಂಭಾಷಣೆಯನ್ನೂ ಇವರೇ ಬರೆದಿದ್ದಾರೆ. ಇನ್ನು, ನಿಶಿತಾಗೌಡ ಅವರು ಚಿತ್ರಕಥೆ ಬರೆದು, ನಾಯಕಿಯಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ.

ಪ್ರಸನ್ನ ಗೊರಲಕೆರೆ, ನಿರ್ದೇಶಕ

ರೈತ ಹೋರಾಟಗಾರ ಕೋಡಿಹಳ್ಳಿ ಚಂದ್ರಶೇಖರ್‌, ಡಾ.ಅಶೋಕ್‌, ನಿರ್ದೇಶಕ ಎಸ್.‌ ನಾರಾಯಣ್‌, ಕೂಡ್ಲು ರಾಮಕೃಷ್ಣ, ಅವಿನಾಶ್‌ ಯು ಶಟ್ಟಿ ಸೇರಿದಂತೆ ಹಲವು ಗಣ್ಯರು ಚಿತ್ರತಂಡಕ್ಕೆ ಶುಭಕೋರಿದ್ದಾರೆ.
ಚಿತ್ರದಲ್ಲಿ ಆರೇಳು ಪ್ರಮುಖ ಪಾತ್ರಗಳು ಬರಲಿವೆ. ಇಡೀ ಕಥೆಯಲ್ಲಿ ಮೂರು ಪಾತ್ರಗಳು ಮಾತ್ರ ಹೈಲೈಟ್‌ ಆಗಿರಲಿವೆ. ಈ ಚಿತ್ರದಲ್ಲಿ ಆದಿಲೋಕೇಶ್‌ ಅವರು ಸ್ವಾಮೀಜಿ ಪಾತ್ರ ನಿಭಾಯಿಸುತ್ತಿದ್ದಾರೆ. ಇನ್ನುಳಿದಂತೆ ನಿಶಿತಾಗೌಡ ಹಾಗೂ ಕಿಶೋರ್‌ ಪ್ರಮುಖವಾಗಿ ಕಾಣಿಸಿಕೊಳ್ಳಲಿದ್ದಾರೆ.


ಈ ವೇಳೆ ಮಾತನಾಡಿದ ರೈತ ಮುಖಂಡ, ಕೋಡಿಹಳ್ಳಿ ಚಂದ್ರಶೇಕರ್‌, “ಕೊಳಗ” ಅನ್ನೋದು ಹಿಂದಿನ ಕಾಲದಲ್ಲಿ ರೈತರು ತಮ್ಮ ಧಾನ್ಯಗಳನ್ನು ಅಳೆಯಲು ಉಪಯೋಗಿಸುತ್ತಿದ್ದ ಒಂದು ಅಳತೆಗೋಲು. ರೈತಾಪಿ ವರ್ಗ ಹಾಗೂ ಭೂ ಮಾಲೀಕರ ನಡುವೆ ನಡೆಯುವಂತಹ ಘರ್ಷಣೆಯೇ ಈ ಕಥೆ. ಒಂದು ಮಹತ್ತರ ಬದಲಾವಣೆಗೆ ಕೊಳಗ ಹೇಗೆ ಕಾರಣವಾಯಿತು ಎಂಬುದನ್ನು ಈ ಚಿತ್ರದಲ್ಲಿ ಹೇಳಲಾಗುತ್ತಿದೆ. ಚಿತ್ರ ಎಲ್ಲರಿಗೂ ಗೆಲುವು ತರಲಿ ಎಂದು ಆಶಿಸಿದರು ಕೋಡಿಹಳ್ಳಿ.


ನಿರ್ದೇಶಕ ಕೂಡ್ಲು ರಾಮಕೃಷಷ್ಣ ಅವರು ಈವರೆಗೆ ಸುಮಾರು ೩೦ ಸಿನಿಮಾಗಳನ್ನು ನಿರ್ದೇಶಿಸಿದ್ದು, ಆ ಪೈಕಿ ೧೫ ಕಾದಂಬರಿ ಆಧಾರಿತ ಚಿತ್ರಗಳನ್ನೇ ಮಾಡಿದ್ದಾರೆ. ಆದರೆ, ಅವರಿಗೆ ನಾ.ಡಿಸೋಜ ಅವರ ಕಥೆ ಮಾಡಲಾಗಲಿಲ್ಲ ಎಂಬ ಬೇಸರವಿದೆಯಂತೆ. ಈ ಹಿಂದೆ ಕಾಗೋಡು ಸತ್ಯಾಗ್ರಹದ ಬಗ್ಗೆ ಗಿರೀಶ್‌ ಕಾಸರವಳ್ಳಿ ಅವರು ಸಾಕ್ಷ್ಯ ಚಿತ್ರ ನಿರ್ದೇಶಿಸಿದ್ದರು. ಈಗ ಪ್ರಸನ್ನ ಸಿನಿಮಾ ಮಾಡುತ್ತಿದ್ದಾರೆ. ಇದೊಂದು ದೊಡ್ಡ ಪರಿಣಾಮ ಬೀರುವ ಸಿನಿಮಾ ಆಗಲಿ ಎಂಬುದು ಕೂಡ್ಲು ರಾಮಕೃಷ್ಣ ಅವರ ಮಾತು.


