ನಿರ್ದೇಶಕ ಎಂಬ ತಪಸ್ವಿಗೆ ಶುಭಾಶಯ : ಡೈರೆಕ್ಟರ್ ಟೋಪಿ ಹಾಕುವ ಹಿಂದಿದೆ ಮನಕಲಕುವ ಕಥೆ-ವ್ಯಥೆ!!

ಮೇ.4 ನಿರ್ದೇಶಕರ ದಿನ. ಅದೆಷ್ಟೋ ಕಥೆಗಳ ಮೂಲಕ ಒಂದಷ್ಟು ಮನಸ್ಸುಗಳನ್ನು ರಂಜಿಸಿದ, ಕಾಡಿದ,‌ ಕನವರಿಸುವಂತೆ ಮಾಡಿದ, ದು:ಖ, ದುಮ್ಮಾನಗಳ ಜೊತೆಯಲ್ಲೇ ಬದುಕಿದ, ಬದುಕುತ್ತಿರುವ ನಿರ್ದೇಶಕನಿಗೆ ನಿರ್ದೇಶಕ ದಿನದ ಶುಭಾಶಯಗಳು.

ಸಿನಿಮಾ ಅಂದರೆ ಮೊದಲು‌ ನೆನಪಾಗೋದೆ ನಿರ್ದೇಶಕ. ಬಣ್ಣ ಬಣ್ಣದ ಕನಸು ಕಟ್ಟಿಕೊಂಡು ಬೆಳ್ಳಿ ಪರದೆ ಮೇಲೆ ಮೋಡಿ ಮಾಡುವ ಕನಸುಗಾರ.
(ಇಂದು) ಮೇ.4 ನಿರ್ದೇಶಕರ ದಿನ. ಅದೆಷ್ಟೋ ಕಥೆಗಳ ಮೂಲಕ ಒಂದಷ್ಟು ಮನಸ್ಸುಗಳನ್ನು ರಂಜಿಸಿದ, ಕಾಡಿದ,‌ ಕನವರಿಸುವಂತೆ ಮಾಡಿದ, ದು:ಖ, ದುಮ್ಮಾನಗಳ ಜೊತೆಯಲ್ಲೇ ಬದುಕಿದ, ಬದುಕುತ್ತಿರುವ ನಿರ್ದೇಶಕನಿಗೆ ನಿರ್ದೇಶಕ ದಿನದ ಶುಭಾಶಯಗಳು.

ಸಿನಿಮಾ ವಿಭಾಗದಲ್ಲಿ ನಿರ್ದೇಶಕನಿಗೆ ಇದ್ದಷ್ಟು ಸವಾಲು ಮತ್ತು ಭಯ ಬೇರೆ ಯಾವ ವಿಭಾಗದವರಿಗೂ ಇಲ್ಲ.
ಕಲ್ಪನೆಯ ಕಥೆ ಕಟ್ಟಿಕೊಂಡು ಅದಕ್ಕೆ ದೃಶ್ಯರೂಪ ಕೊಡುವ ಸಾಹಸವಿದೆಯಲ್ಲ ಅದರ ಹಿಂದಿನ‌ ಕಷ್ಟ ಆ ನಿರ್ದೇಶಕನಿಗೇ ಮಾತ್ರ ಗೊತ್ತು. ತನ್ನೆಲ್ಲಾ ಆಸೆ-ಆಕಾಂಕ್ಷೆಗಳನ್ನು ಬದಿಗೊತ್ತಿ, ಮನೆಯವರ ಜೊತೆ ಸಮಯ ಕಳೆಯದೇ ಮೂರು ಹೊತ್ತು ಸಿನಿಮಾ ಜಪ ಮಾಡುತ್ತಲೇ ಬದುಕು ಸವೆಸಿ, ಸೋತು, ಸುಣ್ಣವಾದ ಅದೆಷ್ಟೋ ಪರಿತಪಿಸೋ ಮನಸುಗಳು ಇಂದಿಗೂ ಇವೆ. ಅದೆಷ್ಟೋ ನಿರ್ದೇಶಕರ ದಿನವನ್ನು ಆಚರಿಸಿರುವ ಖುಷಿ ಇದೆಯಾದರೂ, ತಾವಿನ್ನೂ ನಿರ್ದೇಶಕರಾಗಿ ಗಟ್ಟಿ ಬೇರೂರಿಲ್ಲ ಎಂಬ ನೋವಲ್ಲೇ ಬದುಕು ಕಳೆಯುತ್ತಿರುವ ನಿರ್ದೇಶಕರಿದ್ದಾರೆ. ಇನ್ನು, ಅದೆಷ್ಟೋ ಸಹಾಯಕ, ಸಹ ನಿರ್ದೇಶಕರ ಬದುಕು ಇದಕ್ಕೆ ಹೊರತಲ್ಲ. ನಿರ್ದೇಶನ ಅನ್ನೋದು ಒಂದು ತಪಸ್ಸು. ಇಲ್ಲಿ ಕಥೆ ಕಟ್ಟುವುದಕ್ಕಿಂತ, ಮಾತಿನಲ್ಲಿ‌ ಜಾಣ್ಮೆ ತೋರಿದವನಿಗೇ ಕಾಲ. ಅಂತಹ‌ ಕೆಲ ನಿರ್ದೇಶಕರು ಸಿನಿಮಾ ಮಾಡಿರುವ ಉದಾಹರಣೆಯೂ ಇದೆ. ಹಾಗಂತ, ಅವರ್ಯಾರೂ ಭದ್ರ ನೆಲೆ ಕಂಡಿಲ್ಲ ಅನ್ನೋದು ಸತ್ಯ.

