Categories
ಸಿನಿ ಸುದ್ದಿ

ಇವರೆಲ್ಲ ಮನುಷ್ಯರೇನ್ರಿ? ನರ ರಾಕ್ಷಸರು! ಕೂಡಲೇ, ಜೈಲಿಗಟ್ಟಿ ಎಂದ ನಟಿ ತಾರಾ ಅನುರಾಧ


ಬೆಂಗಳೂರು ನಗರದಲ್ಲಿನ ಕೋವಿಡ್‌ ವಾರ್‌ ರೂಂ ಅವ್ಯವಹಾರದ ವಿರುದ್ಧ ಹಿರಿಯ ನಟಿ ತಾರಾ ಅನುರಾಧ ಕಿಡಿಕಾರಿದ್ದಾರೆ. ಜನರ ಸಾವಿನ ನಡುವೆಯೂ ಹಣ ಮಾಡಲು ಮನುಷ್ಯ ಇಷ್ಟು ಕ್ರೂರಿ ಆಗಬಾರದಿತ್ತು. ಮನುಷ್ಯ ಸ್ವಾರ್ಥಕ್ಕೆ ಕಡಿವಾಣ ಇಲ್ಲವೇ ಅಂತ ಆತಂಕ ವ್ಯಕ್ತಪಡಿಸಿರುವ ಅವರು, ಕೋವಿಡ್‌ ವಾರ್‌ ರೂಂ ಅವ್ಯವಹಾರದಲ್ಲಿ ಭಾಗಿಯಾದವರನ್ನೆಲ್ಲ ಬಂಧಿಸಿ, ಜೈಲಿಗೆ ಕಳುಹಿಸಬೇಕು. ಯಾಕಂದ್ರೆ ಇಂತಹ ನಿರ್ಧಯಿಗಳಿಗೆ ಕನಿಕರ ಬೇಡ ಅಂತ ಆಗ್ರಹಿಸಿದ್ದಾರೆ.


” ಕೋವಿಡ್‌ ಎರಡನೆಯ ಅಲೆಯಲ್ಲಿ ನೋವು ಅನುಭವಿಸಿದವರ ಪೈಕಿ ನಾನು ಒಬ್ಬಳು. ನನ್ನ ಮನೆಯವರೆಲ್ಲ ಈ ಕೋವಿಡ್‌ ಸೋಂಕಿಗೆ ಸಿಲುಕಿ, ನೋವು ಅನುಭವಿಸಿದ್ದೆವು. ಸಾಕಷ್ಟು ದಿನ ಮನೆಯಲ್ಲಿದ್ದು, ಸೂಕ್ತ ಚಿಕಿತ್ಸೆ ಮೂಲಕ ಅದರಿಂದ ಹೊರ ಬರಬೇಕಾಯಿತು. ಅದರ ನೋವು ಹೇಗಿರುತ್ತದೆ ಎನ್ನುವುದು ನಂಗೆ ಗೊತ್ತು. ಸಾಕಾಗಿ ಹೋಯಿತು, ಅದರ ಭಾದೆ ತಾಳಲಾರದು. ಇನ್ನು ಅದರಿಂದ ಸಾವು-ನೋವು ಅನುಭವಿಸಿದವರ ಪಾಡು ಹೇಳತೀರದು. ದಿನ ನಿತ್ಯ ರಾಜ್ಯದಲ್ಲಿ ಆಗುತ್ತಿರುವ ಪ್ರಕರಣಗಳನ್ನು ನೋಡಿದರೆ ಕರಳು ಕಿವುಚಿದಂತೆ ಆಗುತ್ತದೆ. ಮನಸು ಭಾರವಾಗುತ್ತದೆ. ಪ್ರಾಣ ಕಳೆದುಕೊಂಡವರ ಕುಟುಂಬದವರ ಆಕ್ರಂಧನ ನೋಡಲಾಗದೆ ನಾನು ತೀವ್ರ ಸಂಕಟ ಪಟ್ಟಿದ್ದೇನೆʼ ಎಂಬುದಾಗಿ ತಾರಾ ಅವರು ಹೇಳಿದ್ದಾರೆ.

” ಕೋವಿಡ್‌ ರೋಗಿಗಳಿಗೆ ಬೆಂಗಳೂರು ನಗರದಲ್ಲಿ ಬೆಡ್‌ ಸಿಗುತ್ತಿಲ್ಲ ಅಂತ ಒದ್ದಾಡುತ್ತಿದ್ದಾಗ ನನಗೆ ತೀವ್ರ ಸಂಕಟ ಆಗುತ್ತಿತ್ತು. ಪರಿಚಿತರೊಬ್ಬರಿಗೆ ಬೆಡ್‌ ಕೊಡಿಸುವ ಸಂಬಂಧ ನಾನೂ ಕೂಡ ಒದ್ದಾಡಿಬಿಟ್ಟಿದ್ದೆ. ಆದರೆ ಕಾಳ ಸಂತೆಯಲ್ಲಿ ಅಕ್ರಮವಾಗಿ ಬೆಡ್‌ ಬುಕ್ಕಿಂಗ್‌ ನಡೆಯುತ್ತಿದೆ ಅನ್ನೋದನ್ನು ಕೇಳಿ ಶಾಕ್‌ ಆದೆ. ಹಣ ಮಾಡುವುದಕ್ಕಾಗಿ ಜೀವ ವಿರೋಧಿ ಕೃತ್ಯಕ್ಕೆ ತೊಡಗಿರುವ ಯಾರೋ ಒಂದಷ್ಟು ಕ್ರಿಮಿಗಳು ಮುನಷ್ಯರೇ ಅಲ್ಲ. ಅವರೆಲ್ಲ ನನ್ನ ಪ್ರಕಾರ ರಾಕ್ಷಸರು. ಅವರನ್ನು ಸರ್ಕಾರ ಸುಮ್ಮನೆ ಬಿಡಬಾರದು. ಯಾಕಂದ್ರೆ ಅವರು ಜನರ ಜೀವದ ಜತೆಗೆ ಚೆಲ್ಲಾಟ ಅಡುತ್ತಿದ್ದಾರೆ. ಈ ನಿಟ್ಟಿನಲ್ಲಿ ಸಿಎಂ ಯಡಿಯೂರಪ್ಪ ಅವರು ತಕ್ಷಣವೇ ಕ್ರಮ ಕೈಗೊಳ್ಳುತ್ತೇವೆ ಅಂದಿದ್ದಾರೆ. ಹಾಗಾಗಿ ಅವರನ್ನು ನಾನು ಅಭಿನಂದಿಸುತ್ತೇನೆʼ ಎಂಬುದಾಗಿ ನಟಿ ತಾರಾ ಹೇಳಿದ್ದಾರೆ.

ಈ ಕುರಿತು ಮಾತನಾಡಿರುವ ವಿಡಿಯೋವೊಂದನ್ನು ಅವರು ಸೋಷಲ್‌ ಮೀಡಿಯಾದಲ್ಲಿ ಹಂಚಿಕೊಂಡಿದ್ದಾರೆ. ” ಕೋವಿಡ್‌ ವಾರ್‌ ರೂಂ ಅಕ್ರಮವನ್ನು ಬಯಲಿಗೆಳದಿರುವ ಸಂಸದ ಹಾಗೂ ಸಹೋದರ ತೇಜಸ್ವಿ ಸೂರ್ಯ ಅವರ ಕಾರ್ಯ ಶ್ಲಾಘನೀಯವಾದದ್ದು. ಅವರನ್ನು ಹಾಗೂ ಸರ್ಕಾರವನ್ನು ನಾನು ಆಭಿನಂದಿಸುತ್ತೇನೆ. ಹಾಗೆಯೇ ಸರ್ಕಾರ ಈ ಕೂಡಲೇ ಸಂಬಂಧಪಟ್ಟವರನ್ನು ಬಂಧಿಸಿ ಜೈಲಿಗೆ ತಳ್ಳಬೇಕು. ಯಾಕಂದ್ರೆ ಮತ್ತೊಬ್ಬರು ಇಂತಹ ದಂಧೆಗೆ ಇಳಿಯಬಾರದು. ಜನರಿಗೆ ಈಗ ಸುಲಭವಾಗಿ ಬೆಡ್‌ ಸಿಗಬೇಕು. ಅವರು ಕೋವಿಡ್‌ ನಿಂದ ಗುಣಮುಖರಾಗಬೇಕು. ಜೀವ ಇದ್ದರೆ ಜಗತ್ತು, ನಾವು-ನೀವು ಕೂಡ ಎನ್ನುವುದನ್ನು ಎಲ್ಲರೂ ಅರ್ಥ ಮಾಡಿಕೊಳ್ಳಬೇಕು ಅಂತ ನಟಿ ತಾರಾ ಮನವಿ ಮಾಡಿದ್ದಾರೆ.

