ಪವರ್‌ ಸ್ಟಾರ್‌ ಡೇ ಆಚರಿಸಲು ಶುರುವಾಯ್ತು ಕ್ಯಾಂಪೇನ್;‌ ಕೈ ಜೋಡಿಸಿ ಅಂತಿದಾರೆ ಫ್ಯಾನ್ಸ್‌ !

ಮನುಷ್ಯ ಇದ್ದಾಗ ಅವರ ಬೆಲೆ ಗೊತ್ತಾಗೋದೇ ಇಲ್ಲ. ಅದೇ ಅವರಿಲ್ಲವಾದಾಗ, ನಿಜವಾದ ಬೆಲೆ ಗೊತ್ತಾಗುತ್ತೆ. ಆದರೆ, ಪುನೀತ್‌ ರಾಜಕುಮಾರ್‌ ವಿಷಯದಲ್ಲಿ ಹಾಗೆ ಆಗಲೇ ಇಲ್ಲ. ಅವರು ಇದ್ದಾಗಲೇ ದೊಡ್ಡ ಬೆಲೆ ಇತ್ತು. ಹೌದು, ಈ ಮಾತು ಅಕ್ಷರಶಃ ನಿಜ. ಅವರು ಎಷ್ಟೋ ಸಮಸ್ಯೆಗಳಿಗೆ ಪರಿಹಾರ ಕೊಟ್ಟಿದ್ದರು. ಅದೆಷ್ಟೋ ನೊಂದ ಜೀವಗಳಿಗೆ ಸಾಂತ್ವಾನ ಹೇಳಿದ್ದರು. ದಿಕ್ಕಿಲ್ಲದವರನ್ನು ಸಂತೈಸಿದ್ದರು. ಸೂರಿಲ್ಲದವರಿಗೆ ತಲೆ ಸವರಿ ಆಶ್ರಯ ನೀಡಿದ್ದರು. ಅನಾಥರಿಗೆ ಆಪ್ತರಾಗಿ, ಅವರ ಕಣ್ಣೀರು ಹೊರೆಸಿದ್ದರು. ಇನ್ನು ಗೊತ್ತಾಗದೇ ಉಳಿದಿರುವ ಅನೇಕ ಒಳ್ಳೆಯ ಕಾರ್ಯಕ್ರಮಗಳನ್ನು ಮಾಡಿದ್ದರು ಪುನೀತ್‌ ರಾಜಕುಮಾರ್.‌


ಪುನೀತ್‌ ಇಲ್ಲ ಎಂಬ ಮಾತನ್ನು ಅರಗಿಸಿಕೊಳ್ಳಲಾಗುತ್ತಿಲ್ಲ. ಅದರಲ್ಲೂ ಪುನೀತ್‌ ಇಲ್ಲ ಅಂತ ಯಾರೊಬ್ಬರೂ ಭಾವಿಸಿಲ್ಲ. ಅನೇಕರು ಪುನೀತ್‌ ನಮ್ಮೊಂದಿಗಿದ್ದಾರೆ ಅಂತಾನೇ ಜೈಕಾರ ಹಾಕುತ್ತಿದ್ದಾರೆ. ನಿಜವಾಗಿಯೂ ಪುನೀತ್‌ ನಮ್ಮನ್ನು ಬಿಟ್ಟು ಎಲ್ಲೂ ಹೋಗಿಲ್ಲ. ಅವರು ನಮ್ಮ ಜೊತೆಗಿದ್ದಾರೆ. ಅವರು ನಟಿಸಿದ ಸಿನಿಮಾಗಳಲ್ಲಿ ಜೀವಂತವಾಗಿದ್ದಾರೆ. ಈಗ ಪುನೀತ್‌ ರಾಜಕುಮಾರ್‌ ಅವರ ಫ್ಯಾನ್ಸ್‌ ಒಂದು ಕ್ಯಾಂಪೇನ್‌ ಶುರುಮಾಡಿದೆ. ಪವರ್‌ ಆಫ್‌ ಯೂತ್‌ ಎಂಬ ಟ್ಯಾಗ್‌ಲೈನ್‌ ಇರುವ ಟೀಮ್‌ವೊಂದು, 29-10-2021 ದಿನವನ್ನು ಪವರ್‌ ಸ್ಟಾರ್‌ ಡೇ ಎಂದು ಪರಿಗಣಿಸಿ, ಆಚರಿಸಬೇಕು ಎಂಬ ಮನವಿ ಮಾಡುತ್ತಿದೆ. ಅಪ್ಪು ಇಲ್ಲದ ಆ ದಿನ ಅವರ ದಿನವನ್ನಾಗಿ ಮಾಡಬೇಕು ಎಂದು ತೀರ್ಮಾನಿಸಿರುವ ಆ ತಂಡ, ಎಲ್ಲರ ಸಹಕಾರ ಕೋರಿದೆ. ಎಲ್ಲರೂ ಸಹರಿಸಿ, ಪವರ್‌ ಸ್ಟಾರ್‌ ಡೇ ಆಚರಿಸಲು ಕೈ ಜೋಡಿಸಿ ಎಂದು ಮನವಿ ಮಾಡಿಕೊಂಡಿದೆ.

