Categories
ಸಿನಿ ಸುದ್ದಿ

ಒಗ್ಗಟ್ಟಿನ ಮಂತ್ರ ಜಪಿಸಿದ ಗಂಧದಗುಡಿಯ ಅಭಿಮಾನಿ ಬಳಗ…ಫ್ಯಾನ್ಸ್ ವಾರ್ ಗೆ ಫುಲ್ ಸ್ಟಾಪ್ ಇಟ್ಟ ಫ್ಯಾನ್ಸ್…!

ಗಂಧದಗುಡಿ ಅಂಗಳದಲ್ಲೀಗ ಹೊಸ ಬೆಳವಣಿಗೆಯೊಂದು ನಡೆಯುತ್ತಿದೆ. ಈ ಬೆಳವಣಿಗೆ ಇಡೀ ಕನ್ನಡ ಸಿನಿಪ್ರಿಯರಿಗೆ ಖಂಡಿತ ಖುಷಿ ಕೊಡುತ್ತೆ. ಅಂತಹ ಬೆಳವಣಿಗೆ ಏನು ಅಂತಾ ಬಾಯಮೇಲೆ ಬೆರಳಿಡಬೇಡಿ. ಇಡೀ ಕನ್ನಡ ಅಭಿಮಾನಿದೇವರುಗಳು ಒಗ್ಗಟ್ಟಿನ ಮಂತ್ರ ಜಪಿಸ್ತಿದೆ

ಹೌದು.. ಕನ್ನಡದ ರಾಜರತ್ನ..ಯುವರತ್ನ..ಪವರ್ ಸ್ಟಾರ್ ಪುನೀತ್ ಹಠಾತ್ ಸಾವು ಎಲ್ಲರನ್ನು ದಿಗ್ರ್ಬಮೆಗೆ ತಳ್ಳಿದೆ. ಇರೋ ನಾಲ್ಕೈದು ದಿನ ಎಲ್ಲರು ಖುಷಿಯಿಂದ ಒಗ್ಗಟ್ಟಿನಿಂದ ಇರೋಣ. ಈ ಸ್ಟಾರ್ ವಾರ್, ಫ್ಯಾನ್ ವಾರ್ ಎಲ್ಲ ಪಕ್ಕಕ್ಕಿಟ್ಟು. ಒಗ್ಗಟ್ಟಿನಿಂದ ಜೀವಿಸೋಣ ಅನ್ನೋ ಸಂದೇಶವನ್ನು ಅಭಿಮಾನಿಗಳು ಸಾರಿ ಸಾರಿ ಹೇಳ್ತಿದ್ದಾರೆ.

ನಮ್ಮ ಕನ್ನಡ ಇಂಡಸ್ಟ್ರೀಯ ಎಲ್ಲಾ ಸ್ಟಾರ್ಸ್ ಅಭಿಮಾನಿಗಳು ಒಂದಾಗಿದ್ದಾರೆ. ಸದಾ ಸ್ಟಾರ್ಸ್ ವಾರ್ ಫ್ಯಾನ್ ವಾರ್ ಅಂತಾ ತೋಳೇರಿಸಿಕೊಂಡು ಸೋಷಿಯಲ್ ಮೀಡಿಯಾದಲ್ಲಿ ಕಿತ್ತಾಟ ನಡೆಸ್ತಿದ್ದ ಅಭಿಮಾನಿ ದೇವರುಗಳು ಈಗ ನಾವೆಲ್ಲ ಒಂದೇ ಅನ್ನೋ ಮಂತ್ರ ಜಪಿಸ್ತಿದ್ದಾರೆ.

ಕನ್ನಡದ ಹಿರಿಯ ನಟ..ನವರಸ ನಾಯಕ ಜಗ್ಗೇಶ್ ಕೂಡ ಈ ಬಗ್ಗೆ ಟ್ವೀಟ್ ಮಾಡಿದ್ದಾರೆ. ಎಲ್ಲರ ಸ್ಟಾರ್ಸ್‌ ಒಂದಾಗಿರುವ ಫೋಟೋವನ್ನು ಹಂಚಿಕೊಂಡು, ಈ ಭಾವ ನನ್ನ ಕಣ್ಣಲ್ಲಿ ಆನಂದಭಾಷ್ಪ ತರಿಸಿತು!
ಮಾನ್ಯರೆ ನಾವೆಲ್ಲಾ ಶಾರದೆಯ ಮಕ್ಕಳು ಚಿತ್ರರಂಗ ನಮ್ಮ ಮನೆ!
ಕನ್ನಡಿಗರು ನಮ್ಮ ಬಂಧುಗಳು!
ನಮ್ಮ ಈಒಗ್ಗಟ್ಟು ರಾಜಣ್ಣನ ಕಾಲದಲ್ಲಿ ಇತ್ತು!ಮತ್ತೆ ಬರೋದಿಲ್ಲವೆ ಎಂಬ ಕೊರಗು ಕಾಡುತ್ತಿತ್ತು!ಈಗ ಇದನ್ನ ನೋಡಿ ಹಾಲುಜೇನು ಸವಿದಂತೆ ಆಯಿತು!ಈಒಗ್ಗಟ್ಟಿನ ಮಂತ್ರ ಯಾವ ಅಡೆತಡೆ ಇಲ್ಲದೆ ಮುಂದುವರಿಯಲಿ
ಅಂತ ಟ್ವೀಟ್ ಮಾಡಿದ್ದಾರೆ.

ಅಭಿಮಾನಿಗಳ ಈ ನಡೆಗೆ ಜಗ್ಗೇಶ್ ಸಾಥ್ ಕೊಟ್ಟಿದ್ದಾರೆ. ಅಪ್ಪು, ಕಿಚ್ಚ, ದಚ್ಚು ಗಣಿ, ಶಿವಣ್ಣ ಹೀಗೆ ಕನ್ನಡದ ಎಲ್ಲಾ ಸ್ಟಾರ್ಸ್‌ ಫ್ಯಾನ್ಸ್, ಫ್ಯಾನ್ಸ್ ವಾರ್ ಬೇಡ್ವೇ ಬೇಡ ಅನ್ನೋ ನಿರ್ಧಾರಕ್ಕೆ ಬಂದಿದ್ದಾರೆ. ಜೇನಿನಗೂಡ ನಾವೆಲ್ಲ ಹೀಗೆ ಇರೋಣ ಅಂತ ಮನವಿ ಮಾಡಿಕೊಳ್ಳುತ್ತಿದ್ದಾರೆ.

Categories
ಸಿನಿ ಸುದ್ದಿ

ದೊಡ್ಮನೆಗೆ ಭೇಟಿ ಕೊಟ್ಟ ಅಕ್ಕಿನೇನಿ ನಾಗಾರ್ಜುನ್‌ ; ಅಪ್ಪು ಇಲ್ಲ ಅನ್ನೋದು ನಂಬೋಕೆ ಆಗ್ತಿಲ್ಲ ಅಂದ್ರು…

ತೆಲುಗು ಖ್ಯಾತ ನಟ ಅಕ್ಕಿನೇನಿ ನಾಗಾರ್ಜುನ್ ಅವರು ಮಂಗಳವಾರ ಪುನೀತ್‌ ರಾಜಕುಮಾರ್‌ ಅವರ ನಿವಾಸಕ್ಕೆ ಆಗಮಿಸಿ, ಕುಟುಂಬದವರ ಜೊತೆ ಮಾತನಾಡಿ, ಅವರನ್ನು ಸಂತೈಸುವುದರ ಜೊತೆ ಧೈರ್ಯ ತುಂಬಿದ್ದಾರೆ. ಪುನೀತ್‌ ಅವರ ಸಹೋದರ ಶಿವರಾಜಕುಮಾರ್‌, ರಾಘವೇಂದ್ರ ರಾಜಕುಮಾರ್‌ ಅವರೊಂದಿಗೆ ಮಾತನಾಡಿದ ಬಳಿಕ, ಮಾಧ್ಯಮದವರ ಜೊತೆ ಪುನೀತ್‌ ಬಗ್ಗೆ ಹೇಳಿದ್ದಿಷ್ಟು. “ನನಗೆ ಪುನೀತ್‌ ರಾಜಕುಮಾರ್‌ ಅವರು ಇಲ್ಲ ಎಂಬ ಸುದ್ದಿ ಕೇಳಿ ನಿಜಕ್ಕೂ ಶಾಕ್‌ ಆಯ್ತು. ಎರಡ್ಮೂರು ದಿನಗಳಿಂದಲೂ ಈ ಸುದ್ದಿ ಕೇಳುತ್ತಲೇ ಇದ್ದೇನೆ. ನಿಜವಾಗಿಯೂ ಈ ಸುದ್ದಿ ನಿಜಾನಾ, ಇದು ನಡೀತಾ, ಇಲ್ಲವೋ ಅನ್ನುವುದನ್ನೂ ಊಹೆ ಮಾಡಿಕೊಳ್ಳೋಕೆ ಆಗುತ್ತಿಲ್ಲ. ಪುನೀತ್‌ ರಾಜಕುಮಾರ್‌ ಅವರು ಇಲ್ಲೇ ಎಲ್ಲೋ ಹೋಗಿದ್ದಾರೆ ಎಂಬ ಭಾವನೆ ನನ್ನಲ್ಲಿದೆ. ಒಂದೊಮ್ಮೆ ಯೋಚಿಸಿದರೆ, ಇದೆಲ್ಲಾ ನಡೀತಾ ಅನ್ನೋದೇ ಗೊತ್ತಾಗುತ್ತಿಲ್ಲ.


ಪುನೀತ್‌ ರಾಜಕುಮಾರ್‌ ಅವರ ಬಗ್ಗೆ ಯಾರು ಏನೇ ಮಾತಾಡಿದರೂ, ಒಳ್ಳೆಯತನದಿಂದಲೇ ಮಾತಾಡುತ್ತಾರೆ. ಅವರ ಕುರಿತು ಒಳ್ಳೆಯ ಅಭಿಪ್ರಾಯವನ್ನೇ ಹೇಳುತ್ತಾರೆ. ಯಾರನ್ನೇ ಕೇಳಿ ಪುನೀತ್‌ ಬಗ್ಗೆ ಒಳ್ಳೆಯದನ್ನು ಬಿಟ್ಟರೆ ಬೇರೆ ಏನನ್ನೂ ಹೇಳುವುದಿಲ್ಲ. ಪುನೀತ್‌ ರಾಜಕುಮಾರ್‌ ಅವರು ಹಾಗೆ ಹೆಲ್ಪ್‌ ಮಾಡಿದ್ದಾರೆ, ಈ ರೀತಿ ಕೆಲಸ ಮಾಡಿದ್ದಾರೆ ಪ್ರತಿಭೆಗಳಿಗೆ ಶಿಕ್ಷಣ ಕೊಡಿಸುತ್ತಿದ್ದಾರೆ ಹೀಗೆ ಒಳ್ಳೊಳ್ಳೆಯ ಕೆಲಸ ಮಾಡಿದ್ದಾರೆ ಎಂಬ ಕುರಿತಾಗಿಯೇ ಮಾತುಗಳು ಕೇಳಿಬರುತ್ತಿದೆ.