Categories
ಸಿನಿ ಸುದ್ದಿ

ದಿಗಂತ್ ಈಗ ರಾಮ! ಮತ್ತೆ ಬಾಲಿವುಡ್ ಗೆ ಜಿಗಿದ ದೂದ್ ಪೇಡ ; ರಾಮ್ ಯುಗ್ ವೆಬ್ ಸೀರೀಸ್ ನಲ್ಲಿ ನಟನೆ – ಮೇ.6ರಿಂದ ಪ್ರಸಾರ

ಕನ್ನಡದ ನಟ‌ ದಿಗಂತ್ ಈಗ ಮತ್ತೆ ಬಾಲಿವುಡ್ ಕಡೆ ಜಿಗಿದಿದ್ದಾರೆ. ಅರೇ, ಅಲ್ಲೆಲ್ಲೋ “ಮಾರಿಗೋಲ್ಡ್” ಅಂತಿದ್ದ ದಿಗಂತ್, “ಗಾಳಿಪಟ” ಹಿಡಿದು ಮಂದಹಾಸ ಬೀರಿದ್ದು‌ ಗೊತ್ತೇ ಇದೆ. ಇದೀಗ ಬಾಲಿವುಡ್ ಕಡೆ ಕಣ್ಣಾಯಿಸಿದ್ದಾರೆ ಅಂದರೆ ನಂಬಲೇಬೇಕು.
ಹೌದು, ದಿಗಂತ್ ಅವರಿಗೆ ಬಾಲಿವುಡ್ ಹೊಸದೇನಲ್ಲ. ಈಗಾಗಲೇ ಬಾಲಿವುಡ್ ಅಂಗಳದಲ್ಲಿ ಜಿಗಿದು ಕುಣಿದು ಕುಪ್ಪಳಿಸಿದ್ದಾರೆ. ಈಗ ಅವರು ರಾಮನಾಗಲು ಹೊರಟಿದ್ದಾರೆ. ಹೀಗಂದರೆ‌ ಕ್ಷಣ ಕಾಲ ಅಚ್ಚರಿಯಾಗಬಹುದು.


ಅವರೀಗ ” ರಾಮ್ ಯುಗ್” ಎಂಬ ವೆಬ್ ಸೀರೀಸ್ ಮಾಡಿದ್ದಾರೆ. ಈ ವೆಬ್ ಸೀರೀಸ್ ನಲ್ಲಿ ಅವರು ರಾಮನಾಗಿ ತೆರೆ ಮೇಲೆ ಮಿಂಚಲಿದ್ದಾರೆ.
ರಾಮನಾಗಿ ಸಖತ್ ಆಗಿಯೇ ಅಬ್ಬರಿಸಲಿದ್ದಾರೆ. ಅದೊಂದು ವಿಭಿನ್ನ ಸೀರೀಸ್ ಆಗಿ ಮೂಡಿಬರುತ್ತಿದೆ. ಇಲ್ಲಿ ಇನ್ನೊಂದು ವಿಶೇಷವೆಂದರೆ, ದಿಗಂತ್ ಅವರಿಗೆ ಎದುರಾಳಿಯಾಗಿ “ಪೈಲ್ವಾನ್” ವಿಲನ್ ಕಬೀರ್ ಸಿಂಗ್ ದುಹಾನ್ ಮಿಂಚುತ್ತಿದ್ದಾರೆ. ಅಂದರೆ ಅವರಿಲ್ಲಿ ರಾಮನ ಎದುರು ರಾವಣನಾಗಿ ಅಬ್ಬರಿಸಲಿದ್ದಾರೆ.

ದಿಗಂತ್ ಇಲ್ಲಿ ಮರ್ಯಾದ ಪುರುಷನಾದರೆ, ಕಬೀರ್ ಸಿಂಗ್ ಅವರನ್ನು ಡಿಸ್ಟರ್ಬ್ ಮಾಡುವ ಕೆಲಸ. ಈ ಸೀರೀಸ್ ಬೇರೇನೆ ಫೀಲ್ ಕೊಡುವುದು ಖಚಿತ. ಹಿಂದೆ ರಾಮಾಯಣ ಕಂಡ ಜನರಿಗೆ ಈ “ರಾಮ್ ಯುಗ್” ಹೊಸ ಭಾವನೆ‌ ಮೂಡಿಸಲಿದೆ. ಅಂದಹಾಗೆ, ಹನುಮ ಜಯಂತಿ ದಿನದಂದು ಈ ಸೀರೀಸ್ ನ ಮ್ಯೂಸಿಕಲ್ ಟೀಸರ್ ಹೊರಬಂದಿತ್ತು. ಈಗ ಎಂಎಕ್ಸ್ ಪ್ಲೇಯರ್ ನಲ್ಲಿ ಟ್ರೇಲರ್ ಬಿಡುಗಡೆಯಾಗಿದೆ. ಇನ್ನು ಮೇ.6 ರಂದು ಎಂಎಕ್ಸ್ ಪ್ಲೇಯರ್ ನಲ್ಲಿ ಪ್ರಸಾರವಾಗಲಿದೆ.


ಅದೇನೆ ಇರಲಿ ದಿಗಂತ್ ಅವರು ಸ್ಪುರದ್ರೂಪಿ. ರಾಮನ ಪಾತ್ರಕ್ಕೆ ಹೇಳಿ ಮಾಡಿಸಿದಂತಿದ್ದಾರೆ. ಸದ್ಯ ಪ್ರಸಾರವಾಗಲಿರುವ ಈ ಸೀರೀಸ್ ಗಾಗಿ ಹಲವರು ಎದುರು ನೋಡುತ್ತಿದ್ದಾರೆ.
ದಿಗಂತ್ ಅಭಿನಯದ “ಹುಟ್ಟು ಹಬ್ಬದ ಶುಭಾಶಯಗಳು”, ” ಮಾರಿಗೋಲ್ಡ್” ಚಿತ್ರಗಳು ರಿಲೀಸ್ ಗೆ ರೆಡಿಯಾಗಿವೆ. “ಗಾಳಿಪಟ” ಕೂಡ ಹಾರಲು ಸಜ್ಜಾಗುತ್ತಿದೆ. ಈ ಬೆನ್ನಲ್ಲೇ ಅವರು “ರಾಮ್ ಯುಗ್” ಸೀರೀಸ್ ಮಾಡಿದ್ದಾರೆ.

Categories
ಸಿನಿ ಸುದ್ದಿ

‌ಕೊರೊನಾ ಸೋಂಕಿತರ ನೆರವಿಗೆ ಬಂದ ಕನ್ನಡ ನಟ ಕಿಚ್ಚ ಸುದೀಪ್

ಬಾಲಿವುಡ್ ನಟ ಸೋನು ಸೂದ್ ನಂತರ ಕನ್ನಡದ ನಟರ ಪೈಕಿ ನಟ ಸುದೀಪ್ ಇದೇ ಮೊದಲು ದೊಡ್ಡ ಮಟ್ಟದಲ್ಲಿ ಕೊರೋನಾ ಸೋಂಕಿತರ ನೆರವಿಗೆ ಧಾವಿಸಿದ್ದಾರೆ



‌ಕನ್ನಡದ ನಟರ ಬಗ್ಗೆ ಸಾರ್ವಜನಿಕವಾಗಿ ತೀವ್ರ ಚರ್ಚೆ ನಡೆಯುತ್ತಿರುವಾಗಲೇ ನಟ ಕಿಚ್ಚ ಸುದೀಪ್ ಅವರು ಕೊರೊನಾ ಸೋಂಕಿತರ ನೆರವಿಗೆ ಧಾವಿಸಿದ್ದಾರೆ. ಕಿಚ್ಚ ಸುದೀಪ್ ಚಾರಿಟೆಬಲ್ ಟ್ರಸ್ಟ್ ಮೂಲಕ ಸರಿಸುಮಾರು 300 ಆಕ್ಸಿಜನ್ ಸಿಲಿಂಡರ್ ಗಳನ್ನು ಬೆಂಗಳೂರಿನ ಖಾಸಗಿ ಆಸ್ಪತ್ರೆಗಳಿಗೆ ನೀಡಲು ಮುಂದೆ ಬಂದಿದ್ದಾರೆ.

ಸದ್ಯಕ್ಕೆ ಬಾಲಿವುಡ್ ನಟ ಸೋನು ಸೂದ್ ನಂತರ ಕನ್ನಡದ ನಟರ ಪೈಕಿ ನಟ ಸುದೀಪ್ ಇದೇ ಮೊದಲು ದೊಡ್ಡ ಮಟ್ಟದಲ್ಲಿ ಕೊರೋನಾ ಸೋಂಕಿತರ ನೆರವಿಗೆ ಧಾವಿಸಿದ್ದಾರೆ. ಸದ್ಯಕ್ಕೆ ಯಾವ್ಯಾವ ಖಾಸಗಿ ಆಸ್ಪತ್ರೆಗಳಿಗೆ ಅವರು ಆಕ್ಸಿಜನ್ ಸಿಲಿಂಡರ್ ನೀಡುತ್ತಿದ್ದಾರೆಂಬ ಮಾಹಿತಿ ಇಲ್ಲ. ಆದರೆ ಕೊರೊನಾ ಸೊಂಕಿತರ ನೆರವಿಗೆ ಬಂದಿರುವುದು ಇತರರಿಗೂ ಮಾದರಿ ಆಗಲಿ.

