Categories
ಸಿನಿ ಸುದ್ದಿ

‘ತಲೈವಿ’ ಏಪ್ರಿಲ್ 23ಕ್ಕೆ; ಮೋಷನ್ ಪೋಸ್ಟರ್ ಹಂಚಿಕೊಂಡ ನಟಿ ಕಂಗನಾ

ಬಹುನಿರೀಕ್ಷಿತ ಬಹುಭಾಷಾ ಸಿನಿಮಾ ‘ತಲೈವಿ’ ಏಪ್ರಿಲ್‌ 23ಕ್ಕೆ ತೆರೆಕಾಣಲಿದೆ. ತಮಿಳುನಾಡಿನ ಜನಪ್ರಿಯ ನಟಿ, ರಾಜಕಾರಣಿ ಜಯಲಲಿತಾ ಬಯೋಪಿಕ್‌ ಇದು. ಕಂಗನಾ ಶೀರ್ಷಿಕೆ ಪಾತ್ರದಲ್ಲಿ ನಟಿಸುತ್ತಿದ್ದು, ಅರವಿಂದ ಸ್ವಾಮಿ, ಪ್ರಕಾಶ್ ರೈ, ಜಿಶ್ಶು ಸೇನ್‌ಗುಪ್ತಾ, ಭಾಗ್ಯಶ್ರೀ ಪ್ರಮುಖ ಪಾತ್ರಗಳಲ್ಲಿ ನಟಿಸುತ್ತಿದ್ದಾರೆ. ಅರವಿಂದ ಸ್ವಾಮಿ ಅವರು ನಟ-ರಾಜಕಾರಣಿ ಎಂ.ಜಿ.ರಾಮಚಂದ್ರನ್ ಪಾತ್ರದಲ್ಲಿದ್ದರೆ ಪ್ರಕಾಶ್ ರೈ, ತಮಿಳುನಾಡಿನ ಜನಪ್ರಿಯ ರಾಜಕಾರಣಿ ಕರುಣಾನಿಧಿಯಾಗಿ ಕಾಣಿಸಿಕೊಳ್ಳಲಿದ್ದಾರೆ.

ಕಂಗನಾ ತಮ್ಮ ಟ್ವಿಟರ್ ಖಾತೆಯಲ್ಲಿ ‘ತಲೈವಿ’ ಮೋಷನ್ ಪೋಸ್ಟರ್ ಶೇರ್ ಮಾಡಿ, ಏಪ್ರಿಲ್‌ 23ರಂದು ಸಿನಿಮಾ ಬಿಡುಗಡೆಯಾಗಲಿದೆ ಎಂದು ಘೋಷಿಸಿದ್ದಾರೆ. ಮೋಷನ್ ಪೋಸ್ಟರ್‌ನಲ್ಲಿ ಜಯಲಲಿತಾ ಅವರ ಸಿನಿಮಾ ಮತ್ತು ರಾಜಕೀಯ ಬದುಕಿನ ಹೆಜ್ಜೆ ಗುರುತುಗಳ ಬಗ್ಗೆ ಪ್ರಸ್ತಾಪವಿದೆ. ಹಿನ್ನೆಲೆಯಲ್ಲಿ, “ಆಕೆ ಭಾರತೀಯ ಸಿನಿಮಾದಲ್ಲಿ ಹೆಜ್ಜೆ ಗುರುತು ಮೂಡಿಸಿದರು. ರಾಜಕೀಯ ಪ್ರವೇಶಿಸಿ ತಮಿಳುನಾಡಿನ ರಾಜಕೀಯದ ಹಾದಿಯನ್ನೇ ಬದಲಿಸಿದರು. ತಮ್ಮದೇ ಒಂದು ಅಸ್ತಿತ್ವ ಸೃಷ್ಟಿಸಿದ ಅವರು ಲಕ್ಷಾಂತರ ಜನರ ಬದುಕು ಹಸನುಮಾಡಿ ಇತಿಹಾಸ ಸೃಷ್ಟಿಸಿದರು” ಎನ್ನುವ ವಾಯ್ಸ್‌ಓವರ್ ಇದೆ.

