Categories
ಸಿನಿ ಸುದ್ದಿ

‘ಕನ್ನಿಕೇರಿ ಹುಡ್ಗಿ’ ಕಿಕ್ಕಿಗೆ ಹೊಡಿರೀ ಸೀಟಿ ! ಆಲೂರ್ ನಾಗಪ್ಪನವ್ರ ಮಗಳು ದಿವ್ಯಾಗೆ ‘ಜಾನಪದ ಪ್ರೀತಿ’ !

ಮಾಯ ಬಜಾರ್‌ಗೆ ಸಪೌಷ್ಟಿಕ ಚೆಲುವೆಯವರು ಪದಾರ್ಪಣೆ ಮಾಡಿದಾಗ, ಬಂಟಲು ಕಂಗಳ ಬೆಡಗಿಯರು ಬಂದಾಗ, ನೀಳಕಾಯದ ಸುಂದರಿಯರು ಎಂಟ್ರಿಕೊಟ್ಟಾಗ, ನಿಂಬೆ ಹಣ್ಣಿನಂಥ ಹುಡ್ಗಿಯರು ಆಗಮಿಸಿದಾಗ, ಸ್ಟ್ರ್ಯಾಬೆರಿಯಷ್ಟೇ ಸ್ವೀಟಿ, ಆಪಲ್‌ನಷ್ಟೇ ಬೊಂಬಾಟ್ ಆಗಿರುವ ನಟಿಮಣಿಯರು ಸ್ಯಾಂಡಲ್‌ವುಡ್ ಪ್ರಪಂಚಕ್ಕೆ ಬಂದಾಗ ಅವರೆಲ್ಲರನ್ನೂ ರತ್ನಗಂಬಳಿ ಹಾಕಿ ಸ್ವಾಗತಿಸಿದ್ದೀರಿ. ಗ್ರ್ಯಾಂಡ್ ಆಗಿ ವೆಲ್‌ಕಮ್ ಮಾಡ್ಕೊಂಡು ತಲೆ ಮೇಲೆ ಹೊತ್ತು ಮೆರೆಸಿದ್ದೀರಾ. ಇದೀಗ ನಮ್ಮ ಕನ್ನಡದ ಕನ್ನಿಕೇರಿ ಹುಡ್ಗಿಯ ಸರದಿ. ನಿರೂಪಕಿಯಾಗಿ ಕನ್ನಡಿಗರ ಮನೆ-ಮನ ತಲುಪಿರುವ ನಿರೂಪಕಿ ಈಗ ‘ಕನ್ನಿಕೇರಿ ಹುಡ್ಗಿ’ ರೂಪದಲ್ಲಿ ನಾಯಕಿಯಾಗಿ ಪ್ಲಸ್ ಗಾಯಕಿಯಾಗಿ ನಿಮ್ಮ ಮುಂದೆ ಬಂದಿದ್ದಾರೆ. ಅಷ್ಟಕ್ಕೂ, ಆ ನಿರೂಪಕಿ ಮತ್ಯಾರು ಅಲ್ಲ ದಿವ್ಯಾ ಆಲೂರ್

ದಿವ್ಯಾ ಆಲೂರ್ ಕನ್ನಡದ ಖ್ಯಾತ ನಿರೂಪಕಿಯರಲ್ಲೊಬ್ಬರು. ಕನ್ನಡ ಭಾಷೆ-ಕಲೆ-ಸಾಹಿತ್ಯ-ಸಂಸ್ಕೃತಿಯನ್ನು ಸಾರುವಂತಹ ಕಾರ್ಯಕ್ರಮಗಳಲ್ಲಿ ದಿವ್ಯಾ ಆಲೂರ್ ನಿರೂಪಣೆ ಇದ್ದೇ ಇರುತ್ತೆ. ಕಳೆದ ಹದಿನೆಂಟು ವರ್ಷಗಳಿಂದ ನಿರೂಪಕಿಯಾಗಿ ಕರುನಾಡಿನಾದ್ಯಂತ ಹಲವಾರು ಕಾರ್ಯಕ್ರಮಗಳನ್ನು ಹೋಸ್ಟ್ ಮಾಡಿರುವಂತಹ ದಿವ್ಯಾ ಅವರು. ದೇಸಿ ಬೀಟ್ಸ್ ಎನ್ನುವ ಜನಪದ ಮ್ಯೂಸಿಕ್ ಬ್ಯಾಂಡ್‌ನೊಂದಿಗೆ ನಾಡಿನ ಮೂಲೆ ಮೂಲೆಯಲ್ಲಿ ಸಂಗೀತ ಕಾರ್ಯಕ್ರಮಗಳನ್ನು ನೀಡುತ್ತಾ ಬಂದಿದ್ದಾರೆ. ಹೊಸ ಪ್ರಯತ್ನ-ದಿಟ್ಟ ಹೆಜ್ಜೆ-ಅಪ್ಪನ ಕನಸು-ಜಾನಪದ ಲೋಕಕ್ಕೆ ಕೊಡುಗೆ ನೀಡಬೇಕು ಎನ್ನುವ ಹಂಬಲದೊಂದಿಗೆ `ಕನ್ನಿಕೇರಿ ಹುಡ್ಗಿ’ ಹೆಸರಿನ ಜಾನಪದ ಹಾಡಿಗೆ ಹೊಸತನ ನೀಡಿ ಅದನ್ನು ಕನ್ನಡಿಗರಿಗೆ ಅರ್ಪಣೆ ಮಾಡಿದ್ದಾರೆ.

ಕನ್ನಿಕೇರಿ ಹುಡ್ಗಿಯೊಬ್ಳು ಕನಕರಾಯನ ಜಾತ್ರೆಯೊಳಗೆ...ಮಿಣಮಿಣಕ ನೋಡುತ್ತಾಳೆ ಏನು ಸಿಂಗಾರ...ಇದು ೯೦ರ ದಶಕದಲ್ಲಿ ಬ್ಲಾಕ್‌ಬಸ್ಟರ್ ಹಿಟ್ಟಾದ ಹಾಡು.ಜನಪದರ ಬಾಯಲ್ಲಿ ನಲಿದಾಡುತ್ತಿದ್ದ ಈ ಹಾಡನ್ನು ತಲೆತಲೆಮಾರಿಗೂ ಉಳಿಸಬೇಕು ಎನ್ನುವ ನಿಟ್ಟಿನಲ್ಲಿ ಜಾನಪದ ಸಾಹಿತಿಗಳು ಹಾಗೂ ಗಾಯಕರು ಆದಂತಹ ಆಲೂರು ನಾಗಪ್ಪ ಅವರು ಕ್ಯಾಸೆಟ್ ರೂಪದಲ್ಲಿ ಹೊರತಂದರು. ಈ ಹಾಡಿಗೆ ಮನೋರಂಜನ್ ಪ್ರಭಾಕರ್ ಅವರು ಸಂಗೀತ ಸಂಯೋಜನೆ ಮಾಡಿದ್ದರು, ಆಲೂರು ನಾಗಪ್ಪನವ್ರೇ ಹಾಡಿದ್ದರು. ಇದೀಗ ಇವರ ಮಗಳಾದ ದಿವ್ಯಾ ಆಲೂರ್ ಅವರು ‘ಕನ್ನಿಕೇರಿ ಹುಡ್ಗಿ’ ಹಾಡಿಗೆ ಕಂಠಕುಣಿಸಿ, ಅಭಿನಯಿಸಿ, ರಿಮಿಕ್ಸ್ ಸ್ಪರ್ಶ ಕೊಡಿಸಿ ಆಲ್ಬಂ ರೂಪದಲ್ಲಿ ಹೊರತಂದಿದ್ದಾರೆ. ಪತಿ ಆದರ್ಶ್ ನೆರವಿನಿಂದ ತಂದೆ ತಂದೆ ಜನಪ್ರಿಯಗೊಳಿಸಿದ್ದ `ಕನ್ನಿಕೇರಿ ಹುಡುಗಿ’ ಹಾಡನ್ನು ಕೇಳುಗರ ಮುಂದಿಟ್ಟಿದ್ದಾರೆ. ಪ್ರಶಾಂತ್ ಕುಮಾರ್ ಈ ಹಾಡನ್ನು ನಿರ್ದೇಶಿಸಿದ್ದಾರೆ. ಅರುಣ್ ಆಂಡ್ರ್ಯೂ ಸಂಗೀತ ನೀಡಿದ್ದಾರೆ. ರಾಜಶೇಖರ್ ಛಾಯಾಗ್ರಹಣ ಮಾಡಿದ್ದಾರೆ.

ರ‍್ಯಾಪ್-ಪಾಪ್ ಮಧ್ಯೆ ಫೋಕ್ ಕಳೆದೋಗಬಾರ್ದು, ಕಣ್ಮರೆಯಾಗಬಾರ್ದು ಅಂತ ಕನ್ನಡ ಮಣ್ಣಲ್ಲಿ ಹುಟ್ಟಿ-ಬೆಳೆದು-ಉಸಿರಾಡುತ್ತಿರುವ ಬಹುತೇಕ ಕಲಾವಿದರು ಒಂದಲ್ಲ,ಒಂದು ರೀತಿಯಲ್ಲಿ ಜಾನಪದವನ್ನು ಉಳಿಸಿ ಬೆಳೆಸುವ ಕಾಯಕವನ್ನು ಕಣ್ಣಿಗೊತ್ತಿಕೊಂಡು ಮಾಡುತ್ತಿದ್ದಾರೆ. ಅದೇ ರೀತಿ ಹೆಸರಾಂತ ಜನಪದ ಗಾಯಕ ಆಲೂರ್ ನಾಗಪ್ಪ ಅವರ ಮಗಳು ದಿವ್ಯಾ ಆಲೂರ್ ಕೂಡ ಹುಮ್ಮಸ್ಸಿನಿಂದ-ಉತ್ಸಾಹದಿಂದ-ಹುರುಪಿನಿಂದ ಜಾನಪದವನ್ನು ಶ್ರೀಮಂತಗೊಳಿಸೋದಕ್ಕೆ ಮುಂದಾಗಿದ್ದಾರೆ. ‘ಜನಪದ ಈಸ್ ಎವರಿ ಜೆನ್ ಪದ'ಹೀಗಾಗಿ,ಜನಪದ ಪ್ರತಿ ಜೆನರೇಷನ್‌ಗೂ ತಲುಪಬೇಕು ಎನ್ನುತ್ತಾ ಯುವಪೀಳಿಗೆಯನ್ನು ಫೋಕ್ ಸಂಸ್ಕೃತಿಯತ್ತ ಅಟ್ರ್ಯಾಕ್ಟ್ ಮಾಡೋದಕ್ಕೆ ಹೊರಟಿದ್ದಾರೆ.ಇದರ ಮೊದಲ ಭಾಗವಾಗಿ ಕನ್ನಿಕೇರಿ ಹುಡ್ಗಿ’ ಸಾಂಗ್ ರಿಮಿಕ್ಸ್ ಮಾಡಿ ಈಗಾಗಲೇ ರಿಲೀಸ್ ಮಾಡಿದ್ದಾರೆ.

ಇತ್ತೀಚೆಗಷ್ಟೇ ಈ ಹಾಡಿನ ಬಿಡುಗಡೆ ಕಾರ್ಯಕ್ರಮ ನಡೀತು. ಮಗಳ ಚೊಚ್ಚಲ ಪ್ರಯತ್ನವನ್ನು ಕಣ್ತುಂಬಿಕೊಳ್ಳೋದಕ್ಕೆ ನಿರೂಪಕಿ ದಿವ್ಯಾ ಆಲೂರ್ ಅವರ ತಂದೆ ಆಲೂರು ನಾಗಪ್ಪ ನವ್ರು ಬಂದಿದ್ದರು. ಮಹಿಳಾ ಸಮಾಜದ ಶಾಂತ ರಾಮಸ್ವಾಮಿ, ನಿರ್ಮಾಪಕ ಚಂದನ್‌ಗೌಡ, ಕನ್ನಡವೇ ಸತ್ಯ ರಂಗಣ್ಣ ಸೇರಿದಂತೆ ಕೆಲವು ಗಣ್ಯರು ಕಾರ್ಯಕ್ರಮದ ಅತಿಥಿಗಳಾಗಿ ಆಗಮಿಸಿದ್ದರು. ಇವರುಗಳ ಸಮ್ಮುಖದಲ್ಲಿ ‘ಕನ್ನಿಕೇರಿ ಹುಡ್ಗಿ'ಆಲ್ಬಂ ಸಾಂಗ್‌ನ ಬಿಡುಗಡೆ ಮಾಡಲಾಯ್ತು.ಈ ವೇಳೆ ಮಾತನಾಡಿದ ಆಲೂರ್ ನಾಗಪ್ಪನವರ್ ಆಂಕರಿಂಗ್ ಯಾರ್ ಬೇಕಾದರೂ ಮಾಡ್ಬೋದು ಮಗಳೇ, ನನ್ನಂಥೆ ನೀನು ಕೂಡ ಜಾನಪದ ಲೋಕಕ್ಕೆ ನಿನ್ನದೇ ಆದ ಅಳಿಲು ಸೇವೆ ಮಾಡ್ಬೇಕು ಅಂತ ಹೇಳಿದ್ದೆ’ ಕೊನೆಗೂ ನನ್ನ ಮಗಳು ನನ್ನ ಕನಸನ್ನು ಈಡೇರಿಸಿದ್ದಾಳೆ. ಮೊದಲ ಹೆಜ್ಜೆ ಇಟ್ಟಿದ್ದಾಳೆ ಅವಳಿಗೆ ಒಳ್ಳೆಯದಾಗಲಿ ಎಂದರು.

