ಅರಮನೆ ಮೈದಾನದಲ್ಲಿ ಅಪ್ಪುಗೆ ನುಡಿ ನಮನ; ನವೆಂಬರ್‌ 16 ರಂದು ಫಿಲ್ಮ್‌ಚೇಂಬರ್‌ ನೇತೃತ್ವದಲ್ಲಿ ದೊಡ್ಮನೆ ಹುಡುಗನಿಗೆ ನಮನ- ಮನರಂಜನೆಗೆ ಅವಕಾಶವಿಲ್ಲ

ಕನ್ನಡ ಚಿತ್ರರಂಗದ ಖ್ಯಾತ ನಟ ಪುನೀತ್‌ರಾಜಕುಮಾರ್‌ ಅವರ ಅಗಲಿಕೆ ಹಿನ್ನೆಲೆಯಲ್ಲಿ ಕನ್ನಡ ಚಿತ್ರರಂಗ ನುಡಿ ನಮನ ಕಾರ್ಯಕ್ರಮ ಆಯೋಜಿಸಿದೆ. ನವೆಂಬರ್‌ 16 ರಂದು ಅರಮನೆ ಮೈದಾನದ ಗಾಯತ್ರಿ ವಿಹಾರದಲ್ಲಿ ಈ ಕಾರ್ಯಕ್ರಮ ನಡೆಯಲಿದೆ.

ಈ ಕಾರ್ಯಕ್ರಮಕ್ಕೆ ಮುಖ್ಯಮಂತ್ರಿ ಬಸವರಾಜ್‌ ಬೊಮ್ಮಾಯಿ ಸೇರಿದಂತೆ ಸಚಿವರು, ವಿರೋಧ ಪಕ್ಷದ ನಾಯಕರು, ಗಣ್ಯರು, ಚಿತ್ರರಂಗದ ಕಲಾವಿದರು ತಾಂತ್ರಿಕ ವರ್ಗದವರು ಪಾಲ್ಗೊಳ್ಳಲಿದ್ದಾರೆ. ಕನ್ನಡ ಚಿತ್ರರಂಗದ ಎಲ್ಲಾ ವಿಭಾಗಗಳು ಈ ನುಡಿನಮನ ಕಾರ್ಯಕ್ರಮಕ್ಕೆ ಕೈ ಜೋಡಿಸಿವೆ. ಅಪ್ಪು ನುಡಿನಮನ ಕಾರ್ಯಕ್ರಮ ಕುರಿತಂತೆ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಧ್ಯಕ್ಷ ಜೈರಾಜ್‌ ಹೇಳುವುದಿಷ್ಟು.


ಪುನೀತ್‌ರಾಜಕುಮಾರ್‌ ಅವರ ಅಗಲಿಕೆಯಿಂದ ಚಿತ್ರೋದ್ಯಮ ದುಃಖದಲ್ಲಿದೆ. ಸರಳ ಸಜ್ಜನಿಕೆ ನಟ ಕಳೆದುಕೊಂಡು ನಿಜಕ್ಕೂ ಬಡವಾಗಿದೆ. ಫಿಲ್ಮ್‌ ಚೇಂಬರ್‌ ನೇತೃತ್ವದಲ್ಲಿ ಚಿತ್ರೋದ್ಯಮ ಅಪ್ಪು ನುಡಿ ನಮನ ಕಾರ್ಯಕ್ರಮ ಆಯೋಜಿಸಿದೆ. ನಿರ್ಮಾಪಕರ ಸಂಘ, ಕಲಾವಿದರ ಸಂಘ, ಛಾಯಾಗ್ರಾಹಕರ ಸಂಘ, ಒಕ್ಕೂಟ, ವಿತರಕರು, ಪ್ರದರ್ಶಕರು ಸೇರಿದಂತೆ ಚೇಂಬರ್‌ನ ಅಂಗ ಸಂಸ್ಥೆಗಳ ಪದಾಧಿಕಾರಿಗಳು ಸೇರಿ ಕಾರ್ಯಕ್ರಮ ನಡೆಸಿಕೊಡಲಿದ್ದಾರೆ. ಸೌತ್‌ ಫಿಲ್ಮ್‌ಇಂಡಸ್ಟ್ರಿ ಮಂದಿ ಕೂಡ ಆಗಮಿಸಲಿದ್ದಾರೆ. ಒಂದು ಅರ್ಥಪೂರ್ಣ ಕಾರ್ಯಕ್ರಮ ನಡೆಸಲು ತೀರ್ಮಾನಿಸಲಾಗಿದೆ. ಇದು ಎಲ್ಲರ ಕಾರ್ಯಕ್ರಮ. ಚಿತ್ರರಂಗದ ಪ್ರತಿಯೊಬ್ಬರ ಸಹಕಾರದಿಂದ ಈ ಕಾರ್ಯಕ್ರಮ ನಡೆಯಲಿದೆ ಎಂದರು.


