Categories
ಸಿನಿ ಸುದ್ದಿ

ಮತ್ತೆ ಮಂಜುನಾಥನ ಜಪ ಮಾಡಿದ ಗುರುಪ್ರಸಾದ್!‌ ಏಪ್ರಿಲ್‌ನಲ್ಲಿ ಎದ್ದೇಳು ಮಂಜುನಾಥ 2…

‘ಎದ್ದೇಳು ಮಂಜುನಾಥ’ ಅಂದಾಕ್ಷಣ, ನೆನಪಾಗೋದೇ ನವರಸ ನಾಯಕ ಜಗ್ಗೇಶ್ ಮತ್ತು ಗುರುಪ್ರಸಾದ್ ಅವರ ನಿರ್ದೇಶನ. ಈಗ “ಎದ್ದೇಳು ಮಂಜುನಾಥಾ 2” ಎಂಬ ಚಿತ್ರ ಬರುತ್ತಿದ್ದು, ಸದ್ದಿಲ್ಲದೆಯೇ ಚಿತ್ರೀಕರಣ ಮುಗಿದಿದೆ. ಈ ಚಿತ್ರದಲ್ಲಿ ಜಗ್ಗೇಶ್ ಅಭಿನಯಿಸಿಲ್ಲ. ಬದಲಾಗಿ ಗುರು ಪ್ರಸಾದ್ ಅವರೇ ನಿರ್ದೇಶನದೊಂದಿಗೆ ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. ರಚಿತಾ ಮಹಾಲಕ್ಷ್ಮಿ ಈ ಚಿತ್ರದ ನಾಯಕಿ. ಶರತ್ ಲೋಹಿತಾಶ್ವ, ಶಶಿಧರ್, ರವಿ ದೀಕ್ಷಿತ್ ಮುಂತಾದವರು ಈ ಚಿತ್ರದಲ್ಲಿ ಅಭಿನಯಿಸಿದ್ದಾರೆ.

“ಎದ್ದೇಳು ಮಂಜುನಾಥ” ಚಿತ್ರದ ಸಮಯದಲ್ಲೇ ಸಿದ್ದವಾದ ಕಥೆಯಿದು. ಚಿತ್ರ ನಿರ್ಮಾಣವಾಗಲು ಹತ್ತು ವರ್ಷ ಬೇಕಾಯಿತು.
ಇದು ಲಾಕ್ ಡೌನ್ ಸಮಯದಲ್ಲಿ ಚಿತ್ರೀಕರಣವಾದ ಚಿತ್ರ. ನಾವು ಒಂದಿಷ್ಟು ಜನ ಸ್ನೇಹಿತರು ಸೇರಿ ಈ ಚಿತ್ರ ನಿರ್ಮಾಣ ಮಾಡಿದ್ದೇವೆ. ಇದರಲ್ಲಿ ರವಿ ದೀಕ್ಷಿತ್, ಮೈಸೂರು ರಮೇಶ್ ಸೇರಿ ಐವತ್ತಕ್ಕೂ ಅಧಿಕ ಜನ ಶೇರ್ ಹೋಲ್ಡರ್ ಆಗಿ ಕಾರ್ಯ ನಿರ್ವಹಿಸಿದ್ದಾರೆ. ನಿರ್ಮಾಪಕ ಶಶಿಧರ್ ಈ ಚಿತ್ರದಲ್ಲಿ ನಟನೆ ಕೂಡ ಮಾಡಿದ್ದಾರೆ . ಚಿತ್ರೀಕರಣ ಮುಗಿದಿದ್ದು, ಸದ್ಯದಲ್ಲೇ ಟ್ರೇಲರ್ ಬಿಡುಗಡೆ ಮಾಡಲಿದ್ದೇವೆ. ಕಾಮಿಡಿ ಕ್ರೈಂ ಆಧಾರಿತ ಚಿತ್ರವಿದು. ಕ್ರೈಂ ಎಂದರೆ ಬರೀ ರಕ್ತದೋಕುಳಿ ಅಲ್ಲ. ಬೇರೊಂದು ರೀತಿಯಲ್ಲಿ ಹೇಳಬಹುದು ಎಂಬುದನ್ನು ನಮ್ಮ ಚಿತ್ರದಲ್ಲಿ ತೋರಿಸಿದ್ದೇವೆ.

ಮುಂದೆ ನಾನು ಸಿನಿಮಾ ಮುಹೂರ್ತ ಮಾಡಬಾರದೆಂದು ನಿರ್ಧರಿಸಿದ್ದೇನೆ. ಏಕೆಂದರೆ ಕೆಲವು ನಿರ್ಮಾಪಕರು ಅದ್ದೂರಿ ಮುಹೂರ್ತ ಮಾಡಿ, ನಂತರ ಹಣ ಹೊಂದಿಸುವುದಿಲ್ಲ. ಆದರೆ ಗುರುಪ್ರಸಾದ್ ನಿಂದ ಸಿನಿಮಾ ಲೇಟ್ ಆಯ್ತು ಎನ್ನುತ್ತಾರೆ.
ಇದೆಲ್ಲಾ ನೋಡಿ ನಾನು, ಸ್ನೇಹಿತರ ತಂಡದ ಬಳಿ ನಾವೇ ಹಣ ಹಾಕಿ ಒಂದು ಚಿತ್ರ ಮಾಡೋಣ ಅಂದೆ.

ಅದರ ಮೊದಲ ಪ್ರಯತ್ನವೇ ಈ ಚಿತ್ರ. ಅನೂಪ್ ಸೀಳಿನ್ ಸಂಗೀತ ನಿರ್ದೇಶನವಿರುವ ಈ ಚಿತ್ರಕ್ಕೆ ಮನೋಹರ್ ಜೋಶಿ, ಸಿನಿಟಿಕ್ ಸೂರಿ, ವೇಲ್ ಮುರುಗನ್, ಅಶೋಕ್ ಸೇರಿ ನಾಲ್ಕು ಜನ ಛಾಯಾಗ್ರಾಹಕರು. ಸದ್ಯದಲ್ಲೇ ಟ್ರೇಲರ್ ಬರಲಿದೆ. ಏಪ್ರಿಲ್ ಅಂತ್ಯದಲ್ಲಿ ಓಟಿಟಿ ಅಥವಾ ಥಿಯೇಟರ್ ನಲ್ಲಿ ನಮ್ಮ ಚಿತ್ರ ಬಿಡುಗಡೆಯಾಗಲಿದೆ ಎಂದು ಚಿತ್ರದ ಬಗ್ಗೆ ಸಂಪೂರ್ಣ ವಿವರಣೆ ನೀಡಿದರು ಗುರುಪ್ರಸಾದ್.

ನಾನು ಹತ್ತುವರ್ಷಗಳಿಂದ ಕಿರುತೆರೆಯಲ್ಲಿದ್ದೀನಿ. ತಮಿಳಿನಲ್ಲಿ ಸಾಕಷ್ಟು ಕಾರ್ಯಕ್ರಮ ನಡೆಸಿಕೊಟ್ಟಿದ್ದೀನಿ. ಹಿರಿತೆರೆಯಲ್ಲಿ ಇದು ಮೊದಲ ಚಿತ್ರ. ʼಎದ್ದೇಳು ಮಂಜುನಾಥʼ ನನ್ನ ಇಷ್ಟದ ಚಿತ್ರ. ಎಷ್ಟು ಸಾರಿ ನೋಡಿದ್ದೇನೊ ಲೆಕ್ಕ ಇಲ್ಲ. ಈಗ ಅದೇ ಚಿತ್ರದ ಎರಡನೇ ಭಾಗದಲ್ಲಿ ನಾನೇ ನಾಯಕಿಯಾಗಿರುವುದು ನನ್ನ ಪುಣ್ಯ ಎಂದರು ನಾಯಕಿ ರಚಿತಾ ಮಹಾಲಕ್ಷ್ಮಿ. ಚಿತ್ರಕ್ಕೆ ಹಣ ಹೂಡಿರುವ ರವಿ ದೀಕ್ಷಿತ್ ಸಿನಿಮಾ ಸಾಗಿ ಬಂದ ಬಗ್ಗೆ ಮಾತನಾಡಿದರು. ಶಶಿಧರ್ ಪ್ರಚಾರದ ಬಗ್ಗೆ, ತಮ್ಮ ನಟನೆಯ ಕುರಿತು ಮಾಹಿತಿ ನೀಡಿದರು. ಚಿತ್ರತಂಡದ ಅನೇಕರು ಉಪಸ್ಥಿತರಿದ್ದರು.

Categories
ಸಿನಿ ಸುದ್ದಿ

ನೈನಾ ಎಂಬ ಮಹಿಳಾ ಪ್ರಧಾನ ಸಿನಿಮಾ; ಮಹಿಳಾ ದಿನಕ್ಕೊಂದು ಸ್ಪೆಷಲ್‌ ಚಿತ್ರ

ಕನ್ನಡದಲ್ಲಿ ಈಗಾಗಲೇ ಹಲವು ಮಹಿಳಾ ಪ್ರಧಾನ ಸಿನಿಮಾಗಳು ಬಂದಿವೆ. ಅದರಲ್ಲೂ ಸಾಕಷ್ಟು ಸಂದೇಶ ಸಾರುವ ಚಿತ್ರಗಳೇ ಇವೆ. ಆ ಸಾಲಿಗೆ ಮತ್ತೊಂದು ಹೊಸ ಚಿತ್ರ ಸೇರ್ಪಡೆಯಾಗಿದೆ. ಹೌದು, ಅದರ ಹೆಸರು ನೈನಾ. ಇದೊಂದು ಮಹಿಳಾ ಪ್ರಧಾನ ಸಿನಿಮಾ. ಈ ಚಿತ್ರಕ್ಕೆ ಶ್ರೀಧರ್‌ ಸಿಯ ನಿರ್ದೇಶಕರು. ಇವರಿಗೆ ಇದು ಮೊದಲ ಅನುಭವ. ನಿರ್ದೇಶನದ ಜೊತೆಯಲ್ಲಿ ನಿರ್ಮಾಣದ ಜವಾಬ್ದಾರಿಯೂ ಇವರದೇ. ಅಂದಹಾಗೆ, ಈ ಚಿತ್ರಕ್ಕೆ ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ ಮೂವತ್ತು ಜನ ಹಣ ಹಾಕಿದ್ದಾರೆ. ಅಲ್ಲಿಗೆ ಇದೊಂದು ಕ್ರೌಡ್‌ ಫಂಡಿಂಗ್‌ ಸಿನಿಮಾ ಅಂದುಕೊಳ್ಳಲ್ಲಡ್ಡಿಯಿಲ್ಲ ಬಿಡಿ.