ನಿರ್ದೇಶಕ ಪ್ರಸನ್ನ ಅವರು ಇದೊಂದು ೨೦ ವರ್ಷಗಳ ಕಾಲ ನಡೆದ ರೈತರ ದೊಡ್ಡ ಹೋರಾಟದ ಕಥೆ ಇದು ಎಂದರು. ನನ್ನ ತಾತ ಕಾಗೋಡು ಹೋರಾಟದಲ್ಲಿ ಭಾಗಿಯಾಗಿದ್ದರು. ಆಗಿನಿಂದಲೂ ಆ ವಿಚಾರಗಳು ನನ್ನೊಳಗಿದ್ದವು. ಆಗಿನ ಕಾಲದಲ್ಲಿ ರೈತ ಭೂಮಿ ಮೇಲೆ ಭಾವನಾತ್ಮಕ ಸಂಬಂಧ ಇಟ್ಟುಕೊಂಡಿದ್ದ. ಇತ್ತೀಚೆಗೆ ಅದು ಕಡಿಮೆಯಾಗುತ್ತಿದೆ. ಅದನ್ನು ಬೆಳೆಸುವ ಪ್ರಯತ್ನವಾಗಿ ಈ ಸಿನಿಮಾ ಮಾಡುತ್ತಿದ್ದೇನೆ. ಈ ಚಿತ್ರಕ್ಕೆ ಸಾಕಷ್ಟು ತಯಾರಿ ಮಾಡಿಕೊಂಡಿದ್ದೇನೆ. ಈ ಚಿತ್ರಕ್ಕೆ ನೀನಾಸಂ ಮಂಜು, ಅವಿನಾಶ್‌ ಸೇರಿದಂತೆ ಹಲವರ ಸಹಕಾರವಿದೆ. ಚಿತ್ರಕ್ಕೆ ರಾಜಗುರು ಸಂಗೀತವಿದೆ. ಸುಜಿತ್‌ ನಾಯಕ್‌ ಸಂಕಲನವಿದೆ ಎಂದರು.

Categories
ಸಿನಿ ಸುದ್ದಿ

ಶ್ರೀನಿಧಿ ಶಾಸ್ತ್ರಿ ‘ಸರಿಗಮಪ ಸೀಸನ್ 17’ ರ ಚಾಂಪಿಯನ್

-ರನ್ನರ್ ಅಪ್ ಆಗಿ ಅಶ್ವಿನ್ ಶರ್ಮಾ
ಕಂಬದ ರಂಗಯ್ಯ ಗೆ ಸಿಕ್ತು ಮೂರನೇ ಸ್ಥಾನ

ಶ್ರೀನಿಧಿ ಶಾಸ್ತ್ರಿ

ಜೀ ಕನ್ನಡದ ಬಹು ಜನಪ್ರಿಯ ರಿಯಾಲಿಟಿ ಶೋ ” ಸರಿ ಗಮಪ ಸೀಸನ್‌ 17 ” ರ ಚಾಂಪಿಯನ್ ಆಗಿ ಬೆಂಗಳೂರಿನ‌ ಹುಡುಗ ಶ್ರೀನಿಧಿ ಶಾಸ್ತ್ರಿ ಹೊರ ಹೊಮ್ಮಿದ್ದಾರೆ. ಟ್ರೋಪಿ ಜತೆಗೆ 10 ಲಕ್ಷ, ಕ್ಯಾಸ್ ಪ್ರೇಜ್ ಅವರದಾಗಿದೆ.‌

ಹಾಗೆಯೇ ಎರಡನೇ ಸ್ಥಾನದಲ್ಲಿ ಅಶ್ವಿನ್ ಶರ್ಮಾ ಆಯ್ಕೆಯಾದರು. ಟ್ರೋಪಿ ಜತೆಗೆ ಅವರಿಗೆ ಐದು ಲಕ್ಷ ನಗದು ಬಹುಮಾನ ಅವರಾಯಿತು.ಶೋ‌ನ ರಿಯಾಲಿಟಿ ಶೋ ಮಹಾಗುರು ಹಂಸಲೇಖ ಅವರು ಚಾಂಪಿಯನ್ ಅನೌನ್ಸ್ ಮಾಡಿದರು.

ಭಾನುವಾರ ತಡ ರಾತ್ರಿಯವರೆಗೂ‌ ನಡೆದ
ಗ್ರಾಂಡ್ ಫಿನಾಲೆಯ ಅಂತಿಮ ಸುತ್ತಿನಲ್ಲಿ ನೆರೆದಿದ್ದ ಅಪಾರ ಜನ ಸಂಖ್ಯೆಯ ಸಮಕ್ಷಮದಲ್ಲಿ ಶ್ರೀನಿಧಿ ಶಾಸ್ತ್ರಿ ವಿನ್ನರ್ ಆಗಿ ಹೊರ ಹೊಮ್ಮಿದರೆ, ಆಶ್ವಿನ್ ಶರ್ಮಾ ಎರಡನೇ ಸ್ಥಾನಕ್ಕೆ ಆಯ್ಕೆಯಾಗಿ ಅಪಾರ ಜನ್ನಮನ್ನಣೆ ಪಡೆದುಕೊಂಡರು.

ಕಂಬದ ರಂಗಯ್ಯ

ಕಂಬದ ರಂಗಯ್ಯ ಮೂರನೇಸ್ಥಾನ

ಸೆಕೆಂಡ್ ರನ್ನರಪ್ ಆಗಿ ಕಂಬದ ರಂಗಯ್ಯ ಆಯ್ಕೆಯಾದರು.ಟ್ರೋಫಿ ಜತೆಗೆ ಎರಡೂವರೆ ಲಕ್ಷ ಬಹುಮಾನ ಅವರ ಪಾಲಾಯಿತು‌. ಈ ಫಲಿತಾಂಶವನ್ನು ಗಾಯಕ , ಸಂಗೀತ ನಿರ್ದೇಶಕ ರಾಜೇಶ್ ಕೃಷ್ಣ ಅನೌನ್ಸ್ ಮಾಡಿದರು. ಟ್ರೋಫಿ ಜತೆಗೆ ಎರಡೂವರೆ ಲಕ್ಷ ಬಹುಮಾನ ಅವರ ಪಾಲಾಯಿತು‌.