ಸಾ.ರಾ.ಗೋವಿಂದು ಮಾತನಾಡಿ, ” ಪುನೀತ್‌ ಅವರ ನಿಧನದ ಹಿಂದಿನ ದಿನವೇ ನಾವು ನುಡಿ ನಮನ ಕಾರ್ಯಕ್ರಮ ನಡೆಸಲು ತೀರ್ಮಾನಿಸಿದ್ದೆವು. ಅದರಂತೆ, ನವೆಂಬರ್‌ ೧೬ರಂದು ಅಪ್ಪು ನುಡಿ ನಮನ ಕಾರ್ಯಕ್ರಮ ನಡೆಯಲಿದೆ. ರಾಜ್‌ಕುಮಾರ್ ಕುಟುಂಬ‌, ಇಡೀ ಚಿತ್ರೋದ್ಯಮ, ದಕ್ಷಿಣ ಭಾರತ ಚಿತ್ರೋದ್ಯಮ ನುಡಿ ನಮನಕ್ಕೆ ಸಾಕ್ಷಿಯಾಗಲಿದೆ. ಈಗಾಗಲೇ ಹೈದರಾಬಾದ್‌ಗೆ ಹೋಗಿ, ಅಲ್ಲಿನ ಫಿಲ್ಮ್‌ ಚೇಂಬರ್‌ ಪದಾಧಿಕಾರಿಗಳು ಮತ್ತು ಕಲಾವಿದರನ್ನು ಆಹ್ವಾನಿಸಲಾಗಿದೆ. ಚೆನ್ನೈ ಫಿಲ್ಮ್‌ ಚೇಂಬರ್‌ಗೂ ಮಾಹಿತಿ ನೀಡಿದ್ದೇವೆ. ಪುನೀತ್‌ ಅವರ ಅಭಿಮಾನಿಗಳು ಮತ್ತು ನಾಡಿನ ಜನರಲ್ಲಿ ಮನವಿ ಮಾಡಿಕೊಳ್ಳುವುದೇನೆಂದರೆ, ಈ ನುಡಿ ನಮನ ಕಾರ್ಯಕ್ರಮ ನಡೆಯುತ್ತಿರೋದು, ಸಿನಿಮಾ ರಂಗಕ್ಕೆ ಮಾತ್ರ ಸೀಮಿತವಾಗಿದೆ. ಹಾಗಾಗಿ ಯಾರೂ ಅನ್ಯತಾ ಭಾವಿಸಬಾರದು. ಈ ಕಾರ್ಯಕ್ರಮಕ್ಕೆ ಸುಮಾರು ಒಂದುವರೆ ಸಾವಿರ ಜನರಿಗೆ ಮಾತ್ರ ಅವಕಾಶ ಕಲ್ಪಿಸಲಾಗಿದೆ. ಹಾಗಾಗಿ ನಾಡಿನ ಜನರು ಸಹಕಾರ ನೀಡಬೇಕು. ನೀವಿದ್ದಲ್ಲೀಯೇ ಟಿವಿ ಮೂಲಕ ಕಾರ್ಯಕ್ರಮ ವೀಕ್ಷಿಸಬಹುದು ಎಂದಿದ್ದಾರೆ.

