ನೈನಾ ಎಂಬ ಮಹಿಳಾ ಪ್ರಧಾನ ಸಿನಿಮಾ; ಮಹಿಳಾ ದಿನಕ್ಕೊಂದು ಸ್ಪೆಷಲ್‌ ಚಿತ್ರ

ಕನ್ನಡದಲ್ಲಿ ಈಗಾಗಲೇ ಹಲವು ಮಹಿಳಾ ಪ್ರಧಾನ ಸಿನಿಮಾಗಳು ಬಂದಿವೆ. ಅದರಲ್ಲೂ ಸಾಕಷ್ಟು ಸಂದೇಶ ಸಾರುವ ಚಿತ್ರಗಳೇ ಇವೆ. ಆ ಸಾಲಿಗೆ ಮತ್ತೊಂದು ಹೊಸ ಚಿತ್ರ ಸೇರ್ಪಡೆಯಾಗಿದೆ. ಹೌದು, ಅದರ ಹೆಸರು ನೈನಾ. ಇದೊಂದು ಮಹಿಳಾ ಪ್ರಧಾನ ಸಿನಿಮಾ. ಈ ಚಿತ್ರಕ್ಕೆ ಶ್ರೀಧರ್‌ ಸಿಯ ನಿರ್ದೇಶಕರು. ಇವರಿಗೆ ಇದು ಮೊದಲ ಅನುಭವ. ನಿರ್ದೇಶನದ ಜೊತೆಯಲ್ಲಿ ನಿರ್ಮಾಣದ ಜವಾಬ್ದಾರಿಯೂ ಇವರದೇ. ಅಂದಹಾಗೆ, ಈ ಚಿತ್ರಕ್ಕೆ ಒಬ್ಬರಲ್ಲ, ಇಬ್ಬರಲ್ಲ ಬರೋಬ್ಬರಿ ಮೂವತ್ತು ಜನ ಹಣ ಹಾಕಿದ್ದಾರೆ. ಅಲ್ಲಿಗೆ ಇದೊಂದು ಕ್ರೌಡ್‌ ಫಂಡಿಂಗ್‌ ಸಿನಿಮಾ ಅಂದುಕೊಳ್ಳಲ್ಲಡ್ಡಿಯಿಲ್ಲ ಬಿಡಿ.

ನಿರ್ದೇಶಕ ಶ್ರೀಧರ್‌ ಸಿಯಾ ಅವರು ಮೂಲತಃ ಎಂಜಿನಿಯರ್.‌ ಅವರಿಗೆ ಸಿನಿಮಾ ಮೇಲೆ ಹೆಚ್ಚು ಒಲವು. ದೊಡ್ಡ ಕನಸು ಕಟ್ಟಿಕೊಂಡು ಗಾಂಧಿನಗರವನ್ನು ಸ್ಪರ್ಶಿಸಿದ್ದಾರೆ. ಚೊಚ್ಚಲ ಪ್ರಯತ್ನ ವಿಭಿನ್ನವಾಗಿರಬೇಕು ಎಂಬ ನಿಟ್ಟಿನಲ್ಲಿ ಅವರು ಒಂದು ಮಧ್ಯಮ ವರ್ಗದ ಹೆಣ್ಣು ಮಗಳ ಮನಸ್ಥಿತಿಯ ಕಥೆ ಇರುವ ಸಿನಿಮಾ ಹಿಂದೆ ಬಂದಿದ್ದಾರೆ. ಇನ್ನು, ಈ ಚಿತ್ರಕ್ಕೆ ಗೌರಿ ನಾಯರ್‌ ನಾಯಕಿ. ಈ ಚಿತ್ರ ಮಾಡುವ ಕನಸು ಕಂಡಿದ್ದ ನಿರ್ದೇಶಕ ಶ್ರೀಧರ್‌ ಅವರು, ಚಡ್ಡಿ ದೋಸ್ತ್‌ ಕಡ್ಡಿ ಅಲ್ಲಾಡಿಸ್ಬುಟ್ಟ ಚಿತ್ರದಲ್ಲಿ ಕೆಲಸ ಮಾಡುವಾಗ, ತಾನು ನಿರ್ದೇಶನ ಮಾಡುವ ಕನಸಿನ ಬಗ್ಗೆ ನಾಯಕಿ ಬಳಿ ಹೇಳಿಕೊಂಡಿದ್ದರಂತೆ. ಆ ಸಿನಿಮಾ ಸೆಟ್ಟೇರಿದರೆ, ಅದಕ್ಕೆ ನೀವೇ ನಾಯಕಿ ಅಂತ ಗೌರಿ ನಾಯರ್‌ಗೆ ಹೇಳಿದ್ದರಂತೆ. ಅದರಂತೆ ಗೌರಿ ನಾಯರ್‌ ಈ ಚಿತ್ರಕ್ಕೆ ನಾಯಕಿಯಾಗಿದ್ದಾರೆ.