ತಂದೆಯ ಕನಸನ್ನು ಈಡೇರಿಸ್ಬೇಕು ಎನ್ನುವ ನನ್ನ ಕನಸು ಕೂಡ ‘ಕನ್ನಿಕೇರಿ ಹುಡ್ಗಿ' ಹಾಡಿನ ಮೂಲಕ ನೆರವೇರಿದೆ.ತಂದೆ ಜೀವ ತುಂಬಿದ್ದ ಹಾಡಿಗೆ ಧಕ್ಕೆ ತರದಂತೆ ಸ್ವಲ್ಪೇ ಸ್ವಲ್ಪ ಮಾಸ್ ಮಸಾಲೆ ಮಿಕ್ಸ್ ಮಾಡಿ ಹಾಡನ್ನು ದೃಶ್ಯ ರೂಪಕದಲ್ಲಿ ಹೊರತಂದಿರುವುದಾಗಿ ನಿರೂಪಕಿ-ನಾಯಕಿ ಕಮ್ ಗಾಯಕಿ ದಿವ್ಯಾ ಆಲೂರ್ ಹೇಳಿಕೊಂಡಿದ್ದಾರೆ.ಇವತ್ತಿನ ಯುವಪೀಳಿಗೆಯನ್ನು ಗಮನ ಸೆಳೆಯೋಕೆ ರ‍್ಯಾಪ್ ಟಚ್ ಕೊಟ್ಟಿದ್ದಾರೆ.ಕೈಯಲ್ಲಿ ಗೀಟಾರ್ ಹಿಡಿದು ಕಲರ್ ಕಲರ್ ಕಾಸ್ಟ್ಯೂಮ್ ತೊಟ್ಟು ಮಿಂಚಿದ್ದಾರೆ.ದಿವ್ಯಾ ಪತಿ ಆದರ್ಶ್ ಕೂಡ ಆಲ್ಬಂನಲ್ಲಿ ಧಗಧಗಿಸಿದ್ದಾರೆ.ಮೊದಲ ಆಲ್ಬಂ ಸಾಂಗ್ ಆದರೂ ಕೂಡ ಅದ್ದೂರಿತನಕ್ಕೆ ಕೊರತೆಯಾಗಿಲ್ಲ.ಇವರಿಂದ ಅನೇಕರಿಗೆ ಅವಕಾಶ ಸಿಕ್ಕಿದೆ.ಹೊಸ ಪ್ರತಿಭೆಗಳು ಕೂಡ ಈ ಆಲ್ಬಂನಲ್ಲಿ ಮಿಂಚಿದ್ದಾರೆ.ವಿಶೇಷ ಅಂದರೆ ಬಿಲೀವ್ ಕಂಪೆನಿ ಜೊತೆ ಟಯಪ್ ಆಗಿದ್ದು ತಿಂಗಳಿಗೊಂದು ಜಾನಪದ ಆಲ್ಬಂ ಸಾಂಗ್’ನ ಕರುನಾಡ ಜನರಿಗೆ ಕೊಡಬೇಕು ಎನ್ನುವುದು ಇವರ ಉದ್ದೇಶವಾಗಿದೆ. ಇವರ ಮಹಾದಾಸೆ ಈಡೇರಲಿ. ಜಾನಪದ ಕಲೆ-ಸಂಸ್ಕೃತಿ ಇನ್ನೂ ಶ್ರೀಮಂತಗೊಳ್ಳಲಿ. ದಿವ್ಯಾ-ಆದರ್ಶ್ ಜಾನಪದ ಪ್ರೀತಿಗೆ ಯಶಸ್ಸು ಸಿಗಲಿ

ವಿಶಾಲಾಕ್ಷಿ, ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಮತ್ತಷ್ಟು ದಾಖಲೆ ಬರೆದ ಬೊಂಬೆ ಹೇಳುತ್ತೈತೆ ಹಾಡು! 100 ಮಿಲಿಯನ್ಸ್‌ ವೀಕ್ಷಣೆ ಪಡೆದ ಮೇಕಿಂಗ್‌ ವಿಡಿಯೋ!!


ಪುನೀತ್‌ ರಾಜಕುಮಾರ್‌ ಇಲ್ಲವೆಂಬ ಭಾವ ಯಾರಿಗೂ ಇಲ್ಲ. ದೈಹಿಕವಾಗಿ ಅವರಿಲ್ಲದಿದ್ದರೂ, ಎಲ್ಲರ ಹೃದಯದಲ್ಲಿ ಪುನೀತ್‌ ರಾಜಕುಮಾರ್‌ ನೆಲೆಸಿದ್ದಾರೆ. ಇದು ನಿಜ. ಅವರು ಏನೇ ಮಾಡಿದರೂ ದೊಡ್ಡ ಸುದ್ದಿಯೇ ಆಗುತ್ತಿತ್ತು. ಅವರು ಸಿನಿಮಾ ಮಾಡಲಿ, ಹಾಡು ಹಾಡಲಿ, ಡೈಲಾಗ್‌ ಹೇಳಲಿ, ಡ್ಯಾನ್ಸ್‌ ಮಾಡಲಿ, ಫೈಟ್‌ ಮಾಡಲಿ ಏನೂ ಮಾಡಿದರೂ ಜನ ಸೈ ಎನ್ನುತ್ತಿದ್ದರು. ಖುಷಿಯಿಂದಲೇ ಚಪ್ಪಾಳೆ ತಟ್ಟಿ, ಶಿಳ್ಳೆ ಹಾಕಿ ಸಂಭ್ರಮಿಸುತ್ತಿದ್ದರು. ಅವರಿಲ್ಲದಿದ್ದರೂ, ಆ ಸಂಭ್ರಮ ನಿರಂತರವಾಗಿರುತ್ತೆ ಅನ್ನುವುದನ್ನು ಪ್ರತ್ಯೇಕವಾಗಿ ಹೇಳುವ ಅಗತ್ಯವಿಲ್ಲ.

ಪುನೀತ್‌ ಇಲ್ಲ ಅಂದುಕೊಳ್ಳದ ಅವರ ಅಭಿಮಾನಿಗಳು ಮತ್ತು ನಾಡಿನ ಜನ, ಅವರ ಸಿನಿಮಾಗಳನ್ನು ಮತ್ತೆ ಮತ್ತೆ ನೋಡುತ್ತಿದ್ದಾರೆ. ಹಾಡುಗಳನ್ನು ಪುನಃ ಕೇಳುತ್ತಲೇ ಇದ್ದಾರೆ. ಅವರ ಮಾತುಗಳನ್ನು ಕೇಳಿ ಅದೆಷ್ಟೋ ಮಂದಿ ಕಣ್ಣೀರಾಗಿದ್ದಾರೆ. ಈಗ ಮತ್ತೊಂದು ದಾಖಲೆಯ ವಿಷಯ ಏನೆಂದರೆ, ಅವರ ರಾಜಕುಮಾರ ಚಿತ್ರದ ಬೊಂಬೆ ಹೇಳುತ್ತೈತೆ ಹಾಡು ದೊಡ್ಡ ದಾಖಲೆ ಬರೆದಿದೆ.

ಹೌದು, ರಾಜಕುಮಾರ ಸಿನಿಮಾ ಪುನೀತ್ ರಾಜ್‌ಕುಮಾರ್ ಅವರ 42ನೇ ಹುಟ್ಟುಹಬ್ಬ ಸಂಭ್ರಮದ ಬಳಿಕ ರಿಲೀಸ್ ಆಗಿತ್ತು. ಸಂತೋಷ್ ಆನಂದ್‌ರಾಮ್ ನಿರ್ದೇಶಿಸಿದ್ದ ಈ ಚಿತ್ರ ದೊಡ್ಡ ಸುದ್ದಿ ಮಾಡಿತ್ತು. ಅನೇಕ ದಾಖಲೆಗಳನ್ನೂ ಬರೆದಿತ್ತು. ಈ ಸಿನಿಮಾ ರಿಲೀಸ್‌ ಆಗುವ ಮೊದಲೇ ದೊಡ್ಡ ಸೌಂಡ ಮಾಡಿತ್ತು. ಅದಕ್ಕೆ ಕಾರಣ, ಬೊಂಬೆ ಹೇಳುತೈತೆ ಹಾಡು. ಹೌದು, ಈ ಹಾಡಿಗೆ ವಿ.ಹರಿಕೃಷ್ಣ ಸಂಗೀತ ಸಂಯೋಜಿಸಿದ್ದರು. ಗಾಯಕ ವಿಜಯ್ ಪ್ರಕಾಶ್ ಹಾಡಿದ್ದರು.

ಬೊಂಬೆ ಹೇಳುತೈತೆ ಹಾಡಿನ ಮೇಕಿಂಗ್ ಝಲಕ್ ರಿಲೀಸ್ ಮಾಡಿದ್ದರಿಂದ ಜನರು ಈ ಹಾಡನ್ನೇ ಗುನುಗುವ ಮೂಲಕ ಸಿನಿಮಾ ರಿಲೀಸ್‌ಗೆ ಕಾದಿದ್ದರು. ನಂತರ ಸಿನಿಮಾ ಬಿಡುಗಡೆಯಾದ ಬಳಿಕ ಹಾಡು ಸೂಪರ್‌ ಹಿಟ್‌ ಲಿಸ್ಟ್‌ಗೆ ಸೇರಿತ್ತು. ಈ ಹಾಡು ಈಗ ಮತ್ತಷ್ಟು ಜನಪ್ರಿಯವಾಗಿದೆ ಅನ್ನೋದೇ ವಿಶೇಷ. ಯುಟ್ಯೂಬ್‌ನಲ್ಲಿ ಬರೋಬ್ಬರಿ 100 ಮಿಲಿಯನ್ ವೀಕ್ಷಣೆ ಕಂಡು ದಾಖಲೆ ಬರೆದಿದೆ. ಭಾರತದಲ್ಲಿ ಮೇಕಿಂಗ್ ವಿಡಿಯೋಗೆ ಇಷ್ಟೊಂದು ವೀವ್ಸ್ ಸಿಕ್ಕಿರುವುದು ವಿಶೇಷತೆಗಳಲ್ಲೊಂದು. ಅದೇನೆ ಇರಲಿ, ಅಪ್ಪು ಫ್ಯಾನ್ಸ್‌ ಮಾತಲ್ಲಿ ಅಪ್ಪು ಸದಾ ರಾಜಕುಮಾರ.

Categories
ಸಿನಿ ಸುದ್ದಿ

ಮದಗಜ ನೋಡೋಕೆ ಕಾಲೇಜಿಗೆ ರಜೆ ಕೊಡಿ! ಹೀಗಂತ ಮೈಸೂರು ಕಾಲೇಜು ಸ್ಟುಡೆಂಟ್ ಪ್ರಿನ್ಸಿಪಾಲರಿಗೆ ಪತ್ರ ಬರೆದ!!


ಮದಗಜ ಸಿನಿಮಾ ರಿಲೀಸ್‌ ಡೇಟ್‌ ಅನೌನ್ಸ್‌ ಮಾಡಿದ್ದೇ ತಡ, ಶ್ರೀಮುರಳಿ ಫ್ಯಾನ್ಸ್‌ ಸಿಕ್ಕಾಪಟ್ಟೆ ಖುಷಿಯಲ್ಲಿದ್ದಾರೆ. ಅಷ್ಟೇ ಅಲ್ಲ, ಸಿನಿಮಾ ನೋಡೋಕೆ ತುದಿಗಾಲ ಮೇಲೆ ನಿಂತಿದ್ದಾರೆ. ಇದಿಷ್ಟೇ ಆಗಿದ್ದರೆ ಹೇಳುವ ಅಗತ್ಯ ಇರುತ್ತಿರಲಿಲ್ಲ. ಈಗ ಹೊಸ ಸುದ್ದಿ ಅಂದರೆ, ಮದಗಜ ಸಿನಿಮಾ ನೋಡಲು ಕಾಲೇಜಿಗೆ ರಜೆ ಕೊಡಿ ಅಂತ ಕಾಲೇಜಿನಿ ವಿದ್ಯಾರ್ಥಿಯೊಬ್ಬ ಪ್ರಾಂಶುಪಾಲರಿಗೆ ಪತ್ರ ಬರೆದಿದ್ದಾನೆ…

ಹೌದು, ಶ್ರೀಮುರಳಿಯ ಅಪ್ಪಟ ಅಭಿಮಾನಿಯೊಬ್ಬ ಮದಗಜ ಚಿತ್ರ ನೋಡಲು ಮೈಸೂರಿನ ಜ್ಞಾನೋದಯ ಕಾಲೇಜಿಗೆ ರಜೆ ಕೊಡಬೇಕು ಎಂದು ವಿದ್ಯಾರ್ಥಿ ವಿಕ್ರಮ್‌ ಎಂಬಾತ ಪ್ರಿನ್ಸಿಪಾಲ್‌ಗೆ ಪತ್ರ ಬರೆದಿದ್ದಾನೆ.
ಆತ ಬರೆದಿರುವ ಪತ್ರದಲ್ಲಿ, “ಡಿಯರ್‌ ಪ್ರಿನ್ಸಿಪಾಲ್‌, ಡಿಸೆಂಬರ್‌ ೩ ರಂದು ಕಾಲೇಜಿಗೆ ರಜೆ ಘೋಷಣೆ ಮಾಡಿ. ಯಾಕೆಂದರೆ, ಅಂದು ರೋರಿಂಗ್‌ ಸ್ಟಾರ್‌ ಶ್ರೀಮುರಳಿ ಅವರ “ಮದಗಜ” ಸಿನಿಮಾ ರಿಲೀಸ್‌ ಆಗುತ್ತಿದೆ.

ಹಾಗಾಗಿ, ಎಲ್ಲರೂ ಅವರ ಸಿನಿಮಾ ನೋಡಲು ಕಾತುರರಾಗಿದ್ದಾರೆ. ಅದರಲ್ಲೂ, ಅದೊಂದು ಬಹುನಿರೀಕ್ಷೆಯ ಚಿತ್ರ. ಹೀಗಾಗಲಿ, ಜನರು ಕೂಡ ಸಿನಿಮಾ ನೋಡಲು ಕಾಯುತ್ತಿದ್ದಾರೆ. ನಾವೆಲ್ಲರೂ ಕೂಡ ಕಾಯುತ್ತಿದ್ದೇವೆ. ಆದ್ದರಿಂದ, ಡಿಸೆಂಬರ್‌ ೩ ರಂದು ಮದಗಜ ಸಿನಿಮಾ ರಿಲೀಸ್‌ ಆಗುತ್ತಿರುವುದರಿಂದ ಅಂದು ಕಾಲೇಜಿಗೆ ರಜೆಯನ್ನು ಘೋಷಿಸಬೇಕು ಎಂದು ಪತ್ರ ಬರೆದು, ಪೋಸ್ಟ್‌ ಮಾಡಿದ್ದಾನೆ.
ಈ ರೀತಿಯ ಅಭಿಮಾನಿಗಳ ಪತ್ರಗಳು ಹೊಸದೇನಲ್ಲ.

