Categories
ಸಿನಿ ಸುದ್ದಿ

ನ್ಯೂಯಾರ್ಕ್ – ಪ್ಯಾರಿಸ್ ಅಂತಾರಾಷ್ಟ್ರೀಯ ಚಲನಚಿತ್ರೋತ್ಸವಗಳ ಪ್ರಶಸ್ತಿಯತ್ತ “ಕಾಲಚಕ್ರ” ದಾಪುಗಾಲು!

ಪಶ್ಚಿಮ ಬಂಗಾಳದ ಟ್ಯಾಗೂರ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಕಾಲಚಕ್ರಕ್ಕೆ ಜ್ಯೂರಿ ಪ್ರಶಸ್ತಿ

ನಟ ವಸಿಷ್ಠ ಸಿಂಹ ನಾಯಕರಾಗಿ ಅಭಿನಯಿಸಿರುವ ‘ಕಾಲಚಕ್ರ’ ಚಿತ್ರ ಈಗ ಬಿಡುಗಡೆಗೆ ಸಜ್ಜಾಗಿದೆ. ತೆರಡಗೆ ಬರುವ ಮೊದಲೇ
ಪಶ್ಚಿಮ ಬಂಗಾಳದ ಟ್ಯಾಗೂರ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಂಡು, ತೀರ್ಪುಗಾರರ ಮೆಚ್ಚುಗೆಗೆ ಪಾತ್ರವಾಗಿದೆ.

ನ್ಯೂಯಾರ್ಕ್, ಪ್ಯಾರಿಸ್ ಅಂತಾರಾಷ್ಟ್ರೀಯ ಚಿತ್ರೋತ್ಸವಗಳಲ್ಲೂ ಈ ಚಿತ್ರ ಆಯ್ಕೆಯಾಗಿದ್ದು, ಸದ್ಯದಲ್ಲೇ ಪ್ರದರ್ಶನವಾಗಲಿದೆ.
ನ್ಯೂಯಾರ್ಕ್ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪ್ರದರ್ಶನಗೊಳ್ಳಲು ಸುಮಾರು 3500 ಸಾವಿರಕ್ಕೂ ಅಧಿಕ ಚಿತ್ರಗಳು ಬಂದಿದ್ದವು . ಆ ಪೈಕಿ100 ಚಿತ್ರಗಳು ಮಾತ್ರವೇ ಆಯ್ಕೆಯಾಗಿದ್ದು, ಅದರಲ್ಲಿ ಕನ್ನಡದ “ಕಾಲಚಕ್ರ” ಚಿತ್ರ ಸಹ ಸೇರಿದೆ ಎಂದು ಹೇಳಿಕೊಂಡಿರುವ ನಿರ್ದೇಶಕ ಸುಮಂತ್ ಕ್ರಾಂತಿ, ನಮ್ಮ ಚಿತ್ರಕ್ಕೆ ಪ್ರಶಸ್ತಿ ದೊರಕುವ ಭರವಸೆ ಇದೆ ಅನ್ನುತ್ತಾರೆ.

ಸುಮಾರು 25ಕ್ಕೂ ಹೆಚ್ಚು ದೇಶಗಳ ಚಿತ್ರೋತ್ಸವಗಳಿಗೆ “ಕಾಲಚಕ್ರ” ಚಿತ್ರವನ್ನು ಕಳುಹಿಸುವ ಯೋಜನೆ ಕೂಡ ಅವರಿಗಿದೆ.
ಇತ್ತೀಚೆಗೆ ಈ ಚಿತ್ರದ ರಿಮೇಕ್ ಹಕ್ಕು ಮಲಯಾಳಂ ಭಾಷೆಗೆ ಮಾರಾಟವಾಗಿದ್ದು,
ಅಲ್ಲಿನ ಖ್ಯಾತ ನಿರ್ಮಾಪಕರೊಬ್ಬರು ‘ಕಾಲಚಕ್ರ’ವನ್ನು ಮಲಯಾಳಂ ನಲ್ಲಿ ನಿರ್ಮಾಣ ಮಾಡಲು ಮುಂದಾಗಿದ್ದಾರೆ.

ವಸಿಷ್ಠ ಸಿಂಹ ನಾಲ್ಕು ವಿಭಿನ್ನ ಪಾತ್ರಗಳಲ್ಲಿ ಅಭಿನಯಿಸಿರುವ ಈ ಚಿತ್ರದ ಟೀಸರ್ ಹಾಗೂ ಹಾಡುಗಳಿಗೆ ಉತ್ತಮ ಪ್ರತಿಕ್ರಿಯೆ ವ್ಯಕ್ತವಾಗಿದೆ.
ರಶ್ಮಿ ಫಿಲಂಸ್ ಲಾಂಛನದಲ್ಲಿ ನಿರ್ದೇಶಕ ಸುಮಂತ್ ಕ್ರಾಂತಿ ಅವರೇ ನಿರ್ಮಾಣವನ್ನು ಮಾಡಿದ್ದಾರೆ.
ಗುರುಕಿರಣ್ ಸಂಗೀತ ನೀಡಿರುವ ಈ ಚಿತ್ರದ ಹಾಡುಗಳನ್ನು ಚೇತನ್ ಕುಮಾರ್, ಕವಿರಾಜ್, ಸಂತೋಷ್ ನಾಯಕ್ ಬರೆದಿದ್ದಾರೆ. ಸಂಚಿತ್ ಹೆಗ್ಡೆ, ಕೈಲಾಷ್ ಖೇರ್, ಪಂಚಮ್ ಜೀವ ಹಾಡಿದ್ದಾರೆ.


ಎಲ್ ಎಂ ಸೂರಿ ಛಾಯಾಗ್ರಹಣ, ಸೌಂದರ್ ರಾಜ್ ಸಂಕಲನ, ಡಿಫರೆಂಟ್ ಡ್ಯಾನಿ‌ ಸಾಹಸ ನಿರ್ದೇಶನ ಹಾಗೂ ಮುರಳಿ ಅವರ ನೃತ್ಯ ನಿರ್ದೇಶನವಿರುವ ಈ ಚಿತ್ರಕ್ಕೆ ಬಿ.ಎ.ಮಧು ಸಂಭಾಷಣೆ ಬರೆದಿದ್ದಾರೆ.
ವಸಿಷ್ಠ ಎನ್ ಸಿಂಹ, ರಕ್ಷ, ದೀಪಕ್ ಶೆಟ್ಟಿ, ಸುಚೇಂದ್ರ ಪ್ರಸಾದ್ ಮುಂತಾದವರು ಚಿತ್ರದಲ್ಲಿದ್ದಾರೆ.

Categories
ಸಿನಿ ಸುದ್ದಿ

ಹೊಸಬರ ಸ್ವಯಂ ಕಲ್ಪನೆ ಸದ್ದಿಲ್ಲದೆ ರೆಡಿಯಾಯ್ತು ಕಪೋ ಕಲ್ಪಿತ ಚಿತ್ರ !

ಕನ್ನಡದಲ್ಲಿ ವರ್ಷ ಕಳೆದಂತೆ ಹೊಸಬರ ಆಗಮನವಾಗುತ್ತಲೇ ಇದೆ. ಆ ಸಾಲಿಗೆ ಈಗ “ಕಪೋ ಕಲ್ಪಿತ” ಚಿತ್ರವೂ ಸೇರಿದೆ. ಇದು ಬಹುತೇಕ ಹೊಸಬರೇ ಸೇರಿ ಮಾಡಿರುವ ಸಿನಿಮಾ. ಈಗಾಗಲೇ ಸದ್ದಿಲ್ಲದೆಯೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಈಗ ಸೆನ್ಸಾರ್‌ ಅಂಗಳದಲ್ಲಿರುವ ಚಿತ್ರ ಸೆನ್ಸಾರ್‌ ಬಳಿಕ ರಿಲೀಸ್‌ ಆಗಲಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್‌ ಬಿಡುಗಡೆಯಾಯಿತು.

