ಶುಗರ್ ಫ್ಯಾಕ್ಟರಿ ಶುರು ಮಾಡಿದ ಡಾರ್ಲಿಂಗ್‌ ಕೃಷ್ಣ

ಕೃಷ್ಣನಿಗೆ ಮೂವರು ನಾಯಕಿಯರು!

“ಲವ್‌ ಮಾಕ್ಟೇಲ್‌” ಖ್ಯಾತಿಯ ಕೃಷ್ಣ ಈಗ “ಶುಗರ್‌ ಫ್ಯಾಕ್ಟರಿ” ಶುರುಮಾಡಿದ್ದಾರೆ..!

ಅರೇ, ಹೀಗಂದಾಕ್ಷಣ, ಅವರು ಯಾಕೆ ಶುಗರ್‌ ಫ್ಯಾಕ್ಟರಿಗೆ ಕೈ ಹಾಕಿದರು ಎಂಬ ಪ್ರಶ್ನೆ ಸಹಜ. ಆದರೆ, ಇದು ಬಿಝಿನೆಸ್‌ ಮಾಡುವ ಫ್ಯಾಕ್ಟರಿ ಅಲ್ಲ, ಬದಲಾಗಿ ಸಿನಿಮಾದ ಹೆಸರು. ಈ ಹಿಂದೆ ಕೃಷ್ಣ ಅವರು “ಶುಗರ್‌ ಫ್ಯಾಕ್ಟರಿ” ಚಿತ್ರ ಮಾಡಲಿದ್ದಾರೆ ಅಂತ ಸುದ್ದಿಯಾಗಿತ್ತು. ನಟಿ ಅಮೂಲ್ಯ ಅವರ ಸಹೋದರ ನಿರ್ದೇಶಕ ದೀಪಕ್‌ ಅರಸ್‌ ಅವರ ನಿರ್ದೇಶನದ ಈ ಚಿತ್ರಕ್ಕೆ ಗುರುವಾರ ಮಹಾಲಕ್ಷ್ಮೀ ಲೇಔಟ್‌ನಲ್ಲಿರುವ ಪಂಚಮುಖಿ ಗಣಪತಿ ದೇವಾಲಯದಲ್ಲಿ ಮುಹೂರ್ತ ನೆರವೇರಿದೆ.

ನಿರ್ದೇಶಕ ತರುಣ್ ಸುಧೀರ್ ಕಿಶೋರ್ ಅವರ ಕ್ಲಾಪ್‌ ಮಾಡಿದರೆ, ‌ಜಿ.ಹೆಚ್.ರಾಮಚಂದ್ರ ಅವರು‌ ಕ್ಯಾಮೆರಾ ಚಾಲನೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಕೋರಿದ್ದಾರೆ.
ನಟಿ ಅಮೂಲ್ಯ, ಜಗದೀಶ್, “ಲಾಸ್ಟ್ ಬಸ್” ಖ್ಯಾತಿಯ ಅರವಿಂದ್, ಮಯೂರ್ ಪಟೇಲ್ ಸೇರಿದಂತೆ ಹಲವರು ಮುಹೂರ್ತ ಸಮಾರಂಭಕ್ಕೆ ಆಗಮಿಸಿ ಶುಭ ಕೋರಿದ್ದಾರೆ.
ಶುಕ್ರವಾರದಿಂದಲೇ ಬೆಂಗಳೂರಿನಲ್ಲಿ ಮೊದಲ ಹಂತದ ಚಿತ್ರೀಕರಣ ಶುರುವಾಗಿದೆ.

ಚಿತ್ರದಲ್ಲಿ ಸೊನಾಲ್‌ ಮಾಂತೆರೊ, ಅದ್ವಿತಿ ಶೆಟ್ಟಿ, ಗ್ಲಾಮರ್ ಗೊಂಬೆ ಶಿಲ್ಪಾ ಶೆಟ್ಟಿ ‌ನಾಯಕಿಯರಾಗಿ ನಟಿಸುತ್ತಿದ್ದಾರೆ. ಉಳಿದಂತೆ ಚಿತ್ರದಲ್ಲಿ ರಂಗಾಯಣ ರಘು, ಗೋವಿಂದೇಗೌಡ, ಸೂರಜ್ ಕುಮಾರ್, ಮಹಾಂತೇಶ್ (ಹೊಸ ಪರಿಚಯ), ಪವನ್ ಎಸ್.ನಾರಾಯಣ್, ಬ್ರೋ ಗೌಡ, ರಾಯಲ್ ರವಿ, ಅವೀಕ್ಷ, ನೀತೂರಾಯ್, ಡಿ.ಜಿ.ವಿಂಪಲ್ ಇತರರು ನಟಿಸುತ್ತಿದ್ದಾರೆ. ಇನ್ನು, ಈ ಚಿತ್ರ ಬಾಲಮಣಿ ಪ್ರೊಡಕ್ಷನ್ಸ್ ಬ್ಯಾನರ್‌ ನಲ್ಲಿ ತಯಾರಾಗುತ್ತಿದ್ದು, ಗಿರೀಶ್.ಆರ್ ನಿರ್ಮಾಣ ಮಾಡುತ್ತಿದ್ದಾರೆ.

ಚಿತ್ರದ ಏಳು ಹಾಡುಗಳಿಗೆ ಚೇತನ್ ಕುಮಾರ್, ಯೋಗರಾಜ್ ಭಟ್, ಜಯಂತ್ ಕಾಯ್ಕಿಣಿ, ಅರಸು ಅಂತಾರೆ, ಚಂದನ್ ಶೆಟ್ಟಿ, ರಾಘವೇಂದ್ರ ಕಾಮತ್ ಸಾಹಿತ್ಯ ಬರೆಯುತ್ತಿದ್ದಾರೆ. ಕಬೀರ್ ರಫಿ ಸಂಗೀತ ನಿರ್ದೇಶನವಿದೆ. ಸಂತೋಷ್ ರೈ ಪಾತಾಜೆ ಛಾಯಾಗ್ರಹಣವಿದೆ. ಕೆ.ಎಂ.ಪ್ರಕಾಶ್ ಸಂಕಲನ ಮಾಡಿದರೆ, ಅರ್ಜುನ್ ಸಾಹಸ ನಿರ್ದೇಶನ ಹಾಗೂ ‌ಧನಂಜಯ್ ಅವರ ನೃತ್ಯ ನಿರ್ದೇಶನವಿದೆ. ಇನ್ನು, ಚೇತನ್ ಕುಮಾರ್ ಹಾಗೂ ಯೋಗಾನಂದ್ ಮುದ್ದಾನ್ ಚಿತ್ರಕ್ಕೆ ಸಂಭಾಷಣೆ ಬರೆಯುತ್ತಿದ್ದಾರೆ.

Related Posts

error: Content is protected !!