ಆದರೆ, ಮೈಸೂರಿನ ಜ್ಞಾನೋದಯ ಕಾಲೇಜು ವಿದ್ಯಾರ್ಥಿಯೊಬ್ಬ, ಈ ರೀತಿ ಪರಿ ಪರಿಯಾಗಿ ತನ್ನ ಕಾಲೇಜಿನ ಪ್ರಾಂಶುಪಾಲರಿಗೆ , ಸಿನಿಮಾ ನೋಡುವ ಸಲುವಾಗಿಯೇ ರಜೆ ಕೊಡಬೇಕು ಎಂದು ಮನವಿ ಮಾಡಿಕೊಳ್ಳುವ ಮೂಲಕ ಪತ್ರವೊಂದನ್ನು ಬರೆದಿರುವುದು ನಿಜಕ್ಕೂ ವಿಶೇಷ.
ಅದೇನೆ ಇರಲಿ, ಇಂತಹ ಅಭಿಮಾನಿಗಳೂ ಇದ್ದಾರೆ ಅನ್ನುವುದಕ್ಕೆ ಇದೊಂದು ಉದಾಹರಣೆಯಷ್ಟೇ. ಶ್ರೀಮುರಳಿ ಅವರಿಗೆ ಈಗ ಸಾಕಷ್ಟು ಅಭಿಮಾನಿ ಬಳಗವಿದೆ. ಅವರೆಲ್ಲರೂ ಮದಗಜ ಚಿತ್ರವನ್ನು ನೋಡಲು ತುದಿಗಾಲ ಮೇಲೆ ನಿಂತಿದ್ದಾರೆ.

ಅದರಲ್ಲೂ ಶ್ರೀಮುರಳಿ ಅವರಿಗೆ ಕಾಲೇಜು ಸ್ಟುಡೇಂಟ್ಸ್‌ ಹೆಚ್ಚು ಫ್ಯಾನ್ಸ್.‌ ಯೂಥ್‌ಗೆ ಫೇವರೇಟ್‌ ಹೀರೋ ಎನಿಸಿರುವ ಶ್ರೀಮುರಳಿ ಅವರು, ಎಲ್ಲರನ್ನೂ ಅಷ್ಟೇ ಪ್ರೀತಿಯಿಂದ ಕಾಣುತ್ತಾರೆ. ಫ್ಯಾನ್ಸ್‌ ಅಂದರೆ ಸಾಕು, ಎಲ್ಲಿಲ್ಲದ ಪ್ರೀತಿ ಅವರಿಗೆ. ಸದಾ ಸೋಶಿಯಲ್‌ ಮೀಡಿಯಾದಲ್ಲಿ ಸಕ್ರಿಯರಾಗಿರುವ ಶ್ರೀಮುರಳಿ ಅವರು, ತಮ್ಮ ಅಭಿಮಾನಿಗಳಿಗಾಗಿಯೇ ವಿಶೇಷ ಪಾತ್ರವನ್ನು ಮದಗಜ ಚಿತ್ರದಲ್ಲಿ ನಿರ್ವಹಿಸಿದ್ದಾರೆ.

ಈಗಾಗಲೇ ಮದಗಜ ಸಾಕಷ್ಟು ಸುದ್ದಿಯಲ್ಲಿದೆ. ಇತ್ತೀಚೆಗೆ ಬಿಡುಗಡೆಯಾದ ಟೈಟಲ್‌ ಸಾಂಗ ಭರ್ಜರಿ ಹಿಟ್‌ ಆಗಿದೆ. ಆ ಹಾಡು ನೋಡಿದವರಿಗೆ ಸಿನಿಮಾ ನೋಡಲೇಬೇಕು ಅನ್ನುವಷ್ಟರ ಮಟ್ಟಿಗೆ ಸಾಂಗು ಸೂಪರ್‌ ಆಗಿದೆ. ಚಿತ್ರತಂಡ, ಡಿಸೆಂಬರ್‌ ೩ರಂದು ರಿಲೀಸ್‌ ಮಾಡಲು ಜೋರಾದ ತಯಾರಿ ಮಾಡಿಕೊಂಡಿದೆ.

Categories
ಸಿನಿ ಸುದ್ದಿ

ಪ್ರಿಯಾಮಣಿಯ ಸೈನ್ಸ್ ಫಿಕ್ಷನ್ ಆಕ್ಷನ್ ಥ್ರಿಲ್ಲರ್ ಡಿಆರ್ 56; ಟೀಸರ್ ಹೊರ ಬಂತು…

ಹರಿಹರ ಪಿಚ್ಚರ್ಸ್ ನಿರ್ಮಾಣದ ‘ಡಿಆರ್ 56’ ಚಿತ್ರದ ಟೀಸರ್ ಬಿಡುಗಡೆಯಾಗಿದೆ. ಹೀರೋ “ಪಿಆರ್” ಹಾಗು “ಪ್ರಿಯಾಮಣಿ” ಅಭಿನಯದ “ಡಿಆರ್ 56” ಚಿತ್ರದ ಟೀಸರ್ ಬಿಡುಗಡೆಗೆ ಕಾರಣ, ನಟ “ಪಿಆರ್” ಅವರ ಹುಟ್ಟು ಹಬ್ಬ. ಹಾಗಾಗಿ ಆನಂದ್ ಆಡಿಯೋ ಯುಟ್ಯೂಬ್ ಚಾನೆಲ್ ನಲ್ಲಿ ನವೆಂಬರ್ 11ರಂದು ಬಿಡುಗಡೆ ಮಾಡಲಾಗಿದೆ.


ಈ ಚಿತ್ರ ಕನ್ನಡ ಹಾಗೂ ತಮಿಳ್ ನಲ್ಲಿ ಏಕಕಾಲದಲ್ಲಿ ಚಿತ್ರೀಕರಣ ಮಾಡಲಾಗಿದ್ದು ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಡೆಯುತ್ತಿವೆ. ಚಿತ್ರ ತೆರೆಗೆ ಬರಲು ಸಜ್ಜಾಗಿದೆ. ಇದೊಂದು ಸೈನ್ಸ್ ಫಿಕ್ಷನ್ ಆಕ್ಷನ್ ಥ್ರಿಲ್ಲರ್ ಚಿತ್ರವಾಗಿದ್ದು ಸಮಾಜದಲ್ಲಿ ನಡೆಯುತ್ತಿದ್ದ, ನಡೆಯುತ್ತಿರುವ, ಮುಂದೆಯು ನಡೆಯುವ
ವಂಚನೆಯನ್ನು ಜನರಿಗೆ ಮನದಟ್ಟು ಮಾಡಿಸಲು ಹೊರಟಿರುವ ಚಿತ್ರ.

ಕಥೆ ಹಾಗೂ ಚಿತ್ರಕಥೆ ನಾಯಕನಟ “ಪಿಆರ್”
ಅವರೆ ರೂಪಿಸಿದ್ದು, ನಿರ್ದೇಶನದ ಜವಾಬ್ದಾರಿಯನ್ನು “ರಾಜೇಶ್ ಆನಂದ ಲೀಲಾ” ಅವರು ನಿರ್ವಹಿಸಿದ್ದಾರೆ
ರಾಕೇಶ್ ಸಿ ತಿಲಕ್ ಅವರ ಛಾಯಾಗ್ರಹಣ
ನೋಬಿನ್ ಪಾಲ್ ಅವರ ಸಂಗೀತ ಹಾಗೂ ಹಿನ್ನೆಲೆ ಸಂಗೀತ ವಿಶ್ವ ಎನ್ ಎಂ” ಅವರ ಸಂಕಲನ
“ಶಂಕರ್ ರಾಮನ್” ಅವರ ಸಂಭಾಷಣೆ
ನಾಗೇಂದ್ರ ಪ್ರಸಾದ್ ಅವರ ಸಾಹಿತ್ಯವಿದೆ.


ರಾಷ್ಟ್ರಪ್ರಶಸ್ತಿ ವಿಜೇತ “ವಿಕ್ರಂ ಮೋರ್” ಅವರ ಸಾಹಸ ನಿರ್ದೇಶನವಿದೆ. ಕಾರ್ಯಕಾರಿ ನಿರ್ಮಾಪಕ “ಶ್ರೀಕಾಂತ್ ಕಶ್ಯಪ್” ಅವರ ನಿರ್ವಹಣೆ ಚಿತ್ರಕ್ಕಿದೆ.

Categories
ಸಿನಿ ಸುದ್ದಿ

ದೊಡ್ಮನೆ ರಾಜರತ್ನನಿಗೆ ಅವಮಾನ ಮಾಡೋರಲ್ಲ ನಾವು; ಏಕ್ ಲವ್ ಯಾ’ ಅಚಾತುರ್ಯಕ್ಕೆ ಕ್ಷಮೆ ಇರಲಿ; ಅಪ್ಪು ಫ್ಯಾನ್ಸ್ ಬಳಿ ಪ್ರೇಮ್-ರಕ್ಷಿತಾ ಕ್ಷಮೆ !

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವ್ರನ್ನು ಅಭಿಮಾನಿಸುವವರು-ಪ್ರೀತಿಸುವವರು ನಾವು. ಅವರ ನಡೆ-ನುಡಿಯನ್ನು ಫಾಲೋ ಮಾಡುವವರು ನಾವು. ಅವ್ರಂತೇ ಬದುಕಿ-ಬಾಳಬೇಕು ಎಂದು ಆಸೆಪಡುತ್ತಿರುವವರು ನಾವು. ಅಪ್ಪು ಅವರ ಆದರ್ಶಗಳನ್ನು-ಗುಣಗಳನ್ನು ಮೈಗೂಡಿಸಿಕೊಂಡು ಮುಂದುವರಿಯಬೇಕು, ನಮ್ಮ ಕೈಯಲ್ಲಿ ಸಾಧ್ಯವಾದಷ್ಟು ಸಹಾಯ ಮಾಡ್ಬೇಕು, ಸ್ಪೂರ್ತಿಯುತ ಜೀವನ ನಡೆಸಬೇಕು, ಇದಷ್ಟು ದಿನ ಪ್ರೀತಿ ಹಂಚಬೇಕು, ಒಳ್ಳೆಯದ್ದನ್ನೇ ಮಾಡ್ಬೇಕು, ಒಳ್ಳೆಯದನ್ನೇ ಉಳಿಸಿ ಹೋಗ್ಬೇಕು ಅಂತ ಬಯಸ್ತಿರುವವರು ನಾವು ಹೀಗಿರುವಾಗ ನಾವ್ಯಾಕೆ ಅಪ್ಪುಗೆ ಅವಮಾನ ಮಾಡಲಿ -ರಕ್ಷಿತಾ ಪ್ರೇಮ್

ಹೀಗೆ ಹೇಳುತ್ತಾ ಹೋದರು ರಕ್ಷಿತಾ ಪ್ರೇಮ್. ಅಷ್ಟಕ್ಕೂ, ಅಪ್ಪು ಭಾವಚಿತ್ರದ ಮುಂದೆ ಶ್ಯಾಂಪೇನ್ ಬಾಟೆಲ್ ಓಪನ್ ಮಾಡೋದು ನಮ್ಮ ಉದ್ದೇಶ ಆಗಿರಲಿಲ್ಲ. ಶ್ಯಾಂಪೇನ್ ಓಪನ್ ಆದ ತಕ್ಷಣ ಏಕ್ ಲವ್ ಯಾ' ಎಣ್ಣೆ ಸಾಂಗ್ ಪ್ಲೇ ಆಗ್ಬೇಕಿತ್ತು. ಆದರೆ, ತಾಂತ್ರಿಕ ದೋಷದಿಂದಾಗಿ ಸಾಂಗ್ ಪ್ಲೇ ಆಗುವ ಜಾಗದಲ್ಲಿ ಅಪ್ಪುಗೆ ನಮನ ಸಲ್ಲಿಸಿದ್ದ ವಿಡಿಯೋ ಪ್ಲೇ ಆಗಿದೆ. ಇದರಿಂದ ದೊಡ್ಮನೆ ರಾಜರತ್ನನಿಗೆ ನಾವು ಅವಮಾನ ಮಾಡಿದ್ದೇವೆ ಎನ್ನುವ ಆಕ್ರೋಶ ವ್ಯಕ್ತವಾಗ್ತಿದೆ. ದಯವಿಟ್ಟುಏಕ್ ಲವ್ ಯಾ’ ತಂಡದಿಂದಾದ ಎಡವಟ್ಟಿಗೆ ಕ್ಷಮೆ ಇರಲಿ. ನಮ್ಮ ಅರಿವಿಗೆ ಬಾರದೆ ಆದಂತಹ ಅವಾಂತರಕ್ಕೆ ಕೈಮುಗಿದು ಕ್ಷಮೆಯಾಚಿಸುತ್ತೇವೆ ಎಂದು ಅಭಿಮಾನಿ ದೇವರುಗಳಲ್ಲಿ ಪ್ರೇಮ್ ಮತ್ತು ರಕ್ಷಿತಾ ಪ್ರೇಮ್ ಜೊತೆಗೆ `ಏಕ್ ಲವ್ ಯಾ’ ಟೀಮ್ ವಿನಂತಿ ಮಾಡಿಕೊಂಡಿದೆ.

