ಯುವರತ್ನ ವೀಕ್ಷಿಸಿದ ನಾಲ್ವರು ಶ್ರೀಗಳು; ಫೋನ್‌ನಲ್ಲಿ ಧನ್ಯವಾದ ತಿಳಿಸಿದ ಪುನೀತ್

‌ಪುನೀತ್‌ ರಾಜಕುಮಾರ್‌ ಅಭಿನಯದ “ಯುವರತ್ನ” ಚಿತ್ರ ನೋಡಿದವರೆಲ್ಲರೂ, ಒಂದೊಳ್ಳೆಯ ಸಂದೇಶವಿರುವ ಸಿನಿಮಾ ಎಂದಿದ್ದರು. ಸಾಕಷ್ಟು ಗಣ್ಯರು ಸಿನಿಮಾ ಕುರಿತು ಮಾತನಾಡಿದ್ದರು. ಈಗ ಸ್ವಾಮೀಜಿಗಳು ಕೂಡ “ಯುವರತ್ನ” ಸಿನಿಮಾ ನೋಡುವ ಮೂಲಕ ಇದೊಂದು ಸಂದೇಶ ಸಾರುವ ಸಿನಿಮಾ ಎಂದು ಹೇಳಿದ್ದಾರೆ. ಹರಿಹರ ಪಂಚಮಸಾಲಿ ಪೀಠದ ವಚನಾನಂದ ಸ್ವಾಮೀಜಿ, ಕಾಗಿನೆಲೆಯ ಕನಕ ಗುರುಪೀಠದ ಜಗದ್ಗುರು ಶ್ರೀ ನಿರಂಜನಾನಂದಪುರಿ ಸ್ವಾಮಿ, ರಾಜನಹಳ್ಳಿ ವಾಲ್ಮೀಕಿ ಗುರುಪೀಠದ ಜಗದ್ಗುರು ಶ್ರೀ ವಾಲ್ಮೀಕಿ ಪ್ರಸನ್ನಾನಂದ ಸ್ವಾಮೀಜಿ ಹಾಗೂ ದಾವಣಗೆರೆ ವಿರಕ್ತಮಠದ ಶ್ರೀ ಬಸವಪ್ರಭು ಸ್ವಾಮೀಜಿ ಅವರು ಚಿತ್ರವನ್ನು ವೀಕ್ಷಿಸಿದ್ದಾರೆ.

“ಯುವರತ್ನ” ಸಿನಿಮಾವನ್ನು ನೋಡಲೇಬೇಕು ಎಂದು ಡಿವೈಎಸ್ಪಿ ನರಸಿಂಹ ತಾಮ್ರದ್ವಜ ಅವರ ಮನವಿ ಮೇರೆಗೆ ಶ್ರೀಗಳು ಸಿನಿಮಾ ನೋಡಿದ್ದಾರೆ.
“ಯುವರತ್ನ” ವೀಕ್ಷಿಸಿದ ಬಳಿಕ ವಚನಾನಂದ ಸ್ವಾಮೀಜಿ ಮಾತನಾಡಿ, “ರಾಜಕುಮಾರ” ಚಲನ ಚಿತ್ರ ನೋಡಿದ್ದ ನಮಗೆ, ಈ “ಯುವರತ್ನ”ದಲ್ಲೂ ಏನೋ ಹೊಸತು ಇರಲಿದೆ ಎನ್ನುವ ಆಸೆ ಗರಿಗೆದರಿತ್ತು. ಚಿತ್ರದ ಕಥಾಹಂದರ ನಮ್ಮನ್ನು ಸಿನಿಮಾದಲ್ಲಿ ಮುಳುಗುವಂತೆ ಮಾಡುವಲ್ಲಿ ಯಶಸ್ವಿಯಾಯಿತು. ಸಮಾಜದ ಮುಂಚೂಣಿಯ ಸ್ಥಾನದಲ್ಲಿರುವವರು ನೋಡಲೇಬೇಕಾದ ಸಿನಿಮಾ ಇದು. ಸರಕಾರಿ ಶಿಕ್ಷಣ ಕೇಂದ್ರಗಳು ಯಾಕಾಗಿ ಮುಚ್ಚುತ್ತಿವೆ. ಅದರ ಮೇಲೆ ಖಾಸಗಿ ಶಿಕ್ಷಣ ಸಂಸ್ಥೆಗಳು ಯಾವ ರೀತಿಯಲ್ಲಿ ಪ್ರಭಾವ ಬೀರುತ್ತವೆ.

ಯುವಕರು ದಾರಿ ತಪ್ಪುವ ಬಗೆ ಹೇಗೆ. ಹಾಗೂ ಮಕ್ಕಳ ಜೀವನದಲ್ಲಿ ಶಿಕ್ಷಕನ ಪಾತ್ರ ಏನು. ಈ ರೀತಿ ಹತ್ತು ಹಲವು ವಿಷಯಗಳನ್ನು ತಿಳಿಸುವ ಕಥಾ ಹಂದರ ಈ ಚಿತ್ರದಲ್ಲಿದೆ. ಸಮಾಜದ ಎಲ್ಲಾ ವರ್ಗದವರೂ ಕುಟುಂಬ ಸಮೇತರಾಗಿ ನೋಡಲೇ ಬೇಕಾದ ಚಲನಚಿತ್ರವಿದು. ನಮ್ಮ ಈಗಿನ ಬದುಕಿನ ಹಾಗೂ ಸಮಾಜದ ಪ್ರತಿಬಿಂಬ ಈ ಚಲನಚಿತ್ರದಲ್ಲಿದೆ.

ಇನ್ನು, ಜೀವನದಲ್ಲಿ ಮೊದಲ ಬಾರಿಗೆ ಮೂವರು ಪ್ರಮುಖ ಸ್ವಾಮೀಜಿಗಳೊಂದಿಗೆ ಚಿತ್ರ ನೋಡುವ ಭಾಗ್ಯ ನಮ್ಮದಾಗಿತ್ತು. ಅದಲ್ಲದೆ ಸ್ವತಃ ಪುನೀತ್‌ ರಾಜ್‌ಕುಮಾರ್‌ ಅವರು ನಮ್ಮೊಂದಿಗೆ ದೂರವಾಣಿಯಲ್ಲಿ ಮಾತನಾಡಿ, ಚಲನಚಿತ್ರ ವೀಕ್ಷಿಸಿದ್ದಕ್ಕೆ ಧನ್ಯವಾದ ಹೇಳಿದ್ದು ಕೂಡ ವಿಶೇಷವಾಗಿತ್ತುʼ ಎಂದಿರುವ ಅವರು, ಪ್ರತಿಯೊಬ್ಬರೂ ನೊಡಲೇಬೇಕಾದ ಸಿನಿಮಾ ಇದಾಗಿದ್ದು, ಮಾಸ್ಕ್‌ ಧರಿಸಿ, ಸರ್ಕಾರದ ನಿಯಮ ಪಾಲಿಸಿ ಚಿತ್ರ ವೀಕ್ಷಿಸಬೇಕು ಎಂದು ವಚನಾನಂದ ಸ್ವಾಮಿ ಹೇಳಿದ್ದಾರೆ.

Related Posts

error: Content is protected !!