Categories
ಸಿನಿ ಸುದ್ದಿ

ಹೊಸ ವರ್ಷಕ್ಕೆ ರಿವೀಲ್‌ ಆಗುತ್ತೆ ಡಾರ್ಲಿಂಗ್‌ ಕೃಷ್ಣ ಹೊಸ ಸಿನಿಮಾ ಟೈಟಲ್‌ ಲಾಂಚ್‌

ಮಿಲನಾ ನಾಗರಾಜ್‌ , ನಿಮಿಕಾ ರತ್ನಾಕರ್‌ ಜತೆಗೆ ಡಾರ್ಲಿಂಗ್‌ ಡ್ಯುಯೆಟ್‌

ಡಾರ್ಲಿಂಗ್‌ ಕೃಷ್ಣ , ಮಿಲನ ನಾಗರಾಜ್‌ ಹಾಗೂ ನಿಮಿಕಾ ರತ್ನಾಕರ್ ಅಭಿನಯದ ” ವರ್ಜಿನ್‌ʼ ಚಿತ್ರದ ಟೈಟಲ್‌ ವಿವಾದಕ್ಕೆ ಕೊನೆಗೂ ತೆರೆ ಬಿದ್ದಿದೆ. ಚಿತ್ರತಂಡ ಟೈಟಲ್‌ ಬದಲಾವಣಿಗೆ ಮುಂದಾಗಿದೆ. ಹೊಸ ವರ್ಷದ ದಿನವೇ ಈ ಚಿತ್ರದ ಹೊಸ ಟೈಟಲ್‌ ಅನಾವರಣಗೊಳ್ಳುತ್ತಿದೆ.

 

ಆ ಮೂಲಕ ಚಿತ್ರವನ್ನು ಅದ್ದೂರಿಯಾಗಿ ತೆರೆಗೆ ತರಲು ಹೊರಟಿದೆ ಚಿತ್ರ ತಂಡ. ಲಾಕ್‌ ಡೌನ್‌ ಸಮಯದಲ್ಲೇ ಶುರುವಾದ ಈ ಚಿತ್ರಕ್ಕೆ ಈಗಾಗಲೇ ಚಿತ್ರೀಕರಣವೂ ಮುಗಿದಿದೆ. ಹಾಡಿನ ಚಿತ್ರೀಕರಣ ಮಾತ್ರ ಬಾಕಿ ಉಳಿದಿದೆಯಂತೆ. ಈ ಹಂತದಲ್ಲೇ ಚಿತ್ರ ತಂಡ ಟೈಟಲ್‌ ಲಾಂಚ್‌ ಮಾಡಲು ಹೊರಟಿದೆ.

ಸದ್ಯಕ್ಕೆ ಈ ಚಿತ್ರದ ವಿಶೇಷತೆಗಳೇನು ಅನ್ನೋದು ರಿವೀಲ್‌ ಆಗಿಲ್ಲ. ಆದರೆ ಈ ಚಿತ್ರ ಟೈಟಲ್‌ ಮೂಲಕವೇ ದೊಡ್ಡ ವಿವಾದ ಸೃಷ್ಟಿಸಿತ್ತು. ʼವರ್ಜಿನ್‌ʼ ಎನ್ನುವ ಚಿತ್ರದ ಶೀರ್ಷಿಕೆಗೆ ಪ್ರೇಕ್ಷಕರಿಂದ ತೀವ್ರ ವಿರೋಧ ವ್ಯಕ್ತವಾಗಿತ್ತು. ಕೊನೆಗೆ ಚಿತ್ರ ತಂಡವು “ಶೀಘ್ರಮೇವ ಕಲ್ಯಾಣ ಮಸ್ತುʼ ಎನ್ನುವ ಟೈಟಲ್‌ ಸೆಲೆಕ್ಟ್‌ ಮಾಡಿಕೊಂಡಿತು. ಆ ಹೆಸರಲ್ಲೇ ಚಿತ್ರೀಕರಣ ಮುಗಿಸಿಕೊಂಡು ಬಂತು. ಅದು ಕೂಡ ಚಿತ್ರದ ಕತೆಗೆ ಸೂಕ್ತ ಎನಿಸದ ಕಾರಣ, ಈಗ ಬೇರೆ ಟೈಟಲ್‌ ಸೆಲೆಕ್ಟ್‌ ಮಾಡಿಕೊಂಡಿದ್ದು, ಅದನ್ನು ಹೊಸ ವರ್ಷದ ದಿನದಂದೇ ಲಾಂಚ್‌ ಮಾಡುತ್ತಿದೆ. ಅಂದ ಹಾಗೆ ಇದು ಆಂಧ್ರ ಮೂಲದ ಹೊಸ ಪ್ರತಿಭೆ ನಾಯ್ಡು ಬಂಡಾರ ನಿರ್ದೇಶನದ ಚಿತ್ರ. ಇವರು ಪೂರಿ ಜಗನ್ನಾಥ್‌ ಅವರ ಬಳಿ ಸಹಾಯಕ ನಿರ್ದೇಶಕರಾಗಿ ಕೆಲಸ ಮಾಡಿದವರಂತೆ.

ಕನ್ನಡಕ್ಕೆ ಇದೇ ಮೊದಲು ನಿರ್ದೇಶಕರಾಗಿ ಎಂಟ್ರಿ ಆಗುತ್ತಿದ್ದಾರೆ. ನಿರ್ದೇಶಕರ ಹಾಗೆ ನಿರ್ಮಾಕರದ್ದು ಕೂಡ ಆಂಧ್ರ ಮೂಲ. ಶ್ರೀನಿವಾಸ್‌ ಹಾಗೂ ಡಿ. ಸ್ವರ್ಣಲತಾ ಚಿತ್ರದ ನಿರ್ಮಾಣಕ್ಕೆ ಬಂಡವಾಳ ಹಾಕಿದ್ದಾರೆ. ಸಹ ನಿರ್ಮಾಪಕರಾಗಿ ಚಲಪತಿ, ಕಿರಣ್‌ ಕುಮಾರ್‌ ಇದ್ದಾರೆ.

ಕದ್ರಿ ಮಣಿಕಾಂತ್‌ ನಿರ್ದೇಶನ ಹಾಗೂ ಕ್ರೇಜಿ ಮೈಂಡ್ಸ್‌ ಛಾಯಾಗ್ರಹಣ ಚಿತ್ರಕ್ಕಿದೆ. ಚಿತ್ರ ತಂಡದ ಮೂಲಗಳ ಪ್ರಕಾರ ಕಾಮಿಡಿ ಡ್ರಾಮಾ, ಹಾಗೆಯೇ ಕ್ಯೂಟ್‌ ಲವ್‌ ಸ್ಟೋರಿ ಸಿನಿಮಾ. ಚಿತ್ರ ತಂಡ ಈಗ ಟೈಟಲ್‌ ಲಾಂಚ್‌ ಮೂಲಕ ಸದ್ದು ಮಾಡಲು ಹೊರಟಿದೆ. ಸಿನಿಮಾ ಕನ್ನಡ ಹಾಗೂ ತೆಲುಗು ಎರಡು ಭಾಷೆಯಲ್ಲೂ ಬರುವ ಸಾಧ್ಯತೆಯಿದೆ. ಸದ್ಯಕ್ಕೆ ಕನ್ನಡದಲ್ಲಿ ಮಾತ್ರ ತೆರೆಗೆ ಬರಲಿದೆಯಂತೆ.

Categories
ಸಿನಿ ಸುದ್ದಿ

ವಿಷ್ಣು 11 ನೇ ಪುಣ್ಯಸ್ಮರಣೆಗೆ ಹರಿದು ಬಂದ ಅಭಿಮಾನಿ ಬಳಗ – ವಿಶೇಷ ಪೂಜೆ, ನಮನ

ಅಭಿಮಾನಿಗಳಿಂದಲೇ ಅನ್ನದಾನ ಕಾರ್ಯಕ್ರಮ

ಡಾ.ವಿಷ್ಣುವರ್ಧನ್‌ ಇಂದು ನಮ್ಮೊಂದಿಗಿಲ್ಲವಾದರೂ, ಅವರು ಬಿಟ್ಟು ಹೋದ ಆದರ್ಶಗಳಿವೆ. ನೂರಾರು ಅದ್ಭುತ ಚಿತ್ರಗಳಿವೆ. ಆ ಮೂಲಕ ಅವರಿನ್ನೂ ಜೀವಂತವಾಗಿದ್ದಾರೆ. ಅವರ ಅಪಾರ ಅಭಿಮಾನಿಗಳು ಹಾಗೂ ಕುಟುಂಬ ವರ್ಗ ಡಿಸೆಂಬರ್‌ 30 ರಂದು ಅವರ 11 ನೇ ಪುಣ್ಯತಿಥಿಯನ್ನು ಆಚರಿಸಿದೆ. ಅವರಿಲ್ಲದ ಈ ಹನ್ನೊಂದು ವರ್ಷಗಳನ್ನು ಊಹಿಸಲೂ ಸಾಧ್ಯವಿಲ್ಲ. 2009ರ ಡಿಸೆಂಬರ್‌ 30ರಂದು ವಿಷ್ಣುವರ್ಧನ್‌ ಅಗಲಿದರು. ಅಂದು ಚಿತ್ರರಂಗದ ಪಾಲಿಗೆ ಕರಾಳ ದಿನವೇ ಸರಿ. ಪ್ರತಿ ವರ್ಷವೂ ಅವರ ಅಭಿಮಾನಿಗಳು ಮತ್ತು ಕುಟಂಬ ವರ್ಗ ಅವರ ಪುಣ್ಯಸ್ಮರಣೆ ಮಾಡಿಕೊಂಡು ಬರುತ್ತಿದೆ.