ನಿನ್ನೆಯಷ್ಟೇ ಏಕ್ ಲವ್ ಯಾ' ತಂಡ ಸಾಂಗ್ ಲಾಂಚ್ ಕಾರ್ಯಕ್ರಮವನ್ನು ಹಮ್ಮಿಕೊಂಡಿದ್ದರು. ಅದ್ದೂರಿಯಾಗಿ ಆರ್ಗನೈಸ್ ಆಗಿದ್ದ ಕಾರ್ಯಕ್ರಮಕ್ಕೆ ಖ್ಯಾತ ಗಾಯಕಿ ಮಂಗ್ಲಿ ಸೇರಿದಂತೆ ಸ್ಯಾಂಡಲ್‌ವುಡ್‌ನ ಸ್ಟಾರ್ ನಟಿಯರು ಆಗಮಿಸಿದ್ದರು. ಅಕುಲ್ ಬಾಲಾಜಿ ನಿರೂಪಣೆಯಲ್ಲಿ ಪ್ರೋಗ್ರಾಂ ನಡೀತು. ಈ ವೇಳೆ ಎಣ್ಣೆ ಸಾಂಗ್ ಲಾಂಚ್ ಮಾಡಲಿಕ್ಕೆಏಕ್ ಲವ್ ಯಾ’ ಚಿತ್ರದ ನಿರ್ಮಾಪಕಿ ರಕ್ಷಿತಾ ಪ್ರೇಮ್- ರಚಿತರಾಮ್- ರೀಷ್ಮಾ ನಾಣಯ್ಯ- ಮೇಘನಾ ಗಾಂವ್ಕರ್-ಅದಿತಿ ಪ್ರಭುದೇವ್- ನಿಶ್ವಿಕಾ ನಾಯ್ಡು ಸೇರಿದಂತೆ ಇತರೆ ನಟಿಮಣಿಯರು ವೇದಿಕೆ ಮೇಲೆ ಎಂಟ್ರಿಕೊಟ್ಟರು. ಶ್ಯಾಂಪೇನ್ ಬಾಟೆಲ್ ಓಪನ್ ಮಾಡಿ ಚಿತ್ರದ `ಎಣ್ಣೆ’ ಸಾಂಗ್ ಲಾಂಚ್ ಮಾಡೋದಕ್ಕೆ ಪ್ಲಾನ್ ಆಗಿತ್ತು. ಅದರಂತೇ, ಬಾಟೆಲ್ ಓಪನ್ ಆಯ್ತು ಆದರೆ ಸ್ಕ್ರಿನ್ ಮೇಲೆ ಸಾಂಗ್ ಬದಲಿಗೆ ಅಪ್ಪುಗೆ ನಮನ ಸಲ್ಲಿಸಿದ್ದ ವಿಡಿಯೋ ಪ್ಲೇ ಆಯ್ತು. ಈ ವಿಡಿಯೋ ಮಾಧ್ಯಮದಲ್ಲಿ ಪ್ರಸಾರಗೊಂಡಿದ್ದೇ ತಡ ಅಪ್ಪು ಅಭಿಮಾನಿಗಳು ಮತ್ತು ದೊಡ್ಮನೆ ಭಕ್ತರು ಆಕ್ರೋಶಗೊಂಡರು. ಈ ಸುದ್ದಿ ಫಿಲ್ಮ್ ಚೇಂಬರ್‌ನ ಮಾಜಿ ಅಧ್ಯಕ್ಷರ ಕಿವಿಗೆ ಬಿತ್ತು. ಅಪ್ಪು ಅಗಲಿಕೆಯ ನೋವಲ್ಲಿರುವ ಅಭಿಮಾನಿಗಳನ್ನು ಕೆರಳಿಸಿದಂತಾಗಿದೆ. ದಯವಿಟ್ಟು ಒಮ್ಮೆ ಕ್ಷಮೆಯಾಚಿಸಿ‌ ಬಿಡಿ ಎಂದು ಸಾ.ರಾ. ಗೋವಿಂದು ಅವರು ಒತ್ತಾಯಿಸಿದರು.

ದೊಡ್ಡವರ ಮಾತಿಗೆ ಬೆಲೆಕೊಟ್ಟ ಚಿತ್ರತಂಡ ಅಪ್ಪುಗೆ ಅವಮಾನ ಮಾಡುವ ಉದ್ದೇಶ ನಮ್ಮದಾಗಿರಲಿಲ್ಲ'. ನಮಗೆ ಗೊತ್ತಿಲ್ಲದೇ, ನಮ್ಮ ಅರಿವಿಗೆ ಬಾರದೇ, ಟೆಕ್ನಿಕಲಿ ಸಮಸ್ಯೆಯಿಂದಾಗಿ ಈ ರೀತಿಯಾಗಿದೆ. ದಯವಿಟ್ಟು ಅಭಿಮಾನಿ ದೇವರುಗಳು ಕ್ಷಮಿಸಬೇಕು ಎಂದು ನಿರ್ದೇಶಕ ಪ್ರೇಮ್ ಸುದ್ದಿಗೋಷ್ಟಿ ಮಾಡಿ ಕ್ಷಮೆ ಕೋರಿದ್ದಾರೆ. ಇದೇ ವೇಳೆ ಮಾಧ್ಯಮಗಳ ಜೊತೆ ಮಾತನಾಡಿದ ಪ್ರೇಮ್ ಅವರು, ಅಪ್ಪು ಉಸಿರು ಚೆಲ್ಲಿ ಆಸ್ಪತ್ರೆಯಲ್ಲಿ ಮಲಗಿದಾಗ ಅವರು ಹಣೆಸವರಿ, ಎರಡು ಕಾಲುಗಳನ್ನು ಹಿಡಿದುಕೊಂಡು ಕ್ಷಮೆ ಕೇಳಿದ್ದೇನೆ. ನನ್ನಿಂದ ಏನಾದರೂ ತಪ್ಪಾಗಿದ್ದರೆ ಕ್ಷಮಿಸಿಬಿಡಿ ಬಾಸ್ ಎಂದು ಬೇಡಿಕೊಂಡಿದ್ದೇನೆ ಗೊತ್ತಾ. ಅಷ್ಟಕ್ಕೂ,ಏಕ್ ಲವ್ ಯಾ’ ಸಾಂಗ್ ಲಾಂಚಿAಗ್ ಸಂದರ್ಭದಲ್ಲಿ ಅಚಾನಕ್ ಆಗಿ ಅಪ್ಪು ಬಾಸ್ ಫೋಟೋ ಪ್ಲೇ ಆಗಿದೆ. ಬೇಕು ಅಂತ ನಾವು ಏನು ಮಾಡಿಲ್ಲ. ಅಭಿಮಾನಿಗಳು ಅನ್ಯತಾ ಭಾವಿಸಬೇಡಿ, ದೊಡ್ಮನೆ ರಾಜಕುಮಾರನಿಗೆ ಅವಮಾನ ಮಾಡಿ ನಿಮ್ಮ ಮನಸ್ಸಿಗೆ ನೋವುಂಟು ಮಾಡುವ ಸಣ್ಣಮನಸ್ಸು ನಮ್ಮದಲ್ಲ ಎಂದು ಕೈಮುಗಿದರು.

ಇನ್ನೂ ಮನೆಯಿಂದನೇ ಮಾಧ್ಯಮಗಳ ಜೊತೆ ಮಾತನಾಡಿದ ರಕ್ಷಿತಾ ಪ್ರೇಮ್, ಅವರು ಕಣ್ಣೀರಾದರು. ಸೋಷಿಯಲ್ ಮೀಡಿಯಾದಲ್ಲಿ ತುಂಬಾ ಬ್ಯಾಡ್ ಕಮೆಂಟ್ಸ್ ಬರುತ್ತಿದೆ.
ಉದ್ದೇಶಪೂರ್ವವಾಗಿ ನಾವು ಇದನ್ನು ಮಾಡಿಲ್ಲ. ಯಾರಿಗೂ ನೋಯಿಸುವ ಉದ್ದೇಶ ನಮ್ಮದಲ್ಲ. ಅಭಿಮಾನಿ ದೇವರುಗಳಿಗೆ ನಮ್ಮಿಂದ ನೋವಾಗಿದ್ರೆ ಕ್ಷಮಿಸಿಬಿಡಿ ಎಲ್ಲರು. ಅಷ್ಟಕ್ಕೂ, ಶ್ಯಾಂಪೇನ್ ಬಾಟೆಲ್‌ನಲ್ಲಿ ಆಲ್ಕೋ ಹಾಲೇ ಇರಲಿಲ್ಲ. ನಾನ್ ಆಲ್ಕೋಹಾಲಿಕ್ ಶ್ಯಾಂಪೇನ್ ಅದಾಗಿತ್ತು ಅಷ್ಟೇ. ಎಣ್ಣೆ ಸಾಂಗ್ ಅದಾಗಿದ್ರಿಂದ ಶ್ಯಾಂಪೇನ್ ಬಾಟೆಲ್ ಓಪನ್ ಮಾಡಿಸಿದ್ವಿ ಎಂದರು ರಕ್ಷಿತಾ.

ಇದೇ ವೇಳೆ ದೊಡ್ಮನೆಗೆ ಕೊಡುವ ಗೌರವದ ಬಗ್ಗೆ ಮಾತನಾಡಿದರು. ಅಪ್ಪು ಸಿನಿಮಾದ ಮೂಲಕ ನನ್ನನ್ನು ಮಾತ್ರವಲ್ಲ ನಮ್ಮ ಅಮ್ಮ ಹಾಗೂ ಅಪ್ಪಾಜಿಯನ್ನು ಕೂಡ ಚಿತ್ರರಂಗಕ್ಕೆ ಪರಿಚಯಿಸಿದವರು ದೊಡ್ಮನೆಯವರು. ಹೀಗಿರುವಾಗ ಆ ದೊಡ್ಡ ಕುಟುಂಬಕ್ಕೆ ನಾವು ಅವಮಾನ ಮಾಡುತ್ತೇವಾ? ಕಮೆಂಟ್ ಮಾಡುವ ಜನರು ಸೂಕ್ಷ್ಮವಾಗಿ ಒಮ್ಮೆ ಯೋಚಿಸಿದರೆ ಗೊತ್ತಾಗುತ್ತೆ. ಎನಿವೇ, ನಮ್ಮಿಂದ ನಿಮ್ಮ ಭಾವನೆಗಳಿಗೆ ಪೆಟ್ಟಾಗಿದ್ದರೆ, ನಿಮ್ಮ ಮನಸ್ಸಿಗೆ ನೋವಾಗಿದ್ದರೆ ಪ್ರತಿಯೊಬ್ಬರಿಗೂ ಕೈ ಮುಗಿದು ಕ್ಷಮೆ ಕೇಳುತ್ತೇನೆ. ಅಪ್ಪು ಎಲ್ಲರಿಂದನೂ ಒಂದೊಂದನ್ನು ಕಲಿಯುತ್ತಿದ್ದರು. ಅದೇ ರೀತಿ ಈ ಘಟನೆಯಿಂದ ಯಾವ್ ರೀತಿ ಹುಷಾರಾಗಿರಬೇಕು ಎಂಬುದನ್ನು ಕಲಿಯುತ್ತೇನೆ ಎಂದರು. ಏಕ್ ಲವ್ ಯಾ ನಿರ್ದೇಶಕ ಪ್ರೇಮ್- ನಿರ್ಮಾಪಕಿ ರಕ್ಷಿತಾರಂತೆ, ಚಿತ್ರದ ನಾಯಕಿ ರಚಿತಾ ಹಾಗೂ ಇಡೀ ಚಿತ್ರತಂಡ ಕ್ಷಮೆಯಾಚಿಸಿದೆ.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಅಂತೂ ಇಂತೂ ಅವತಾರ ಪುರುಷ ದರ್ಶನ ಕೊಡೋಕೆ ರೆಡಿ! ಡಿಸೆಂಬರ್‌ 10ರಂದು ಶರಣ್‌ ಹೊಸ ಅವತಾರ!!

ನಟ ಶರಣ್‌ ಸದ್ಯ ಕಾಮಿಡಿ ಹೀರೋ ಆಗಿಯೇ ಫೇಮಸ್.‌ ಅವರು ಹಾಸ್ಯ ನಟರಾಗಿಯೂ ಸೈ ಎನಿಸಿಕೊಂಡವರು. ತೆರೆ ಮೇಲೆ ಹೀರೋ ಆಗಿ ಯಾವಾಗ ಕಾಣಿಸಿಕೊಂಡರೋ, ಅಲ್ಲಿಂದ ಎಂದೂ ಹಿಂದಿರುಗಿ ನೋಡೇ ಇಲ್ಲ. ಅವರು ಹೀರೋ ಆಗಿ ನಟಿಸಿದ ಸಿನಿಮಾಗಳೆಲ್ಲವೂ ಯಶಸ್ವಿಯಾಗಿವೆ. ಆ ಸಾಲಿಗೆ ಈಗ “ಅವತಾರ ಪುರುಷ” ಸಿನಿಮಾ ಕೂಡ ಸೇರುವ ನಂಬಿಕೆ ಚಿತ್ರತಂಡಕ್ಕಿದೆ. ಅಂದಹಾಗೆ, ಈ ಚಿತ್ರ ಇದೀಗ ರಿಲೀಸ್‌ಗೆ ರೆಡಿಯಾಗಿದೆ. ಸೆನ್ಸಾರ್ ಮುಗಿಸಿದ ಅವತಾರ ಪುರುಷ ಡಿಸೆಂಬರ್ 10ಕ್ಕೆ ಪ್ರೇಕ್ಷಕರ ಎದುರು ಬರುತ್ತಿದೆ.

ಅಫಿಶಿಯಲ್ ಪೋಸ್ಟರ್ ಬಿಡುಗಡೆ ಮಾಡುವ ಮೂಲಕ ಅವತಾರ ಪುರುಷ ರಿಲೀಸ್ ಡೇಟ್ ಅನ್ನು ಚಿತ್ರತಂಡ ಅಧಿಕೃತವಾಗಿ ಘೋಷಣೆ ಮಾಡಿದೆ. ಸದ್ಯ ಚಿತ್ರತಂಡ ಈ ದಿನಾಂಕ ಘೋಷಣೆ ಮಾಡುವುದರ ಜೊತೆಗೆ ಭರ್ಜರಿಯಾಗಿಯೇ ಚಿತ್ರದ ಪ್ರಚಾರ ಕಾರ್ಯ ಶುರುವಿಟ್ಟುಕೊಂಡಿದೆ. ಹೌದು, ಚಿತ್ರ ಆರಂಭದಿಂದಲೂ ಸಾಕಷ್ಟು ಸುದ್ದಿ ಮಾಡಿದೆ. ಅದರಲ್ಲೂ ಶೀರ್ಷಿಕೆಯಿಂದಲೇ ಸಿನಿಮಾ ಒಂದಷ್ಟು ಕುತೂಹಲ ಮೂಡಿಸಿರುವುದಂತೂ ನಿಜ. ಇನ್ನೊಂದು ನಿರೀಕ್ಷೆಗೆ ಕಾರಣ, ಸಿಂಪಲ್‌ ಸುನಿ ಈ ಚಿತ್ರವನ್ನು ನಿರ್ದೇಶನ ಮಾಡಿರುವುದು.

