ಗೋಲ್ಡನ್‌ ಸ್ಟಾರ್‌ ಹುಟ್ಟುಹಬ್ಬಕ್ಕೆ ಪ್ರಶಾಂತ್‌ ರಾಜ್‌ ಸಿನಿಮಾ ಗಿಫ್ಟ್‌ ; ಕ್ರೈಮ್‌ ಥ್ರಿಲ್ಲರ್‌ ಸ್ಟೋರಿಗೆ ಮಳೆ ಹುಡುಗ ಮಾಸ್ ಹೀರೋ

ಗೋಲ್ಡನ್‌ ಸ್ಟಾರ್‌ ಗಣೇಶ್‌ಗೆ ಇಂದು (ಜುಲೈ ೨) ಹುಟ್ಟುಹಬ್ಬದ ಸಂಭ್ರಮ. ಹಾಗಂತ ಅವರು ಎಂದಿನಂತೆ ಈ ಬಾರಿ ಅದ್ಧೂರಿಯಾಗಿ ಹುಟ್ಟುಹಬ್ಬದ ಸಂಭ್ರಮವನ್ನು ಆಚರಿಸಿಕೊಂಡಿಲ್ಲ. ಕಾರಣ, ಕೊರೊನಾ. ಕೊರೊನಾ ಹಿನ್ನೆಲೆಯಲ್ಲಿ ಅವರು ಸರಳವಾಗಿಯೇ, ಕುಟುಂಬದವರ ಜೊತೆ ಹುಟ್ಟುಹಬ್ಬ ಆಚರಿಸಿಕೊಂಡಿದ್ದಾರೆ. ಕಳೆದ ಎರಡು ದಿನಗಳ ಹಿಂದೆಯೇ ಅವರು, ತಮ್ಮ ಫೇಸ್‌ಬುಕ್‌ ಖಾತೆ ಹಾಗೂ ಟ್ವಿಟ್ಟರ್‌ನಲ್ಲಿ ಪೋಸ್ಟ್‌ವೊಂದನ್ನು ಹಾಕಿ, ಈ ಬಾರಿ ಹುಟ್ಟುಹಬ್ಬದ ಸಂಭ್ರಮ ಸರಳವಾಗಿರಲಿದೆ. ಕೊರೊನಾ ಹಿನ್ನೆಲೆಯಲ್ಲಿ ಅಭಿಮಾನಿಗಳು ಇದ್ದಲ್ಲೇ ಶುಭಾಶಯಗಳನ್ನು ತಿಳಿಸಿ ಎಂದು ಮನವಿ ಮಾಡಿದ್ದರು. ಅದರಂತೆಯೇ, ಅವರ ಅಪಾರ ಅಭಿಮಾನಿಗಳು, ಫೇಸ್‌ಬುಕ್‌ ಮೂಲಕ ಶುಭಕೋರಿದ್ದಾರೆ.