ಅವಮಾನಗೊಂಡವರೇ ಹೆಚ್ಚು

ನಿರ್ದೇಶಕನ ಪಟ್ಟ ಅಲಂಕರಿಸೋದು ‌ಅಂದರೆ ಸುಮ್ಮನೆ ಅಲ್ಲ. ವರ್ಷಗಟ್ಟಲೆ ಕಥೆ ಬರೆದು, ಅದಕ್ಕೊಂದು ರೂಪ ಕೊಡುವ ನಿರ್ದೇಶಕ, ಆ ಕಥೆಯನ್ನು ಸಿನಿಮಾ ಆಗಿಸಬೇಕೆಂದು ನಿರ್ಮಾಪಕನಿಗೆ ನಡೆಸುವ ಹುಡುಕಾಟ ಅವನಿಗೇ ಗೊತ್ತು. ಅವಮಾನ, ನೋವು, ಹತಾಶೆ, ನಿರಾಸೆ, ಅಸಹಾಯಕತೆ ಇವೆಲ್ಲದರ ನಡುವೆ ತನ್ನ ಕಥೆ ಸಿನಿಮಾ ಆಗಬೇಕು ಅಂತ ಹಗಲಿರುಳು ಅಲೆದಾಡುವ ನಿರ್ದೇಶಕರಿಗೆ ಇಲ್ಲಿ ಲೆಕ್ಕವಿಲ್ಲ. ಸಿನಿಮಾನೇ ಪ್ರಾಣ ಅಂದುಕೊಂಡ ಅದೆಷ್ಟೋ ಮನಸುಗಳು ತನ್ನ ಹೆತ್ತವರು, ಜೊತೆಗಾದವರು, ಒಡಹುಟ್ಟಿದವರಿಂದ ಬೈಸಿಕೊಂಡ ಉದಾಹರಣೆಗಳು ಸಾಕಷ್ಟಿವೆ.