ಅವರೊಬ್ಬ ಹೀರೋ ಆಗಿಯೂ ಸಾಕಷ್ಟು ಬೇರೆ ಪ್ರತಿಭಾವಂತರಿಗೆ ಬೆನ್ನು ತಟ್ಟುತ್ತಿದ್ದರು. ಪ್ರೋತ್ಸಾಹ ಕೊಡುತ್ತಿದ್ದರು. ಇಂತಹ ಮನುಷ್ಯನನ್ನು ದೇವರು ಬೇಗನೇ ಕರೆದುಕೊಂಡು ಹೋದ. ಈ ಪ್ರಶ್ನೆಗೆ ನಮ್ಮಲ್ಲಿ ಉತ್ತರವಿಲ್ಲ. ಪುನೀತ್‌ ರಾಜಕುಮಾರ್‌ ಅವರ ಫ್ಯಾನ್ಸ್‌ಗೆ, ಕನ್ನಡಿಗರಿಗೆ ಮತ್ತು ಅವರ ಕುಟುಂಬಕ್ಕೆ ದುಃಖ ಭರಿಸೋ ಶಕ್ತಿ ಕೊಡಲಿ ಎಂದು ನಾನು ಆ ದೇವರಲ್ಲಿ ಪ್ರಾರ್ಥಿಸುತ್ತೇನೆ.
ಫ್ಯಾನ್ಸ್‌, ಕನ್ನಡಿರಗರು ಫ್ಯಾಮಿಲಿಗೆ ದುಃಖ ಬರಿಸೋ ಶಕ್ತಿ ನೀಡಲಿ

Categories
ಸಿನಿ ಸುದ್ದಿ

ಕಿರುತೆರೆಗೆ ರಾಬರ್ಟ್‌ ಎಂಟ್ರಿ! ದಚ್ಚು ಫ್ಯಾನ್ಸ್‌ಗೆ ಡಬ್ಬಲ್‌ ಧಮಾಕ!! ದೀಪಾವಳಿಗೆ ದರ್ಶನ

ಕನ್ನಡ ಚಿತ್ರರಂಗ ಈಗಾಗಲೇ ಸಾಗರದಾಚೆಗೂ ಸದ್ದು ಮಾಡಿರೋದು ಗೊತ್ತೇ ಇದೆ. ಈಗ ಹೊಸ ಸುದ್ದಿ ಅಂದರೆ, “ರಾಬರ್ಟ್‌” ಈಗ ಇನ್ನಷ್ಟು ಹತ್ತಿರಕ್ಕೆ ಬರುತ್ತಿದೆ. ಅರೇ, ಇದೇನಪ್ಪಾ ರಾಬರ್ಟ್‌ ಹತ್ತಿರದ ವಿಷಯ ಅನ್ನೋ ಕನ್‌ಫ್ಯೂಷನ್ನಾ? ವಿಷಯ ಇದೆ. ರಾಬರ್ಟ್‌ ಚಿತ್ರ ಈಗ ಮನೆ ತಲುಪುತ್ತಿದೆ. ಹೌದು, ಚಿತ್ರಮಂದಿರದಲ್ಲಿ ನೋಡಲು ಸಾಧ್ಯವಾಗದವರಿಗೆ ಸಿನಿಮಾ ಟಿವಿಯಲ್ಲಿ ಬರುತ್ತಿದೆ ಅನ್ನೋದೇ ಖುಷಿಯ ಸುದ್ದಿ. ಮನೆಯಲ್ಲೇ ಮನೆ ಮಂದಿ ಜೊತೆಗೆ ಕೂತು ನೋಡುವಂತಹ ಅವಕಾಶವನ್ನು ಉದಯ ಟಿವಿ ಮಾಡಿಕೊಟ್ಟಿದೆ. ರಾಬರ್ಟ್‌ ಕಿರುತೆರೆಗೆ ಎಂಟ್ರಿಗೆ ಜೋರಾದ ತಯಾರಿಯೂ ನಡೆಯುತ್ತಿದೆ. ಇದೇ ಮೊದಲ ಸಲ ರಾಬರ್ಟ್‌ ಕನ್ನಡದ ಕಿರುತೆಯಲ್ಲಿ ಬಿಡುಗಡೆಯಾಗುತ್ತಿದೆ.

ಹಾಗಾಗಿ ರಾಬರ್ಟ್‌ ಮಿಸ್‌ ಮಾಡಿಕೊಂಡವರು ಮಿಸ್‌ ಮಾಡದೇ ಮನೆಯಲ್ಲೇ ಸಿನಿಮಾ ನೋಡಲಡ್ಡಿಯಿಲ್ಲ.
ಇನ್ನು, ಈ ವಿಷಯ ದರ್ಶನ್‌ ಫ್ಯಾನ್ಸ್‌ಗಂತೂ ಸಂಭ್ರಮವೋ ಸಂಭ್ರಮ. ನವೆಂಬರ್‌ 4ನೇ ತಾರೀಖಿನಂದು ಸಂಜೆ 6.30ಕ್ಕೆ ಉದಯ ಟಿವಿಯಲ್ಲಿ ರಾಬರ್ಟ್‌ ಪ್ರಸಾರವಾಗಲಿದೆ. ಹಬ್ಬದ ದಿನವೇ ಸಿನಿಮಾ ಪ್ರಸಾರ ಆಗುತ್ತಿರುವುದರಿಂದ ಇದು ದರ್ಶನ್‌ ಅಭಿಮಾನಿಗಳಿಗೆ ದೊಡ್ಡ ಸಂಭ್ರಮ. ಪಟಾಕಿ ಸಿಡಿಸಿ ಸಂಭ್ರಮಿಸೋ ಹಬ್ಬದಲ್ಲಿ ರಾಬರ್ಟ್‌ ಕಣ್ತುಂಬಿಕೊಳ್ಳುವ ಅವಕಾಶವೂ ಸಿಕ್ಕಿದೆ.


ರಾಬರ್ಟ್‌ ಕೊರೊನಾ ಲಾಕ್‌ಡೌನ್‌ ನಂತರ ಬಿಡುಗಡೆಯಾಗಿತ್ತು. ಅಷ್ಟೇ ಅಲ್ಲ, ದೊಡ್ಡ ಹಿಟ್‌ ಆಗಿದ್ದು ಎಲ್ಲರಿಗೂ ಗೊತ್ತಿದೆ. ಪಕ್ಕಾ ಮಾಸ್ ಸ್ಟೋರಿ ಇದ್ದ ಈ ಚಿತ್ರ ಮಾಸ್‌ ಆಡಿಯನ್ಸ್‌ ಜೊತೆಗೆ ಫ್ಯಾಮಿಲಿ ಕೂಡ ನೋಡಬಹುದಾದ ಸಿನಿಮಾ ಎಂಬ ಹೆಗ್ಗಳಿಕೆಗೆ ಪಾತ್ರವಾಗಿತ್ತು. ರಾಬರ್ಟ್‌ ಈಗ ಕಿರುತೆರೆಗೂ ಕಾಲಿಡುತ್ತಿದ್ದಾನೆ. ಇಲ್ಲೂ ಮತ್ತಷ್ಟು ರೆಕಾರ್ಡ್‌ ಗ್ಯಾರಂಟಿ.

ಈ ಚಿತ್ರವನ್ನು ತರುಣ್ ಸುಧೀರ್ ನಿರ್ದೇಶಿಸಿದ್ದರು. ಉಮಾಪತಿ ಫಿಲ್ಮ್ಸ್‌ ಬ್ಯಾನರ್‌ನಲ್ಲಿ ಉಮಾಪತಿ ಶ್ರೀನಿವಾಸ ಗೌಡ ನಿರ್ಮಿಸಿದ್ದಾರೆ. ದರ್ಶನ್ ಜೊತೆ ವಿನೋದ್ ಪ್ರಭಾಕರ್, ಜಗಪತಿ ಬಾಬು, ರವಿ ಕಿಶನ್, ನಟಿ ಆಶಾ ಭಟ್, ದೇವರಾಜ್ ಸೇರಿದಂತೆ ದೊಡ್ಡ ಕಲಾಬಳಗ ಚಿತ್ರದಲ್ಲಿದೆ. ವಿ.ಹರಿಕೃಷ್ಣ ಹಾಗು ಅರ್ಜುನ್ ಜನ್ಯ ಸಂಗೀತವಿದೆ. ಸುಧಾಕರ್ ಕ್ಯಾಮೆರಾ ಹಿಡಿದಿದ್ದಾರೆ.

Categories
ಸಿನಿ ಸುದ್ದಿ

ಪವರ್‌ ಸ್ಟಾರ್‌ ಡೇ ಆಚರಿಸಲು ಶುರುವಾಯ್ತು ಕ್ಯಾಂಪೇನ್;‌ ಕೈ ಜೋಡಿಸಿ ಅಂತಿದಾರೆ ಫ್ಯಾನ್ಸ್‌ !