Categories
ಸಿನಿ ಸುದ್ದಿ

ಸಹ್ಯಾದ್ರಿ ಕಾಲೇಜು ಕ್ಯಾಂಪಸ್ ಉಳಿಸಿ ಅಭಿಯಾನಕ್ಕೆ ಸಿನಿಮಾ ಸಾಹಿತಿ ಕವಿರಾಜ್ ಬೆಂಬಲ !

ಕನ್ನಡ ಚಿತ್ರರಂಗದ ಹೆಸರಾಂತ ಗೀತೆ ರಚನೆಕಾರ ಕವಿರಾಜ್ ಅಪ್ಪಟ‌ ಮಲೆನಾಡಿನ‌ ಪ್ರತಿಭೆ.‌ ಅವರು ಓದಿದ್ದು ಶಿವಮೊಗ್ಗದ ಸಹ್ಯಾದ್ರಿ ಕಾಲೇಜು. ಅಲ್ಲಿಂದಲೇ ಸಾಹಿತ್ಯದ ಬಗ್ಗೆ ಆಸಕ್ತಿ ಹೊಂದಿದ್ದ ಅವರು ಇವತ್ತು ನಾಡಿನ ಹೆಸರಾಂತ ಸಿನಿಮಾ ಗೀತೆ ರಚನೆಕಾರ ಅನ್ನೋದು‌ ಬಹುತೇಕರಿಗೆ ಗೊತ್ತಿರುವ ವಿಚಾರ. ಇಷ್ಟು ಹೇಳಿದ ಮೇಲೆ ಅವರು ಮಲೆನಾಡು, ಸಹ್ಯಾದ್ರಿಕಾಲೇಜಿಗೆ ಅಪತ್ತು ಬಂದ್ರೆ ಸುಮ್ನೆ ಇರ್ತಾರಾ? ಹೌದು, ಶಿವಮೊಗ್ಗದ ಪ್ರತಿಷ್ಟಿತ ಸಹ್ಯಾದ್ರಿ ಕಾಲೇಜು ಈಗ ಆಪತ್ತಿನಲ್ಲಿದೆ‌ . ಕಾಲೇಜಿನ ವಿಶಾಲ ಕ್ಯಾಂಪಸ್ ಅನ್ನು ಸರ್ಕಾರ ಸಾಯಿ ಇಂಡಿಯಾ ಖೇಲೋ ಇಂಡಿಯಾಕ್ಕೆ ಕೊಡಲು ಹೊರಟಿದೆ. ಅದರ ವಿರುದ್ಧ ಈಗ ಅಲ್ಲಿ ದೊಡ್ಡ ಅಭಿಯಾನ ಶುರುವಾಗಿದೆ. ಸಹ್ಯಾದ್ರಿ ಕಾಲೇಜು ಕ್ಯಾಂಪಸ್ ಉಳಿಸಿ ಅಂತ ಅಲ್ಲಿನ ಸಾಹಿತಿಗಳು, ಸಂಘಟನೆಗಳು, ಪ್ರಗತಿಪರ ಚಿಂತಕರು, ಕಾಲೇಜಿನ ಹಳೆಯ ಹಾಗೂ ಹಾಲಿ ವಿದ್ಯಾರ್ಥಿಗಳು ಧ್ವನಿ ಎತ್ತಿದ್ದಾರೆ. ಅದಕ್ಕೀಗ ಕವಿರಾಜ್ ಕೂಡ ಬೆಂಬಲಿಸಿದ್ದಾರೆ.

ಕಾಲೇಜು ಅಂದರೆ, ಕೇವಲ ಕಟ್ಟಡವಲ್ಲ, ಅಲ್ಲಿರುವ ವಸ್ತುಗಳಲ್ಲ. ಆ ಇಡೀ ಕ್ಯಾಂಪಸ್​ನಲ್ಲಿ ಕಲಿಕೆಯಿದೆ. ಅಲ್ಲಿರುವ ಮರ ಗಿಡಗಳು, ಬಯಲು, ಉದ್ಯಾನವನ, ಹೂವುಗಳೆಲ್ಲಾ ಸೇರಿಯೇ ಕಾಲೇಜು ಎನಿಸಿವೆ. ಅಲ್ಲಿ ನಡೆವ ಘಟನೆಗಳು ವಿದ್ಯಾರ್ಥಿಗಳನ್ನು ಬೆಳೆಸುತ್ತವೆ. ನಾವು ಓದುತ್ತಿದ್ದಾಗ ಇದ್ದ ಕಾಲೇಜಿನ ಆವರಣ ಈಗಾಗಲೇ ಸಾಕಷ್ಟು ಚಿಕ್ಕದಾಗಿದೆ.

ಶಿಕ್ಷಣಕ್ಕೆ ಸಂಬಂಧವಿರದ ಕಾರಣಕ್ಕೆ ಅಲ್ಲಿಯ ಜಾಗವನ್ನು ಬೇರೆಯಾರಿಗೋ ಕೊಡುವುದಕ್ಕೆ ನನ್ನ ವಿರೋಧವಿದೆ. ಅಲ್ಲದೆ ಧ್ಯಾನ ಕೇಂದ್ರದ ಅಸ್ಮಿತೆಯನ್ನು ಹಾಳು ಮಾಡಬೇಡಿ ಎಂದು ಮನವಿ ಮಾಡಿದ್ದಾರೆ. ಸಾಧ್ಯವಾದರೆ ಅಲ್ಲಿನ ವಾತಾವರಣವನ್ನು ಇನ್ನಷ್ಟು ಸುಂದರಗೊಳಿಸಬೇಕು. ಅದನ್ನ ವಿರೂಪಗೊಳಿಸಬೇಡಿ ಎಂದು ಮನವಿ ಮಾಡಿದ್ದಾರೆ.

Categories
ಸಿನಿ ಸುದ್ದಿ

ನಟ ಪ್ರಕಾಶ್ ಬೆಳವಾಡಿಗೆ ಇರಬಾರದ ಜಾಗಕ್ಕೆ ಇರುವೆ ಬಿಟ್ಟುಕೊಳ್ಳುವ ಕೆಲಸ ಬೇಕಿತ್ತಾ…?


ಹಿರಿಯ ನಟ ಪ್ರಕಾಶ್ ಬೆಳವಾಡಿ ವಿರುದ್ಧ ಸೋಷಲ್ ಮೀಡಿಯಾದಲ್ಲಿ ಭಾರೀ‌ ಆಕ್ರೋಶ ವ್ಯಕ್ತವಾಗಿದೆ. ಅವನ್ಯಾವನೋ ಸುಮ್ಮಿರಲಾರದೆ ಅದೇನೋ ಕೆರ್ಕೊಂಡು ಹುಣ್ಣು ಮಾಡ್ಕೊಂಡ ಅಂತೆನ್ನುವ ಹಾಗಾಗಿದೆ ಪ್ರಕಾಶ್ ಬೆಳವಾಡಿ ಕಥೆ. ಕಾಲ, ಸಂದರ್ಭ, ಸನ್ನಿವೇಶದ ಅರಿವಿರದೆ ಅವರು ಸೋಷಲ್ ಮೀಡಿಯಾದಲ್ಲಿ ಹಾಕಿಕೊಂಡ ಒಂದು ಸ್ಟೇಟಸ್ ಗೆ ನೆಟ್ಟಿಗರು ಉಗಿದು ಉಪ್ಪು ಹಾಕಿದ್ದಾರೆ.

