ಮರೆಯಾದ ಸಂಗೀತ ಲೋಕದ ಮಾಣಿಕ್ಯ ! ಸಂಗೀತ ಮ್ಯೂಸಿಕ್ ಸಂಸ್ಥೆಯ ಸಂಸ್ಥಾಪಕ ಮಹೇಶ್ ಇನ್ನು ನೆನಪು ಮಾತ್ರ; ಸಂಗೀತ ದಿಗ್ಗಜನ ಸಾಹಸ ಮೆಲುಕು ಹಾಕಿದ ಲಹರಿ ಸಂಸ್ಥೆ

ಸಂಗೀತ ಮ್ಯೂಸಿಕ್ ಕಂಪನಿಯ ಸಂಸ್ಥಾಪಕ ರಾದ ಎಚ್. ಎಂ ಮಹೇಶ್ ಅವರು ಶುಕ್ರವಾರ ನಿಧನರಾಗಿದ್ದಾರೆ. ತೀವ್ರ ಅನಾರೋಗ್ಯದಿಂದ ಬಳಲುತ್ತಿದ್ದ ಅವರು ಮೃತಪಟ್ಟಿದ್ದಾರೆ. 72 ವಯಸ್ಸಿನ ಮಹೇಶ್ ಅವರು ಇಬ್ಬರು ಹೆಣ್ಣು ಮಕ್ಕಳನ್ನು ಹಾಗು ಅಪಾರ ಬಂಧು ಬಳಗವನ್ನು ಅಗಲಿದ್ದಾರೆ.

ಮೃತ ಮಹೇಶ್ ಅವರು ಸಂಗೀತ ಲೋಕಕ್ಕೆ ಹಾಗು ಕನ್ನಡ ಚಿತ್ರರಂಗಕ್ಕೆ ವಿಶೇಷ ಕೊಡುಗೆ ನೀಡಿದ್ದಾರೆ. ಮೃತರ ಅಗಲಿಕೆಗೆ ಲಹರಿ ಮ್ಯೂಸಿಕ್ ಸಂಸ್ಥೆಯ ಲಹರಿ ವೇಲು ತೀವ್ರ ಸಂತಾಪ ಸೂಚಿಸಿದ್ದಾರೆ.

ಚೆನ್ನೈ ನ ಮಾಸ್ಟರ್ ರೆಕಾರ್ಡಿಂಗ್ ಕಂಪನಿಯ ಸಂಗೀತ ಮ್ಯೂಸಿಕ್ ಸಂಸ್ಥೆ ಸಾಕಷ್ಟು ಹೆಸರು ಮಾಡಿದೆ. ಸಂಸ್ಥಾಪಕ ಮಹೇಶ್ ಅವರ ಕುರಿತು ಸಿನಿಲಹರಿ ಜೊತೆ ಮಾತಾಡಿದ ಲಹರಿ ವೇಲು ಗುಣಗಾನ ಮಾಡಿದ್ದಾರೆ.
‘ ಸಂಗೀತ ಕ್ಷೇತ್ರಕ್ಕೆ ಮಹೇಶ್ ಅವರ ಕೊಡುಗೆ ತುಂಬಾ ದೊಡ್ಡದು. ಎಚ್.ಎಂ.ಮಹೇಶ್ ಅಂದರೆ ಸಂಗೀತ ಮ್ಯೂಸಿಕ್ ಸಂಸ್ಥೆ ನೆನಪಾಗುತ್ತೆ. ಕನ್ನಡ ಚಿತ್ರರಂಗ ಮತ್ತು ಸಂಗೀತ ಕ್ಷೇತ್ರಕ್ಕೆ ತನ್ನದೇ ಕೊಡುಗೆ ನೀಡಿದ್ದಾರೆ.
ಅವರು 1970ರಲ್ಲಿ ಕಾಸರಗೋಡಿನಿಂದ ಆಗ ಇದ್ದ ಮಡ್ರಾಸ್ ಗೆ ಹೋಗಿ ಸರಸ್ವತಿ ಸ್ಟೋರ್ಸ್ ನಲ್ಲಿ ಕೆಲಸ ಮಾಡುತ್ತಾರೆ. ಆಗ ಕನ್ನಡ ವಿಭಾಗದಲ್ಲಿ ಕಂಪೆನಿಯೊಂದರ ಪ್ರತಿನಿಧಿಯಾಗಿ ಕೆಲಸ ಮಾಡುತ್ತಿದ್ದರು. ಆಗ ಕನ್ನಡದ ಒಡನಾಟ ಹೆಚ್ಚಾಗುತ್ತೆ. ಆಗ ಕನ್ನಡಕ್ಕೆ ನಾವೇ ಯಾಕೆ ಮ್ಯೂಸಿಕ್ ಸಂಸ್ಥೆ ಶುರು ಮಾಡಬಾರದು ಅಂದುಕೊಂಡು ಚೆನ್ನೈ ನಲ್ಕಿ ಮಾಸ್ಟರ್ ರೆಕಾರ್ಡಿಂಗ್ ಕಂಪೆನಿ ಮೂಲಕ ಸಂಗೀತ ಕ್ಯಾಸೆಟ್ ಶುರು ಮಾಡುತ್ತಾರೆ. ಶುರುವಾದ ಬಳಿಕ ಅಣ್ಣಾವ್ರು ಡಾ.ರಾಜಕುಮಾರ ಅವರ ಮೊದಲ ಧ್ವನಿಸುರುಳಿ ಭಕ್ತಿಗೀತೆ ಹೊರತಂದ ಹೆಗ್ಗಳಿಕೆ ಇವರದಾಗುತ್ತೆ. ಇದರೊಂದಿಗೆ ಸಂತ ಶಿಶುನಾಳ ಶರೀಫ ಅವರ ಹಾಡುಗಳನ್ನೂ ಬೆಳಕಿಗೆ ತಂದಿದ್ದು ಇದೇ ಸಂಸ್ಥೆ. ದಾಸ ಸಾಹಿತ್ಯ, ವಚನ ಸಾಹಿತ್ಯ, ಯಕ್ಷಗಾನ, ಜಾನಪದ ಶಾಸ್ತ್ರೀಯ ಸಂಗೀತ, ಕರ್ನಾಟಕ ಸಂಗೀತ, ಹಿಂದೂಸ್ತಾನಿ ಸಂಗೀತ ಹೀಗೆ ಹಲವು ಪ್ರಾಕಾರಗಳ ಹಾಡುಗಳು ಈ ಮ್ಯೂಸಿಕ್ ಸಂಸ್ಥೆ ಮೂಲಕ ಹೊರಬಂದವು.