ಮನುಷ್ಯ ಇದ್ದಾಗ ಅವರ ಬೆಲೆ ಗೊತ್ತಾಗೋದೇ ಇಲ್ಲ. ಅದೇ ಅವರಿಲ್ಲವಾದಾಗ, ನಿಜವಾದ ಬೆಲೆ ಗೊತ್ತಾಗುತ್ತೆ. ಆದರೆ, ಪುನೀತ್‌ ರಾಜಕುಮಾರ್‌ ವಿಷಯದಲ್ಲಿ ಹಾಗೆ ಆಗಲೇ ಇಲ್ಲ. ಅವರು ಇದ್ದಾಗಲೇ ದೊಡ್ಡ ಬೆಲೆ ಇತ್ತು. ಹೌದು, ಈ ಮಾತು ಅಕ್ಷರಶಃ ನಿಜ. ಅವರು ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಕೊಟ್ಟಿದ್ದರು. ಅದೆಷ್ಟೋ ನೊಂದ ಜೀವಗಳಿಗೆ ಸಾಂತ್ವಾನ ಹೇಳಿದ್ದರು. ದಿಕ್ಕಿಲ್ಲದವರನ್ನು ಸಂತೈಸಿದ್ದರು. ಸೂರಿಲ್ಲದವರಿಗೆ ತಲೆ ಸವರಿ ಆಶ್ರಯ ನೀಡಿದ್ದರು. ಅನಾಥರಿಗೆ ಆಪ್ತರಾಗಿ, ಅವರ ಕಣ್ಣೀರು ಹೊರೆಸಿದ್ದರು. ಇನ್ನು ಗೊತ್ತಾಗದೇ ಉಳಿದಿರುವ ಅನೇಕ ಒಳ್ಳೆಯ ಕಾರ್ಯಕ್ರಮಗಳನ್ನು ಮಾಡಿದ್ದರು ಪುನೀತ್‌ ರಾಜಕುಮಾರ್.‌


ಪುನೀತ್‌ ಇಲ್ಲ ಎಂಬ ಮಾತನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಅದರಲ್ಲೂ ಪುನೀತ್‌ ಇಲ್ಲ ಅಂತ ಯಾರೊಬ್ಬರೂ ಭಾವಿಸಿಲ್ಲ. ಅನೇಕರು ಪುನೀತ್‌ ನಮ್ಮೊಂದಿಗಿದ್ದಾರೆ ಅಂತಾನೇ ಜೈಕಾರ ಹಾಕುತ್ತಿದ್ದಾರೆ. ನಿಜವಾಗಿಯೂ ಪುನೀತ್‌ ನಮ್ಮನ್ನು ಬಿಟ್ಟು ಎಲ್ಲೂ ಹೋಗಿಲ್ಲ. ಅವರು ನಮ್ಮ ಜೊತೆಗಿದ್ದಾರೆ. ಅವರು ನಟಿಸಿದ ಸಿನಿಮಾಗಳಲ್ಲಿ ಜೀವಂತವಾಗಿದ್ದಾರೆ. ಈಗ ಪುನೀತ್‌ ರಾಜಕುಮಾರ್‌ ಅವರ ಫ್ಯಾನ್ಸ್‌ ಒಂದು ಕ್ಯಾಂಪೇನ್‌ ಶುರುಮಾಡಿದೆ. ಪವರ್‌ ಆಫ್‌ ಯೂತ್‌ ಎಂಬ ಟ್ಯಾಗ್‌ಲೈನ್‌ ಇರುವ ಟೀಮ್‌ವೊಂದು, 29-10-2021 ದಿನವನ್ನು ಪವರ್‌ ಸ್ಟಾರ್‌ ಡೇ ಎಂದು ಪರಿಗಣಿಸಿ, ಆಚರಿಸಬೇಕು ಎಂಬ ಮನವಿ ಮಾಡುತ್ತಿದೆ. ಅಪ್ಪು ಇಲ್ಲದ ಆ ದಿನ ಅವರ ದಿನವನ್ನಾಗಿ ಮಾಡಬೇಕು ಎಂದು ತೀರ್ಮಾನಿಸಿರುವ ಆ ತಂಡ, ಎಲ್ಲರ ಸಹಕಾರ ಕೋರಿದೆ. ಎಲ್ಲರೂ ಸಹರಿಸಿ, ಪವರ್‌ ಸ್ಟಾರ್‌ ಡೇ ಆಚರಿಸಲು ಕೈ ಜೋಡಿಸಿ ಎಂದು ಮನವಿ ಮಾಡಿಕೊಂಡಿದೆ.

ಅಷ್ಟೇ ಈ ಪವರ್‌ ಸ್ಟಾರ್‌ ಡೇ ಕೇವಲ ನಾವಿರುವಷ್ಟು ದಿನ ಮಾತ್ರವಲ್ಲ, ಈ ದಿನ ನಾವು ಸತ್ತಮೇಲೂ ಮುಂದುವರೆಯಬೇಕು. ಇದಕ್ಕೆ ನಿಮ್ಮ ಬೆಂಬಲ ಬೇಕು. ಕೈ ಜೋಡಿಸಿ ಎಂದು ಕ್ಯಾಂಪೇನ್‌ ಶುರು ಮಾಡಿದೆ.
ಪ್ರೀತಿ, ಅಭಿಮಾನ ಅಂದರೆ ಇದೇ ಅಲ್ಲವೇ? ಮೊನ್ನೆಯಷ್ಟೇ ಮಾಜಿ ಸಿಎಂ ಸಿದ್ಧರಾಮಯ್ಯ ಅವರು, ಪುನೀತ್‌ ರಾಜಕುಮಾರ್‌ ಅವರ ಸಾಧನೆಯನ್ನು ಪರಿಗಣಿಸಿ, ಅವರಿಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ನೀಡಿ ಎಂದು ಮನವಿ ಮಾಡಿದ್ದರು. ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನೂ ಒತ್ತಾಯಿಸಿದ್ದರು. ಅಷ್ಟೇ ಅಲ್ಲ, ಪುನೀತ್‌ ರಾಜಕುಮಾರ್‌ ಅವರ ಫ್ಯಾನ್ಸ್‌ ಕೂಡ ರಾಜರತ್ನ ಪ್ರಶಸ್ತಿಗೆ ಪರಿಗಣಿಸಿ, ಮರಣೋತ್ತರ ರಾಜರತ್ನ ಪ್ರಶಸ್ತಿ ಕೊಡಿ ಎಂದು ಆಗ್ರಹಿಸಿದ್ದರು. ಸಿಎಂ. ಬಸವರಾಜ ಬೊಮ್ಮಾಯಿ ಅವರು ಕೂಡ ಈ ಕುರಿತು ಸಚಿವರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.


ಈಗ ಫ್ಯಾನ್ಸ್‌ ಅಪ್ಪು ಮೇಲಿರುವ ಪ್ರೀತಿಗೆ, ತಾವೇ ಪುನೀತ್‌ ಅವರನ್ನು ಕಳೆದುಕೊಂಡ ದಿನವನ್ನು “ಪವರ್‌ ಸ್ಟಾರ್‌ ಡೇ” ಎಂದು ಆಚರಿಸಲು ತೀರ್ಮಾನಿಸಿದ್ದಾರೆ. ಇದಕ್ಕೆ ಬಹುಶಃ ಎಲ್ಲರೂ ಕೈ ಜೋಡಿಸುವುದರಲ್ಲಿ ಅನುಮಾನವೇ. ಇಲ್ಲ. ಪುನೀತ್‌ ಇಲ್ಲದ ದಿನವನ್ನು ಕರಾಳ ದಿನ ಎಂದು ಬೇಸರಿಸಿಕೊಂಡಿದ್ದ ಸ್ಯಾಂಡಲ್‌ವುಡ್‌ ಕೂಡ, ಅಕ್ಟೋಬರ್‌ ೨೯ ರಂದು ಪವರ್‌ ಸ್ಟಾರ್‌ ಡೇ ಎಂದು ಆಚರಿಸಲು ಹಿಂದೆ ಮುಂದೆ ನೋಡುವುದಿಲ್ಲ. ಪುನೀತ್‌ ಅವರು ತಮ್ಮ ತಂದೆ ಹೇಗೆ ಅಭಿಮಾನಿಗಳನ್ನು ದೇವರು ಎಂದು ಕರೆದಿದ್ದರೋ, ಹಾಗೆಯೇ, ಪುನೀತ್‌ ಕೂಡ ಅಭಿಮಾನಿಗಳನ್ನು ಅದೇ ಪ್ರೀತಿಯಿಂದ ನೋಡುತ್ತಿದ್ದರು. ಈಗ ಪವರ್‌ ಆಫ್‌ ಯೂತ್‌ ಟೀಮ್‌ ಪವರ್‌ ಸ್ಟಾರ್‌ ಡೇ ಆಚರಿಸಲು ತೀರ್ಮಾನಿಸಿರುವುದರಿಂದ ಎಲ್ಲೆಡೆಯಿಂದಲೂ ಇದಕ್ಕೆ ಭರ್ಜರಿ ಬೆಂಬಲ ಸಿಗುತ್ತದೆ ಎಂಬ ವಿಶ್ವಾಸವಿದೆ.

Categories
ಸಿನಿ ಸುದ್ದಿ

46 ವರ್ಷಕ್ಕೆ 75 ವರ್ಷಕ್ಕೆ ಮಾಡಬೇಕಾದಷ್ಟು ಸಾಧನೆ ನಮ್ಮ ಅಪ್ಪುದು-ರಾಘಣ್ಣ ಮಾತು


ಪುನೀತ್‌ ರಾಜಕುಮಾರ್ ಅವರ ಸಾಧನೆ ಬಗ್ಗೆ‌ ಎಷ್ಟು ಹೇಳಿದರೂ ಸಾಲದು. ಚಿಕ್ಕಂದಿನಲ್ಲೇ ಬಣ್ಣದ ಲೋಕವನ್ನು ಸ್ಪರ್ಶಿಸಿದ ಅಪ್ಪು, ಬಾಲನಟರಾಗಿರುವಾಗಲೇ ರಾಷ್ಟ್ರಪ್ರಶಸ್ತಿ ಪಡೆದವರು. ನಟನೆಯಷ್ಟೇ ಅಲ್ಲ, ಗಾಯನದ ಮೂಲಕವೂ ಪುನೀತ್‌ ರಾಜಕುಮಾರ್‌ ಅವರು, ದೊಡ್ಡ ಸಾಧನೆ ಮಾಡಿದ್ದು ನಿಜ. ಅವೆಲ್ಲವೂ ನಮ್ಮ ಕಣ್ಣ ಮುಂದಿದೆ. ಅಪ್ಪು ಸಾಧನೆ ಬಗ್ಗೆ ಕೇಳಿದವರಿಗೆ ನಿಜಕ್ಕೂ ಹೆಮ್ಮೆ ಎನಿಸುವುದು ದಿಟ‌. ಅವರ ಸಹೋದರ ರಾಘವೇಂದ್ರ ರಾಜಕುಮಾರ್ ಅವರು ಸಹ, ಪುನೀತ್‌ ರಾಜಕುಮಾರ್‌ ಅವರ ಸಾಧನೆ ಬಗ್ಗೆ ಸದಾ ಹೇಳುತ್ತಲೇ ಬಂದವರು. ಪುನೀತ್‌ ಅವರ ಅಗಲಿಕೆ ಬಳಿಕವೂ ರಾಘವೇಂದ್ರ ರಾಜಕುಮಾರ್‌ ಅವರು, ಪುನೀತ್‌ ಬಗ್ಗೆ ಮತ್ತು ಅವರು ಚಿಕ್ಕವಯಸ್ಸಲ್ಲೇ ಮಾಡಿದ ಸಾಧನೆ ಕುರಿತು ಹೇಳಿಕೊಂಡಿದ್ದಾರೆ.