ನಿರ್ದೇಶಕ ಶ್ರೀಧರ್‌ ಸಿಯಾ ಅವರು ಮೂಲತಃ ಎಂಜಿನಿಯರ್.‌ ಅವರಿಗೆ ಸಿನಿಮಾ ಮೇಲೆ ಹೆಚ್ಚು ಒಲವು. ದೊಡ್ಡ ಕನಸು ಕಟ್ಟಿಕೊಂಡು ಗಾಂಧಿನಗರವನ್ನು ಸ್ಪರ್ಶಿಸಿದ್ದಾರೆ. ಚೊಚ್ಚಲ ಪ್ರಯತ್ನ ವಿಭಿನ್ನವಾಗಿರಬೇಕು ಎಂಬ ನಿಟ್ಟಿನಲ್ಲಿ ಅವರು ಒಂದು ಮಧ್ಯಮ ವರ್ಗದ ಹೆಣ್ಣು ಮಗಳ ಮನಸ್ಥಿತಿಯ ಕಥೆ ಇರುವ ಸಿನಿಮಾ ಹಿಂದೆ ಬಂದಿದ್ದಾರೆ. ಇನ್ನು, ಈ ಚಿತ್ರಕ್ಕೆ ಗೌರಿ ನಾಯರ್‌ ನಾಯಕಿ. ಈ ಚಿತ್ರ ಮಾಡುವ ಕನಸು ಕಂಡಿದ್ದ ನಿರ್ದೇಶಕ ಶ್ರೀಧರ್‌ ಅವರು, ಚಡ್ಡಿ ದೋಸ್ತ್‌ ಕಡ್ಡಿ ಅಲ್ಲಾಡಿಸ್ಬುಟ್ಟ ಚಿತ್ರದಲ್ಲಿ ಕೆಲಸ ಮಾಡುವಾಗ, ತಾನು ನಿರ್ದೇಶನ ಮಾಡುವ ಕನಸಿನ ಬಗ್ಗೆ ನಾಯಕಿ ಬಳಿ ಹೇಳಿಕೊಂಡಿದ್ದರಂತೆ. ಆ ಸಿನಿಮಾ ಸೆಟ್ಟೇರಿದರೆ, ಅದಕ್ಕೆ ನೀವೇ ನಾಯಕಿ ಅಂತ ಗೌರಿ ನಾಯರ್‌ಗೆ ಹೇಳಿದ್ದರಂತೆ. ಅದರಂತೆ ಗೌರಿ ನಾಯರ್‌ ಈ ಚಿತ್ರಕ್ಕೆ ನಾಯಕಿಯಾಗಿದ್ದಾರೆ.

ಇನ್ನು, ನಾಯಕಿ ಗೌರಿ ನಾಯರ್‌ ಅವರಿಗೆ ನೈನಾ ಸಿನಿಮಾ ಕಥೆ ಹೇಳಿದಾಗ, ಮೊದ ಮೊದಲು ಬೇಡ ಅಂದಿದ್ದರಂತೆ. ನಿರ್ದೇಶಕರು ಹೊಸಬರು. ಜೊತೆಗೆ ಎಂಜಿನಿಯರ್‌ ಬೇರೆ. ಅವರು ಹೇಗೆ ಸಿನಿಮಾ ಮಾಡುತ್ತಾರೋ ಏನೋ ಎಂದು ತಿರಸ್ಕರಿಸಿದ್ದರಂತೆ. ನಂತರ ನಿರ್ದೇಶಕರು ಕಥೆ ಹೇಳಿದ ರೀತಿ, ಅವರು ಪಾತ್ರವನ್ನು ಕಟ್ಟಿಕೊಟ್ಟ ರೀತಿ ಕೇಳಿದ ಮೇಲೆ ನಂಬಿಕೆ ಬಂದು ನಟಿಸೋಕೆ ಒಪ್ಪಿದರಂತೆ. ಇನ್ನು, ಇಲ್ಲಿ ನಾಯಕನಿದ್ದರೂ, ಇಲ್ಲದಂತಿದ್ದಾರೆ. ಅಂದರೆ, ನಾಯಕನ ಪಾತ್ರ ಬಿಳಿ ಪರದೆ ಮೇಲೆ ಕಾಣಿಸುವುದಿಲ್ಲ. ಆದರೆ, ಅವರ ಧ್ವನಿ ಇಲ್ಲಿ ಕೇಳಿಸುತ್ತೆ. ಆ ಧ್ವನಿಗೆ ಆರ್.ಜೆ.ಸುನೀಲ್‌ ಜೀವ ತುಂಬಿದ್ದಾರೆ.

ಚಿತ್ರಕ್ಕೆ ಪ್ರದೀಪ್‌ ಪಿ.ಬಂಗಾರಪೇಟೆ ಛಾಯಾಗ್ರಹಣ ಮಾಡಿದ್ದಾರೆ. ಸುಮಂತ್‌ ರೈ ಸಂಕಲನವಿದೆ. ಕಲ್ಕಿ ಅಭಿಷೇಕ್‌ ಅವರು ಸಂಗೀತ ನೀಡಿದ್ದಾರೆ. ಉಳಿದಂತೆ ಚಿತ್ರದಲ್ಲಿ ನೇಹಾ ಐತಾಳ್, ಪಲ್ಟಿ ಗೋವಿಂದ, ಖ್ಯಾತಿಯ ಸಾಯಿ ಲಕ್ಷ್ಮಣ್, ಸುಮಂತ್ ರೈ, ಚಿದಂಬರ್ ಇತರ ಕಲಾವಿದರು ನಟಿಸಿದ್ದಾರೆ.
ವಿಶೇಷವೆಂದರೆ, ಈ ಚಿತ್ರ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಆಯ್ಕೆಯಾಗಿ ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ. ಮಾರ್ಚ್‌ 8ರಂದು ಮಹಿಳಾ ದಿನಾಚರಣೆ ಇದೆ. ಅದರ ಅಂಗವಾಗಿ “ನೈನಾ” ಚಿತ್ರ ಕಲಾವಿದರ ಸಂಘದಲ್ಲಿ ಪ್ರದರ್ಶನವಾಗುತ್ತಿದೆ.

Categories
ಸಿನಿ ಸುದ್ದಿ

ಕಬ್ಜ ಪ್ಯಾನ್‌ ಇಂಡಿಯಾ ಸಿನಿಮಾಗೆ ಆರ್‌ ಆರ್‌ ಆರ್‌ ಬೆಡಗಿ ಎಂಟ್ರಿ!

ಎಲ್ಲಾ ಭಾಷೆಗಳಲ್ಲೂ ಕಬ್ಜ ಸಿನಿಮಾ ಸಖತ್‌ ಸೌಂಡು ಮಾಡುತ್ತಿರೋದು ಎಲ್ಲರಿಗೂ ಗೊತ್ತಿರುವ ವಿಷಯ. ಕೆ ಜಿ ಎಫ್‌ ಸಿನಿಮಾ ಬಳಿಕ ಅದ್ದೂರಿಯಾಗಿ ತಯಾರಾಗುತ್ತಿರುವ ಪ್ಯಾನ್‌ ಇಂಡಿಯಾ ಸಿನಿಮಾ ಕಬ್ಜ ಎಂಬ ಮಾತು ಈಗ ಚಿತ್ರರಂಗದಲ್ಲಿ ಕೇಳಿ ಬರುತ್ತಿದೆ. ಆರ್‌.ಚಂದ್ರು ನಿರ್ಮಾಣ ಮತ್ತು ನಿರ್ದೇಶನವಿರುವ ಈ ಸಿನಿಮಾದ ನಾಯಕಿ ಯಾರು ಎಂಬುದರ ಬಗ್ಗೆ ಸಾಕಷ್ಟು ಚರ್ಚೆಯಾಗಿತ್ತು. ಅವರು ಬರ್ತಾರೆ, ಇವರು ಬರ್ತಾರೆ...' ಎಂಬ ಗಾಸಿಪ್‌ ಆಗಾಗ ಹರಿದಾಡುತ್ತಲೇ ಇತ್ತು. ಅದಕ್ಕೀಗ ಚಂದ್ರು ಫುಲ್‌ಸ್ಟಾಪ್‌ ಇಟ್ಟಿದ್ದಾರೆ.ದಕ್ಷಿಣ ಭಾರತದ ಪ್ರಮುಖ ನಾಯಕಿಯರನ್ನೇ ಕರೆತರುತ್ತೇನೆ’ ಎಂದು ಮುಹೂರ್ತದ ಸಂದರ್ಭದಲ್ಲಿ ಹೇಳಿದ್ದರು. ಆರ್‌.ಚಂದ್ರು. ಆ ಮಾತನ್ನೀಗ ಉಳಿಸಿಕೊಂಡಿದ್ದಾರೆ. ಈ ಸಿನಿಮಾದಲ್ಲೀಗ ಮತ್ತಷ್ಟು ಸಂಚಲನ ಮೂಡಿಸಲು ಶ್ರೀಯಾ ಶರಣ್‌ ಆಗಮನವಾಗಿದೆ.

ಕಬ್ಜ ಸಿನಿಮಾದಲ್ಲಿ ಎರಡು ಪ್ರಮುಖ ನಾಯಕಿಯ ಪಾತ್ರವಿದ್ದು, ಆ ಪೈಕಿ ಒಬ್ಬರನ್ನು ರಿವೀಲ್‌ ಮಾಡಿದ್ದಾರೆ ಆರ್‌.ಚಂದ್ರು. ರಾಜಮೌಳಿಯವರ `ಆರ್‌ ಆರ್‌ ಆರ್‌’ ಹಾಗೂ ಅಜಯ್‌ ದೇವಗನ್‌ ಜತೆ ಬಾಲಿವುಡ್‌ನಲ್ಲಿ ನಟಿಸುತ್ತಿರುವ ಶ್ರೀಯಾ ಸದ್ಯ ಬಹು ಬೇಡಿಕೆಯ ನಟಿಯರಲ್ಲೊಬ್ಬರು. ತಮಿಳು, ತೆಲುಗು, ಮಲಯಾಳಂ ಹಾಗೂ ಹಿಂದಿಯಲ್ಲಿ ನಟಿಸಿರುವ ಶ್ರೀಯಾ ಬಹಳ ದಿನಗಳ ಬಳಿಕ ಕನ್ನಡಕ್ಕೆ ಹಿಂತಿರುಗಿರುವ ಅವರು, ಕಬ್ಜ ಸಿನಿಮಾದ ಕಥೆ ಕೇಳಿ ಸಂತೋಷದಿಂದ ಈ ಪ್ರಾಜೆಕ್ಟ್ ಗೆ ಸೈನ್‌ ಮಾಡಿದ್ದಾರೆ. ಅವರ ಫಸ್‌್ಟಲುಕ್‌ ಇದೀಗ ರಿವೀಲ್‌ ಆಗಿದ್ದು, ಉಪ್ಪಿಗೆ ಶ್ರೀಯಾ ತಕ್ಕ ಜೋಡಿ ಎಂಬುದು ಪ್ರೇಕ್ಷಕರ ಅನಿಸಿಕೆ.