ವಿಷ್ಣುವರ್ಧನ್‌ ಅವರ ಸಮಾಧಿ ಇರುವ ಅಭಿಮಾನ್‌ ಸ್ಟುಡಿಯೋಗೆ ತೆರಳಿ ಪ್ರೀತಿಯ ನಟನಿಗೆ ನಮನ ಸಲ್ಲಿಸಿದ್ದಾರೆ. ಅಷ್ಟೇ ಅಲ್ಲ, ಸಮಾಧಿಗೆ ಹೂವಿನ ಅಲಂಕಾರ ಮಾಡಿ, ಪೂಜೆ ಸಲ್ಲಿಸಿ, ಸ್ಮರಿಸಿದ್ದಾರೆ. ಡಾ.ವಿಷ್ಣು ಸೇನಾ ಸಮಿತಿ ಕೂಡ ವಿಶೇಷವಾಗಿ ಪೂಜೆ ಸಲ್ಲಿಸಿ, ವಿಷ್ಣುವರ್ಧನ್‌ ಅವರನ್ನು ಸ್ಮರಿಸಿದೆ.
ಅತ್ತ ಭಾರತಿ ವಿಷ್ಣುವರ್ಧನ್ ಕುಟುಂಬ ಕೂಡ ಮೈಸೂರಿಗೆ ತೆರಳಿ, ಅಲ್ಲಿ ನಡೆಯುತ್ತಿರುವ ಸ್ಮಾರಕಕ್ಕೂ ಪೂಜೆ ಸಲ್ಲಿಸಲಿದ್ದಾರೆ. ಒಂದಷ್ಟು ಅಭಿಮಾನಿಗಳು ಸಹ ಭಾಗಿಯಾಗಿ ಸ್ಮರಿಸಿದ್ದಾರೆ. ಪುಣ್ಯಸ್ಮರಣೆಯ ಹಿನ್ನೆಲೆಯಲ್ಲಿ ಅಭಿಮಾನಿಗಗಳೇ ಅನ್ನದಾನ ಸೇರಿದಂತೆ ವಿಶೇಷ ಕಾರ್ಯಕ್ರಮಗಳನ್ನು ಹಮ್ಮಿಕೊಂಡಿದ್ದರು.

Categories
ಸಿನಿ ಸುದ್ದಿ

ಹೊಸ ವರ್ಷಕ್ಕೆ ರಾಜತಂತ್ರ – ಮೊದಲ ಚಿತ್ರವಾಗಿ ರಾಘಣ್ಣನ ಸಿನಿಮಾ ರಿಲೀಸ್‌

ಮಾಜಿ ಸೇನಾಧಿಕಾರಿಯಾಗಿ ರಾಘವೇಂದ್ರ ರಾಜಕುಮಾರ್‌ ನಟನೆ

ಅಂತೂ ಇಂತೂ ಈ 2020 ಅನ್ನೋದು ಎಲ್ಲರ ಲೈಫಲ್ಲಿ ಸಖತ್‌ ಮ್ಯಾಚ್‌ ಆಡಿದ್ದಂತೂ ನಿಜ. ಈಗ 2021 ರ ಮೇಲೆ ಎಲ್ಲರೂ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅಷ್ಟೇ ಅಲ್ಲ, ಹೊಸ ಕನಸುಗಳು ಸಾಕಾರಗೊಳ್ಳುತ್ತವೆ ಎಂಬ ಲೆಕ್ಕಾಚಾರವೂ ಬಲವಾಗಿದೆ. ಹೊಸ ವರ್ಷ ಶುರುವಾಗುತ್ತಿದೆ. ಹೊಸ ವರ್ಷಕ್ಕೆ ಸಿನಿಮಾರಂಗವೂ ಸಜ್ಜಾಗಿದೆ. ಹೊಸ ವರ್ಷದ ಮೊದಲ ಸಿನಿಮಾವಾಗಿ ರಾಘವೇಂದ್ರ ರಾಜಕುಮಾರ್‌ ಅಭಿನಯದ “ರಾಜತಂತ್ರ” ಚಿತ್ರ ಬಿಡುಗಡೆಯಾಗುತ್ತಿದೆ.

ವಿಶ್ವಂ ಡಿಜಿಟಲ್ ಮೀಡಿಯಾ ಪ್ರೈ, ಲಿ ಬ್ಯಾನರ್‌ನಲ್ಲಿ ಜೆ.ಎಂ.ಪ್ರಹ್ಲಾದ್, ವಿಜಯ್ ಭಾಸ್ಕರ್ ಹರಪನಹಳ್ಳಿ ಹಾಗೂ ಪಿ.ಆರ್. ಶ್ರೀಧರ್ ಅವರ ನಿರ್ಮಾಣದ ಈ ಚಿತ್ರದ ಹೈಲೈಟ್‌ ರಾಘವೇಂದ್ರ ರಾಜಕುಮಾರ್‌, ಅವರಿಲ್ಲಿ ನಿವೃತ್ತ ಮಿಲಿಟರಿ ಅಧಿಕಾರಿಯಾಗಿ ಅವರು ನಟಿಸಿದ್ದಾರೆ. ಚಿತ್ರಕ್ಕೆ ಜೆ.ಎಂ.ಪ್ರಹ್ಲಾದ್ ಕಥೆ, ಚಿತ್ರಕಥೆ, ಸಂಭಾಷಣೆ ಹಾಗೂ ಸಾಹಿತ್ಯ ಬರೆದಿದ್ದಾರೆ. ಪಿ.ವಿ.ಆರ್ ಸ್ವಾಮಿ ಗೂಗರದೊಡ್ಡಿ ಈ ಚಿತ್ರವನ್ನು ನಿರ್ದೇಶಿಸಿದ್ದಾರೆ. ಶ್ರೀಸುರೇಶ್ ಸಂಗೀತವಿದೆ. ಪಿ.ವಿ.ಆರ್ ಸ್ವಾಮಿ ಛಾಯಾಗ್ರಹಣ ಮಾಡಿದ್ದಾರೆ.

ನಾಗೇಶ್ ಸಂಕಲನ ಮಾಡಿದರೆ, ಚಂದನ್ ಕಲಾ ನಿರ್ದೇಶನ ಹಾಗೂ ವೈಲೆಂಟ್ ವೇಲು, ರಾಮ್ ದೇವ್, ಅಲ್ಟಿಮೆಟ್ ಶಿವು ಅವರ ಸಾಹಸ ನಿರ್ದೇಶನ ಈ ಚಿತ್ರಕ್ಕಿದೆ. ಚಿತ್ರದಲ್ಲಿ ದೊಡ್ಡಣ್ಣ, ಶ್ರೀನಿವಾಸ ಮೂರ್ತಿ, ಭವ್ಯ, ರಂಜನ್ ಹಾಸನ್, ಶಂಕರ್ ಅಶ್ವಥ್, ನೀನಾಸಂ ಅಶ್ವಥ್, ಮುನಿರಾಜು, ವಿಜಯಭಾಸ್ಕರ್, ಪ್ರತಾಪ್ ಸಿಂಹ ಅಗರ, ಶಿವಾನಂದ, ಪ್ರಕಾಶ್ ಕಾರಿಯಪ್ಪ, ವೆಂಕಟೇಶ್ ಪ್ರಸಾದ್, ಹೋಳಿ‌ ವೆಂಕಟೇಶ್, ಸ್ವಾತಿ ಅಂಬರೀಶ್, ವಲ್ಲಭ್, ಪ್ರವೀಣ್, ಉಮೇಶ್, ಕುಮಾರ್, ಕನ್ನಡ ಪ್ರೇಮ್, ಲಕ್ಷ್ಮಣ್, ಭೀಮ, ಆನಂದ್ ಪನ್ನೇದೊಡ್ಡಿ, ಹೇರಂಭ, ಸತೀಶ್ ಗೌಡ, ಮೀರಾ ಶ್ರೀ ಗೌಡ ಮುಂತಾದವರಿದ್ದಾರೆ.

Categories
ಸಿನಿ ಸುದ್ದಿ

ಮೈಲಾರಿಗೆ ದಶಕದ ಸಂಭ್ರಮ !

ಶಿವಣ್ಣ ನಿವಾಸದಲ್ಲಿ‌ ನಡೆಯಿತು ಅಭಿಮಾನಿಗಳ ಸಂಭ್ರಮಾಚರಣೆ

ಸೆಂಚುರಿ ಸ್ಟಾರ್ ಶಿವರಾಜ್ ಅಭಿನಯದ ಮೈಲಾರಿ ಚಿತ್ರ ತೆರೆಕಂಡು ಇಲ್ಲಿಗೆ ಹತ್ತು ವರ್ಷ‌ .ಅಂದ್ರೆ ಬರೋಬ್ಬರಿ ಒಂದು ದಶಕ.‌ಆರ್. ಚಂದ್ರು ನಿರ್ದೇಶನ , ಕೆ.ಪಿ.ಶ್ರೀಕಾಂತ್ ನಿರ್ಮಾಣದಲ್ಲಿ ಬಂದ ಚಿತ್ರ ಇದು. ಕನ್ನಡದ ಬ್ಲಾಕ್ ಬಸ್ಟರ್ ಚಿತ್ರಗಳಲ್ಲಿ ಇದು ಕೂಡ ಒಂದು. ಈ ಚಿತ್ರದ ಮೂಲಕವೇ ನಿರ್ದೇಶಕ ಆರ್. ಚಂದ್ರು , ಹ್ಯಾಟ್ರಿಕ್ ಹೀರೋ ಶಿವರಾಜ್ ಕುಮಾರ್ ಅವರಿಗೆ ಸೆಂಚುರಿ ಸ್ಟಾರ್ ಅಂತ ಬಿರುದು ಕೊಟ್ಟರು. ಅದು ಅಭಿಮಾನಿಗಳ ಮೂಲಕ.

ಇಂತಹ ದಾಖಲೆಯ ಚಿತ್ರ ತೆರೆ ಕಂಡು ಹತ್ತು ವರ್ಷ ಆದ ಹಿನ್ನೆಲೆಯಲ್ಲಿ ಅದರ ಸುಮಧುರ ನೆನಪಿಗೆ ಅಖಿಲ ಕರ್ನಾಟಕ ಗಂಡುಗಲಿ ಶಿವರಾಜಕುಮಾರ್ ಅಭಿಮಾನಿಗಳ ಸಂಘ ಹಾಗೂ ಶಿವರಾಜ್ ಕುಮಾರ್ ಸೇನಾ‌ಸಮಿತಿ ವತಿಯಿಂದ ಭಾನುವಾರ( ಡಿಸೆಂಬರ್ 20) ಬೆಂಗಳೂರಿನ ನಾಗವಾರ ಮಾನ್ಯತಾ ಟೆಕ್ ಪಾರ್ಕ್ ಬಳಿ ಇರುವ ನಟ ಶಿವರಾಜ್ ಕುಮಾರ್ ನಿವಾಸದಲ್ಲಿ ಮೈಲಾರಿ ಹತ್ತು ವರ್ಷದ ಸಂಭ್ರಮಾಚರಣೆ ಆಯೋಜಿಸಿದ್ದರು.ಅಭಿಮಾನಿಗಳು ಪ್ರೀತಿಯಿಂದ ಆಯೋಜಿಸಿದ್ದ ಈ ಸರಳ ಸುಂದರ ಕಾರ್ಯ ಕ್ರಮದಲ್ಲಿ ನಿರ್ಮಾಪಕ‌ ಶ್ರೀಕಾಂತ್ ಸೇರಿದಂತೆ ಹಲವರು ಹಾಜರಿದ್ದರು.