ಪುನೀತ್‌ ಅವರು 46 ವರ್ಷಕ್ಕೆ 75 ವರ್ಷಕ್ಕೆ ಮಾಡಬೇಕಾಗಿರುವಷ್ಟು ಸಾಧನೆ ಮಾಡಿದ್ದಾರೆ. ದೇವರು, ನಮ್ಮ ಅಪ್ಪಾಜಿಗೆ ಅಷ್ಟು ವರ್ಷಗಳ ಕಾಲ ಬಿಟ್ಟು, ಎಲ್ಲಾ ಸಾಧನೆ ಮಾಡಿಕೊಂಡು ಬನ್ನಿ ಅಂದಿದ್ದರು. ಅಪ್ಪಾಜಿ ನಮ್ಮನ್ನೆಲ್ಲ ಬಿಟ್ಟು ಹೋದರು. ಈಗ ಅಪ್ಪು ಅವರನ್ನೂ ಸಹ ೪೬ ವರ್ಷಕ್ಕೆ ಎಲ್ಲವನ್ನೂ ಮುಗಿಸಿಕೊಂಡು ಬಾ ಅಂತ ಹೇಳಿದ್ದರೇನೋ? ಭಗವಂತ, ಕೊಟ್ಟ ಸಮಯ ಅಷ್ಟೇ ಅನಿಸುತ್ತೆ. ನಿಜಕ್ಕೂ ಚಿಕ್ಕ ವಯಸ್ಸಲ್ಲೇ ಅಪ್ಪು ಸಾಕಷ್ಟು ಸಾಧನೆ ಮಾಡಿದ್ದಾರೆ. ಗೊತ್ತಿಲ್ಲದೆಯೇ ಅದೆಷ್ಟೋ ಒಳ್ಳೆಯ ಕೆಲಸಗಳನ್ನು ಮಾಡಿದ್ದಾರೆ.

ಈಗ ಇದ್ದಕ್ಕಿದ್ದಂತೆ ನಮ್ಮನ್ನೆಲ್ಲಾ ಬಿಟ್ಟು ಹೋಗಿದ್ದಾರೆ. ಇದು ದುಃಖದ ಸಂಗತಿ. ಅಭಿಮಾನಿಗಳು ಅಪ್ಪು ಅವರನ್ನು ಶಾಂತಿಯಿಂದಲೇ ಕಳಿಸಿಕೊಟ್ಟಿದ್ದಾರೆ. ಕೆಲವರಿಗೆ ಅಪ್ಪು ದರ್ಶನ ಸಿಕ್ಕಿಲ್ಲ. ಹಾಗಂತ ಯಾರೂ ಬೇಸರ ಮಾಡಿಕೊಳ್ಳಬೇಡಿ. ಎಲ್ಲರಿಗೂ ನೋಡಲು ಅವಕಾಶ ಕಲ್ಪಿಸಲಾಗುವುದು. ಸದ್ಯ ಫ್ಯಾಮಿಲಿಯ ಕಾರ್ಯಗಳು ನಡೆಯಬೇಕಿದೆ. ನಂತರ ಅಭಿಮಾನಿಗಳಿಗೆ ಅವಕಾಶ ಇದ್ದೇ ಇರಲಿದೆ. ಇವತ್ತು ಅಪ್ಪು ಏನೇ ಆಗಿದ್ದರೂ, ಅದು ಅಭಿಮಾನಿಗಳಿಂದ. ಹುಟ್ಟಿದಾಗಲೇ ನಾವೆಲ್ಲರೂ ನಿಮ್ಮವರು. ನಿಮಗೇ ಮೊದಲ ಆದ್ಯತೆ ಎಂದಿದ್ದಾರೆ ರಾಘವೇಂದ್ರ ರಾಜಕುಮಾರ್.

Categories
ಸಿನಿ ಸುದ್ದಿ

ಹಾಲು-ತುಪ್ಪ ನೆರವೇರಿಸಿದ ಅಪ್ಪು ಕುಟುಂಬ; ಕಂಠೀರವ ಸ್ಟುಡಿಯೋದಲ್ಲಿ ಕಿಕ್ಕಿರಿದಿದ್ದ ಫ್ಯಾನ್ಸ್‌

ಕನ್ನಡದ ಖ್ಯಾತ ನಟ ಪುನೀತ್‌ ರಾಜಕುಮಾರ್‌ ಅವರು ನಿಧನರಾಗಿ ಇಂದಿಗೆ (ಮಂಗಳವಾರ) ಐದನೇ ದಿನ. ಈ ಹಿನ್ನೆಲೆಯಲ್ಲಿ ಪುನೀತ್‌ ಅವರ ಕುಟುಂಬ ವರ್ಗ ಐದನೇ ದಿನದ ಅಂಗವಾಗಿ ಹಾಲು-ತುಪ್ಪ ಬಿಡುವ ಕಾರ್ಯಕ್ರಮ ನಡೆಸಿತು. ಪುನೀತ್‌ ರಾಜಕುಮಾರ್‌ ಅವರ ಪತ್ನಿ ಅಶ್ವಿನಿ, ಪುತ್ರಿಯರಾದ ಧ್ರುತಿ, ವಂದಿತಾ ತನ್ನ ತಂದೆಯ ಸಮಾಧಿ ಬಳಿ ಬಂದು ಹಾಲು-ತುಪ್ಪ ಬಿಡುವ ಮೂಲಕ ಪೂಜೆ ಸಲ್ಲಿಸಿದರು. ತಂದೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಭಾವುಕರಾದರು. ಅಲ್ಲಿದ್ದವರೆಲ್ಲರೂ ಕ್ಷಣ ಕಾಲ ಮೌನವಾಗಿ, ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡರು. ಪುನೀತ್‌ ಅವರ ಸಮಾಧಿಯನ್ನು ಬಿಳಿ ಮತ್ತು ಹಳದಿ ಬಣ್ಣದ ಹೂಗಳಿಂದ ಮಂಟಪದ ರೀತಿ ಅಲಂಕಾರ ಮಾಡಲಾಗಿತ್ತು. ಹಾಲು-ತುಪ್ಪ ಕಾರ್ಯಕ್ರಮ ಇದ್ದುದರಿಂದ ಪುನೀತ್‌ ಅವರಿಗೆ ಪ್ರಿಯವಾದ ಊಟ, ತಿಂಡಿ, ತಿನಿಸುಗಳನ್ನು ಅವರ ಸಂಬಂಧಿಕರು ಎಡೆ ಇಟ್ಟು ನಮಸ್ಕರಿಸಿದ್ದಾರೆ.


ಈ ವೇಳೆ ಪುನೀತ್‌ ಅವರ ಪತ್ನಿ ಅಶ್ವಿನಿ ಅವರು ಪುನೀತ್‌ ಅವರ ಸಮಾಧಿ ಮೇಲಿದ್ದ ತುಳಸಿ ಸಸಿಗೆ ಪೂಜೆ ನೆರವೇರಿಸಿದರು. ಪುತ್ರಿಯರಾದ ಧ್ರುತಿ ಮತ್ತು ವಂದಿತಾ ಅವರು ಸಹ ಪೂಜೆ ನೆರವೇರಿಸಿದರು. ಸಮಾಧಿಗೆ ಅರಿಶಿನ ಕುಂಕುಮ ಹಚ್ಚಿ ಪೂಜೆ ನೆರವೇರಿಸಿ, ಎಲ್ಲರೂ ಕ್ಷಣಕಾಲ ಭಾವುಕರಾದರು. ಕುಟುಂಬದವರು ಮತ್ತು ಆಪ್ತರು ಇಂದು ಹಾಲು-ತುಪ್ಪ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಗಾಜನೂರಿನಿಂದ ಆಗಮಿಸಿರುವ ದೊಡ್ಮನೆ ಕುಟುಂಬಸ್ಥರು, ಲಕ್ಷ್ಮೀ , ಪೂರ್ಣಿಮಾ, ಧನ್ಯ , ಧೀರನ್, ಶ್ರೀಮುರುಳಿ, ಸಾರಾ ಗೋವಿಂದು ಸೇರಿದಂತೆ ಹಲವರು ಭಾಗಿಯಾಗಿದ್ದರು.


ಈ ಬಳಿಕ ರಾಘವೇಂದ್ರ ರಾಜಕುಮಾರ್‌ ಮಾತನಾಡಿ, ಐದು ದಿನ ಆಗಿದೆ, ಹನ್ನೊಂದನೇ ದಿನ ಬರುತ್ತೆ. ವರ್ಷವೂ ಬರುತ್ತೆ. ನೋವು ಜೊತೆ ಬದುಕೋಕೆ ಶಕ್ತಿ ಕೊಡು ಭಗವಂತ ಅಂತ ಕೇಳಿಕೊಳ್ತಿನಿ. ಈ ದುರ್ಗತಿ ಹೇಗೆ ತಗೋಬೇಕು ಗೊತ್ತಿಲ್ಲ. ತಂದೆಯವರು ಇಷ್ಟು ವರ್ಷ ಇದ್ದು ಹೋದರು. ನಿಮ್ಮ ಪುನೀತ್‌ ಅಂದರೆ, ತಮ್ಮ ಪುನೀತ್‌ ೪೬ ವರ್ಷಕ್ಕೆ ಮುಗಿಸಿಕೊಂಡು ಬಾ ಅಂತ ಹೇಳಿದ್ದರ. ಭಗವಂತ ಅಷ್ಟೇ ಟೈಮ್‌ ಕೊಟ್ಟಿದ್ದು. ಅದೇನೆ ಇರಲಿ, ಅಪ್ಪು ಕಣ್ಣುಗಳು ನಾಲ್ವರಿಗೆ ದೃಷ್ಟಿಯಾಗಿದೆ. ನಮ್ಮ ಕುಟುಂಬಕ್ಕೆ ಖುಷಿಯ ವಿಚಾರ.
ಅಪ್ಪು ಇನ್ನೂ ಇಡೀ ಪ್ರಪಂಚವನ್ನು ನೋಡ್ತಾ ಇದಾರೆ. ತಂದೆ ಎರಡು ಕಣ್ಣು ಇಬ್ಬರಿಗೆ ಆಯ್ತು.