Categories
ಸಿನಿ ಸುದ್ದಿ

ರಾಘಣ್ಣನಿಗೆ ಪುನೀತ್‌ ಸಾಥ್-‌ ರಾಜತಂತ್ರ ಟೀಸರ್‌ ಬಂತು, ಜನವರಿಗೆ ಸಿನಿಮಾ ಬರುತ್ತೆ

ನಿವೃತ್ತ ಮಿಲಿಟರಿ ಅಧಿಕಾರಿಯಾಗಿ ರಾಘಣ್ಣ

ರಾಘವೇಂದ್ರ ರಾಜಕುಮಾರ್‌ “ರಾಜತಂತ್ರ” ಸಿನಿಮಾ ಮಾಡುತ್ತಿದ್ದಾರೆ ಎಂಬ ವಿಷಯ ಎಲ್ಲರಿಗೂ ಗೊತ್ತಿತ್ತು. ಲಾಕ್‌ಡೌನ್‌ ಕೊಂಚ ಸಡಿಲಗೊಂಡ ಬಳಿಕ “ರಾಜತಂತ್ರ” ಸಿನಿಮಾ ಶುರುವಾಗಿತ್ತು. ಅದಾಗಲೇ ಸದ್ದಿಲ್ಲದೆಯೇ ಕೊರೊನಾ ನಡುವೆಯೂ ಮುಂಜಾಗ್ರತೆ ವಹಿಸಿಕೊಂಡು ಯಶಸ್ವಿಯಾಗಿ ಸಿನಿಮಾ ಚಿತ್ರೀಕರಣ ಮುಗಿಸಿ, ಇದೀಗ ರಿಲೀಸ್‌ಗೆ ರೆಡಿಯಾಗಿದೆ.


ಅದಕ್ಕೂ ಮುನ್ನ, ಚಿತ್ರದ ಟೀಸರ್‌ ಹೊರತರಲಾಗಿದೆ. ನಟ ಪುನೀತ್‌ರಾಜಕುಮಾರ್‌ ಅವರು ಟೀಸರ್‌ ಬಿಡುಗಡೆ ಮಾಡಿ, ಚಿತ್ರತಂಡಕ್ಕೆ ಶುಭಹಾರೈಸಿದ್ದಾರೆ. ಈ ಚಿತ್ರಕ್ಕೆ ಜೆ.ಎಂ.ಪ್ರಹ್ಲಾದ್‌ ಅವರು ಕಥೆ, ಚಿತ್ರಕಥೆ ಮತ್ತು ಸಂಭಾಷಣೆ ಬರೆದಿದ್ದಾರೆ. ತಮ್ಮ ಸಿನಿಮಾ ಕುರಿತು ಮಾತನಾಡಿದ ಪ್ರಹ್ಲಾದ್‌, ” ಕಾಲೇಜ್‌ ದಿನಗಳಿಂದಲೂ ಬರಹಗಾರನಾಗಿ ಬದುಕಬೇಕೆಂಬುದು ನನ್ನಾಸೆ ಆಗಿತ್ತು. ಪತ್ರಕರ್ತನಾದರೆ, ಬರಹಗಾರನಾಗಬಹುದು ಅಂತ ಅಂದುಕೊಂಡು, ಪತ್ರಿಕೋದ್ಯಮಕ್ಕೆ ಬಂದೆ. ಅಲ್ಲಿ ಹತ್ತು ವರ್ಷ ಕೆಲಸ ಮಾಡಿದೆ. ಹಾಗೆಯೇ ಹಲವು ನಾಟಕಗಳಲ್ಲಿ ಕೆಲಸ ಮಾಡಿದೆ. ಹಂಸಲೇಖ ಅವರು ನನ್ನನ್ನು ಸಿನಿಮಾರಂಗಕ್ಕೆ ಪರಿಚಯಿಸಿದರು.”ಸಿಪಾಯಿ” ಮೂಲಕ ಚಿತ್ರರಂಗ ಪ್ರವೇಶಿಸಿದೆ.

ನಂತರದ ದಿನಗಳಲ್ಲಿ ಶಿವರಾಜಕುಮಾರ್‌ ಅವರ ಸಿನಿಮಾಗೂ ಕೆಲಸ ಮಾಡಿದೆ. ಈವರೆಗೆ ಸುಮಾರು ೪೦ ಸಿನಿಮಾಗಳಿಗೆ ಕೆಲಸ ಮಾಡಿದ್ದೇನೆ. ಕಿರುತೆರೆಯ “ಮಾಯಾಮೃಗ” ಧಾರಾವಾಹಿಗೂ ಕೆಲಸ ಮಾಡಿದೆ. ಒಟ್ಟು ೯ ಸಾವಿರ ಎಪಿಸೋಡ್‌ ಬರೆದಿದ್ದೇನೆ ಎಂಬ ಸಂತಸವಿದೆ. ರಾಷ್ಟ್ರ, ರಾಜ್ಯ ಪ್ರಶಸ್ತಿ ವಿಜೇತ ಚಿತ್ರಗಳಿಗೆ ಕೆಲಸ ಮಾಡಿದ ಹೆಮ್ಮೆಯೂ ಇದೆ. ಆಪ್ತರು ಸೇರಿ ಒಂದು ಕಂಪೆನಿ ಮಾಡೋಣ ಅಂತಂದುಕೊಂಡು ವಿಶ್ವಂ ಡಿಜಿಟಲ್‌ ಮೀಡಿಯಾ ನಿರ್ಮಾಣ ಸಂಸ್ಥೆ ಶುರುಮಾಡಿದೆವು. ನಮ್ಮ ಬಳಿ ಕಂಟೆಂಟ್‌ ಇತ್ತು ಆದರೆ, ನಿರ್ಮಾಣ ಮಾಡುವುದು ಕಷ್ಟ ಎನಿಸಿತು. ಆದರೂ, ಮೊದಲಿಗೆ ” ಅಭಯಾರಣ್ಯ” ಚಿತ್ರ ಮಾಡಿದೆವು. ನಂತರ “ರಾಜತಂತ್ರ” ಕಥೆ ಮಾಡಿ ಸಿನಿಮಾ ಮಾಡಿದ್ದೇವೆ. ನಿರ್ದೇಶಕರ ಬಳಿ ಹೇಳಿದಾಗ, ಈ ಕಥೆ ರಾಘಣ್ಣವರಿಗೆ ಹೇಳಿ ಸೂಕ್ತವಾಗುತ್ತೆ ಅಂದರು. ಅಲ್ಲಿಂದ ಇಲ್ಲಿಯವರೆಗೆ ನಡೆದುಬಂದಿದೆ ಎಂದರು ಪ್ರಹ್ಲಾದ್.‌