ಮೈಲಾರಿ‌ ಹತ್ತು ವರ್ಷದ ನೆನಪಿಗೆ ಅಭಿಮಾನಿಗಳು ತಂದಿದ್ದ ಬೃಹತ್ ಗಾತ್ರದ ಕೇಕ್ ಕತ್ತರಿಸಿದ ನಟ ಶಿವಣ್ಣ, ಅವರೊಂದಿಗೆ ಕ್ಯಾಮೆರಾಕ್ಕೆ ಪೋಸು ಕೊಟ್ಟರು. ಅವರ ಪತ್ನಿ ಗೀತಾ ಶಿವರಾಜ್ ಕುಮಾರ್, ಪುತ್ರಿ ನಿವೇದಿತಾ ಶಿವರಾಜ್ ಕುಮಾರ್ ಭಾಗಿಯಾದರು. ಆನಂತರ ಅಭಿಮಾನಿಗಳು ಮೈಲಾರಿ ಹತ್ತು ವರ್ಷದ ವಿಶೇಷ ಕೊಡುಗೆಯನ್ನು ಶಿವರಾಜ್ ಕುಮಾರ್ ದಂಪತಿಗೆ ನೀಡಿ ಗೌರವಿಸಿದರು.

Categories
ಸಿನಿ ಸುದ್ದಿ

ಶಶಿಕುಮಾರ್‌ ಈಗ ಆರ್ಮಿ ಅಧಿಕಾರಿ – ಆರ್ಟಿಕಲ್‌ 370 ಚಿತ್ರದಲ್ಲಿ ಸುಪ್ರೀಂ ಹೀರೋನ ಖದರ್

ಆರ್ಮಿ-ಟೆರರಿಸ್ಟ್‌ ನಡುವಿನ ಚಿತ್ರಣ

“ಆಕ್ಟ್‌ 1978″… ಇದು ಕನ್ನಡದಲ್ಲಿ ಭಾರೀ ಸದ್ದು ಮಾಡಿದ ಸಿನಿಮಾ. ಈಗ “ವಿಧಿ ಆರ್ಟಿಕಲ್‌ 370” ಚಿತ್ರದ ಸರದಿ. ಹೌದು, ಕನ್ನಡ ಚಿತ್ರರಂಗದಲ್ಲೀಗ ಅತೀ ಸೂಕ್ಷ್ಮ ಸಂವೇದನೆಯ ಸಿನಿಮಾಗಳ ಪರ್ವ. ಇತ್ತೀಚೆಗೆ “ಆಕ್ಟ್‌ 1978” ಚಿತ್ರ ಜೋರು ಸದ್ದು ಮಾಡಿದ್ದು ಎಲ್ಲರಿಗೂ ಗೊತ್ತಿದೆ. ಅದರ ಬೆನ್ನಲ್ಲೇ ಈಗ “ಆರ್ಟಿಕಲ್‌ 370” ಸಿನಿಮಾ ಒಂದಷ್ಟು ಸುದ್ದಿ ಮಾಡುವ ಸೂಚನೆ ನೀಡಿದೆ. ಇದು ಶಶಿಕುಮಾರ್‌ ಹಾಗೂ ಶೃತಿ ಅಭಿನಯದ ಚಿತ್ರ. ಚಿತ್ರದ ಶೀರ್ಷಿಕೆ ಹೇಳುವಂತೆಯೇ, ಇದೂ ಕೂಡ ಒಂದು ಕಾಯ್ದೆಯಡಿ ಒಂದಷ್ಟು ಅಂಶಗಳ ಮೂಲಕ ಪ್ರೇಕ್ಷಕರನ್ನು ಸೆಳೆಯುವ ಸಿನಿಮಾ ಅಂತ ಮುಲಾಜಿಲ್ಲದೆ ಹೇಳಬಹುದು. ಈಗಾಗಲೇ ಚಿತ್ರದ ಚಿತ್ರೀಕರಣ ಬಹುತೇಕ ಮುಗಿದಿದ್ದು, ಕಾಶ್ಮೀರ ಭಾಗದ ಚಿತ್ರೀಕರಣ ಮುಗಿಸಿದರೆ, ಚಿತ್ರ ಕಂಪ್ಲೀಟ್‌ ಆಗಲಿದೆ.

ಶೃತಿ, ಶಶಿಕುಮಾರ್

ಈ ಚಿತ್ರಕ್ಕೆ ಕೆ.ಶಂಕರ್‌ ನಿರ್ದೇಶಕರು. ಕಥೆ, ಚಿತ್ರಕಥೆ, ಸಂಭಾಷಣೆ ಕೂಡ ಇವರದೇ. ಇದು ಅವರ ಮೂರನೇ ನಿರ್ದೇಶನದ ಚಿತ್ರ. ಇನ್ನು, ಲೈರಾ ಎಂಟರ್‌ಪ್ರೈಸಸ್‌ ಅಂಡ್‌ ಮೀಡಿಯಾ ಬ್ಯಾನರ್‌ನಲ್ಲಿ ಭರತ್‌ ಗೌಡ ಅವರು ಈ ಚಿತ್ರವನ್ನು ನಿರ್ಮಿಸುತ್ತಿದ್ದಾರೆ. ತಮ್ಮ ಸಿನಿಮಾ ಕುರಿತು ನಿರ್ದೇಶಕ ಕೆ.ಶಂಕರ್‌, “ಸಿನಿಲಹರಿ” ಜೊತೆ ಹೇಳಿಕೊಂಡಿದ್ದಿಷ್ಟು.

ಬಹಳ ದಿನಗಳ ನಂತರ ಶೃತಿ-ಶಶಿಕುಮಾರ್‌ ಜೋಡಿ

“ಚಿತ್ರಕ್ಕೆ “ಆರ್ಟಿಕಲ್‌ 370” ಎಂಬ ಹೆಸರಿಡಲಾಗಿದೆ. ಕನ್ನಡ ಸಿನಿಮಾ ಆಗಿದ್ದರಿಂದ ಚಿತ್ರದ ಶೀರ್ಷಿಕೆ ಮುಂದೆ “ವಿಧಿ” ಎಂದು ಸೇರಿಸಲಾಗಿದೆ. ಹಾಗಾಗಿ ಚಿತ್ರವನ್ನು “ವಿಧಿ ಆರ್ಟಿಕಲ್‌ 370” ಎಂದು ಕರೆಯಲಾಗುತ್ತಿದೆ. ಇದೊಂದು ಭಾರತೀಯ ಸೇನೆ ಹಾಗೂ ಉಗ್ರವಾದ ನಡುವಿನ ಸಮರದ ಕಥೆ. ಈ ವಿಷಯದ ಮೇಲೆ ಮಾಡಿರುವ ಸಿನಿಮಾ. ಯುದ್ಧ ಮತ್ತು ಉಗ್ರವಾದ ಕಥೆಯ ಜೊತೆ ಜೊತೆಯಲ್ಲಿ ದೇಶಾಭಿಮಾನದ ಅಂಶಗಳೂ ಇಲ್ಲಿ ಹೇರಳವಾಗಿವೆ. ಶಶಿಕುಮಾರ್‌ ಅವರು ಇಲ್ಲಿ ಮೇಜರ್‌ ಆಗಿ ಕಾಣಿಸಿಕೊಂಡಿದ್ದಾರೆ.

ಈವರೆಗೆ ಅವರು ಪೊಲೀಸ್‌ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದರು. ಈ ಚಿತ್ರದಲ್ಲಿ ಆರ್ಮಿ ಅಧಿಕಾರಿಯಾಗಿ ಕಾಣಿಸಿಕೊಂಡಿದ್ದಾರೆ. ಅವರಿಗೆ ಜೋಡಿಯಾಗಿ ಶೃತಿ ಅವರು ನಟಿಸಿದ್ದಾರೆ. ಈ ಹಿಂದೆ ಇವರಿಬ್ಬರ ಜೋಡಿಯ ಸಿನಿಮಾಗಳು ಯಶಸ್ವಿಯಾಗಿವೆ. ಬಹಳ ವರ್ಷಗಳ ಬಳಿಕ ಅವರು “ವಿಧಿ ಆರ್ಟಿಕಲ್‌ 370” ಚಿತ್ರದಲ್ಲಿ ನಟಿಸಿದ್ದಾರೆ.

ವಿರೋಧಿ ದೇಶದ ಹೀನಕೃತ್ಯದ ವಿಷಯ ಹೈಲೈಟ್

“ಆರ್ಟಿಕಲ್‌ 370″  ಬಗ್ಗೆ ವಿವರವಾಗಿ ಹೇಳುವುದಾದರೆ, ಜಮ್ಮು-ಕಾಶ್ಮೀರದಲ್ಲಿ 1949, ಅಕ್ಟೋಬರ್‌ 17ರಂದು ವಿಶೇಷ ವಿಧಿ 370 ಜಾರಿ ಮಾಡಲಾಯಿತು.  ಆ ನಂತರದ ದಿನಗಳಲ್ಲಿ ವಿರೋಧಿ ದೇಶ ನಮ್ಮ ದೇಶದ ಅಮಾಯಕರನ್ನು ಬಳಸಿಕೊಂಡು ನಮ್ಮ ಮೇಲೆಯೇ ಯುದ್ಧ ಮಾಡುವ ಹೀನ ಕೃತ್ಯಕ್ಕೆ ಮುಂದಾದರು. ಆಗ ನಡೆದಂತಹ ಅನೇಕ ಸೂಕ್ಷ್ಮ ವಿಚಾರಗಳೊಂದಿಗೆ ಕಥೆ ಹೆಣೆಯಲಾಗಿದೆ. ಇಲ್ಲಿ ದೇಶಭಕ್ತಿಯ ಜೊತೆ ಭಾವೈಕ್ಯತೆ ಸಾರುವ ಅಂಶಗಳೂ ಇಲ್ಲಿವೆ. ಎಲ್ಲೂ ಓದದ, ಕೇಳದ ಅನೇಕ ವಿಷಯಗಳು ಚಿತ್ರರೂಪದಲ್ಲಿ ಬರಲಿವೆ” ಎಂದು ವಿವರಿಸುತ್ತಾರೆ ನಿರ್ದೇಶಕ ಕೆ.ಶಂಕರ್.‌

ಶಿವರಾಮ್, ದೊಡ್ಡರಂಗೇಗೌಡರ ಜೊತೆ ನಿರ್ದೇಶಕ ಶಂಕರ್

ಜಮ್ಮು-ಕಾಶ್ಮೀರದಲ್ಲಿ ಶೂಟಿಂಗ್‌

ಚಿತ್ರದಲ್ಲಿ ಶಶಿಕುಮಾರ್‌ ಅವರ ತಂದೆ ಪಾತ್ರದಲ್ಲಿ ಹಿರಿಯ ನಟರಾದ ಶಿವರಾಮಣ್ಣ ಕಾಣಿಸಿಕೊಂಡಿದ್ದಾರೆ. ಸಾಹಿತಿ ದೊಡ್ಡ ರಂಗೇಗೌಡರು ಇಲ್ಲಿ ಮುಸ್ಲಿಂ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ, ಯತಿರಾಜ್‌ ಸೇರಿದಂತೆ ಅನೇಕ ಕಲಾವಿದರು ಚಿತ್ರದಲ್ಲಿ ನಟಿಸಿದ್ದಾರೆ.