ಪುನೀತ್‌ ಎರಡು ಕಣ್ಣು ನಾಲ್ಕು ಜನರಿಗೆ ಆಗಿದೆ. ನಾಲ್ಕು ಮಂದಿ ಬದುಕಲ್ಲಿ ಬೆಳಕಾಗಿದ್ದಾರೆ. ಇಷ್ಟು ದಿನ ಸಂಯಮದಿಂದಲೇ ಅಭಿಮಾನಿಗಳು ನಮ್ಮೊಂದಿಗಿದ್ದಾರೆ. ಸಹಕರಿಸಿದ್ದಾರೆ. ಸರ್ಕಾರ ಕೂಡ ಶಾಂತಿ ರೀತಿ ಎಲ್ಲವನ್ನೂ ನೋಡಿಕೊಂಡಿದೆ ಎಲ್ಲರಿಗೂ ಧನ್ಯವಾದ ಎಂದಿದ್ದಾರೆ.
ಅಭಿಮಾನಿಗಳು ಈಗಾಗಲೇ ಸಾಗರ ಬಳಿ ಪುನೀತ್‌ ಹೆಸರಲ್ಲೇ ಒಂದು ವೃತ್ತ ಮಾಡಿದ್ದು, ವೃತ್ತವೊಂದಕ್ಕೆ ಅಪ್ಪು ಹೆಸರಿಟ್ಟಿದ್ದಾರೆ. ಇನ್ನು, ಶಿವಮೊಗ್ಗದಲ್ಲೂ ಅಭಿಮಾನಿಗಳು ರಸ್ತೆಗೆ ಪುನೀತ್‌ ಹೆಸರಿಟ್ಟಿದ್ದಾರೆ. ಇದು ಫ್ಯಾನ್ಸ್‌ ಪ್ರೀತಿ ಅಂದರು ರಾಘವೇಂದ್ರ ರಾಜಕುಮಾರ್.‌

Categories
ಸಿನಿ ಸುದ್ದಿ

ಅಪ್ಪನಂತೆ ಅಪ್ಪು `ನೇತ್ರದಾನ’; ಪುನೀತ್ ಕಣ್ಣುಗಳಿಂದ ನಾಲ್ವರ ಬದುಕಿಗೆ ಬೆಳಕು !

ಬದುಕಿದ್ದ ಅಷ್ಟು ದಿನ ನಿಸ್ವಾರ್ಥ ಜೀವನ ನಡೆಸಿ, ಸಾವಲ್ಲೂ ಸಾರ್ಥಕತೆ ಮೆರೆದ ಜೀವ ಅಪ್ಪು ಅವರು. ಪವರ್‌ಸ್ಟಾರ್ ಆದರೂ ಕೂಡ ಸಿಂಪಲ್‌ಸ್ಟಾರ್‌ನಂತೆ ಬದುಕಿ ತೋರಿಸಿದ ಅಪ್ಪು, ಅಪ್ಪನಂತೆ ಹಾದಿಯಲ್ಲಿ ಸಾಗಿ ಸಾಧನೆ ಮಾಡಿ ಸಾವಲ್ಲೂ ಅಪ್ಪನಂತೆ ಸಾರ್ಥಕತೆಯನ್ನು ಮೆರೆದರು. ಹೌದು, ಅಪ್ಪಾಜಿಯ ಅಣತಿಯಂತೆ ಅಪ್ಪು ನಿಧನದ ನಂತರ ಕುಟುಂಬಸ್ಥರು ಪುನೀತ್ ಕಣ್ಣುಗಳನ್ನು ನಾರಾಯಣ್ ನೇತ್ರಾಲಯಕ್ಕೆ ದಾನ ಮಾಡಿದರು. ಶುಕ್ರವಾರ ಕಲೆಕ್ಟ್ ಮಾಡಿದ ಅಪ್ಪು ಕಣ್ಣುಗಳನ್ನು ಶನಿವಾರ ಸಂಜೆಯಷ್ಟರಲ್ಲಿ ನಾಲ್ಕು ಮಂದಿಗೆ ಜೋಡಣೆ ಮಾಡುವಲ್ಲಿ ನಾರಾಯಣ್ ನೇತ್ರಾಯಲದ ವೈದ್ಯರ ತಂಡ ಯಶಸ್ವಿಯಾಗಿದೆ. ಮಾತ್ರವಲ್ಲ ಒಬ್ಬ ವ್ಯಕ್ತಿಯ ಕಣ್ಣುಗಳನ್ನು ನಾಲ್ಕು ವ್ಯಕ್ತಿಗಳಿಗೆ ಜೋಡಿಸಿ ಹೊಸ ಕ್ರಾಂತಿಯನ್ನೇ ಮಾಡಿದ್ದಾರೆ.

ಸಾಮಾನ್ಯವಾಗಿ ಒಬ್ಬ ವ್ಯಕ್ತಿ ಕಣ್ಣು ದಾನ ಮಾಡಿದರೆ ಇಬ್ಬರು ಅಂಧರಿಗೆ ಕಣ್ಣು ಜೋಡಣೆ ಮಾಡಬಹುದು. ಆದರೆ, ಇದೇ ಮೊದಲ ಭಾರಿಗೆ ಹೊಸ ಪ್ರಯತ್ನ ಮಾಡಿದ್ದಾರೆ. ಆಧುನಿಕ ತಂತ್ರಜ್ಞಾನವನ್ನು ಬಳಸಿಕೊಂಡು ದೊಡ್ಮನೆ ಹುಡುಗನ ಕಣ್ಣುಗಳನ್ನು ನಾಲ್ವರು ಅಂಧರಿಗೆ ಅಳವಡಿಸಿದ್ದಾರೆ. ನಾರಾಯಣ್ ನೇತ್ರಾಲಯದ ಡಾಕ್ಟರ್ ರಿತೀಶ್, ಡಾಕ್ಟರ್ ಶರಣ್ ಡಾಕ್ಟರ್ ಪ್ರಾರ್ಥನಾ, ಡಾಕ್ಟರ್ ಯತೀಶ್ ಸೇರಿದಂತೆ ಒಟ್ಟು ಆರು ಜನ ವೈದ್ಯರ ತಂಡದ ಪರಿಶ್ರಮಕ್ಕೆ ಪ್ರತಿಫಲ ಸಿಕ್ಕಿದೆ. ಆಪರೇಷನ್ ಸಕ್ಸಸ್ ಆಗಿದ್ದು, ನಾಲ್ಕು ಮಂದಿಯೂ ಆರೋಗ್ಯವಾಗಿದ್ದಾರೆ.

ಜೊತೆಗೆ ನಾಲ್ವರು ಅಂಧರಿಗೆ ಒಳ್ಳೆಯ ದೃಷ್ಟಿ ಬಂದಿದೆ. ಈ ಕುರಿತು ಇಂದು ಸುದ್ದಿಗೋಷ್ಟಿ ನಡೆಸಿದ ನಾರಾಯಣ ನೇತ್ರಾಲಯದ ನಿರ್ದೇಶಕ ಡಾ. ಭುಜಂಗ ಶೆಟ್ಟಿ ಅವರು ಪುನೀತ್ ಕಣ್ಣುಗಳಿಂದ ನಾಲ್ವರ ಬದುಕು ಬಂಗಾರವಾಗಿದೆ. ಇನ್ನಿಬ್ಬರ ಬಾಳಿಗೆ ಅಪ್ಪು ಕಣ್ಣುಗಳ ಬೆಳಕಾಗಲಿವೆ ಎಂಬ ಮಾಹಿತಿಯನ್ನ ಹೊರಹಾಕಿದ್ದಾರೆ.

ಈಗಾಗಲೇ ನಾಲ್ವರಿಗೆ ಕಣ್ಣು ಜೋಡಣೆ ಮಾಡಿದ್ದಾರೆ ಅಂತಾದ್ರಲ್ಲಿ ಮತ್ತಿಬ್ಬರಿಗೆ ಅದ್ಹೇಗೆ ಅಪ್ಪು ಕಣ್ಣುಗಳನ್ನು ಅಳವಡಿಕೆ ಮಾಡ್ತಾರೆ ಇಂತಹದ್ದೊಂದು ಪ್ರಶ್ನೆ ನಿಮ್ಮಲ್ಲಿ ಮೂಡುತ್ತೆ. ಈ ಕೂತೂಹಲದ ಪ್ರಶ್ನೆಗೆ ಉತ್ತರ ಡಾ. ಭುಜಂಗ ಶೆಟ್ಟಿಯವರು ಹೇಳಿದಂತೆ ನಿಮ್ಮ ಮುಂದೆ ಇಡಲಿದ್ದೇವೆ. ಕಣ್ಣಿನ ಸಮಸ್ಯೆ ಎಲ್ಲರಿಗೂ ಒಂದೇ ತೆರನಾಗಿ ಇರೋದಿಲ್ಲ. ಕಾರ್ನಿಯ ಸಮಸ್ಯೆ ಇರುವವರ ಪೈಕಿ ಕೆಲವರಿಗೆ ಕಣ್ಣಿನ ಫ್ರಂಟ್ ಪೋರ್ಷನ್ ಸಮಸ್ಯೆ ಇರುತ್ತೆ. ಕೆಲವರಿಗೆ ಕಣ್ಣಿನ ಬ್ಯಾಕ್ ಪೋರ್ಷನ್ ಪ್ರಾಬ್ಲಮ್ ಇರುತ್ತೆ. ಈ ರೀತಿಯ ಸಮಸ್ಯೆ ಇರುವ ನಾಲ್ವರಿಗೆ ಇದೀಗ ಅಪ್ಪು ಎರಡು ಕಣ್ಣುಗಳ ಫ್ರಂಟ್ ಅಂಡ್ ಬ್ಯಾಕ್ ಪೋರ್ಷನ್ ಜೋಡಣೆ ಮಾಡಿದ್ದಾರೆ.