ಈ ಚಿತ್ರಕ್ಕೆ ಸುಮಿತ್ರಾ ರಮೇಶ್‌ಗೌಡ ನಾಯಕಿ ಮತ್ತು ನಿರ್ದೇಶಕಿ. ತಮ್ಮ ಚೊಚ್ಚಲ ಅನುಭವ ಕುರಿತು ಹೇಳಿಕೊಂಡ ಸುಮಿತ್ರಾ, “ನಾನಿಲ್ಲಿ ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದೇನೆ. ಶೀರ್ಷಿಕೆಯು ಸಂಸ್ಕ್ರತ ಪದವಾಗಿದೆ. ಸ್ವಯಂ ಕಲ್ಪನೆ ಎಂಬುದು ಇದರ ಅರ್ಥ ಕೊಡುತ್ತದೆ. ಅಂದರೆ ಒಂದು ವಿಷಯವು ಒಬ್ಬರಿಂದ ಮತ್ತೊಬ್ಬರಿಗೆ ತಲುಪುವಾಗ ಇನ್ನೇನೋ ಸೇರಿಕೊಂಡಾಗ ಅದು ಸಂಶಯಕ್ಕೆ ಆಸ್ಪದ ಮಾಡಿಕೊಡುತ್ತದೆ. ಹೀಗಾಯಿತಂತೆ, ಹಾಗಾಯಿತಂತೆ, ಹಾಗೆ, ಹೀಗೆ ಅಂತೆಲ್ಲಾ ಸುದ್ದಿಗಳು ಹರಿದಾಡುತ್ತವೆ. ಆ ಕುರಿತಂತೆ ಇರುವ ಶೀರ್ಷಿಕೆ ಇದು.

ಅಂದಹಾಗೆ, ಇದೊಂದು ಹಾರರ್‌ ಕಥೆ ಹೊಂದಿರುವ ಸಿನಿಮಾ. ಯುವಕರ ತಂಡವೊಂದು ದೂರದ ಮನೆಗೆ ಹೋಗುತ್ತೆ. ಅಲ್ಲಿ ಭೂತವಿದೆ ಅಂತ ತಿಳಿದು ಅದರಿಂದ ಹೇಗೆ ತಪ್ಪಿಸಿಕೊಂಡು ಹೊರಗೆ ಬರುತ್ತಾರೆ ಎನ್ನುವುದು ಚಿತ್ರದ ಕಥಾಹಂದರ.
ಮಂಡ್ಯ ಮೂಲದ ಸುಮಿತ್ರಾ ರಮೇಶ್‌ಗೌಡ, ಈ ಹಿಂದೆ ’ಜಿಷ್ಣು’ ಸಿನಿಮಾದಲ್ಲಿ ಪಾತ್ರ ಮಾಡುವ ಜೊತೆಗೆ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರು. ಆ ಅನುಭವ ಪಡೆದು ಈಗ ನಿರ್ದೇಶಕಿಯಾಗಿದ್ದಾರೆ.

ಕಿರುತೆರೆ ನಟ ಮತ್ತು ಸಣ್ಣ ಪುಟ್ಟ ಪಾತ್ರದಲ್ಲಿ ಅಭಿನಯಿಸಿದ್ದ ಪ್ರೀತಂ ಮಕ್ಕಿಹಾಲಿ ನಾಯಕರಾಗಿದ್ದಾರೆ. ನಿವೃತ್ತ ಪೋಲೀಸ್ ಅಧಿಕಾರಿಯಾಗಿ ಸಂದೀಪ್‌ ಮಲಾನಿ, ನಿರೂಪಕರಾಗಿ ಗೌರೀಶ್‌ ಅಕ್ಕಿ. ಉಳಿದಂತೆ ಶಿವರಾಜ್‌ ಕರ್ಕೆರ, ರಾಜೇಶ್‌ ಕಣ್ಣೂರ್, ವಿನೀತ್, ವಿಶಾಲ್, ಅಮೋಘ್, ಚೈತ್ರಾ ದೀಕ್ಷಿತ್‌ಗೌಡ ಇತರರು ನಟಿಸಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಸಂಗೀತ ಮತ್ತು ನಿರ್ಮಾಣದಲ್ಲಿ ಮಂಗಳೂರಿನ ಗಣಿದೇವ್‌ ಕಾರ್ಕಳ ಸಾಥ್‌ ನೀಡಿದ್ದಾರೆ.

ಬಾತುಕುಲಾಲ್‌ ಅವರ ಛಾಯಾಗ್ರಹಣ ಮತ್ತು ಸಂಕಲನವಿದೆ. ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಇತರೆ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮಗಳ ಮೇಲಿನ ಪ್ರೀತಿಗೆ ಅವರ ಪ್ರತಿಭೆ ಹೊರಸೂಸಲು ರಮೇಶ್‌ಚಿಕ್ಕೆಗೌಡ ಸವ್ಯಾಚಿ ಕ್ರಿಯೇಶನ್ಸ್ ಮೂಲಕ ಅಕ್ಷರ ಪ್ರೊಡಕ್ಷನ್ ಸಹಯೋಗದೊಂದಿಗೆ ಹಣ ಹಾಕಿದ್ದಾರೆ. ಇವರ ಜೊತೆ ಕವಿತಾ ಕನ್ನಿಕಾ ಪೂಜಾರಿ ಸಾಥ್‌ ಕೊಟ್ಟಿದ್ದಾರೆ.

Categories
ಸಿನಿ ಸುದ್ದಿ

ಗೋಲ್ಡನ್‌ ಸ್ಟಾರ್‌ ಹುಟ್ಟುಹಬ್ಬಕ್ಕೆ ಪ್ರಶಾಂತ್‌ ರಾಜ್‌ ಸಿನಿಮಾ ಗಿಫ್ಟ್‌ ; ಕ್ರೈಮ್‌ ಥ್ರಿಲ್ಲರ್‌ ಸ್ಟೋರಿಗೆ ಮಳೆ ಹುಡುಗ ಮಾಸ್ ಹೀರೋ

ಗೋಲ್ಡನ್‌ ಸ್ಟಾರ್‌ ಗಣೇಶ್‌ಗೆ ಇಂದು (ಜುಲೈ ೨) ಹುಟ್ಟುಹಬ್ಬದ ಸಂಭ್ರಮ. ಹಾಗಂತ ಅವರು ಎಂದಿನಂತೆ ಈ ಬಾರಿ ಅದ್ಧೂರಿಯಾಗಿ ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸಿಕೊಂಡಿಲ್ಲ. ಕಾರಣ, ಕೊರೊನಾ. ಕೊರೊನಾ ಹಿನ್ನೆಲೆಯಲ್ಲಿ ಅವರು ಸರಳವಾಗಿಯೇ, ಕುಟುಂಬದವರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆಯೇ ಅವರು, ತಮ್ಮ ಫೇಸ್‌ಬುಕ್‌ ಖಾತೆ ಹಾಗೂ ಟ್ವಿಟ್ಟರ್‌ನಲ್ಲಿ ಪೋಸ್ಟ್‌ವೊಂದನ್ನು ಹಾಕಿ, ಈ ಬಾರಿ ಹುಟ್ಟುಹಬ್ಬದ ಸಂಭ್ರಮ ಸರಳವಾಗಿರಲಿದೆ. ಕೊರೊನಾ ಹಿನ್ನೆಲೆಯಲ್ಲಿ ಅಭಿಮಾನಿಗಳು ಇದ್ದಲ್ಲೇ ಶುಭಾಶಯಗಳನ್ನು ತಿಳಿಸಿ ಎಂದು ಮನವಿ ಮಾಡಿದ್ದರು. ಅದರಂತೆಯೇ, ಅವರ ಅಪಾರ ಅಭಿಮಾನಿಗಳು, ಫೇಸ್‌ಬುಕ್‌ ಮೂಲಕ ಶುಭಕೋರಿದ್ದಾರೆ.