ಇನ್ನು, ನಾಯಕಿ ಗೌರಿ ನಾಯರ್‌ ಅವರಿಗೆ ನೈನಾ ಸಿನಿಮಾ ಕಥೆ ಹೇಳಿದಾಗ, ಮೊದ ಮೊದಲು ಬೇಡ ಅಂದಿದ್ದರಂತೆ. ನಿರ್ದೇಶಕರು ಹೊಸಬರು. ಜೊತೆಗೆ ಎಂಜಿನಿಯರ್‌ ಬೇರೆ. ಅವರು ಹೇಗೆ ಸಿನಿಮಾ ಮಾಡುತ್ತಾರೋ ಏನೋ ಎಂದು ತಿರಸ್ಕರಿಸಿದ್ದರಂತೆ. ನಂತರ ನಿರ್ದೇಶಕರು ಕಥೆ ಹೇಳಿದ ರೀತಿ, ಅವರು ಪಾತ್ರವನ್ನು ಕಟ್ಟಿಕೊಟ್ಟ ರೀತಿ ಕೇಳಿದ ಮೇಲೆ ನಂಬಿಕೆ ಬಂದು ನಟಿಸೋಕೆ ಒಪ್ಪಿದರಂತೆ. ಇನ್ನು, ಇಲ್ಲಿ ನಾಯಕನಿದ್ದರೂ, ಇಲ್ಲದಂತಿದ್ದಾರೆ. ಅಂದರೆ, ನಾಯಕನ ಪಾತ್ರ ಬಿಳಿ ಪರದೆ ಮೇಲೆ ಕಾಣಿಸುವುದಿಲ್ಲ. ಆದರೆ, ಅವರ ಧ್ವನಿ ಇಲ್ಲಿ ಕೇಳಿಸುತ್ತೆ. ಆ ಧ್ವನಿಗೆ ಆರ್.ಜೆ.ಸುನೀಲ್‌ ಜೀವ ತುಂಬಿದ್ದಾರೆ.

ಚಿತ್ರಕ್ಕೆ ಪ್ರದೀಪ್‌ ಪಿ.ಬಂಗಾರಪೇಟೆ ಛಾಯಾಗ್ರಹಣ ಮಾಡಿದ್ದಾರೆ. ಸುಮಂತ್‌ ರೈ ಸಂಕಲನವಿದೆ. ಕಲ್ಕಿ ಅಭಿಷೇಕ್‌ ಅವರು ಸಂಗೀತ ನೀಡಿದ್ದಾರೆ. ಉಳಿದಂತೆ ಚಿತ್ರದಲ್ಲಿ ನೇಹಾ ಐತಾಳ್, ಪಲ್ಟಿ ಗೋವಿಂದ, ಖ್ಯಾತಿಯ ಸಾಯಿ ಲಕ್ಷ್ಮಣ್, ಸುಮಂತ್ ರೈ, ಚಿದಂಬರ್ ಇತರ ಕಲಾವಿದರು ನಟಿಸಿದ್ದಾರೆ.
ವಿಶೇಷವೆಂದರೆ, ಈ ಚಿತ್ರ ಅಂತಾರಾಷ್ಟ್ರೀಯ ಚಿತ್ರೋತ್ಸವದಲ್ಲಿ ಆಯ್ಕೆಯಾಗಿ ಪ್ರೇಕ್ಷಕರ ಮೆಚ್ಚುಗೆ ಪಡೆದಿದೆ. ಮಾರ್ಚ್‌ 8ರಂದು ಮಹಿಳಾ ದಿನಾಚರಣೆ ಇದೆ. ಅದರ ಅಂಗವಾಗಿ “ನೈನಾ” ಚಿತ್ರ ಕಲಾವಿದರ ಸಂಘದಲ್ಲಿ ಪ್ರದರ್ಶನವಾಗುತ್ತಿದೆ.

Related Posts

error: Content is protected !!