ಸಂಚಾರಿ ವಿಜಯ್ ಅವರ ಆಸೆ ಈಡೇರಿಸಲು ಕವಿರಾಜ್ ನೇತೃತ್ವದ ‘ಉಸಿರು’ ತಂಡ ಸಿದ್ದವಾಗಿದೆ.
ಹೌದು, ‘ಉಸಿರು’ ಬಳಗದ ವತಿಯಿಂದ ಆ ಬಳಗದಲ್ಲಿದ್ದ ಸಂಚಾರಿ ವಿಜಯ್ ಅವರ ಆಶಯದ ಅಪೂರ್ಣ ಕಾರ್ಯಗಳಲ್ಲೊಂದಾದ ನಾಗರಹೊಳೆ ವಲಯದ ಬುಡಕಟ್ಟು ಜನಾಂಗದ ಹಾಡಿ ಮನೆಗಳ ಶಿಥಿಲ ಮೇಲ್ಚಾವಣಿಗಳಿಗೆ ಟಾರ್ಪಾಲಿನ್ ಹೊದಿಕೆ ಹೊದಿಸುವ ಕಾರ್ಯಕ್ಕೆ ಸಕಲ ಸಿದ್ಧತೆಯನ್ನು ಉಸಿರು ಬಳಗ ಮಾಡಿಕೊಂಡಿದೆ.
ಈ ಕುರಿತಂತೆ ಕವಿರಾಜ್ ಸ್ಪಷ್ಟಪಡಿಸಿದ್ದಾರೆ. ಆ ಕುರಿತು ಹೇಳುವ ಕವಿರಾಜ್, ‘ಈಗಾಗಲೇ ಟಾರ್ಪಾಲಿನ್ ಕಂಪೆನಿಯವರನ್ನೇ ಕರೆದುಕೊಂಡು ಹೋಗಿ ಅಳತೆ ಪಡೆದು ಬಂದ 60 ಮನೆಗಳ ಪಟ್ಟಿಗೆ ತಕ್ಕಂತೆ ಟಾರ್ಪಾಲಿನ್ ಕಟ್ ಮಾಡಿಸಿ ಹುಕ್ಸ್ ಹಾಕಿಸಿ ಹೊಲಿಸಿ ಕಂಪೆನಿಯ ನುರಿತ ಕೆಲಸಗಾರರರನ್ನೇ ಕರೆದುಕೊಂಡು ಹೋಗಿ ಬಹಳ ವ್ಯವಸ್ಥಿತವಾಗಿ ಗಟ್ಟಿ ಮುಟ್ಟಾಗಿ ಅವನ್ನು ಅಳವಡಿಸಿ ಬರುವ ಕಾರ್ಯಕ್ರಮ ಈ ಶನಿವಾರ ಮತ್ತು ಭಾನುವಾರ ಹಮ್ಮಿಕೊಂಡಿದ್ದೇವೆ. ಅದೇ ಜಾಗದಲ್ಲೇ ವಿಜಯ್ ಅವರಿಗೆ ಗೌರವ ನಮನ ಸಲ್ಲಿಸುವ ಪುಟ್ಟ ಕಾರ್ಯಕ್ರಮವು ನಡೆಯಲಿದೆ.
ಬಹುತೇಕ ನಮ್ಮ ಉಸಿರು ಬಳಗ ಅಲ್ಲಿ ಭಾಗವಹಿಸಲಿದೆ ಎಂದು ಹೇಳಿರುವ ಅವರು,
ಈ ಸಿದ್ದತೆಯ ಸಾರಥ್ಯ ವಹಿಸಿದ್ದ ನಮ್ಮ ‘ಪವನ್ ದರೆಗುಂಡಿ ಹಾಗೂ ಅವರೊಂದಿಗೆ ಸಹಕರಿಸಿದ ಮಾದೇಶ್ ಗೌಡ್ರು, ಶ್ರೀ ಹರ್ಷ , ಚಿನ್ಮಯ್ ಹಾಗೆಯೇ ಫಂಡಿಂಗ್ ವಿಚಾರದಲ್ಲಿ ಸಹಕರಿಸಿದ ಅರುಂಧತಿ ದೇವನಹಳ್ಳಿ ಅವರ ಕಾರ್ಯ ಶ್ಲಾಘನೀಯ ಎಂದಿದ್ದಾರೆ ಕವಿರಾಜ್.