ಉಳಿದಂತೆ ಪಾರದರ್ಶಕ ಪಟಲ ಅಂತ ಕರೆಸಿಕೊಳ್ಳುವ
ಕರಿಗುಡ್ಡೆ ಹಾಗೂ ಬಿಳಿಗುಡ್ಡೆ ಭಾಗವನ್ನು ಸಂಗ್ರಹಿಸಿ ಲ್ಯಾಬ್ರೇಟರಿಗೆ ಕಳುಹಿಸಿಕೊಟ್ಟಿದ್ದಾರಂತೆ. ಈ ಬಿಳಿಗುಡ್ಡೆ ಹಾಗೂ ಕರಿಗುಡ್ಡೆ ಜಂಕ್ಷನ್‌ನಲ್ಲಿ ಸ್ಟೆಮ್‌ಸೆಲ್ಸ್ ಅಂತ ಇರುತ್ತಂತೆ. ಈ ಸ್ಟೆಮ್‌ಸೆಲ್ಸ್ನ ಪಟಾಕಿ ಸಿಡಿಸಿಕೊಂಡು ಕಣ್ಣು ಸುಟ್ಟುಕೊಂಡವರಿಗೆ ಮತ್ತು ಕೆಮಿಕಲ್ ವಸ್ತುಗಳಿಂದ ಕಣ್ಣಿಗೇನಾದರೂ ಸಮಸ್ಯೆ ಮಾಡಿಕೊಂಡವರಿಗೆ ಅಳವಡಿಸಬಹುದಂತೆ.
ಅಪ್ಪು ಬಹುಮುಖ ಪ್ರತಿಭೆಯಾಗಿದ್ದರು ಅದಕ್ಕೆ ಅನುಗುಣವಾಗಿಯೇ ಆಪರೇಷನ್ ಮಾಡಿ ನಾಲ್ವರ ಬಾಳಲ್ಲಿ ಬೆಳಕು ಮೂಡಿಸಿದ್ದೇವೆ ಎನ್ನುತ್ತಾರೆ ನಾರಾಯಣ್ ನೇತ್ರಾಲಯದ ವೈದ್ಯರು.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಪುನೀತ್‌ಗೆ ಮರಣೋತ್ತರ ಪದ್ಮಶ್ರೀ ನೀಡಬೇಕು; ಸಿದ್ಧರಾಮಯ್ಯ ಆಗ್ರಹ

ಪುನೀತ್ ರಾಜ್‍ಕುಮಾರ್ ಅವರಿಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ನೀಡಬೇಕು ಎಂದು ಮಾಜಿ ಮುಖ್ಯಮಂತ್ರಿಗಳು ಹಾಗೂ ವಿರೋಧ ಪಕ್ಷದ ನಾಯಕರಾದ ಸಿದ್ದರಾಮಯ್ಯ ಅವರು ಕೇಂದ್ರ ಸರ್ಕಾರವನ್ನು ಒತ್ತಾಯಿಸಿದ್ದಾರೆ. ಸೋಮವಾರ ಗುಬ್ಬಿಯಲ್ಲಿ ನಡೆದ ಕಾರ್ಯಕ್ರಮದಲ್ಲಿ ಖಾಸಗಿ ಹೈಟೆಕ್ ಆಸ್ಪತ್ರೆಯನ್ನು ಉದ್ಘಾಟಿಸಿದ ಅವರು, ಪುನೀತ್ ಅವರಲ್ಲಿ ಅಪಾರವಾದ ಪ್ರತಿಭೆ ಇತ್ತು, ಹೀಗಾಗಿ ಅವರಿಗೆ ಪದ್ಮಶ್ರೀ ಪ್ರಶಸ್ತಿ ಸಿಗಬೇಕು ಎಂದು ಅಭಿಪ್ರಾಯ ಪಟ್ಟರು.

ಪುನೀತ್ ರಾಜ್‍ಕುಮಾರ್ ಅವರಿಗೆ ದೇಶದ ಅತ್ಯುನ್ನತ ಪ್ರಶಸ್ತಿಯಾದ ಪದ್ಮಶ್ರೀ ಪ್ರಶಸ್ತಿ ನೀಡಬೇಕು. ರಾಜ್ಯ ಸರ್ಕಾರ ಕೂಡ ಈ ಬಗ್ಗೆ ಕೇಂದ್ರ ಸರ್ಕಾರಕ್ಕೆ ಶಿಫಾರಸು ಮಾಡಬೇಕುಎಂದು ಅವರು ತಿಳಿಸಿದರು.ಇದೇ ವೇಳೆ ತಾವು ಕೂಡ ಕೇಂದ್ರ, ರಾಜ್ಯ ಸರ್ಕಾರಕ್ಕೆ ಪತ್ರ ಬರೆದು, ಪ್ರಶಸ್ತಿ ನೀಡುವಂತೆ ಒತ್ತಾಯಿಸುವುದಾಗಿ ಹೇಳಿದರು.

ಪುನೀತ್ ಅವರು ಇನ್ನೂ ಎತ್ತರೆತ್ತರಕ್ಕೆ ಬೆಳೆಯುತ್ತಿದ್ದ ವಯಸ್ಸಿನಲ್ಲಿಯೇ ಅಕಾಲಿಕ ಮರಣಕ್ಕೆ ತುತ್ತಾಗಿರುವುದು ನೋವಿನ ಸಂಗತಿ. ಮೃತರ ಆತ್ಮಕ್ಕೆ ಶಾಂತಿ ಸಿಗಲಿ, ಅವರ ಕುಟುಂಬ ವರ್ಗದವರಿಗೆ, ಅಪಾರ ಸಂಖ್ಯೆಯ ಅಭಿಮಾನಿಗಳಿಗೆ ದುಃಖ ಭರಿಸುವ ಶಕ್ತಿ ದೊರೆಯಲಿ ಎಂದು ಪ್ರಾರ್ಥಿಸಿದರು.

Categories
ಸಿನಿ ಸುದ್ದಿ

ಚಲನಚಿತ್ರ ಅಕಾಡೆಮಿಯಿಂದ ಪುನೀತ್ ಸ್ಮರಣಾಂಜಲಿ; ಡಾ.ರಾಜ್ ಅವರಂತೆ ಪುನೀತ್ ನೆನಪು ಸದಾ – ಎನ್.ಮಂಜುನಾಥ್ ಪ್ರಸಾದ್

ಬೆಂಗಳೂರು, ನವೆಂಬರ್ 1 (ಕರ್ನಾಟಕ ವಾರ್ತೆ)- ಕನ್ನಡದ ಮೇರುನಟ ಡಾ.ರಾಜಕುಮಾರ್ ಅವರಂತೆ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರ ನೆನಪೂ ಜನಮಾನಸದಲ್ಲಿ ಚಿರಸ್ಥಾಯಿಯಾಗಿರಲಿದೆ ಎಂದು ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಹೇಳಿದರು.
ಕನ್ನಡ ರಾಜ್ಯೋತ್ಸವ ಅಂಗವಾಗಿ ಕರ್ನಾಟಕ ಚಲನಚಿತ್ರ ಅಕಾಡೆಮಿ ಆಯೋಜಿಸುವ ಚಿತ್ರ ಸಂಗಮ ಆನ್ಲೈನ್ ಚಿತ್ರೋತ್ಸವದಲ್ಲಿ ಇತ್ತೀಚಿಗೆ ನಿಧನರಾದ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಗೌರವಾರ್ಥ ಪುನೀತ್ ಸ್ಮರಣಾಂಜಲಿ ಆನ್ಲೈನ್ ಚಿತ್ರೋತ್ಸವಕ್ಕೆ ಬೆಂಗಳೂರಿನಲ್ಲಿ ಇಂದು ಚಾಲನೆ ನೀಡಿ ಅವರು ಮಾತನಾಡಿದರು.


ಎಷ್ಟೇ ವರ್ಷಗಳು ಕಳೆದರೂ ಡಾ.ರಾಜಕುಮಾರ್ ಅವರು ಜನರ ಮನಸ್ಸಿನಲ್ಲಿ ಹೇಗೆ ಬೇರೂರಿದ್ದಾರೆಯೋ ಅದೇ ಮಾದರಿಯಲ್ಲಿ ಪವರ್ ಸ್ಟಾರ್ ಪುನೀತ್ ರಾಜಕುಮಾರ್ ಅವರೂ ಕೂಡ ಕನ್ನಡ ಚಿತ್ರರಂಗದಲ್ಲಿ ಅವಿಸ್ಮರಣೀಯ ಸಾಧನೆ ಮಾಡಿದ್ದು, ಜನರ ಮನಸ್ಸನ್ನು ಗೆದ್ದಿದ್ದಾರೆ. ಪುನೀತ್ ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರ ನೆನಪು ಸದಾ ಇರಲಿದೆ. ಚಲನಚಿತ್ರ ಅಕಾಡೆಮಿ ಮೂಲಕ ಪುನೀತ್ ಸ್ಮರಣಾಂಜಲಿ ಹಮ್ಮಿಕೊಂಡು ಶ್ರದ್ಧಾಂಜಲಿ ಸಲ್ಲಿಸಲಾಗುತ್ತಿದೆ ಎಂದರು.
ಕನ್ನಡ ನಾಡು, ನುಡಿ, ನೆಲ, ಜಲ, ಸಂಸ್ಕೃತಿ ಹಾಗೂ ಪರಂಪರೆಯನ್ನು ಬಿಂಬಿಸುವ ಚಿತ್ರಗಳನ್ನು ಆನ್ಲೈನ್ ಮೂಲಕ ಕನ್ನಡ ಚಿತ್ರರಸಿಕರಿಗೆ ಪ್ರದರ್ಶಿಸುವ ಚಿತ್ರ ಸಂಗಮ ವಿನೂತನ ಕಾರ್ಯಕ್ರಮ ಕಳೆದ ವರ್ಷ ಯಶಸ್ವಿಯಾಗಿತ್ತು. ಅಂತೆಯೇ ಈ ಬಾರಿಯೂ ಎರಡನೇ ಆವೃತ್ತಿ ನವೆಂಬರ್ 1ರಿಂದ ನಡೆಯುತ್ತಿದ್ದು, ಪುನೀತ್ ರಾಜಕುಮಾರ್ ಅಭಿನಯದ 10 ಶ್ರೇಷ್ಠ ಚಿತ್ರಗಳು ಚಲನಚಿತ್ರ ಅಕಾಡೆಮಿಯ ಅಧಿಕೃತ ವೆಬ್ ಸೈಟ್ ನಲ್ಲಿ ಪ್ರದರ್ಶನಗೊಳ್ಳುತ್ತಿದ್ದು ಚಿತ್ರಾಸಕ್ತರು ಅಕಾಡೆಮಿಯ ವೆಬ್ ಸೈಟ್ ನಲ್ಲಿ ನೋಂದಣಿ ಮಾಡಿಕೊಳ್ಳುವ ಮೂಲಕ ಈ ಚಿತ್ರಗಳನ್ನು ನೋಡಬಹುದು ಹಾಗೂ ಈ ಮೂಲಕ ಪುನೀತ್ ಅವರಿಗೆ ಗೌರವ ಸಲ್ಲಿಸಬೇಕು ಎಂದರು.


ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷ ಸುನೀಲ್ ಪುರಾಣಿಕ್ ಮಾತನಾಡಿ, ಚಲನಚಿತ್ರವನ್ನು ಜನ ಮಾಧ್ಯಮವಾಗಿಸಿ, ಚಿತ್ರ ವೀಕ್ಷಣೆಯ ಸಂಸ್ಕೃತಿಯನ್ನು ಪಸರಿಸುವ ಹೊಣೆ ಹೊತ್ತಿರುವ ಕರ್ನಾಟಕ ಚಲನಚಿತ್ರ ಅಕಾಡೆಮಿ, ಚಿತ್ರೋತ್ಸವಗಳು, ಅಧ್ಯಯನ ಶಿಬಿರಗಳು, ಚರ್ಚಾಗೋಷ್ಠಿ, ಪ್ರಕಾಶನಗಳ ಮೂಲಕ ಚಲನಚಿತ್ರವನ್ನು ಒಂದು ಬಹುಶಾಸ್ಟ್ತ್ರೀಯ ಅಧ್ಯಯನವಾಗಿಸುವ ಕಾರ್ಯದಲ್ಲಿ ನಿರತವಾಗಿದ್ದು, ಇದರ ಮುಂದುವರಿದ ಪ್ರಯತ್ನವೇ ಚಿತ್ರ ಸಂಗಮ ಆನ್ಲೈನ್ ಕಾರ್ಯಕ್ರಮ ಎಂದರು.
ಪ್ರಯೋಗಾತ್ಮಕ ಕಥೆಗಳು, ರಾಷ್ಟ್ರ-ರಾಜ್ಯ ಪ್ರಶಸ್ತಿ ಪಡೆದ ಚಿತ್ರಗಳು, ಬೆಂಗಳೂರು ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಪಾಲ್ಗೊಂಡು ವಿಮರ್ಶೆಗೆ ಒಳಪಟ್ಟ ಚಿತ್ರಗಳು, ವಿಶಿಷ್ಟ ಬಗೆಯ ಪ್ರಾದೇಶಿಕ ಭಾಷಾ ಚಿತ್ರಗಳು, ಕನ್ನಡದ ಕುರಿತು, ಕನ್ನಡಿಗರು ನಿರ್ಮಿಸಿದ ಸುಂದರ ಸಾಕ್ಷ್ಮಚಿತ್ರಗಳು, ಸಿನಿಮಾಗಳು, ಯುವ ತಲೆಮಾರಿನ ನವ ಪ್ರಯತ್ನಗಳನ್ನು ಸಿನಿಮಾಸಕ್ತರಿಗೆ ಹಾಗೂ ಸಿನಿಮಾ ವಿದ್ಯಾರ್ಥಿಗಳಿಗೆ ಅಧ್ಯಯನ ದೃಷ್ಟಿಯಿಂದ ತಲುಪಿಸುವ ಪ್ರಯತ್ನವನ್ನು ಅಕಾಡೆಮಿ ಮಾಡುತ್ತಿದ್ದು, ಈ ಬಾರಿ ಯುವನಟರಿಗೆ ಸ್ಫೂರ್ತಿಯಾಗಿದ್ದ ಪುನೀತ್ ರಾಜ್ ಕುಮಾರ್ ನಮ್ಮನ್ನು ಅಗಲಿದ್ದಾರೆ. ಅವರ ಗೌರವಾರ್ಥ ಪುನೀತ್ ಸ್ಮರಣಾಂಜಲಿ ಹಮ್ಮಿಕೊಳ್ಳಲಾಗಿದೆ ಎಂದರು.
ನವೆಂಬರ್ 1ರಿಂದ ಆರಂಭವಾಗುವ ಈ ಕಾರ್ಯಕ್ರಮದಲ್ಲಿ ಪುನೀತ್ ರಾಜ್ ಕುಮಾರ್ ಅಭಿನಯದ ಬೆಟ್ಟದ ಹೂವು (ನ.1-2), ಭಕ್ತ ಪ್ರಹ್ಲಾದ (ನ.3-4), ಮೌರ್ಯ (ನ.5-6), ಪೃಥ್ವಿ (ನ.7-8), ಅಭಿ (ನ.9-10), ಅಜಯ್ (ನ.11-12), ಅರಸು (ನ.13-14), ಮಿಲನ (ನ.15-16), ಪವರ್ (ನ.17-18) ಹಾಗೂ ಅಪ್ಪು (ನ.19-20) ಚಿತ್ರಗಳನ್ನು 20 ದಿನಗಳ ಕಾಲ ಪ್ರದರ್ಶಿಸಲಾಗುತ್ತಿದೆ. ಚಿತ್ರಾಸಕ್ತರು ವಿಶೇಷವಾಗಿ ಪವರ್ ಸ್ಟಾರ್ ಪುನೀತ್ ರಾಜ್ ಕುಮಾರ್ ಅಭಿಮಾನಿಗಳು ಕರ್ನಾಟಕ ಚಲನಚಿತ್ರ ಅಕಾಡೆಮಿಯ ವೆಬ್ ಸೈಟ್ www.kcainfo.org ಇಲ್ಲಿ ನೋಂದಾಯಿಸಿಕೊಂಡು ಈ ಚಿತ್ರಗಳನ್ನು ನೋಡುವ ಮೂಲಕ ಯಶಸ್ವಿಗೊಳಿಸಬೇಕೆಂದು ಅವರು ಕೋರಿದರು.


ಇದೇ ಸಂದರ್ಭದಲ್ಲಿ ಇಲಾಖೆಯ ಪ್ರಧಾನ ಕಾರ್ಯದರ್ಶಿ ಎನ್.ಮಂಜುನಾಥ್ ಪ್ರಸಾದ್ ಅವರು ಕರ್ನಾಟಕ ಚಲನಚಿತ್ರ ಅಕಾಡೆಮಿಯ ಅಧಿಕೃತ ವೆಬ್ ಸೈಟ್ ಗೆ ಚಾಲನೆ ನೀಡಿದರು.
ವಾರ್ತಾ ಮತ್ತು ಸಾರ್ವಜನಿಕ ಸಂಪರ್ಕ ಇಲಾಖೆ ಆಯುಕ್ತ ಜಿ. ಜಗದೀಶ್ ಹಾಗೂ ಅಕಾಡೆಮಿಯ ಎಲ್ಲ ಸದಸ್ಯರು ಆನ್ಲೈನ್ ಮೂಲಕ ಕಾರ್ಯಕ್ರಮದಲ್ಲಿ ಪಾಲ್ಗೊಂಡಿದ್ದರು.

Categories
ಸಿನಿ ಸುದ್ದಿ

ಮಲೆ ಮಹದೇಶ್ವರನಿಗೆ ಅಪ್ಪು ಕೊಡ್ಬೇಕಿದ್ದ ಉಡುಗೊರೆ; ನವೀನ್ ಸಜ್ಜು ಬಿಚ್ಚಿಟ್ಟಿರು ಅಚ್ಚರಿಯ ಕಥನ !

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ನಟಸಾರ್ವಭೌಮ ಹಾಗೂ ಅಪ್ಪಟ ದೈವಭಕ್ತ. ಅಭಿಮಾನಿ ದೇವರುಗಳಲ್ಲಿ ದೇವರನ್ನು ಕಾಣುವ ದೊಡ್ಮನೆಯ ರಾಜಕುಮಾರ, ರಾಯರ ಪರಮಭಕ್ತನಾಗಿದ್ದರು ಕೂಡ ದೇವಾನುದೇವತೆಗಳನ್ನು ಆರಾಧಿಸುತ್ತಿದ್ದರು ಮತ್ತು ದೈವಿಶಕ್ತಿಗಳನ್ನು ನಂಬುತ್ತಿದ್ದರು. ಅಷ್ಟಕ್ಕೂ, ದೈವಿಕತೆ ಬಗ್ಗೆ ಈಗ ಮಾತನಾಡೋದಕ್ಕೆ ಕಾರಣ ಮಲೆಮಾದಪ್ಪನ ಮೇಲಿದ್ದ ಶ್ರದ್ಧೆ ಹಾಗೂ ಭಕ್ತಿಗೋಸ್ಕರ
ಹೊಸ ಸಾಹಸಕ್ಕೆ ಅಪ್ಪು ಒಂದು ಹೆಜ್ಜೆ ಮುಂದೆ ಇಟ್ಟಿದ್ದರು. ಸಿಂಗರ್ ಕಮ್ ಮ್ಯೂಸಿಕ್ ಕಂಪೋಸರ್ ನವೀನ್ ಸಜ್ಜು ನಯಾ ಕನಸಿಗೆ ಜೀವ ತುಂಬುವುದಕ್ಕೆ ಮುಂದಾಗಿದ್ದರು. ಈ ಕುರಿತಾಗಿ ಒಂದು ಸುತ್ತಿನ ಮಾತುಕಥೆ ಕೂಡ ನಡೆದಿದ್ದು, ನವೆಂಬರ್ 1 ಕನ್ನಡ ರಾಜ್ಯೋತ್ಸವದ ದಿನದಂದು ಮನೆಗೆ ಬರುವಂತೆ ನವೀನ್ ಸಜ್ಜುಗೆ ಹೇಳಿದ್ದರಂತೆ. ಆದರೆ, ಸೋಮವಾರ ಬರುವ ಹೊತ್ತಿಗೆ ದೊಡ್ಮನೆಯ ರಾಜಕುಮಾರ ವಿಧಿಯಾಟಕ್ಕೆ ಬಲಿಯಾಗಿಬಿಟ್ಟರು. ತನ್ನ ಕನಸು ಕಮರಿಹೋಯ್ತು ಎನ್ನುವುದಕ್ಕಿಂತ ಕನ್ನಡ ಚಿತ್ರರಂಗದ ಮಾಣಿಕ್ಯನನ್ನು ಕಳೆದುಕೊಂಡ ದುಃಖದಲ್ಲಿ ನವೀನ್ ಸಜ್ಜು ಕೂಡ ಕಣ್ಣೀರಾಗುತ್ತಿದ್ದಾರೆ. ಪುನೀತ್ ರಾಜ್‌ಕುಮಾರ್ ಅವರನ್ನು ಭೇಟಿಯಾದ ಸಂದರ್ಭ, ಅವರೊಂದಿಗಿನ ಮಾತುಕತೆ, ಮಾದಪ್ಪನ ಆಲ್ಬಂ ಕಥೆ, ಹೀಗೆ ಎಲ್ಲವನ್ನೂ ಸುಧೀರ್ಘವಾಗಿ ತಮ್ಮ ಸೋಷಿಯಲ್ ಮೀಡಿಯಾದಲ್ಲಿ ಬರೆದುಕೊಂಡಿದ್ದಾರೆ.