ಅವರ ಬಗ್ಗೆ ನಮಗೂ ಗೌರವ ಇದೆ. ಅವರು ಹಿರಿಯ ನಟರು. ಚಿತ್ರರಂಗಕ್ಕೆ ಮೆರಗು ತಂದವರು. ಆದರೆ ಈ ಸಂದರ್ಭಕ್ಕೆ ಅವರಿಗೆ ಇಂತಹ ಹೇಳಿಕೆ ನೀಡುವ ಅವಶ್ಯಕತೆ ಇರಲಿಲ್ಲ ಅಂತ ನಿಮಗೂ ಅನಿಸುತ್ತೆ. ಸೋಷಲ್ ಮೀಡಿಯಾದಲ್ಲಿ ಬಹಳಷ್ಟು ಜನ ಅದನ್ನೇ ಪ್ರಶ್ನಿಸಿದ್ದಾರೆ . ಈಗ್ಯಾಕಪ್ಪಾ ಈ ಸೇಡು ಅಂತ ಕಿವಿ ಮಾತು ಹೇಳಿದ್ದಾರೆ. ಇಷ್ಟಕ್ಕೂ ಆಗಿದ್ದೇನು ಗೊತ್ತಾ? ಪ್ರಕಾಶ್ ಬೆಳವಾಡಿ ಹೇಳಿಕೊಂಡ ಪ್ರಕಾರ;

ಅಹಮದಾಬಾದ್ ನಲ್ಲಿರುವ ನನ್ನ ಗೆಳೆಯ ನೊಬ್ಬ ಫೋನ್ ಮಾಡಿದ್ದ. ಗುಜರಾತ್ ನರಮೇದಕ್ಕೆ ಸಂಘಿಗಳಿಗೆ ಈಗ ತಕ್ಕ ಪಾಠ ಆಗ್ತಿದೆ ಅಂತಂದ.‌ ಅದಕ್ಕೆ‌ ನಾನು, ಅದು ಹಾಗಲ್ಲ, ಪಶ್ವಿಮ‌ ಬಂಗಾಳದಲ್ಲಿ ಹಿಂದೂಗಳ ಸಂಖ್ಯೆ ಜಾಸ್ತಿ ಇದೆ. ತಿರುಗಿ‌ ಬಿದ್ರೆ ಆ ಕಥೆ ಬೇರೆನೆ ಇದೆ ಅಂತಂದೆ. ಅನ್ನೋದು ಪ್ರಕಾಶ್ ಬೆಳವಾಡಿ ಹೇಳಿಕೆ. ಇಲ್ಲೊಂದಷ್ಟು ಹೇಳಿಕೆಗಳನ್ನು ಬೇಡ ಅಂತಲೇ ಹಾಕಿಲ್ಲ.

ಒಂದ್ರೀತಿ ಅವೆಲ್ಲ ಪಕ್ಕಾ ಪ್ರಚೋದನಾಕಾರಿ ಹೇಳಿಕೆ.‌ ಅದನ್ನೇ ಪ್ರಶ್ನಿಸಿ‌ ನೆಟ್ಟಿಗರು ಉಗಿದು ಉಪ್ಪು ಹಾಕಿದ್ದಾರೆ. ಕಾನೂನು ಪ್ರಕಾರ ಅವರ ಮೇಲೆ ಪ್ರಚೋದನಾಕಾರಿ ಹೇಳಿಕೆ ಮೇರೆಗೆ ಕೇಸು ದಾಖಲಿಸಿ ಆರೆಸ್ಟ್ ಮಾಡಬೇಕಿದೆ ಅಂತಲೂ ನೆಟ್ಟಿಗರು ಆಗ್ರಹಿಸಿದ್ದಾರೆ.

ಅಂದಹಾಗೆ ಪ್ರಕಾಶ್ ಬೆಳವಾಡಿ ಇಂತಹ ವಿವಾದಾತ್ಮಕ ಹೇಳಿಕೆ ನೀಡುತ್ತಿರುವುದು ಇದೇ ಮೊದಲಲ್ಲ. ಕಳೆದ ಲೋಕಸಭಾ ಚುನಾವಣೆ ಸಂದರ್ಭದಲ್ಲೂ ಇಂತಹದೇ ವಿವಾದಾತ್ಮಕ ಹೇಳಿಕೆ ನೀಡಿ, ಉಗಿಸಿಕೊಂಡಿದ್ದರು.ಆ ಕಥೆ ಈಗಲೂ ಮುಂದುವರೆದಿದೆ…

Categories
ಸಿನಿ ಸುದ್ದಿ

ನಿರ್ದೇಶಕ ಎಂಬ ತಪಸ್ವಿಗೆ ಶುಭಾಶಯ : ಡೈರೆಕ್ಟರ್ ಟೋಪಿ ಹಾಕುವ ಹಿಂದಿದೆ ಮನಕಲಕುವ ಕಥೆ-ವ್ಯಥೆ!!

ಮೇ.4 ನಿರ್ದೇಶಕರ ದಿನ. ಅದೆಷ್ಟೋ ಕಥೆಗಳ ಮೂಲಕ ಒಂದಷ್ಟು ಮನಸ್ಸುಗಳನ್ನು ರಂಜಿಸಿದ, ಕಾಡಿದ,‌ ಕನವರಿಸುವಂತೆ ಮಾಡಿದ, ದು:ಖ, ದುಮ್ಮಾನಗಳ ಜೊತೆಯಲ್ಲೇ ಬದುಕಿದ, ಬದುಕುತ್ತಿರುವ ನಿರ್ದೇಶಕನಿಗೆ ನಿರ್ದೇಶಕ ದಿನದ ಶುಭಾಶಯಗಳು.

ಸಿನಿಮಾ ಅಂದರೆ ಮೊದಲು‌ ನೆನಪಾಗೋದೆ ನಿರ್ದೇಶಕ. ಬಣ್ಣ ಬಣ್ಣದ ಕನಸು ಕಟ್ಟಿಕೊಂಡು ಬೆಳ್ಳಿ ಪರದೆ ಮೇಲೆ ಮೋಡಿ ಮಾಡುವ ಕನಸುಗಾರ.
(ಇಂದು) ಮೇ.4 ನಿರ್ದೇಶಕರ ದಿನ. ಅದೆಷ್ಟೋ ಕಥೆಗಳ ಮೂಲಕ ಒಂದಷ್ಟು ಮನಸ್ಸುಗಳನ್ನು ರಂಜಿಸಿದ, ಕಾಡಿದ,‌ ಕನವರಿಸುವಂತೆ ಮಾಡಿದ, ದು:ಖ, ದುಮ್ಮಾನಗಳ ಜೊತೆಯಲ್ಲೇ ಬದುಕಿದ, ಬದುಕುತ್ತಿರುವ ನಿರ್ದೇಶಕನಿಗೆ ನಿರ್ದೇಶಕ ದಿನದ ಶುಭಾಶಯಗಳು.

ಸಿನಿಮಾ ವಿಭಾಗದಲ್ಲಿ ನಿರ್ದೇಶಕನಿಗೆ ಇದ್ದಷ್ಟು ಸವಾಲು ಮತ್ತು ಭಯ ಬೇರೆ ಯಾವ ವಿಭಾಗದವರಿಗೂ ಇಲ್ಲ.
ಕಲ್ಪನೆಯ ಕಥೆ ಕಟ್ಟಿಕೊಂಡು ಅದಕ್ಕೆ ದೃಶ್ಯರೂಪ ಕೊಡುವ ಸಾಹಸವಿದೆಯಲ್ಲ ಅದರ ಹಿಂದಿನ‌ ಕಷ್ಟ ಆ ನಿರ್ದೇಶಕನಿಗೇ ಮಾತ್ರ ಗೊತ್ತು. ತನ್ನೆಲ್ಲಾ ಆಸೆ-ಆಕಾಂಕ್ಷೆಗಳನ್ನು ಬದಿಗೊತ್ತಿ, ಮನೆಯವರ ಜೊತೆ ಸಮಯ ಕಳೆಯದೇ ಮೂರು ಹೊತ್ತು ಸಿನಿಮಾ ಜಪ ಮಾಡುತ್ತಲೇ ಬದುಕು ಸವೆಸಿ, ಸೋತು, ಸುಣ್ಣವಾದ ಅದೆಷ್ಟೋ ಪರಿತಪಿಸೋ ಮನಸುಗಳು ಇಂದಿಗೂ ಇವೆ. ಅದೆಷ್ಟೋ ನಿರ್ದೇಶಕರ ದಿನವನ್ನು ಆಚರಿಸಿರುವ ಖುಷಿ ಇದೆಯಾದರೂ, ತಾವಿನ್ನೂ ನಿರ್ದೇಶಕರಾಗಿ ಗಟ್ಟಿ ಬೇರೂರಿಲ್ಲ ಎಂಬ ನೋವಲ್ಲೇ ಬದುಕು ಕಳೆಯುತ್ತಿರುವ ನಿರ್ದೇಶಕರಿದ್ದಾರೆ. ಇನ್ನು, ಅದೆಷ್ಟೋ ಸಹಾಯಕ, ಸಹ ನಿರ್ದೇಶಕರ ಬದುಕು ಇದಕ್ಕೆ ಹೊರತಲ್ಲ. ನಿರ್ದೇಶನ ಅನ್ನೋದು ಒಂದು ತಪಸ್ಸು. ಇಲ್ಲಿ ಕಥೆ ಕಟ್ಟುವುದಕ್ಕಿಂತ, ಮಾತಿನಲ್ಲಿ‌ ಜಾಣ್ಮೆ ತೋರಿದವನಿಗೇ ಕಾಲ. ಅಂತಹ‌ ಕೆಲ ನಿರ್ದೇಶಕರು ಸಿನಿಮಾ ಮಾಡಿರುವ ಉದಾಹರಣೆಯೂ ಇದೆ. ಹಾಗಂತ, ಅವರ್ಯಾರೂ ಭದ್ರ ನೆಲೆ ಕಂಡಿಲ್ಲ ಅನ್ನೋದು ಸತ್ಯ.