ಕೆಜಿಎಫ್‌ ಸಿನಿಮಾದ ಬಳಿಕ ಕಬ್ಜ ಬೇರೆ ಬೇರೆ ಚಿತ್ರರಂಗದಲ್ಲಿ ಸಾಕಷ್ಟು ಕ್ರೇಜ್‌ ಕ್ರಿಯೇಟ್‌ ಆಗಿದೆ. ಮುಂಬೈನಲ್ಲಿ ಬಹುಬೇಡಿಕೆಯಿರುವ ಈ ಚಿತ್ರ ಕನ್ನಡದ ತಂತ್ರಜ್ಞರು ಕಾರ್ಯ ನಿರ್ವಹಿಸಿದ್ದಾರೆ ಎಂಬುದು ಹೆಗ್ಗಳಿಕೆ. ಮತ್ತಷ್ಟು ಕನ್ನಡದ ತಂಡ ಇದೇ ರೀತಿ ಮಿಂಚಲಿ ಎಂಬುದು ಸಿನಿಪಂಡಿತರ ಅನಿಸಿಕೆ.

ಪ್ಯಾನ್‌ ಇಂಡಿಯಾ ಸಿನಿಮಾ ಎಂದಮೇಲೆ ಸಾಕಷ್ಟು ಸಮಯ ತೆಗೆದುಕೊಳ್ಳೋದು ಸಾಮಾನ್ಯ. ಇದೀಗ ಬಿಡುಗಡೆಗೆ ಸಿದ್ಧವಿರುವ ಆರ್‌ ಆರ್‌ ಆರ್‌ ಬರೋಬ್ಬರಿ ನಾಲ್ಕು ವರ್ಷಗಳ ಕಾಲ ತೆಗೆದುಕೊಂಡಿದೆ. ಹಾಗೆಯೇ ಕೆಜಿಎಫ್‌ ಮೂರು ವರ್ಷಗಳ ಸಮಯ ತೆಗೆದುಕೊಂಡಿದೆ. ಕಬ್ಜ ಕೂಡ ಸತತ ಎರಡು ವರ್ಷಗಳಿಂದ ಶೂಟಿಂಗ್‌ ನಡೆಸುತ್ತಿದ್ದು, ಸದ್ಯ ಕೊನೆಯ ಹಂತದ ಚಿತ್ರೀಕರಣದಲ್ಲಿದೆ. ಇತ್ತೀಚೆಗೆ ಹ್ಯಾಟ್ರಿಕ್‌ ಹೀರೋ ಶಿವರಾಜ್‌ಕುಮಾರ್‌ ಸಹ ಸಿನಿಮಾ ಬೇಗ ರಿಲೀಸ್‌ ಮಾಡುವಂತೆ ಒತ್ತಾಯಿಸಿದ್ದರು.

ಇದೇ ಮೊದಲ ಬಾರಿಗೆ ಏಳು ಭಾಷೆಗಳಲ್ಲಿ ತಯಾರಾಗುತ್ತಿರುವ ಸಿನಿಮಾ ‘ಕಬ್ಜ’ ಎಂಬುದು ಒಂದೆಡೆಯಾದರೆ, ಅದ್ದೂರಿ ತಾರಾಬಳಗ ಹಾಗೂ ಬೃಹತ್‌ ಸೆಟ್‌ಗಳಲ್ಲಿ ಈ ಚಿತ್ರವನ್ನು ಚಿತಿ್ರೕಕರಿಸಲಾಗುತ್ತಿದೆ. ರವಿ ಬಸ್ರೂರು ಸಂಗೀತ, ಶಿವಕುಮಾರ್‌ ಕಲಾ ನಿರ್ದೇಶನ ಸೇರಿದಂತೆ ಬಹುತೇಕ ‘ಕೆ ಜಿ ಎಫ್‌’ ತಾಂತ್ರಿಕ ಬಳಗವೇ ಈ ಚಿತ್ರದಲ್ಲೂ ಮುಂದುವರೆದಿದೆ ಎಂಬುದು ‘ಕಬ್ಜ’ ಹೆಚ್ವುಗಾರಿಕೆ.

ಬಹುಕೋಟಿ ವೆಚ್ಚದಲ್ಲಿ ತಯಾರಾಗುತ್ತಿರುವ ‘ಕಬ್ಜ’ ಕೊನೆಯ ಹಂತದ ಚಿತಿ್ರೕಕರಣ ನಡೆಸುತ್ತಿದೆ. ಬೆಂಗಳೂರು ಹಾಗೂ ಹೈದರಾಬಾದ್‌ ಮೊದಲಾದೆಡೆ ಶೂಟಿಂಗ್‌ ನಡೆಯಲಿದ್ದು, ಇದೇ ವರ್ಷ ಅದ್ದೂರಿಯಾಗಿ ಸಿನಿಮಾವನ್ನು ಬಿಡುಗಡೆ ಮಾಡಲು ಅಣಿಯಾಗಿದೆ ಆರ್.ಚಂದ್ರು ಬಳಗ.

Categories
ಸಿನಿ ಸುದ್ದಿ

ತ್ರಿಕೋನ ಎಂಬ ವಿಭಿನ್ನ ಸಿನಿಮಾ; ಮೂರು ಭಾಷೆಯಲ್ಲಿ ಬಿಡುಗಡೆಗೆ ರೆಡಿ…

ಸಾಮಾನ್ಯವಾಗಿ ಒಂದು ಸಿನಿಮಾದ ಸಕ್ಸಸ್‌ ನಂತರ ಮತ್ತೊಂದು ಸಿನಿಮಾ ಮಾಡಲು ಹೊರಟರೆ, ಮೊದಲ ಸಿನಿಮಾಗಿಂತಲೂ ಒಂದು ವಿಭಿನ್ನ ಸಿನಿಮಾ ಕಟ್ಟಿಕೊಡಬೇಕೆಂಬ ಚಾಲೆಂಜ್‌ ಆ ನಿರ್ದೇಶಕ ಮತ್ತು ನಿರ್ಮಾಪಕರಿಗೆ ಇರುತ್ತೆ. ಅಂಥದ್ದೊಂದು ಚಾಲೆಂಜ್‌ನಲ್ಲೇ ಸದ್ದಿಲ್ಲದೆಯೇ ಒಂದು ಸಿನಿಮಾ ಮಾಡಿ ಮುಗಿಸಿದ್ದಾರೆ ಚಂದ್ರಕಾಂತ್…

ಚಂದ್ರಕಾಂತ್‌ ಅಂದಾಕ್ಷಣ ಯಾರಿವರು ಎಂಬ ಸಣ್ಣ ಗೊಂದಲ ಸಹಜ. ಅವರು ಬೇರಾರು ಅಲ್ಲ, ಈ ಹಿಂದೆ ʼ‌143′ ಎಂಬ ಸಿನಿಮಾ ನಿರ್ದೇಶಿಸಿ ಎಲ್ಲರಿಂದಲೂ ಸೈ ಎನಿಸಿಕೊಂಡಿದ್ದ ಪ್ರತಿಭಾವಂತ ನಿರ್ದೇಶಕರಿವರು. ಅವರೀಗ ಸದ್ದಿಲ್ಲದೆಯೇ ʼತ್ರಿಕೋನʼ ಎಂಬ ಮತ್ತೊಂದು ಅರ್ಥಪೂರ್ಣ ಎನಿಸುವ ಹಾಗು ವಿಭಿನ್ನವಾದ ಸಿನಿಮಾ ಮಾಡಿ ಮುಗಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಈ ಹಿಂದೆಯೇ ಈ ಚಿತ್ರ ರಿಲೀಸ್‌ ಆಗಬೇಕಿತ್ತು. ಆದರೆ, ಕೊರೊನಾ ಹೆಮ್ಮಾರಿಯಿಂದ ಲಾಕ್‌ಡೌನ್‌ ಆಗಿದ್ದರಿಂದ ಸಿನಿಮಾ ಬಿಡುಗಡೆ ತಡವಾಯ್ತು. ಈಗ ಸಿನಿಮಾ ರಿಲೀಸ್‌ ಆಗಲು ತಯಾರಾಗುತ್ತಿದೆ.

ಅಂದಹಾಗೆ, ಈ ಚಿತ್ರ ಬಿಡುಗಡೆಗೂ ಮುನ್ನವೇ ಯುಟ್ಯೂಬ್‌ನಲ್ಲಿ ಟೀಸರ್‌ ಬಿಡುಗಡೆ ಮಾಡಿದೆ. ಅದು ಸಾಕಷ್ಟು ಕುತೂಹಲವನ್ನೂ ಕೆರಳಿಸಿದೆ. ಸದ್ಯ ಆ ಕುತೂಹಲ ʼತ್ರಿಕೋನʼ ಸಿನಿಮಾ ನೋಡಲೇಬೇಕೆನಿಸುತ್ತಿದೆ. ಇನ್ನು, ಈ ಚಿತ್ರಕ್ಕೆ ರಾಜಶೇಖರ್‌ ನಿರ್ಮಾಪಕರು. ಸಿನಿಮಾ ಇವರಿಗೆ ಹೊಸದೇನಲ್ಲ. ಈ ಹಿಂದೆ ಕೂಡ ರಾಜಶೇಖರ್‌ ಅವರು ಗಮನಸೆಳೆಯುವಂತಹ ಸದಭಿರುಚಿಯ ಸಿನಿಮಾಗಳನ್ನು ನಿರ್ದೇಶಿಸಿ, ನಿರ್ಮಿಸಿದ್ದರು. ʼಪೆರೋಲ್‌ʼ, ʼಬರ್ಫಿʼ ಮತ್ತು ಅಮೃತವಾಣಿ ಚಿತ್ರಗಳ ಮೂಲಕ ಗಮನಸೆಳೆದಿದ್ದ ರಾಜಶೇಖರ್‌, ʼತ್ರಿಕೋನʼ ಸಿನಿಮಾದ ಕಥೆ ಅವರೇ ಬರೆದಿದ್ದಾರೆ. ಇನ್ನು, ಈ ಚಿತ್ರ ಮೂರು ಭಾಷೆಗಳಲ್ಲಿ ತಯಾರಾಗಿದೆ. ಕಥೆ ಒಂದೇ ಆದರೆ, ಭಾಷೆಗಳ ನೇಟಿವಿಟಿ ಮತ್ತು ನೋಡುಗರ ಅಭಿರುಚಿಗೆ ತಕ್ಕಂತೆಯೇ ಮೂರು ರೀತಿಯ ವಿಭಿನ್ನ ಚಿತ್ರಕಥೆ ಮಾಡಲಾಗಿದೆ.