ಅಪ್ಪು ಸರ್ ಕೊನೆಯ ಭೇಟಿ :ಮಲೆ ಮಹದೇಶ್ವರ ಕುರಿತು ಒಂದು ಆಲ್ಬಮ್ ಸಾಂಗ್ ಪಿಆರ್‌ಕೆ ಬ್ಯಾನರ್‌ನಲ್ಲಿ ಮಾಡಲು ಅಪ್ಪು ಸರ್ ಕೆಲ ತಿಂಗಳ ಹಿಂದೆ ಒಪ್ಪಿಕೊಂಡಿದ್ದರು. ಅದೇ ವಿಷಯವಾಗಿ ಮಾತನಾಡಲು ಕಳೆದ ಬುಧವಾರ ಸಂಜೆ ಅವರ ಮನೆಗೆ ಹೋಗಿದ್ದೆ. ಸುಮಾರು ಒಂದೂವರೆ ತಾಸು ಅವರೊಂದಿಗೆ ಮಾತನಾಡಿದ್ದೆ. ಅವರ ಸರಳತೆ, ಬೇರೆಯವರಿಗೆ ಕೊಡುತ್ತಿದ್ದ ಬೆಲೆ, ಹೇಳುತ್ತಿದ್ದ ಆತ್ಮವಿಶ್ವಾಸದ ಮಾತುಗಳ ಬಗ್ಗೆ ನಾನು ವಿಶೇಷವಾಗಿ ಹೇಳಬೇಕಾದ್ದಿಲ್ಲ.. ಅದು ಎಲ್ಲರಿಗೂ ಗೊತ್ತಿರುವಂತಹದ್ದೆ. ಸಂಪೂರ್ಣವಾಗಿ ಕಂಪೋಸಿಷನ್ ಮುಗಿದ ಹಾಡನ್ನು ಹೇಗೆ ಶೂಟಿಂಗ್ ಮಾಡಬೇಕು, ಯಾವೆಲ್ಲಕ್ಯಾಮೆರಾ ಬಳಸಬೇಕು ಎಂಬುದನ್ನು ಪಿನ್ ಟು ಪಿನ್ ಹೇಳಿದರು. ಅದರ ಜೊತೆಗೆ ಐದಾರು ರೆಫ್ರರೆನ್ಸ್ ವಿಡಿಯೋಗಳನ್ನು ತೋರಿಸಿದರು. ಮಹದೇಶ್ವರ ಬೆಟ್ಟವನ್ನು ತೋರಿಸುವ ಅವರ ಕಲ್ಪನೆಯನ್ನು ನೋಡಿ ಬೆರಗಾಗಿದ್ದೆ. ಅಪ್ಪು ಸರ್ ಕಂಟೆAಟ್‌ನಿAದ ಹಿಡಿದು ಟೆಕ್ನಿಕಲಿಯಾಗಿಯೂ ಅವರು ಎಷ್ಟೊಂದು ತಿಳಿದುಕೊಂಡಿದ್ದರು ಎಂಬುದನ್ನು ನೋಡಿ ಆಶ್ಚರ್ಯವಾಯ್ತು. ಏಕೆಂದರೆ ಅವರು ಐದಾರು ಕ್ಯಾಮೆರಾಗಳ ಹೆಸರನ್ನು ಹೇಳಿ ಇಂತಹ ಶಾಟ್‌ಗೆ ಇಂತಹ ಕ್ಯಾಮರಾ ಬಳಸಬೇಕು ಎಂದು ವಿವರವಾಗಿ ಹೇಳಿದ್ದರು. ಇದೇ ವಿಷಯವಾಗಿ ಮಾತನಾಡಲು ನಾಳೆ (ಸೋಮವಾರ) ಬರಲು ಹೇಳಿದ್ದರು. ಬಹುಷಃ ಮುಂದಿನ ವಾರ ಮಲೆ ಮಹದೇಶ್ವರ ಹಾಡಿಗೆ ನಾವಿಬ್ಬರು ರಾಗವಾಗಬೇಕಿತ್ತು. ನೃತ್ಯಕ್ಕೆ ಹೆಜ್ಜೆ ಹಾಕಬೇಕಿತ್ತು. ಆದರೆ ಅವರು ಇನ್ನು ಯಾರಿಗೂ ಸಿಗದ ಹಾಗೇ ಬಹುದೂರ ಹೋಗಿಬಿಟ್ಟರು. ಅವರು ಭೌತಿಕವಾಗಿ ನಮ್ಮೊಂದಿಗೆ ಇಲ್ಲದಿದ್ದರೂ ಅವರು ಎಂದೆಂದಿಗೂ ಜನಮಾನಸದಲ್ಲಿ ಅಜರಾಮರ.. ಅವರೊಂದಿಗೆ ಕೆಲವು ಸಮಯ ಕಳೆದಿದ್ದೆ ಎಂಬುದೇ ನನ್ನ ಸಾರ್ಥಕ ಗಳಿಕೆ.. ಹೋಗಿ ಬನ್ನಿ ಸಾರ್.. ಕ್ರೂರ ವಿಧಿಯೆ ನಿನಗೆ ಧಿಕ್ಕಾರ

ಹೊಸಪ್ರತಿಭೆಗಳನ್ನು ಪ್ರೋತ್ಸಾಹಿಸ್ಬೇಕು ಹಾಗೂ ಬೆಳೆಸಬೇಕು ಎನ್ನುವ ನಿಟ್ಟಿನಲ್ಲಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಪಿ.ಆರ್.ಕೆ ಪ್ರೊಡಕ್ಷನ್ ಹೌಸ್‌ನ ಪ್ರಾರಂಭ ಮಾಡಿದರು. ಹೊಸತನಕ್ಕಾಗಿ ತುಡಿಯುವ, ಅಪಾರ ಪಾಂಡಿತ್ಯವುಳ್ಳ, ಸಿನಿಮಾನ ಪ್ರೀತ್ಸೋ ಹಾಗೂ ಆರಾಧಿಸೋ ಮಂದಿಗೆ ಕಾಲ್‌ಶೀಟ್ ಕೊಟ್ಟರು ಹಾಗೂ ಕೋಟಿಗಟ್ಟಲ್ಲೇ ಹಣವನ್ನು ಹೂಡಿಕೆ ಮಾಡಿದರು. ಅದರಂತೇ, ತಮ್ಮ ವಿಶಿಷ್ಟ ಕಂಠಸಿರಿಯಿAದಲೇ ಗಂಧದಗುಡಿಯಲ್ಲಿ ಗುರ್ತಿಸಿಕೊಂಡು, ಲಕ್ಷಾಂತರ ಅಭಿಮಾನಿಗಳನ್ನು ಸಂಪಾದನೆ ಮಾಡಿರುವ ನವೀನ್ ಸಜ್ಜು ನ್ಯೂ ಆಲ್ಬಂಗ್‌ನ ನಿರ್ಮಾಣಕ್ಕೆ ಹಣಹೂಡಿಕೆ ಮಾಡೋದಾಗಿ ಮಾತುಕೊಟ್ಟಿದ್ದರು. ಮಾತ್ರವಲ್ಲ ಮಲೆಮಹಾದೇಶ್ವರ ಸಾಮಿಯ ಪವಾಡದ ಹಾಡಿಗೆ ಕಂಠಕುಣಿಸಿ-ಅಭಿನಯಿಸುವುದಕ್ಕೂ ಒಪ್ಪಿಕೊಂಡಿದ್ದರAತೆ. ಮಾದಪ್ಪನಿಗೆ ನಮ್ಮ ಪ್ರೊಡಕ್ಷನ್ ಹೌಸ್‌ನಿಂದ ಚಿಕ್ಕ ಕಾಣಿಕೆ ಕೊಟ್ಟಂತಾಗುತ್ತೆ ಎಂದು ಖೂಷಿಯಾಗಿ ಗ್ರೀನ್ ಸಿಗ್ನಲ್ ಕೊಟ್ಟಿದ್ದರಂತೆ. ಆದ್ರೀಗ ಅಪ್ಪುನೇ ಇಲ್ಲ. ಮುಂದಿನ ದಿನಗಳಲ್ಲಿ ಈ ಹಾಡನ್ನ ನವೀನ್ ಸಜ್ಜು ಟೇಕಾಫ್ ಮಾಡ್ಬೋದು ಅಥವಾ ಬಿಡ್ಬೋದು. ಆದರೆ, ನಟಸಾರ್ವಭೌಮ ಹೆಜ್ಜೆಹಾಕಿದ್ಹಂತೆ ಆಗೋದಿಲ್ಲ, ಯುವರತ್ನ ಕಂಠಕುಣಿಸಿದ ಹಾಗೇ ಆಗಲ್ಲವಲ್ಲ ಎನ್ನುವ ಕೊರಗು ಸ್ವತಃ ನವೀನ್ ಸಜ್ಜುಗೂ ಇದೆ. ಹೀಗಾಗಿಯೇ, ಅಪ್ಪು ಕಳೆದುಕೊಂಡ ದುಃಖವನ್ನ ಸೋಷಿಯಲ್ ಮೀಡಿಯಾದಲ್ಲಿ ತೋಡಿಕೊಂಡಿದ್ದಾರೆ. ಕ್ರೂರಿ ಜವರಾಯನಿಗೆ ಹಿಡಿಶಾಪ ಹಾಕಿದ್ದಾರೆ.

  • ಎಂಟರ್‌ಟೈನ್‌ ಮೆಂಟ್‌ ಬ್ಯೂರೋ ಸಿನಿಲಹರಿ
error: Content is protected !!