ನಟ ಲವ್ಲಿ ಸ್ಟಾರ್ ಪ್ರೇಮ್ ಅಭಿನಯದ “ಪ್ರೇಮಂ ಪೂಜ್ಯಂ” ಚಿತ್ರ ಇನ್ನೇನು ಬಿಡುಗಡೆಗೆ ಸಜ್ಜಾಗಿದೆ. ಬಿಡುಗಡೆ ಮುನ್ನವೇ ಸಾಕಷ್ಟು ಸುದ್ದಿ ಮಾಡಿರುವ ಈ ಚಿತ್ರ ಅಷ್ಟೇ ನಿರೀಕ್ಷೆ ಹೆಚ್ಚಿಸಿದೆ. ಇತ್ತೀಚೆಗಷ್ಟೇ ಚಿತ್ರದ ಟೈಟಲ್ ಲಿರಿಕಲ್ ಸಾಂಗ್ ವಿಡಿಯೋ ಬಿಡುಗಡೆಯಾಗಿತ್ತು. ಎಲ್ಲೆಡೆಯಿಂದ ಭರ್ಜರಿ ಮೆಚ್ಚುಗೆ ಪಡೆದಿತ್ತು. ಈಗ ಚಿತ್ರತಂಡ ಮತ್ತೊಂದು ಲಿರಿಕಲ್ ಸಾಂಗ್ ವಿಡಿಯೋ ಬಿಡುಗಡೆ ಮಾಡಿದೆ. ಈ ಬಾರಿ ರಿಲೀಸ್ ಮಾಡಿರುವ ಹಾಡು ತುಂಬಾನೇ ಸ್ಪೆಷಲ್ ಆಗಿದೆ. ಅದರಲ್ಲೂ ಈಗಿನ ವಾಸ್ತವಕ್ಕೆ ಹತ್ತಿರವಾಗಿದೆ.
ಹೌದು, “ಪ್ರೇಮಂ ಪೂಜ್ಯಂ” ಪ್ರೇಮ್ ಅವರ 25ನೇ ಸಿನಿಮಾ ಅನ್ನೋದು ವಿಶೇಷ. ಈಗಾಗಲೇ ಸಾಕಷ್ಟು ಕುತೂಹಲ ಕೆರಳಿಸಿದೆ ಕೂಡ. ಚಿತ್ರದ ಟೈಟಲ್ಲೇ ಹೇಳುತ್ತೆ ಇದೊಂದು ಪಕ್ಕಾ ಇಂಟ್ರೆಸ್ಟಿಂಗ್ ಲವ್‌ಸ್ಟೋರಿ ಅಂತ.
ಆರಂಭದಿಂದಲೂ ಪೋಸ್ಟರ್ ಮೂಲಕವೇ ಸದ್ದು ಮಾಡಿದ್ದ “ಪ್ರೇಮಂ ಪೂಜ್ಯಂ”, ಈಗ ಮತ್ತೊಂದು ಸುದ್ದಿಗೂ ಕಾರಣವಾಗಿದೆ. ಈ ಹಿಂದೆ
ಯುಗಾದಿಗೆ ಚಿತ್ರದ ಟೈಟಲ್ ಸಾಂಗ್ ಲಿರಿಕಲ್ ಸಾಂಗ್ ವಿಡಿಯೊ ಬಿಡುಗಡೆಯಾಗಿತ್ತು. ಅದು ಬಿಡುಗಡೆಯಾದ ಕ್ಷಣದಲ್ಲೇ ಲಕ್ಷಾಂತರ ವೀಕ್ಷಣೆ ಪಡೆದಿತ್ತು. ಈಗ ವಿಶೇಷವಾಗಿ ವೈದ್ಯರಿಗಾಗಿಯೇ ಹಾಡನ್ನು ಅರ್ಪಿಸಲಾಗಿದೆ. ಅಷ್ಟೇ ಅಲ್ಲ, ಆ ಹಾಡು ಎಲ್ಲರ ಮೆಚ್ಚುಗೆಗೂ ಪಾತ್ರವಾಗಿದೆ.
“ವೈದ್ಯೋ ನಾರಾಯಣ ಹರಿಹಿ.. ಎಂದು ಸಾಗುವ… ಸಾಗುವ ಲಿರಿಕಲ್ ಸಾಂಗ್ ವಿಡಿಯೋ ನಿಜಕ್ಕೂ ಒಳ್ಳೆಯ ಪ್ರಯತ್ನವಾಗಿ ಕಾಣುತ್ತದೆ. ” ನನ್ನ ಜೀವನ ನಿನಗೆ ಸಮರ್ಪಣ ಕೈ ಮುಗಿವೆನು ಈ ನಾರಾಯಣ” ಎಂಬ ಅರ್ಥಪೂರ್ಣವಾಗಿದೆ.