ಕನ್ನಡದ ಅನೇಕ ಸಿನಿಮಾ ಹಾಡುಗಳು ಹೊರಬಂದವು. ಅಣ್ಣಾವ್ರ ಹಾಲುಜೇನು, ಹೊಸ ಬೆಳಕು, ಸಮಯದ ಗೊಂಬೆ, ಭಕ್ತ ಪ್ರಹ್ಲಾದ, ಚಲಿಸುವ ಮೋಡಗಳು, ಕವಿರತ್ನ ಕಾಳಿದಾಸ ಹೀಗೆ ಅಣ್ಣಾವ್ರ ಬಹುತೇಕ ಸಿನಿಮಾ ಹಾಡುಗಳನ್ನು ಈ ಸಂಸ್ಥೆ ಬಿಡುಗಡೆ ಮಾಡಿತು. ಪುಟ್ಟಣ್ಣ ಕಣಗಾಲ್ ಅವರ ಮಾನಸ ಸರೋವರ, ಧರಣಿ ಮಂಡಲ ಮಧ್ಯದೊಳಗೆ, ಮಸಣದ ಹೂವು, ಬೆಂಕಿಯ ಬಲೆ, ಮುದುಡಿದ ತಾವರೆ ಅರಳಿತು ಹೀಗೆ ನೂರಾರು ಕನ್ನಡದ ಸದಭಿರುಚಿಯ ಸಿನಿಮಾ ಹಾಡುಗಳನ್ನು ಬಿಡುಗಡೆ ಮಾಡಿದ್ದಾರೆ.

ಮಹೇಶ್ ಅವರು ಕನ್ನಡ ಚಿತ್ರರಂಗಕ್ಕೆ ಸಾವಿರಾರು ಹಿಟ್ ಹಾಡುಗಳನ್ನು ಕೊಡುಗೆಯಾಗಿ ನೀಡಿದ್ದಾರೆ. ಇವರ ಸೇವೆ ಗುರುತಿಸಿ ರಾಜ್ಯ ಸರ್ಕಾರ ರಾಜ್ಯ ಪ್ರಶಸ್ತಿ ನೀಡಿ ಗೌರವಿಸಿದೆ.

ಮೂಲತಃ ಕಾಸರಗೋಡಿಂದ ಹೋಗಿ ಅಲ್ಲಿ ಕೆಲಸ ಮಾಡಿ ಬೆಂಗಳೂರಿನ ಎಚ್ ಎಸ್‌ ಆರ್ ಲೇ ಔಟ್ ನಲ್ಲಿ ವಾಸಿಸುತ್ತಿದ್ದರು. ಶುಕ್ರವಾರ ನಿಧನರಾಗಿದ್ದಾರೆ. ನಮ್ಮ ಸಹೋದರರಾದ ಮನೋಹರ ನಾಯ್ಡು ಅವರೊಂದಿಗೆ ಸುಮಾರು ನಾಲ್ಕು ದಶಕಗಳ ಕಾಲ ಒಡನಾಟ ಇಟ್ಟುಕೊಂಡಿದ್ದರು.

ಒಂದು ರೀತಿ ಅವರು ಸಹೋದರರಂತಿದ್ದರು. ಹದಿನೈದು ದಿನಗಳ ಹಿಂದೆ ಅಣ್ಣ ಫೋನ್ ಮಾಡಿದಾಗ ಪಿಕ್ ಮಾಡಲಿಲ್ಲ. ನಿತ್ಯ ಕಾಲ್ ಮಾಡುತ್ತಿದ್ದವರು ಯಾಕೆ ಪಿಕ್ ಮಾಡ್ತಾ ಇಲ್ಲ ಅಂತ ನಾನು ಮಾಡಿದೆ. ಅವರಿಗೆ ಅನಾರೋಗ್ಯ ಬಗ್ಗೆ ಗೊತ್ತಾಯಿತು. ಈಗ ಅಗಲಿದ್ದಾರೆ. ಕನ್ನಡ ಚಿತ್ರರಂಗದ ಸಂಗೀತ ಲೋಕದ ದಂತಕತೆ ಅವರು. ಲಹರಿ ಸಂಸ್ಥೆ ಜೊತೆ ಅವಿನಾಭಾವ ಹೊಂದಿದವರು ಎಂದು ಲಹರಿ ವೇಲು ಹಳೆಯ ನೆನಪುಗಳನ್ನು ಮೆಲುಕು ಹಾಕಿದರು.

Related Posts

error: Content is protected !!