ಬೆಂಗಳೂರು, ಮಡಿಕೇರಿ, ಚಿಕ್ಕಮಗಳೂರು, ರಾಮನಗರ, ಶ್ರವಣಬೆಳಗೊಳ ಸೇರಿದಂತೆ ಇತರೆಡೆ ಚಿತ್ರೀಕರಣ ಮಾಡಲಾಗಿದೆ. ಜಮ್ಮು-ಕಾಶ್ಮಿರದಲ್ಲಿ ಕೆಲ ದಿನಗಳ ಕಾಲ ಚಿತ್ರೀಕರಣ ನಡೆಸಿದರೆ, ಚಿತ್ರೀಕರಣ ಮುಗಿಯಲಿದೆ. ಜನವರಿ ಮೊದಲ ವಾರ ಜಮ್ಮು-ಕಾಶ್ಮೀರ ಸುತ್ತಮುತ್ತ ಚಿತ್ರೀಕರಿಸುವ ಯೋಜನೆ ಇದೆ ಎಂದು ಹೇಳುವ ಶಂಕರ್‌, ತಮ್ಮ ನಿರ್ಮಾಪಕರ ಔದಾರ್ಯವನ್ನುಕೊಂಡಾಡುತ್ತಾರೆ.‌

ಗೆಳೆತನದ ಸಿನಿಮಾವಿದು

ಹಾಗೆ ನೋಡಿದರೆ, ನಿರ್ಮಾಪಕರು ನನಗೆ ಎರಡು ದಶಕದ ಗೆಳೆಯರು. ನಾನು ಒಮ್ಮೆಯೂ ಅವರ ಬಳಿ ಸಿನಿಮಾ ಕಥೆ ಕೇಳಿ, ಒಂದು ಸಿನಿಮಾ ಮಾಡೋಣ ಎಂದು ಹೇಳಿದವನಲ್ಲ. ಗೆಳೆತನ ಮಾತ್ರ ನಮ್ಮಿಬ್ಬರ ನಡುವೆ ಇತ್ತು. ಒಮ್ಮೆ ನಾನು ಸಿನಿಮಾ ಮಾಡುತ್ತಿರುವುದನ್ನು ಗಮನಿಸಿದ ಅವರು, ನಾವೂ ಜೊತೆ ಸೇರಿ ಒಂದು ಚಿತ್ರ ಮಾಡೋಣ ಅಂದರು.

ಅದಕ್ಕೆ ನಾನೂ ಕೂಡ ಒಂದೊಳ್ಳೆಯ ವಿಷಯ ಇಟ್ಟುಕೊಂಡು ಬರುತ್ತೇನೆ ಆಗ ಮಾಡೋಣ ಅಂದಿದ್ದೆ. ಆಗ ಶುರುವಾಗಿದ್ದೆ “ಆರ್ಟಿಕಲ್‌ 370” ಚಿತ್ರ. ಒನ್‌ಲೈನ್‌ ಸ್ಟೋರಿ ಹೇಳಿದೆಯಷ್ಟೆ, ಆಮೇಲೆ ಮುಂದೇನೂ ಹೇಳದೆ, ಸಿನಿಮಾ ಮಾಡಿ ಅಂದರು. ಕಥೆ ಕೂಡ ಪೂರ್ಣ ಪ್ರಮಾಣದಲ್ಲಿ ಕೇಳದೆ ನಂಬಿಕೆ ಇಟ್ಟು ನಿರ್ಮಾಣ ಮಾಡಿದ್ದಾರೆ. ಅವರ ನಂಬಿಕೆಯನ್ನು ನಾನು ಉಳಿಸಿಕೊಂಡಿದ್ದೇನೆ ಎಂಬ ವಿಶ್ವಾಸವೂ ಇದೆ”ಎನ್ನುತ್ತಾರೆ ಶಂಕರ್.‌

ಕಲಾವಿದರ ದಂಡೇ ತುಂಬಿದೆ

ಅಂದಹಾಗೆ, ಈ “ಆರ್ಟಿಕಲ್‌ 370” ಕೊರೊನೊ ಹರಡುವ ಮುನ್ನ ಶುರುವಾದ ಚಿತ್ರ. ಆ ನಂತರ ಲಾಕ್‌ಡೌನ್‌ ಆಯ್ತು. ಸಡಿಲಗೊಂಡ ಬಳಿಕ ಚಿತ್ರೀಕರಣ ಮಾಡಿ ಮುಗಿಸಲಾಗಿದೆ. ಜಮ್ಮು-ಕಾಶ್ಮೀರ ಭಾಗದ ಚಿತ್ರೀಕರಣ ಮಾಡಿದರೆ, ಚಿತ್ರ ಕಂಪ್ಲೀಟ್‌ ಆಗಲಿದೆ. ಇದುವರಗೆ 45 ದಿನಗಳ ಕಾಲ ಶೂಟಿಂಗ್‌ ಮಾಡಲಾಗಿದೆ. ಚಿತ್ರಕ್ಕೆ ರವಿ ಕ್ಯಾಮೆರಾ ಹಿಡಿದರೆ, ಸಂಜೀವ ರೆಡ್ಡಿ ಸಂಕಲನವಿದೆ.

ಅವಿನಾಶ್‌ಜಿ.ಗುರುಸ್ವಾಮಿ, ಪುರುಷೋತ್ತಮ್‌, ವೆಂಕಟೇಶ್‌ ಅವರ ಕಾರ್ಯಕಾರಿ ನಿರ್ವಹಣೆ ಚಿತ್ರಕ್ಕಿದೆ. ಚಿತ್ರದಲ್ಲಿ ಗಣೇಶ್‌, ಲಕ್ಷ್ಮಣ್‌ ರಾವ್‌, ಕಿಲ್ಲರ್‌ ವೆಂಕಟೇಶ್‌, ರಮಾನಂದ್‌ ಸೇರಿದಂತೆ ಇತರರು ನಟಿಸಿದ್ದಾರೆ. ಸ್ಟಂಟ್‌ ವೇಲು ಸಾಹಸ ಮಾಡಿದರೆ, ಬಾಬುಖಾನ್‌ ಕಲಾ ನಿರ್ದೇಶನವಿದೆ.

Categories
ಸಿನಿ ಸುದ್ದಿ

ಕಿಚ್ಚ ಬಯೋಗ್ರಫಿಗೆ ನೀವು ಧ್ವನಿ ನೀಡಬಹುದು!

ಆಡಿಯೋ ಬುಕ್ ರೂಪಕ್ಕೆ ಕಿಚ್ಚ ಬಯೋಗ್ರಫಿ, ಸಿನಿಮಾ ಇತಿಹಾಸದಲ್ಲಿ ಆಡಿಯೋ ರೂಪಕ್ಕೆ ಮೊದಲ ಕೃತಿ

ಸಿನಿಮಾ ಪತ್ರಕರ್ತ ಶರಣು ಹುಲ್ಲೂರು ಬರೆದ ‘ ಕಿಚ್ವ’ ಬಯೋಗ್ರಫಿ ಅತೀ ಕಡಿಮೆ ಅವದಿಯಲ್ಲೇ ಹೆಚ್ಚು ಮಾರಾಟಗೊಂಡ ಪುಸ್ತಕ ಎನ್ನುವ ಹೆಗ್ಗಳಿಕೆಯ ನಡುವೆಯೇ ಅದೀಗ ಡಿಜಿಟಲ್ ರೂಪ ಪಡೆದಿದೆ. ಆನ್ ಲೈನ್ ನಲ್ಲಿ ಅದು ಇ ಬುಕ್ ರೂಪದಲ್ಲಿ‌ ಸಿಗಲಿದೆ.

ಮೈಲಾಂಗ್ ಬುಕ್ಸ್ ಸಂಸ್ಥೆ ಕಿಚ್ಚ ಬಯೋಗ್ರಫಿಯನ್ನು ಆಡಿಯೋ ಧ್ವನಿ ಮೂಲಕ ಹೊರತರಲು ಯೋಜಿಸಿದ್ದು, ಅದಕ್ಕಾಗಿ ಜನಸಾಮಾನ್ಯರಿಗೆ ಒಂದೊಳ್ಳೆ ಅವಕಾಶ ನೀಡಿದೆ. ಕಿಚ್ಚ ಬಯೋಗ್ರಫಿಗೆ ನೀವು ಧ್ವನಿಯಾಗುವಂತಹ ಅವಕಾಶ ಕಲ್ಪಿಸಿದೆ. ಇಂತಹೊಂದು ಅವಕಾಶವನ್ನು ಮೈಲಾಂಗ್ ಬುಕ್ಸ್ ನೀಡಿರುವುದು ವಿಶೇಷ.

ಹಾಗೊಂದು ವೇಳೆ, ನಿಮ್ಮ ಧ್ವನಿಯ ಸ್ಯಾಂಪಲ್‌ನ್ನು ಮೈಲಾಂಗ್ ಮೇಲ್‌ ವಿಳಾಸಕ್ಕೆ ಕಳುಹಿಸಿದರೆ, ಆ ಧ್ವನಿ ಸೂಕ್ತ ಎಂದು ಅನಿಸಿದರೆ ಇಡೀ ಪುಸ್ತಕಕ್ಕೆ ನಿಮ್ಮ ಧ್ವನಿಯನ್ನು ಕೊಡಬಹುದು. ಆದರೆ ಪುಸ್ತಕಕ್ಕೆ ಧ್ವನಿಯಾಗಲು ಬಯಸುವವರಿಗೆ ಕೆಲವು ಷರತ್ತು ನೀಡಿದೆ. ಅವು ಇಂತಿವೆ‌.