ಅಷ್ಟೇ ಅಲ್ಲ, ಪುಷ್ಕರ್‌ ಮಲ್ಲಿಕಾರ್ಜುನ್‌ ನಿರ್ಮಾಣದ ಸಿನಿಮಾ ಅಂದಮೇಲೆ, ಅಲ್ಲಿ ವಿಶೇಷ ಕಂಟೆಂಟ್‌ ಇದ್ದೇ ಇರುತ್ತೆ. ಅಂಥದ್ದೊಂದು ಕಥೆ ಮತ್ತು ಚಿತ್ರಕಥೆ ಇರುವ ಅವತಾರ ಪುರುಷ, ಡಿಸೆಂಬರ್‌ 10ರಂದು ರಾಜ್ಯಾದ್ಯಂತ ಅಬ್ಬರಿಸಲಿದ್ದಾನೆ. ಈ ಸಿನಿಮಾಗೆ ಶರಣ್‌ ಹೀರೋ. ಅವರಿಗೆ ಆಶಿಕಾ ರಂಗನಾಥ್ ನಾಯಕಿ. ಉಳಿದಂತೆ ಚಿತ್ರದಲ್ಲಿ ಶ್ರೀನಗರ ಕಿಟ್ಟಿ, ಸಾಯಿಕುಮಾರ್, ಸುಧಾರಣಿ, ಭವ್ಯ ಸೇರಿದಂತೆ ಹಲವರು ನಟಿಸುತ್ತಿದ್ದಾರೆ. ಶರಣ್‌ ಇಲ್ಲಿ ಯಾವ ಪಾತ್ರ ನಿರ್ವಹಿಸುತ್ತಿದ್ದಾರೆ ಅನ್ನುವುದೇ ವಿಶೇಷ. ಅದು ಯಾವುದು ಎಂಬುದನ್ನು ತೆರೆಮೇಲೆಯೇ ಕಾಣಬೇಕು.

Categories
ಸಿನಿ ಸುದ್ದಿ

ನಾವ್ ಅವರ ಜಾಗಕ್ಕೆ ಹೋಗಿದ್ದೇವೆ- ಇನ್ಮೇಲೆ ಅವರು ನಮ್ಮ ಜಾಗಕ್ಕೆ ಬರಬೇಕು; ಆ ವ್ಯಕ್ತಿ ಬಳಿ `ಅಪ್ಪು’ ಬಿಚ್ಚಿಟ್ಟಿದ್ದರು ಅಚ್ಚರಿಯ ಸಂಗತಿ !

ನನಗೆ ಒಂದು ಬಿಗ್ ಡ್ರೀಮ್ ಇದೆ. ಗಂಧದಗುಡಿಗೆ ಅತೀ ದೊಡ್ಡ ಸ್ಟುಡಿಯೋವನ್ನು ಕೊಡುಗೆಯಾಗಿ ನೀಡಬೇಕು. ಮುಂದಿನ ದಿನಗಳಲ್ಲಿ ಪರಭಾಷೆಯವರು ನಮ್ಮ ಚಂದನವನಕ್ಕೆ ಬರಬೇಕು. ಪ್ರಿಪ್ರೊಡಕ್ಷನ್ ಸೇರಿದಂತೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಮ್ಮಲ್ಲಿ ಆಗ್ಬೇಕು. ಟೆಕ್ನಾಲಜಿ ಎಕ್ಸ್ಚೇಂಜ್ ಆಗ್ಬೇಕು ಹೀಗಾದಾಗ ಒಳ್ಳೆ ಪ್ರಾಡೆಕ್ಟ್ ಔಟ್‌ಪುಟ್ ಬರುತ್ತೆ. ಆಗ ಇಂಡಿಯನ್ ಸಿನ್ಮಾ ಇಂಡಸ್ಟ್ರಿಗೆ ಒಳ್ಳೊಳ್ಳೆ ಸಿನಿಮಾಗಳನ್ನು ಉಡುಗೊರೆಯಾಗಿ ನೀಡಬಹುದು ಎಂದಿದ್ದರು ಅಪ್ಪು…

ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅಗಲಿ ಇಂದಿಗೆ ಹದಿನಾರು ದಿವಸ ಕಳೀತಾ ಇದೆ. ಆದರೆ, ದೊಡ್ಮನೆ ಮಗನಿಲ್ಲದ ನೋವು ಮಾತ್ರ ಮರೆಯಾಗುತ್ತಿಲ್ಲ ಬಹುಷಃ ಅಷ್ಟು ಬೇಗ ಮರೆಯಾಗೋದು ಇಲ್ಲ. ಯಾಕಂದ್ರೆ, ಅಗಲಿರುವುದು ಬರೀ ವ್ಯಕ್ತಿಯಲ್ಲ ಅದೊಂದು ಶಕ್ತಿ. ಬೆಲೆಯೇ ಕಟ್ಟಲಾಗದ ಬೆಟ್ಟದ ಹೂ. ಆದರೆ, ಈ ಹೂ ತನಗೆ ಪ್ರಿಯವಾಗಿದ್ದು ಅಂತ ಆ ಭಗವಂತ ಏಕಾಏಕಿ ಕಿತ್ಕೊಂಡಿದ್ದು ಮಾತ್ರ ಖಂಡನೀಯ. ಹೆಸರಿಗೆ ಕರುಣಾಮಯಿ ಎನಿಸಿಕೊಳ್ಳುವ ಭಗವಂತನಿಗೆ ಕೊಂಚವಾದರೂ ಕರುಣೆಯಿದ್ದರೆ ಕೋಟ್ಯಾಂತರ ಮನಸ್ಸುಗಳು ಆರಾಧಿಸುವ, ಪೂಜಿಸುವ, ಪ್ರೀತಿಸುವ, ತಲೆ ಮೇಲೆ ಹೊತ್ತು ಮೆರೆಸುವ ಜನರಿಂದ ಅಪ್ಪುನಾ ದೂರ ಮಾಡುತ್ತಿರಲಿಲ್ಲ. ದೊಡ್ಮನೆಯನ್ನು ಅನಾಥ ಮಾಡಿ, ಕರುನಾಡನ್ನು ಕಣ್ಣೀರ ಕಡಲಲ್ಲಿ ಮುಳುಗಿಸುತ್ತಿರಲಿಲ್ಲ ಬಿಡಿ.

ಎಂತೆಂತವರಿಗೋ ಭಗವಂತ ಚಾನ್ಸ್ ಕೊಡ್ತಾನೆ, ಇದು ಕಡೇ ಚಾನ್ಸ್ ಉಳಿಸಿಕೋ ಎಂದು ಕರುಣೆ ತೋರಿಸ್ತಾನೆ. ಸಾವಿನ ಮನೆಗೆ ಸಮೀಪಿಸಿದವರನ್ನೂ ವಾಪಾಸ್ ಕರೆದುಕೊಂಡು ಆಯಷ್ಯ ಪ್ರಾಪ್ತಿರಸ್ತು ಎನ್ನುತ್ತಾನೆ. ಆದರೆ, ಅನಾಥರಿಗೆ ಆಸರೆಯಾಗಿ, ಕತ್ತಲಲ್ಲಿರುವವರಿಗೆ ಬೆಳಕಾಗಿ, ಬಡವರಿಗೆ ದೇವರಾಗಿ, ನಿರ್ಗತಿಕರಿಗೆ ನೆರವಾಗಿ, ಪ್ರತಿಭಾವಂತರಿಗೆ ವರವಾಗಿದ್ದ ಕಲಿಯುಗದ ಕರ್ಣನಂತಿದ್ದ ಅಂಜನಿಪುತ್ರನಿಗೆ ಕಡೇ ಚಾನ್ಸ್ ಅಲ್ಲ ಫಸ್ಟ್ ಚಾನ್ಸ್ ಕೂಡ ಕೊಡಲಿಲ್ಲ. ರಾಜರತ್ನನನ್ನು ಎಳೆದೊಯ್ಯಲಿಕ್ಕೆ ಸ್ಕೆಚ್ ಹಾಕಿದ ಭಗವಂತ ಒಂದೇ ಒಂದು ಚಾನ್ಸ್ ಕೊಟ್ಟಿದ್ದರೆ, ಅರೆಕ್ಷಣ ಕರುಣಾಮಯಿಯಾಗಿದ್ರೆ ಯುವರತ್ನ ಉಸಿರು ಚೆಲ್ಲುತ್ತಿರಲಿಲ್ಲ. ದೊಡ್ಮನೆ ಅನಾಥವಾಗುತ್ತಿರಲಿಲ್ಲ, ಅಭಿಮಾನಿ ದೇವರುಗಳು ಎದೆಬಡಿದುಕೊಂಡು ಸಾಯುವ ಸಂಧರ್ಭ ಸೃಷ್ಟಿಯಾಗುತ್ತಿರಲಿಲ್ಲ, ಕರುನಾಡು ಕಣ್ಣೀರಿನ ಕೋಡಿ ಹರಿಸುವಂತಿರಲಿಲ್ಲ. ಎಲ್ಲದಕ್ಕಿಂತ ಹೆಚ್ಚಾಗಿ, ಅಪ್ಪು ಕಂಡ ಕನಸುಗಳು `ಪೃಥ್ವಿ’ ಜೊತೆ ಒಡಲು ಸೇರುತ್ತಿರಲಿಲ್ಲ. ಅದರಲ್ಲೂ ಅರಸು ಕಂಡ ಅತೀ ದೊಡ್ಡ ಕನಸು ಮಣ್ಣಲ್ಲಿ ಮಣ್ಣಾಗುತ್ತಿರಲಿಲ್ಲ.

ಅಪ್ಪು ಒಬ್ಬರೇ ಸಾವನ್ನಪ್ಪಿಲ್ಲ ಬದಲಾಗಿ ದೊಡ್ಮನೆ ಮಗನನ್ನು ಮೈಂಡ್‌ನಲ್ಲಿಟ್ಟುಕೊಂಡು ರಚನೆ ಮಾಡಿದ ಎಷ್ಟೋ ಕಥೆಗಾರರ ಕನಸಿನ ಕೂಸುಗಳು ಉಸಿರುಗಟ್ಟಿವೆ. ಈ ಕಥೆನಾ? ಈ ಸಿನಿಮಾನ ಯಾರಿಗೆ ಮಾಡ್ಲಿ ದೇವಾ ಅಂತ ಕಥೆಗಾರರು-ನಿರ್ದೇಶಕರು-ನಿರ್ಮಾಪಕರು ಆಕಾಶ ನೋಡುವಂತಹ ಪರಿಸ್ಥಿತಿ. ಅದರಂತೇ, ಬೆಳ್ಳಿತೆರೆಯದ್ದು- ಬಾಕ್ಸ್ಆಫೀಸ್‌ನದ್ದು ಒಂದು ನೋವಿದೆ. ಇನ್ಮೇಲೆ ಅಪ್ಪು ಕಟೌಟ್ ನನ್ನ ಅಂಗಳದಲ್ಲಿ ಬೀಳಲ್ಲ, ಅಪ್ಪುನಾ ತಲೆ ಮೇಲೆ ಹೊತ್ಕೊಂಡು ಮೆರವಣಿಗೆ ಹೋಗೋದಕ್ಕೆ ಆಗಲ್ಲ ಅಂತ ಬೆಳ್ಳಿಪರದೆ ಮರುಕಪಡ್ತಿದೆ. ಕೋಟಿ ಕೋಟಿ ನನ್ನ ಖಜಾನೆಯಲ್ಲಿ ಕುಣಿಯಲ್ಲವಲ್ಲ ಅಂತ ಬಾಕ್ಸ್ಆಫೀಸ್ ಕಣ್ಣೀರಿಡ್ತಿದೆ. ಇನ್ನೂ, ಪವರ್‌ಸ್ಟಾರ್ ಅಭಿಮಾನಿಗಳಂತೂ ಜೇಮ್ಸ್ ಹೊರತುಪಡಿಸಿ ಮತ್ಯಾವ ಚಿತ್ರವನ್ನು ಫಸ್ಟ್ ಡೇ ಫಸ್ಟ್ ಶೋ ಚಿತ್ರಮಂದಿರಕ್ಕೆ ಹೋಗಿ ನೋಡಲಿಕ್ಕೆ ಆಗಲ್ಲ, ಥಿಯೇಟರ್ ಮುಂದೆ ಮತ್ಯಾವ ಚಿತ್ರದ ಕಟೌಟ್ ಹಾಕಿ ಅಭಿಷೇಕ ಮಾಡಲಿಕ್ಕೆ ಆಗಲ್ಲ ಅಂತ ಒಳಗೊಳಗೆ ನೋವುಣ್ಣುತ್ತಿದ್ದಾರೆ.

ಇದೆಲ್ಲದರ ಮಧ್ಯೆ ದಿಗ್ಗಜರು ಕಟ್ಟಿ ಬೆಳೆಸಿದ ಗಂಧದಗುಡಿ ಕೂಡ `ಅರಸು’ನಾ ನೆನೆದು ಮಮ್ಮಲ್ಲ ಮರುಗುತ್ತಿದೆ. ಕನ್ನಡ ಚಿತ್ರರಂಗದ ಕೊರತೆನಾ ನೀಗಿಸ್ತೀನಿ? ಗಂಧದಗುಡಿಗೆ ಅತೀ ದೊಡ್ಡ ಕೊಡುಗೆ ನೀಡ್ತೀನಿ? ಪರಭಾಷೆಯವರು ನಮ್ಮ ಅಖಾಡಕ್ಕೆ ಬರುವಂತೆ ಮಾಡ್ತೀನಿ? ಇಂಡಿಯನ್ ಸಿನ್ಮಾ ಇಂಡಸ್ಟ್ರಿಗೆ ಉಡುಗೊರೆ ಕೊಡ್ತೀನಿ ಅಂತ ಹೇಳಿಕೊಂಡಿದ್ದ ಅಪ್ಪು ಮಾತನ್ನು ನೆನೆ ನೆನೆದು ಗಂಧದಗುಡಿ ದುಃಖಿಸುತ್ತಿದೆ. ಹೌದು, ಸ್ಟಾರ್‌ಗಳಿಗೆ ಮರುಜೀವ ನೀಡಿ ಆಕಾಶದೆತ್ತರಕ್ಕೆ ಬೆಳೆದು ನಿಲ್ಲಿಸುವ ಗಂಧದಗುಡಿಯಲ್ಲಿ ಒಂದಿಷ್ಟು ಕೊರತೆಯಿದೆ. ಅದರಲ್ಲಿ, ಒಂದು ಅತೀ ದೊಡ್ಡ ಸ್ಟುಡಿಯೋ ವ್ಯವಸ್ಥೆ ಇಲ್ಲದಿರುವುದು. ಶೂಟಿಂಗ್- ಎಡಿಟಿಂಗ್-ಡಬ್ಬಿಂಗ್-ಮಿಕ್ಸಿಂಗ್ ಸೇರಿದಂತೆ ಸಿನಿಮಾ ಶುರು ಆದಾಗಿಂದ ಸಿನಿಮಾ ರಿಲೀಸ್ ಆಗೋರ‍್ಗೂ ಕೂಡ ಒಂದೇ ಸೂರಿನಡಿ ಅಂದರೆ ಒಂದೇ ಸ್ಟುಡಿಯೋದಲ್ಲಿ ಎಲ್ಲವೂ ಸಾಧ್ಯವಾಗಬೇಕು ಎನ್ನುವುದು ನಟಸಾರ್ವಭೌಮನ ಕನಸಾಗಿತ್ತು.