ಅವಮಾನಗೊಂಡವರೇ ಹೆಚ್ಚು

ನಿರ್ದೇಶಕನ ಪಟ್ಟ ಅಲಂಕರಿಸೋದು ‌ಅಂದರೆ ಸುಮ್ಮನೆ ಅಲ್ಲ. ವರ್ಷಗಟ್ಟಲೆ ಕಥೆ ಬರೆದು, ಅದಕ್ಕೊಂದು ರೂಪ ಕೊಡುವ ನಿರ್ದೇಶಕ, ಆ ಕಥೆಯನ್ನು ಸಿನಿಮಾ ಆಗಿಸಬೇಕೆಂದು ನಿರ್ಮಾಪಕನಿಗೆ ನಡೆಸುವ ಹುಡುಕಾಟ ಅವನಿಗೇ ಗೊತ್ತು. ಅವಮಾನ, ನೋವು, ಹತಾಶೆ, ನಿರಾಸೆ, ಅಸಹಾಯಕತೆ ಇವೆಲ್ಲದರ ನಡುವೆ ತನ್ನ ಕಥೆ ಸಿನಿಮಾ ಆಗಬೇಕು ಅಂತ ಹಗಲಿರುಳು ಅಲೆದಾಡುವ ನಿರ್ದೇಶಕರಿಗೆ ಇಲ್ಲಿ ಲೆಕ್ಕವಿಲ್ಲ. ಸಿನಿಮಾನೇ ಪ್ರಾಣ ಅಂದುಕೊಂಡ ಅದೆಷ್ಟೋ ಮನಸುಗಳು ತನ್ನ ಹೆತ್ತವರು, ಜೊತೆಗಾದವರು, ಒಡಹುಟ್ಟಿದವರಿಂದ ಬೈಸಿಕೊಂಡ ಉದಾಹರಣೆಗಳು ಸಾಕಷ್ಟಿವೆ.

ವರ್ಷಗಟ್ಟಲೆ ನಾಲ್ಕು ಗೋಡೆ ನಡುವೆ ಕೂತು ತನಗನ್ನಿಸಿದ ಕಥೆ ಹೆಣೆದು, ಹೇಗೋ ಅನ್ನದಾತನನ್ನು ಹಿಡಿದು, ಕಥೆ ಹೇಳಿ, ಒಂದೇ ಒಂದು ಅವಕಾಶಕ್ಕಾಗಿ ಆತ ಹೇಳಿದ್ದಕ್ಕೆಲ್ಲ ತಲೆ ಅಲ್ಲಾಡಿಸಿ, ಹೇಳಿದ ಸಮಯಕ್ಕೆ ಮನೆ ಮುಂದೆ ನಿಂತು ಖಾಲಿ ಹೊಟ್ಟೆಯಲ್ಲಿದ್ದರೂ ಸರಿ, ತನಗೊಂದು ಸಿನಿಮಾ ಆಗಿಬಿಟ್ಟರೆ ಸಾಕು, ನಿರ್ದೇಶಕನಾಗಿ ಸಾಧಿಸಿ ತೋರಿಸ್ತೀನಿ ಅಂತಂದುಕೊಂಡ ನಿರ್ದೇಶಕ ಎಂಬ ತಪಸ್ವಿಯ ಕಥೆಗಳೇ ಇಲ್ಲಿ ರೋಚಕ.

ಈಗಾಗಲೇ ಇಲ್ಲಿ ನಿರ್ದೇಶಕನ ಕುರಿತು ಹಲವು ಸಿನಿಮಾಗಳು ಬಂದಿವೆ. ವರ್ಷಗಳ ತಪಸ್ಸು ಫಲಿಸಿದ ಖುಷಿಯಲ್ಲಿ ಹಲವು ನಿರ್ದೇಶಕರು ಇಲ್ಲಿದ್ದರೆ, ಇಂದಿಗೂ ದಶಕಗಳ ಕಾಲದಿಂದ ಕಥೆಗಳನ್ನು ಗೀಚುತ್ತಲೇ ತಾನೂ ನಿರ್ದೇಶಕ ಆಗಬೇಕು ಅಂತ ಅದೆಷ್ಟೋ ಸಹಾಯಕ ನಿರ್ದೇಶಕರು ಹಂಬಲಿಸುತ್ತಿದ್ದಾರೆ.

ಷರತ್ತಿನ ಮಧ್ಯೆ ಬದುಕು

ವರ್ಷಗಟ್ಟಲೆ ಕಥೆ ಹೆಣೆದು, ಕಂಡ‌ ಕಂಡ ನಿರ್ಮಾಪಕರ ಹಿಂದಿಂದೆ ಅಲೆದಾಡಿ, ಅವಮಾನ, ಅಪಮಾನ ಸಹಿಸಿಕೊಂಡು ನಿರ್ದೇಶಕನ ಟೋಪಿ ಹಾಕಿಕೊಂಡರೂ ಆ ನಿರ್ದೇಶಕನ ಮುಂದೆ ರಾಶಿ ರಾಶಿ ಸವಾಲು. ವರ್ಷಗಳ ತಪ್ಪಸ್ಸಿನ ಮೂಲಕ ಕಷ್ಟಪಟ್ಟು ನಿರ್ದೇಶಕನಾದರೂ ಕಷ್ಟ ತಪ್ಪಿದ್ದಲ್ಲ. ಆಗ ಇನ್ನೊಂದು ಸರ್ಕಸ್ ಶುರುವಾಗುತ್ತೆ. ಹೀರೋಗೆ ಕಥೆ ಹೇಳಿ ಒಪ್ಪಿಸಬೇಕು, ನಿರ್ಮಾಪಕ ಕೊಡುವ ಬಜೆಟ್ ನಲ್ಲೇ ತನ್ನ ಕನಸಿಗೆ ಬಣ್ಣ ತುಂಬಬೇಕು, ಹಾಕಿದ ಹಣ ಹಿಂದಿರುಗಿಸಬೇಕೆಂಬ ಷರತ್ತಿನ ಭಯದ ನಡುವೆ, ಹೀರೋ ಬದಲಿಸುವ ಕಥೆ, ದೃಶ್ಯಗಳಿಗೂ ತಲೆದೂಗಬೇಕು, ಇವಿಷ್ಟೇ ಅಲ್ಲ, ಇಂತಹ ನೂರಾರು ಸವಾಲುಗಳ ಮಧ್ಯೆ, ತಾನು ಯಶಸ್ವೀ ನಿರ್ದೇಶಕ ಅಂತ ನಿರೂಪಿಸಬೇಕೆಂಬ ಸವಾಲೂ ಇರುತ್ತೆ. ಸಿಕ್ಕ ಅವಕಾಶವನ್ನು ಬಳಸಿಕೊಂಡು ಗಟ್ಟಿ ನೆಲೆ ಕಾಣಬೇಕೆಂಬುದರ ಜೊತೆ, ತನ್ನ ನಂಬಿದವರ ನಂಬಿಕೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಿರ್ದೇಶಕನಿಗಿರುತ್ತೆ.

ಸೋತರೆ ಬದುಕು ಅತಂತ್ರ

ಇಷ್ಟೆಲ್ಲಾ ಅಡೆತಡೆಗಳ ನಡುವೆ, ಏರು-ಪೇರುಗಳ ಜೊತೆ ಬದುಕು ದೂಡುತ್ತಿರುವ ನಿರ್ದೇಶಕ ಹೀರೋಗಳಿಗೆ ಕಥೆ ಬರೀತಾನೆ, ಅವರ ಅಭಿಮಾನಿಗಳನ್ನು ಖುಷಿಪಡಿಸ್ತಾನೆ. ಸಿನಿ ಪ್ರೇಮಿಗಳನ್ನು ರಂಜಿಸುತ್ತಾನೆ. ಆದರೆ, ಇಷ್ಟೆಲ್ಲಾ ಮಾಡುವ ನಿರ್ದೇಶಕನ ಬದುಕು ಮಾತ್ರ ಖುಷಿಯಲ್ಲಿಲ್ಲ. ಕಥೆಗೆ ಕಲ್ಪನೆಯ ರೆಕ್ಕೆ ಕಟ್ಟುವ, ಪಾತ್ರಗಳಿಗೆ ಬಣ್ಣ ತುಂಬುವ ನಿರ್ದೇಶಕನ ಬೆವರಿನ ವಾಸನೆ ಮಾತ್ರ ಅವನಿಗಲ್ಲದೆ ಬೇರಾರಿಗೂ ಸೂಸಲ್ಲ. ಇಷ್ಟೆಲ್ಲಾ ಬಡಿದಾಡುವ ನಿರ್ದೇಶಕನಿಗೆ ಸಿನಿಮಾನೇ ಎಲ್ಲಾ. ಇಲ್ಲಿ ಗೆದ್ದರಷ್ಟೇ ಬೆಲೆ! ಸೋತರಂತೂ ಮತ್ತೆ ಬದುಕು ಮೂರಾಬಟ್ಟೆ !!

