ಕನ್ನಡದಲ್ಲಿ ವರ್ಷ ಕಳೆದಂತೆ ಹೊಸಬರ ಆಗಮನವಾಗುತ್ತಲೇ ಇದೆ. ಆ ಸಾಲಿಗೆ ಈಗ “ಕಪೋ ಕಲ್ಪಿತ” ಚಿತ್ರವೂ ಸೇರಿದೆ. ಇದು ಬಹುತೇಕ ಹೊಸಬರೇ ಸೇರಿ ಮಾಡಿರುವ ಸಿನಿಮಾ. ಈಗಾಗಲೇ ಸದ್ದಿಲ್ಲದೆಯೇ ಚಿತ್ರೀಕರಣ ಮುಗಿಸಿರುವ ಚಿತ್ರತಂಡ, ಈಗ ಸೆನ್ಸಾರ್ ಅಂಗಳದಲ್ಲಿರುವ ಚಿತ್ರ ಸೆನ್ಸಾರ್ ಬಳಿಕ ರಿಲೀಸ್ ಆಗಲಿದೆ. ಇತ್ತೀಚೆಗೆ ಚಿತ್ರದ ಟ್ರೇಲರ್ ಬಿಡುಗಡೆಯಾಯಿತು.
ಈ ಚಿತ್ರಕ್ಕೆ ಸುಮಿತ್ರಾ ರಮೇಶ್‌ಗೌಡ ನಾಯಕಿ ಮತ್ತು ನಿರ್ದೇಶಕಿ. ತಮ್ಮ ಚೊಚ್ಚಲ ಅನುಭವ ಕುರಿತು ಹೇಳಿಕೊಂಡ ಸುಮಿತ್ರಾ, “ನಾನಿಲ್ಲಿ ಪತ್ರಕರ್ತೆಯಾಗಿ ಕಾಣಿಸಿಕೊಂಡಿದ್ದೇನೆ. ಶೀರ್ಷಿಕೆಯು ಸಂಸ್ಕ್ರತ ಪದವಾಗಿದೆ. ಸ್ವಯಂ ಕಲ್ಪನೆ ಎಂಬುದು ಇದರ ಅರ್ಥ ಕೊಡುತ್ತದೆ. ಅಂದರೆ ಒಂದು ವಿಷಯವು ಒಬ್ಬರಿಂದ ಮತ್ತೊಬ್ಬರಿಗೆ ತಲುಪುವಾಗ ಇನ್ನೇನೋ ಸೇರಿಕೊಂಡಾಗ ಅದು ಸಂಶಯಕ್ಕೆ ಆಸ್ಪದ ಮಾಡಿಕೊಡುತ್ತದೆ. ಹೀಗಾಯಿತಂತೆ, ಹಾಗಾಯಿತಂತೆ, ಹಾಗೆ, ಹೀಗೆ ಅಂತೆಲ್ಲಾ ಸುದ್ದಿಗಳು ಹರಿದಾಡುತ್ತವೆ. ಆ ಕುರಿತಂತೆ ಇರುವ ಶೀರ್ಷಿಕೆ ಇದು.
ಅಂದಹಾಗೆ, ಇದೊಂದು ಹಾರರ್ ಕಥೆ ಹೊಂದಿರುವ ಸಿನಿಮಾ. ಯುವಕರ ತಂಡವೊಂದು ದೂರದ ಮನೆಗೆ ಹೋಗುತ್ತೆ. ಅಲ್ಲಿ ಭೂತವಿದೆ ಅಂತ ತಿಳಿದು ಅದರಿಂದ ಹೇಗೆ ತಪ್ಪಿಸಿಕೊಂಡು ಹೊರಗೆ ಬರುತ್ತಾರೆ ಎನ್ನುವುದು ಚಿತ್ರದ ಕಥಾಹಂದರ.
ಮಂಡ್ಯ ಮೂಲದ ಸುಮಿತ್ರಾ ರಮೇಶ್‌ಗೌಡ, ಈ ಹಿಂದೆ ’ಜಿಷ್ಣು’ ಸಿನಿಮಾದಲ್ಲಿ ಪಾತ್ರ ಮಾಡುವ ಜೊತೆಗೆ ಸಹಾಯಕ ನಿರ್ದೇಶಕಿಯಾಗಿ ಕೆಲಸ ಮಾಡಿದ್ದರು. ಆ ಅನುಭವ ಪಡೆದು ಈಗ ನಿರ್ದೇಶಕಿಯಾಗಿದ್ದಾರೆ.
ಕಿರುತೆರೆ ನಟ ಮತ್ತು ಸಣ್ಣ ಪುಟ್ಟ ಪಾತ್ರದಲ್ಲಿ ಅಭಿನಯಿಸಿದ್ದ ಪ್ರೀತಂ ಮಕ್ಕಿಹಾಲಿ ನಾಯಕರಾಗಿದ್ದಾರೆ. ನಿವೃತ್ತ ಪೋಲೀಸ್ ಅಧಿಕಾರಿಯಾಗಿ ಸಂದೀಪ್ ಮಲಾನಿ, ನಿರೂಪಕರಾಗಿ ಗೌರೀಶ್ ಅಕ್ಕಿ. ಉಳಿದಂತೆ ಶಿವರಾಜ್ ಕರ್ಕೆರ, ರಾಜೇಶ್ ಕಣ್ಣೂರ್, ವಿನೀತ್, ವಿಶಾಲ್, ಅಮೋಘ್, ಚೈತ್ರಾ ದೀಕ್ಷಿತ್‌ಗೌಡ ಇತರರು ನಟಿಸಿದ್ದಾರೆ. ಚಿತ್ರದ ಕಥೆ, ಚಿತ್ರಕಥೆ, ಸಂಭಾಷಣೆ, ಸಾಹಿತ್ಯ, ಸಂಗೀತ ಮತ್ತು ನಿರ್ಮಾಣದಲ್ಲಿ ಮಂಗಳೂರಿನ ಗಣಿದೇವ್ ಕಾರ್ಕಳ ಸಾಥ್ ನೀಡಿದ್ದಾರೆ.
ಬಾತುಕುಲಾಲ್ ಅವರ ಛಾಯಾಗ್ರಹಣ ಮತ್ತು ಸಂಕಲನವಿದೆ. ದಕ್ಷಿಣ ಕನ್ನಡ, ಉಡುಪಿ ಸೇರಿದಂತೆ ಇತರೆ ಸುಂದರ ತಾಣಗಳಲ್ಲಿ ಚಿತ್ರೀಕರಣ ನಡೆಸಲಾಗಿದೆ. ಮಗಳ ಮೇಲಿನ ಪ್ರೀತಿಗೆ ಅವರ ಪ್ರತಿಭೆ ಹೊರಸೂಸಲು ರಮೇಶ್‌ಚಿಕ್ಕೆಗೌಡ ಸವ್ಯಾಚಿ ಕ್ರಿಯೇಶನ್ಸ್ ಮೂಲಕ ಅಕ್ಷರ ಪ್ರೊಡಕ್ಷನ್ ಸಹಯೋಗದೊಂದಿಗೆ ಹಣ ಹಾಕಿದ್ದಾರೆ. ಇವರ ಜೊತೆ ಕವಿತಾ ಕನ್ನಿಕಾ ಪೂಜಾರಿ ಸಾಥ್ ಕೊಟ್ಟಿದ್ದಾರೆ.