– 24-45ರ ಒಳಗಿನ ಗಂಡಸಿನ ಧ್ವನಿಯಾಗಿರಬೇಕು
– ಬೆಂಗಳೂರಿನಲ್ಲಿ ರೆಕಾರ್ಡಿಂಗ್‌ನಲ್ಲಿ ಪಾಲ್ಗೊಳ್ಳಲು ಸಿದ್ಧರಿರಬೇಕು
– ಬೇಸ್ ವಾಯ್ಸ್ ಇದ್ದವರಿಗೆ ಆದ್ಯತೆ
– ಆಯ್ಕೆಯ ಅಂತಿಮ ನಿರ್ಧಾರ ಮೈಲಾಂಗ್ ಸಂಸ್ಥೆಯದ್ದು

ಆಸಕ್ತರು ಇದಿಷ್ಟು ಷರತ್ತುಗಳೊಂದಿಗೆ ತಮ್ಮ ಧ್ವನಿಗಳ ರೆಕಾರ್ಡ್ ಅನ್ನು ಕಳುಹಿಸಲು ಜನವರಿ 7 ಕೊನೆಯ ದಿನಾಂಕ ಆಗಿದೆ. ಖ್ಯಾತ ಸಿನಿಮಾ ಪತ್ರಕರ್ತ ಶರಣು ಹುಲ್ಲೂರು ಬರೆದ’ ಕಿಚ್ಚ’ ಬಯೋಗ್ರಫಿ ಸೆಪ್ಟೆಂಬರ್ 2, 2020 ರಂದು ಲೋಕಾರ್ಪಣೆ ಗೊಂಡಿತ್ತು. ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಪುಸ್ತಕ ಬಿಡುಗಡೆ ಮಾಡಿದ್ದರು. ಸಹಜವಾಗಿಯೇ ಸುದೀಪ್ ಅಭಿಮಾನಿಗಳಿಂದ ಪುಸ್ತಕಕ್ಕೆ ಭರ್ಜರಿ ರೆಸ್ಪಾನ್ಸ್ ಸಿಕ್ಕಿತ್ತು.

ಕೆಲವೇ ದಿನಗಳಲ್ಲಿ ಮೊದಲ ಪ್ರತಿ ಮಾರಾಟವಾಗಿ, ಎರಡನೇ ಪ್ರತಿ ಸಿದ್ದಗೊಂಡಿತ್ತು. ಅದಕ್ಕೂ ಅದ್ಬುತ ಪ್ರತಿಕ್ರಿಯೆ ಬಂದಿತ್ತು. ‌ಅದೀಗ ಆಡಿಯೋ ಬುಕ್ ಆಗುವ ಯೋಜನೆಯೊಂದಿಗೆ ಇನ್ನೊಂದು ಹಂತಕ್ಕೆ ಹೋಗಿದೆ.ಇದರ ಅಷ್ಟು ಕ್ರೆಡಿಟ್ ಪತ್ರಕರ್ತ ಶರಣು ಹುಲ್ಲೂರು ಅವರಿಗೆ ಸಲ್ಲುತ್ತದೆ.

Categories
ಸಿನಿ ಸುದ್ದಿ

ಈತ ಕೊಲೆ ಕೇಸಿನ ಹಿಂದೆ ಬಿದ್ದ ಜಯರಾಮ್‌ !

‘ರಾಮಾ ರಾಮಾ ರೇ’ ಖ್ಯಾತಿಯ ನಟರಾಜ್‌ ಈಗ ಸಿಸಿಬಿ ಪೊಲೀಸ್‌

‘ರಾಮಾ ರಾಮಾ ರೇ’ ಚಿತ್ರದ ಖ್ಯಾತಿಯ ನಟ ನಟರಾಜ್ ಮತ್ತೆ ಕ್ಯಾಮೆರಾ ಮುಂದೆ ನಿಂತಿದ್ದಾರೆ.’ ಕಳ್ಬೆಟ್ಟದ ದರೋಡೆಕೋರರು’ ಚಿತ್ರದ ನಂತರದ ಸಣ್ಣ ಗ್ಯಾಪ್ ಬಳಿಕ ಸದ್ದಿಲ್ಲದೆ, ಸುದ್ದಿಯೂ ಮಾಡದೆ ಸಿಸಿಬಿ ಪೋಲಿಸ್ ಆಗಿ ತೆರೆ ಮೇಲೆ ಬರಲು ರೆಡಿಯಾಗಿದ್ದಾರೆ. ಸುಧೀರ್ ಶಾನ್ ಬೋಗ್ ನಿರ್ದೇಶನದ ಸಸ್ಪೆನ್ಸ್, ಥ್ರಿಲ್ಲರ್ ಚಿತ್ರದಲ್ಲಿ ನಟರಾಜ್, ಮಫ್ತಿಯಲ್ಲಿರುವ ಸಿಸಿಬಿ ಕ್ರೈಮ್‌ ಬ್ರ್ಯಾಂಚ್ ಪೊಲೀಸ್ ‌ಪಾತ್ರಕ್ಕೆ ಬಣ್ಣ ಹಚ್ಚಿದ್ದಾರೆ.

ಸದ್ಯಕ್ಕೆ ಈ ಚಿತ್ರಕ್ಕಿನ್ನು ಟೈಟಲ್ ಫಿಕ್ಸ್ ಆಗಿಲ್ಲ. ಆದರೆ ಈ ಚಿತ್ರಕ್ಕೆ ಒಂದು ಹಂತದ ಚಿತ್ರೀಕರಣ ಮುಗಿದು ಹೋಗಿದೆ. ಇದಕ್ಕಾಗಿಯೇ ಚಿತ್ರ ತಂಡ ಮಂಗಳೂರು, ಮಲ್ಪೆ, ಮರವಂತೆ ಬೀಚ್ ಸುತ್ತು ಹಾಕಿ ಬಂದಿದೆ. ಒಂದೆರೆಡು‌ ದಿನ ಬೆಂಗಳೂರಿನಲ್ಲೂ ಶೂಟಿಂಗ್ ನಡೆದಿದೆ. ಈ ಹಂತದಲ್ಲಿ ನಟರಾಜ್ ಅವರ ಪಾತ್ರದ ಗೆಟಪ್ ರಿವೀಲ್ ಆಗುವ ಮೂಲಕ ಸುಧೀರ್‌ ಶಾನ್‌ ಬೋಗ್‌ ನಿರ್ದೇಶನದ ಹೊಸ ಸಿನಿಮಾ ವಿಚಾರ ಬಹಿರಂಗಗೊಂಡಿದೆ.

“ಅನಂತು ವರ್ಸಸ್ ನುಸ್ರತ್ʼ ಚಿತ್ರದ ನಂತರ ನಿರ್ದೇಶಕ ಸುಧೀರ್ ಶಾನ್ ಬೋಗ್ ಆ್ಯಕ್ಷನ್ ಕಟ್ ಹೇಳುತ್ತಿರುವ ಚಿತ್ರ ಇದು‌.  ಸೆಕ್ರೆಡ್ ವುಡ್ಸ್ ಪ್ರೊಡಕ್ಷನ್ ಮೂಲಕ ನಿರ್ಮಾಣವಾಗುತ್ತಿದ್ದು, ನಟರಾಜ್ ಹುಳಿಯಾರ್ ಅವರ ಸಣ್ಷಕತೆ ಆಧರಿಸಿ ಗೌತಮ್ ಜೋತ್ಸಾ ಚಿತ್ರಕತೆ ಹಾಗೂ ಸಂಭಾಷಣೆ ಬರೆದಿದ್ದಾರೆ. ಗಣೇಶ್ ಹೆಗಡೆ ಛಾಯಾಗ್ರಹಣ ಹಾಗೂ ಸುನಾದ್ ಗೌತಮ್  ಸಂಗೀತ ಸೇರಿದಂತೆ ಅನುಭವಿ ತಂತ್ರಜ್ಞರನ್ನೇ ಚಿತ್ರ ತಂಡ ಆಯ್ಕೆ ಮಾಡಿಕೊಂಡಿದೆ. ಉಳಿದಂತೆ ಚಿತ್ರದ ತಾರಾಗಣದಲ್ಲಿ ನಟರಾಜ್ ಜತೆಗೆ ಚಕ್ರವರ್ತಿ ಚಂದ್ರಚೂಡ್, ಶ್ರೀಕಾಂತ್, ಕೃತಿಕಾ ರವೀಂದ್ರ , ಸಂಪತ್ ಮೈತ್ರಿಯಾ, ಮಠ ಚಿತ್ರದ ಖ್ಯಾತಿಯ ಶಶಿಧರ್ ಭಟ್ ಹಾಗೂ ಮೋಹನ್ ಶೆಣೈ ಸೇರಿದಂತೆ ದೊಡ್ಡ ತಂಡವೆ‌ ಇದೆ. ಒಟ್ಟಿನಲ್ಲಿ ಒಂದೊಳ್ಳೆ ಟೀಮ್‌ ಮೂಲಕ ಅಷ್ಟೇ ಒಳ್ಳೆಯ ಸಿನಿಮಾ ಮಾಡುವ ಕಾತರದಲ್ಲಿದೆ ಚಿತ್ರತಂಡ. ಈ ತಂಡದೊಂದೊಗೆ ನಟರಾಜ್ ಇದೇ ಮೊದಲು ಪೊಲೀಸ್‌ ಆಗಿ ಬೆಳ್ಳಿ ಪರದೆ ಮೇಲೆ ಕಾಣಿಸಿಕೊಳ್ಳುತ್ತಿರುವುದು ವಿಶೇಷ. ಅಂದ ಹಾಗೆ ಚಿತ್ರದಲ್ಲಿ ಅವರ ಪಾತ್ರದ ಹೆಸರು ಜಯರಾಮ್.‌