ಅಂದ್ಹಾಗೇ, ಈ ಕನಸಿನ ಬಗ್ಗೆ `ಫಿಲ್ಮ್ ಕಂಪ್ಯಾನಿಯನ್ ಸೌತ್’ ಯೂಟ್ಯೂಬ್ ಚಾನೆಲ್‌ವೊಂದರ ನಿರೂಪಕನ ಬಳಿ ಹಂಚಿಕೊಂಡಿದ್ದರು. ನಿಮ್ಮ ಡ್ರೀಮ್ ಏನು? ಕನ್ನಡ ಸಿನಿಮಾ ಇಂಡಸ್ಟ್ರಿಯಲ್ಲಿ ಏನ್ ಕೊರತೆಯಿದೆ? ಇರುವಂತಹ ಕೊರೆತಯನ್ನು ಯಾವ್ ರೀತಿ ನೀಗಿಸುವುದಕ್ಕೆ ಪ್ರಯತ್ನ ಪಡುತ್ತೀರಿ? ನಿರೂಪಕ ಭಾರಧ್ವಾಜ್ ರಂಗನ್ ಅವರ ಈ ಪ್ರಶ್ನೆಗಳಿಗೆ ಉತ್ತರಿಸಿದ್ದ ಅಪ್ಪು, ನನಗೆ ಒಂದು ಬಿಗ್ ಡ್ರೀಮ್ ಇದೆ. ಗಂಧದಗುಡಿಗೆ ಅತೀ ದೊಡ್ಡ ಸ್ಟುಡಿಯೋವನ್ನು ಕೊಡುಗೆಯಾಗಿ ನೀಡಬೇಕು ಎನ್ನುವುದು. ಹಿಂದಿನಿಂದಲೂ ಹೊರ ರಾಜ್ಯಕ್ಕೆ ಮತ್ತು ಪರಭಾಷಾ ಸ್ಥಳಗಳಿಗೆ ಹೋಗಿ ಚಿತ್ರೀಕರಣ ಸೇರಿದಂತೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳನ್ನು ಮುಗಿಸಿಕೊಂಡು ಬಂದಿದ್ದೇವೆ. ಮುಂದಿನ ದಿನಗಳಲ್ಲಿ ಪರಭಾಷೆಯವರು ನಮ್ಮ ಚಂದನವನಕ್ಕೆ ಬರಬೇಕು. ಪ್ರಿಪ್ರೊಡಕ್ಷನ್ ಸೇರಿದಂತೆ ಪೋಸ್ಟ್ ಪ್ರೊಡಕ್ಷನ್ ಕೆಲಸಗಳು ನಮ್ಮಲ್ಲಿ ಆಗ್ಬೇಕು. ಟೆಕ್ನಾಲಜಿ ಎಕ್ಸ್ಚೇಂಜ್ ಆಗ್ಬೇಕು ಹೀಗಾದಾಗ ಒಳ್ಳೆ ಪ್ರಾಡೆಕ್ಟ್ ಔಟ್‌ಪುಟ್ ಬರುತ್ತೆ. ಆಗ ಇಂಡಿಯನ್ ಸಿನ್ಮಾ ಇಂಡಸ್ಟ್ರಿಗೆ ಒಳ್ಳೊಳ್ಳೆ ಸಿನಿಮಾಗಳನ್ನು ಉಡುಗೊರೆಯಾಗಿ ನೀಡಬಹುದು ಎಂದು ಹೇಳಿಕೊಂಡಿದ್ದರು. ಅತೀ ಶೀಘ್ರದಲ್ಲೇ ಸ್ಟುಡಿಯೋ ಬಗ್ಗೆ ಮಾಹಿತಿ ನೀಡುತ್ತೇನೆ ಎಂದು ಕೂಡ ತಿಳಿಸಿದ್ದರು. ಅಷ್ಟರಲ್ಲಿ ದುರ್ವಿಧಿಯ ಆಟಕ್ಕೆ ಬದುಕಿನ ಆಟ ಮುಗಿಸಿ ಎದ್ದೋಗಿದ್ದಾರೆ ಅಪ್ಪು.

ವಿಶಾಲಾಕ್ಷಿ,ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

Categories
ಸಿನಿ ಸುದ್ದಿ

ಅರಮನೆ ಮೈದಾನದಲ್ಲಿ ಅಪ್ಪುಗೆ ನುಡಿ ನಮನ; ನವೆಂಬರ್‌ 16 ರಂದು ಫಿಲ್ಮ್‌ಚೇಂಬರ್‌ ನೇತೃತ್ವದಲ್ಲಿ ದೊಡ್ಮನೆ ಹುಡುಗನಿಗೆ ನಮನ- ಮನರಂಜನೆಗೆ ಅವಕಾಶವಿಲ್ಲ

ಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತ್‌ರಾಜಕುಮಾರ್‌ ಅವರ ಅಗಲಿಕೆ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗ ನುಡಿ ನಮನ ಕಾರ್ಯಕ್ರಮ ಆಯೋಜಿಸಿದೆ. ನವೆಂಬರ್‌ 16 ರಂದು ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಸೇರಿದಂತೆ ಸಚಿವರು, ವಿರೋಧ ಪಕ್ಷದ ನಾಯಕರು, ಗಣ್ಯರು, ಚಿತ್ರರಂಗದ ಕಲಾವಿದರು ತಾಂತ್ರಿಕ ವರ್ಗದವರು ಪಾಲ್ಗೊಳ್ಳಲಿದ್ದಾರೆ. ಕನ್ನಡ ಚಿತ್ರರಂಗದ ಎಲ್ಲಾ ವಿಭಾಗಗಳು ಈ ನುಡಿನಮನ ಕಾರ್ಯಕ್ರಮಕ್ಕೆ ಕೈ ಜೋಡಿಸಿವೆ. ಅಪ್ಪು ನುಡಿನಮನ ಕಾರ್ಯಕ್ರಮ ಕುರಿತಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್‌ ಹೇಳುವುದಿಷ್ಟು.


ಪುನೀತ್‌ರಾಜಕುಮಾರ್‌ ಅವರ ಅಗಲಿಕೆಯಿಂದ ಚಿತ್ರೋದ್ಯಮ ದುಃಖದಲ್ಲಿದೆ. ಸರಳ ಸಜ್ಜನಿಕೆ ನಟ ಕಳೆದುಕೊಂಡು ನಿಜಕ್ಕೂ ಬಡವಾಗಿದೆ. ಫಿಲ್ಮ್‌ ಚೇಂಬರ್‌ ನೇತೃತ್ವದಲ್ಲಿ ಚಿತ್ರೋದ್ಯಮ ಅಪ್ಪು ನುಡಿ ನಮನ ಕಾರ್ಯಕ್ರಮ ಆಯೋಜಿಸಿದೆ. ನಿರ್ಮಾಪಕರ ಸಂಘ, ಕಲಾವಿದರ ಸಂಘ, ಛಾಯಾಗ್ರಾಹಕರ ಸಂಘ, ಒಕ್ಕೂಟ, ವಿತರಕರು, ಪ್ರದರ್ಶಕರು ಸೇರಿದಂತೆ ಚೇಂಬರ್‌ನ ಅಂಗ ಸಂಸ್ಥೆಗಳ ಪದಾಧಿಕಾರಿಗಳು ಸೇರಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸೌತ್‌ ಫಿಲ್ಮ್‌ಇಂಡಸ್ಟ್ರಿ ಮಂದಿ ಕೂಡ ಆಗಮಿಸಲಿದ್ದಾರೆ. ಒಂದು ಅರ್ಥಪೂರ್ಣ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ. ಇದು ಎಲ್ಲರ ಕಾರ್ಯಕ್ರಮ. ಚಿತ್ರರಂಗದ ಪ್ರತಿಯೊಬ್ಬರ ಸಹಕಾರದಿಂದ ಈ ಕಾರ್ಯಕ್ರಮ ನಡೆಯಲಿದೆ ಎಂದರು.


ಸಾ.ರಾ.ಗೋವಿಂದು ಮಾತನಾಡಿ, ” ಪುನೀತ್‌ ಅವರ ನಿಧನದ ಹಿಂದಿನ ದಿನವೇ ನಾವು ನುಡಿ ನಮನ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದ್ದೆವು. ಅದರಂತೆ, ನವೆಂಬರ್‌ ೧೬ರಂದು ಅಪ್ಪು ನುಡಿ ನಮನ ಕಾರ್ಯಕ್ರಮ ನಡೆಯಲಿದೆ. ರಾಜ್‌ಕುಮಾರ್ ಕುಟುಂಬ‌, ಇಡೀ ಚಿತ್ರೋದ್ಯಮ, ದಕ್ಷಿಣ ಭಾರತ ಚಿತ್ರೋದ್ಯಮ ನುಡಿ ನಮನಕ್ಕೆ ಸಾಕ್ಷಿಯಾಗಲಿದೆ. ಈಗಾಗಲೇ ಹೈದರಾಬಾದ್‌ಗೆ ಹೋಗಿ, ಅಲ್ಲಿನ ಫಿಲ್ಮ್‌ ಚೇಂಬರ್‌ ಪದಾಧಿಕಾರಿಗಳು ಮತ್ತು ಕಲಾವಿದರನ್ನು ಆಹ್ವಾನಿಸಲಾಗಿದೆ. ಚೆನ್ನೈ ಫಿಲ್ಮ್‌ ಚೇಂಬರ್‌ಗೂ ಮಾಹಿತಿ ನೀಡಿದ್ದೇವೆ. ಪುನೀತ್‌ ಅವರ ಅಭಿಮಾನಿಗಳು ಮತ್ತು ನಾಡಿನ ಜನರಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ಈ ನುಡಿ ನಮನ ಕಾರ್ಯಕ್ರಮ ನಡೆಯುತ್ತಿರೋದು, ಸಿನಿಮಾ ರಂಗಕ್ಕೆ ಮಾತ್ರ ಸೀಮಿತವಾಗಿದೆ. ಹಾಗಾಗಿ ಯಾರೂ ಅನ್ಯತಾ ಭಾವಿಸಬಾರದು. ಈ ಕಾರ್ಯಕ್ರಮಕ್ಕೆ ಸುಮಾರು ಒಂದುವರೆ ಸಾವಿರ ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ನಾಡಿನ ಜನರು ಸಹಕಾರ ನೀಡಬೇಕು. ನೀವಿದ್ದಲ್ಲೀಯೇ ಟಿವಿ ಮೂಲಕ ಕಾರ್ಯಕ್ರಮ ವೀಕ್ಷಿಸಬಹುದು ಎಂದಿದ್ದಾರೆ.

ಮನರಂಜನೆ ಇರಲ್ಲ…
ಅಂದು ನುಡಿನಮನ ಕಾರ್ಯಕ್ರಮ ಹೊರತಾಗಿ ಯಾವುದೇ ಮನರಂಜನೆ ಇರಲ್ಲ. ಪುನೀತ್‌ ಅವರ ಕುರಿತು ವಿಶೇಷವಾದ ಹಾಡೊಂದನ್ನು ನಾಗೇಂದ್ರ ಪ್ರಸಾದ್‌ ಬರೆದಿದ್ದಾರೆ. ಆ ಹಾಡಿಗೆ ಗುರುಕಿರಣ್‌ ಸಂಯೋಜನೆ ಇದೆ. ಹಾಡಿನೊಂದಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಲಿದೆ. ಇನ್ನು, ಅಂದು ಪುನೀತ್‌ ಅವರ ಚಿತ್ರಗಳ ಹಾಡಿನ ತುಣುಕು ಪ್ರದರ್ಶನ ಮತ್ತು ಗಣ್ಯರು ಮಾತಾಡಲಿದ್ದಾರೆ. ನವರಸನ್‌ ಅವರು ಕಾರ್ಯಕ್ರಮದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಒಂದು ಅರ್ಥಪೂರ್ಣ ಕಾರ್ಯಕ್ರಮ ಮಾಡುವ ಮೂಲಕ ಯಶಸ್ವಿಗೊಳಿಸಬೇಕು ಅನ್ನೋದು ನಮ್ಮ ಆಸೆ ಎಂದರು ಸಾ.ರಾ.ಗೋವಿಂದು.

ಶೂಟಿಂಗ್‌ ಬಂದ್‌
ನುಡಿ ನಮನ ಕಾರ್ಯಕ್ರಮದ ಹಿನ್ನೆಲೆಯಲ್ಲಿ, ಚಿತ್ರರಂಗದ ಎಲ್ಲರೂ ಭಾಗವಹಿಸಲಿದ್ದಾರೆ. ಅಂದು ಚಿತ್ರೀಕರಣ ಬಂದ್‌ ಮಾಡಲಾಗುತ್ತದೆ. ಆದರೆ, ಥಿಯೇಟರ್‌ ಪ್ರದರ್ಶನ ಎಂದಿನಂತೆ ಇರಲಿದೆ. ನಮಗೂ ಎಲ್ಲರನ್ನೂ ಕರೆಯಬೇಕು ಎಂಬ ಆಸೆ ಇತ್ತು. ಆದರೆ, ಈಗ ಪರಿಸ್ಥಿತಿ ಸರಿ ಇಲ್ಲ. ಹಾಗಾಗಿ ಪುನೀತ್‌ ಅವರ ಅಭಿಮಾನಿಗಳು ನಾಡಿನ ಜನರು ಕುಳಿತಲ್ಲೇ ಟಿವಿಯಲ್ಲಿ ಕಾರ್ಯಕ್ರಮ ವೀಕ್ಷಿಸಬೇಕು. ಅಂದು ವಿಶೇಷವಾಗಿ ಮೈಸೂರು ರಾಜಮನೆತನದ ರಾಜ ಯದುವೀರ್‌ ಅವರು ಭಾಗವಹಿಸಲಿದ್ದಾರೆ.


