ತ್ರಿಕೋನ ಎಂಬ ವಿಭಿನ್ನ ಸಿನಿಮಾ; ಮೂರು ಭಾಷೆಯಲ್ಲಿ ಬಿಡುಗಡೆಗೆ ರೆಡಿ…

ಸಾಮಾನ್ಯವಾಗಿ ಒಂದು ಸಿನಿಮಾದ ಸಕ್ಸಸ್‌ ನಂತರ ಮತ್ತೊಂದು ಸಿನಿಮಾ ಮಾಡಲು ಹೊರಟರೆ, ಮೊದಲ ಸಿನಿಮಾಗಿಂತಲೂ ಒಂದು ವಿಭಿನ್ನ ಸಿನಿಮಾ ಕಟ್ಟಿಕೊಡಬೇಕೆಂಬ ಚಾಲೆಂಜ್‌ ಆ ನಿರ್ದೇಶಕ ಮತ್ತು ನಿರ್ಮಾಪಕರಿಗೆ ಇರುತ್ತೆ. ಅಂಥದ್ದೊಂದು ಚಾಲೆಂಜ್‌ನಲ್ಲೇ ಸದ್ದಿಲ್ಲದೆಯೇ ಒಂದು ಸಿನಿಮಾ ಮಾಡಿ ಮುಗಿಸಿದ್ದಾರೆ ಚಂದ್ರಕಾಂತ್…

ಚಂದ್ರಕಾಂತ್‌ ಅಂದಾಕ್ಷಣ ಯಾರಿವರು ಎಂಬ ಸಣ್ಣ ಗೊಂದಲ ಸಹಜ. ಅವರು ಬೇರಾರು ಅಲ್ಲ, ಈ ಹಿಂದೆ ʼ‌143′ ಎಂಬ ಸಿನಿಮಾ ನಿರ್ದೇಶಿಸಿ ಎಲ್ಲರಿಂದಲೂ ಸೈ ಎನಿಸಿಕೊಂಡಿದ್ದ ಪ್ರತಿಭಾವಂತ ನಿರ್ದೇಶಕರಿವರು. ಅವರೀಗ ಸದ್ದಿಲ್ಲದೆಯೇ ʼತ್ರಿಕೋನʼ ಎಂಬ ಮತ್ತೊಂದು ಅರ್ಥಪೂರ್ಣ ಎನಿಸುವ ಹಾಗು ವಿಭಿನ್ನವಾದ ಸಿನಿಮಾ ಮಾಡಿ ಮುಗಿಸಿದ್ದಾರೆ. ಎಲ್ಲವೂ ಅಂದುಕೊಂಡಂತೆ ನಡೆದಿದ್ದರೆ, ಈ ಹಿಂದೆಯೇ ಈ ಚಿತ್ರ ರಿಲೀಸ್‌ ಆಗಬೇಕಿತ್ತು. ಆದರೆ, ಕೊರೊನಾ ಹೆಮ್ಮಾರಿಯಿಂದ ಲಾಕ್‌ಡೌನ್‌ ಆಗಿದ್ದರಿಂದ ಸಿನಿಮಾ ಬಿಡುಗಡೆ ತಡವಾಯ್ತು. ಈಗ ಸಿನಿಮಾ ರಿಲೀಸ್‌ ಆಗಲು ತಯಾರಾಗುತ್ತಿದೆ.