ಅದರಲ್ಲೂ ಈಗ ಪರಿಸ್ಥಿಯೇ ಬೇರೆ. ಮೊದಲಂತೆ ಈಗ ಚಿತ್ರರಂಗ ಇಲ್ಲ, ಇನ್ನಷ್ಟು ಕಠಿಣ ಬದುಕು ಸವೆಸುವಂತಾಗಿದೆ. ಇಂತಹ ಹೊತ್ತಲ್ಲಿ ಅವರಿಗೊಂದು ಗುಡ್ ಲಕ್. ಮುಂದೆಯೂ ಹಾದಿ ಇರುತ್ತೆ. ಹಾದಿಯಲ್ಲಿರುವ ಕಲ್ಲು-ಮುಳ್ಳು ಸರಿಸಿ, ತಮ್ಮ ಕನಸು ನನಸು ಮಾಡಿಕೊಳ್ಳಬೇಕಿದೆ.
ನಿರ್ದೇಶಕರಾಗಿ ಅನುಭವ ಪಟ್ಟವರಿಗೆ, ನಿರ್ದೇಶಕಾರಗಲು ಹೆಣಗಾಡುತ್ತಿರುವವರಿಗೆ ಮತ್ತೊಮ್ಮೆ ನಿರ್ದೇಶಕರ ದಿನದ ಶುಭಾಶಯಗಳು.

Categories
ಸಿನಿ ಸುದ್ದಿ

ಮತ್ತೊಬ್ಬ ಯುವ ನಿರ್ದೇಶಕನ ಜೀವ ತೆಗೆದ ಕೊರೊನೊ

ಕೊರೊನಾ ಎಂಬ ಹೆಮ್ಮಾರಿ ಈಗಾಗಲೇ ಹಲವರ ಜೀವ ತೆಗೆದಿದೆ. ಅದರಲ್ಲೂ ದಿನ ಕಳೆದಂತೆ ಸಿನಿಮಾ ರಂಗದ ಅನೇಕರು ಕೊರೊನಾಗೆ ಬಲಿಯಾಗುತ್ತಲೇ ಇದ್ದಾರೆ. ಇತ್ತೀಚೆಗಷ್ಟೇ ನಿರ್ಮಾಪಕರಾದ ‌ರಾಮು, ಚಂದ್ರಶೇಖರ್ ನಿಧನರಾಗಿದ್ದರು. ಈಗ ಯುವ ನಿರ್ದೇಶಕರೊಬ್ಬರು ಕೊರೊನಾದಿಂದ ಮೃತಪಟ್ಟಿದ್ದಾರೆ.


ನವೀನ್ (36) ಮೃತಪಟ್ಟವರು.
ಭಾನುವಾರ ಕೊರೊನಾ ಸೋಂಕಿನಿಂದಾಗಿ ನಿಧನರಾಗಿದ್ದಾರೆ.
ಮೂಲತಃ ಮಂಡ್ಯ ಜಿಲ್ಲೆಯವರಾದ ನವೀನ್ ಅವರ ಮೃತದೇಹವನ್ನು ಕೋವಿಡ್ ನಿಯಮಾನುಸಾರ ಅಂತ್ಯಕ್ರಿಯೆ ನಡೆಸಲಾಗಿದೆ.

ನವೀನ್ ಅವರು ಈ ಹಿಂದೆ ‘ಒನ್‌ ಡೇ’ ಸಿನಿಮಾ ನಿರ್ದೇಶನ ಮಾಡಿದ್ದರು. ಹಲವು ಸಿನಿಮಾಗಳಿಗೆ ಸಹಾಯಕ ನಿರ್ದೇಶಕರಾಗಿಯೂ ನವೀನ್ ಕೆಲಸ ಮಾಡಿದ್ದರು.

Categories
ಸಿನಿ ಸುದ್ದಿ

ಜೂ. ಚಿರುಗೆ ಅಪ್ಪನ ಫೋಟೋ ಕಂಡರೆ ಪ್ರೀತಿ ಚಿರು ಇಲ್ಲದ ಮೇಘನಾರ ಮೊದಲ ಹುಟ್ಟು ಹಬ್ಬಕ್ಕೆ ಶುಭಕೋರಿದ ಫ್ಯಾನ್ಸ್

ನಟಿ ಮೇಘನಾ ರಾಜ್ ಅವರ ಹುಟ್ಟುಹಬ್ಬ (ಮೇ3) ಇಂದು. ಪ್ರತಿವರ್ಷ ಕೂಡ ಅವರು ತಮ್ಮ ಫ್ರೆಂಡ್ಸ್, ಕುಟುಂಬ ವರ್ಗ ಮತ್ತು ಪತಿ ಚಿರಂಜೀವಿ ಸರ್ಜಾ ಜೊತೆ ಸಂಭ್ರಮ ಹಂಚಿಕೊಳ್ಳುತ್ತಿದ್ದರು. ಆದರೆ, ಚಿರು ಇಲ್ಲದ ಮೊದಲ ಹುಟ್ಟುಹಬ್ಬವಿದು.


ಪತಿಯ ನೆನಪಿನ ಜೊತೆಗೆ ಮುದ್ದು ಮಗನ ಜೊತೆ ಮೊದಲ ಹುಟ್ಟುಹಬ್ಬ ಕೂಡ ಇದಾಗಿದೆ. ಮೇಘನಾ ಅವರು ತಮ್ಮ ಹುಟ್ಟುಹಬ್ಬಕ್ಕೂ ಒಂದು ದಿನ ಮುನ್ನವೇ ಚಿರಂಜೀವಿ ಜೊತೆ ವಿವಾಹವಾಗಿದ್ದಾರೆ. ಮೇ 3 ಮೇಘನಾ ಅವರ ಹುಟ್ಟುಹಬ್ಬ. ಮೇ 2 ಮೇಘನಾ ಮತ್ತು ಚಿರಂಜೀವಿ ಮದುವೆಯಾದ ದಿನ.
ಮೇಘನಾ ಅವರ ಹುಟ್ಟುಹಬ್ಬಕ್ಕೆ ಸ್ನೇಹಿತರು, ಅಭಿಮಾನಿಗಳು ಸೋಶಿಯಲ್ ಮೀಡಿಯಾ ಮೂಲಕ ಶುಭ ಕೋರಿದ್ದಾರೆ.


ಮೇಘನಾ ಅವರು ಮದುವೆ ವಾರ್ಷಿಕೋತ್ಸವದ ದಿನ ಜೂ.ಚಿರು ವಿಡಿಯೋವನ್ನು ಸಹ ಹಂಚಿಕೊಂಡಿದ್ದಾರೆ.
ಚಿರು ಫೋಟೋ ಮುಂದೆ ಜೂ.ಚಿರು ಆಟವಾಡುತ್ತಿರುವ ವಿಡಿಯೋ ಹಾಕಿದ್ದು, ಸಾಕಷ್ಟು ಜನ ಆ ವಿಡಿಯೋಗೆ ಮೆಚ್ಚುಗೆ ವ್ಯಕ್ತಪಡಿಸಿ ಕಾಮೆಂಟ್ ಮಾಡಿದ್ದಾರೆ.

ನಟ ಚಿರಂಜೀವಿ ಸರ್ಜಾ ಇಲ್ಲದೆ ಮೇಘನಾರಾಜ್ ತನ್ನ ಮಗ ಜೂ. ಚಿರು ಜೊತೆ ಸಮಯ ಕಳೆಯುವ ಫೋಟೋಗಳನ್ನು ಆಗಾಗ ಸೋಷಿಯಲ್ ಮೀಡಿಯಾದಲ್ಲಿ ಹೆಚ್ಚು ಸದ್ದು ಮಾಡುತ್ತಿವೆ.

ಮೇಘನಾ ಅವರಿಗೆ ಚಿರಂಜೀವಿ ಅಗಲಿಕೆಯ ನೋವಿದ್ದರೂ ಅವರ ನೋವನ್ನು ಕೊಂಚ ಕಡಿಮೆಯಾಗಿಸಿದ್ದು ಜೂನಿಯರ್‌ ಚಿರು. ಹೌದು, ಮಗನೊಂದಿಗೆ ಸಮಯ ಕಳೆಯುವ ಸಂತಸದ ಫೋಟೋ, ವೀಡಿಯೋಗಳನ್ನು ಸಾಮಾಜಿಕ ಜಾಲತಾಣದಲ್ಲಿ ಅಪ್ಲೋಡ್ ಮಾಡುತ್ತ, ತನ್ನ ಖುಷಿಯನ್ನು ವ್ಯಕ್ತಪಡಿಸುತ್ತಿರುತ್ತಾರೆ ನಟಿ ಮೇಘನಾರಾಜ್.