ಪಾಸ್‌ ಇದ್ದವರಿಗೆ ಪ್ರವೇಶ
ಈ ನುಡಿ ನಮನ ಕಾರ್ಯಕ್ರಮಕ್ಕೆ ಪಾಸ್‌ ಇದ್ದವರಿಗೆ ಮಾತ್ರ ಪ್ರವೇಶವಿದೆ. ವಿಐಪಿ ವಿವಿಐಪಿ ಹೀಗೆ ವಿಂಗಡಣೆ ಮಾಡಿ ಪಾಸ್‌ ವ್ಯವಸ್ಥೆ ಮಾಡಲಾಗಿದೆ. ಅಂದು ಮಧ್ಯಾಹ್ನ ೩ಗಂಟೆಗೆ ಕಾರ್ಯಕ್ರಮ ಶುರುವಾಗಲಿದೆ. ೨.೩೦ಕ್ಕೆ ಎಲ್ಲರೂ ಆಗಮಿಸಬೇಕು. ನಾಲ್ಕು ದ್ವಾರದಲ್ಲೂ ಸೆಕ್ಯೂರಿಟಿ ಇರುವುದರಿಂದ ಪಾಸ್‌ ಇದ್ದವರಿಗೆ ಮಾತ್ರ ಅವಕಾಶವಿದೆ. ಒಟ್ಟು ಮೂರು ತಾಸಿನ ಕಾರ್ಯಕ್ರಮವದು.

Categories
ಸಿನಿ ಸುದ್ದಿ

ಕಬ್ಜ ಟೀಸರ್ ರಿಲೀಸ್ ಮುಂದಕ್ಕೆ…

ಈಗಾಗಲೇ ದೇಶಾದ್ಯಂತ ಸಂಚಲನ ಮೂಡಿಸಿರುವ, ರಿಯಲ್‌ ಸ್ಟಾರ್ ಉಪೇಂದ್ರ ಹಾಗೂ ಅಭಿನಯm ಚಕ್ರವರ್ತಿ ಕಿಚ್ಚ ಸುದೀಪ ಅಭಿನಯದ ಪ್ಯಾನ್ ಇಂಡಿಯಾ ಸಿನಿಮಾ “ಕಬ್ಜ” ಚಿತ್ರದ ಟೀಸರ್ ದೀಪಾವಳಿ ಹಬ್ಬಕ್ಕೆ ಬಿಡುಗಡೆ ಮಾಡುತ್ತೇನೆ ಎಂದು ನಿರ್ದೇಶಕ ಆರ್ ಚಂದ್ರು ತಿಳಿಸಿದ್ದರು. ಅಷ್ಟರಲ್ಲಿ ಪುನೀತ್ ರಾಜಕುಮಾರ್ ಅವರ ಅಗಲಿಕೆಯ ಸುದ್ದಿಗೆ ಇಡೀ ಕರುನಾಡು ಮಂಕಾಯಿತು.

ಹೀಗಾಗಿ ನಿರ್ದೇಶಕ ಆರ್.ಚಂದ್ರು ಟೀಸರ್ ರಿಲೀಸ್ ಕುರಿತು ಮಾತಾಡಿದ್ದಾರೆ. ನಮ್ಮ ತಂಡಕ್ಕೂ ಅಪ್ಪು ಅವರ‌ ಅಗಲಿಕೆ ಬಹಳ ನೋವು ತಂದಿದೆ. ಇಂತಹ ಸಂದರ್ಭದಲ್ಲಿ ಟೀಸರ್ ಬಿಡುಗಡೆ ಮಾಡಿ ಸಂಭ್ರಮಿಸುವುದು ಸರಿಯಲ್ಲ ಎಂಬ ಉದ್ದೇಶದಿಂದ “ಕಬ್ಜ” ಚಿತ್ರದ ಟೀಸರ್ ಬಿಡುಗಡೆ ಮಾಡಿಲ್ಲ

ಮುಂದಿನ‌ ದಿನಗಳಲ್ಲಿ ಟೀಸರ್ ಲಾಂಚ್ ಮಾಡುವುದಾಗಿ ಟ್ವಿಟರ್ ಮೂಲಕ ಸಿನಿಪ್ರೇಕ್ಷಕರಿಗೆ ತಿಳಿಸಿದ್ದಾರೆ.
.

Categories
ಸಿನಿ ಸುದ್ದಿ

ಮೂರು ದಿನದ ಬದುಕೆಂಬ ಸಂತೆ ಹೀಗಿರ‍್ಬೇಕು ! ಟಾಮ್ ಅಂಡ್ ಜರ‍್ರಿ’ ಜೀವನ ಪಾಠ ; ಮಿಡಲ್‌ಕ್ಲಾಸ್ ಹುಡುಗನ ಹೈಕ್ಲಾಸ್ ಸಿನ್ಮಾ !

ಚಿತ್ರ ವಿಮರ್ಶೆ; ವಿಶಾಲಾಕ್ಷಿ

ಟಾಮ್ ಅಂಡ್ ಜರ‍್ರಿ ಈ ವಾರ ಬೆಳ್ಳಿತೆರೆಗೆ ಲಗ್ಗೆ ಇಟ್ಟಿರುವ ಸಿನ್ಮಾ. ಫಸ್ಟ್ ಡೇ ಫಸ್ಟ್ ಶೋ ಸಿನ್ಮಾ ನೋಡಿ ಥಿಯೇಟರ್‌ನಿಂದ ಹೊರಗಡೆ ಬಂದವರು `ಟಾಮ್ ಅಂಡ್ ಜರ‍್ರಿ’ಗೆ ಜೈಕಾರ ಹಾಕಿದ್ದಾರೆ. ಮಿಡಲ್‌ಕ್ಲಾಸ್ ಹುಡುಗನ ಈ ಕಥೆ ಗಾಂಧಿಕ್ಲಾಸ್‌ಗೂ ಸೈ ಮಲ್ಟಿಪ್ಲೆಕ್ಸ್ಗೂ ಜೈ ಎಂದು ಒಪ್ಪಿಕೊಂಡಿದ್ದಾರೆ. ಮಾತ್ರವಲ್ಲ ಮೂರು ದಿನದ ಬದುಕೆಂಬ ಸಂತೆಯಲ್ಲಿ ಹೇಗ್ ಬದುಕಬೇಕು? ಯಾವ್ ರೀತಿ ಬದುಕಿದರೆ ಜೀವನ ಸುಂದರವಾಗಿರುತ್ತೆ? ಜೀವನದಲ್ಲಿ ಯಾವುದರ ಹಿಂದೆ ಓಡಬೇಕು? ಬದುಕನ್ನು ಯಾವ್ ರೀತಿಯಾಗಿ ಶ್ರೀಮಂತಗೊಳಿಸಿಕೊಳ್ಳಬಹುದು? ಲೈಫ್‌ನಲ್ಲಿ ಯಾವುದಕ್ಕೆ ಹೆಚ್ಚು ಪ್ರಾಮುಖ್ಯತೆ ಕೊಡ್ಬೇಕು? ಅದರಿಂದ ಪ್ರತಿಯಾಗಿ ನಮಗೆ ಏನ್ ಸಿಗುತ್ತೆ? ಪ್ರಾಮುಖ್ಯತೆ ಕೊಡದೇ ಇದ್ದರೆ ಏನಾಗುತ್ತೆ? ಮುಂದಿನ ದಿನಗಳಲ್ಲಿ ಯಾವ್ ರೀತಿಯಾಗಿ ಪಶ್ಚಾತಾಪ ಪಡಬೇಕಾಗುತ್ತೆ? ಎನ್ನುವುದನ್ನು ಯುವನಿರ್ದೇಶಕ ರಾಘವ್ ವಿನಯ್ ಶಿವಗಂಗೆ ದೊಡ್ಡ ಪರದೆ ಮೇಲೆ ಸೊಗಸಾಗಿ ಕಟ್ಟಿಕೊಟ್ಟಿದ್ದಾರೆ.

ಟಾಮ್ ಅಂಡ್ ಜರ‍್ರಿ'ಚಿತ್ರದಲ್ಲಿ ಧರ್ಮ(ನಿಶ್ಚಿಕ್ ಕೊರೋಡಿ)ಅನಾಥ ಯುವಕ. ಹೆತ್ತವರಿಲ್ಲದೇ ಅನಾಥಾಶ್ರಮದಲ್ಲಿ ಬೆಳೆಯೋ ಇವನಿಗೆ ಬಾಲ್ಯದಿಂದಲೇ ದೊಡ್ಡಮನುಷ್ಯ ಎನಿಸಿಕೊಳ್ಳುವ ಕನಸಿರುತ್ತೆ.ಕಾಲಲ್ಲಿ ಓಡಾಡಿ ಮನುಷ್ಯ ಎನಿಸಿಕೊಳ್ಳೋದಕ್ಕಿಂತ ಕಾರಲ್ಲಿ ಓಡಾಡಿ ದೊಡ್ಡ ಮನುಷ್ಯ ಎನಿಸಿಕೊಳ್ಳಬೇಕು ಅಂತ ಸ್ನೇಹಿತರ ಜೊತೆ ಹೇಳಿಕೊಳ್ಳುತ್ತಿರುತ್ತಾನೆ.ಆಶ್ರಮದಲ್ಲೇ ಬೆಳೆಯುವಾಗ ಧರ್ಮನನ್ನು ಶ್ರೀಮಂತ ಮನೆತನದವರು ದತ್ತು ಪಡೆಯುತ್ತಾರೆ.ಅದರಂತೇ,ಅದೇ ಆಶ್ರಮದಲ್ಲಿ ಅನಾಥೆಯಾಗಿ ಬೆಳೆಯುತ್ತಿದ್ದ ಸತ್ಯ(ಚೈತ್ರ ರಾವ್)ನ ಕೂಡ ಶ್ರೀಮಂತ ಕುಟುಂಬದ ದಂಪತಿಗಳು ದತ್ತು ಪಡೆಯುತ್ತಾರೆ.ಇವರಿಬ್ಬರು ಆಶ್ರಮದಲ್ಲಿದ್ದಾಗ ಬೆಸ್ಟ್ ಫ್ರೆಂಡ್ಸ್ ಆಗಿರುತ್ತಾರೆ.

ಆದರೆ,ಇಬ್ಬರನ್ನೂ ಬೇರೆ ಬೇರೆ ದಂಪತಿಗಳು ದತ್ತು ಪಡೆದ ಕಾರಣಕ್ಕೆ ದೂರ ದೂರ ಆಗ್ಬಿಡ್ತಾರೆ.ಹೀಗೆ,ಬಾಲ್ಯದಲ್ಲೇ ಬೇರೆ ಬೇರೆಯಾದ ಸತ್ಯ ಹಾಗೂ ಧರ್ಮ ಬೆಳೆದು ದೊಡ್ಡವರಾದ ಮೇಲೆ ಮತ್ತೆ ಸಿಗ್ತಾರೆ.ಸತ್ಯ ತುಂಬಾ ಶ್ರೀಮಂತರ ಮನೆಯಲ್ಲಿ ಬೆಳೆದಿರ‍್ತಾಳೆ ಅವಳಿಗೆ ಯಾವುದಕ್ಕೂ ಕೊರತೆಯಿರೋದಿಲ್ಲ.ಆದರೆ, ಧರ್ಮನನ್ನು ದತ್ತು ಪಡೆದವರು ನಡೆಸುತ್ತಿದ್ದ ಕಂಪನಿಗೆ ಬೆಂಕಿಬಿದ್ದು ಬೀದಿಗೆ ಬಂದಿರುತ್ತಾರೆ.ಹೀಗಾಗಿ,ಧರ್ಮ ತನಗೆ ಇಷ್ಟವಿಲ್ಲದಿದ್ದರೂ ಕೂಡ ಮೆಕಾನಿಕ್ ಆಗಿ ಕೆಲಸಕ್ಕೆ ಸೇರಿಕೊಂಡರ‍್ತಾನೆ.ಇದೇ ಹೊತ್ತಿಗೆ ಬಾಲ್ಯದ ಗೆಳತಿ ‘ಸತ್ಯ’ ಪುನಃ ಸಿಗ್ತಾಳೆ. ಆಕೆಯ ಮೇಲೆ ಧರ್ಮನಿಗೆ ಲವ್ವಾಗುತ್ತೆ.

ಅಂದ್ಹಾಗೇ, ಸತ್ಯ ಮತ್ತು ಧರ್ಮ ಇಬ್ಬರದ್ದು ಅಪೋಸಿಟ್ ಕ್ಯಾರೆಕ್ಟರ್. ಬದುಕನ್ನು ಇಬ್ಬರು ನೋಡುವ ರೀತಿಯೇ ಬೇರೆ ಬೇರೆ. ಇಬ್ಬರ ಯೋಚನೆ-ಆಲೋಚನೆಗಳೇ ಡಿಫರೆಂಟ್. ಕಾಲಲ್ಲಿ ಓಡಾಡಿ ಮನುಷ್ಯ ಎನಿಸಿಕೊಳ್ಳೋದಕ್ಕಿಂತ ಕಾರಲ್ಲಿ ಓಡಾಡಿ ದೊಡ್ಡ ಮನುಷ್ಯ ಎನಿಸಿಕೊಳ್ಳಬೇಕು ಎನ್ನುವುದು ಧರ್ಮನ ನೇಚರ್ ಮತ್ತು ಕನಸು ಆದರೆ, ಕಾರಿದ್ದರೂ ಕಾಲಲ್ಲಿಓಡಾಡುತ್ತಾ ಬಿಂದಾಸ್ ಆಗಿ ಬದುಕುವ ಸ್ವಭಾವ ಸತ್ಯಾಳದ್ದು. ಅನಾಥೆಯಾದರೂ ಶ್ರೀಮಂತ ಕುಟುಂಬದಲ್ಲಿ ಬೆಳೆದ ಈಕೆಗೆ ರಾಯಲ್ ಲೈಫ್ ಬೋರೆದ್ದು ಹೋಗಿರುತ್ತೆ. ಕಣ್ಣು ಆಸೆ ಪಟ್ಟಿದ್ದು, ಮನಸ್ಸು ಕೇಳಿದ್ದು ಕ್ಷಣಾರ್ಧದಲ್ಲಿ ಸಿಕ್ಕಿದ್ದರಿಂದ ಈಕೆಗೆ ಶ್ರೀಮಂತಿಕೆಯ ಮೇಲೆ ಒಂದು ರೀತಿ ಆಲಸ್ಯ ಹುಟ್ಟಿರುತ್ತೆ.