ನಾನಿಲ್ಲಿ ಪೊಲೀಸ್‌ ಇನ್ಸ್‌ ಸ್ಪೆಕ್ಟರ್.‌ ಹೆಸರು ಜಯರಾಮ್‌ ಅಂತ. ಆತ ಸಿಟಿ ಕ್ರೈಮ್‌ ಬ್ರ್ಯಾಂಚ್‌ ನಲ್ಲಿ ಕೆಲಸ ಮಾಡುವ ಅಧಿಕಾರಿ. ಹಾಗಂತ ಆತ ಎಂದಿಗೂ ಪೊಲೀಸ್‌ ಡ್ರೆಸ್‌ ಹಾಕಿಕೊಂಡವನಲ್ಲ. ಆತನದ್ದು ಮಫ್ತಿ ನಲ್ಲಿರುವ ಪೊಲೀಸ್‌. ಒಂಥರ ಅಂಡರ್‌ಕಾಪ್.‌ ಒಂದು ಕೊಲೆ ಕೇಸಿನ ತನಿಖೆಯಲ್ಲಿ ಆತನ ಪಾತ್ರ ಹೇಗಿರುತ್ತೆ, ಆತನ ವರ್ಕ್‌ ಶೈಲಿ ಎಂಥದ್ದು, ಆ ಕೊಲೆ ಕೇಸಿನ ಹಿಂದಿನ ಜಾಡು ಎಂಥದ್ದು ಎನ್ನುವುದೆಲ್ಲ ಚಿತ್ರದ ಕತೆಯೊಳಗಿನ ಸಸ್ಪೆನ್ಸ್‌ ಸಂಗತಿ. ತುಂಬಾ ಇಂಟೆರೆಸ್ಟಿಂಗ್‌ ಆಗಿರುವ ಕತೆ ಇದು. ಮೇಲ್ನೊಟಕ್ಕೆ ಇದಿಷ್ಟೇ ಇರಬಹುದು ಅಂತೆನಿಸಿದರೂ, ಸಸ್ಪೆನ್ಸ್‌ ಹಾಗೂ ಥ್ರಿಲ್ಲಿಂಗ್‌ ಸಬ್ಜೆಕ್ಟ್‌ ನಲ್ಲೂ ತುಂಬಾ ಹೊಸತಾದ ವಿಚಾರಗಳು ಇಲ್ಲಿವೆ. ಅವೆಲ್ಲ ಕನ್ನಡ ಪ್ರೇಕ್ಷಕರಿಗೆ ನಿಜಕ್ಕೂ ಹೊಸತಾದ, ಇಂಟೆರೆಸ್ಟಿಂಗ್‌ ಹುಟ್ಟಿಸುವ ವಿಷಯಗಳೇ . ನಾನು ಕೂಡ ಇಂಪ್ರೆಸ್‌ ಆಗಿದ್ದೇ ಈ ಕಂಟೆಂಟ್‌ ಕಾರಣದಿಂದಲೇ.

  • ನಟರಾಜ್‌, ನಟ

ಕಳ್ಬೆಟ್ಟದ ದರೋಡೆಕೋರರು ಚಿತ್ರದ ನಂತರ ಹೊಸ ಪಾತ್ರಗಳಿಗೆ ತಮ್ಮನ್ನು ತಾವು ರೆಡಿ ಮಾಡಿಕೊಳ್ಳುವಾಗ ನಟರಾಜ್‌, ಜಿಮ್ ನಲ್ಲಿ ವರ್ಕೌಟ್‌ ಶುರು ಮಾಡಿದ್ದರು. ಸಿಕ್ಸ್‌ ಪ್ಯಾಕ್‌ ಕೂಡ ಮಾಡಿಕೊಂಡಿದ್ದರು. ಅವೆಲ್ಲವುದರ ನಡುವೆ ಒಂದೆರೆಡು ಸಿನಿಮಾಗಳು ಮಾತುಕತೆಯಲ್ಲಿವೆ ಅಂತಲೂ ಹೇಳಿದ್ದರು. ಆದರೆ ಅವ್ಯಾವು ಅಂತ ಹೇಳಿರಲಿಲ್ಲ. ಆಗಲೇ ಫಿಕ್ಸ್‌ ಆಗಿದ್ದು ಈ ಚಿತ್ರ. ಹೆಚ್ಚು ಕಡಿಮೆ ಒಂದೂವರೆ ವರ್ಷದ ಸಿದ್ದತೆ ಇದು. ಈ ಪಾತ್ರಕ್ಕೆ ಹೇಗೆ ಸೆಲೆಕ್ಟ್‌ ಆಗಿದ್ದು ಎನ್ನುವುದಕ್ಕೆ ನಟರಾಜ್‌ ಹೇಳಿವುದು ಇದಿಷ್ಟು ;

ʼ ನಾನು ಈ ಪಾತ್ರಕ್ಕೆ ಸೆಲೆಕ್ಟ್‌ ಆಗಿದ್ದಕ್ಕೆ ಕಾರಣ ಭಾಗ್ಯರಾಜ್‌ ಚಿತ್ರದಲ್ಲಿನ ನನ್ನ ಪಾತ್ರ. ಅಲ್ಲೊಂದು ನೆಗೆಟಿವ್‌ ರೂಲ್‌ ಮಾಡಿದ್ದೆ. ನಂಗೆ ತುಂಬಾ ಖುಷಿ ಕೊಟ್ಟ ಪಾತ್ರ ಅದು. ನಿರ್ದೇಶಕ ಸುಧೀರ್‌ ಅವರು ಆ ಪಾತ್ರ ನೋಡಿದ್ದರಂತೆ. ಆ ಪಾತ್ರ ಅವರಿಗೆ ತುಂಬಾ ಹಿಡಿಸಿದ್ದರಿಂದಲೇ ಈ ಸಿನಿಮಾಕ್ಕೆ ಅವರು ನನ್ನನ್ನು ಅಪ್ರೋಚ್‌ ಮಾಡಿದ್ದು. ಆರಂಭದಲ್ಲಿ ಪಾತ್ರದ ಬಗ್ಗೆ ಹೇಳಿದ್ದರು. ಆದರೆ ಗೆಟಪ್‌ ಹೇಗಿರುತ್ತೋ ಏನೋ ಎನ್ನುವ ಅನುಮಾನ ಅವರಲ್ಲಿತ್ತಂತೆ. ಒಂದಿನ ಭೇಟಿ ಮಾಡಿದಾಗ, ಪಾತ್ರಕ್ಕೆ ನಾನೇನು ನಿರೀಕ್ಷೆ ಮಾಡುತ್ತಿದ್ದೇನೋ, ಅದೇ ರೀತಿ ನೀವಿದ್ದೀರಿ. ಸೂಪರ್‌, ಚೆನ್ನಾಗಿದೆ ನಿಮ್ಮ ಗೆಟಪ್‌ ಅಂದ್ರು. ಅಲ್ಲಿಂದ ಶುರುವಾಯ್ತು ಈ ಜರ್ನಿʼ  ಅಂತ ಅಂಡರ್‌ ಕಾಪ್‌ ಪೊಲೀಸ್‌ ಜಯರಾಮ್‌ ಆದ ಬಗೆಯನ್ನು ವಿವರಿಸಿದರು ನಟ ನಟರಾಜ್.‌

ಸದ್ಯಕ್ಕೆ ಈ ಚಿತ್ರದಲ್ಲಿ ಬ್ಯುಸಿಯಾಗಿರುವ ನಟರಾಜ್‌, ಇನ್ನೇರೆಡು ಚಿತ್ರ ಒಪ್ಪಿಕೊಂಡಿದ್ದಾರಂತೆ.

Categories
ಸಿನಿ ಸುದ್ದಿ

ದಿಗಂತ್ ಎಂಬ ಬಂಗಾರ! ಹುಟ್ಟು ಹಬ್ಬಕ್ಕೆ ರಿಲೀಸ್ ಆಯ್ತು ಮಾರಿಗೋಲ್ಡ್ ಫಸ್ಟ್ ಲುಕ್ ಪೋಸ್ಟರ್

ಮಾಸ್ ಲುಕ್ ನಲ್ಲಿ ಡಿಂಪಲ್ ಸ್ಟಾರ್

ಟೈಟಲ್ ಮೂಲಕವೇ ಒಂದಷ್ಟು ನಿರೀಕ್ಷೆ ಹುಟ್ಟಿಸಿರುವ
ಗುಳಿಕೆನ್ನೆ ಹುಡುಗ ದಿಗಂತ್‌ ಅಭಿನಯದ “ಮಾರಿಗೋಲ್ಡ್” ಚಿತ್ರ ಪೂರ್ಣಗೊಂಡಿದ್ದು ಗೊತ್ತೇ ಇದೆ. ಚಿತ್ರತಂಡ ಈಗ ಬಿಡುಗಡೆ ತಯಾರಿ ಮಾಡಿಕೊಳ್ಳುತ್ತಿದೆ. ಇದರ ಬೆನ್ನಲ್ಲೇ ದಿಗಂತ್ ಹುಟ್ಟು ಹಬ್ಬಕ್ಕೆ(ಡಿಸೆಂಬರ್ 28) ಚಿತ್ರಂಡ ಫಸ್ಟ್ ಲುಕ್ ಪೋಸ್ಟರ್ ಬಿಡುಗಡೆ ಮಾಡಿದೆ.


ವಿಭಿನ್ನ ಗೆಟಪ್ ನಲ್ಲಿರುವ ದಿಗಂತ್ ಅವರ ಫಸ್ಟ್ ಲುಕ್ ಪೋಸ್ಟರ್, ಹೊಸ ನಿರೀಕ್ಷೆ ಹುಟ್ಟಿಸಿದೆ. ಇದೇ ಮೊದಲ ಬಾರಿಗೆ ದಿಗಂತ್ ವಿಭಿನ್ನ ಪಾತ್ರದ ಮೂಲಕ “ಮಾರಿಗೋಲ್ಡ್” ಚಿತ್ರದಲ್ಲಿ ಮೋಡಿ ಮಾಡಲಿದ್ದಾರೆ ಎಂಬುದಕ್ಕೆ ಚಿತ್ರದ ಫಸ್ಟ್ ಲುಕ್ ಪೋಸ್ಟರ್ ಹೇಳುತ್ತಿದೆ. ಗನ್ ಜೊತೆ ದಿಗಂತ್ ಗೆ ಏನು ಕೆಲಸ ಎಂಬ ಪ್ರಶ್ನೆಯೂ ಮೂಡುತ್ತದೆ.


ಸದ್ಯಕ್ಕೆ ದಿಗಂತ್ ಬರ್ತ್ ಡೇಗೆ ಸಖತ್ ಪೋಸ್ಟರ್ ವೊಂದನ್ನು ಬಿಡುಗಡೆ ಮಾಡಿರುವ ಚಿತ್ರತಂಡ ಮಾರ್ಚ್ ವೇಳೆಗೆ ರಿಲೀಸ್ ಮಾಡುವ ಯೋಚನೆ‌ ಮಾಡಿದೆ.
ಈಗಾಗಲೇ ಸೋಶಿಯಲ್ ಮೀಡಿಯಾದಲ್ಲಿ “ಮಾರಿಗೋಲ್ಡ್” ಫಸ್ಟ್ ಲುಕ್ ಪೋಸ್ಟರ್ ಸಾಕಷ್ಟು ವೈರಲ್ ಆಗುವುದರ ಜೊತೆಗೆ ಮೆಚ್ಚುಗೆಗೂ ಪಾತ್ರವಾಗಿದೆ.


