ಪುನೀತ್ ರಾಜಕುಮಾರ್‌ ಹೊಸ ಚಿತ್ರ ದ್ವಿತ್ವ; ಪೋಸ್ಟರ್‌ ರಿಲೀಸ್‌ ಮಾಡಿದ ಹೊಂಬಾಳೆ ಫಿಲ್ಮ್ಸ್‌ -ಇದು ಲೂಸಿಯಾ ಪವನ್‌ ಕುಮಾರ್‌ ಸಿನಿಮಾ

ಪುನೀತ್‌ ರಾಜಕುಮಾರ್‌ ಅಭಿನಯದ ಮುಂದಿನ ಸಿನಿಮಾ ಯಾವುದು ಎಂಬ ಪ್ರಶ್ನೆಗೆ ಈಗ ಉತ್ತರ ಸಿಕ್ಕಿದೆ. ಹೌದು, ಪುನೀತ್‌ ಅವರೀಗ “ಜೇಮ್ಸ್‌” ಸಿನಿಮಾದಲ್ಲಿ ನಟಿಸುತ್ತಿದ್ದಾರೆ. ಆ ಚಿತ್ರದ ಬಳಿಕ ಯಾವ ಸಿನಿಮಾದಲ್ಲಿ ನಟಿಸುತ್ತಾರೆ, ಯಾರು ನಿರ್ದೇಶಕರು ಎಂಬಿತ್ಯಾದಿ ಪ್ರಶ್ನೆಗಳಿದ್ದವು. ಅದಕ್ಕೀಗ ಉತ್ತರ ಸಿಕ್ಕಿದೆ. ಹೌದು, ಪುನೀತ್‌ ರಾಜಕುಮಾರ್‌ ಅಭಿನಯದ ಹೊಸ ಚಿತ್ರದ ಪೋಸ್ಟರ್‌ ಮತ್ತು ಶೀರ್ಷಿಕೆ ಬಿಡುಗಡೆಯಾಗಿದೆ. ಆ ಚಿತ್ರ ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ನಲ್ಲಿ ನಿರ್ಮಾಣವಾಗುತ್ತಿದೆ. ವಿಶೇಷವೆಂದರೆ, ಇದೇ ಮೊದಲ ಬಾರಿಗೆ “ಲೂಸಿಯಾ” ಖ್ಯಾತಿಯ ಪವನ್‌ಕುಮಾರ್‌ ಅವರು, ಪುನೀತ್‌ರಾಜಕುಮಾರ್‌ ಅವರನ್ನು ನಿರ್ದೇಶಿಸುತ್ತಿದ್ದಾರೆ.

ಆ ಚಿತ್ರಕ್ಕೆ “ದ್ವಿತ್ವ” ಎಂದು ನಾಮಕರಣ ಮಾಡಲಾಗಿದೆ. ಕಥೆ ಮತ್ತು ಚಿತ್ರಕಥೆಯ ಜವಾಬ್ದಾರಿಯನ್ನು ನಿರ್ದೇಶಕ ಪವನ್‌ ಕುಮಾರ್‌ ಅವರೇ ಹೊತ್ತಿದ್ದಾರೆ. ಸದ್ಯಕ್ಕೆ ಹೊಂಬಾಳೆ ಫಿಲ್ಮ್ಸ್‌ ಪೋಸ್ಟರ್‌ ರಿಲೀಸ್‌ ಮಾಡಿದೆ. ನಿರ್ದೇಶಕ ಪವನ್‌ ಕುಮಾರ್‌ ಅವರು, ತಮ್ಮ ಫೇಸ್‌ಬುಕ್‌ ಖಾತೆಯಲ್ಲಿ ಪೋಸ್ಟರ್‌ ಹಂಚಿಕೊಂಡಿದ್ದಾರೆ.


ಒಳ್ಳೇಯ ಕಥೆ ಹೇಳಲು ನಾನು ಎದುರು ನೋಡುತ್ತಿದ್ದೇನೆ ಎಂದು ಬರೆದುಕೊಂಡಿದ್ದಾರೆ. “ದ್ವಿತ್ವ” ಇದು ಹೊಂಬಾಳೆ ಫಿಲ್ಮ್ಸ್‌ ಬ್ಯಾನರ್‌ನಲ್ಲಿ ಪುನೀತ್‌ ರಾಜಕುಮಾರ್‌ಗೆ ಮೂಡಿ ಬರುತ್ತಿರುವ ನಾಲ್ಕನೇ ಸಿನಿಮಾ. ಈ ಹಿಂದೆ “ನಿನ್ನಿಂದಲೇ”, “ರಾಜಕುಮಾರ”, “ಯುವರತ್ನʼ ಚಿತ್ರವನ್ನು ನಿರ್ಮಾಣ ಮಾಡಿತ್ತು. ಈಗ “ದ್ವಿತ್ವ” ಮೂಲಕ ಮತ್ತೊಂದು ಹೊಸ ಬಗೆಯ ಕಥೆ ಇಟ್ಟುಕೊಂಡು ಜನರ ಮುಂದೆ ಬರಲು ಸಜ್ಜಾಗುತ್ತಿದೆ.


ಅಂದಹಾಗೆ, ಈ ಸಿನಿಮಾಗೆ ಪೂರ್ಣಚಂದ್ರ ತೇಜಸ್ವಿ ಸಂಗೀತ ನೀಡುತ್ತಿದ್ದಾರೆ. ಪ್ರೀತಾ ಜಯರಾಮನ್‌ ಅವರ ಛಾಯಾಗ್ರಹಣ ಚಿತ್ರಕ್ಕಿದೆ. ಇನ್ನುಳಿದಂತೆ ಬೇರೆ ಕಲಾವಿದರು, ತಾಂತ್ರಿಕ ವರ್ಗದವರ ಆಯ್ಕೆ ಪ್ರಕ್ರಿಯ ನಡೆಯಬೇಕಿದೆ. ಸೆಪ್ಟೆಂಬರ್‌ನಿಂದ ಚಿತ್ರದ ಚಿತ್ರೀಕರಣ ಶುರುವಾಗಲಿದೆ ಎಂದು ಪವನ್‌ ಕುಮಾರ್‌ ಹೇಳಿಕೊಂಡಿದ್ದಾರೆ.

Related Posts

error: Content is protected !!