ಹಾಲು-ತುಪ್ಪ ನೆರವೇರಿಸಿದ ಅಪ್ಪು ಕುಟುಂಬ; ಕಂಠೀರವ ಸ್ಟುಡಿಯೋದಲ್ಲಿ ಕಿಕ್ಕಿರಿದಿದ್ದ ಫ್ಯಾನ್ಸ್‌

ಕನ್ನಡದ ಖ್ಯಾತ ನಟ ಪುನೀತ್‌ ರಾಜಕುಮಾರ್‌ ಅವರು ನಿಧನರಾಗಿ ಇಂದಿಗೆ (ಮಂಗಳವಾರ) ಐದನೇ ದಿನ. ಈ ಹಿನ್ನೆಲೆಯಲ್ಲಿ ಪುನೀತ್‌ ಅವರ ಕುಟುಂಬ ವರ್ಗ ಐದನೇ ದಿನದ ಅಂಗವಾಗಿ ಹಾಲು-ತುಪ್ಪ ಬಿಡುವ ಕಾರ್ಯಕ್ರಮ ನಡೆಸಿತು. ಪುನೀತ್‌ ರಾಜಕುಮಾರ್‌ ಅವರ ಪತ್ನಿ ಅಶ್ವಿನಿ, ಪುತ್ರಿಯರಾದ ಧ್ರುತಿ, ವಂದಿತಾ ತನ್ನ ತಂದೆಯ ಸಮಾಧಿ ಬಳಿ ಬಂದು ಹಾಲು-ತುಪ್ಪ ಬಿಡುವ ಮೂಲಕ ಪೂಜೆ ಸಲ್ಲಿಸಿದರು. ತಂದೆಯ ಭಾವಚಿತ್ರಕ್ಕೆ ಪುಷ್ಪನಮನ ಸಲ್ಲಿಸಿ ಭಾವುಕರಾದರು. ಅಲ್ಲಿದ್ದವರೆಲ್ಲರೂ ಕ್ಷಣ ಕಾಲ ಮೌನವಾಗಿ, ಕಣ್ಣಾಲಿಗಳಲ್ಲಿ ನೀರು ತುಂಬಿಕೊಂಡರು. ಪುನೀತ್‌ ಅವರ ಸಮಾಧಿಯನ್ನು ಬಿಳಿ ಮತ್ತು ಹಳದಿ ಬಣ್ಣದ ಹೂಗಳಿಂದ ಮಂಟಪದ ರೀತಿ ಅಲಂಕಾರ ಮಾಡಲಾಗಿತ್ತು. ಹಾಲು-ತುಪ್ಪ ಕಾರ್ಯಕ್ರಮ ಇದ್ದುದರಿಂದ ಪುನೀತ್‌ ಅವರಿಗೆ ಪ್ರಿಯವಾದ ಊಟ, ತಿಂಡಿ, ತಿನಿಸುಗಳನ್ನು ಅವರ ಸಂಬಂಧಿಕರು ಎಡೆ ಇಟ್ಟು ನಮಸ್ಕರಿಸಿದ್ದಾರೆ.


ಈ ವೇಳೆ ಪುನೀತ್‌ ಅವರ ಪತ್ನಿ ಅಶ್ವಿನಿ ಅವರು ಪುನೀತ್‌ ಅವರ ಸಮಾಧಿ ಮೇಲಿದ್ದ ತುಳಸಿ ಸಸಿಗೆ ಪೂಜೆ ನೆರವೇರಿಸಿದರು. ಪುತ್ರಿಯರಾದ ಧ್ರುತಿ ಮತ್ತು ವಂದಿತಾ ಅವರು ಸಹ ಪೂಜೆ ನೆರವೇರಿಸಿದರು. ಸಮಾಧಿಗೆ ಅರಿಶಿನ ಕುಂಕುಮ ಹಚ್ಚಿ ಪೂಜೆ ನೆರವೇರಿಸಿ, ಎಲ್ಲರೂ ಕ್ಷಣಕಾಲ ಭಾವುಕರಾದರು. ಕುಟುಂಬದವರು ಮತ್ತು ಆಪ್ತರು ಇಂದು ಹಾಲು-ತುಪ್ಪ ಕಾರ್ಯಕ್ರಮದಲ್ಲಿ ಭಾಗಿಯಾಗಿದ್ದರು. ಗಾಜನೂರಿನಿಂದ ಆಗಮಿಸಿರುವ ದೊಡ್ಮನೆ ಕುಟುಂಬಸ್ಥರು, ಲಕ್ಷ್ಮೀ , ಪೂರ್ಣಿಮಾ, ಧನ್ಯ , ಧೀರನ್, ಶ್ರೀಮುರುಳಿ, ಸಾರಾ ಗೋವಿಂದು ಸೇರಿದಂತೆ ಹಲವರು ಭಾಗಿಯಾಗಿದ್ದರು.


