ಅಘೋರ ಎಂಬ ಭಯಾನಕ ಸಿನಿಮಾ… ಬದುಕು ಕಳಕೊಂಡ ಆತ್ಮದ ಅರ್ತನಾದ!

ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಹಾರರ್ ಸಿನಿಮಾಗಳು ಬಂದಿವೆ. ಅವುಗಳ ಸಾಲಿಗೆ ಈಗ ಅಘೋರ ಸಿನಿಮಾವೂ ಸೇರಿದೆ. ಹೆಸರೇ ಹೇಳುವಂತೆ ಸಿನಿಮಾ ಕೂಡ ಗಂಭೀರದ ಜೊತೆ ಭಯಾನಕವಾಗಿಯೂ ಇದೆ. ಅದಕ್ಕೆ ಕಾರಣ ನಿರ್ದೇಶಕರ ಯೋಚನೆ ಮತ್ತು ಆಲೋಚನೆ.

ಮೊದಲೇ ಹೇಳಿದಂತೆ ಇದೊಂದು ಭಯಪಡಿಸೋ ಸಿನಿಮಾ. ಹಾರರ್ ಸಿನಿಮಾಗಳಿಗೆ ಮುಖ್ಯವಾಗಿ ಬೇಕಿರೋದು ಕಥೆ ಮತ್ತು ಎಫೆಕ್ಟ್ಸ್. ಅದು ಈ ಚಿತ್ರದ ಹೈಲೈಟ್. ಇಲ್ಲಿ ಭಯಪಡಿಸುವುದರ ಜೊತೆಗೊಂದು ವಿಶೇಷ ಸಂದೇಶವೂ ಇದೆ. ಅಂಥದ್ದೊಂದು ವಿಭಿನ್ನ ಮೆಸೇಜ್ ಇಟ್ಟುಕೊಂಡು ಹಾರರ್ ಕಮ್ ಥ್ರಿಲ್ಲರ್ ಸಿನಿಮಾ ಕಟ್ಟಿಕೊಟ್ಟಿದ್ದಾರೆ ನಿರ್ದೇಶಕರು.

ಹಾರರ್ ಸಿನಿಮಾ ಅಂದಾಕ್ಷಣ, ಬಿಳಿ ಸೀರೆ ಧರಿಸಿ, ಕೂದಲು ಬಿಟ್ಟುಕೊಂಡು ಕಾಲ್ಗೆಜ್ಜೆಯ ಸದ್ದು ಮಾಡುತ್ತ ಕಿರುಚುತ್ತ, ಅರುಚುತ್ತ, ಭೀತಿ ಹುಟ್ಟಿಸೋ ದೆವ್ವಗಳು ಕಾಮನ್. ಆದರೆ, ಈ ಚಿತ್ರ ಇವೆಲ್ಲದರಿಂದ ಹೊರತಾಗಿದೆ. ಒಂದು ಹಾರರ್ ಸಿನಿಮಾಗೆ ಏನೆಲ್ಲಾ ಕ್ವಾಲಿಟೀಸ್ ಇರಬೇಕೋ ಅದೆಲ್ಲವೂ ಈ ಚಿತ್ರದಲ್ಲಿದೆ. ಮೊದಲಿಗೆ ಇದು ಕಂಟೆಂಟ್ ಚಿತ್ರ. ಕಥೆಯೇ ಇಲ್ಲಿ ಜೀವಾಳ. ಇನ್ನು ಇಂತಹ ಚಿತ್ರಗಳಿಗೆ ಸಂಗೀತ ಮುಖ್ಯ ಆಕರ್ಷಣೆ. ಅದರ ಕೆಲಸ ಇಲ್ಲಿ ಎದ್ದು ಕಾಣುತ್ತೆ. ಹಾರರ್ ಚಿತ್ರಕ್ಕೆ ಎಫೆಕ್ಟ್ಸ್ ಕೂಡ ಪ್ರಮುಖ ಅಂಶ. ಎಫೆಕ್ಟ್ಸ್ ಇಲ್ಲಿ ಅಘೋರನನ್ನು ಮತ್ತಷ್ಟು ಇಷ್ಟವಾಗುವಂತೆ ಮಾಡಿದೆ. ಮೊದಲರ್ಧ ಜಾಲಿಯಾಗಿಯೇ ಸಾಗುವ ಸಿನಿಮಾ ದ್ವಿತಿಯಾರ್ಧ ಗಂಭೀರತೆಗೆ ದೂಡುತ್ತದೆ. ಜೊತೆಗೆ ಅಷ್ಟೇ ಭಯ ಹುಟ್ಟಿಸುತ್ತ ಹೋಗುತ್ತದೆ. ಅಷ್ಟರಮಟ್ಟಿಗೆ ನಿರ್ದೇಶಕರ ಪ್ರಯತ್ನ ಇಲ್ಲಿ ಸಾರ್ಥಕ.

ಕಥೆ ಏನು?
ಐದಾರು ಪಾತ್ರಗಳು ಇಲ್ಲಿ ಹೈಲೈಟ್. ಪಾತ್ರವೊಂದರ ಜೊತೆ ಅನಿರೀಕ್ಷಿತ ಭೇಟಿಯಾಗುವ ಮೂರು ಪಾತ್ರಗಳು ರಾತ್ರಿ ವೇಳೆ ಒಂದು ಸ್ಥಳಕ್ಕೆ ಹೋಗ್ತಾರೆ. ಅವರು ಅಲ್ಲಿ ಯಾಕೆ ಹೋಗ್ತಾರೆ ಅದಕ್ಕೆ ಕಾರಣ ಏನು ಅನ್ನೋದು ಸಸ್ಪೆನ್ಸ್. ಅಲ್ಲೊಂದು ವಿಚಿತ್ರ ಘಟನೆ ನಡೆಯುತ್ತೆ. ಅಲ್ಲಿಂದ ಆ ನಾಲ್ಕು ಜನ ಒಂದು ಮನೆಗೆ ಎಂಟ್ರಿಯಾಗ್ತಾರೆ. ಅಲ್ಲಿ ವಿಚಿತ್ರ ಘಟನೆಗಳು ಜರುಗುತ್ತವೆ. ಅಲ್ಲೊಂದು ಭಯವೆನಿಸುವ ಸನ್ನಿವೇಶ ನಡೆಯುತ್ತೆ. ಇಡೀ ಚಿತ್ರದ ಸ್ವೀಕೆನ್ಸ್ ನಡೆಯೋದೆ ಅಲ್ಲಿ.