ಹೃದಯ ಏನ್ ಬಯಸುತ್ತೋ ಅದು ಕ್ಷಣಾರ್ಧದಲ್ಲಿ ಸಿಗ್ಬಾರ್ದು ಅದಕ್ಕಾಗಿ ಕಾತುರದಿಂದ ಕಾಯಬೇಕು ಎನ್ನುವ ವಾದ ಈಕೆಯದ್ದು. ಆದರೆ, ಇಷ್ಟಪಟ್ಟಿದ್ದು ಕ್ಷಣಾರ್ಧದಲ್ಲಿ ಸಿಗ್ಬೇಕು, ಜೀವನ ಒಂದೇ ಸಿಲ ಸಿಗೋದು ಸರಿಯಾಗಿ ಎಂಜಾಯ್ ಮಾಡ್ಬೇಕು ಎನ್ನುವುದು ಧರ್ಮನ ವಾದ. ಹೀಗೆ ವಿರುದ್ದ ದಿಕ್ಕಿನಲ್ಲಿ ಸಾಗಬಯಸುವ ಇವರಿಬ್ಬರು ಒಂದಾಗ್ತಾರಾ? ಪ್ರೀತಿಸಿದ ಇವರಿಬ್ಬರು ಜೊತೆಯಾಗ್ತಾರಾ? ಈ ಕೂತೂಹಲದ ಪ್ರಶ್ನೆಗೆ ಉತ್ತರ ಬೇಕು ಅಂದರೆ ಕೂಲ್‌ಡ್ರಿಂಕ್ಸ್ ಜೊತೆ ಪಾಪ್‌ಕಾರ್ನ್ ತಗೊಂಡು ನೀವು ಕೂಡ ಥಿಯೇಟರ್‌ಗೆ ಬನ್ನಿ

ಟಾಮ್ ಅಂಡ್ ಜರ‍್ರಿ ಇಬ್ಬರು ದೂರ ಆಗ್ತಾರಾ ಅಥವಾ ಇಬ್ಬರು ಜೊತೆಯಾಗ್ತಾರಾ ಅನ್ನೋದಲ್ಲ ಕಥೆ. ಈ ಸಿನಿಮಾದಿಂದ ಜೀವನಕ್ಕೆ- ಬದುಕಿಗೆ ಒಂದು ಸಂದೇಶ ಇದೆ. ಮಿಡಲ್‌ಕ್ಲಾಸ್-ಹೈಕ್ಲಾಸ್ ಅಂತ ನೋಡದೇ, ಶ್ರೀಮಂತ ಹಾಗೂ ಬಡವ ಎಂದು ಭೇದ-ಭಾವ ಮಾಡದೇ ಹೇಗ್ ಬದುಕಬೋದು? ದೊಡ್ಡ ಮನುಷ್ಯನಾಗ್ಬೇಕು ಎಂದು ಬಯಸುವವರು ಮೊದಲು ಯಾವುದರಲ್ಲಿ ದೊಡ್ಡಮನುಷ್ಯ ಎನಿಸಿಕೊಳ್ಳಬೇಕು? ಸುತ್ತ-ಮುತ್ತಲಿನವರಿಗೆ ಯಾವ್ ರೀತಿಯಾಗಿ ಪ್ರೀತಿ ಹಂಚಬೇಕು? ಭಾವನೆಗಳಿಗೆ ಹೇಗೆ ಬೆಲೆಕೊಟ್ಟು ಬದುಕಬೇಕು? ರಕ್ತ ಸಂಬಂಧಿಗಳಲ್ಲದೇ ಹೋದರೂ ಕೂಡ ಆ ಸಂಬಂಧಕ್ಕೆ ಎಂತಹ ವ್ಯಾಲ್ಯೂ ಕೊಡಬೇಕು? ಹೆಣ್ಣಿಗೆ ಎಷ್ಟು ಗೌರವ ಕೊಡಬೇಕು? ಇದೆಲ್ಲದರ ಜೊತೆಗೆ ತಮ್ಮೊಳಗೆ ತಮ್ಮನ್ನು ಕಂಡುಕೊಳ್ಳುವುದು ಹೇಗೆ? ಸಂತೋಷ ಕಾಣುವುದು ಹೇಗೆ? ನಿಸ್ವಾರ್ಥದಿಂದ-ಖುಷಿಯಿಂದ ಬದುಕುವುದು ಹೇಗೆ ಎನ್ನುವುದನ್ನು ಅಚ್ಚುಕಟ್ಟಾಗಿ ಪ್ರಸೆಂಟ್ ಮಾಡಿದ್ದಾರೆ. ತಾವು ಕಂಡಿದ್ದು-ಕೇಳಿದ್ದು-ನೋಡಿದ್ದು-ಅನುಭವಿಸಿದ್ದು ಎಲ್ಲವನ್ನೂ ಸಿನಿಮಾವಾಗಿಸಿ ಪ್ರೇಕ್ಷಕರಿಗೆ ಜೀವನದ ಪಾಠ ಮಾಡಿದ್ದಾರೆ. ತಂದೆ-ತಾಯಿ ಪ್ರೀತಿಯನ್ನು ಅಮೋಘವಾಗಿ ಕಟ್ಟಿಕೊಟ್ಟಿದ್ದಾರೆ.

ಕನ್ನಡ ಚಿತ್ರರಂಗದಲ್ಲಿ ಸಹಾಯಕ ನಿರ್ದೇಶಕರಾಗಿ ಗುರ್ತಿಸಿಕೊಂಡು, ಕೆಜಿಎಫ್ ಸಿನಿಮಾಗೆ ಡೈಲಾಗ್ ರೈಟರ್ ಆಗಿದ್ದ ನಿರ್ದೇಶಕ ರಾಘವ್ ವಿನಯ್ ಶಿವಗಂಗೆಗೆ ‘ಟಾಮ್ ಅಂಡ್ ಜರ‍್ರಿ'ಚೊಚ್ಚಲ ಸಿನ್ಮಾ.ಮೊದಲ ಪ್ರಯತ್ನದಲ್ಲೇ ಒಂದು ಮಟ್ಟಿಗೆ ಸಕ್ಸಸ್ ಕಂಡಿದ್ದಾರೆ.ಮಿಡಲ್ ಕ್ಲಾಸ್ ಹುಡುಗನ ಪಾತ್ರಕ್ಕೆ ಬಣ್ಣ ಹಚ್ಚಿರುವ ನಟ ನಿಶ್ಚಿತ್ ಕೊರೋಡಿ ಭರವಸೆ ಮೂಡಿಸಿದ್ದಾರೆ.ಈ ನಟನ ಸ್ಕ್ರೀನ್ ಪ್ರಸೆನ್ಸ್ ನೋಡಿದರೆ ಗಂಧದಗುಡಿಯಲ್ಲಿ ಗಟ್ಟಿಯಾಗಿ ನೆಲೆಯೂರೋದು ಗ್ಯಾರಂಟಿ ಎನಿಸುತ್ತೆ.ಇನ್ನೂ ನಾಯಕಿ ಸತ್ಯ ಪಾತ್ರಧಾರಿ ಚೈತ್ರಾ ಮುದ್ದಾಗಿ ಅಭಿನಯಿಸಿದ್ದಾರೆ.ಸ್ಕ್ರೀನ್ ಮೇಲೆ ಚೆಂದ ಕಾಣಿಸ್ತಾರೆ, ಕುಡಿನೋಟದಲ್ಲೇ ದಿಲ್ ಕದಿಯುವ ಚಾಕಚಾಕ್ಯತೆ ಚೈತ್ರಾಗಿದೆ. ಅಮ್ಮನ ಪಾತ್ರದಲ್ಲಿ ತಾರಮ್ಮ ಅವ್ರದ್ದು ಅದ್ಭುತ ಅಭಿನಯ.ಕಡ್ಡಿಪುಡ್ಡಿ ಚಂದ್ರು ಅಳುಸ್ತಾರೆ,ಪ್ರಕಾಶ್ ತುಮ್ಮಿನಾಡು ನಗುಸ್ತಾರೆ.ಜೈ ಜಗದೀಶ್,ರಾಕ್‌ಲೈನ್ ಸುಧಾಕರ್,ಕೋಟೆ ಪ್ರಭಾಕರ್,ಸಂಪತ್ ಮೈತ್ರೇಯ,ಪದ್ಮಜಾ ರಾವ್,ಪ್ರಶಾಂತ್ ನಟನ, ಮೈತ್ರಿ ಜಗ್ಗಿ ಅವರವರ ಪಾತ್ರಕ್ಕೆ ಉಸಿರು ತುಂಬಿದ್ದಾರೆ.ಇವರೊಟ್ಟಿಗೆ ಸಂಪೂರ್ಣ ಹೊಸಬರ ತಂಡವಿದ್ದು `ಟಾಮ್ ಅಂಡ್ ಜರ‍್ರಿ’ ಗಾಗಿ ಶ್ರಮಿಸಿದ್ದಾರೆ. ನವ ಪ್ರತಿಭೆಗಳಿಗೆ ಚಾನ್ಸ್ ಕೊಡಬೇಕು ಅಂತ `ರಿದ್ಧಿ ಸಿದ್ಧಿ ಫಿಲಂಸ್‌ನ ರಾಜು ಶೇರಿಗಾರ್ ಉದಾರತೆ ತೋರಿದ್ದಾರೆ.

ಚಿತ್ರದಲ್ಲಿ ಒಟ್ಟು ಐದು ಹಾಡುಗಳಿದ್ದು, ಮ್ಯಾಥ್ಯೂಸ್ ಮನು ಸಂಗೀತ ಸಂಯೋಜಿಸಿದ್ದಾರೆ. `ಹಾಯಾಗಿದೆ ಎದೆಯೊಳಗೆ'ಹಾಡು ಮತ್ತು ತಾಯಿ ಸೆಂಟಿಮೆಂಟ್ ಇರುವ `ಜಗದ ಜೋಲಿಯ ತೂಗುವ ಕೈಗಳೇ’ ಸಾಂಗ್ ಪ್ರೇಕ್ಷಕರನ್ನು ಕಟ್ಟಿಹಾಕುತ್ತವೆ. ಸಂಕೇತ್ ಕ್ಯಾಮೆರಾ ವರ್ಕ್ ಚೆನ್ನಾಗಿದೆ, ಹೀರೋ-ಹೀರೊಯಿನ್ನಾ ಚೆನ್ನಾಗಿ ತೋರಿಸಿದ್ದಾರೆ. ಸೂರಜ್ ಅಂಕೊಲೇಕರ್ ಸಂಕಲನ ಇನ್ನೊಂದಿಷ್ಟು ಶಾರ್ಪ್ ಆಗ್ಬೇಕಿತ್ತು. ಅರ್ಜುನ್ ರಾಜ್ ಸಾಹಸ ಸೂಪರ್. `ಸಾವಿಗಿಂತ ರೆಸ್ಟ್ ಇಲ್ಲ.. ಸ್ಮಶಾನಕ್ಕಿಂತ ಒಳ್ಳೆ ರೆಸಾರ್ಟ್ ಇಲ್ಲ’ ಎನ್ನುವಂತಹ ಡೈಲಾಗ್‌ಗಳಿವೆ. ಆದರೆ, ನಿರ್ದೇಶಕರು ಹೀರೋ ಪಾತ್ರಕ್ಕೆ ಕ್ಲ್ಯಾರಿಟಿ ಕೊಡುವಲ್ಲಿ ಇನ್ನೊಂದಿಷ್ಟು ಇಂಟ್ರೆಸ್ಟ್ ತೋರಿಸಬೇಕಿತ್ತು. ಕಾಲಲ್ಲಿ ಓಡಾಡಿ ಮನುಷ್ಯ ಎನಿಸಿಕೊಳ್ಳೋದಕ್ಕಿಂತ ಕಾರಲ್ಲಿ ಓಡಾಡಿ ದೊಡ್ಡ ಮನುಷ್ಯ ಎನಿಸಿಕೊಳ್ಳಬೇಕು ಅಂದರೆ ನೀನು ಈ ಕೆಲಸ ಮಾಡ್ಬೇಕಪ್ಪ ಅಂತ ಪಾತ್ರವನ್ನು ಗಟ್ಟಿಗೊಳಿಸಬೇಕಿತ್ತು. ಹೀರೋ-ಹೀರೋಯಿನ್ ಮಧ್ಯೆ ಒಂದಿಷ್ಟು ರೊಮ್ಯಾನ್ಸ್ ಇಡಬೇಕಿತ್ತು. ಬಿಎಂಟಿಸಿ ಬಸ್ ಸೀನ್‌ಗಳಲ್ಲಿ ನಡೆಯುವ ಸಂಭಾಷಣೆ ಕಡಿಮೆಯಾಗಬೇಕಿತ್ತು. ಇದು ಹೊರೆತುಪಡಿಸಿದರೆ ಸಿನಿಮಾ ಆಲ್ ಓಕೆನೇ. ಇಲ್ಲಿವರೆಗೂ ಹೊಸಬರ ಪ್ರಯತ್ನಕ್ಕೆ ಪ್ರತಿಫಲ ಸಿಕ್ಕಿದೆ. ಟಾಮ್ ಅಂಡ್ ಜರ‍್ರಿಗೂ ಅದೇ ಸಕ್ಸಸ್ ಸಿಗುತ್ತಾ ಒಂದು ವಾರ ಕಾಯಬೇಕು.

ಎಂಟರ್‌ಟೈನ್ಮೆಂಟ್ ಬ್ಯೂರೋ ಸಿನಿಲಹರಿ

error: Content is protected !!