ಸದ್ಯ ಜೂ. ಚಿರು ಅಪ್ಪನ ಫೋಟೋ ಎದುರು ನೋಡುತ್ತಾ, ಫೋಟೋ ನೋಡಿ ಮುಗುಳ್ನಗುವ ಫೋಟೋ ಸೋಷಿಯಲ್ ಮೀಡಿಯಾದಲ್ಲಿ ವೈರಲ್ ಆಗ್ತಿದೆ. ಅಪ್ಪನ ಫೋಟೋ ಜೊತೆ ಆಟವಾಡುವ ಮುದ್ದಾದ ಕ್ಷಣಗಳಿಗೆ ಸ್ಯಾಂಡಲ್ ವುಡ್ ನ ಹಲವು ನಟ, ನಟಿಯರು ಕಾಮೆಂಟ್ಸ್ ಗಳ ಸುರಿಮಳೆಯನ್ನೇ ಸುರಿಸುತ್ತಿದ್ದಾರೆ.

Categories
ಸಿನಿ ಸುದ್ದಿ

ಪ್ರತಿಷ್ಠಿತ ಕಾನ್​​ ಚಿತ್ರೋತ್ಸವಕ್ಕೆ ದೇವರ ಕನಸು! ಸೈಕಲ್ ಹುಡುಗನೊಬ್ಬನ ಗೆಲುವಿನ ಸವಾರಿ ಕಥೆ…

ಮಿಲೇನಿಯಮ್ ಪ್ರೊಡಕ್ಷನ್ಸ್ ಬ್ಯಾನರ್​ನಲ್ಲಿ ನಿರ್ದೇಶಕ ಸುರೇಶ್ ಲಕ್ಕೂರ್ ನಿರ್ದೇಶನದಲ್ಲಿ ತಯಾರಾದ “ದೇವರ ಕನಸು” ಸಿನಿಮಾ ಇದೀಗ ಪ್ರತಿಷ್ಠಿತ ಕಾನ್ ಸಿನಿಮೋತ್ಸವಕ್ಕೆ ಆಯ್ಕೆಯಾಗಿದೆ.
ಸಾಮಾಜಿಕ ಸಂದೇಶ ಸಾರುವ ಈ ಸಿನಿಮಾದಲ್ಲಿ 12 ವರ್ಷದ ಬಾಲಕನ ಸೈಕಲ್ ಪಡೆದುಕೊಳ್ಳುವ ಕನಸಿನ ಸುತ್ತ ನಿರ್ದೇಶಕರು ಕಥೆ ಹೆಣೆದಿದ್ದಾರೆ. ಸ್ವಂತ ಸೈಕಲ್ ಖರೀದಿಸಿ ಊರ ಸೈಕಲ್ ರೇಸ್​ನಲ್ಲಿ ಗೆಲುವು ಸಾಧಿಸುವುದು ಆತನ ಮುಖ್ಯ ಉದ್ದೇಶ. ಅದನ್ನು ಈಡೇರಿಸಿಕೊಳ್ಳಲು ಬಾಲಕ ಏನೆಲ್ಲ ಹರಸಾಹಸ ಮಾಡುತ್ತಾನೆ ಎಂಬುದೇ “ದೇವರ ಕನಸು” ಚಿತ್ರದ ಕಥೆ.


2019ರಲ್ಲಿಯೇ ಶೂಟಿಂಗ್ ಆರಂಭಿಸಿದ್ದ ಈ ಸಿನಿಮಾ, ಒಟ್ಟು 29 ದಿನಗಳಲ್ಲಿ ಸಂಪೂರ್ಣ ಶೂಟಿಂಗ್ ಮುಗಿಸಿಕೊಂಡು, ಇದೀಗ ಅಂತಾರಾಷ್ಟ್ರೀಯ ಸಿನಿಮೋತ್ಸವಗಳಿಗೆ ಕಾಲಿಡುತ್ತಿದೆ. ಮೊದಲ ಹೆಜ್ಜೆಯಾಗಿ ಪ್ರತಿಷ್ಠಿತ ಕಾನ್ ಚಿತ್ರೋತ್ಸವದ ಅವಕಾಶ ಸಿಕ್ಕಿದ್ದು, ಇನ್ನೇನು ಮೇ ಅಂತ್ಯದಲ್ಲಿ ಚಿತ್ರ ಪ್ರದರ್ಶನವಾಗಲಿದೆ. ಇದರ ಜತೆಗೆ ಬೇರೆ ಬೇರೆ ಸಿನಿಮೋತ್ಸವಗಳಿಂದಲೂ ಆಹ್ವಾನ ಬರುತ್ತಿದೆ.
ಇನ್ನು ಈ ಸಿನಿಮಾದ ಮತ್ತೊಂದು ವಿಶೇಷ ಏನೆಂದರೆ, “ದೇವರ ಕನಸು” ಚಿತ್ರಕ್ಕೆ ಪ್ಯಾನ್ ಇಂಡಿಯಾ ತಂತ್ರಜ್ಞರು ಕೆಲಸ ಮಾಡಿದ್ದಾರೆ.

ರತ್ನಜಿತ್ ರಾಯ್ ಛಾಯಾಗ್ರಹಣ, ಅನಿರ್ಬನ್ ಗಂಗೂಲಿ ಸೌಂಡ್ ಡಿಸೈನಿಂಗ್, ಜಿಸ್ನು ಸೇನ್ ಸಮಕಲನ ಮಾಡಿದ್ದಾರೆ. ಇವರೆಲ್ಲ ಮೂಲತಃ ಪಶ್ಚಿಮ ಬಂಗಾಳದವರು. ಅದೇ ರೀತಿ ಚೆನ್ನೈ ಮೂಲದ ನಿತ್ಯಾನಂದ ಸೌಂಡ್, ಸುಂದರ್ ಆರ್ ಅವರು ಸಂಗೀತ ನೀಡಿದ್ದಾರೆ. ಕೇರಳ ಮೂಲದ ಜಿಷಾ ಮ್ಯಾಥ್ಯು ವಸ್ತ್ರ ವಿನ್ಯಾಸ ಮಾಡಿದ್ದು, ಮನೋಜ್ ಅಂಗಮಾಲಿ ಮೇಕಪ್ ಕೆಲಸ ನಿರ್ವಹಿಸಿದ್ದಾರೆ.

ಕರ್ನಾಟಕದ ಲಿಂಗರಾಜ್ ಇತಿಹಾಸ್ ಸಂಭಾಷಣೆ ಮತ್ತು ಸಾಹಿತ್ಯ ಬರೆದರೆ, ಚನ್ನಬಸವ ಪ್ರೊಡಕ್ಷನ್ ಡಿಸೈನರ್ ಆಗಿ ಕೆಲಸ ಮಾಡಿದ್ದಾರೆ. ಈ ಸಿನಿಮಾಕ್ಕೆ ಸುನೀಲ್ ರಾಮ್ ಕಥೆ ಬರೆದಿದ್ದಾರೆ.
ನಿರ್ದೇಶಕ ಸುರೇಶ್ ಲಕ್ಕೂರ್ ನ್ಯೂಯಾರ್ಕ್​ ಸಿನಿಮಾ ಅಕಾಡೆಮಿಯಲ್ಲಿ ತರಬೇತಿ ಪಡೆದಿದ್ದು, “ದೇವರ ಕನಸು” ಅವರ ಮೊದಲ ಚಿತ್ರ.
ಇದು ಚಿಂತಾಮಣಿ ಬಳಿಯ ಹಿರೇಪಳ್ಳಿ. ಕನಂಪಲ್ಲಿ, ಕೈವಾರ ಸುತ್ತಮುತ್ತ ಚಿತ್ರೀಕರಣವಾಗಿದೆ.

ಚಿತ್ರದಲ್ಲಿ ದೀಪಕ್, ಅಮೂಲ್ಯ, ಯುವರಾಜ್ ಕಿಣಿ, ಆರುಷಿ ವೇದಿಕಾ, ಮಣಿ, ರೂಪಾ, ವಿಜಯ್ ರಾಕೇಶ್ ನಟಿಸಿದ್ದಾರೆ. ಸಿ. ಜಯಕುಮಾರ್, ಸಿ ಶೇಖರ್ ನಿರ್ಮಾಪಕರು. ಗಂಗಾಧರ್, ಶಂಕರ್, ಸಿ ಸುಬ್ಬಯ್ಯ ಸಹ ನಿರ್ಮಾಣವಿದೆ.