ಒಂದು ಮನೆಯಲ್ಲಿ ನಡೆಯೋ ವಿಚಿತ್ರ ಘಟನೆಗಳು ನೋಡುಗರನ್ನು ಅಕ್ಷರಶಃ ಬೆಚ್ಚಿ ಬೀಳಿಸುತ್ತವೆ. ಅದಕ್ಕೆ ಕಾರಣ ಸೌಂಡಿಂಗ್ ಮತ್ತು ಹಿನ್ನೆಲೆ ಸಂಗೀತ. ಇನ್ನು ಇಂತಹ ಚಿತ್ರಕ್ಕೆ ಸಂಕಲನ ಕೆಲಸವೂ ಮುಖ್ಯ. ಅದಿಲ್ಲಿ ಸಿನಿಮಾದ ವೇಗಕ್ಕೆ ಹೆಗಲು ಕೊಟ್ಟಿದೆ.

ತಾನು ನಟ ಆಗಬೇಕು ಅಂತ ನೂರಾರು ಆಸೆ ಆಕಾಂಕ್ಷೆ ಇಟ್ಟುಕೊಂಡ ಪ್ರತಿಭೆ ಒಂದು ಘಟನೆಗೆ ಸಿಲುಕುತ್ತಾನೆ. ಆ ಬಳಿಕ ಅವನ ಬದುಕೇ ಹಾಳಾಗುತ್ತೆ. ಅಲ್ಲಿಂದಲೇ ನೋಡುಗರಿಗೆ ಹೊಸ ಭೀತಿ ಶುರುವಾಗುತ್ತೆ. ನಿಜ ಹೇಳುವುದಾದರೆ, ಒಂದು ಭಯಾನಕತೆ ಹೇಗೆಲ್ಲ ಇರುತ್ತೆ ಅನ್ನೋದನ್ನ ನಿರ್ದೇಶಕರು ಅಚ್ಚುಕಟ್ಟಾಗಿ ತೋರಿಸಿದ್ದಾರೆ.

ಪ್ರತಿಭೆಗಳ ಅನಾವರಣ

ಇಲ್ಲಿ ಕಾಣಿಸಿಕೊಂಡಿರುವ ಪ್ರತಿ ಪಾತ್ರಗಳು ನೋಡುಗರನ್ನು ಖುಷಿಪಡಿಸುತ್ತವೆ. ತಮಾಷೆ ಸೀನ್ ಗಳಲ್ಲೂ ಗಮನ ಸೆಳೆಯೊ ಕಲಾವಿದರು, ಅಷ್ಟೇ ಭಯ ಹುಟ್ಟಿಸುತ್ತಾರೆ. ಎಲ್ಲರೂ ತಮ್ಮ ತಮ್ಮ ಪಾತ್ರಗಳಿಗೆ ನ್ಯಾಯ ಸಲ್ಲಿಸಿದ್ದಾರೆ.

ಒಟ್ಟಾರೆ ನಿರ್ದೇಶಕ ಪ್ರಮೋದ್ ರಾಜ್ ಅವರು ನೋಡುಗರನ್ನು ಬೆಚ್ಚಿ ಬೀಳಿಸುವಲ್ಲಿ ಯಶಸ್ವಿಯಾಗಿದ್ದಾರೆ. ಚಿತ್ರದಲ್ಲಿ ಅವಿನಾಶ್ ಅವರು ಅಘೋರನಾಗಿ ಅಬ್ಬರಿಸಿದ್ದಾರೆ. ಉಳಿದಂತೆ, ತೆರೆ ಮೇಲೆ ಅಶೋಕ್ ಪುನೀತ್, ದ್ರವ್ಯ, ರಚನಾ ಸೇರಿದಂತೆ ಇತರರು ಕೂಡ ಗಮನ ಸೆಳೆಯುತ್ತಾರೆ.

ಶರತ್ ಕುಮಾರ್ ಅವರ ಛಾಯಾಗ್ರಹಣ ಅಘೋರನನ್ನು ಅಂದಗಾಣಿಸಿದೆ ಮುರಳೀಧರನ್ ಅವರ ಬಿಜಿಎಂ ಖುಷಿ ಕೊಡಿಸುತ್ತೆ. ವಿ.ನಾಗೇಂದ್ರಪ್ರಸಾದ್ ಸಂಗೀತ ಮತ್ತು ಸಾಹಿತ್ಯ ಚಿತ್ರದ ಕಥೆಗೆ ಪೂರಕವಾಗಿದೆ. ವೆಂಕಟೇಶ್ ಯುಡಿವಿ ಅವರ ಕತ್ತರಿ ಪ್ರಯೋಗ ಅಘೋರನನ್ನು ವೇಗಗೊಳಿಸಿದೆ. ಮಾಸ್ ಮಾದ ಅವರ ಕೆಲಸ ಕೂಡ ಗಮನಸೆಳೆಯುತ್ತದೆ.

Related Posts

error: Content is protected !!