ಇನ್ನು, ಗಣೇಶ್‌ ಹುಟ್ಟುಹಬ್ಬದ ಹಿನ್ನಲೆಯಲ್ಲಿ “ತ್ರಿಬಲ್‌ ರೈಡ್”‌, “ಗಾಳಿಪಟ ೨” ಚಿತ್ರಗಳು ಪೋಸ್ಟರ್‌ ರಿಲೀಸ್‌ ಮಾಡಿದರೆ, ಸಿಂಪಲ್‌ ಸುನಿ ಅವರು “ದಿ ಸ್ಟೋರಿ ಅಫ್ ರಾಯಗಢ” ಚಿತ್ರದ ಪೋಸ್ಟರ್‌ ರಿಲೀಸ್‌‌ ಮಾಡಲು ಅಣಿಯಾಗಿದ್ದಾರೆ. ಈ ನಡುವೆ ಗಣೇಶ್‌ ಅವರನ್ನು ಹೊಸ ಗೆಪಟ್‌ನಲ್ಲಿ ಕಾಣಬೇಕು ಅಂತ ಅವರ ಅಭಿಮಾನಿಗಳು ಕಾಯುತ್ತಿದ್ದರು. ಅದಕ್ಕೆ ತಕ್ಕಂತೆಯೇ ನಿರ್ದೇಶಕ ಪ್ರಶಾಂತ್ ರಾಜ್ ಕೂಡ ಸರ್ಪ್ರೈಸ್ ಸುದ್ದಿ ನೀಡಿದ್ದಾರೆ. ಗಣೇಶ್‌ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ, ಹೊಸ ಚಿತ್ರ ಘೋಷಣೆ ಮಾಡಿದ್ದಾರೆ. ಅದೊಂದು ಕ್ರೈಂ-ಥ್ರಿಲ್ಲಿಂಗ್ ಸ್ಟೋರಿ ಹೊಂದಿದ್ದು, ಗಣೇಶ್‌ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. 

ಸಾಮಾನ್ಯವಾಗಿ ಗಣೇಶ್ ಅವರ ಸಿನಿಮಾಗಳೆಂದರೆ, ಲವ್‌ ಸ್ಟೋರಿ ಹೆಚ್ಚು. ಬಹುತೇಕ ರೊಮ್ಯಾಂಟಿಕ್ ಕಾಮಿಡಿ ಕಥೆಗಳಲ್ಲಿ ಕಾಣಿಸಿಕೊಂಡಿರುವ ಅವರು, ಈಗ ಕ್ರೈಂ ಥ್ರಿಲ್ಲರ್ ಕಥೆ ಹಿಂದೆ ಬರಲು ಸಜ್ಜಾಗಿದ್ದಾರೆ. ಇದು ಸಹಜವಾಗಿಯೇ ಅವರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಪ್ರೊಡಕ್ಷನ್ ನಂ 7 ಹೆಸರಿನಲ್ಲಿ ಹುಟ್ಟು ಹಬ್ಬದ ವಿಶೇಷವಾಗಿ ಪೋಸ್ಟರ್ ಮಾತ್ರ ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರದ ಟೈಟಲ್ ಸೇರಿದಂತೆ ಇನ್ನುಳಿದ ಮಾಹಿತಿಗಳನ್ನು ಹಂಚಿಕೊಳ್ಳಲಿದ್ದಾರಂತೆ. ನಿರ್ದೇಶಕ ಪ್ರಶಾಂತ್ ರಾಜ್ ಮತ್ತು ಗಣೇಶ್ ಕಾಂಬಿನೇಷನ್‌ನಲ್ಲಿ ಈಗಾಗಲೇ ಎರಡು ಸಿನಿಮಾ ಬಂದಿದೆ. ಇದು ಮೂರನೇ ಚಿತ್ರ. 2016ರಲ್ಲಿ ‘ಜೂಮ್’ ಹಾಗೂ 2018ರಲ್ಲಿ ‘ಆರೆಂಜ್’ ಚಿತ್ರ ಮಾಡಿದ್ದರು. ಈಗ ಕ್ರೈಮ್‌ ಥ್ರಿಲ್ಲರ್.‌ ಜೊತೆಗೆ ಮಾಸ್‌ ಎಲಿಮೆಂಟ್ಸ್‌ ಕೂಡ ಇರಲಿದೆ.

Categories
ಸಿನಿ ಸುದ್ದಿ

ಲೂಸಿಯಾ ಪವನ್‌ಕುಮಾರ್‌ ದ್ವಿತ್ವ ಪೋಸ್ಟರ್‌ ಕ್ರೆಡಿಟ್‌ ಡಿಸೈನರ್‌ಗೆ ಕೊಟ್ಟರು! ಇಲ್ಲಿರೋ ಪೋಸ್ಟರ್‌ ನೋಡಿದವರಿಗೆ ಆ ಕ್ರೆಡಿಟ್‌ ಕೊಟ್ಟಿದ್ದು ಸರಿನಾ? ಅನ್ನೋ ಪ್ರಶ್ನೆ ಕಾಡುತ್ತೆ!!


ಒಂದು ಸಿನಿಮಾ ಅಂದಮೇಲೆ ಒಂದಲ್ಲ ಒಂದು ಸ್ಫೂರ್ತಿ ಇದ್ದೇ ಇರುತ್ತೆ. ಹಾಲಿವುಡ್‌, ಬಾಲಿವುಡ್‌, ಕಾಲಿವುಡ್‌, ಟಾಲಿವುಡ್‌ ಹೀಗೆ ಬೇರೆ ಬೇರೆ ಚಿತ್ರರಂಗದಲ್ಲಿ ಬಂದು ಹೋಗಿರುವ ಅದೆಷ್ಟೋ ಕಥೆಯ ಎಳೆ ಇಟ್ಟುಕೊಂಡು ಕನ್ನಡದಲ್ಲಿ ಸಿನಿಮಾ ಮಾಡಿರುವ ಉದಾಹರಣೆಗಳಿವೆ. ಇನ್ನೂ ಕೆಲವರು ಗೊತ್ತಾಗದಂತೆ ಹಾಲಿವುಡ್‌ ಕಥೆಗಳನ್ನೇ ಕದ್ದು ಕನ್ನಡದಲ್ಲಿ ಸಿನಿಮಾ ಮಾಡಿರುವುದೂ ಗೊತ್ತಿದೆ. ಇಲ್ಲಿ ಕಥೆ ಮಾತ್ರವಲ್ಲ, ಬೇರೆ ಭಾಷೆಯ ಪೋಸ್ಟರ್‌ಗಳನ್ನೂ ನಕಲಿ ಮಾಡಿದ ಉದಾಹರಣೆಗಳೂ ಸಾಕಷ್ಟಿವೆ. ಈಗ ಇಲ್ಲೇಕೆ “ನಕಲಿ” ಪೋಸ್ಟರ್‌ಗಳ ಬಗ್ಗೆ ಮಾತು ಅಂತೀರಾ. ಪುನೀತ್‌ ರಾಜಕುಮಾರ್‌ ಅವರಿಗೆ ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ನಲ್ಲಿ ನಿರ್ದೇಶಕ ಲೂಸಿಯಾ ಪವನ್‌ಕುಮಾರ್‌ ಅವರು, “ದ್ವಿತ್ವ” ಸಿನಿಮಾ ಮಾಡುತ್ತಿರುವ ಬಗ್ಗೆ ತಮ್ಮ ಫೇಸ್‌ಬುಕ್‌ ಮತ್ತು ಟ್ವಿಟ್ಟರ್‌ ಖಾತೆಯಲ್ಲಿ ಹಂಚಿಕೊಂಡಿದ್ದರು. ಅಲ್ಲಿ ವಿಶೇಷ ಎನಿಸುವ ಪೋಸ್ಟರ್‌ ಕೂಡ ಹಾಕಿದ್ದರು. ಆ ವಿಭಿನ್ನ ಎನಿಸುವ ಪೋಸ್ಟರ್‌ ನೋಡಿದವರಿಗೂ ಒಂದು ರೀತಿ ಖುಷಿಯಾಗಿತ್ತು. ಪವನ್‌ಕುಮಾರ್‌, ಸದಾ ಹೊಸದೇನನ್ನೋ ಮಾಡುತ್ತಾರೆ ಎಂದು ಹೇಳುವ ಮಂದಿಗೆ, ಆ ಪೋಸ್ಟರ್‌ ನೋಡಿದೊಡನೆ, ಇಲ್ಲೇನೋ ಹೊಸದು ಇದ್ದೇ ಇರುತ್ತೆ ಎಂದೆನಿಸಿದ್ದು ಸುಳ್ಳಲ್ಲ.