ಈ ಚಿತ್ರದ ಬಗ್ಗೆ ನಿರ್ದೇಶಕ ಚಂದ್ರಕಾಂತ್‌ ಹೇಳುವುದಿಷ್ಟು. ಮೂರು ವಿಭಿನ್ನ ತಲೆಮಾರು ಮತ್ತು ವಯೋಮಾನದ ಜನರ ಮೂಲಕ ಈ ಕಥೆ ಹೇಳಲಾಗುತ್ತಿದೆ. ಒಂದು ಘಟನೆಯನ್ನು ಈ ಮೂರು ತಲೆಮಾರಿನವರು ಹೇಗೆಲ್ಲಾ ಎದುರಿಸುತ್ತಾರೆ ಮತ್ತು ಒಂದು ಸಮಸ್ಯೆಯನ್ನು ತಾಳ್ಮೆಯಿಂದ ಹಾಗು ಶಕ್ತಿಯಿಂದ ಧೈರ್ಯವಾಗಿ ಎದುರಿಸಿದಾಗ ಏನೆಲ್ಲಾ ಆಗುತ್ತೆ ಎಂಬುದು ಚಿತ್ರದ ಕಥೆ ಎನ್ನುತ್ತಾರೆ ನಿರ್ದೇಶಕರು.

ಚಿತ್ರದಲ್ಲಿ ಸುರೇಶ್‌ ಹೆಬ್ಳಿಕರ್‌, ಲಕ್ಷ್ಮಿ, ಅಚ್ಯುತಕುಮಾರ್‌, ಸುಧಾರಾಣಿ, ರಾಜವೀರ್‌, ಮಾರುತೇಶ್‌ ಸೇರಿದಂತೆ ಇತರೆ ಪ್ರತಿಭಾವಂತ ನಟರು ನಟಿಸಿದ್ದಾರೆ. ಸಾಧುಕೋಕಿಲ ಕೂಡ ಇಲ್ಲೊಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಸುರೇಂದ್ರನಾತ್‌ ಸಂಗೀತ ನೀಡಿದ್ದಾರೆ. ಶ್ರೀನಿವಾಸ್‌ ವಿನ್ನಕೋಟ ಅವರು ಕ್ಯಾಮೆರಾ ಹಿಡಿದಿದ್ದಾರೆ. ಸದ್ಯ ಮೂರು ಭಾಷೆಗಳಲ್ಲಿ ಚಿತ್ರ ರೆಡಿಯಾಗಿದ್ದು, ಬಿಡುಗಡೆಗೆ ತಯಾರಾಗುತ್ತಿದೆ.

Categories
ಸಿನಿ ಸುದ್ದಿ

ರಾಜವರ್ಧನ್ ಜೊತೆ ಬಿಗ್ ಬಾಸ್ ಚೆಲುವೆ! ಹಿರಣ್ಯ ಸಿನಿಮಾಗೆ ದಿವ್ಯಾ ಸುರೇಶ್ ಸ್ಪೆಷಲ್ ರೋಲ್…

ರೌಡಿ ಬೇಬಿ ಸಿನಿಮಾ ಮೂಲಕ ಸ್ಯಾಂಡಲ್ ವುಡ್ ಗೆ ಪಾದಾರ್ಪಣೆ ಮಾಡಿದ್ದ ಬಿಗ್ ಬಾಸ್ ಬ್ಯೂಟಿ ದಿವ್ಯಾ ಸುರೇಶ್ ಈಗ ಮತ್ತೊಂದು ಸಿನಿಮಾಗೆ ಗ್ರೀನ್ ಸಿಗ್ನಲ್ ಕೊಟ್ಟಿದ್ದಾರೆ. ಖ್ಯಾತ ಹಾಸ್ಯ ನಟ ಡಿಂಗ್ರಿ ನಾಗರಾಜ್ ಪುತ್ರ ರಾಜವರ್ಧನ್ ನಟಿಸುತ್ತಿರುವ ಬಹುನಿರೀಕ್ಷಿತ ಹಿರಣ್ಯ ಸಿನಿಮಾದಲ್ಲಿ ದಿವ್ಯಾ ಸುರೇಶ್ ಬಣ್ಣ ಹಚ್ಚಲಿದ್ದಾರೆ.

ವಿಶೇಷ ಪಾತ್ರದಲ್ಲಿ ದಿವ್ಯಾ ಸುರೇಶ್

ಪ್ರವೀಣ್ ಅವ್ಯಕ್ತ್ ನಿರ್ದೇಶನದಲ್ಲಿ ಮೂಡಿ ಬರುತ್ತಿರುವ ಹಿರಣ್ಯ ಸಿನಿಮಾದಲ್ಲಿ ದಿವ್ಯಾ ಸುರೇಶ್ ವಿಶೇಷ ಪಾತ್ರದಲ್ಲಿ ನಟಿಸಲಿದ್ದಾರೆ. ರಾಜವರ್ಧನ್ ಹಾಗೂ ದಿವ್ಯಾ ಸುರೇಶ್ ಇಬ್ಬರು ಆತ್ಮೀಯ ಸ್ನೇಹಿತರು. ಇಬ್ಬರು ಒಟ್ಟಿಗೆ ನಟಿಸುವ ಅವಕಾಶ ಹಿರಣ್ಯ ಸಿನಿಮಾ ಮೂಲಕ ನನಸಾಗುತ್ತಿದೆ ಅನ್ನೋದು ಬಿಗ್ ಬಾಸ್ ಬ್ಯೂಟಿ ದಿವ್ಯಾ ಮಾತು. ಇದೇ 9 ರಿಂದ ದಿವ್ಯಾ ಸುರೇಶ್ ಭಾಗದ ಶೂಟಿಂಗ್ ಶುರುವಾಗಲಿದೆ.

ಹಿರಣ್ಯ ಸಿನಿಮಾದಲ್ಲಿ ರಾಜವರ್ಧನ್ ಗೆ ನಾಯಕಿಯಾಗಿ ಮಾಡೆಲ್ ರಿಹಾನಾ ಕನ್ನಡಕ್ಕೆ ಪಾದಾರ್ಪಣೆ ಮಾಡುತ್ತಿದ್ದು, ವೇದಾಸ್ ಇನ್ಫಿನೈಟ್ ಪಿಕ್ಚರ್ಸ್ ಬ್ಯಾನರ್ ಅಡಿಯಲ್ಲಿ ನಿರ್ಮಾಪಕರಾದ ವಿಘ್ನೇಶ್ವರ ಯು ಮತ್ತು ವಿಜಯ್ ಕುಮಾರ್ ಬಿವಿ ಹಿರಣ್ಯ ಸಿನಿಮಾ ನಿರ್ಮಾಣ ಮಾಡುತ್ತಿದ್ದಾರೆ.

ಚಿತ್ರಕ್ಕೆ ಯೋಗೇಶ್ವರನ್‌ ಆರ್‌ ಛಾಯಾಗ್ರಹಣವಿದೆ. ಚಿತ್ರದ ಹಾಡುಗಳಿಗೆ ಜ್ಯೂಡಾ ಸ್ಯಾಂಡಿ ಸಂಗೀತ ಸಂಯೋಜನೆಯಿದೆ.

Categories
ಸಿನಿ ಸುದ್ದಿ

ಸದಭಿರುಚಿಯ ಸಿನಿಮಾಗಳ ವಿತರಣೆಗೆ ಸಜ್ಜಾದ ಬೆಂಗಳೂರು ಕುಮಾರ್‌ ಫಿಲಂಸ್‌; ಕಂಟೆಂಟ್‌ ಸಿನಿಮಾಗಳಿಗೂ ಸಾಥ್‌ ಕೊಡಲು ರೆಡಿ

ಕನ್ನಡ ಚಿತ್ರರಂಗ ಈಗ ಎಂದಿಗಿಂತಲೂ ಶೈನ್ ಆಗಿದೆ. ಅದರಲ್ಲೂ ಬಹುಕೋಟಿ ವೆಚ್ಚದ ಚಿತ್ರಗಳು ರಿಲೀಸ್ ಅಗೋಕೆ ಸಾಲಾಗಿ ನಿಂತಿವೆ. ಅದಕ್ಕೆ ತಕ್ಕಂತಹ ವಿತರಣಾ ಸಂಸ್ಥೆಗಳು ಕೂಡ ಕನ್ನಡ ಚಿತ್ರರಂಗದ ಬೆಳವಣಿಗೆಗೆ ಸಾಥ್ ನೀಡುತ್ತಿವೆ. ಆ ಸಾಲಿಗೆ ಈಗ ಕನ್ನಡದ ಸದಭಿರುಚಿಯ ಚಿತ್ರಗಳನ್ನು ಬಿಡುಗಡೆ ಮಾಡುವ ಮೂಲಕ ಪ್ರೇಕ್ಷಕರಲ್ಲಿ ಹೊಸ ಉತ್ಸಾಹ ತುಂಬುವ ನಿಟ್ಟಿನಲ್ಲಿ ಹೀಗೊಂದು ವಿತರಣೆ ಸಂಸ್ಥೆ ಸಜ್ಜಾಗಿದೆ. ಹೌದು, ಬೆಂಗಳೂರು ಕುಮಾರ್ ಫಿಲಂಸ್ ಎಂಬ ವಿತರಣೆ ಸಂಸ್ಥೆ ಚಿತ್ರರಂಗಕ್ಕೇನು ಹೊಸದಲ್ಲ. ಈಗಾಗಲೇ ಹಲವಾರು ಚಿತ್ರಗಳಿಗೆ ಮತ್ತು ಪ್ರೇಕ್ಷಕರಿಗೆ ಸೇತುವೆಯಾಗಿದೆ

ಅಂದಹಾಗೆ, ಬೆಂಗಳೂರು ಕುಮಾರ್ ಫಿಲಂಸ್ ಕಳೆದ ಹಲವಾರು ವರ್ಷಗಳಿಂದಲೂ ಕನ್ನಡದ ಸುಮಾರು ಇಪ್ಪತ್ತಕ್ಕೂ ಹೆಚ್ಚು ಸಿನಿಮಾಗಳನ್ನು ವಿತರಣೆ ಮಾಡಿದೆ. ಆದರೆ, ಅವೆಲ್ಲವೂ ಹೇಳಿಕೊಳ್ಳುವಂತಹ ಬಿಜಿನೆಸ್ ಆಗಿರಲಿಲ್ಲ. ಈಗ ಕನ್ನಡದ ಹೊಸ ಬಗೆಯ ಸಿನಿಮಾಗಳೂ ಸೇರಿದಂತೆ, ದೊಡ್ಡ ಬಜೆಟ್ ನ ಸ್ಟಾರ್ ವ್ಯಾಲ್ಯು ಇರುವಂತಹ ಸಿನಿಮಾಗಲು ಹಾಗು ಸದಭಿರುಚಿಯ ಮತ್ತು ಉತ್ತಮ ಸಂದೇಶ ಸಾರುವ ಚಿತ್ರಗಳನ್ನು ವಿತರಣೆ ಮಾಡಲು ಮುಂದಾಗಿದೆ.