ಇತ್ತೀಚೆಗೆ ಹಾಡೊಂದನ್ನು ಚಿತ್ರೀಕರಿಸುವ ಮೂಲಕ ಚಿತ್ರತಂಡ ಶೂಟಿಂಗ್‌ ಮುಗಿಸಿತ್ತು. ಈ ಹಿಂದೆ ಟೈಟಲ್ ಫಸ್ಟ್ ಲುಕ್ ಪೋಸ್ಟರ್‌ ಕೂಡ ಬಿಡುಗಡೆಯಾಗಿ, ಸಾಕಷ್ಟು ಕುತೂಹಲ ಮೂಡಿಸಿತ್ತು. ಈಗ ಫಸ್ಟ್ ಲುಕ್ ಪೋಸ್ಟರ್ ಮೂಲಕ ಮತ್ತಷ್ಟು ಕುತೂಹಲ ಮೂಡಿಸಿದೆ.
ಈಗಾಗಲೇ ಡಬ್ಬಿಂಗ್‌ ಕಾರ್ಯವನ್ನೂ ಬಹುತೇಕ ಮುಗಿಸಿದ್ದು, ನಾಯಕ ದಿಗಂತ್‌ ಭಾಗವಷ್ಟೇ ಬಾಕಿ ಉಳಿದಿದೆ.

“ಮಾರಿಗೋಲ್ಡ್‌” ಅಂದಾಕ್ಷಣ, ಅದೊಂದು ಅಂಡರ್‌ವರ್ಲ್ಡ್‌ ಸಿನಿಮಾ ಇರಬಹುದಾ ಎಂಬ ಪ್ರಶ್ನೆ ಎದುರಾಗುತ್ತದೆ. ಆದರೆ, ಅದು ಅಂಡರ್‌ವರ್ಲ್ಡ್‌ ಸಿನಿಮಾನಾ ಅಥವಾ ರೌಡಿಸಂ ಕುರಿತಾದ ಕಥೆಯೇ ಎಂಬುದಕ್ಕೆ ಸಿನಿಮಾ ಬರುವ ತನಕ ಕಾಯಬೇಕು.
ಇನ್ನು, ಈ ಚಿತ್ರವನ್ನು ರಾಘವೇಂದ್ರ ಎಂ.ನಾಯಕ್‌ ನಿರ್ದೇಶನ ಮಾಡಿದ್ದಾರೆ.

ರಾಘವೇಂದ್ರ ನಾಯಕ್, ನಿರ್ದೇಶಕ

ಅವರಿಗೆ ಇದು ಮೊದಲ ನಿರ್ದೇಶನದ ಚಿತ್ರ. ಚಿತ್ರವನ್ನು ರಘುವರ್ಧನ್‌ ನಿರ್ಮಾಣ ಮಾಡಿದ್ದಾರೆ. ಇನ್ನು, ರಘುವರ್ಧನ್‌ಅವರು ಮೂಲತಃ ನಿರ್ದೇಶಕರಾಗಿದ್ದರೂ, ಅವರು ಹೊಸ ಪ್ರತಿಭಾವಂತ ಯುವ ನಿರ್ದೇಶಕ ರಾಘವೇಂದ್ರ ಅವರಿಗೆ ನಿರ್ದೇಶನ ಮಾಡಲು ಅವಕಾಶ ಕಲ್ಪಿಸಿಕೊಟ್ಟಿದ್ದಾರೆ. ಅದಕ್ಕೆ ಕಾರಣ, ರಾಘವೇಂದ್ರ ಎಂ.ನಾಯಕ್‌ ಅವರು ಮಾಡಿಕೊಂಡಿದ್ದ ಕಥೆ. ಕಥೆ ಚೆನ್ನಾಗಿದ್ದರಿಂದ, ಆ ಕಥೆಯನ್ನು ರಾಘವೇಂದ್ರ ನಾಯಕ್‌ಅವರೇ ನಿರ್ದೇಶಿಸಲಿ ಎಂಬ ಮನೋಭಾವದಿಂದಾಗಿ ರಘುವರ್ಧನ್‌, ಚಿತ್ರವನ್ನು ಅದ್ಧೂರಿಯಾಗಿಯೇ ನಿರ್ಮಿಸಿದ್ದಾರೆ.

ರಘುವರ್ಧನ್, ನಿರ್ಮಾಪಕ

ಚಿತ್ರಕ್ಕೆ ವೀರ್ ಸಮರ್ಥ್ ಸಂಗೀತವಿದೆ. ಯೋಗರಾಜ್ ಭಟ್ ಮತ್ತು ವಿಜಯ್ ಭರಮಸಾಗರ ಅವರು ಹಾಡು ಬರೆದಿದ್ದಾರೆ. ಕೆ.ಎಸ್.ಚಂದ್ರಶೇಖರ್ ಕ್ಯಾಮೆರಾ ಹಿಡಿದರೆ, ಕೆ.ಎಂ.ಪ್ರಕಾಶ್ ಸಂಕಲನವಿದೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ.
ಇನ್ನು, ದಿಗಂತ್‌ ಅವರಿಗೆ ಇದೊಂದು ಹೊಸಬಗೆಯ ಚಿತ್ರವಂತೆ. ಅದರಲ್ಲೂ ದಿಗಂತ್‌ಮೊದಲ ಬಾರಿಗೆ ಈ ರೀತಿಯ ಪಾತ್ರ ನಿರ್ವಹಿಸಿದ್ದಾರೆ .ಇನ್ನು, ಬೆಂಗಳೂರು, ಸಕಲೇಶಪುರ ಸುತ್ತಮುತ್ತಲ ತಾಣಗಳಲ್ಲಿ ಚಿತ್ರೀಕರಣಗೊಂಡಿರುವ ಚಿತ್ರದಲ್ಲಿ ಹಲವು ವಿಶೇಷತೆಗಳಿವೆ.

ಇದೊಂದು ಪಕ್ಕಾ ಕ್ರೈಮ್‌ ಥ್ರಿಲ್ಲರ್‌ ಸಿನಿಮಾ ಆಗಿದ್ದು, ಸಂಗೀತಾ ಶೃಂಗೇರಿ ಚಿತ್ರದ ನಾಯಕಿಯಾಗಿದ್ದಾರೆ. ಚಿತ್ರದಲ್ಲಿ ಸಂಪತ್‌ಕುಮಾರ್‌, ಕಾಕ್ರೋಚ್‌ ಸುಧಿ, ಯಶ್‌ಶೆಟ್ಟಿ, ರಾಜ್‌ ಬಲವಾಡಿ, ಗಣೇಶ್‌ರಾವ್‌ ಸೇರಿದಂತೆ ಹಲವು ಕಲಾವಿದರು ಕಾಣಿಸಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ಹೊಸಬರ ಖಾಸಗಿ ವಿಷಯಗಳು! ಪುಟಗಳಲ್ಲಿ  ಬಚ್ಚಿಟ್ಟ  ಮಾತು

ಒಂದು ಹೊಸ ಪ್ರಯತ್ನದ ಸಿನಿಮಾ ಇದು…

ದಿನ ಕಳೆದಂತೆ ಕನ್ನಡ ಚಿತ್ರರಂಗ ಮೆಲ್ಲನೆ ರಂಗೇರಿತ್ತಿದೆ. ಹಳಬರು, ಹೊಸಬರು ಸಿನಿಮಾಗಳನ್ನು ಶುರು ಮಾಡುತ್ತಿದ್ದಾರೆ. ಈಗಾಗಲೇ ಕೊರೊನೊ ಹಾವಳಿ ಕೊಂಚ ಕಡಿಮೆ ಆಗುತ್ತಿದ್ದಂತೆಯೇ,, ಒಂದಷ್ಟು ಚಿತ್ರಗಳು ಸೆಟ್ಟೇರುತ್ತಿವೆ. ಆ ಸಾಲಿಗೆ ಈಗ ಹೊಸಬರ ‘ಖಾಸಗಿ ಪುಟಗಳು’ ಚಿತ್ರವೂ ಸೇರಿದೆ.

ಶ್ವೇತಾ, ನಾಯಕಿ

ಹನುಮ ಜಯಂತಿ ದಿನದಂದು ಚಿತ್ರತಂಡ ಚಿತ್ರದ ಟೈಟಲ್ ಪೋಸ್ಟರ್ ರಿಲೀಸ್ ಮಾಡಿದೆ.
ಈ ಪೋಸ್ಟರ್ ನೋಡಿದವರಿಗೆ ಇದೊಂದು ವಿಭಿನ್ನ ಪ್ರಯೋಗಾತ್ಮಕ ಸಿನಿಮಾ ಅನ್ನೋದು ಗೊತ್ತಾಗುತ್ತೆ. ಅದರಲ್ಲೂ ಪೋಸ್ಟರ್ ನಲ್ಲೇ ಒಂದು ಕಡಲ ದಡಿಯ ಕಥೆ ಎಂಬುದನ್ನೂ ಸಾರುತ್ತೆ.

ವಿಶ್ವ, ನಾಯಕ

ಒಂದು ಕಡಲು, ಒಂದು ದೋಣಿ, ಯಕ್ಷಗಾನ ಕಲಾವಿದರೊಬ್ಬರ ಭಾವಚಿತ್ರ, ಹುಲಿವೇಷದಾರಿ , ಕಾಣುವ ಅಂಚೆ ಡಬ್ಬ, ಲಗೋರಿ ಆಡುತ್ತಿರುವ ಹುಡುಗ, ವಾಲಿಬಾಲ್ ಆಡುತ್ತಿರುವ ಮಂದಿ, ದಡಕ್ಕೆ ದೋಣಿ ಸರಿಸುತ್ತಿರುವ ನಾವಿಕ, ಅಲ್ಲೊಂದು ಕ್ಯಾಮರಾ ಕಣ್ಣು… ಹೀಗೆ ಸೂಕ್ಷ್ಮವಾಗಿ ಗಮನಿಸಿದರೆ ಇವೆಲ್ಲವೂ ಈ ‘ಖಾಸಗಿ ಪುಟಗಳಲ್ಲಿ’ ಕಾಣಸಿಗುತ್ತವೆ.
ಇಂಥದ್ದೊಂದು ವಿಭಿನ್ನ ಎನಿಸುವ ಅರ್ಥಪೂರ್ಣವಾಗಿರುವ ಪೋಸ್ಟರ್ ರಿಲೀಸ್ ಮಾಡುವ ಮೂಲಕ ಒಂದಷ್ಟು ಕುತೂಹಲ ಮೂಡಿಸಿದೆ ಚಿತ್ರತಂಡ.
ಅಂದಹಾಗೆ, ಈ ಚಿತ್ರವನ್ನು ಸಂತೋಷ್ ಶ್ರೀಕಂಠಪ್ಪ ನಿರ್ದೇಶನ ಮಾಡುತ್ತಿದ್ದಾರೆ.