ನಿರ್ಮಾಪಕ ವಿಜಯ ಭಾಸ್ಕರ್ ಮಾತನಾಡಿ, ಒಳ್ಳೆಯ ಕಥೆ ಜತೆಗೆ ಆಗಮಿಸುತ್ತಿದ್ದೇವೆ. ನೋಡಿ ಹರಸಿ ಎಂದು ಮನವಿ ಮಾಡಿದರು.
ರಾಘವೇಂದ್ರ ರಾಜಕುಮಾರ್‌ ಕೂಡ ಖುಷಿಯಲ್ಲಿದ್ದರು. “ನನ್ನ ಲೈಫ್ ನಲ್ಲಿ ಈ ಥರದ ಪಾತ್ರ ಮಾಡಿರಲಿಲ್ಲ. ಮಾಜಿ ಮಿಲಿಟಿರಿ ಅಧಿಕಾರಿ ಪಾತ್ರ ನನಗೆ ಹೊಸ ಅನುಭವ ಕೊಟ್ಟಿದೆ. ಇಲ್ಲಿ ನಾನು ಹೆಚ್ಚು ಕಲಿತಿದ್ದೇನೆ. ನಾನು ಮಾಡಿದ್ದೇನೆ ಎನ್ನುವುದಕ್ಕಿಂತ ಎಲ್ಲರೂ ನನ್ನಿಂದ ಕೆಲಸ ಮಾಡಿಸಿದ್ದಾರೆ. ಅಭಿಮಾನಿಗಳ ಪ್ರೋತ್ಸಾಹವೇ ನಮ್ಮಕೆಲಸಕ್ಕೆ ಕಾರಣ ಎಂದರು.

ಟೀಸರ್‌ ಬಿಡುಗಡೆ ಮಾಡಿ ಮಾತನಾಡಿದ ಪುನೀತ್‌, ” ಈ ವರ್ಷ ನಾವು , ನೀವೆಲ್ಲರೂ ಕೊರೊನಾ ಪರಿಸ್ಥಿತಿಗೆ ಸಿಕ್ಕವರು. ಇಂತಹ ಸಮಯದಲ್ಲೂ ಈ ಚಿತ್ರತಂಡ ಚಿತ್ರ ಮಾಡಿದೆ. ಈ ಸಿನಿಮಾದಲ್ಲಿ ರಾಘಣ್ಣ ತುಂಬಾ ಚೆನ್ನಾಗಿ ನಟಿಸಿದ್ದಾರೆ. ಸಿನಿಮಾ ಮೇಲೆ ಸಿನಿಮಾ ಮಾಡ್ತಾ ಇದ್ದಾರೆ. ಈ ಸಿನಿಮಾಗೆ ಗೆಲುವು ಸಿಗಲಿ. ರಾಘಣ್ಣ ಇಲ್ಲಿ ಫೈಟ್‌ ಮಾಡಿದ್ದಾರೆ. ಒಬ್ಬ ನಟನಿಗೆ ವಯಸ್ಸು ಇರಬಹುದು. ಯಾವುದೇ ಪರಿಸ್ಥಿತಿ ಇರಬಹುದು. ಸಿನಿಮಾ ಅಂತ ಬಂದಾಗ ಉತ್ಸಾಹ ತುಂಬುತ್ತೆ. ಜನರ ಪ್ರೀತಿ, ಅಭಿಮಾನಿಗಳ ಪ್ರೋತ್ಸಾಹವೇ ಇದಕ್ಕೆ ಕಾರಣ. ಜನವರಿ ೧ರಂದು ರಿಲೀಸ್ ಆಗಲಿದೆ ಎಲ್ಲರೂ ಪ್ರೋತ್ಸಾಹಿಸಿ ಎಂದರು.


ನಿರ್ದೇಶಕ ಪಿವಿಆರ್ ಸ್ವಾಮಿ, ” “ಅಮ್ಮನ ಮನೆ” ಸಿನಿಮಾದಲ್ಲಿ ರಾಘಣ್ಣ ಜತೆ‌ ಕೆಲಸ ಮಾಡಿದ್ದೆ. ಆಗಲೇ ಈ ಕಥೆ ಹೇಳಿದ್ದೆ. ಈ ಚಿತ್ರದಲ್ಲಿ ನಿವೃತ್ತ ಆರ್ಮಿ ಆಧಿಕಾರಿಯಾಗಿ ಕ್ಯಾಪ್ಟನ್ ರಾಜಾರಾಮ್ ಆಗಿ ಅವರು ಕಾಣಿಸಿಕೊಂಡಿದ್ದಾರೆ. ಸಮಾಜದೊಳಗಿನ ಲೋಪಗಳನ್ನು ತಮ್ಮದೆ ಶೈಲಿಯಲ್ಲಿ ಸರಿಪಡಿಸುತ್ತಾರೆ. ಅದೇಗೆ ಎಂಬುದನ್ನು ಸಿನಿಮಾದಲ್ಲಿಯೇ ನೋಡಿ. ಅಷ್ಟೇ ಅಲ್ಲ ಈ ಸಿನಿಮಾದಲ್ಲಿ ರಾಘಣ್ಣ ಅವರ ಕಡೆಯಿಂದ ಫೈಟ್ ಸಹ ಮಾಡಿಸಿದ್ದೇವೆ ಎಂದರು.