ಬೆಂಗಳೂರು ಕುಮಾರ್ ಫಿಲಂಸ್ ಹೆಸರಿನ ವಿತರಣೆ ಸಂಸ್ಥೆ ಮೂಲಕ ಕನ್ನಡದ ಸಿನಿಮಾಗಳನ್ನು ವಿತರಿಸಲು ಉತ್ಸಾಹಗೊಂಡಿದೆ. ಈಗಾಗಲೇ ಕನ್ನಡದಲ್ಲಿ ಹಲವು ವಿತರಣೆ ಸಂಸ್ಥೆಗಳು ಕಾರ್ಯನಿರ್ವಹಿಸುತ್ತಿವೆ. ಕ್ವಾಲಿಟಿ ಹಾಗು ಕಂಟೆಂಟ್ ಸಿನಿಮಾಗಳನ್ನು ವಿತರಿಸಲು ಸಂಸ್ಥೆ ಈಗಾಗಲೇ ತಯಾರಿ ನಡೆಸಿದೆ.

ಹೊಸ ಪ್ರಯತ್ನಕ್ಕೆ ಈಗಾಗಲೇ ಬೆಂಬಲ ಸಿಕ್ಕಿದ್ದು, ಯಾವುದೇ ಚಿತ್ರಮಂದಿರಗಳ ಬಾಡಿಗೆ ಇಲ್ಲದೆ, ಪರ್ಸಂಟೇಜ್ ಮೂಲಕ ಎಲ್ಲಾ ಚಿತ್ರಮಂದಿರಗಳಲ್ಲಿ ರಿಲೀಸ್ ಮಾಡಿಕೊಡಲಿದ್ದಾರೆ. ಇನ್ನು, ಒಳ್ಳೆಯ ಕಂಟೆಂಟ್ ಇರುವ ಸಿನಿಮಾಗಳಿಗೆ ನಮ್ನ ಕಡೆಯಿಂದ ಫೈನಾನ್ಸಿಯಲ್ ಸಪೋರ್ಟ್ ಮಾಡಿ ರಿಲೀಸ್ ಮಾಡಿಕೊಡುತ್ತೇವೆ ಎಂಬುದು ಬೆಂಗಳೂರು‌ ಕುಮಾರ್ ಫಿಲಂಸ್‌ ಮಾತು.

ಈಗ ವಿತರಣೆ ಮಾಡಲು ರೆಡಿಯಾಗಿದ್ದು, ಉಪೇಂದ್ರ ಅಭಿನಯದ ಹೋಮ್ ಮಿನಿಸ್ಟರ್ ಚಿತ್ರವನ್ನು ರಾಜ್ಯಾದ್ಯಂತ ರಿಲೀಸ್ ಮಾಡಲಾಗುತ್ತಿದೆ. ಕೆಲವು ಸಿನಿಮಾಗಲ ಜೊತೆ ಮಾತುಕತೆ ನಡೆಯುತ್ತಿದೆ. ಇದರ ಜೊತೆಗೆ ಸಂಸ್ಥೆ ನಿರ್ಮಾಣ ಕೂಡ ಮಾಡುತ್ತಿದೆ. ಈಗಾಗಲೇ ಪ್ರಜ್ವಲ್ ದೇವರಾಜ್ ಅವರ “ಮಾಫಿಯಾ” ಕೂಡ ತಯಾರಾಗುತ್ತಿದೆ. ಮುಂದಿನ ದಿನಗಳಲ್ಲಿ ಒಳ್ಳೆಯ ಸಿನಿಮಾಗಳನ್ನು ವಿತರಣೆ ಮಾಡುವುದರ ಜೊತೆಗೆ ನಿರ್ಮಾಪಕರ ಸಮಸ್ಯೆಗೆ ಸ್ಪಂದಿಸುವುದಾಗಿ ಹೇಳುತ್ತಾರೆ ಸಂಸ್ಥೆಯ ಕುಮಾರ್.

Categories
ಸಿನಿ ಸುದ್ದಿ

ಡಿಯರ್‌ ಸತ್ಯನಿಗೆ ಶ್ರೀಮುರಳಿ ಸಾಥ್‌; ಆರ್ಯನ್‌ ಸಂತೋಷ್‌ ನಟನೆಯ ಚಿತ್ರ ಮಾರ್ಚ್‌ 10ಕ್ಕೆ ರಿಲೀಸ್

ಪರ್ಪಲ್ ರಾಕ್ ಎಂಟರ್ ಟೈನರ್ ಹಾಗೂ ವಿಂಟರ್ ಬ್ರಿಡ್ಜ್ ಸ್ಟುಡಿಯೋಸ್ ಬ್ಯಾನ‌ರ್‌ನಲ್ಲಿ ಗಣೇಶ್ ಪಾಪಣ್ಣ, ಯತೀಶ್ ವೆಂಕಟೇಶ್, ಶ್ರೀನಿವಾಸ್ ಶ್ರೀಭಕ್ತ ಹಾಗೂ ಅಜಯ್ ಅಪರೂಪ ನಿರ್ಮಿಸಿರುವ “ಡಿಯರ್ ಸತ್ಯ” ಚಿತ್ರದ ಟ್ರೇಲರ್ ಅಮ್ಮಿ ನಟ ಶ್ರೀಮುರಳಿ ಅವರು ಬಿಡುಗಡೆ ಮಾಡಿ ಶುಭ ಕೋರಿದರು.

“ಸಂತೋಷ್ ನನಗೆ ತುಂಬಾ ವರ್ಷಗಳ ಸ್ನೇಹಿತ. ಈಗ ಆರ್ಯನ್ ಸಂತೋಷ್ ಆಗಿದ್ದಾರೆ. ನಿರ್ಮಾಪಕ ಯತೀಶ್, ಗಣೇಶ್ ಪಾಪಣ್ಣ ಕೂಡ ನನಗೆ ಬಹಳ ದಿನಗಳ ಪರಿಚಯ. ಟ್ರೇಲರ್ ತುಂಬಾ ಚೆನ್ನಾಗಿ ‌ಮೂಡಿಬಂದಿದೆ. ಈ ಚಿತ್ರದಲ್ಲಿ ಉಪ್ಪಿ ಸರ್ ಹಾಡಿರುವ ಹಾಡು ನನಗಿಷ್ಟ. ಎಲ್ಲಕ್ಕಿಂತ ನನ್ನ ಸ್ನೇಹಿತ ಸಂತೋಷ್ ಗೆ ಈ ಚಿತ್ರ
ಯಶಸ್ಸು ತಂದು ಕೊಡಲಿ ಎಂದು ಹಾರೈಸಿದರು ಶ್ರೀಮುರಳಿ.

ಚಿತ್ರ ಆರಂಭವಾದ ಬಗ್ಗೆ ಹಾಗೂ ಸಾಗಿ ಬಂದ ದಾರಿ ಕುರಿತು ನಿರ್ಮಾಪಕರಾದ ಯತೀಶ್ ವೆಂಕಟೇಶ್, ಗಣೇಶ್ ಪಾಪಣ್ಣ, ಶ್ರೀನಿವಾಸ್ ಶ್ರೀಭಕ್ತ ವಿವರಿಸಿದರು.

ಈ ಚಿತ್ರವನ್ನು ಮೊದಲು ತಮಿಳಿನಲ್ಲಿ ಮಾಡಬೇಕೆಂದುಕೊಂಡಿದ್ದೆ. ಚೆನ್ನೈ ನ ಹೈಕೋರ್ಟ್ ಎದುರು ಪ್ಯಾರಿಸ್ ಕಾರ್ನರ್ ಎಂಬ ಸ್ಥಳವಿದೆ. ಆ ಜಾಗವೇ ನನಗೆ ಕಥೆ ರಚಿಸಲು ಸ್ಪೂರ್ತಿ. ಇದೊಂದು ನೈಜ ಘಟನೆ ಆಧಾರಿತ ಚಿತ್ರ. ಕಥೆ ಸಿದ್ದ ಮಾಡಿಕೊಂಡ ಮೇಲೆ ನಿರ್ಮಾಪಕರ ಹುಡುಕಾಟದಲ್ಲಿ ಸಾಕಷ್ಟು ವರ್ಷ ಕಳೆದಿದ್ದೇನೆ.‌ ನಂತರ ಗಣೇಶ್ ಪಾಪಣ್ಣ ಅವರು ಫೋನ್ ಮಾಡಿ ಕಥೆ ಕೇಳಿದರು.‌ ಗಣೇಶ್,
ಯತೀಶ್, ಶ್ರೀನಿವಾಸ್ ಶ್ರೀಭಕ್ತ ಹಾಗೂ ಅಜಯ್ ಸಹ ಪರ್ಪಲ್ ರಾಕ್ ಸಂಸ್ಥೆ ಮೂಲಕ ಈ ಚಿತ್ರ ನಿರ್ಮಾಣಕ್ಕೆ ಮುಂದಾದರು. ಚಿತ್ರೀಕರಣ ಮುಗಿದ ತಕ್ಷಣ ಕೋವಿಡ್ ಶುರುವಾಯಿತು.

ಎಲ್ಲಾ ಮುಗಿದು , ಈಗ ನಮ್ಮ ಚಿತ್ರ ಮಾರ್ಚ್ ಹತ್ತರಂದು ತೆರೆಗೆ ಬರುತ್ತಿದೆ. ಟ್ರೇಲರ್ ಬಿಡುಗಡೆ ಮಾಡಿಕೊಟ್ಟ ಗೆಳೆಯ ಶ್ರೀಮುರಳಿ ಹಾಗೂ ನನ್ನ ಗೆಳೆತನ ದಶಕಕ್ಕೂ ಮೀರಿದ್ದು. ನಿರ್ಮಾಪಕರಿಗೆ ಹಾಗೂ ಚಿತ್ರತಂಡಕ್ಕೆ ನಾನು ಆಬಾರಿ ಎಂದರು ನಾಯಕ ಆರ್ಯನ್ ಸಂತೋಷ್. ಚಿತ್ರದ ನಿರ್ದೇಶಕ ಶಿವಗಣೇಶ್ ಚಿತ್ರ ಹಾಗೂ ಚಿತ್ರತಂಡದ ಬಗ್ಗೆ ಮೆಚ್ಚುಗೆಯ ಮಾತುಗಳಾಡಿದರು.