ಪುನೀತ್‌ ರಾಜಕುಮಾರ್‌ ಅಭಿನಯದ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದ್ದೇನೋ ನಿಜ. “ದ್ವಿತ್ವ” ಚಿತ್ರದ ಕಥೆ ಮತ್ತು ಚಿತ್ರಕಥೆಯ ಜವಾಬ್ದಾರಿ ಹೊತ್ತಿರುವ ನಿರ್ದೇಶಕ ಪವನ್‌ ಕುಮಾರ್‌, ಒಂದು ಪೋಸ್ಟರ್‌ ಡಿಸೈನ್‌ ಮಾಡಿ, ಆ ಬಗ್ಗೆ ಬರೆದುಕೊಂಡಿದ್ದರು. ಅಲ್ಲದೆ, ಪೋಸ್ಟರ್‌ ಡಿಸೈನ್‌ ಬಗ್ಗೆ ಎಲ್ಲೆಡೆಯಿಂದ ಒಳ್ಳೆಯ ಮೆಚ್ಚುಗೆ ಬಂದಿದ್ದರಿಂದ, ಪವನ್‌ ಕುಮಾರ್‌ ಅವರು, ಆ ಡಿಸೈನ್‌ ಮಾಡಿದ್ದರ ಬಗ್ಗೆಯೂ ಸೋಶಿಯಲ್‌ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. “ದ್ವಿತ್ವ” ಚಿತ್ರದ ಪೋಸ್ಟರ್‌ ಡಿಸೈನ್‌ ಮಾಡಿದ್ದು, ಆದರ್ಶ್‌ ಅಂತ. ಅವರು ಲೂಸಿಯಾ ಟೈಮ್‌ನಿಂದಲೂ ಜೊತೆಗಿದ್ದಾರೆ. ಒಂದೊಳ್ಳೆಯ ಡಿಸೈನ್‌ ಮಾಡಿದ್ದಾರೆ. ಅವರು ಯು ಟರ್ನ್‌, ಒಂದು ಮೊಟ್ಟೆಯ ಕಥೆ ಚಿತ್ರಗಳಲ್ಲೂ ಜೊತೆಯಾಗಿದ್ದರು ಈಗ “ದ್ವಿತ್ವ” ಪೋಸ್ಟರ್‌ ಮಾಡಿದ್ದಾರೆ ಅಂತ ಡಿಸೈನರ್‌ ಆದರ್ಶ್‌ ಅವರ ಕ್ರಿಯೇಟ್‌ ಬಗ್ಗೆ ಹೇಳಿಕೊಂಡಿದ್ದಾರೆ. ಆದರೆ, ಅಸಲಿಗೆ, ಆ ಪೋಸ್ಟರ್‌ ಡಿಸೈನರ್‌ ಆದರ್ಶ್‌ ಮಾಡಿದ್ದು ಕೂಡ ಕಾಪಿ! ಹೌದು, ಈಗಾಗಲೇ ಎಲ್ಲೆಡೆ ಸೋಶಿಯಲ್‌ ಮೀಡಿಯಾದಲ್ಲಿ ಹರಿದಾಡುತ್ತಿರುವ ಬಿಸಿ ಬಿಸಿ ಸುದ್ದಿ ಇದು.


ಯಾರೋ ಮಾಡಿದ ಡಿಸೈನ್‌ ಇಟ್ಟುಕೊಂಡು ಆದರ್ಶ, ಪುನೀತ್‌ ಅವರ ಫೋಟೋ ಬಳಸಿ ಮಾಡಿದ್ದಾರೆ. ಮೂಲ ಪೋಸ್ಟರ್‌ ಹಾಕಿ ಪೋಸ್ಟ್‌ ಮಾಡಿರುವ ನೆಟ್ಟಿಗರು, ಸಾಕಷ್ಟು ಕಾಮೆಂಟ್‌ ಮಾಡುತ್ತಿದ್ದಾರೆ. ಅಷ್ಟಕ್ಕೂ ಆ ಪೋಸ್ಟ್‌ ಯಾವುದು ಗೊತ್ತಾ?

ದ್ವಿತ್ವ ಪೋಸ್ಟರ್ ಹೋಲುವಂತೆ ವೈರಲ್ ಆಗಿರುವ ಫೋಟೋ ಸೌಂಡ್‌ಕ್ಲೌಡ್ ಎಂಬ ಪಾಡ್‌ಕಾಸ್ಟ್ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿದೆ. ಇದೊಂದು ಮ್ಯೂಸಿಕ್ ಮತ್ತು ಆಡಿಯೋ ಪ್ಲಾಟ್‌ಫಾರ್ಮ್ ಆಗಿದ್ದು, ಇದರಲ್ಲಿ ನೀಡಿರುವ ಜಾಹೀರಾತಿನಲ್ಲಿ ಈ ಫೋಟೋ ಡಿಸೈನ್ ಇದೆ. ಥೇಟ್ ದ್ವಿತ್ವ ಚಿತ್ರದ ಪೋಸ್ಟರ್‌ನಂತೆ ಇದೆ. ಸದ್ಯಕ್ಕೆ ಈ ಪೋಸ್ಟರ್‌ ಸಾಕಷ್ಟು ಸುದ್ದಿಯಾಗಿದೆ.

ಫೇಸ್‌ಬುಕ್‌ನಲ್ಲಿ ಸಿನಿಪ್ರೇಮಿ ಹರೀಶ್‌ ಗೌಡ ಎನ್ನುವವರು, “ಡಿಸೈನ್‌ ಕಾಪಿ ಆದ್ರೂ ಪರವಾಗಿಲ್ಲ, ಸಿನಿಮಾ ಒರಿಜಿಲ್‌ ಆಗಿರ್ಲಿ” (ಡೈರೆಕ್ಟ್ರು ಬುದ್ಧಿವಂತಿಕೆಯಿಂದ ನಿನ್ನೆನೆ ಪೋಸ್ಟರ್‌ ಡಿಸೈನ್‌ ಪೂರ್ತಿ ಕ್ರೆಡಿಟ್‌ನ ಡಿಸೈನರ್‌ಗೆ ಕೊಟ್ಟಿದ್ದಾರೆ) ಎಂದು ಬರೆದುಕೊಂಡಿದ್ದಾರೆ. ಅದೇನೆ ಇರಲಿ, ಕಾಪಿ ಮಾಡೋದು ತಪ್ಪೋ, ಸರಿನಾ ಗೊತ್ತಿಲ್ಲ. ಪವನ್‌ಕುಮಾರ್‌ ಕಥೆ ಚೆನ್ನಾಗಿ ಕಟ್ಟಿಕೊಟ್ಟರೆ ಸಾಕು ಅನ್ನೋದು ಅಪ್ಪು ಫ್ಯಾನ್ಸ್‌ ಮಾತು. ಅಂದಹಾಗೆ, ಈ ಸಿನಿಮಾಗೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡುತ್ತಿದ್ದಾರೆ. ಪ್ರೀತಾ ಜಯರಾಮನ್‌ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಇನ್ನುಳಿದಂತೆ ಬೇರೆ ಕಲಾವಿದರು, ತಾಂತ್ರಿಕ ವರ್ಗದವರ ಆಯ್ಕೆ ಪ್ರಕ್ರಿಯ ನಡೆಯಬೇಕಿದೆ. ಸೆಪ್ಟೆಂಬರ್‌ನಿಂದ ಚಿತ್ರದ ಚಿತ್ರೀಕರಣ ಶುರುವಾಗಲಿದೆ.

Categories
ಸಿನಿ ಸುದ್ದಿ

ಟೇಶಿ ವೆಂಕಟೇಶ್ ಆರೋಪದಲ್ಲಿ ಯಾವುದೇ ಹುರುಳಿಲ್ಲ; ನಿರ್ದೇಶಕರ ಸಂಘದ ಸಮಸ್ಯೆ ಕೇಳೋರಿಲ್ಲ! – ಗೋಳು ಕೇಳೋರು ಯಾರು ಸ್ವಾಮಿ?

ಕರ್ನಾಟಕ ಚಲನಚಿತ್ರ ನಿರ್ದೇಶಕರ‌ ಸಂಘದ ಸಮಸ್ಯೆ ಒಂದಲ್ಲ ಎರಡಲ್ಲ! ಕಳೆದ ವರ್ಷದಿಂದಲೂ ನೂರೆಂಟು ಕಗ್ಗಂಟಲ್ಲೇ ಸಂಘವಿದೆ. ಚುನಾವಣೆ ಇರದಿದ್ದರೂ ಇಲ್ಲಿ‌ ಸ್ವಯಂ ಘೋಷಿತ ಅಧ್ಯಕ್ಷರಾಗಿದ್ದಾರೆ. ಪದಾಧಿಕಾರಿಗಳ ಒಪ್ಪಿಗೆ ಇರದಿದ್ದರೂ ಅನೇಕ ಕಾರ್ಯಚಟುವಟಿಕೆಗಳು ನಡೆಯುತ್ತಲೇ ಇವೆ. ಆರೋಪ ಪ್ರತ್ಯಾರೋಪ ನಿತ್ತವಾಗಿದೆ. ಈಗ ನಾನೇ ಅಧ್ಯಕ್ಷ ಅಂತ ಹೇಳುತ್ತಿರುವ ಟೇಶಿ ವೆಂಕಟೇಶ್ ವಿರುದ್ಧ ಸಂಘದ ಕೆಲ ಪದಾಧಿಕಾರಿಗಳು, ನಿರ್ಮಾಪಕರು ಆಕ್ರೋಶಗೊಂಡಿದ್ದಾರೆ. ಟೇಶಿ ವೆಂಕಟೇಶ ಇತ್ತೀಚೆಗೆ ಹೇಳಿದ ಮಾತುಗಳೆಲ್ಲವೂ ಸುಳ್ಳು ಎಂದು ದಾಖಲೆ‌ ಸಮೇತ ಮಾಧ್ಯಮ ಮುಂದೆ ಸಾಬೀತುಪಡಿಸಿದ್ದಾರೆ.

ಹೌದು, ಟೇಶಿ ವೆಂಕಟೇಶ್ ಅವರು ಕನ್ನಡ ನಿರ್ದೇಶಕರ ಸಂಘವನ್ನು ದುರುಪಯೋಗ ಪಡಿಸಿಕೊಳ್ಳುತ್ತಿದ್ದಾರೆ ಎಂದು ಕೆಲ ನಿರ್ದೇಶಕರು ಮತ್ತು ನಿರ್ಮಾಪಕರು ಆರೋಪ ಮಾಡಿದ್ದಾರೆ.
ರೇಣುಕಾಂಬ ಥಿಯೇಟರ್ ನಲ್ಲಿ ನಡೆದ ಪತ್ರಿಕಾಗೋಷ್ಠಿಯಲ್ಲಿ ನಿರ್ದೇಶಕ ನಾಗೇಂದ್ರ ಅರಸ್, ಮಳವಳ್ಳಿ ಸಾಯಿಕೃಷ್ಣ, ನಿರ್ಮಾಪಕರಾದ ಕುಮಾರ್, ಜೆ.ಜೆ. ಶ್ರೀನಿವಾಸ್, ನಾಗೇಶ್ ಕುಮಾರ್ ಯು.ಎಸ್ ಮುಂತಾದವರು ಟೇಶಿ ವೆಂಕಟೇಶ ವಿರುದ್ಧ ಕಿಡಿಕಾರಿದರು.


ಸಂಘದ ಪದಾಧಿಕಾರಿ ಹಾಗು ನಿರ್ದೇಶಕ ನಾಗೇಂದ್ರ ಅರಸ್ ಮಾತನಾಡಿ, ‘ಸರಕಾರ ಆಹಾರ ಕೂಪನ್, ಸಹಾಯಧನದ ಬಗ್ಗೆ ಟೇಶಿ ವೆಂಕಟೇಶ್ ಇಲ್ಲ ಸಲ್ಲದ ಆರೋಪ ಮಾಡಿದ್ದಾರೆ. ಅದೆಲ್ಲವೂ ಸುಳ್ಳು. ನಿರ್ದೇಶಕರಿಗೆ ಸರಕಾರದ ಆಹಾರ ಕೂಪನ್ ನೀಡಲಾಗಿದೆ. ಸಂಘದಲ್ಲಿ ಇರದವರನ್ನೂ ಗುರುತಿಸಿ ಮಾನವೀಯ ದೃಷ್ಟಿಯಿಂದ ಸಹಾಉ ಕಲ್ಪಿಸಲಾಗಿದೆ. ಅಲ್ಲದೇ ನಿರ್ದೇಶಕಿ ರೂಪಾ ಅಯ್ಯರ್ ಅವರು ವೈಯಕ್ತಿಕ ಖರ್ಚು ಮಾಡಿಕೊಂಡು ಕಾರ್ಡ್ ಕೊಡಿಸಿದ್ದಾರೆ.

ಸರಕಾರದ ಸಹಾಯ ಪಡೆದು ವ್ಯಾಕ್ಸಿನ್ ಕೊಡಿಸಿದ್ದಾರೆ. ಈಗಲೂ ಸಂಘದ ಉಪಾಧ್ಯಕ್ಷರಾಗಿ ಅವರು ಸಂಘದ ಸದಸ್ಯರಿಗೆ ಹಲವು ಯೋಜನೆಗಳು ತಲುಪುವಂತೆ ಮಾಡಿದ್ದಾರೆ. ಆದರೆ, ಟೇಶಿ ವೆಂಕಟೇಶ ವಿನಾಕಾರಣ ಆರೋಪಿಸುತ್ತಿದ್ದಾರೆ. ನೈತಿಕತೆಯ ಬಗ್ಗೆ ಮಾತಾಡುವ ಅವರಿಗೆ ನೈತಿಕತೆ ಎಲ್ಲಿದೆ ಎಂದು ಪ್ರಶ್ನಿಸಿದರು.

ಜನರಲ್ ಬಾಡಿ ಮೀಟಿಂಗ್ ಮಾಡದೇ ಸಂಘಕ್ಕೆ ಹೊಸ ಅಧ್ಯಕ್ಷರ ಘೋಷಣೆ ಮಾಡಲಾಯಿತು. ಈ ಹಿಂದೆ ಅಧ್ಯಕ್ಷರಾಗಿದ್ದ ನಾಗೇಂದ್ರ ಪ್ರಸಾದ್ ಮತ್ತು ಈಗಿನ ಅಧ್ಯಕ್ಷರು ಎಂದು ಹೇಳಿಕೊಳ್ಳುವ ಟೇಶಿ ವೆಂಕಟೇಶ್ ಅವರ ಅವಧಿಯ ಹಣಕಾಸಿನ ವ್ಯವಹಾರಗಳಲ್ಲಿ ಪಾರದರ್ಶಕತೆ ಇಲ್ಲದೇ ಇರುವ ಕಾರಣವೇ ಸಾಕಷ್ಟು ಗೊಂದಲಗಳಿಗೆ ಕಾರವಾಗಿದೆ ಎಂದು ಮಳವಳ್ಳಿ ಸಾಯಿಕೃಷ್ಣ ಈ ವೇಳೆ ಆರೋಪಿಸಿದರು.

ಎರಡು ಸಾವಿರಕ್ಕೂ ಹೆಚ್ಚು ಸದಸ್ಯರಿರುವ ಸಂಘದಲ್ಲಿ ಕೇವಲ ಎಂಬತ್ತು ಜನರ ಮೀಟಿಂಗ್ ಮೂಲಕ ಹೊಸ ಪದಾಧಿಕಾರಿಗಳ ಘೋಷಣೆ ಹೇಗೆ ಸಾಧ್ಯ? ಇದನ್ನು ಒಪ್ಪಲಾರದ್ದು. ಚುನಾವಣೆ ಆಗದೇ ಹೇಗೆ ಅಧ್ಯಕ್ಷರ ಆಯ್ಕೆ ಆಯಿತು ಎಂದು ಸಾಯಿಕೃಷ್ಣ ಪ್ರಶ್ನೆ ಮಾಡಿದರು.
ಬೆಂಗಳೂರು ಚಿತ್ರೋತ್ಸವದಲ್ಲಿ ಸಂಘದ ಹೆಸರಿನಲ್ಲಿ ನಿರ್ದೇಶಕರ ಫಿಲ್ಮಿ ಬಜಾರ್ ಮಾಡಿ, ಅದರಿಂದ ಬಂದ ಹಣದ ಲೆಕ್ಕವನ್ನು ಇನ್ನೂ ಕೊಡದೇ ಇರುವುದಕ್ಕೆ ನಿರ್ಮಾಪಕ ಜೆ.ಜೆ. ಶ್ರೀನಿವಾಸ್ ಆಕ್ಷೇಪ ವ್ಯಕ್ತಪಡಿಸಿದರು.


ನಿರ್ಮಾಪಕ ನಾಗೇಶ್ ಕುಮಾರ್ ಯು.ಎಸ್ ಮಾತನಾಡಿ, ಪ್ರಸ್ತುತ ನಿರ್ಮಾಪಕರು ಸಾಕಷ್ಟು ಸಮಸ್ಯೆ ಎದುರಿಸುತ್ತಿದ್ದಾರೆ. ನಿರ್ದೇಶಕರ ಸಂಘದಲ್ಲಿ ಇಷ್ಟೊಂದು ಗೊಂದಲವಿದ್ದರೆ ಯಾವ ನಿರ್ಮಾಪಕರು ಸಿನಿಮಾ ನಿರ್ಮಾಣ ಮಾಡಲು ಮುಂದೆ ಬರುತ್ತಾರೆ? ಕನ್ನಡದಲ್ಲಿ ವಾರ್ಷಿಕ ಇನ್ನೂರು ಸಿನಿಮಾಗಳು ತಯಾರಾಗುತ್ತಿವೆ. ಕನ್ನಡಕ್ಕೊಂದಿ ಓಟಿಟಿ ಬೇಕಿದೆ. ನಾವೆಲ್ಲ ಮುಂದೆ ನಿಲ್ತೀವಿ ಸಾಥ್ ಕೊಡಿ ಅಂದರೂ ದೊಡ್ಡವರು ಮೌನ ವಹಿಸಿದ್ದಾರೆ. ನಿಜವಾಗಿಯೂ ನಿರ್ದೇಶಕರ ಸಂಘದ ಸಮಸ್ಯೆ ಬಗೆಹರಿಯದಿದ್ದರೆ ಮುಂದಿನ ದಿನಗಳಲ್ಲಿ ತುಂಬಾ ತೊಂದರೆ ಆಗುತ್ತದೆ. ಈಗಾದರೂ ಈ ಸಮಸ್ಯೆ ಬಗೆಹರಿದು ಸಂಘಕ್ಕೊಬ್ಬ ಒಳ್ಳೆಯ ಸಾರಥಿ ಬರಲಿ. ಪುಟ್ಟಣ್ಣ ಕಣಗಾಲ್ ಅಂತಹ ನಿರ್ದೇಶಕರು ಕಟ್ಟಿದ ಸಂಘ ಹೀಗಾಗಾದಿರಲಿ ಎಂದರು‌ ನಾಗೇಶ್ ಕುಮಾರ್.


ಸದ್ಯ ಆರೋಪ, ಪ್ರತ್ಯಾರೋಪಗಳಲ್ಲಿರುವ ಸಂಘಕ್ಕೆ ಮುಕ್ತಿ ಯಾವಾಗ ಎಂಬುದೇ ಎಲ್ಲರ ಮುಂದಿರುವ ಪ್ರಶ್ನೆ.

Categories
ಸಿನಿ ಸುದ್ದಿ

ಸಂಚಾರಿ ವಿಜಯ್ ಆಶಯದಂತೆ ಬುಡಕಟ್ಟು ಜನರ ಮನೆ ಮೇಲ್ಛಾವಣಿ ಟಾರ್ಪಾಲಿನ್ ಹೊದಿಕೆ ಕಾರ್ಯಕ್ಕೆ ಉಸಿರು ಸಿದ್ಧತೆ

ಸಂಚಾರಿ ವಿಜಯ್‌ ಅವರ ಆಸೆ ಈಡೇರಿಸಲು ಕವಿರಾಜ್ ನೇತೃತ್ವದ ‘ಉಸಿರು’ ತಂಡ ಸಿದ್ದವಾಗಿದೆ.
ಹೌದು, ‘ಉಸಿರು’ ಬಳಗದ ವತಿಯಿಂದ ಆ ಬಳಗದಲ್ಲಿದ್ದ ಸಂಚಾರಿ ವಿಜಯ್ ಅವರ ಆಶಯದ ಅಪೂರ್ಣ ಕಾರ್ಯಗಳಲ್ಲೊಂದಾದ ನಾಗರಹೊಳೆ ವಲಯದ ಬುಡಕಟ್ಟು ಜನಾಂಗದ ಹಾಡಿ ಮನೆಗಳ ಶಿಥಿಲ ಮೇಲ್ಚಾವಣಿಗಳಿಗೆ ಟಾರ್ಪಾಲಿನ್ ಹೊದಿಕೆ ಹೊದಿಸುವ ಕಾರ್ಯಕ್ಕೆ ಸಕಲ ಸಿದ್ಧತೆಯನ್ನು ಉಸಿರು ಬಳಗ ಮಾಡಿಕೊಂಡಿದೆ.

ಈ ಕುರಿತಂತೆ ಕವಿರಾಜ್ ಸ್ಪಷ್ಟಪಡಿಸಿದ್ದಾರೆ. ಆ ಕುರಿತು ಹೇಳುವ ಕವಿರಾಜ್, ‘ಈಗಾಗಲೇ ಟಾರ್ಪಾಲಿನ್ ಕಂಪೆನಿಯವರನ್ನೇ ಕರೆದುಕೊಂಡು ಹೋಗಿ ಅಳತೆ ಪಡೆದು ಬಂದ 60 ಮನೆಗಳ ಪಟ್ಟಿಗೆ ತಕ್ಕಂತೆ ಟಾರ್ಪಾಲಿನ್ ಕಟ್ ಮಾಡಿಸಿ ಹುಕ್ಸ್ ಹಾಕಿಸಿ ಹೊಲಿಸಿ ಕಂಪೆನಿಯ ನುರಿತ ಕೆಲಸಗಾರರರನ್ನೇ ಕರೆದುಕೊಂಡು ಹೋಗಿ ಬಹಳ ವ್ಯವಸ್ಥಿತವಾಗಿ ಗಟ್ಟಿ ಮುಟ್ಟಾಗಿ ಅವನ್ನು ಅಳವಡಿಸಿ ಬರುವ ಕಾರ್ಯಕ್ರಮ ಈ ಶನಿವಾರ ಮತ್ತು ಭಾನುವಾರ ಹಮ್ಮಿಕೊಂಡಿದ್ದೇವೆ. ಅದೇ ಜಾಗದಲ್ಲೇ ವಿಜಯ್ ಅವರಿಗೆ ಗೌರವ ನಮನ ಸಲ್ಲಿಸುವ ಪುಟ್ಟ ಕಾರ್ಯಕ್ರಮವು ನಡೆಯಲಿದೆ.

ಬಹುತೇಕ ನಮ್ಮ ಉಸಿರು ಬಳಗ ಅಲ್ಲಿ ಭಾಗವಹಿಸಲಿದೆ‌ ಎಂದು ಹೇಳಿರುವ ಅವರು,
ಈ ಸಿದ್ದತೆಯ ಸಾರಥ್ಯ ವಹಿಸಿದ್ದ ನಮ್ಮ ‘ಪವನ್ ದರೆಗುಂಡಿ ಹಾಗೂ ಅವರೊಂದಿಗೆ ಸಹಕರಿಸಿದ ಮಾದೇಶ್ ಗೌಡ್ರು, ಶ್ರೀ ಹರ್ಷ , ಚಿನ್ಮಯ್ ಹಾಗೆಯೇ ಫಂಡಿಂಗ್ ವಿಚಾರದಲ್ಲಿ ಸಹಕರಿಸಿದ ಅರುಂಧತಿ ದೇವನಹಳ್ಳಿ ಅವರ ಕಾರ್ಯ ಶ್ಲಾಘನೀಯ ‌‌ಎಂದಿದ್ದಾರೆ ಕವಿರಾಜ್.

Categories
ಸಿನಿ ಸುದ್ದಿ

ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್‌ ಈಗ “ರಾಣ” ಜುಲೈ 7ಕ್ಕೆ ಚಿತ್ರದ ಮುಹೂರ್ತ

ನಿರ್ಮಾಪಕ ಕೆ.ಮಂಜು ಪುತ್ರ ಶ್ರೇಯಸ್‌ ಅವರ ಹೊಸ ಚಿತ್ರಕ್ಕೆ ಟೈಟಲ್‌ ಫಿಕ್ಸ್‌ ಆಗಿದೆ. ಈ ಚಿತ್ರಕ್ಕೆ “ರಾಣ” ಎಂದು ನಾಮಕರಣ ಮಾಡಲಾಗಿದೆ. ನಂದಕಿಶೋರ್ ನಿರ್ದೇಶನ ಮಾಡುತ್ತಿದ್ದು, ಗುಜ್ಜಲ್ ಪುರುಷೋತ್ತಮ್ ನಿರ್ಮಾಣದ ಜವಾಬ್ದಾರಿ ಹೊತ್ತಿದ್ದಾರೆ.

ಮೋದಿ‌ ಆಸ್ಪತ್ರೆ ಬಳಿ ಇರುವ ಗಣಪತಿ ದೇವಸ್ಥಾನದಲ್ಲಿ ಪೂಜೆ ನೆರವೇರಿಸಿ ಚಿತ್ರಕ್ಕೆ “ರಾಣ” ಎಂದು ಹೆಸರಿಡಲಾಗಿದೆ. ಶೀರ್ಷಿಕೆ ಅನಾವರಣ ಸಮಾರಂಭದಲ್ಲಿ ಕೆ.ಮಂಜು, ನಿರ್ಮಾಪಕ ಪುರುಷೋತ್ತಮ ಗುಜ್ಜಾಲ್, ನಿರ್ದೇಶಕ ನಂದಕಿಶೋರ್, ನಾಯಕ ಶ್ರೇಯಸ್‌ ಹಾಗೂ ನಾಯಕಿ ರೇಶ್ಮಾ ನಾಣಯ್ಯ ಸೇರಿದಂತೆ ಚಿತ್ರತಂಡದ ಸದಸ್ಯರು ಉಪಸ್ಥಿತರಿದ್ದರು.
ಜುಲೈ 7 ರಂದು “ರಾಣ” ಚಿತ್ರದ ಮುಹೂರ್ತ ಸಮಾರಂಭ ನಡೆಯಲಿದೆ. ಈ ಚಿತ್ರದ ಶೀರ್ಷಿಕೆ ಮೊದಲು ನಿರ್ಮಾಪಕ ರಮೇಶ್ ಕಶ್ಯಪ್ ಅವರ ಬಳಿಯಿತ್ತು. ರಾಕಿಂಗ್ ಯಶ್ ಅವರು “ರಾಣ” ಚಿತ್ರದಲ್ಲಿ ಅಭಿನಯಿಸಬೇಕಿತ್ತು. ರಮೇಶ್ ಕಶ್ಯಪ್ ಅವರು ನಮಗಾಗಿ ಈ ಶೀರ್ಷಿಕೆ ಬಿಟ್ಟುಕೊಟ್ಟಿದ್ದಾರೆ.


ಶೀರ್ಷಿಕೆ ನೀಡಿದ್ದ ರಮೇಶ್ ಕಶ್ಯಪ್ ಹಾಗೂ ರಾಕಿಂಗ್ ಸ್ಟಾರ್ ಯಶ್ ಅವರಿಗೆ ನಿರ್ಮಾಪಕ ಪುರುಷೋತ್ತಮ ಗುಜ್ಜಾಲ್, ಕೆ.ಮಂಜು ಹಾಗೂ ಶ್ರೇಯಸ್ಸ್ ಧನ್ಯವಾದ ತಿಳಿಸಿದ್ದಾರೆ. ಚಂದನ್ ಶೆಟ್ಟಿ ಸಂಗೀತ ನೀಡುತ್ತಿರುವ ಈ ಚಿತ್ರಕ್ಕೆ ಶೇಖರ್ ಚಂದ್ರು ಛಾಯಾಗ್ರಹಣ ಹಾಗೂ ಕೆ.ಎಂ.ಪ್ರಕಾಶ್ ಸಂಕಲನವಿದೆ. ಪ್ರಶಾಂತ್ ರಾಜಪ್ಪ ಸಂಭಾಷಣೆ ಬರೆಯುತ್ತಿದ್ದಾರೆ‌.

Categories
ಸಿನಿ ಸುದ್ದಿ

ಲಹರಿ ಮಡಿಲಿಗೆ ಕೆಜಿಎಫ್-2 ಚಿತ್ರದ ಆಡಿಯೋ ಹಕ್ಕು; ಭಾರೀ ಮೊತ್ತಕ್ಕೆ ಖರೀದಿ

ರಾಕಿಂಗ್ ಸ್ಟಾರ್‌ ಯಶ್ ಅಭಿನಯದ, ಹೊಂಬಾಳೆ ಪ್ರೊಡಕ್ಷನ್ಸ್ ಬ್ಯಾನರ್‌ನಲ್ಲಿ ವಿಜಯ್ ಕಿರಂಗದೂರು ಅವರು ನಿರ್ಮಿಸಿರುವ, ಪ್ರಶಾಂತ್ ನೀಲ್ ನಿರ್ದೇಶನದ “ಕೆ.ಜಿ.ಎಫ್-2” ಚಿತ್ರದ ಆಡಿಯೋ ಹಕ್ಕು ಭಾರಿ ಮೊತ್ತಕ್ಕೆ ಮಾರಾಟವಾಗಿದೆ.

ಖ್ಯಾತ ಮ್ಯೂಸಿಕ್ ಸಂಸ್ಥೆ ಲಹರಿ ಈ ಚಿತ್ರದ ಆಡಿಯೋ ಹಕ್ಕನ್ನು ಪಡೆದುಕೊಂಡಿದೆ.
ಹಲವು ಭಾಷೆಗಳಲ್ಲಿ ಕೆ.ಜಿ.ಎಫ್- 2 ಚಿತ್ರ ನಿರ್ಮಾಣವಾಗಿದ್ದು, ರವಿ ಬಸ್ರೂರು ಸಂಗೀತ ನೀಡಿದ್ದಾರೆ. ಎಲ್ಲಾ ಭಾಷೆಯ ಆಡಿಯೋ ಹಕ್ಕನ್ನು ಲಹರಿ‌ ಸಂಸ್ಥೆಯೇ ಖರೀದಿಸಿದೆ ಎಂಬುದು ವಿಶೇಷ.

ಕೆ.ಜಿ.ಎಫ್ 1 ಚಿತ್ರದ ಹಾಡುಗಳು ಸಹ ಲಹರಿ ಸಂಸ್ಥೆ ಮೂಲಕ ಹೊರಬಂದಿತ್ತು. ಗುರುವಾರ ಬೆಳಗ್ಗೆ ಚಿತ್ರದ ನಿರ್ಮಾಪಕ ವಿಜಯ್ ಕಿರಂಗದೂರು ಹಾಗೂ ಲಹರಿ ಸಂಸ್ಥೆ ಮಾಲೀಕರಾದ ಮನೋಹರ್ ನಾಯ್ಡು ಆಡಿಯೋ ಹಕ್ಕು ಒಪ್ಪಂದಕ್ಕೆ ಸಹಿ ಹಾಕಿದ್ದಾರೆ ಎಂದು ಸಂಸ್ಥೆಯ ಮುಖ್ಯಸ್ಥ ಲಹರಿ ವೇಲು ಅವರು ತಿಳಿಸಿದ್ದಾರೆ.