ವಿಷ್ಣುವರ್ಧನ್‌ ಮತ್ತು ಶೈಲೇಶ್ ಸಿಂಗ್ ನಿರ್ಮಿಸಿರುವ ಚಿತ್ರವನ್ನು ಎ.ಎಲ್‌.ವಿಜಯ್ ನಿರ್ದೇಶಿಸಿದ್ದಾರೆ. ‘ಬಾಹುಬಲಿ’, ‘ಮಣಿಕರ್ಣಿಕಾ’ ಸಿನಿಮಾಗಳ ಖ್ಯಾತಿಯ ವಿಜಯೇಂದ್ರ ಪ್ರಸಾದ್ ಅವರು ಚಿತ್ರಕಥೆ ರಚಿಸಿದ್ದಾರೆ ಎನ್ನುವುದು ಹೈಲೈಟ್‌. “ಜಯಲಲಿತಾ ಅವರ ಸಿನಿಮಾ, ರಾಜಕೀಯ, ಸಾಧನೆಯ ಬಗ್ಗೆ ಬೆಳಕು ಚೆಲ್ಲುವುದು ನಮ್ಮ ಉದ್ದೇಶ. ದಿಟ್ಟ, ಸ್ವಾಭಿಮಾನಿ ಸ್ತ್ರೀ ಆದ ಅವರ ಬದುಕು ಇತರರಿಗೂ ಪ್ರೇರಣೆದಾಯಕ. ಅವರ ವ್ಯಕ್ತಿತ್ವಕ್ಕೆ ಚ್ಯುತಿ ಬಾರದಂತೆ ಸಿನಿಮೀಯ ಘಟನೆಗಳೊಂದಿಗೆ ಸಿನಿಮಾ ಮಾಡಿದ್ದೇವೆ” ಎನ್ನುತ್ತಾರೆ ನಿರ್ದೇಶಕ ವಿಜಯ್‌.

Categories
ಸಿನಿ ಸುದ್ದಿ

‘ಗಂಗೂಬಾಯಿ ಕಾಥಿಯಾವಾಡಿ’ ಟೀಸರ್ ಔಟ್; ಮುಂಬಯಿ ಕಾಮಾಟಿಪುರದ ರಾಣಿ ಅಲಿಯಾ!

ಅಲಿಯಾ ಭಟ್‌ ವಿಶಿಷ್ಠ ಪಾತ್ರದಲ್ಲಿ ನಟಿಸಿರುವ ‘ಗಂಗೂಬಾಯಿ ಕಾಥಿಯಾವಾಡಿ’ ಟೀಸರ್ ಬಿಡುಗಡೆಯಾಗಿದೆ. ಬಾಲಿವುಡ್‌ನ ಖ್ಯಾತ ನಿರ್ದೇಶಕ ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಚಿತ್ರವಿದು. ಇಂದು ಅವರ ಹುಟ್ಟುಹಬ್ಬದ ಅಂಗವಾಗಿ ಬಿಡುಗಡೆಯಾಗಿರುವ ಟೀಸರ್‌ಗೆ ಭರಪೂರ ಮೆಚ್ಚುಗೆ ವ್ಯಕ್ತವಾಗಿದೆ. ಲೇಖಕ ಹುಸೇನ್ ಝೈದಿ ಅವರ ‘ಮಾಫಿಯಾ ಕ್ವೀನ್ಸ್‌ ಆಫ್ ಮುಂಬೈ’ ಕೃತಿಯಲ್ಲಿನ ಒಂದು ಭಾಗ ಈ ಚಿತ್ರಕ್ಕೆ ಸ್ಫೂರ್ತಿ.

