ಹೊಸಬರ ಹೊಸ ವೇಷ – ವಿನೋದ್‌ ಪ್ರಭಾಕರ್‌ ಶುಭಹಾರೈಕೆ

ಒಂದೇ ಹಂತದಲ್ಲಿ ಶೂಟಿಂಗ್‌ ಮುಗಿಸೋ ಯೋಚನೆ

ದಿನ ಕಳೆದಂತೆ ಹೊಸ ಚಿತ್ರಗಳು ಸೆಟ್ಟೇರುತ್ತಲೇ ಇವೆ. ಆ ಸಾಲಿಗೆ ಈಗ ಹೊಸಬರು ಸೇರಿ ಮಾಡುತ್ತಿರುವ “ವೇಷ” ಕೂಡ ಸೇರಿದೆ. ಹಂಸಿನಿ ಕ್ರಿಯೇಷನ್ಸ್‌ ಬ್ಯಾನರ್‌ನಲ್ಲಿ ತಯಾರಾಗುತ್ತಿರುವ “ವೇಷ”ಕ್ಕೆ ಮಹಾಕಾಳಿ ದೇವಾಲಯದಲ್ಲಿ ಮುಹೂರ್ತ ನಡೆದಿದೆ. ಮುಹೂರ್ತಕ್ಕೆ ಆಗಮಿಸಿದ ನಟ ವಿನೋದ್‌ ಪ್ರಭಾಕರ್‌ ಅವರು ಹೊಸಬರ ತಂಡಕ್ಕೆ ಶುಭಹಾರೈಸಿದ್ದಾರೆ. ಜನವರಿ 27ರಿಂದ ಒಂದೇ ಹಂತದಲ್ಲಿ ಚಿತ್ರೀಕರಣ ಮಾಡುವ ಯೋಚನೆ ಚಿತ್ರತಂಡಕ್ಕಿದೆ. ಬಹುತೇಕ ಹೊಸಬರೇ ಸೇರಿ ಈ ಚಿತ್ರ ಮಾಡುತ್ತಿದ್ದು, ಈಗಾಗಲೇ “ಉಡುಂಬಾ”, “ಗೂಳಿಹಟ್ಟಿ” ಚಿತ್ರ ಸೇರಿದಂತೆ ಹಲವು ಚಿತ್ರಗಳಲ್ಲಿ ನಿರ್ದೇಶನ ವಿಭಾಗದಲ್ಲಿ ಕೆಲಸ ಮಾಡಿದ ಅನುಭವ ಇರುವ ಪವನ್ ಕೃಷ್ಣ “ವೇಷ” ಚಿತ್ರವನ್ನು ನಿರ್ದೇಶನ ಮಾಡುತ್ತಿದ್ದಾರೆ.

ಇನ್ನು, ರಘು ಈ ಚಿತ್ರದ ಹೀರೋ. ಇದರೊಂದಿಗೆ ನಿರ್ಮಾಪಕರಾಗಿಯೂ ಕಾಣಿಸಿಕೊಳ್ಳುತ್ತಿದ್ದಾರೆ. ತಮ್ಮ ನಿರ್ದೇಶನದ ಚಿತ್ರದ ಬಗ್ಗೆ ಮಾತನಾಡುವ ಪವನ್‌ಕೃಷ್ಣ, ” ಇದೊಂದು ಮಾಸ್, ಕಾಮಿಡಿ, ಸೆಂಟಿಮೆಂಟ್ ಮತ್ತು ಸಸ್ಪೆನ್ಸ್ ಹೀಗೆ ಈ ನಾಲ್ಕು ಅಂಶಗಳು “ವೇಷ” ಚಿತ್ರದ ಹೈಲೈಟ್‌. ಜೀವನದಲ್ಲಿ ಪ್ರತಿಯೊಬ್ಬರು ಒಂದೊಂದು “ವೇಷ” ಹಾಕಿರುತ್ತಾರೆ. ಇಲ್ಲಿ ಎಲ್ಲರಿಗೂ ಒಂದೊಂದು ವೇಷವಿದೆ. ಅದನ್ನು ಹಾಕಿದ ಉದ್ದೇಶ ಏನು ಎಂಬುದನ್ನು ಸಿನಿಮಾದಲ್ಲಿಯೇ ನೋಡಿ ಎನ್ನುವ ಅವರು, ಜನವರಿ 27ರಿಂದ ಚಿತ್ರೀಕರಣಕ್ಕೆ ಚಾಲನೆ ಸಿಗಲಿದ್ದು, ಉಡುಪಿ, ಚಿಕ್ಕಮಗಳೂರು, ಕುಂದಾಪುರ ಸೇರಿದಂತೆ ಹಲವೆಡೆ ಚಿತ್ರೀಕರಣ ನಡೆಯಲಿದೆ. ಒಟ್ಟಾರೆ 40 ದಿನಗಳ ಒಂದೇ ಹಂತದ ಚಿತ್ರೀಕರಣ ನಡೆಸಿ, ಪೂರ್ಣಗೊಳಿಸುವ ಉದ್ದೇಶವಿದೆ ಎನ್ನುತ್ತಾರೆ ನಿರ್ದೇಶಕರು.

