ಹಿರಿಯ ನಿರ್ದೇಶಕ ರಾಜೇಂದ್ರ ಸಿಂಗ್ ಬಾಬು ಅವರ ಪುತ್ರ ಹಾಗೂ ನಟ ಆದಿತ್ಯ ಅಂದ್ರೆ ಕನ್ನಡದ ಸಿನಿಮಾ ಪ್ರೇಕ್ಷಕರಿಗೆ ತಕ್ಷಣ ನೆನಪಾಗೋದುʼ ಡೆಡ್ಲಿ ಸೋಮʼ ಚಿತ್ರ. ಆದಿತ್ಯ ಸಿನಿ ಜರ್ನಿಯಲ್ಲಿ ಆ ಸಿನಿಮಾ ಒಂದು ಮೈಲುಗಲ್ಲು. ಅಷ್ಟೇ ಅಲ್ಲ, ಆ ಸಿನಿಮಾದ ಮೂಲಕವೇ ಆದಿತ್ಯ ಒಬ್ಬ ನಟರಾಗಿ ಹೊರ ಹೊಮ್ಮಿದ್ದು. ಆ ನಂತರದ ಅವರ ತಾರಾ ವರ್ಚಸ್ಸನ್ನು ಇನ್ನಷ್ಟು ಹೆಚ್ಚಿಸಿದ್ದು ಅಗ್ನಿ ಶ್ರೀಧರ್ ರಚನೆಯ ʼಎದೆಗಾರಿಕೆʼ ಚಿತ್ರ. ಅವರಿಗೆ ನಟನಾಗಿ ಒಂದಷ್ಟು ತಾರಾ ವರ್ಚಸ್ಸು ಕೊಟ್ಟ ಅವೆರೆಡು ಚಿತ್ರಗಳೂ ಭೂಗತ ಜಗತ್ತಿನ ಕಥೆಯ ಚಿತ್ರಗಳೇ. ಅಲ್ಲಿಂದ ಅವರು ಬಹುತೇಕ ಅಂತಹದೇ ಸಿನಿಮಾಗಳಿಗೆ ಬ್ರಾಂಡ್ ಆದ್ರು. ನಟನೊಬ್ಬನ ಪಾಲಿಗೆ ಅದು ವರವೂ ಹೌದು, ಶಾಪವೂ ಹೌದು. ಆದಿತ್ಯ ಪಾಲಿಗಂತೂ ಇದು ನೋವು ತಂದಿದ್ದೇ ಹೆಚ್ಚಂತೆ. ಹಾಗಂತ ಅವರು ಸುದ್ದಿಗೋಷ್ಠಿಯಲ್ಲಿ ಬಹಿರಂಗವಾಗಿಯೇ ತಮ್ಮ ನೋವು ತೊಡಿಕೊಂಡರು.
ಆದಿತ್ಯ ಅಭಿನಯದ ” ಮುಂದುವರೆದ ಅಧ್ಯಾಯʼ ಚಿತ್ರ ಇದೇ ತಿಂಗಳು 17 ರಂದು ತೆರೆ ಕಾಣುತ್ತಿದೆ. ರಿಲೀಸ್ ಪೂರ್ವ ಪ್ರಚಾರದ ಹಿನ್ನೆಲೆಯಲ್ಲಿ ಚಿತ್ರ ತಂಡ ಇತ್ತೀಚೆಗಷ್ಟೆ ಸಿನಿಮಾ ಟೀಸರ್ ಹಾಗೂ ಸಾಂಗ್ಸ್ ಲಾಂಚ್ ಮೂಲಕ ಮಾಧ್ಯಮದ ಮುಂದೆ ಬಂದಿತ್ತು. ಅಲ್ಲಿ ಚಿತ್ರದ ನಾಯಕ ಆದಿತ್ಯ ಚಿತ್ರದಲ್ಲಿನ ತಮ್ಮ ಪಾತ್ರದ ಕುರಿತು ಮಾತನಾಡುತ್ತಾ, ʼ ನನಗೆ ಬಹುತೇಕ ಸಿನಿಮಾಗಳು ಅಂಡರ್ ವಲ್ಡ್ ಅಂತ ಸಬ್ಜೆಕ್ಟ್ ನಿಂದಲೇ ಪಾತ್ರಗಳ ಅವಕಾಶ ಸಿಗುತ್ತಿತ್ತು. ಇದು ನನಗೆ ತೀರಾ ನೋವಾಗಿದೆ. ಇದರಿಂದ ನಾನು ಗೊಂದಲಕ್ಕೆ ಸಿಲುಕಿಕೊಂಡೆ. ಅಂತಹ ಸಿನಿಮಾಗಳನ್ನು ರಿಜೆಕ್ಟ್ ಮಾಡಿಕೊಂಡು ಬಂದೆ. ಯಾಕೆ ನನಗೆ ಅಂತಹ ಪಾತ್ರಗಳನ್ನೇ ಹುಡುಕಿಕೊಂಡು ಬಂದು ಅಪ್ರೋಚ್ ಮಾಡುತ್ತಿದ್ದರು ಅಂತ ಬೇಜಾರಾಗಿತ್ತುʼ ಎಂದರು.
ರಿಲೀಸ್ ಗೆ ರೆಡಿಯಾಗಿರುವ ಮುಂದುವರೆದ ಅಧ್ಯಾಯ ಚಿತ್ರದ ಕುರಿತು ಮಾತನಾಡಿ, ಈ ಸಿನಿಮಾದಲ್ಲಿ ಕ್ಯೂರಿಯಾಸಿಟಿಯಿದೆ. ನನ್ನ ಪ್ರತಿ ಸಿನಿಮಾಕ್ಕೂ ನನ್ನ ಟೆಕ್ನೀಶಿಯನ್ಸ್ , ಆರ್ಟಿಸ್ಟ್, ಪ್ರೊಡ್ಯೂಸರ್ಸ್, ಡೈರೆಕ್ಟರ್ ಗಳೇ ನನಗೆ ಹೀರೋಗಳು. ಇದು ವಿಭಿನ್ನವಾದ ಥ್ರಿಲ್ಲರ್ ಸಿನಿಮಾ ಇದಾಗಿದ್ದು, ಎಲ್ಲರ ಒಗ್ಗಟ್ಟಿನಿಂದ ಈ ಸಿನಿಮಾ ಮೂಡಿ ಬಂದಿದೆ ಎಂದರು. ನಿರ್ದೇಶಕ ಬಾಲು ಚಂದ್ರಶೇಖರ್ ಚಿತ್ರದ ವಿಶೇಷತೆ ಕುರಿತು ಮಾತನಾಡಿದರು. ” ಶಿವರಾತ್ರಿ ಹಬ್ಬದ ದಿನ ಒಬ್ಬರು ಕಾಣೆಯಾಗುತ್ತಾರೆ, ಅದು ಯಾಕೆ? ಕಾಣೆಯಾಗಲು ಕಾರಣವೇನು? ಎನ್ನುವುದು ಕಥೆಯ ತಿರುಳಾಗಿದೆ. ಪೊಲೀಸ್ ಪಾತ್ರದಲ್ಲಿ ನಟ ಆದಿತ್ಯ ರಗಡ್ ಲುಕ್ ನಲ್ಲಿ ಪ್ರೇಕ್ಷಕರನ್ನು ಮನರಂಜಿಸಲು ಬರುತ್ತಿದ್ದಾರೆಂದು ಹೇಳಿದರು.