ಟೀಸರ್‌ನಲ್ಲಿ ಅಲಿಯಾ ಭಟ್‌ ಇಲ್ಲಿಯವರೆಗೆ ಅವರ ಎಲ್ಲಾ ಪಾತ್ರಗಳಿಗಿಂತ ಸಂಪೂರ್ಣ ಭಿನ್ನವಾಗಿ ಕಾಣಿಸುತ್ತಾರೆ. ಶೀರ್ಷಿಕೆ ಪಾತ್ರದಲ್ಲಿನ ಅವರು ದಿಟ್ಟೆ, ಗಟ್ಟಿಗಿತ್ತಿಯಂತೆ ತೋರುತ್ತಾರೆ. ಗುಜರಾತ್‌ನ ಕಾಥಿಯಾವಾಡಿಯಿಂದ ಮುಂಬಯಿಗೆ ವಲಸೆ ಬಂದವರು ಗಂಗೂಬಾಯಿ. ಕಾಮಾಟಿಪುರದಲ್ಲಿ ವೇಶ್ಯಾವಾಟಿಕೆ ದಂಧೆಯ ಮುಖ್ಯಸ್ಥೆಯಾಗಿ ಗುರುತಿಸಿಕೊಳ್ಳುವ ಗಂಗೂಬಾಯಿಗೆ ಭೂಗತ ಜಗತ್ತಿನ ನಂಟೂ ಇರುತ್ತದೆ. ಅನಾಥ ಮಕ್ಕಳು, ನಿರ್ಗತಿಕರಿಗೆ ವಸತಿ, ಊಟ ಕಲ್ಪಿಸುವ ಮತ್ತೊಂದು ಮುಖವೂ ಆಕೆಯ ಪಾತ್ರಕ್ಕಿದೆ.

ಈ ಅಪರೂಪದ ಪಾತ್ರಕ್ಕಾಗಿ ಅಲಿಯಾ ತಮ್ಮ ಬಾಡಿಲಾಂಗ್ವೇಜ್‌, ಡೈಲಾಗ್ ಡೆಲಿವರಿಯಲ್ಲಿ ಸಾಕಷ್ಟು ಮಾರ್ಪಾಟು ಮಾಡಿಕೊಂಡಿವುದು ಟೀಸರ್‌ನಿಂದ ಕಂಡುಬರುತ್ತದೆ. ಸಂಜಯ್ ಲೀಲಾ ಬನ್ಸಾಲಿ ನಿರ್ದೇಶನದ ಹತ್ತನೇ ಚಿತ್ರವಿದು. ಬನ್ಸಾಲಿಗೆ ಹುಟ್ಟುಹಬ್ಬ ಕೋರಿರುವ ಬಾಲಿವುಡ್‌ ತಾರೆಯರು ಅಲಿಯಾ ಪಾತ್ರವನ್ನು ಮನದುಂಬಿ ಹೊಗಳಿದ್ದಾರೆ. ‘ಗಂಗೂಬಾಯಿ ಕಾಥಿಯಾವಾಡಿ’ 2021ರ ಜುಲೈ 30ರಂದು ತೆರೆಕಾಣಲಿದೆ.

Categories
ಸಿನಿ ಸುದ್ದಿ

ನನ್ನ ಸೆಲಿಬ್ರಿಟಿಗಳಿಂದ ತಪ್ಪಾಗಿದ್ದರೆ ಸಾರಿ‌ ಸರ್!‌ ಹೀಗಂತ ದರ್ಶನ್ ಜಗ್ಗೇಶ್‌ಗೆ ಕ್ಷಮೆ ಕೋರಿ ದೊಡ್ಡೋರಾದರು!!

ಜಗ್ಗೇಶ್‌ ಅವರ ಮೇಲೆ ಇತ್ತೀಚೆಗೆ ದರ್ಶನ್‌ ಫ್ಯಾನ್ಸ್‌ ಮುಗಿಬಿದ್ದದ್ದು ದೊಡ್ಡ ಸುದ್ದಿಯಾಗಿದ್ದ ಬೆನ್ನಲ್ಲೇ ದರ್ಶನ್‌ ಅವರು ಜಗ್ಗೇಶ್‌ ಅವರಿಗೆ ಸಾರಿ ಕೇಳಿದ್ದಾರೆ! ಅಷ್ಟೇ ಅಲ್ಲ, ಆ ಮೂಲಕ ಅವರು ದೊಡ್ಡತನವನ್ನೂ ಮೆರೆದಿದ್ದಾರೆ. ಹೌದು, ಜಗ್ಗೇಶ್‌ ಅವರು ದರ್ಶನ್‌ ಅವರ ಅಭಿಮಾನಿಗಳ ಬಗ್ಗೆ ಇತ್ತೀಚೆಗೆ ತುಂಬಾನೇ ಕೇವಲವಾಗಿ ಮಾತನಾಡಿದ್ದರು. ಆ ಮಾತು ದೊಡ್ಡ ಸುದ್ದಿಯಾಗಿ, ಎಲ್ಲೆಡೆ ವೈರಲ್‌ ಆಗಿತ್ತು. ಸಾಕಷ್ಟು ವಿವಾದಕ್ಕೀಡಾಗಿತ್ತು. ಜಗ್ಗೇಶ್‌ ಕೂಡ ಸೋಶಿಯಲ್‌ ಮೀಡಿಯಾದಲ್ಲಿ ಸಾಕಷ್ಟು ಮಾತಾಡಿದ್ದರು.