ಕೆಡಂಬದಿ ಕ್ರಿಯೇಷನ್ಸ್‌ನಲ್ಲಿ ಮೂಡಿ ಬಂದಿರುವ ಈ ಸಿನಿಮಾದಲ್ಲಿ ಲವ್ಲಿ ಸ್ಟಾರ್ ಪ್ರೇಮ್‌ಗೆ ಜೋಡಿಯಾಗಿ ಬೃಂದಾ ಆಚಾರ್ಯ ಕಾಣಿಸಿಕೊಂಡಿದ್ದಾರೆ.
ಡಾ.ರಾಘವೇಂದ್ರ ಬಿ.ಎಸ್. ಅವರು ಈ ಸಿನಿಮಾದ ನಿರ್ದೇಶನ ಮಾತ್ರವಲ್ಲ, ಸಂಗೀತ ಸಂಯೋಜನೆ ಜೊತೆ ಸಾಹಿತ್ಯವನ್ನೂ ಬರೆದಿದ್ದಾರೆ.
ವಿಜಯ್ ಪ್ರಕಾಶ್ ಧ್ವನಿಯಲ್ಲಿ ಮೂಡಿ ಬಂದಿರುವ ವೈದ್ಯರಿಗೆ ಅರ್ಪಣೆ ಮಾಡಿರುವ ಈ ಸಾಂಗ್ ಎಲ್ಲರ ಮನದಲ್ಲಿ ಅಚ್ಚಳಿಯದೆ ಉಳಿಯುವಂತಿದೆ. ಸಾಹಿತ್ಯದ ಸಾಲುಗಳಲ್ಲಿ ವೈದ್ಯರ ಶ್ರಮದ ಸಾರವಿದೆ.
ರಾಗ ಸಂಯೋಜನೆ ಜೊತೆ ಸಾಹಿತ್ಯ ಕೂಡ ಅರ್ಥಪೂರ್ಣ. ಹಾಗಾಗಿಯೇ, ಇದು ಈಗಿನ ವಾಸ್ತವತೆಗೆ ಹತ್ತಿರವಾಗಿರುವ ಗೀತೆ. ಇನ್ನು, ಈ ಚಿತ್ರದ ಪೋಸ್ಟರ್ ನೋಡಿದವರಿಗೆ ಪ್ರೇಮ್ ಮತ್ತಷ್ಟು ನ್ಯೂ ಲುಕ್‌ನಲ್ಲಿ ಆಕರ್ಷಿಸುತ್ತಾರೆ.
ಫ್ರೆಶ್ ಲೊಕೇಷನ್ ಜೊತೆ ಅಷ್ಟೇ ಕ್ಯೂಟ್ ಜೋಡಿ ಕಾಣಿಸಿಕೊಂಡಿರುವುದನ್ನು ನೋಡಿದರೆ, ಸಿನಿಮಾ ನೋಡುವ ಕಾತುರ ಹೆಚ್ಚದೇ ಇರದು. ಚಿತ್ರಕ್ಕೆ ನವೀನ್ ಕುಮಾರ್ ಕ್ಯಾಮೆರಾ ಹಿಡಿದರೆ, ಹರೀಶ್ ಕೊಮ್ಮೆ ಸಂಕಲನವಿದೆ. ಇಂತಹ ನಿರೀಕ್ಷೆಯ ಸಿನಿಮಾಗೆ ಡಾ.ರಕ್ಷಿತ್ ಕೆಡಂಬದಿ, ಡಾ.ರಾಜಕುಮಾರ್ ಜಾನಕಿರಾಮನ್, ಡಾ.ರಾಘವೇಂದ್ರ ಎಸ್, ಮನೋಜ್ ಕೃಷ್ಣನ್ ನಿರ್ಮಾಪಕರು.
ಅದೇನೆ ಇರಲಿ, ಪ್ರತಿಯೊಬ್ಬ ನಟನಿಗೂ ತನ್ನ ಮೊದಲ ಚಿತ್ರ ಹೇಗೆ ವಿಶೇಷ ಆಗುತ್ತೋ, ಹಾಗೆಯೇ ಅವರ ಪ್ರತಿಯೊಂದು ಸಿನಿಮಾ ಕೂಡ ವಿಶೇಷವೇ. ಅದರಲ್ಲೂ 25 ನೇ ಸಿನಿಮಾ ಅಂದಾಕ್ಷಣ, ಅದೊಂದು ಮೈಲಿಗಲ್ಲು ಎನಿಸುವುದು ಸಹಜ. ಅಂತಹ 25ನೇ ಹೊಸ್ತಿಲಲ್ಲಿ ಇರುವ ಪ್ರೇಮ್, 25ನೇ ಚಿತ್ರದ ಮೇಲೆ ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ.