ಒಂದು ಸಿನಿಮಾ ಅಂದಮೇಲೆ ಒಂದಲ್ಲ ಒಂದು ಸ್ಫೂರ್ತಿ ಇದ್ದೇ ಇರುತ್ತೆ. ಹಾಲಿವುಡ್, ಬಾಲಿವುಡ್, ಕಾಲಿವುಡ್, ಟಾಲಿವುಡ್ ಹೀಗೆ ಬೇರೆ ಬೇರೆ ಚಿತ್ರರಂಗದಲ್ಲಿ ಬಂದು ಹೋಗಿರುವ ಅದೆಷ್ಟೋ ಕಥೆಯ ಎಳೆ ಇಟ್ಟುಕೊಂಡು ಕನ್ನಡದಲ್ಲಿ ಸಿನಿಮಾ ಮಾಡಿರುವ ಉದಾಹರಣೆಗಳಿವೆ. ಇನ್ನೂ ಕೆಲವರು ಗೊತ್ತಾಗದಂತೆ ಹಾಲಿವುಡ್ ಕಥೆಗಳನ್ನೇ ಕದ್ದು ಕನ್ನಡದಲ್ಲಿ ಸಿನಿಮಾ ಮಾಡಿರುವುದೂ ಗೊತ್ತಿದೆ. ಇಲ್ಲಿ ಕಥೆ ಮಾತ್ರವಲ್ಲ, ಬೇರೆ ಭಾಷೆಯ ಪೋಸ್ಟರ್‌ಗಳನ್ನೂ ನಕಲಿ ಮಾಡಿದ ಉದಾಹರಣೆಗಳೂ ಸಾಕಷ್ಟಿವೆ. ಈಗ ಇಲ್ಲೇಕೆ “ನಕಲಿ” ಪೋಸ್ಟರ್‌ಗಳ ಬಗ್ಗೆ ಮಾತು ಅಂತೀರಾ. ಪುನೀತ್ ರಾಜಕುಮಾರ್ ಅವರಿಗೆ ಹೊಂಬಾಳೆ ಫಿಲ್ಮ್ಸ್ ಬ್ಯಾನರ್‌ನಲ್ಲಿ ನಿರ್ದೇಶಕ ಲೂಸಿಯಾ ಪವನ್‌ಕುಮಾರ್ ಅವರು, “ದ್ವಿತ್ವ” ಸಿನಿಮಾ ಮಾಡುತ್ತಿರುವ ಬಗ್ಗೆ ತಮ್ಮ ಫೇಸ್‌ಬುಕ್ ಮತ್ತು ಟ್ವಿಟ್ಟರ್ ಖಾತೆಯಲ್ಲಿ ಹಂಚಿಕೊಂಡಿದ್ದರು. ಅಲ್ಲಿ ವಿಶೇಷ ಎನಿಸುವ ಪೋಸ್ಟರ್ ಕೂಡ ಹಾಕಿದ್ದರು. ಆ ವಿಭಿನ್ನ ಎನಿಸುವ ಪೋಸ್ಟರ್ ನೋಡಿದವರಿಗೂ ಒಂದು ರೀತಿ ಖುಷಿಯಾಗಿತ್ತು. ಪವನ್‌ಕುಮಾರ್, ಸದಾ ಹೊಸದೇನನ್ನೋ ಮಾಡುತ್ತಾರೆ ಎಂದು ಹೇಳುವ ಮಂದಿಗೆ, ಆ ಪೋಸ್ಟರ್ ನೋಡಿದೊಡನೆ, ಇಲ್ಲೇನೋ ಹೊಸದು ಇದ್ದೇ ಇರುತ್ತೆ ಎಂದೆನಿಸಿದ್ದು ಸುಳ್ಳಲ್ಲ.
ಪುನೀತ್ ರಾಜಕುಮಾರ್ ಅಭಿನಯದ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆಗೆ ಉತ್ತರ ಸಿಕ್ಕಿದ್ದೇನೋ ನಿಜ. “ದ್ವಿತ್ವ” ಚಿತ್ರದ ಕಥೆ ಮತ್ತು ಚಿತ್ರಕಥೆಯ ಜವಾಬ್ದಾರಿ ಹೊತ್ತಿರುವ ನಿರ್ದೇಶಕ ಪವನ್ ಕುಮಾರ್, ಒಂದು ಪೋಸ್ಟರ್ ಡಿಸೈನ್ ಮಾಡಿ, ಆ ಬಗ್ಗೆ ಬರೆದುಕೊಂಡಿದ್ದರು. ಅಲ್ಲದೆ, ಪೋಸ್ಟರ್ ಡಿಸೈನ್ ಬಗ್ಗೆ ಎಲ್ಲೆಡೆಯಿಂದ ಒಳ್ಳೆಯ ಮೆಚ್ಚುಗೆ ಬಂದಿದ್ದರಿಂದ, ಪವನ್ ಕುಮಾರ್ ಅವರು, ಆ ಡಿಸೈನ್ ಮಾಡಿದ್ದರ ಬಗ್ಗೆಯೂ ಸೋಶಿಯಲ್ ಮೀಡಿಯಾದಲ್ಲಿ ಹೇಳಿಕೊಂಡಿದ್ದರು. “ದ್ವಿತ್ವ” ಚಿತ್ರದ ಪೋಸ್ಟರ್ ಡಿಸೈನ್ ಮಾಡಿದ್ದು, ಆದರ್ಶ್ ಅಂತ. ಅವರು ಲೂಸಿಯಾ ಟೈಮ್‌ನಿಂದಲೂ ಜೊತೆಗಿದ್ದಾರೆ. ಒಂದೊಳ್ಳೆಯ ಡಿಸೈನ್ ಮಾಡಿದ್ದಾರೆ. ಅವರು ಯು ಟರ್ನ್, ಒಂದು ಮೊಟ್ಟೆಯ ಕಥೆ ಚಿತ್ರಗಳಲ್ಲೂ ಜೊತೆಯಾಗಿದ್ದರು ಈಗ “ದ್ವಿತ್ವ” ಪೋಸ್ಟರ್ ಮಾಡಿದ್ದಾರೆ ಅಂತ ಡಿಸೈನರ್ ಆದರ್ಶ್ ಅವರ ಕ್ರಿಯೇಟ್ ಬಗ್ಗೆ ಹೇಳಿಕೊಂಡಿದ್ದಾರೆ. ಆದರೆ, ಅಸಲಿಗೆ, ಆ ಪೋಸ್ಟರ್ ಡಿಸೈನರ್ ಆದರ್ಶ್ ಮಾಡಿದ್ದು ಕೂಡ ಕಾಪಿ! ಹೌದು, ಈಗಾಗಲೇ ಎಲ್ಲೆಡೆ ಸೋಶಿಯಲ್ ಮೀಡಿಯಾದಲ್ಲಿ ಹರಿದಾಡುತ್ತಿರುವ ಬಿಸಿ ಬಿಸಿ ಸುದ್ದಿ ಇದು.
ಯಾರೋ ಮಾಡಿದ ಡಿಸೈನ್ ಇಟ್ಟುಕೊಂಡು ಆದರ್ಶ, ಪುನೀತ್ ಅವರ ಫೋಟೋ ಬಳಸಿ ಮಾಡಿದ್ದಾರೆ. ಮೂಲ ಪೋಸ್ಟರ್ ಹಾಕಿ ಪೋಸ್ಟ್ ಮಾಡಿರುವ ನೆಟ್ಟಿಗರು, ಸಾಕಷ್ಟು ಕಾಮೆಂಟ್ ಮಾಡುತ್ತಿದ್ದಾರೆ. ಅಷ್ಟಕ್ಕೂ ಆ ಪೋಸ್ಟ್ ಯಾವುದು ಗೊತ್ತಾ?
ದ್ವಿತ್ವ ಪೋಸ್ಟರ್ ಹೋಲುವಂತೆ ವೈರಲ್ ಆಗಿರುವ ಫೋಟೋ ಸೌಂಡ್‌ಕ್ಲೌಡ್ ಎಂಬ ಪಾಡ್‌ಕಾಸ್ಟ್ ವೆಬ್‌ಸೈಟ್‌ನಲ್ಲಿ ಕಾಣಿಸಿಕೊಂಡಿದೆ. ಇದೊಂದು ಮ್ಯೂಸಿಕ್ ಮತ್ತು ಆಡಿಯೋ ಪ್ಲಾಟ್‌ಫಾರ್ಮ್ ಆಗಿದ್ದು, ಇದರಲ್ಲಿ ನೀಡಿರುವ ಜಾಹೀರಾತಿನಲ್ಲಿ ಈ ಫೋಟೋ ಡಿಸೈನ್ ಇದೆ. ಥೇಟ್ ದ್ವಿತ್ವ ಚಿತ್ರದ ಪೋಸ್ಟರ್‌ನಂತೆ ಇದೆ. ಸದ್ಯಕ್ಕೆ ಈ ಪೋಸ್ಟರ್ ಸಾಕಷ್ಟು ಸುದ್ದಿಯಾಗಿದೆ.
ಫೇಸ್‌ಬುಕ್‌ನಲ್ಲಿ ಸಿನಿಪ್ರೇಮಿ ಹರೀಶ್ ಗೌಡ ಎನ್ನುವವರು, “ಡಿಸೈನ್ ಕಾಪಿ ಆದ್ರೂ ಪರವಾಗಿಲ್ಲ, ಸಿನಿಮಾ ಒರಿಜಿಲ್ ಆಗಿರ್ಲಿ” (ಡೈರೆಕ್ಟ್ರು ಬುದ್ಧಿವಂತಿಕೆಯಿಂದ ನಿನ್ನೆನೆ ಪೋಸ್ಟರ್ ಡಿಸೈನ್ ಪೂರ್ತಿ ಕ್ರೆಡಿಟ್‌ನ ಡಿಸೈನರ್‌ಗೆ ಕೊಟ್ಟಿದ್ದಾರೆ) ಎಂದು ಬರೆದುಕೊಂಡಿದ್ದಾರೆ. ಅದೇನೆ ಇರಲಿ, ಕಾಪಿ ಮಾಡೋದು ತಪ್ಪೋ, ಸರಿನಾ ಗೊತ್ತಿಲ್ಲ. ಪವನ್‌ಕುಮಾರ್ ಕಥೆ ಚೆನ್ನಾಗಿ ಕಟ್ಟಿಕೊಟ್ಟರೆ ಸಾಕು ಅನ್ನೋದು ಅಪ್ಪು ಫ್ಯಾನ್ಸ್ ಮಾತು. ಅಂದಹಾಗೆ, ಈ ಸಿನಿಮಾಗೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡುತ್ತಿದ್ದಾರೆ. ಪ್ರೀತಾ ಜಯರಾಮನ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಇನ್ನುಳಿದಂತೆ ಬೇರೆ ಕಲಾವಿದರು, ತಾಂತ್ರಿಕ ವರ್ಗದವರ ಆಯ್ಕೆ ಪ್ರಕ್ರಿಯ ನಡೆಯಬೇಕಿದೆ. ಸೆಪ್ಟೆಂಬರ್‌ನಿಂದ ಚಿತ್ರದ ಚಿತ್ರೀಕರಣ ಶುರುವಾಗಲಿದೆ.