ಚಿತ್ರದ ನಾಯಕಿ ಅರ್ಚನಾ ಕೊಟ್ಟಿಗೆ ಸೇರಿದಂತೆ ಚಿತ್ರದಲ್ಲಿ ನಟಿಸಿರುವ ಅನೇಕ ಕಲಾವಿದರು. ಸಂಗೀತ ನಿರ್ದೇಶಕ ಶ್ರೀಧರ್ ವಿ ಸಂಭ್ರಮ್, ಛಾಯಾಗ್ರಾಹಕ ವಿನೋದ್ ಭಾರತಿ ಸೇರಿದಂತೆ ಅನೇಕ ತಂತ್ರಜ್ಞರು “ಡಿಯರ್ ಸತ್ಯ” ನ ಬಗ್ಗೆ ತಮ್ಮ ಅನುಭವ ಹಂಚಿಕೊಂಡರು.

Categories
ಸಿನಿ ಸುದ್ದಿ

ಮರೆಯಾದ ಸಂಗೀತ ಲೋಕದ ಮಾಣಿಕ್ಯ ! ಸಂಗೀತ ಮ್ಯೂಸಿಕ್ ಸಂಸ್ಥೆಯ ಸಂಸ್ಥಾಪಕ ಮಹೇಶ್ ಇನ್ನು ನೆನಪು ಮಾತ್ರ; ಸಂಗೀತ ದಿಗ್ಗಜನ ಸಾಹಸ ಮೆಲುಕು ಹಾಕಿದ ಲಹರಿ ಸಂಸ್ಥೆ

ಸಂಗೀತ ಮ್ಯೂಸಿಕ್ ಕಂಪನಿಯ ಸಂಸ್ಥಾಪಕ ರಾದ ಎಚ್. ಎಂ ಮಹೇಶ್ ಅವರು ಶುಕ್ರವಾರ ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮೃತಪಟ್ಟಿದ್ದಾರೆ. 72 ವಯಸ್ಸಿನ ಮಹೇಶ್ ಅವರು ಇಬ್ಬರು ಹೆಣ್ಣು ಮಕ್ಕಳನ್ನು ಹಾಗು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮೃತ ಮಹೇಶ್ ಅವರು ಸಂಗೀತ ಲೋಕಕ್ಕೆ ಹಾಗು ಕನ್ನಡ ಚಿತ್ರರಂಗಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಮೃತರ ಅಗಲಿಕೆಗೆ ಲಹರಿ ಮ್ಯೂಸಿಕ್ ಸಂಸ್ಥೆಯ ಲಹರಿ ವೇಲು ತೀವ್ರ ಸಂತಾಪ ಸೂಚಿಸಿದ್ದಾರೆ.

ಚೆನ್ನೈ ನ ಮಾಸ್ಟರ್ ರೆಕಾರ್ಡಿಂಗ್ ಕಂಪನಿಯ ಸಂಗೀತ ಮ್ಯೂಸಿಕ್ ಸಂಸ್ಥೆ ಸಾಕಷ್ಟು ಹೆಸರು ಮಾಡಿದೆ. ಸಂಸ್ಥಾಪಕ ಮಹೇಶ್ ಅವರ ಕುರಿತು ಸಿನಿಲಹರಿ ಜೊತೆ ಮಾತಾಡಿದ ಲಹರಿ ವೇಲು ಗುಣಗಾನ ಮಾಡಿದ್ದಾರೆ.
‘ ಸಂಗೀತ ಕ್ಷೇತ್ರಕ್ಕೆ ಮಹೇಶ್ ಅವರ ಕೊಡುಗೆ ತುಂಬಾ ದೊಡ್ಡದು. ಎಚ್.ಎಂ.ಮಹೇಶ್ ಅಂದರೆ ಸಂಗೀತ ಮ್ಯೂಸಿಕ್ ಸಂಸ್ಥೆ ನೆನಪಾಗುತ್ತೆ. ಕನ್ನಡ ಚಿತ್ರರಂಗ ಮತ್ತು ಸಂಗೀತ ಕ್ಷೇತ್ರಕ್ಕೆ ತನ್ನದೇ ಕೊಡುಗೆ ನೀಡಿದ್ದಾರೆ.
ಅವರು 1970ರಲ್ಲಿ ಕಾಸರಗೋಡಿನಿಂದ ಆಗ ಇದ್ದ ಮಡ್ರಾಸ್ ಗೆ ಹೋಗಿ ಸರಸ್ವತಿ ಸ್ಟೋರ್ಸ್ ನಲ್ಲಿ ಕೆಲಸ ಮಾಡುತ್ತಾರೆ. ಆಗ ಕನ್ನಡ ವಿಭಾಗದಲ್ಲಿ ಕಂಪೆನಿಯೊಂದರ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದರು. ಆಗ ಕನ್ನಡದ ಒಡನಾಟ ಹೆಚ್ಚಾಗುತ್ತೆ. ಆಗ ಕನ್ನಡಕ್ಕೆ ನಾವೇ ಯಾಕೆ ಮ್ಯೂಸಿಕ್ ಸಂಸ್ಥೆ ಶುರು ಮಾಡಬಾರದು ಅಂದುಕೊಂಡು ಚೆನ್ನೈ ನಲ್ಕಿ ಮಾಸ್ಟರ್ ರೆಕಾರ್ಡಿಂಗ್ ಕಂಪೆನಿ ಮೂಲಕ ಸಂಗೀತ ಕ್ಯಾಸೆಟ್ ಶುರು ಮಾಡುತ್ತಾರೆ. ಶುರುವಾದ ಬಳಿಕ ಅಣ್ಣಾವ್ರು ಡಾ.ರಾಜಕುಮಾರ ಅವರ ಮೊದಲ ಧ್ವನಿಸುರುಳಿ ಭಕ್ತಿಗೀತೆ ಹೊರತಂದ ಹೆಗ್ಗಳಿಕೆ ಇವರದಾಗುತ್ತೆ. ಇದರೊಂದಿಗೆ ಸಂತ ಶಿಶುನಾಳ ಶರೀಫ ಅವರ ಹಾಡುಗಳನ್ನೂ ಬೆಳಕಿಗೆ ತಂದಿದ್ದು ಇದೇ ಸಂಸ್ಥೆ. ದಾಸ ಸಾಹಿತ್ಯ, ವಚನ ಸಾಹಿತ್ಯ, ಯಕ್ಷಗಾನ, ಜಾನಪದ ಶಾಸ್ತ್ರೀಯ ಸಂಗೀತ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ ಹೀಗೆ ಹಲವು ಪ್ರಾಕಾರಗಳ ಹಾಡುಗಳು ಈ ಮ್ಯೂಸಿಕ್ ಸಂಸ್ಥೆ ಮೂಲಕ ಹೊರಬಂದವು.

ಕನ್ನಡದ ಅನೇಕ ಸಿನಿಮಾ ಹಾಡುಗಳು ಹೊರಬಂದವು. ಅಣ್ಣಾವ್ರ ಹಾಲುಜೇನು, ಹೊಸ ಬೆಳಕು, ಸಮಯದ ಗೊಂಬೆ, ಭಕ್ತ ಪ್ರಹ್ಲಾದ, ಚಲಿಸುವ ಮೋಡಗಳು, ಕವಿರತ್ನ ಕಾಳಿದಾಸ ಹೀಗೆ ಅಣ್ಣಾವ್ರ ಬಹುತೇಕ ಸಿನಿಮಾ ಹಾಡುಗಳನ್ನು ಈ ಸಂಸ್ಥೆ ಬಿಡುಗಡೆ ಮಾಡಿತು. ಪುಟ್ಟಣ್ಣ ಕಣಗಾಲ್ ಅವರ ಮಾನಸ ಸರೋವರ, ಧರಣಿ ಮಂಡಲ ಮಧ್ಯದೊಳಗೆ, ಮಸಣದ ಹೂವು, ಬೆಂಕಿಯ ಬಲೆ, ಮುದುಡಿದ ತಾವರೆ ಅರಳಿತು ಹೀಗೆ ನೂರಾರು ಕನ್ನಡದ ಸದಭಿರುಚಿಯ ಸಿನಿಮಾ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ.

ಮಹೇಶ್ ಅವರು ಕನ್ನಡ ಚಿತ್ರರಂಗಕ್ಕೆ ಸಾವಿರಾರು ಹಿಟ್ ಹಾಡುಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಇವರ ಸೇವೆ ಗುರುತಿಸಿ ರಾಜ್ಯ ಸರ್ಕಾರ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ.

ಮೂಲತಃ ಕಾಸರಗೋಡಿಂದ ಹೋಗಿ ಅಲ್ಲಿ ಕೆಲಸ ಮಾಡಿ ಬೆಂಗಳೂರಿನ ಎಚ್ ಎಸ್‌ ಆರ್ ಲೇ ಔಟ್ ನಲ್ಲಿ ವಾಸಿಸುತ್ತಿದ್ದರು. ಶುಕ್ರವಾರ ನಿಧನರಾಗಿದ್ದಾರೆ. ನಮ್ಮ ಸಹೋದರರಾದ ಮನೋಹರ ನಾಯ್ಡು ಅವರೊಂದಿಗೆ ಸುಮಾರು ನಾಲ್ಕು ದಶಕಗಳ ಕಾಲ ಒಡನಾಟ ಇಟ್ಟುಕೊಂಡಿದ್ದರು.