Categories
ಸಿನಿ ಸುದ್ದಿ

ಪುನೀತ್ ರಾಜಕುಮಾರ್‌ ಹೊಸ ಚಿತ್ರ ದ್ವಿತ್ವ; ಪೋಸ್ಟರ್‌ ರಿಲೀಸ್‌ ಮಾಡಿದ ಹೊಂಬಾಳೆ ಫಿಲ್ಮ್ಸ್‌ -ಇದು ಲೂಸಿಯಾ ಪವನ್‌ ಕುಮಾರ್‌ ಸಿನಿಮಾ

ಪುನೀತ್‌ ರಾಜಕುಮಾರ್‌ ಅಭಿನಯದ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಹೌದು, ಪುನೀತ್‌ ಅವರೀಗ “ಜೇಮ್ಸ್‌” ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರದ ಬಳಿಕ ಯಾವ ಸಿನಿಮಾದಲ್ಲಿ ನಟಿಸುತ್ತಾರೆ, ಯಾರು ನಿರ್ದೇಶಕರು ಎಂಬಿತ್ಯಾದಿ ಪ್ರಶ್ನೆಗಳಿದ್ದವು. ಅದಕ್ಕೀಗ ಉತ್ತರ ಸಿಕ್ಕಿದೆ. ಹೌದು, ಪುನೀತ್‌ ರಾಜಕುಮಾರ್‌ ಅಭಿನಯದ ಹೊಸ ಚಿತ್ರದ ಪೋಸ್ಟರ್‌ ಮತ್ತು ಶೀರ್ಷಿಕೆ ಬಿಡುಗಡೆಯಾಗಿದೆ. ಆ ಚಿತ್ರ ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿದೆ. ವಿಶೇಷವೆಂದರೆ, ಇದೇ ಮೊದಲ ಬಾರಿಗೆ “ಲೂಸಿಯಾ” ಖ್ಯಾತಿಯ ಪವನ್‌ಕುಮಾರ್‌ ಅವರು, ಪುನೀತ್‌ರಾಜಕುಮಾರ್‌ ಅವರನ್ನು ನಿರ್ದೇಶಿಸುತ್ತಿದ್ದಾರೆ.

ಆ ಚಿತ್ರಕ್ಕೆ “ದ್ವಿತ್ವ” ಎಂದು ನಾಮಕರಣ ಮಾಡಲಾಗಿದೆ. ಕಥೆ ಮತ್ತು ಚಿತ್ರಕಥೆಯ ಜವಾಬ್ದಾರಿಯನ್ನು ನಿರ್ದೇಶಕ ಪವನ್‌ ಕುಮಾರ್‌ ಅವರೇ ಹೊತ್ತಿದ್ದಾರೆ. ಸದ್ಯಕ್ಕೆ ಹೊಂಬಾಳೆ ಫಿಲ್ಮ್ಸ್‌ ಪೋಸ್ಟರ್‌ ರಿಲೀಸ್‌ ಮಾಡಿದೆ. ನಿರ್ದೇಶಕ ಪವನ್‌ ಕುಮಾರ್‌ ಅವರು, ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟರ್‌ ಹಂಚಿಕೊಂಡಿದ್ದಾರೆ.


ಒಳ್ಳೇಯ ಕಥೆ ಹೇಳಲು ನಾನು ಎದುರು ನೋಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. “ದ್ವಿತ್ವ” ಇದು ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ನಲ್ಲಿ ಪುನೀತ್‌ ರಾಜಕುಮಾರ್‌ಗೆ ಮೂಡಿ ಬರುತ್ತಿರುವ ನಾಲ್ಕನೇ ಸಿನಿಮಾ. ಈ ಹಿಂದೆ “ನಿನ್ನಿಂದಲೇ”, “ರಾಜಕುಮಾರ”, “ಯುವರತ್ನʼ ಚಿತ್ರವನ್ನು ನಿರ್ಮಾಣ ಮಾಡಿತ್ತು. ಈಗ “ದ್ವಿತ್ವ” ಮೂಲಕ ಮತ್ತೊಂದು ಹೊಸ ಬಗೆಯ ಕಥೆ ಇಟ್ಟುಕೊಂಡು ಜನರ ಮುಂದೆ ಬರಲು ಸಜ್ಜಾಗುತ್ತಿದೆ.


ಅಂದಹಾಗೆ, ಈ ಸಿನಿಮಾಗೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡುತ್ತಿದ್ದಾರೆ. ಪ್ರೀತಾ ಜಯರಾಮನ್‌ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಇನ್ನುಳಿದಂತೆ ಬೇರೆ ಕಲಾವಿದರು, ತಾಂತ್ರಿಕ ವರ್ಗದವರ ಆಯ್ಕೆ ಪ್ರಕ್ರಿಯ ನಡೆಯಬೇಕಿದೆ. ಸೆಪ್ಟೆಂಬರ್‌ನಿಂದ ಚಿತ್ರದ ಚಿತ್ರೀಕರಣ ಶುರುವಾಗಲಿದೆ ಎಂದು ಪವನ್‌ ಕುಮಾರ್‌ ಹೇಳಿಕೊಂಡಿದ್ದಾರೆ.

Categories
ಸಿನಿ ಸುದ್ದಿ

ಪ್ರಜ್ವಲ್‌ ಹುಟ್ಟುಹಬ್ಬಕ್ಕೆ ಹೊಸ ಚಿತ್ರದ ಫಸ್ಟ್‌ ಲುಕ್‌ ರಿಲೀಸ್‌ ; ಜುಲೈ4ರಂದು ಪಿಡಿ 35 ತಂಡದ ಸ್ಪೆಷಲ್‌ ಪೋಸ್ಟರ್ ರೆಡಿ

ಜುಲೈ 4 ಡೈನಾಮಿಕ್ ಪ್ರಿನ್ಸ್ ಪ್ರಜ್ವಲ್ ದೇವರಾಜ್ ಹುಟ್ಟುಹಬ್ಬ. ಈ‌‌ ಸಂಭ್ರಮದ ಸವಿನೆನಪಿಗಾಗಿ “PD 35” ಚಿತ್ರತಂಡ ಪ್ರಜ್ವಲ್ ಅವರಿಗೆ ಸರ್ಪ್ರೈಸ್ ಗಿಫ್ಟ್ ನೀಡಲಿದೆ. “PD 35” ಅಂದರೆ, ಪ್ರಜ್ವಲ್ ದೇವರಾಜ್ 35 ಎಂಬ ಅರ್ಥ. ಇದು ಅವರ ಅಭಿನಯದ 35ನೇ ಚಿತ್ರ.
ಅದೇ ದಿನ ಈ ನೂತನ ಚಿತ್ರದ ಫಸ್ಟ್ ಲುಕ್ ಹಾಗೂ ಶೀರ್ಷಿಕೆ ಅನಾವರಣಗೊಳ್ಳಲಿದೆ.

ಬೆಂಗಳೂರು ಕುಮಾರ್ ಫಿಲಂಸ್ ಲಾಂಛನದಲ್ಲಿ ಕುಮಾರ್ ಬಿ ಅವರು ನಿರ್ಮಿಸುತ್ತಿರುವ ಈ‌ ಚಿತ್ರವನ್ನು ಗುರುದತ್ ಗಾಣಿಗ ನಿರ್ದೇಶಿಸುತ್ತಿದ್ದಾರೆ. ಅನೂಪ್ ಸೀಳಿನ್ ಸಂಗೀತ ನೀಡಲಿದ್ದಾರೆ. ಮಾಸ್ತಿ ಸಂಭಾಷಣೆ ಬರೆಯುತ್ತಿದ್ದಾರೆ‌. ಪ್ರಜ್ವಲ್ ದೇವರಾಜ್ ಅವರಿಗೆ ನಾಯಕಿಯಾಗಿ ಅದಿತಿ‌ ಪ್ರಭುದೇವ ನಟಿಸುತ್ತಿದ್ದಾರೆ.

error: Content is protected !!