ಇನ್ಸ್‌ಪೆಕ್ಟರ್ ವಿಕ್ರಂ ಫೆಬ್ರವರಿ 5ಕ್ಕೆ ರಿಲೀಸ್‌ – ಪ್ರಜ್ವಲ್‌ ಅಭಿನಯದ ಮಾಸ್‌ ಚಿತ್ರವಿದು

 ಅಂದು ಶಿವಣ್ಣ ಇಂದು ಪ್ರಜ್ವಲ್

ಕನ್ನಡ ಚಿತ್ರರಂಗ ಇದೀಗ ಶೈನ್‌ ಆಗುತ್ತಿದೆ. ಹೌದು, ಈಗ ಕನ್ನಡ ಸಿನಿಮಾಗಳ ಬಿಡುಗಡೆಯ ಪರ್ವ. ಕೊರೊನಾ ಬಳಿಕ ಮೆಲ್ಲನೆ ಚೇತರಿಸಿಕೊಂಡಿರುವ ಚಿತ್ರರಂಗ, ಈಗ ಸಿನಿಮಾ ಬಿಡುಗಡೆ ಬಗ್ಗೆ ಹೆಚ್ಚು ಒಲವು ತೋರಿಸಿದೆ. ಆ ನಿಟ್ಟಿನಲ್ಲಿ ಈಗಾಗಲೇ ಸಿನಿಮಾಗಳು ಬಿಡುಗಡೆಯಾಗುತ್ತಿವೆ. ಸ್ಟಾರ್‌ ಚಿತ್ರಗಳು ಸಹ ಬಿಡುಗಡೆ ದಿನವನ್ನು ಘೋಷಿಸಿವೆ. ಈಗ ಪ್ರಜ್ವಲ್ ದೇವರಾಜ್‌ ಅಭಿನಯದ “ಇನ್ಸ್‌ಪೆಕ್ಟರ್‌ ವಿಕ್ರಂ”‌ ಚಿತ್ರ ಕೂಡ ತನ್ನ ಬಿಡುಗಡೆಯ ದಿನಾಂಕವನ್ನು ಘೋಷಿಸಿದೆ. ಹೌದು, ಫೆಬ್ರವರಿ 5ರಂದು ರಾಜ್ಯಾದ್ಯಂತ ಬಿಡುಗಡೆ ಮಾಡಲು ಚಿತ್ರತಂಡ ನಿರ್ಧರಿಸಿದೆ.


“ಇನ್ಸ್‌ಪೆಕ್ಟರ್‌ ವಿಕ್ರಂ” ಅಂದಾಕ್ಷಣ, ಶಿವರಾಜಕುಮಾರ್‌ ಅವರ ನೆನಪಾಗುತ್ತದೆ. ಯಾಕೆಂದರೆ, ಶಿವಣ್ಣ ಅಭಿನಯದ ಸಿನಿಮಾ ಇದು. ಆ ದಿನಗಳಲ್ಲೇ ಸೂಪರ್‌ ಹಿಟ್‌ ಸಿನಿಮಾ ಇದು. ಈಗ ಮತ್ತದೇ ಶೀರ್ಷಿಕೆಯಡಿ ಸಿನಿಮಾ ಚಿತ್ರೀಕರಣಗೊಂಡು, ಬಿಡುಗಡೆಯಾಗುತ್ತಿದೆ. ಇಲ್ಲಿ ಪ್ರಜ್ವಲ್‌ ದೇವರಾಜ್‌ ಅವರು ಇನ್ಸ್‌ಪೆಕ್ಟರ್‌ ಆಗಿ ಕಾಣಿಸಿಕೊಳ್ಳುತ್ತಿದ್ದಾರೆ ಎಂಬುದೇ ವಿಶೇಷ. ಶ್ರೀನರಸಿಂಹ ಈ ಚಿತ್ರವನ್ನು ನಿರ್ದೇಶನ ಮಾಡಿದ್ದಾರೆ. ಹಿಂದೆ ರಮೇಶ್‌ ಅರವಿಂದ್‌ ಅವರ “ಪುಷ್ಪಕ ವಿಮಾನ” ಚಿತ್ರ ನಿರ್ಮಿಸಿದ್ದ ವಿಖ್ಯಾತ್‌ ಎ.ಆರ್.‌ ಅವರು ಈ ಚಿತ್ರವನ್ನು ಅದ್ಧುರಿಯಾಗಿಯೇ ನಿರ್ಮಾಣ ಮಾಡಿದ್ದಾರೆ.