ವಿಶ್ವಂ ಡಿಜಿಟಲ್ ಮೀಡಿಯಾ ಪ್ರೈ ಲಿ ಲಾಂಛನದಲ್ಲಿ ಜೆ.ಎಂ.ಪ್ರಹ್ಲಾದ್, ವಿಜಯ್ ಭಾಸ್ಕರ್ ಹರಪನಹಳ್ಳಿ ಹಾಗೂ ಪಿ.ಆರ್.ಶ್ರೀಧರ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರಕ್ಕೆ ಯು/ಎ ಸರ್ಟಿಫಿಕೆಟ್‌ ಸಿಕ್ಕಿದೆ. ಶ್ರೀಸುರೇಶ್ ಸಂಗೀತವಿದೆ. ಪಿ.ವಿ.ಆರ್ ಸ್ವಾಮಿ ಛಾಯಾಗ್ರಹಣ, ನಾಗೇಶ್ ಸಂಕಲನ, ಚಂದನ್ ಕಲಾ ನಿರ್ದೇಶನ ಹಾಗೂ ವೈಲೆಂಟ್ ವೇಲು, ರಾಮ್ ದೇವ್, ಅಲ್ಟಿಮೆಟ್ ಶಿವು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಚಿತ್ರದಲ್ಲಿ ದೊಡ್ಡಣ್ಣ, ಶ್ರೀನಿವಾಸ ಮೂರ್ತಿ, ಭವ್ಯ, ಶಂಕರ್ ಅಶ್ವಥ್, ನೀನಾಸಂ ಅಶ್ವಥ್ ಇತರರು ನಟಿಸಿದ್ದಾರೆ.

Categories
ಸಿನಿ ಸುದ್ದಿ

ಮುತ್ತಪ್ಪ ರೈ ಚಿತ್ರ ನಾನೇ ಮಾಡ್ತೀನಿ – ರೈ ಬಳಗದ ಆಪ್ತ ಪದ್ಮನಾಭ್ ಹೇಳಿಕೆ

ಎಂಆರ್ ಸಿನಿಮಾ ಅನೌನ್ಸ್ ಮಾಡಿದ ರವಿ ಶ್ರೀವತ್ಸ ಈಗ ಏನ್ ಮಾಡ್ತಾರೆ?

ಒಂದು ಕಾಲದ ಡಾನ್ ಎಂದೇ‌ ಹೆಸರಾಗಿದ್ದ ಮುತ್ತಪ್ಪ ರೈ ಅವರ ಕುರಿತ ಚಿತ್ರವೊಂದು ಇತ್ತೀಚೆಗೆ ಮುಹೂರ್ತ ಕಂಡಿತ್ತು.
ಮಾಸ್ ನಿರ್ದೇಶಕ ಎಂದೇ ಹೆಸರಾಗಿರುವ ರವಿ ಶ್ರೀವತ್ಸ ಅವರು ನಿರ್ಮಾಪಕ ಶೋಭ ರಾಜಣ್ಣ ಅವರ ಪುತ್ರನಿಗೆ ‘ಎಂ ಆರ್’ ಹೆಸರಿನ ಸಿನಿಮಾ ಅನೌನ್ಸ್ ಮಾಡಿದ್ದರು. ತಮ್ಮ ಚಿತ್ರತಂಡದ ಪರಿಚಯ ಮಾಡಿಕೊಡುವುದರ ಜೊತೆಗೆ ‘ಎಂ ಆರ್’ ಸಿನಿಮಾ ಕುರಿತು ವಿವರ ನೀಡಿದ್ದರು.
ಆದರೆ, ಈಗ ಎಲ್ಲವೂ ಉಲ್ಟಾ ಹೊಡೆದಿದೆ. ಮುತ್ತಪ್ಪ ರೈ ಕುರಿತ ಸಿನಿಮಾವನ್ನು ನಾನೇ ಮಾಡ್ತೀನಿ ಎಂದು ಮುತ್ತಪ್ಪ ರೈ ಬಳಗದ ಆಪ್ತ ನಿರ್ಮಾಪಕ ಪದ್ಮನಾಭ್ ಹೇಳಿಕೆಯೊಂದನ್ನು ಬಿಡುಗಡೆ ಮಾಡಿದ್ದಾರೆ.
ಅವರು ಬಿಡುಗಡೆ ಮಾಡಿರುವ ಹೇಳಿಕೆಯನ್ನೊಮ್ಮೆ ಓದಿ…


‘ನಾನು, ನಿರ್ಮಾಪಕ ಎಲ್ ಪದ್ಮನಾಭ್, ಈಗಾಗಲೇ ನನ್ನ ಗಮನಕ್ಕೆ ಬಾರದೆ, ನಾನು ವಿದೇಶದಲ್ಲಿ ಇದ್ದ ಕಾರಣ, ‘ಎಂ ಆರ್’ ಸಿನಿಮಾ ಮುಹೂರ್ತ ಆಗಿರುವುದು ಗೊತ್ತಾಗಿಲ್ಲ. ಹೀಗಾಗಿ, ಮುತ್ತಪ್ಪ ರೈ ಕುರಿತ ಚಿತ್ರವನ್ನು ನಾನೇ ನಿರ್ಮಿಸಬೇಕಿದೆ. ಈಗಾಗಲೇ ಈ ಹಿಂದೆ ಈ ಬಗ್ಗೆ ಒಂದು ಪತ್ರಿಕಾಗೋಷ್ಟಿಯನ್ನೂ ನಾನು ಮಾಡಿದ್ದೆ. ಅವರಿದ್ದಾಗಲೇ ಬಹುಭಾಷೆಯಲ್ಲಿ ಈ ಚಿತ್ರ ಮಾಡುವ ಬಗ್ಗೆ ಚರ್ಚೆಯಾಗಿತ್ತು. ರಾಮ್ ಗೋಪಾಲ್ ವರ್ಮಾ ಹಿಂದೆ ಸರಿದ ಬಳಿಕ ನಾನೇ ನಮ್ಮ ಎಂಆರ್ ಬ್ಯಾನರ್ ನಲ್ಲಿ ಈ ಚಿತ್ರವನ್ನು ಬಹುಭಾಷೆಯಲ್ಲಿ ನಿರ್ಮಾಣ ಮಾಡುವ ಬಗ್ಗೆ ಪ್ರಕ್ರಿಯೆ ಈ ಮೊದಲೇ ಶುರುವಾಗಿತ್ತು. ನನ್ನ ಎಂಆರ್ ಪಿಕ್ಚರ್ಸ್ ಸಂಸ್ಥೆ ಹುಟ್ಟು ಹಾಕಿದ್ದೆ ಅದರ ಸಲುವಾಗಿ. ಅಷ್ಟೇ ಅಲ್ಲ, ರೈ ಅಣ್ಣನ ಬಗ್ಗೆ ಸಿನಿಮಾ‌ ಪ್ರಾಜೆಕ್ಟ್ ಕೈಗೆತ್ತಿಕೊಂಡರೆ ಅದಕ್ಕೆ ಅನುಮತಿ ಪಡೆಯಲೇಬೇಕಿದೆ. ಇದೀಗ ನಿರ್ದೇಶಕ ರವಿ ಶ್ರೀವತ್ಸ ಅವರು ಸಿನಿಮಾ ಘೋಷಣೆ ಮಾಡಿಕೊಂಡು ಮುಹೂರ್ತವನ್ನೂ ಮಾಡಿಕೊಂಡಿದ್ದಾರೆ. ಆ ಚಿತ್ರದ ನಿರ್ಮಾಪಕರು ಮತ್ತು ನಿರ್ದೇಶಕರೊಂದಿಗೆ ಸಿನಿಮಾ ಕೈ ಬಿಡುವಂತೆ ಚರ್ಚೆ ಮಾಡಿದ್ದೇನೆ. ಅವರಿಂದಲೂ ಸಮ್ಮತಿ ಸಿಕ್ಕಿದೆ. ಕೊಂಚ ಕಾಲಾವಕಾಶವನ್ನೂ ಕೇಳಿದ್ದಾರೆ. ಅವರು ಕೈಬಿಟ್ಟ ಬಳಿಕ ಅವರ ಸಿನಿಮಾ ಕಥೆ ಕೇಳುತ್ತೇನೆ. ಒಬ್ಬ ನಿರ್ಮಾಪಕನಾಗಿ ಮತ್ತೊಬ್ಬ ನಿರ್ಮಾಪಕನ ಸಮಸ್ಯೆ ನನಗೆ ಗೊತ್ತು. ಹಾಗಾಗಿ, ಶೂಟಿಂಗ್ ಶುರುವಾಗುವುದಕ್ಕೂ ಮುನ್ನ ಅವರ ಗಮನಕ್ಕೆ ತರುವುದು ಒಳಿತು ಎನ್ನುವ ಕಾರಣಕ್ಕೆ ಅವರೊಂದಿಗೆ ಚರ್ಚಿಸಿದ್ದೇನೆ. ಸದ್ಯ ಸಾಕಷ್ಟು ಸಿನಿಮಾಗಳು ಸೆನ್ಸಾರ್ ಆಗಿವೆ. ಅವುಗಳ ಬಿಡುಗಡೆ ಪ್ರಕ್ರಿಯೆ ಶುರುವಾಗಲಿ. ಇನ್ನು ಕೆಲ ದಿನಗಳ ಬಳಿಕ ಆ ಚಿತ್ರವನ್ನು ನಾನೇ ಘೋಷಣೆ ಮಾಡಲಿದ್ದೇನೆ. ಎಂಆರ್ ಪಿಕ್ಚರ್ಸ್ ಬ್ಯಾನರ್ ನಲ್ಲಿ ನಾನೇ ನಿರ್ಮಾಣ ಮಾಡಲಿದ್ದೇನೆ’ ಎಂದು ಪದ್ಮನಾಭ್ ಹೇಳಿದ್ದಾರೆ.
ಅದೇನೋ ಸರಿ ಆದರೆ, ರವಿ ಶ್ರೀವತ್ಸ ಅವರು ಈಗ ‘ಎಂ.ಆರ್’ ಸಿನಿಮಾ ಅನೌನ್ಸ್ ಮಾಡಿದ್ದಾರೆ. ಶೂಟಿಂಗ್ ಹೋಗುವ ತಯಾರಿಯನ್ನೂ ಮಾಡಿಕೊಂಡಿದ್ದಾರೆ. ಈಗ ಪದ್ಮನಾಭ್ ನಾನೇ ಆ ಚಿತ್ರ ಮಾಡ್ತೀನಿ ಎನ್ನುತ್ತಿದ್ದಾರೆ. ಹಾಗಾದರೆ, ರವಿ ಶ್ರೀವತ್ಸ ಅವರೇ ಪದ್ಮನಾಭ್ ನಿರ್ಮಾಣದಲ್ಲಿ ಚಿತ್ರ ನಿರ್ದೇಶನ ಮಾಡುತ್ತಾರೋ ಅಥವಾ ಬೇರೆ ನಿರ್ದೇಶಕರ ಜೊತೆ ಪದ್ಮನಾಭ್ ಸಿನಿಮಾ ನಿರ್ಮಾಣ ಮಾಡುತ್ತಾರೋ ಕಾದು ನೋಡಬೇಕಿದೆ.
ಒಟ್ಟಲ್ಲಿ ಮುತ್ತಪ್ಪ ರೈ ಅವರು ಇದ್ದಾಗಲೂ ಈ ಚಿತ್ರ ಸೆಟ್ಟೇರಲಿಲ್ಲ. ಅವರು ಇಲ್ಲವಾದಾಗ ಇನ್ನೇನು ಶುರುವಾಯಿತು ಅನ್ನುವುದರೊಳಗೆ ಈಗ ಸಿನಿಮಾಗೆ ಸಣ್ಣ ಅಡಚಣೆಯಾಗಿದೆ. ಇದು ಎಷ್ಟರಮಟ್ಟಿಗೆ ಬಗೆಹರಿದು ಸಿನಿಮಾ ಆಗುತ್ತೋ ಕಾದು ನೋಡಬೇಕಿದೆ.