ಒಂದು ರೀತಿ ಅವರು ಸಹೋದರರಂತಿದ್ದರು. ಹದಿನೈದು ದಿನಗಳ ಹಿಂದೆ ಅಣ್ಣ ಫೋನ್ ಮಾಡಿದಾಗ ಪಿಕ್ ಮಾಡಲಿಲ್ಲ. ನಿತ್ಯ ಕಾಲ್ ಮಾಡುತ್ತಿದ್ದವರು ಯಾಕೆ ಪಿಕ್ ಮಾಡ್ತಾ ಇಲ್ಲ ಅಂತ ನಾನು ಮಾಡಿದೆ. ಅವರಿಗೆ ಅನಾರೋಗ್ಯ ಬಗ್ಗೆ ಗೊತ್ತಾಯಿತು. ಈಗ ಅಗಲಿದ್ದಾರೆ. ಕನ್ನಡ ಚಿತ್ರರಂಗದ ಸಂಗೀತ ಲೋಕದ ದಂತಕತೆ ಅವರು. ಲಹರಿ ಸಂಸ್ಥೆ ಜೊತೆ ಅವಿನಾಭಾವ ಹೊಂದಿದವರು ಎಂದು ಲಹರಿ ವೇಲು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

Categories
ಸಿನಿ ಸುದ್ದಿ

ಜನಾರ್ದನ ರೆಡ್ಡಿ ಪುತ್ರನ ಅದ್ಧೂರಿ ಚಿತ್ರರಂಗ ಎಂಟ್ರಿ; ಕಿರೀಟಿ ಸಿನಿಮಾ ಮುಹೂರ್ತಕ್ಕೆ ತಾರಾಮೆರಗು…

ಮಾಜಿ ಸಚಿವ ಜನಾರ್ದನ ರೆಡ್ಡಿ ಸುಪುತ್ರ ಕಿರೀಟಿ ಅದ್ಧೂರಿಯಾಗಿ ಗಾಂಧಿನಗರದ ಅಂಗಳಕ್ಕೆ ಜಿಗಿದಿದ್ದಾರೆ. ಬಾಹುಬಲಿ ಸೂತ್ರಧಾರ ಎಸ್.ಎಸ್ ರಾಜಮೌಳಿಯ ಅಭಯ ಹಸ್ತದಿಂದ ಕಿರೀಟಿ ಚೊಚ್ಚಲ ಚಿತ್ರಕ್ಕೆ ಆರಂಭ ಸಿಕ್ಕಿದೆ. ರವಿಚಂದ್ರನ್, ಜೆನಿಲಿಯಾ ರಿತೇಶ್ ದೇಶ್ ಮುಖ್, ಶ್ರೀಲೀಲಾ ಸೇರಿದಂತೆ ದೊಡ್ಡ ತಾರಾಬಳಗವೇ ನಟಿಸಲಿರುವ ಈ ಸಿನಿಮಾದ ಮುಹೂರ್ತ ಶುಕ್ರವಾರ ಅದ್ಧೂರಿಯಾಗಿ ನೆರವೇರಿದೆ.

ಕಿರೀಟಿ ಸ್ಟಂಟ್, ಡ್ಯಾನ್ಸ್ ಮೆಚ್ಚಿದ ಮೌಳಿ..!


ಕಿರೀಟಿ ಚೊಚ್ಚನ ಸಿನಿಮಾಗೆ ಕ್ಲ್ಯಾಪ್ ಮಾಡಿ ಇಡೀ ಚಿತ್ರತಂಡಕ್ಕೆ ಶುಭ ಹಾರೈಸಿದ ರಾಜಮೌಳಿ ಹೀರೋ ಇಂಟ್ರೂಡಕ್ಷನ್ ಟೀಸರ್ ನೋಡಿ ಕಿರೀಟಿ ಬೆನ್ನು ತಟ್ಟಿದರು. “ನನಗೆ ಪ್ರಾಮಿಸಿಂಗ್ ಆಗಿರುವ ಯುವ ಪ್ರತಿಭೆಯನ್ನು ಲಾಂಚ್ ಮಾಡುತ್ತಿರುವುದಕ್ಕೆ ಖುಷಿಯಾಗುತ್ತಿದೆ. ಇವರು ನಟನೆ ಮಾಡಬಹುದು, ಡ್ಯಾನ್ಸ್ ಮಾಡಬಹುದು, ಇವರು ಸ್ಟಂಟ್ಸ್ ಅನ್ನೂ ಮಾಡಬಹುದು. ಇದೇ ಸಂದರ್ಭದಲ್ಲಿ ಯುವ ಪ್ರತಿಭೆಗೆ ಒಳ್ಳೆ ಲಾಂಚ್ ಕೂಡಬೇಕು. ಈ ಪ್ರತಿಭೆ ಈಗ ಅದ್ಭುತ ಕೈಗಳ ಜೊತೆ ಸೇರಿಕೊಂಡಿದೆ. ಅದಕ್ಕೆ ಖುಷಿಯಾಗುತ್ತಿದೆ. ಎಂದು ರಾಜಮೌಳಿ ಹೇಳಿದ್ದಾರೆ.

ಕಿರೀಟಿ ಬಗ್ಗೆ ಏನಂದ್ರು ಕ್ರೇಜಿಸ್ಟಾರ್!

ಕ್ರೇಜಿಸ್ಟಾರ್ ರವಿಚಂದ್ರನ್ ಕಿರೀಟಿ ಸಿನಿಮಾದಲ್ಲಿ ಸ್ಪೆಷಲ್ ರೋಲ್ ವೊಂದಕ್ಕೆ ಬಣ್ಣ ಹಚ್ಚಿದ್ದಾರೆ. ಕಿರೀಟಿ ತಂದೆಯಾಗಿ ಕಾಣಿಸಿಕೊಳ್ಳಲಿರುವ ರವಿಮಾವ ಸಿನಿಮಾ ಬಗ್ಗೆ ಸ್ಟಾರ್ ಕಾಸ್ಟ್ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿದ್ದಾರೆ. ಕಿರೀಟಿ ಏರ್ ಪೋರ್ಟ್ ನಲ್ಲಿ ಒಮ್ಮೆ ಭೇಟಿ ಮಾಡಿದ್ದೆವು. ನನಗೆ ನಟನೆ ಬಗ್ಗೆ ಸಾವಿರ ಪ್ರಶ್ನೆ ಕೇಳಿದ್ದರು. ಈ ಸಿನಿಮಾದಲ್ಲಿ ಕಿರೀಟಿಗೆ ಸಾರಥಿ ಬಂದು ರಾಧಾಕೃಷ್ಣ. ಹಿಂದೆ ಜನಾರ್ಧನ್ ರೆಡ್ಡಿಯವರ ಆಶೀರ್ವಾದ. ಶ್ರೀಲೀಲಾ ಇದ್ದಾರೆ, ಜೆನಿಲಿಯಾ ಇದ್ದಾರೆ. ನಾನೂ ಇದ್ದೀನಿ. ಇದಕ್ಕಿಂತ ಒಳ್ಳೆಯ ಪ್ಯಾಕೇಜ್ ಬೇಕಾ ನಿಮಗೆ? ಎಂದರು.

ಕನ್ನಡಕ್ಕೆ ಜೆನಿಲಿಯಾ ಕಂಬ್ಯಾಕ್!

ಶಿವರಾಜ್ ಕುಮಾರ್ ನಟನೆಯ ‘ಸತ್ಯ್ ಇನ್ ಲವ್’ ಸಿನಿಮಾದಲ್ಲಿ ನಟಿಸಿದ್ದ ಜೆನಿಲಿಯಾ ಮತ್ತೆ ಸ್ಯಾಂಡಲ್‌ವುಡ್‌ ಕ್ಕೆ ಮರಳಿದ್ದಾರೆ. ವಿವಾಹದ ಬಳಿಕ ಚಿತ್ರರಂಗದಿಂದ ದೂರ ಉಳಿದಿದ್ದ ಜೆನಿಲಿಯಾ 10 ವರ್ಷಗಳ ಬಳಿಕ ನಟನೆಗೆ ಹಿಂದಿರುಗಿದ್ದಾರೆ. 10 ವರ್ಷಗಳ ಬಳಿಕ ಮತ್ತೆ ನಟನೆಗೆ ಮರಳುತ್ತಿದ್ದೇನೆ. ಇದು ತುಂಬಾನೇ ಸ್ಪೆಷಲ್ ಪ್ರಾಜೆಕ್ಟ್. ನಿಮ್ಮ ಮೊದಲ ಸಿನಿಮಾ. ಈ ಸಿನಿಮಾದುದ್ದಕ್ಕೂ ನಾವು ಇರುತ್ತೇವೆ ಎಂದಿದ್ದಾರೆ.

ಕಿರೀಟಿ ಇಂಟ್ರೂಡಕ್ಷನ್ ಟೀಸರ್ ಸೂಪರ್!

ಕಿರೀಟಿ ಸಿನಿಮಾದ ಮುಹೂರ್ತದ ವೇಳೆ ಹೀರೋ ಇಂಟ್ರೂಡಕ್ಷನ್ ಟೀಸರ್ ರಿಲೀಸ್ ಮಾಡಲಾಯಿತು. ಆಕ್ಷನ್, ಸ್ಟಂಟ್, ಡ್ಯಾನ್ಸ್, ಬೊಂಬಾಟ್ ಆಕ್ಟಿಂಗ್ ಎಲ್ಲರ ಮಿಶ್ರಣದ ಟೀಸರ್ ಝಲಕ್ ನೋಡಿ ಎಲ್ಲರೂ ಹುಬ್ಬೇರಿಸ್ತಿದ್ದಾರೆ. ಕಿರೀಟಿ ರೈಸಿಂಗ್ ಸ್ಟಾರ್ ಅಂತಾ ಕೊಂಡಾಡ್ತಿದ್ದಾರೆ.

ಕಿರೀಟಿ ಸಿನಿಮಾ ತೆಲುಗಿನ ಖ್ಯಾತ ಪ್ರೊಡಕ್ಷನ್ ಹೌಸ್ ವಾರಾಹಿ ಫಿಲ್ಮಂ ಪ್ರೊಡಕ್ಷನ್ ನಡಿ ಅದ್ಧೂರಿ ಬಜೆಟ್ ನಲ್ಲಿ ತಯಾರಾಗ್ತಿರುವ 15ನೇ ಸಿನಿಮಾ. ಮಯಾಬಜಾರ್ ಸಿನಿಮಾ ಖ್ಯಾತಿಯ ರಾಧಾಕೃಷ್ಣರೆಡ್ಡಿ ನಿರ್ದೇಶನ, ಬಾಹುಬಲಿ ಛಾಯಾಗ್ರಾಹ ಕೆಕೆ ಸೆಂಥಿಲ್ ಕುಮಾರ್ ಕ್ಯಾಮೆರಾ ಕೈ ಚಳಕದ, ಖ್ಯಾತ ಮ್ಯೂಸಿಕ್ ಡೈರೆಕ್ಟರ್ ದೇವಿಶ್ರೀಪ್ರಸಾದ್ ಮ್ಯೂಸಿಕ್ ಇಂಪು ಇರುವ, ಭಾರತದ ಬಹುಬೇಡಿಕೆಯ ಸ್ಟಂಟ್‌ ಮಾಸ್ಟರ್ ಪೀಟರ್ ಹೇನ್ ಆಕ್ಷನ್ ಸೀನ್ಸ್, ಕಲಾ ನಿರ್ದೇಶನ ಮಾಡಿರುವ ರವೀಂದರ್ ಈ ಸಿನಿಮಾದ ಕಲಾ ನಿರ್ದೇಶನದ ಹೊಣೆ ಹೊತ್ತಿದ್ದಾರೆ.