ಚಿತ್ರಕ್ಕೆ ನವೀನ್‌ಕುಮಾರ್‌ ಕ್ಯಾಮೆರಾ ಹಿಡಿದರೆ, ಅನೂಪ್‌ ಸೀಳಿನ್‌ ಅವರ ಸಂಗೀತ ನಿರ್ದೇಶನವಿದೆ. ಗುರು ಕಶ್ಯಪ್‌ ಅವರು ಚಿತ್ರಕ್ಕೆ ಮಾತುಗಳನ್ನು ಪೋಣಿಸಿದ್ದಾರೆ. ಹರೀಶ್‌ ಕೊಮ್ಮೆ ಅವರ ಸಂಕಲನ ಚಿತ್ರಕ್ಕಿದೆ. ಥ್ರಿಲ್ಲರ್‌ ಮಂಜು ಮತ್ತು ವಿನೋದ್‌ ಅವರು ಭರ್ಜರಿ ಸ್ಟಂಟ್ಸ್‌ ಮಾಡಿಸಿದ್ದಾರೆ. “ಇನ್ಸ್‌ಪೆಕ್ಟರ್‌ ವಿಕ್ರಂ” ಅಂದರೆ, ಖಡಕ್‌ ಪೊಲೀಸ್‌ ಅಧಿಕಾರಿಯ ನೆನಪಾಗುತ್ತೆ. ಇಲ್ಲಿ ಪ್ರಜ್ವಲ್‌ ರಗಡ್‌ ಲುಕ್‌ನಲ್ಲೂ ಇದ್ದಾರೆ. ಪಕ್ಕಾ ಪೊಲೀಸ್‌ ಅಧಿಕಾರಿಯಾಗಿ, ಎದುರಾಳಿಗಳನ್ನು ಹಿಗ್ಗಾಮುಗ್ಗ ಚಚ್ಚುವಲ್ಲೂ ನಟಿಸಿದ್ದಾರೆ. ಇನ್ನು, ಇದೊಂದು ಮಾಸ್‌ ಸಿನಿಮಾ ಅಂತ ಪ್ರತ್ಯಕೇವಾಗಿ ಹೇಳಬೇಕಿಲ್ಲ.

ಸದ್ಯಕ್ಕೆ ಚಿತ್ರ ಬಿಡುಗಡೆಯ ದಿನವನ್ನು ಅನೌನ್ಸ್‌ ಮಾಡಿದೆ. ಪ್ರಜ್ವಲ್‌ ಅಭಿನಯದ ಈ ಚಿತ್ರ ಈ ವರ್ಷದಲ್ಲಿ ಬಿಡುಗಡೆಯಾಗುತ್ತಿರುವ ಮೊದಲ ಚಿತ್ರ. ಪ್ರಜ್ವಲ್‌ ಅವರ ಅಭಿನಯದ ಸಾಲು ಸಾಲು ಸಿನಿಮಾಗಳು ರೆಡಿಯಾಗಿವೆ. “ಅಬ್ಬರ” ಸಿನಿಮಾ ಬಿಡುಗಡೆಗೆ ಸಜ್ಜಾಗಿದೆ. “ಅರ್ಜುನ್‌ ಗೌಡ” ಸಿನಿಮಾ ಕೂಡ ತೆರೆಗೆ ಬರಲು ಅಣಿಯಾಗುತ್ತಿದೆ. “ಅಬ್ಬರ” ಚಿತ್ರಕ್ಕೆ ರಾಮ್‌ನಾರಾಯಣ್‌ ನಿರ್ದೇಶನ ಮಾಡಿದರೆ, “ಅರ್ಜುನ್‌ ಗೌಡ” ಚಿತ್ರವನ್ನು ಲಕ್ಕಿ ಶಂಕರ್‌ ನಿರ್ದೇಶಿಸಿದ್ದಾರೆ. ಇನ್ನು, ಖದರ್‌ ಕುಮಾರ್‌ ನಿರ್ದೇಶನದ “ವೀರಂ” ಸಿನಿಮಾ ಚಿತ್ರೀಕರಣದಲ್ಲಿದೆ.

 

Related Posts

error: Content is protected !!