ಅಂದಹಾಗೆ, ಈ ಚಿತ್ರ ಬಿಡುಗಡೆಗೂ ಮುನ್ನವೇ ಯುಟ್ಯೂಬ್‌ನಲ್ಲಿ ಟೀಸರ್‌ ಬಿಡುಗಡೆ ಮಾಡಿದೆ. ಅದು ಸಾಕಷ್ಟು ಕುತೂಹಲವನ್ನೂ ಕೆರಳಿಸಿದೆ. ಸದ್ಯ ಆ ಕುತೂಹಲ ʼತ್ರಿಕೋನʼ ಸಿನಿಮಾ ನೋಡಲೇಬೇಕೆನಿಸುತ್ತಿದೆ. ಇನ್ನು, ಈ ಚಿತ್ರಕ್ಕೆ ರಾಜಶೇಖರ್‌ ನಿರ್ಮಾಪಕರು. ಸಿನಿಮಾ ಇವರಿಗೆ ಹೊಸದೇನಲ್ಲ. ಈ ಹಿಂದೆ ಕೂಡ ರಾಜಶೇಖರ್‌ ಅವರು ಗಮನಸೆಳೆಯುವಂತಹ ಸದಭಿರುಚಿಯ ಸಿನಿಮಾಗಳನ್ನು ನಿರ್ದೇಶಿಸಿ, ನಿರ್ಮಿಸಿದ್ದರು. ʼಪೆರೋಲ್‌ʼ, ʼಬರ್ಫಿʼ ಮತ್ತು ಅಮೃತವಾಣಿ ಚಿತ್ರಗಳ ಮೂಲಕ ಗಮನಸೆಳೆದಿದ್ದ ರಾಜಶೇಖರ್‌, ʼತ್ರಿಕೋನʼ ಸಿನಿಮಾದ ಕಥೆ ಅವರೇ ಬರೆದಿದ್ದಾರೆ. ಇನ್ನು, ಈ ಚಿತ್ರ ಮೂರು ಭಾಷೆಗಳಲ್ಲಿ ತಯಾರಾಗಿದೆ. ಕಥೆ ಒಂದೇ ಆದರೆ, ಭಾಷೆಗಳ ನೇಟಿವಿಟಿ ಮತ್ತು ನೋಡುಗರ ಅಭಿರುಚಿಗೆ ತಕ್ಕಂತೆಯೇ ಮೂರು ರೀತಿಯ ವಿಭಿನ್ನ ಚಿತ್ರಕಥೆ ಮಾಡಲಾಗಿದೆ.

ಈ ಚಿತ್ರದ ಬಗ್ಗೆ ನಿರ್ದೇಶಕ ಚಂದ್ರಕಾಂತ್‌ ಹೇಳುವುದಿಷ್ಟು. ಮೂರು ವಿಭಿನ್ನ ತಲೆಮಾರು ಮತ್ತು ವಯೋಮಾನದ ಜನರ ಮೂಲಕ ಈ ಕಥೆ ಹೇಳಲಾಗುತ್ತಿದೆ. ಒಂದು ಘಟನೆಯನ್ನು ಈ ಮೂರು ತಲೆಮಾರಿನವರು ಹೇಗೆಲ್ಲಾ ಎದುರಿಸುತ್ತಾರೆ ಮತ್ತು ಒಂದು ಸಮಸ್ಯೆಯನ್ನು ತಾಳ್ಮೆಯಿಂದ ಹಾಗು ಶಕ್ತಿಯಿಂದ ಧೈರ್ಯವಾಗಿ ಎದುರಿಸಿದಾಗ ಏನೆಲ್ಲಾ ಆಗುತ್ತೆ ಎಂಬುದು ಚಿತ್ರದ ಕಥೆ ಎನ್ನುತ್ತಾರೆ ನಿರ್ದೇಶಕರು.

ಚಿತ್ರದಲ್ಲಿ ಸುರೇಶ್‌ ಹೆಬ್ಳಿಕರ್‌, ಲಕ್ಷ್ಮಿ, ಅಚ್ಯುತಕುಮಾರ್‌, ಸುಧಾರಾಣಿ, ರಾಜವೀರ್‌, ಮಾರುತೇಶ್‌ ಸೇರಿದಂತೆ ಇತರೆ ಪ್ರತಿಭಾವಂತ ನಟರು ನಟಿಸಿದ್ದಾರೆ. ಸಾಧುಕೋಕಿಲ ಕೂಡ ಇಲ್ಲೊಂದು ವಿಶೇಷ ಪಾತ್ರದಲ್ಲಿ ಕಾಣಿಸಿಕೊಂಡಿದ್ದಾರೆ. ಚಿತ್ರಕ್ಕೆ ಸುರೇಂದ್ರನಾತ್‌ ಸಂಗೀತ ನೀಡಿದ್ದಾರೆ. ಶ್ರೀನಿವಾಸ್‌ ವಿನ್ನಕೋಟ ಅವರು ಕ್ಯಾಮೆರಾ ಹಿಡಿದಿದ್ದಾರೆ. ಸದ್ಯ ಮೂರು ಭಾಷೆಗಳಲ್ಲಿ ಚಿತ್ರ ರೆಡಿಯಾಗಿದ್ದು, ಬಿಡುಗಡೆಗೆ ತಯಾರಾಗುತ್ತಿದೆ.

Related Posts

error: Content is protected !!