Categories
ರಿ ವಿವ್ಯೂ ಸಿನಿ ಸುದ್ದಿ

ಅಘೋರ ಎಂಬ ಭಯಾನಕ ಸಿನಿಮಾ… ಬದುಕು ಕಳಕೊಂಡ ಆತ್ಮದ ಅರ್ತನಾದ!

ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಹಾರರ್ ಸಿನಿಮಾಗಳು ಬಂದಿವೆ. ಅವುಗಳ ಸಾಲಿಗೆ ಈಗ ಅಘೋರ ಸಿನಿಮಾವೂ ಸೇರಿದೆ. ಹೆಸರೇ ಹೇಳುವಂತೆ ಸಿನಿಮಾ ಕೂಡ ಗಂಭೀರದ ಜೊತೆ ಭಯಾನಕವಾಗಿಯೂ ಇದೆ. ಅದಕ್ಕೆ ಕಾರಣ ನಿರ್ದೇಶಕರ ಯೋಚನೆ ಮತ್ತು ಆಲೋಚನೆ.

ಮೊದಲೇ ಹೇಳಿದಂತೆ ಇದೊಂದು ಭಯಪಡಿಸೋ ಸಿನಿಮಾ. ಹಾರರ್ ಸಿನಿಮಾಗಳಿಗೆ ಮುಖ್ಯವಾಗಿ ಬೇಕಿರೋದು ಕಥೆ ಮತ್ತು ಎಫೆಕ್ಟ್ಸ್. ಅದು ಈ ಚಿತ್ರದ ಹೈಲೈಟ್. ಇಲ್ಲಿ ಭಯಪಡಿಸುವುದರ ಜೊತೆಗೊಂದು ವಿಶೇಷ ಸಂದೇಶವೂ ಇದೆ. ಅಂಥದ್ದೊಂದು ವಿಭಿನ್ನ ಮೆಸೇಜ್ ಇಟ್ಟುಕೊಂಡು ಹಾರರ್ ಕಮ್ ಥ್ರಿಲ್ಲರ್ ಸಿನಿಮಾ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು.

ಹಾರರ್ ಸಿನಿಮಾ ಅಂದಾಕ್ಷಣ, ಬಿಳಿ ಸೀರೆ ಧರಿಸಿ, ಕೂದಲು ಬಿಟ್ಟುಕೊಂಡು ಕಾಲ್ಗೆಜ್ಜೆಯ ಸದ್ದು ಮಾಡುತ್ತ ಕಿರುಚುತ್ತ, ಅರುಚುತ್ತ, ಭೀತಿ ಹುಟ್ಟಿಸೋ ದೆವ್ವಗಳು ಕಾಮನ್. ಆದರೆ, ಈ ಚಿತ್ರ ಇವೆಲ್ಲದರಿಂದ ಹೊರತಾಗಿದೆ. ಒಂದು ಹಾರರ್ ಸಿನಿಮಾಗೆ ಏನೆಲ್ಲಾ ಕ್ವಾಲಿಟೀಸ್ ಇರಬೇಕೋ ಅದೆಲ್ಲವೂ ಈ ಚಿತ್ರದಲ್ಲಿದೆ. ಮೊದಲಿಗೆ ಇದು ಕಂಟೆಂಟ್ ಚಿತ್ರ. ಕಥೆಯೇ ಇಲ್ಲಿ ಜೀವಾಳ. ಇನ್ನು ಇಂತಹ ಚಿತ್ರಗಳಿಗೆ ಸಂಗೀತ ಮುಖ್ಯ ಆಕರ್ಷಣೆ. ಅದರ ಕೆಲಸ ಇಲ್ಲಿ ಎದ್ದು ಕಾಣುತ್ತೆ. ಹಾರರ್ ಚಿತ್ರಕ್ಕೆ ಎಫೆಕ್ಟ್ಸ್ ಕೂಡ ಪ್ರಮುಖ ಅಂಶ. ಎಫೆಕ್ಟ್ಸ್ ಇಲ್ಲಿ ಅಘೋರನನ್ನು ಮತ್ತಷ್ಟು ಇಷ್ಟವಾಗುವಂತೆ ಮಾಡಿದೆ. ಮೊದಲರ್ಧ ಜಾಲಿಯಾಗಿಯೇ ಸಾಗುವ ಸಿನಿಮಾ ದ್ವಿತಿಯಾರ್ಧ ಗಂಭೀರತೆಗೆ ದೂಡುತ್ತದೆ. ಜೊತೆಗೆ ಅಷ್ಟೇ ಭಯ ಹುಟ್ಟಿಸುತ್ತ ಹೋಗುತ್ತದೆ. ಅಷ್ಟರಮಟ್ಟಿಗೆ ನಿರ್ದೇಶಕರ ಪ್ರಯತ್ನ ಇಲ್ಲಿ ಸಾರ್ಥಕ.

ಕಥೆ ಏನು?
ಐದಾರು ಪಾತ್ರಗಳು ಇಲ್ಲಿ ಹೈಲೈಟ್. ಪಾತ್ರವೊಂದರ ಜೊತೆ ಅನಿರೀಕ್ಷಿತ ಭೇಟಿಯಾಗುವ ಮೂರು ಪಾತ್ರಗಳು ರಾತ್ರಿ ವೇಳೆ ಒಂದು ಸ್ಥಳಕ್ಕೆ ಹೋಗ್ತಾರೆ. ಅವರು ಅಲ್ಲಿ ಯಾಕೆ ಹೋಗ್ತಾರೆ ಅದಕ್ಕೆ ಕಾರಣ ಏನು ಅನ್ನೋದು ಸಸ್ಪೆನ್ಸ್. ಅಲ್ಲೊಂದು ವಿಚಿತ್ರ ಘಟನೆ ನಡೆಯುತ್ತೆ. ಅಲ್ಲಿಂದ ಆ ನಾಲ್ಕು ಜನ ಒಂದು ಮನೆಗೆ ಎಂಟ್ರಿಯಾಗ್ತಾರೆ. ಅಲ್ಲಿ ವಿಚಿತ್ರ ಘಟನೆಗಳು ಜರುಗುತ್ತವೆ. ಅಲ್ಲೊಂದು ಭಯವೆನಿಸುವ ಸನ್ನಿವೇಶ ನಡೆಯುತ್ತೆ. ಇಡೀ ಚಿತ್ರದ ಸ್ವೀಕೆನ್ಸ್ ನಡೆಯೋದೆ ಅಲ್ಲಿ.

ಒಂದು ಮನೆಯಲ್ಲಿ ನಡೆಯೋ ವಿಚಿತ್ರ ಘಟನೆಗಳು ನೋಡುಗರನ್ನು ಅಕ್ಷರಶಃ ಬೆಚ್ಚಿ ಬೀಳಿಸುತ್ತವೆ. ಅದಕ್ಕೆ ಕಾರಣ ಸೌಂಡಿಂಗ್ ಮತ್ತು ಹಿನ್ನೆಲೆ ಸಂಗೀತ. ಇನ್ನು ಇಂತಹ ಚಿತ್ರಕ್ಕೆ ಸಂಕಲನ ಕೆಲಸವೂ ಮುಖ್ಯ. ಅದಿಲ್ಲಿ ಸಿನಿಮಾದ ವೇಗಕ್ಕೆ ಹೆಗಲು ಕೊಟ್ಟಿದೆ.

ತಾನು ನಟ ಆಗಬೇಕು ಅಂತ ನೂರಾರು ಆಸೆ ಆಕಾಂಕ್ಷೆ ಇಟ್ಟುಕೊಂಡ ಪ್ರತಿಭೆ ಒಂದು ಘಟನೆಗೆ ಸಿಲುಕುತ್ತಾನೆ. ಆ ಬಳಿಕ ಅವನ ಬದುಕೇ ಹಾಳಾಗುತ್ತೆ. ಅಲ್ಲಿಂದಲೇ ನೋಡುಗರಿಗೆ ಹೊಸ ಭೀತಿ ಶುರುವಾಗುತ್ತೆ. ನಿಜ ಹೇಳುವುದಾದರೆ, ಒಂದು ಭಯಾನಕತೆ ಹೇಗೆಲ್ಲ ಇರುತ್ತೆ ಅನ್ನೋದನ್ನ ನಿರ್ದೇಶಕರು ಅಚ್ಚುಕಟ್ಟಾಗಿ ತೋರಿಸಿದ್ದಾರೆ.

ಪ್ರತಿಭೆಗಳ ಅನಾವರಣ

ಇಲ್ಲಿ ಕಾಣಿಸಿಕೊಂಡಿರುವ ಪ್ರತಿ ಪಾತ್ರಗಳು ನೋಡುಗರನ್ನು ಖುಷಿಪಡಿಸುತ್ತವೆ. ತಮಾಷೆ ಸೀನ್ ಗಳಲ್ಲೂ ಗಮನ ಸೆಳೆಯೊ ಕಲಾವಿದರು, ಅಷ್ಟೇ ಭಯ ಹುಟ್ಟಿಸುತ್ತಾರೆ. ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.

ಒಟ್ಟಾರೆ ನಿರ್ದೇಶಕ ಪ್ರಮೋದ್ ರಾಜ್ ಅವರು ನೋಡುಗರನ್ನು ಬೆಚ್ಚಿ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರದಲ್ಲಿ ಅವಿನಾಶ್ ಅವರು ಅಘೋರನಾಗಿ ಅಬ್ಬರಿಸಿದ್ದಾರೆ. ಉಳಿದಂತೆ, ತೆರೆ ಮೇಲೆ ಅಶೋಕ್ ಪುನೀತ್, ದ್ರವ್ಯ, ರಚನಾ ಸೇರಿದಂತೆ ಇತರರು ಕೂಡ ಗಮನ ಸೆಳೆಯುತ್ತಾರೆ.

ಶರತ್ ಕುಮಾರ್ ಅವರ ಛಾಯಾಗ್ರಹಣ ಅಘೋರನನ್ನು ಅಂದಗಾಣಿಸಿದೆ ಮುರಳೀಧರನ್ ಅವರ ಬಿಜಿಎಂ ಖುಷಿ ಕೊಡಿಸುತ್ತೆ. ವಿ.ನಾಗೇಂದ್ರಪ್ರಸಾದ್ ಸಂಗೀತ ಮತ್ತು ಸಾಹಿತ್ಯ ಚಿತ್ರದ ಕಥೆಗೆ ಪೂರಕವಾಗಿದೆ. ವೆಂಕಟೇಶ್ ಯುಡಿವಿ ಅವರ ಕತ್ತರಿ ಪ್ರಯೋಗ ಅಘೋರನನ್ನು ವೇಗಗೊಳಿಸಿದೆ. ಮಾಸ್ ಮಾದ ಅವರ ಕೆಲಸ ಕೂಡ ಗಮನಸೆಳೆಯುತ್ತದೆ.

error: Content is protected !!