ಅದು ಸಹಜವಾಗಿಯೇ ದರ್ಶನ್‌ ಅವರ ಫ್ಯಾನ್ಸ್‌ಗೆ ಬೇಸರವಾಗಿತ್ತು. ರೊಚ್ಚಿಗೆದ್ದ ದರ್ಶನ್‌ ಫ್ಯಾನ್ಸ್‌ , ಇತ್ತೀಚೆಗೆ ಜಗ್ಗೇಶ್‌ ಅಭಿನಯದ “ತೋತಾಪುರಿ” ಚಿತ್ರದ ಚಿತ್ರೀಕರಣ ನಡೆಯುವ ವೇಳೆ ದಿಢೀರನೆ ದರ್ಶನ್‌ ಫ್ಯಾನ್ಸ್‌ ಮುತ್ತಿಗೆ ಹಾಕಿ ಆಕ್ರೋಶಗೊಂಡಿದ್ದರು. ಜಗ್ಗೇಶ್‌ ಕೂಡ ಅದರಿಂದ ಕಕ್ಕಾಬಿಕ್ಕಿಯಾಗಿದ್ದರು. ಮರುದಿನ ಅವರು ಸೋಶಿಯಲ್‌ ಮೀಡಿಯಾದಲ್ಲಿ ಪ್ರತಿಕ್ರಿಯಿಸಿದ್ದರು. ಆದರೆ, ದರ್ಶನ್‌ ಮಾತ್ರ ಜಗ್ಗೇಶ್‌ ಅವರ ಮಾತಿಗೆ ಯಾವುದೇ ಉತ್ತರ ನೀಡಿರಲಿಲ್ಲ. ಜಗ್ಗೇಶ್‌ ಮಾತಾಡಿದ್ದ ವಿಷಯಕ್ಕೆ ಸಂಬಂಧಿಸಿದಂತೆ, ವಾಹಿನಿಯೊಂದರ ಮುಂದೆ ಪ್ರತಿಕ್ರಿಯಿಸಿರುವ ದರ್ಶನ್‌, “ನೋಡಿ, ಇದು ಎಲ್ಲಿಂದ ಎಲ್ಲಿಗೆ ಸ್ಪ್ರೆಡ್‌ ಆಯ್ತು ನನಗೆ ಗೊತ್ತಿಲ್ಲ. ಅಲ್ಲೀ ಏನಾಯ್ತು ಅನ್ನೋದು ಗೊತ್ತಿಲ್ಲ. ಬಟ್‌ ಒಂದು ನನ್ನ ಸೆಲಿಬ್ರಿಟಿಗಳಿಂದ ಅವರಿಗೆ ಬೇಜಾರಾಗಿದ್ದರೆ ನನ್‌ ಸೆಲಿಬ್ರಿಟಿಗಳ ಪರವಾಗಿ ನಾನು ಕ್ಷಮೆ ಕೋರುತ್ತೇನೆ. ಅವರು ಸೀನಿಯರ್.‌ ದಯವಿಟ್ಟು ಕ್ಷಮಿಸಿಬಿಡಿ ಜಗ್ಗೇಶ್‌ ಸಾರ್.‌ ಅವರು ದೊಡ್ಡೋರು” ಅಂತ ಹೇಳುವ ಮೂಲಕ ನಿಜಕ್ಕೂ ದೊಡ್ಡತನ ಮೆರೆದಿದ್ದಾರೆ ದರ್ಶನ್.‌