ಸಂತೋಷ್ , ನಿರ್ದೇಶಕ

ಮಂಜು ದಿ ರಾಜ್, ವೀಣಾ ದಿ ರಾಜ್, ಮಂಜುನಾಥ್ ಡಿ.ಎಸ್ ಚಿತ್ರವನ್ನು ನಿರ್ಮಿಸುತ್ತಿದ್ದಾರೆ.
ವಿಶ್ವಜಿತ್ ರಾವ್ ಛಾಯಾಗ್ರಹಣವಿದೆ. ವಾಸುಕಿ ವೈಭವ್ ಸಂಗೀತವಿದೆ. ಆಶಿಕ್ ಕುಸುಗೊಳಿ ಸಂಕಲನ ಮಾಡಲಿದ್ದಾರೆ. ಕೆ.ಕಲ್ಯಾಣ್, ಪ್ರಮೋದ್ ಮರವಂತೆ, ವಿಶ್ವಜಿತ್ ರಾವ್ ಸಾಹಿತ್ಯವಿದೆ.


ಸದ್ಯಕ್ಕೆ ಪೋಸ್ಟರ್ ರಿಲೀಸ್ ಮಾಡಿರುವ ಚಿತ್ರತಂಡಕ್ಕೆ ಭರ್ಜರಿ ಮೆಚ್ಚುಗೆ ಸಿಗುತ್ತಿದೆ. ಇನ್ನು ಈ ಚಿತ್ರಕ್ಕೆ ವಿಶ್ವ ಹೀರೋ. ಈ ಹಿಂದೆ ‘ಗೋಣಿ ಚೀಲ’ ಎಂಬ ಶಾರ್ಟ್ ಫಿಲ್ಮ್ ಮಾಡಿದ್ದ ವಿಶ್ವ ಇಲ್ಲಿ ಹೈಲೆಟ್.

ಅವರಿಗೆ ನಾಯಕಿಯಾಗಿ ಶ್ವೇತಾ ಕಾಣಿಸಿಕೊಂಡಿದ್ದಾರೆ. ಉಡುಪಿ ಸುತ್ತ ಮುತ್ತ ಚಿತ್ರೀಕರಣಗೊಂಡಿದ್ದು, ಇನ್ನು ಹಾಡುಗಳ ಚಿತ್ರೀಕರಣ ಬಾಕಿ ಇದೆ.

Categories
ಸಿನಿ ಸುದ್ದಿ

ಅಪ್ಪನಿಗೆ ಮಗ ನಿರ್ದೇಶನ – ನವಮಿಯಲ್ಲಿ ಎಸ್.ನಾರಾಯಣ್ ನಟನೆ

ಹೀರೋ ತಂದೆಯಾಗಿ ನಾರಾಯಣ್

ಕನ್ನಡ ಚಿತ್ರರಂಗದಲ್ಲಿ ಅಪ್ಪನ ನಿರ್ಮಾಣದಲ್ಲಿ ಮಗ ಹೀರೋ ಆಗಿರುವ ಉದಾಹರಣೆ ಇದೆ. ಅಪ್ಪನ ನಿರ್ದೇಶನದಲ್ಲಿ ಮಗ ನಟಿಸಿದ್ದೂ ಇದೆ. ಮಗನ ನಿರ್ದೇಶನದಲ್ಲಿ ಅಪ್ಪ ಅಭಿನಯಿಸಿದ್ದೂ ಉಂಟು. ಈಗ ಮಗನ ಚೊಚ್ಚಲ ನಿರ್ದೇಶನದಲ್ಲಿ ಅಪ್ಪ ಬಣ್ಣ ಹಚ್ಚಿ ನಟಿಸಿದ್ದು ಸುದ್ದಿಯಾಗಿದೆ.


ಹೌದು, ಕನ್ನಡ ಚಿತ್ರರಂಗದ ಖ್ಯಾತ ನಟ, ನಿರ್ದೇಶಕ ಎಸ್ ನಾರಾಯಣ್ ‘ನವಮಿ 9.9.1999’ ಚಿತ್ರದಲ್ಲಿ ಅಭಿನಯಿಸಿದ್ದಾರೆ. ಈ ಚಿತ್ರಕ್ಕೆ ನಾರಾಯಣ್ ಪುತ್ರ ಪವನ್ ಎಸ್ ನಾರಾಯಣ್ ನಿರ್ದೇಶಕರು. ಮಗನ ನಿರ್ದೇಶನದಲ್ಲಿ ಅಪ್ಪ ಅಭಿನಯಿಸಿರುವುದು ವಿಶೇಷ.
ಎಸ್.ನಾರಾಯಣ್ ಈ ಚಿತ್ರದಲ್ಲಿ ನಾಯಕನ ತಂದೆ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ.

‌ಈಗಾಗಲೇ ಮಾತಿನ ಭಾಗದ ಚಿತ್ರೀಕರಣ ಬಹುತೇಕ ಮುಕ್ತಾಯವಾಗಿದೆ.‌ ಫೈಟ್ ಹಾಗೂ ಹಾಡುಗಳ ಚಿತ್ರೀಕರಣ ‌ಬಾಕಿ ಉಳಿದಿದೆ. ಬೆಂಗಳೂರು, ಶಿವಗಂಗೆ, ಸಕಲೇಶಪುರದಲ್ಲಿ 40 ದಿನಗಳ ಚಿತ್ರೀಕರಣ ನಡೆದಿದೆ.
ಉತ್ಸಾಹಿ ಯುವಕರ ತಂಡವೊಂದು ಲಾಕ್ ಡೌನ್ ಸಮಯದಲ್ಲಿ ಕಥೆ ಬರೆದಿದ್ದು, ಪವನ್ ಎಸ್‌ ನಾರಾಯಣ್ ಮೊದಲ ಸಲ ಆಕ್ಷನ್ ಕಟ್ ಹೇಳುತ್ತಿದ್ದಾರೆ.


ತಂದೆ ಗರಡಿಯಲ್ಲಿ ಪಳಗಿರುವ ಪವನ್ ಈಗ ಸ್ವತಂತ್ರ ನಿರ್ದೇಶಕನಾಗಿ ಈ ಸಿನಿಮಾದ ಮೂಲಕ ಹೆಜ್ಜೆ ಇಡುತ್ತಿದ್ದಾರೆ.
ಈ ಚಿತ್ರಕ್ಕೆ ನಟ ಯಶಸ್ ಅಭಿ ಹೀರೋ. ಈ ಹಿಂದೆ ‘ಪ್ರಸೆಂಟ್ ಪ್ರಪಂಚ ಜೀರೋ ಪರ್ಸೆಂಟ್ ಲವ್’ ಹಾಗೂ ‘ಕ್ರಿಟಿಕಲ್ ಕೀರ್ತನೆಗಳು’ ಚಿತ್ರಗಳಲ್ಲಿ ಯಶಸ್ ಅಭಿ ‌ನಟಿಸಿದ್ದಾರೆ.

ನಾಯಕ ನಟ ಯಶಸ್ ಅಭಿ ಮತ್ತು ಕೃಷ್ಣ ಗುಡೆಮಾರನ ಹಳ್ಳಿ ಚಿತ್ರಕಥೆ ರಚಿಸಿ, ಪದ್ಮ ಸುಂದರಿ ಕ್ರಿಯೇಷನ್ ಬ್ಯಾನರ್ ನಲ್ಲಿ ನಿರ್ಮಾಣ ಮಾಡುತ್ತಿದ್ದಾರೆ. ನಂದಿನಿ ಗೌಡ ಈ ಚಿತ್ರದ ನಾಯಕಿಯಾಗಿದ್ದಾರೆ.
ಎಸ್.ನಾರಾಯಣ್, ಶಂಕರ್ ಅಶ್ವಥ್, ಓಂ ಪ್ರಕಾಶ್ ರಾವ್, ಹುಚ್ಚ ವೆಂಕಟ್, ಸಂದೀಪ್ ಕುಮರ್ ಜಿ.ಎಂ, ಅನುಶ್ರಿ, ಪವಿತ್ರ, ಕುರಿಬಾಂಡ್ ಸುನೀಲ್, ಅರುಣ ಬಾಲರಾಜ್ ಮುಂತಾದವರು ಈ‌ ಚಿತ್ರದಲ್ಲಿದ್ದಾರೆ.
ಪಿ.ಕೆ.ಎಚ್.ದಾಸ್ ಛಾಯಾಗ್ರಹಣ, ಗಿರಿಧರ್ ದಿವಾನ್ ಸಂಗೀತ ನಿರ್ದೇಶನವಿದೆ. ನಾಗಾರ್ಜುನ್ ಶರ್ಮ ಸಾಹಿತ್ಯ, ಮಾಸ್ ಮಾದ, ಅಲ್ಟಿಮೇಟ್ ಶಿವು ಅವರ ಸಾಹಸ ನಿರ್ದೇಶನವಿದೆ. ಮೋಹನ್ ನೃತ್ಯ ಸಂಯೋಜನೆ ಚಿತ್ರಕ್ಕಿದೆ


ಶಶಿಕುಮಾರ್ ಕಾರ್ಯಕಾರಿ ನಿರ್ಮಾಪಕರಾಗಿ ಕಾರ್ಯ ನಿರ್ವಾಹಿಸುತ್ತಿದ್ದಾರೆ.
ನವರಾತ್ರಿ ಸಂದರ್ಭದಲ್ಲಿ ನವ(ಒಂಭತ್ತು ಜನ) ನಿರ್ದೇಶಕರು ಈ ಚಿತ್ರದ ಫಸ್ಟ್ ಲುಕ್ ಬಿಡುಗಡೆ ಮಾಡಿ ಶುಭ ಕೋರಿದ್ದರು.

error: Content is protected !!