ಪುನೀತ್ ಅಭಿನಯದ “ಯುವರತ್ನ” ಚಿತ್ರ ಇದೀಗ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ನೋಡಬಹುದು! ಅರೇ, ಇದೇನಾಪ್ಪ ರಿಲೀಸ್ ಆಗಿ ವಾರವೂ ಕಳೆದಿಲ್ಲ, ಅದಾಗಲೇ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ “ಯುವರತ್ನ” ಚಿತ್ರ ಬಂತಾ ಎಂಬ ಪ್ರಶ್ನೆ ಎದುರಾದರೆ ಅಚ್ಚರಿ ಇಲ್ಲ. ಹೌದು, ಇದನ್ನು ಸ್ವತಃ ಹೊಂಬಾಳೆ ಫಿಲಂಸ್ ಘೋಷಿಸಿದೆ.
ಅಷ್ಟೇ ಅಲ್ಲ, ಅದಕ್ಕೊಂದು ಸ್ಪಷ್ಟನೆಯನ್ನೂ ನೀಡಿದೆ. “ಪ್ರಸ್ತುತ ವಿದ್ಯಮಾನಗಳನ್ನು ಗಮನದಲ್ಲಿಟ್ಟುಕೊಂಡು “ಯುವರತ್ನ” ಚಿತ್ರವನ್ನು ಚಿತ್ರಮಂದಿರಗಳಲ್ಲಿ ಹಾಗೂ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಲಭ್ಯವಿರುವಂತೆ ಮಾಡಲಾಗಿದೆ. ಚಿತ್ರಮಂದಿರ ಮೇಲಿರುವ ನಿರ್ಬಂಧನೆಗಳು, “ಯುವರತ್ನ” ಚಿತ್ರದ ಪೈರಸಿ ದಾಳಿ ಹಾಗೂ ಪ್ರೇಕ್ಷಕಕರ ಒತ್ತಾಯದ ಮೇರೆಗೆ ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ “ಯುವರತ್ನ” ಚಿತ್ರವನ್ನು ಹಾಕಲಾಗಿದೆ. ನೀವು ತೋರಿದ ಅಭಿಮಾನ, ಬೆಂಬಲಕ್ಕೆ ನಾವು ಚಿರಋಣಿ. “ಯುವರತ್ನ” ಹೆಚ್ಚಿನ ಜನರಿಗೆ ದೇಶಾದ್ಯಂತ ಹಾಗೂ ವಿಶ್ವಾದ್ಯಂತ ತಲುಪಲಿ ಎಂಬ ಕಾರಣಕ್ಕೆ ಈ ನಿರ್ಧಾರ ಕೈಗೊಂಡಿದ್ದೇವೆʼ ಎಂದು ನಿರ್ಮಾಪಕ ವಿಜಯ್ ಕಿರಗಂದೂರು ಹೇಳಿದ್ದಾರೆ.
ವಿಜಯ್ ಕಿರಗಂದೂರು, ನಿರ್ಮಾಪಕ
ಅದೇನೆ ಇರಲಿ, ಅಮೇಜಾನ್ ಪ್ರೈಮ್ ವಿಡಿಯೋದಲ್ಲಿ ಒಂದೇ ವಾರಕ್ಕೆ ಸಿನಿಮಾ ಬಂದರೆ, ಚಿತ್ರಮಂದಿರಗಳ ಪಾಡೇನು? ಅಲ್ಲಿ ಕೆಲಸ ನಿರ್ವಹಿಸುವ ಕಾರ್ಮಿಕರ ಸ್ಥಿತಿ ಹೇಗಾಗಬೇಡ? ಅಷ್ಟಕ್ಕೂ “ಯುವರತ್ನ” ಚಿತ್ರ ಚಿತ್ರಮಂದಿರಗಳಲ್ಲಿ ಉಳಿಯುವಂತಹ ಚಿತ್ರವೇ ಆಗಿದ್ದರೂ, ಈಗಲೇ ಯಾಕೆ ನಿರ್ಮಾಣ ಸಂಸ್ಥೆ ಅಮೇಜಾನ್ ಪ್ರೈಮ್ ವಿಡಿಯೋಗೆ ಸಿನಿಮಾ ಕೊಟ್ಟಿದೆ ಎಂಬಿತ್ಯಾದಿ ಪ್ರಶ್ನೆಗಳು ಅಭಿಮಾನಿಗಳು ಮತ್ತು ಪ್ರೇಕ್ಷಕರಲ್ಲಿ ಗಿರಕಿ ಹೊಡೆಯುತ್ತಲೇ ಇದೆ. ಅದೇನೆ ಇದ್ದರೂ, ಸರ್ಕಾರದ ಶೇ.50ರಷ್ಟು ಆಸನ ಭರ್ತಿ ಅವಕಾಶದ ನಿರ್ಧಾರ ನಿಜಕ್ಕೂ ಸಿನಿಮಾ ಮಂದಿಯನ್ನು ಅತಂತ್ರ ಸ್ಥಿತಿಗೆ ತಳ್ಳಿರುವುದಂತೂ ನಿಜ. ಇಂತಹ ಪರಿಸ್ಥಿತಿಯಲ್ಲಿ ಯಾವ ಸ್ಟಾರ್ ಸಿನಿಮಾಗಳಿದ್ದರೂ, ಅದು ಸಮಸ್ಯೆ ಅಲ್ಲದೆ ಮತ್ತೇನು? ಈ ಪರಿಸ್ಥಿತಿ ಮುಂದೆಯೂ ಹೀಗೆ ಮುಂದುವರೆದರೆ, ಚಿತ್ರರಂಗದ ಗತಿ ಏನಾದೀತು? ಇವೆಲ್ಲವನ್ನೂ ನೆನಪಿಸಿಕೊಳ್ಳುವ ನಿರ್ಮಾಪಕರಂತೂ ಅಕ್ಷರಶಃ ಭಯದಲ್ಲಿದ್ದಾರೆ. ರಿಲೀಸ್‌ಗೆ ರೆಡಿಯಾಗಿದ್ದ ಚಿತ್ರಗಳೂ ಮುಂದಕ್ಕೆ ಹೋಗುತ್ತಿವೆ. ಇಂತಹ ವಾತಾವರಣದಲ್ಲಿ ಸಿನಿಮಾರಂಗ ಚೇತರಿಸಿಕೊಳ್ಳುತ್ತಿದ್ದರೂ, ಈಗ ಪುನಃ ಇಂತಹ ಪರಿಸ್ಥಿತಿ ನಿರ್ಮಾಣವಾಗಿದೆ.
ಚಿತ್ರಮಂದಿರಕ್ಕೆ ಶೇ.50ರಷ್ಟು ಭರ್ತಿ ಅವಕಾಶ ಕೊಟ್ಟ ನಿರ್ಧಾರದಿಂದ ಇನ್ನಷ್ಟು ಗೊಂದಲಕ್ಕೀಡಾಗಿರುವುದಂತೂ ಸತ್ಯ. ಮುಂದಿನ ದಿನಗಳಲ್ಲಿ ಕೊರೊನಾ ವಿರುದ್ಧ ಜಾಗೃತಗೊಂಡು, ಅಂತರ ಕಾಪಾಡಿಕೊಂಡು ಅದನ್ನು ತಡೆಗಟ್ಟದೇ ಹೋದರೆ, ಈಗಿರುವ ಸ್ಥಿತಿಗಿಂತಲೂ ಘೋರವಾದ ಸ್ಥಿತಿ ಎದುರಿಸಬೇಕಾದೀತು. ಒಂದು ವೇಳೆ ಕೊರೊನಾ ಅಲೆ ಜೋರಾಗಿಬಿಟ್ಟರಂತೂ, ಲಾಕ್‌ಡೌನ್ ಘೋಷಣೆ ಅನಿವಾರ್ಯವಾದೀತು. ಅಂತಹದ್ದಕ್ಕೆ ಅವಕಾಶ ಮಾಡಿಕೊಡದಿರುವುದೇ ಒಳಿತು. ಈ ಸಮಸ್ಯೆ ಆದಷ್ಟು ಬೇಗ ಮುಗಿದು, “ಆ ದಿನಗಳು” ಬೇಗ ಬರುವಂತಾಗಲಿ ಅನ್ನೋದೇ “ಸಿನಿಲಹರಿ” ಆಶಯ.