Categories
ಸಿನಿ ಸುದ್ದಿ

ವೈದ್ಯರಿಗೊಂದು ಪೂಜ್ಯ ಗೀತೆ ; ಪ್ರೇಮಂ ಪೂಜ್ಯಂ ತಂಡ ಅರ್ಪಿಸಿದ ಹಾಡಿಗೆ ಭರಪೂರ ಮೆಚ್ಚುಗೆ – ವಾಸ್ತವತೆಗೆ ಹತ್ತಿರವಾದ ಹಾಡು

ನಟ ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ “ಪ್ರೇಮಂ ಪೂಜ್ಯಂ” ಚಿತ್ರ ಇನ್ನೇನು ಬಿಡುಗಡೆಗೆ ಸಜ್ಜಾಗಿದೆ. ಬಿಡುಗಡೆ ಮುನ್ನವೇ ಸಾಕಷ್ಟು ಸುದ್ದಿ ಮಾಡಿರುವ ಈ ಚಿತ್ರ ಅಷ್ಟೇ ನಿರೀಕ್ಷೆ ಹೆಚ್ಚಿಸಿದೆ. ಇತ್ತೀಚೆಗಷ್ಟೇ ಚಿತ್ರದ ಟೈಟಲ್ ಲಿರಿಕಲ್ ಸಾಂಗ್ ವಿಡಿಯೋ ಬಿಡುಗಡೆಯಾಗಿತ್ತು. ಎಲ್ಲೆಡೆಯಿಂದ ಭರ್ಜರಿ ಮೆಚ್ಚುಗೆ ಪಡೆದಿತ್ತು. ಈಗ ಚಿತ್ರತಂಡ ಮತ್ತೊಂದು ಲಿರಿಕಲ್ ಸಾಂಗ್ ವಿಡಿಯೋ ಬಿಡುಗಡೆ ಮಾಡಿದೆ. ಈ ಬಾರಿ ರಿಲೀಸ್ ಮಾಡಿರುವ ಹಾಡು ತುಂಬಾನೇ ಸ್ಪೆಷಲ್ ಆಗಿದೆ. ಅದರಲ್ಲೂ ಈಗಿನ ವಾಸ್ತವಕ್ಕೆ ಹತ್ತಿರವಾಗಿದೆ.
ಹೌದು, “ಪ್ರೇಮಂ ಪೂಜ್ಯಂ” ಪ್ರೇಮ್ ಅವರ 25ನೇ ಸಿನಿಮಾ ಅನ್ನೋದು ವಿಶೇಷ. ಈಗಾಗಲೇ ಸಾಕಷ್ಟು ಕುತೂಹಲ ಕೆರಳಿಸಿದೆ ಕೂಡ. ಚಿತ್ರದ‌ ಟೈಟಲ್ಲೇ ಹೇಳುತ್ತೆ ಇದೊಂದು ಪಕ್ಕಾ ಇಂಟ್ರೆಸ್ಟಿಂಗ್‌ ಲವ್‌ಸ್ಟೋರಿ ಅಂತ.

ಆರಂಭದಿಂದಲೂ ಪೋಸ್ಟರ್ ಮೂಲಕವೇ ಸದ್ದು ಮಾಡಿದ್ದ “ಪ್ರೇಮಂ ಪೂಜ್ಯಂ”, ಈಗ ಮತ್ತೊಂದು ಸುದ್ದಿಗೂ ಕಾರಣವಾಗಿದೆ. ಈ ಹಿಂದೆ
ಯುಗಾದಿಗೆ ಚಿತ್ರದ ಟೈಟಲ್‌ ಸಾಂಗ್‌ ಲಿರಿಕಲ್‌ ಸಾಂಗ್ ವಿಡಿಯೊ ಬಿಡುಗಡೆಯಾಗಿತ್ತು. ಅದು ಬಿಡುಗಡೆಯಾದ ಕ್ಷಣದಲ್ಲೇ ಲಕ್ಷಾಂತರ ವೀಕ್ಷಣೆ ಪಡೆದಿತ್ತು. ಈಗ ವಿಶೇಷವಾಗಿ ವೈದ್ಯರಿಗಾಗಿಯೇ ಹಾಡನ್ನು ಅರ್ಪಿಸಲಾಗಿದೆ. ಅಷ್ಟೇ ಅಲ್ಲ, ಆ ಹಾಡು ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದೆ.

“ವೈದ್ಯೋ ನಾರಾಯಣ ಹರಿಹಿ.. ಎಂದು ಸಾಗುವ… ಸಾಗುವ ಲಿರಿಕಲ್‌ ಸಾಂಗ್ ವಿಡಿಯೋ ನಿಜಕ್ಕೂ ಒಳ್ಳೆಯ ಪ್ರಯತ್ನವಾಗಿ ಕಾಣುತ್ತದೆ. ” ನನ್ನ ಜೀವನ ನಿನಗೆ ಸಮರ್ಪಣ ಕೈ ಮುಗಿವೆನು ಈ ನಾರಾಯಣ” ಎಂಬ ಅರ್ಥಪೂರ್ಣವಾಗಿದೆ.

ಕೆಡಂಬದಿ ಕ್ರಿಯೇಷನ್ಸ್‌ನಲ್ಲಿ ಮೂಡಿ ಬಂದಿರುವ ಈ ಸಿನಿಮಾದಲ್ಲಿ ಲವ್ಲಿ ಸ್ಟಾರ್‌ ಪ್ರೇಮ್‌ಗೆ ಜೋಡಿಯಾಗಿ ಬೃಂದಾ ಆಚಾರ್ಯ ಕಾಣಿಸಿಕೊಂಡಿದ್ದಾರೆ.
ಡಾ.ರಾಘವೇಂದ್ರ ಬಿ.ಎಸ್.‌ ಅವರು ಈ ಸಿನಿಮಾದ ನಿರ್ದೇಶನ ಮಾತ್ರವಲ್ಲ, ಸಂಗೀತ ಸಂಯೋಜನೆ ಜೊತೆ ಸಾಹಿತ್ಯವನ್ನೂ ಬರೆದಿದ್ದಾರೆ.

ವಿಜಯ್ ಪ್ರಕಾಶ್ ಧ್ವನಿಯಲ್ಲಿ ಮೂಡಿ ಬಂದಿರುವ ವೈದ್ಯರಿಗೆ ಅರ್ಪಣೆ ಮಾಡಿರುವ ಈ ಸಾಂಗ್‌ ಎಲ್ಲರ ಮನದಲ್ಲಿ ಅಚ್ಚಳಿಯದೆ ಉಳಿಯುವಂತಿದೆ. ಸಾಹಿತ್ಯದ ಸಾಲುಗಳಲ್ಲಿ ವೈದ್ಯರ ಶ್ರಮದ ಸಾರವಿದೆ.
ರಾಗ ಸಂಯೋಜನೆ ಜೊತೆ ಸಾಹಿತ್ಯ ಕೂಡ ಅರ್ಥಪೂರ್ಣ. ಹಾಗಾಗಿಯೇ, ಇದು ಈಗಿನ‌ ವಾಸ್ತವತೆಗೆ ಹತ್ತಿರವಾಗಿರುವ ಗೀತೆ. ಇನ್ನು, ಈ ಚಿತ್ರದ ಪೋಸ್ಟರ್‌ ನೋಡಿದವರಿಗೆ ಪ್ರೇಮ್‌ ಮತ್ತಷ್ಟು ನ್ಯೂ ಲುಕ್‌ನಲ್ಲಿ ಆಕರ್ಷಿಸುತ್ತಾರೆ.

ಫ್ರೆಶ್‌ ಲೊಕೇಷನ್‌ ಜೊತೆ ಅಷ್ಟೇ ಕ್ಯೂಟ್‌ ಜೋಡಿ ಕಾಣಿಸಿಕೊಂಡಿರುವುದನ್ನು ನೋಡಿದರೆ, ಸಿನಿಮಾ ನೋಡುವ ಕಾತುರ ಹೆಚ್ಚದೇ ಇರದು. ಚಿತ್ರಕ್ಕೆ ನವೀನ್‌ ಕುಮಾರ್‌ ಕ್ಯಾಮೆರಾ ಹಿಡಿದರೆ, ಹರೀಶ್‌ ಕೊಮ್ಮೆ ಸಂಕಲನವಿದೆ. ಇಂತಹ ನಿರೀಕ್ಷೆಯ ಸಿನಿಮಾಗೆ ಡಾ.ರಕ್ಷಿತ್‌ ಕೆಡಂಬದಿ, ಡಾ.ರಾಜಕುಮಾರ್‌ ಜಾನಕಿರಾಮನ್‌, ಡಾ.ರಾಘವೇಂದ್ರ ಎಸ್‌, ಮನೋಜ್‌ ಕೃಷ್ಣನ್‌ ನಿರ್ಮಾಪಕರು.

ಅದೇನೆ ಇರಲಿ, ಪ್ರತಿಯೊಬ್ಬ ನಟನಿಗೂ ತನ್ನ ಮೊದಲ ಚಿತ್ರ ಹೇಗೆ ವಿಶೇಷ ಆಗುತ್ತೋ, ಹಾಗೆಯೇ ಅವರ ಪ್ರತಿಯೊಂದು ಸಿನಿಮಾ ಕೂಡ ವಿಶೇಷವೇ. ಅದರಲ್ಲೂ 25 ನೇ ಸಿನಿಮಾ ಅಂದಾಕ್ಷಣ, ಅದೊಂದು ಮೈಲಿಗಲ್ಲು ಎನಿಸುವುದು ಸಹಜ. ಅಂತಹ 25ನೇ ಹೊಸ್ತಿಲಲ್ಲಿ ಇರುವ ಪ್ರೇಮ್‌, 25ನೇ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.

error: Content is protected !!