ವರ್ಷಗಟ್ಟಲೆ ನಾಲ್ಕು ಗೋಡೆ ನಡುವೆ ಕೂತು ತನಗನ್ನಿಸಿದ ಕಥೆ ಹೆಣೆದು, ಹೇಗೋ ಅನ್ನದಾತನನ್ನು ಹಿಡಿದು, ಕಥೆ ಹೇಳಿ, ಒಂದೇ ಒಂದು ಅವಕಾಶಕ್ಕಾಗಿ ಆತ ಹೇಳಿದ್ದಕ್ಕೆಲ್ಲ ತಲೆ ಅಲ್ಲಾಡಿಸಿ, ಹೇಳಿದ ಸಮಯಕ್ಕೆ ಮನೆ ಮುಂದೆ ನಿಂತು ಖಾಲಿ ಹೊಟ್ಟೆಯಲ್ಲಿದ್ದರೂ ಸರಿ, ತನಗೊಂದು ಸಿನಿಮಾ ಆಗಿಬಿಟ್ಟರೆ ಸಾಕು, ನಿರ್ದೇಶಕನಾಗಿ ಸಾಧಿಸಿ ತೋರಿಸ್ತೀನಿ ಅಂತಂದುಕೊಂಡ ನಿರ್ದೇಶಕ ಎಂಬ ತಪಸ್ವಿಯ ಕಥೆಗಳೇ ಇಲ್ಲಿ ರೋಚಕ.

ಈಗಾಗಲೇ ಇಲ್ಲಿ ನಿರ್ದೇಶಕನ ಕುರಿತು ಹಲವು ಸಿನಿಮಾಗಳು ಬಂದಿವೆ. ವರ್ಷಗಳ ತಪಸ್ಸು ಫಲಿಸಿದ ಖುಷಿಯಲ್ಲಿ ಹಲವು ನಿರ್ದೇಶಕರು ಇಲ್ಲಿದ್ದರೆ, ಇಂದಿಗೂ ದಶಕಗಳ ಕಾಲದಿಂದ ಕಥೆಗಳನ್ನು ಗೀಚುತ್ತಲೇ ತಾನೂ ನಿರ್ದೇಶಕ ಆಗಬೇಕು ಅಂತ ಅದೆಷ್ಟೋ ಸಹಾಯಕ ನಿರ್ದೇಶಕರು ಹಂಬಲಿಸುತ್ತಿದ್ದಾರೆ.

ಷರತ್ತಿನ ಮಧ್ಯೆ ಬದುಕು

ವರ್ಷಗಟ್ಟಲೆ ಕಥೆ ಹೆಣೆದು, ಕಂಡ‌ ಕಂಡ ನಿರ್ಮಾಪಕರ ಹಿಂದಿಂದೆ ಅಲೆದಾಡಿ, ಅವಮಾನ, ಅಪಮಾನ ಸಹಿಸಿಕೊಂಡು ನಿರ್ದೇಶಕನ ಟೋಪಿ ಹಾಕಿಕೊಂಡರೂ ಆ ನಿರ್ದೇಶಕನ ಮುಂದೆ ರಾಶಿ ರಾಶಿ ಸವಾಲು. ವರ್ಷಗಳ ತಪ್ಪಸ್ಸಿನ ಮೂಲಕ ಕಷ್ಟಪಟ್ಟು ನಿರ್ದೇಶಕನಾದರೂ ಕಷ್ಟ ತಪ್ಪಿದ್ದಲ್ಲ. ಆಗ ಇನ್ನೊಂದು ಸರ್ಕಸ್ ಶುರುವಾಗುತ್ತೆ. ಹೀರೋಗೆ ಕಥೆ ಹೇಳಿ ಒಪ್ಪಿಸಬೇಕು, ನಿರ್ಮಾಪಕ ಕೊಡುವ ಬಜೆಟ್ ನಲ್ಲೇ ತನ್ನ ಕನಸಿಗೆ ಬಣ್ಣ ತುಂಬಬೇಕು, ಹಾಕಿದ ಹಣ ಹಿಂದಿರುಗಿಸಬೇಕೆಂಬ ಷರತ್ತಿನ ಭಯದ ನಡುವೆ, ಹೀರೋ ಬದಲಿಸುವ ಕಥೆ, ದೃಶ್ಯಗಳಿಗೂ ತಲೆದೂಗಬೇಕು, ಇವಿಷ್ಟೇ ಅಲ್ಲ, ಇಂತಹ ನೂರಾರು ಸವಾಲುಗಳ ಮಧ್ಯೆ, ತಾನು ಯಶಸ್ವೀ ನಿರ್ದೇಶಕ ಅಂತ ನಿರೂಪಿಸಬೇಕೆಂಬ ಸವಾಲೂ ಇರುತ್ತೆ. ಸಿಕ್ಕ ಅವಕಾಶವನ್ನು ಬಳಸಿಕೊಂಡು ಗಟ್ಟಿ ನೆಲೆ ಕಾಣಬೇಕೆಂಬುದರ ಜೊತೆ, ತನ್ನ ನಂಬಿದವರ ನಂಬಿಕೆಯನ್ನು ಉಳಿಸಿಕೊಳ್ಳುವ ಜವಾಬ್ದಾರಿ ನಿರ್ದೇಶಕನಿಗಿರುತ್ತೆ.