Categories
ಸಿನಿ ಸುದ್ದಿ

ಪನೋರಮಾ ಗೋವಾ ಚಿತ್ರೋತ್ಸವಕ್ಕೆ ‘ ಪಿಂಕಿ ಎಲ್ಲಿ?’ ಕನ್ನಡದಿಂದ ಆಯ್ಕೆಯಾದ ಒಂದೇ ಒಂದು ಸಿನಿಮಾ

ಜ. 16 ರಿಂದ 24  ರವರೆಗೆ  ಗೋವಾ ಚಿತ್ರೋತ್ಸವ 

ಕೃಷ್ಣೇಗೌಡ ನಿರ್ಮಾಣ ಹಾಗೂ ಪೃಥ್ವಿ ಕೊಣನೂರು ನಿರ್ದೇಶನದ ‘ಪಿಂಕಿ ಎಲ್ಲಿ ? ‘ ಚಿತ್ರ ಇಂಡಿಯನ್ ಪನೋರಮಾ ಗೆ ಆಯ್ಕೆ ಆಗಿದೆ. ಭಾರತದ ವಿವಿಧ ಭಾಷೆಗಳ ಒಟ್ಟು 23 ಸಿನಿಮಾಗಳ ಪೈಕಿ ಕನ್ನಡದಿ‌ಂದ ಆಯ್ಕೆಯಾದ ಒಂದೇ ಒಂದು‌ ಸಿನಿಮಾ ‘ಪಿಂಕಿ ಎಲ್ಲಿ? ‘ ಮಾತ್ರ.
ಇಂಡಿಯನ್ ಪನೋರಮಾ ಅಂತಾರಾಷ್ಟ್ರೀಯ ಚಿತ್ರೋತ್ಸವ ಮುಂದಿನ ತಿಂಗಳು 16 ರಿಂದ 24 ರವರೆಗೆ ಗೋವಾದಲ್ಲಿ‌ ನಡೆಯುವ ಸಾಧ್ಯತೆಗಳಿವೆ. ಒಂದು‌ ಮೂಲದ ಪ್ರಕಾರ ಇಂಡಿಯನ್ ಪನೋರಮಾ ಚಿತ್ರೋತ್ಸವಕ್ಕೆ ಕನ್ನಡದಿಂದ ನಾಲ್ಕು ಚಿತ್ರಗಳು ಆಯ್ಕೆಯ ಅಂತಿಮ ಹಂತದಲ್ಲಿದ್ದವು. ಈ ಪೈಕಿ ಪಿಂಕಿ ಎಲ್ಲಿ? ಮಾತ್ರ ಅವುಗಳಲ್ಲಿ ಆಯ್ಕೆ ಯಾಗಿರುವುದು ಅಧಿಕೃತ ಗೊಂಡಿದೆ.
ಉಳಿದಂತೆ ಪನೋರಮಾ ಚಿತ್ರದಲ್ಲಿ ಮಲಯಾಳಂ ಚಿತ್ರಗಳಿಗೆ ಭಾರೀ ಆದ್ಯತೆ ಸಿಕ್ಕಿದೆ.ಅನ್ವರ್ ರಷೀದ್ ನಿರ್ದೇಶನ್ ಟ್ರಾನ್ಸ್ ಸೇರಿದಂತೆ ಐದು ಚಿತ್ರಗಳ ಚಿತ್ರೋತ್ಸವಕ್ಕೆ ಸೆಲೆಕ್ಟ್ ಆಗಿವೆ. ವಿಶೇಷ ಅಂದ್ರೆ ತಮಿಳು ಚಿತ್ರರಂಗದಿಂದ ವೆಟ್ರಿಮಾರನ್ ನಿರ್ದೇಶನ ಹಾಗೂ‌ಧನುಷ್ ಅಭಿನಯದ ಬ್ಲಾಕ್ ಬಸ್ಟರ್ ಚಿತ್ರ ಅಸುರನ್ ಕೂಡ ಪನೋರಮಾ ಚಿತ್ರೋತ್ಸವಕ್ಕೆ ಆಯ್ಕೆಯಾಗುವ ಮೂಲಕ ಭಾರೀ ಕುತೂಹಲ ಮೂಡಿಸಿದೆ. ಹಾಗೆಯೇ ಗಣೇಶನ್ ವಿನಾಯಕನ್ ಅವರ ಥೈನ್ ಕೂಡ ಸೆಲೆಕ್ಟ್ ಆಗಿದೆ‌.

ಎಲ್ಲವೂ ಈಗ ಒಳ್ಳೆಯ ದಾಗುತ್ತಿದೆ. ಪನೋರಮಾ ಚಿತ್ರೋತ್ಸವಕ್ಕೆ ಆಯ್ಕೆಯಾಗಿರುವುದು ಖುಷಿ ತಂದಿದೆ.

– ಕೃಷ್ಟೇ ಗೌಡ, ಪಿಂಕಿ ಎಲ್ಲಿ ? ಚಿತ್ರದ ನಿರ್ಮಾಪಕ

ಮರಾಠಿ ಹಾಗೂ ಹಿಂದಿ ಚಿತ್ರಗಳು ಪನೋರಮಾ ಚಿತ್ರೋತ್ಸವದಲ್ಲಿ ಹೆಚ್ಚು ಆದ್ಯತೆ ಪಡೆದಿವೆ‌. ಗೋವಿಂದ್ ನಿಹಲಾನಿ ನಿರ್ದೇಶನದ’ ಅಪ್ ಅಪ್ಆ್ಯಂಡ್ ಅಪ್’. ನಾನ್ ಪ್ಯೂಚರ್ ವಿಭಾಗದಲ್ಲಿ ಚಿತ್ರೋತ್ಸವಕ್ಕೆ ಆಯ್ಕೆ ಆಗಿದೆ. ಫಿಲ್ಮ್ ಮೇಕರ್ ಜಾನ್ ಮ್ಯಾಥ್ಯೂ ಮಥನ್ ನೇತೃತ್ವದ 13 ಜನರ ಜ್ಯೂರಿ ಕಮಿಟಿ ಪ್ಯೂಚರ್ ಫಿಲ್ಮ್ ಸೆಲೆಕ್ಟ್ ಕಮಿಟಿಯಲ್ಲಿತ್ತು.