ಮನರಂಜನೆ ಇರಲ್ಲ…
ಅಂದು ನುಡಿನಮನ ಕಾರ್ಯಕ್ರಮ ಹೊರತಾಗಿ ಯಾವುದೇ ಮನರಂಜನೆ ಇರಲ್ಲ. ಪುನೀತ್‌ ಅವರ ಕುರಿತು ವಿಶೇಷವಾದ ಹಾಡೊಂದನ್ನು ನಾಗೇಂದ್ರ ಪ್ರಸಾದ್‌ ಬರೆದಿದ್ದಾರೆ. ಆ ಹಾಡಿಗೆ ಗುರುಕಿರಣ್‌ ಸಂಯೋಜನೆ ಇದೆ. ಹಾಡಿನೊಂದಿಗೆ ಶ್ರದ್ಧಾಂಜಲಿ ಕಾರ್ಯಕ್ರಮ ನಡೆಯಲಿದೆ. ಇನ್ನು, ಅಂದು ಪುನೀತ್‌ ಅವರ ಚಿತ್ರಗಳ ಹಾಡಿನ ತುಣುಕು ಪ್ರದರ್ಶನ ಮತ್ತು ಗಣ್ಯರು ಮಾತಾಡಲಿದ್ದಾರೆ. ನವರಸನ್‌ ಅವರು ಕಾರ್ಯಕ್ರಮದ ಜವಾಬ್ದಾರಿ ವಹಿಸಿಕೊಂಡಿದ್ದಾರೆ. ಒಂದು ಅರ್ಥಪೂರ್ಣ ಕಾರ್ಯಕ್ರಮ ಮಾಡುವ ಮೂಲಕ ಯಶಸ್ವಿಗೊಳಿಸಬೇಕು ಅನ್ನೋದು ನಮ್ಮ ಆಸೆ ಎಂದರು ಸಾ.ರಾ.ಗೋವಿಂದು.

ಶೂಟಿಂಗ್‌ ಬಂದ್‌
ನುಡಿ ನಮನ ಕಾರ್ಯಕ್ರಮದ ಹಿನ್ನೆಲೆಯಲ್ಲಿ, ಚಿತ್ರರಂಗದ ಎಲ್ಲರೂ ಭಾಗವಹಿಸಲಿದ್ದಾರೆ. ಅಂದು ಚಿತ್ರೀಕರಣ ಬಂದ್‌ ಮಾಡಲಾಗುತ್ತದೆ. ಆದರೆ, ಥಿಯೇಟರ್‌ ಪ್ರದರ್ಶನ ಎಂದಿನಂತೆ ಇರಲಿದೆ. ನಮಗೂ ಎಲ್ಲರನ್ನೂ ಕರೆಯಬೇಕು ಎಂಬ ಆಸೆ ಇತ್ತು. ಆದರೆ, ಈಗ ಪರಿಸ್ಥಿತಿ ಸರಿ ಇಲ್ಲ. ಹಾಗಾಗಿ ಪುನೀತ್‌ ಅವರ ಅಭಿಮಾನಿಗಳು ನಾಡಿನ ಜನರು ಕುಳಿತಲ್ಲೇ ಟಿವಿಯಲ್ಲಿ ಕಾರ್ಯಕ್ರಮ ವೀಕ್ಷಿಸಬೇಕು. ಅಂದು ವಿಶೇಷವಾಗಿ ಮೈಸೂರು ರಾಜಮನೆತನದ ರಾಜ ಯದುವೀರ್‌ ಅವರು ಭಾಗವಹಿಸಲಿದ್ದಾರೆ.


ಪಾಸ್‌ ಇದ್ದವರಿಗೆ ಪ್ರವೇಶ
ಈ ನುಡಿ ನಮನ ಕಾರ್ಯಕ್ರಮಕ್ಕೆ ಪಾಸ್‌ ಇದ್ದವರಿಗೆ ಮಾತ್ರ ಪ್ರವೇಶವಿದೆ. ವಿಐಪಿ ವಿವಿಐಪಿ ಹೀಗೆ ವಿಂಗಡಣೆ ಮಾಡಿ ಪಾಸ್‌ ವ್ಯವಸ್ಥೆ ಮಾಡಲಾಗಿದೆ. ಅಂದು ಮಧ್ಯಾಹ್ನ ೩ಗಂಟೆಗೆ ಕಾರ್ಯಕ್ರಮ ಶುರುವಾಗಲಿದೆ. ೨.೩೦ಕ್ಕೆ ಎಲ್ಲರೂ ಆಗಮಿಸಬೇಕು. ನಾಲ್ಕು ದ್ವಾರದಲ್ಲೂ ಸೆಕ್ಯೂರಿಟಿ ಇರುವುದರಿಂದ ಪಾಸ್‌ ಇದ್ದವರಿಗೆ ಮಾತ್ರ ಅವಕಾಶವಿದೆ. ಒಟ್ಟು ಮೂರು ತಾಸಿನ ಕಾರ್ಯಕ್ರಮವದು.

Related Posts

error: Content is protected !!