ಕಿರುತೆರೆಯ ನಟಿ ವಾಣಿಶ್ರೀ ಚಿತ್ರದಲ್ಲಿ ತಾಯಿ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ, “ಯುವ ತಂಡದ ಜತೆಗೆ ಕೆಲಸ ಮಾಡುತ್ತಿರುವುದಕ್ಕೆ ಖುಷಿ ಇದೆ. ಹೊಸಬರ ಸಿನಿಮಾಗಳು ಹೆಚ್ಚೆಚ್ಚು ಬರಬೇಕು. ಅವರಿಂದಲೇ ನಮಗೂ ಕೆಲಸ ಸಿಗುತ್ತದೆ” ಎನ್ನುತ್ತಾರೆ ವಾಣಿಶ್ರೀ. ಚಿತ್ರದಲ್ಲಿ ನಾಯಕನಾಗಿ ನಟಿಸುವುದರ ಜೊತೆಗೆ ನಿರ್ಮಾಪಕನಾಗಿಯೂ ರಘು ಕಾಣಿಸಿಕೊಳ್ಳುತ್ತಿದ್ದಾರೆ. ಮೂಲತಃ ರಘು ರಂಗಭೂಮಿ ಹಿನ್ನಲೆಯಿಂದ ಬಂದವರು. ಹಲವು ನಾಟಕ ಬರೆದು ಅಭಿನಯಿಸಿದ್ದಾರೆ. ಕೆಲ ವರ್ಷಗಳಿಂದ ರಂಗಭೂಮಿಯಿಂದಲೂ ದೂರ ಉಳಿದಿದ್ದ ಅವರೀಗ “ವೇಷ” ಸಿನಿಮಾ ಮೂಲಕ ಎಂಟ್ರಿಯಾಗುತ್ತಿದ್ದಾರೆ. ಹೊಸ ಬಗೆಯ ಕಥೆಯೊಂದಿಗೆ ಆಗಮಿಸುತ್ತಿರುವ ಅವರಿಗೆ ಚಿತ್ರದ ಮೇಲೆ ನಂಬಿಕೆ ಇದೆಯಂತೆ.


ಮಂಜು ಪಾವಗಡ ಚಿತ್ರದಲ್ಲಿ ಶಿಕ್ಷಕನ ಪಾತ್ರ ಮಾಡಿದರೆ, ಜಯ್ ಶೆಟ್ಟಿ ಪ್ರಮುಖ ಪಾತ್ರ ನಿರ್ವಹಿಸುತ್ತಿದ್ದಾರೆ. ಸೌಖ್ಯ ಗೌಡ ಮತ್ತು ನಿಧಿ ಮಾರೋಲಿ ನಾಯಕಿಯರು. ಅವರಿಲ್ಲಿ ಸಾಂಪ್ರದಾಯಿಕ ಗೆಟಪ್‌ನಲ್ಲಿ ಕಾಣಿಸಿಕೊಳ್ಳಲಿದ್ದಾರೆ. ನೇಹಾ ಗೌಡ ಇಲ್ಲಿ ತಂಗಿ ಪಾತ್ರ ಮಾಡುತ್ತಿದ್ದಾರೆ. ಚಿತ್ರದ 3 ಹಾಡುಗಳಿಗೆ ಮನೀಷ್ ಮೋಯ್ಲಿ ಸಾಹಿತ್ಯ ಬರೆದಿದ್ದಾರೆ. ಉತ್ತಮ್ ಸಾರಂಗ್ ಸಂಗೀತವಿದೆ. ಕಿರಿಕ್ ಹುಡುಗ ಕೀರ್ತನ್ ಶೆಟ್ಟಿ ಕ್ರಿಯೇಟಿವ್ ಹೆಡ್ ಆಗಿದ್ದಾರೆ. ಸುರೇಂದ್ರ ಪಣಿಯೂರ್ ಛಾಯಾಗ್ರಹಣ ಮಾಡಿದರೆ, ಸನತ್ ಉಪ್ಪುಂದ ಸಂಕಲನವಿದೆ. ಪವನ್‌ ಕುಮಾರ್‌ ಸಂಭಾಷಣೆ ಬರೆದಿದ್ದಾರೆ. ಜಾಗ್ವಾರ್ ಸಣ್ಣಪ್ಪ ಸಾಹಸವಿದೆ. ಪಿ. ರಾಮ್ ನೃತ್ಯ ನಿರ್ದೇಶನ ಮಾಡಿದ್ದಾರೆ.

Related Posts

error: Content is protected !!