Categories
ಸಿನಿ ಸುದ್ದಿ

ಶಂಭೋ ಶಿವ ಶಂಕರನ ಶೂಟಿಂಗ್‌ ಜೋರು -ನಾಯಕಿ ಸೋನಾಲ್‌ ಎಂಟ್ರಿ ಭರ್ಜರಿ

ಪೊಲೀಸ್‌ ಅಧಿಕಾರಿಯಾಗಿ ಸುಪ್ರೀಂ ಹೀರೋ ಶಶಿಕುಮಾರ್‌ ‌

ನಿಮಗೆ “ಶಂಭೋ ಶಿವ ಶಂಕರ” ಸಿನಿಮಾ ಬಗ್ಗೆ ಗೊತ್ತಿರಬಹುದು. ಇತ್ತೀಚೆಗಷ್ಟೇ ಶುರುವಾದ ಸಿನಿಮಾವಿದು. ಇತ್ತೀಚೆಗಷ್ಟೇ ಈ ಚಿತ್ರದಲ್ಲಿ ಶಶಿಕುಮಾರ್‌ ಅವರು ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಳ್ಳಲಿದ್ದಾರೆ ಎಂದು ಸುದ್ದಿಯಾಗಿತ್ತು. ಈಗ ಈ ಚಿತ್ರದಿಂದ ಮತ್ತೊಂದು ಹೊಸ ಸುದ್ದಿ ಹೊರಬಿದ್ದಿದೆ. ಈ ಚಿತ್ರದ ಚಿತ್ರೀಕರಣ ಬಿರುಸಾಗಿಯೇ ಸಾಗಿದೆ. ಈ ಚಿತ್ರದಲ್ಲಿ ಸೋನಾಲ್‌ ಮಾಂತೆರೋ ನಾಯಕಿಯಾಗಿ ಕಾಣಿಸಿಕೊಂಡಿದ್ದಾರೆ. ಅವರ ಎಂಟ್ರಿಯ ದೃಶ್ಯವನ್ನು ಅದ್ಧುರಿಯಾಗಿಯೇ ಚಿತ್ರೀಕರಿಸಲಾಗಿದೆ.

ಇತ್ತೀಚೆಗೆ ಅವರ ಪರಿಚಯಿಸುವ ದೃಶ್ಯವನ್ನು ಉತ್ತರಹಳ್ಳಿಯಲ್ಲಿರುವ ಸುಬ್ರಹ್ಮಣ್ಯಪುರ ಪೊಲೀಸ್‌ ಠಾಣೆ ಬಳಿ ಅದ್ಧೂರಿಯಾಗಿಯೇ ಚಿತ್ರೀಕರಿಸಲಾಗಿದೆ. ಈ ದೃಶ್ಯದಲ್ಲಿ ಸೋನಾಲ್‌ ಮಾಂತೆರೊ ಜೊತೆಯಲ್ಲಿ ನಾಯಕರಾದ ಅಭಯ್‌ ಪುನೀತ್‌, ರೋಹಿತ್‌ ಹಾಗೂ ರಕ್ಷಕ್‌ ಸೇರಿದಂತೆ ಇತರರು ಕಾಣಿಸಿಕೊಂಡಿದ್ದಾರೆ. ಅಘನ್ಯ ಪಿಕ್ಚರ್ಸ್ ಬ್ಯಾನರ್‌ನಲ್ಲಿ ವರ್ತೂರ್ ಮಂಜು ಅವರು ನಿರ್ಮಿಸುತ್ತಿರುವ ಚಿತ್ರ ಈಗಾಗಲೇ ಶೇ,೫೦ ರಷ್ಟಯ ಚಿತ್ರೀಕರಣಗೊಂಡಿದೆ. ಇದುವರೆಗೆ ಬಹುತೇಕ ಬೆಂಗಳೂರಲ್ಲೇ ಚಿತ್ರೀಕರಣ ನಡೆಸಲಾಗಿದೆ. ಈ ಚಿತ್ರವನ್ನು ಶಂಕರ್ ಕೋನಮಾನಹಳ್ಳಿ ನಿರ್ದೇಶಿಸುತ್ತಿದ್ದಾರೆ. ಇವರು ಕಿರುತೆರೆಯಲ್ಲಿ ಜನಪ್ರಿಯ ಧಾರಾವಾಹಿಗಳನ್ನು ನಿರ್ದೇಶಿಸಿದ್ದು, “ಶಂಭೋ ಶಿವ ಶಂಕರ” ಇವರ ಮೊದಲ ಚಿತ್ರ. ಈ ಚಿತ್ರಕ್ಕೆ ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ಅವರೇ ಬರೆದಿದ್ದಾರೆ.

ಗೌಸ್‌ ಪೀರ್ ಹಾಗೂ ಹಿತನ್ ಹಾಸನ್ ಹಾಡುಗಳನ್ನು ಬರೆದಿದ್ದು, ಹಿತನ್ ಹಾಸನ್ ಸಂಗೀತವಿದೆ. ನಟರಾಜ್ ಮುದ್ದಾಲ ಛಾಯಾಗ್ರಹಣ ಮಾಡಿದರೆ, ಕಲೈ ನೃತ್ಯ ನಿರ್ದೇಶನವಿದೆ. ವೆಂಕಟೇಶ್ ಯುಡಿವಿ ಸಂಕಲನ ಹಾಗೂ ಅಲ್ಟಿಮೆಟ್ ಶಿವು ಅವರ ಸಾಹಸವಿದೆ. ಅಂದಹಾಗೆ, ‘ಶಂಭೋ ಶಿವ ಶಂಕರ’ ಇದು ಮೂವರು ನಾಯಕರ ಹೆಸರಿರುವ ಸಿನಿಮಾ. ಈ ಮೂರು ಹೆಸರಿನ ಪಾತ್ರದಲ್ಲಿ ಅಭಯ್ ಪುನೀತ್, ರೋಹಿತ್ ಹಾಗೂ ರಕ್ಷಕ್ ನಟಿಸುತ್ತಿದ್ದಾರೆ.

error: Content is protected !!