ಇನ್ನು, ಗಣೇಶ್‌ ಹುಟ್ಟುಹಬ್ಬದ ಹಿನ್ನಲೆಯಲ್ಲಿ “ತ್ರಿಬಲ್‌ ರೈಡ್”‌, “ಗಾಳಿಪಟ ೨” ಚಿತ್ರಗಳು ಪೋಸ್ಟರ್‌ ರಿಲೀಸ್‌ ಮಾಡಿದರೆ, ಸಿಂಪಲ್‌ ಸುನಿ ಅವರು “ದಿ ಸ್ಟೋರಿ ಅಫ್ ರಾಯಗಢ” ಚಿತ್ರದ ಪೋಸ್ಟರ್‌ ರಿಲೀಸ್‌‌ ಮಾಡಲು ಅಣಿಯಾಗಿದ್ದಾರೆ. ಈ ನಡುವೆ ಗಣೇಶ್‌ ಅವರನ್ನು ಹೊಸ ಗೆಪಟ್‌ನಲ್ಲಿ ಕಾಣಬೇಕು ಅಂತ ಅವರ ಅಭಿಮಾನಿಗಳು ಕಾಯುತ್ತಿದ್ದರು. ಅದಕ್ಕೆ ತಕ್ಕಂತೆಯೇ ನಿರ್ದೇಶಕ ಪ್ರಶಾಂತ್ ರಾಜ್ ಕೂಡ ಸರ್ಪ್ರೈಸ್ ಸುದ್ದಿ ನೀಡಿದ್ದಾರೆ. ಗಣೇಶ್‌ ಹುಟ್ಟುಹಬ್ಬದ ಹಿನ್ನೆಲೆಯಲ್ಲಿ, ಹೊಸ ಚಿತ್ರ ಘೋಷಣೆ ಮಾಡಿದ್ದಾರೆ. ಅದೊಂದು ಕ್ರೈಂ-ಥ್ರಿಲ್ಲಿಂಗ್ ಸ್ಟೋರಿ ಹೊಂದಿದ್ದು, ಗಣೇಶ್‌ ವಿಶೇಷ ಪಾತ್ರದಲ್ಲಿ ಕಾಣಿಸಿಕೊಳ್ಳುತ್ತಿದ್ದಾರೆ ಎಂದು ಹೇಳಿದ್ದಾರೆ. 

ಸಾಮಾನ್ಯವಾಗಿ ಗಣೇಶ್ ಅವರ ಸಿನಿಮಾಗಳೆಂದರೆ, ಲವ್‌ ಸ್ಟೋರಿ ಹೆಚ್ಚು. ಬಹುತೇಕ ರೊಮ್ಯಾಂಟಿಕ್ ಕಾಮಿಡಿ ಕಥೆಗಳಲ್ಲಿ ಕಾಣಿಸಿಕೊಂಡಿರುವ ಅವರು, ಈಗ ಕ್ರೈಂ ಥ್ರಿಲ್ಲರ್ ಕಥೆ ಹಿಂದೆ ಬರಲು ಸಜ್ಜಾಗಿದ್ದಾರೆ. ಇದು ಸಹಜವಾಗಿಯೇ ಅವರ ಅಭಿಮಾನಿಗಳಿಗೆ ಖುಷಿ ಕೊಟ್ಟಿದೆ. ಪ್ರೊಡಕ್ಷನ್ ನಂ 7 ಹೆಸರಿನಲ್ಲಿ ಹುಟ್ಟು ಹಬ್ಬದ ವಿಶೇಷವಾಗಿ ಪೋಸ್ಟರ್ ಮಾತ್ರ ಬಿಡುಗಡೆಯಾಗಿದೆ. ಸದ್ಯದಲ್ಲೇ ಚಿತ್ರದ ಟೈಟಲ್ ಸೇರಿದಂತೆ ಇನ್ನುಳಿದ ಮಾಹಿತಿಗಳನ್ನು ಹಂಚಿಕೊಳ್ಳಲಿದ್ದಾರಂತೆ. ನಿರ್ದೇಶಕ ಪ್ರಶಾಂತ್ ರಾಜ್ ಮತ್ತು ಗಣೇಶ್ ಕಾಂಬಿನೇಷನ್‌ನಲ್ಲಿ ಈಗಾಗಲೇ ಎರಡು ಸಿನಿಮಾ ಬಂದಿದೆ. ಇದು ಮೂರನೇ ಚಿತ್ರ. 2016ರಲ್ಲಿ ‘ಜೂಮ್’ ಹಾಗೂ 2018ರಲ್ಲಿ ‘ಆರೆಂಜ್’ ಚಿತ್ರ ಮಾಡಿದ್ದರು. ಈಗ ಕ್ರೈಮ್‌ ಥ್ರಿಲ್ಲರ್.‌ ಜೊತೆಗೆ ಮಾಸ್‌ ಎಲಿಮೆಂಟ್ಸ್‌ ಕೂಡ ಇರಲಿದೆ.

Related Posts

error: Content is protected !!