ಅಷ್ಟೇ ಈ ಪವರ್‌ ಸ್ಟಾರ್‌ ಡೇ ಕೇವಲ ನಾವಿರುವಷ್ಟು ದಿನ ಮಾತ್ರವಲ್ಲ, ಈ ದಿನ ನಾವು ಸತ್ತಮೇಲೂ ಮುಂದುವರೆಯಬೇಕು. ಇದಕ್ಕೆ ನಿಮ್ಮ ಬೆಂಬಲ ಬೇಕು. ಕೈ ಜೋಡಿಸಿ ಎಂದು ಕ್ಯಾಂಪೇನ್‌ ಶುರು ಮಾಡಿದೆ.
ಪ್ರೀತಿ, ಅಭಿಮಾನ ಅಂದರೆ ಇದೇ ಅಲ್ಲವೇ? ಮೊನ್ನೆಯಷ್ಟೇ ಮಾಜಿ ಸಿಎಂ ಸಿದ್ಧರಾಮಯ್ಯ ಅವರು, ಪುನೀತ್‌ ರಾಜಕುಮಾರ್‌ ಅವರ ಸಾಧನೆಯನ್ನು ಪರಿಗಣಿಸಿ, ಅವರಿಗೆ ಮರಣೋತ್ತರ ಪದ್ಮಶ್ರೀ ಪ್ರಶಸ್ತಿ ನೀಡಿ ಎಂದು ಮನವಿ ಮಾಡಿದ್ದರು. ಕೇಂದ್ರ ಮತ್ತು ರಾಜ್ಯ ಸರ್ಕಾರವನ್ನೂ ಒತ್ತಾಯಿಸಿದ್ದರು. ಅಷ್ಟೇ ಅಲ್ಲ, ಪುನೀತ್‌ ರಾಜಕುಮಾರ್‌ ಅವರ ಫ್ಯಾನ್ಸ್‌ ಕೂಡ ರಾಜರತ್ನ ಪ್ರಶಸ್ತಿಗೆ ಪರಿಗಣಿಸಿ, ಮರಣೋತ್ತರ ರಾಜರತ್ನ ಪ್ರಶಸ್ತಿ ಕೊಡಿ ಎಂದು ಆಗ್ರಹಿಸಿದ್ದರು. ಸಿಎಂ. ಬಸವರಾಜ ಬೊಮ್ಮಾಯಿ ಅವರು ಕೂಡ ಈ ಕುರಿತು ಸಚಿವರ ಜೊತೆ ಚರ್ಚಿಸಿ ಕ್ರಮ ಕೈಗೊಳ್ಳುವ ಭರವಸೆ ನೀಡಿದ್ದರು.


ಈಗ ಫ್ಯಾನ್ಸ್‌ ಅಪ್ಪು ಮೇಲಿರುವ ಪ್ರೀತಿಗೆ, ತಾವೇ ಪುನೀತ್‌ ಅವರನ್ನು ಕಳೆದುಕೊಂಡ ದಿನವನ್ನು “ಪವರ್‌ ಸ್ಟಾರ್‌ ಡೇ” ಎಂದು ಆಚರಿಸಲು ತೀರ್ಮಾನಿಸಿದ್ದಾರೆ. ಇದಕ್ಕೆ ಬಹುಶಃ ಎಲ್ಲರೂ ಕೈ ಜೋಡಿಸುವುದರಲ್ಲಿ ಅನುಮಾನವೇ. ಇಲ್ಲ. ಪುನೀತ್‌ ಇಲ್ಲದ ದಿನವನ್ನು ಕರಾಳ ದಿನ ಎಂದು ಬೇಸರಿಸಿಕೊಂಡಿದ್ದ ಸ್ಯಾಂಡಲ್‌ವುಡ್‌ ಕೂಡ, ಅಕ್ಟೋಬರ್‌ ೨೯ ರಂದು ಪವರ್‌ ಸ್ಟಾರ್‌ ಡೇ ಎಂದು ಆಚರಿಸಲು ಹಿಂದೆ ಮುಂದೆ ನೋಡುವುದಿಲ್ಲ. ಪುನೀತ್‌ ಅವರು ತಮ್ಮ ತಂದೆ ಹೇಗೆ ಅಭಿಮಾನಿಗಳನ್ನು ದೇವರು ಎಂದು ಕರೆದಿದ್ದರೋ, ಹಾಗೆಯೇ, ಪುನೀತ್‌ ಕೂಡ ಅಭಿಮಾನಿಗಳನ್ನು ಅದೇ ಪ್ರೀತಿಯಿಂದ ನೋಡುತ್ತಿದ್ದರು. ಈಗ ಪವರ್‌ ಆಫ್‌ ಯೂತ್‌ ಟೀಮ್‌ ಪವರ್‌ ಸ್ಟಾರ್‌ ಡೇ ಆಚರಿಸಲು ತೀರ್ಮಾನಿಸಿರುವುದರಿಂದ ಎಲ್ಲೆಡೆಯಿಂದಲೂ ಇದಕ್ಕೆ ಭರ್ಜರಿ ಬೆಂಬಲ ಸಿಗುತ್ತದೆ ಎಂಬ ವಿಶ್ವಾಸವಿದೆ.

Related Posts

error: Content is protected !!