ಸೋತರೆ ಬದುಕು ಅತಂತ್ರ

ಇಷ್ಟೆಲ್ಲಾ ಅಡೆತಡೆಗಳ ನಡುವೆ, ಏರು-ಪೇರುಗಳ ಜೊತೆ ಬದುಕು ದೂಡುತ್ತಿರುವ ನಿರ್ದೇಶಕ ಹೀರೋಗಳಿಗೆ ಕಥೆ ಬರೀತಾನೆ, ಅವರ ಅಭಿಮಾನಿಗಳನ್ನು ಖುಷಿಪಡಿಸ್ತಾನೆ. ಸಿನಿ ಪ್ರೇಮಿಗಳನ್ನು ರಂಜಿಸುತ್ತಾನೆ. ಆದರೆ, ಇಷ್ಟೆಲ್ಲಾ ಮಾಡುವ ನಿರ್ದೇಶಕನ ಬದುಕು ಮಾತ್ರ ಖುಷಿಯಲ್ಲಿಲ್ಲ. ಕಥೆಗೆ ಕಲ್ಪನೆಯ ರೆಕ್ಕೆ ಕಟ್ಟುವ, ಪಾತ್ರಗಳಿಗೆ ಬಣ್ಣ ತುಂಬುವ ನಿರ್ದೇಶಕನ ಬೆವರಿನ ವಾಸನೆ ಮಾತ್ರ ಅವನಿಗಲ್ಲದೆ ಬೇರಾರಿಗೂ ಸೂಸಲ್ಲ. ಇಷ್ಟೆಲ್ಲಾ ಬಡಿದಾಡುವ ನಿರ್ದೇಶಕನಿಗೆ ಸಿನಿಮಾನೇ ಎಲ್ಲಾ. ಇಲ್ಲಿ ಗೆದ್ದರಷ್ಟೇ ಬೆಲೆ! ಸೋತರಂತೂ ಮತ್ತೆ ಬದುಕು ಮೂರಾಬಟ್ಟೆ !!

ಅದರಲ್ಲೂ ಈಗ ಪರಿಸ್ಥಿಯೇ ಬೇರೆ. ಮೊದಲಂತೆ ಈಗ ಚಿತ್ರರಂಗ ಇಲ್ಲ, ಇನ್ನಷ್ಟು ಕಠಿಣ ಬದುಕು ಸವೆಸುವಂತಾಗಿದೆ. ಇಂತಹ ಹೊತ್ತಲ್ಲಿ ಅವರಿಗೊಂದು ಗುಡ್ ಲಕ್. ಮುಂದೆಯೂ ಹಾದಿ ಇರುತ್ತೆ. ಹಾದಿಯಲ್ಲಿರುವ ಕಲ್ಲು-ಮುಳ್ಳು ಸರಿಸಿ, ತಮ್ಮ ಕನಸು ನನಸು ಮಾಡಿಕೊಳ್ಳಬೇಕಿದೆ.
ನಿರ್ದೇಶಕರಾಗಿ ಅನುಭವ ಪಟ್ಟವರಿಗೆ, ನಿರ್ದೇಶಕಾರಗಲು ಹೆಣಗಾಡುತ್ತಿರುವವರಿಗೆ ಮತ್ತೊಮ್ಮೆ ನಿರ್ದೇಶಕರ ದಿನದ ಶುಭಾಶಯಗಳು.

Related Posts

error: Content is protected !!