ಈ ಬಳಿಕ ರಾಘವೇಂದ್ರ ರಾಜಕುಮಾರ್‌ ಮಾತನಾಡಿ, ಐದು ದಿನ ಆಗಿದೆ, ಹನ್ನೊಂದನೇ ದಿನ ಬರುತ್ತೆ. ವರ್ಷವೂ ಬರುತ್ತೆ. ನೋವು ಜೊತೆ ಬದುಕೋಕೆ ಶಕ್ತಿ ಕೊಡು ಭಗವಂತ ಅಂತ ಕೇಳಿಕೊಳ್ತಿನಿ. ಈ ದುರ್ಗತಿ ಹೇಗೆ ತಗೋಬೇಕು ಗೊತ್ತಿಲ್ಲ. ತಂದೆಯವರು ಇಷ್ಟು ವರ್ಷ ಇದ್ದು ಹೋದರು. ನಿಮ್ಮ ಪುನೀತ್‌ ಅಂದರೆ, ತಮ್ಮ ಪುನೀತ್‌ ೪೬ ವರ್ಷಕ್ಕೆ ಮುಗಿಸಿಕೊಂಡು ಬಾ ಅಂತ ಹೇಳಿದ್ದರ. ಭಗವಂತ ಅಷ್ಟೇ ಟೈಮ್‌ ಕೊಟ್ಟಿದ್ದು. ಅದೇನೆ ಇರಲಿ, ಅಪ್ಪು ಕಣ್ಣುಗಳು ನಾಲ್ವರಿಗೆ ದೃಷ್ಟಿಯಾಗಿದೆ. ನಮ್ಮ ಕುಟುಂಬಕ್ಕೆ ಖುಷಿಯ ವಿಚಾರ.
ಅಪ್ಪು ಇನ್ನೂ ಇಡೀ ಪ್ರಪಂಚವನ್ನು ನೋಡ್ತಾ ಇದಾರೆ. ತಂದೆ ಎರಡು ಕಣ್ಣು ಇಬ್ಬರಿಗೆ ಆಯ್ತು.

ಪುನೀತ್‌ ಎರಡು ಕಣ್ಣು ನಾಲ್ಕು ಜನರಿಗೆ ಆಗಿದೆ. ನಾಲ್ಕು ಮಂದಿ ಬದುಕಲ್ಲಿ ಬೆಳಕಾಗಿದ್ದಾರೆ. ಇಷ್ಟು ದಿನ ಸಂಯಮದಿಂದಲೇ ಅಭಿಮಾನಿಗಳು ನಮ್ಮೊಂದಿಗಿದ್ದಾರೆ. ಸಹಕರಿಸಿದ್ದಾರೆ. ಸರ್ಕಾರ ಕೂಡ ಶಾಂತಿ ರೀತಿ ಎಲ್ಲವನ್ನೂ ನೋಡಿಕೊಂಡಿದೆ ಎಲ್ಲರಿಗೂ ಧನ್ಯವಾದ ಎಂದಿದ್ದಾರೆ.
ಅಭಿಮಾನಿಗಳು ಈಗಾಗಲೇ ಸಾಗರ ಬಳಿ ಪುನೀತ್‌ ಹೆಸರಲ್ಲೇ ಒಂದು ವೃತ್ತ ಮಾಡಿದ್ದು, ವೃತ್ತವೊಂದಕ್ಕೆ ಅಪ್ಪು ಹೆಸರಿಟ್ಟಿದ್ದಾರೆ. ಇನ್ನು, ಶಿವಮೊಗ್ಗದಲ್ಲೂ ಅಭಿಮಾನಿಗಳು ರಸ್ತೆಗೆ ಪುನೀತ್‌ ಹೆಸರಿಟ್ಟಿದ್ದಾರೆ. ಇದು ಫ್ಯಾನ್ಸ್‌ ಪ್ರೀತಿ ಅಂದರು ರಾಘವೇಂದ್ರ ರಾಜಕುಮಾರ್.‌

Related Posts

error: Content is protected !!