ಜಗ್ಗೇಶ್‌ ಅವರು ಇತ್ತೀಚೆಗೆ ಮಾತನಾಡುವಾಗ, “ಎಂಥಾ ಟೈಮಲ್ಲಿ ಅವರ ಪರ ನಾನಿದ್ದೆ. ಒಮ್ಮೆ ಪೊಲೀಸರು ಬರಿಗಾಲಲ್ಲಿ ನಿಲ್ಲಿಸಿದ್ದರು. ಆಗ ನಾನು ಅವರ ಜೊತೆಗಿದ್ದೆ. ಆಗೆಲ್ಲಾ ಆಗ ಯಾಕೆ ಅಭಿಮಾನಿಗಳು ಬರಲಿಲ್ಲ” ಎಂದು ಜಗ್ಗೇಶ್‌ ಮಾತಾಡಿದ್ದರು. ಆದರೆ, ದರ್ಶನ್‌ ಅವರ ಮಾತುಗಳನ್ನು ಕೇಳಿಸಿಕೊಂಡಿದ್ದರೂ ಸುಮ್ಮನಿದ್ದರು. ಆದರೆ, ವಾಹಿನಿಯೊಂದರ ಜೊತೆ ಮಾತಾಡುವಾಗ, “ನಮ್‌ ಸೆಲಿಬ್ರಿಟಿಗಳಿಂದ ತಪ್ಪಾಗಿದ್ದರೆ ಕ್ಷಮಿಸಿ. ನಮ್ಮ ಸೆಲಿಬ್ರಿಟಿಗಳು ಹೋಗಿದ್ದು ಗೊತ್ತಿಲ್ಲ. ಅಲ್ಲಿ ಏನಾಯ್ತು ಅನ್ನೋದು ಗೊತ್ತಿಲ್ಲ. ಆದರೂ ಅವರು ನಮ್ಮ ಸೀನಿಯರ್.‌ ತುಂಬಾ ದೊಡ್ಡೋರು. ಅವರಿಗೆ ನಾನು ನಮ್‌ ಸೆಲಿಬ್ರಿಟಿಗಳ ಪರವಾಗಿ ಕ್ಷಮೆ ಕೇಳ್ತೀನಿ” ಎನ್ನುವ ಮೂಲಕ ದೊಡ್ಡತನ ಮೆರೆದಿದ್ದಾರೆ.
ಜಗ್ಗೇಶ್‌, ಅವರೂ ಸಹ ಸೋಶಿಯಲ್‌ ಮೀಡಿಯಾದಲ್ಲಿ ಒಂದು ವಿಡಿಯೋ ಮೂಲಕ ಪದೇ ಪದೇ ಇಂಡಸ್ಟ್ರಿ ಹಾಳಾಗೋಯ್ತು, ಒಳರಾಜಕೀಯ ನಡೀತಾ ಇದೆ ಅಂತ ಹೇಳಿಕೊಂಡಿದ್ದರು. ಆದರೆ, ದರ್ಶನ್‌ ಮಾತ್ರ ಒಂದೇ ಮಾತಲ್ಲಿ ಉತ್ತರ ಕೊಡುವ ಮೂಲಕ ವಿವಾದಕ್ಕೆ ಫುಲ್‌ ಸ್ಟಾಪ್‌ ಇಟ್ಟಿದ್ದಾರೆ. ಅದೇನೆ ಇದ್ದರೂ, ದರ್ಶನ್‌ ಅವರು ಅವರ ಫ್ಯಾನ್ಸ್‌ಗೆ ತುಂಬಾ ಇಷ್ಟ ಆಗೋದು, ಫ್ಯಾನ್ಸ್‌ಗಳನ್ನು ಸೆಲಿಬ್ರಿಟಿಗಳು ಎಂದು ಕರೆದಾಗ. ಈಗ ಅಭಿಮಾನಿಗಳನ್ನು ಸೆಲಿಬ್ರಿಟಿಗಳು ಅಂತ ಹೇಳಿ ಮತ್ತಷ್ಟು ಫಾನ್ಸ್‌ಗೆ ಇಷ್ಟವಾಗಿದ್ದಾರೆ.

 

ಮನಸು ಹಗುರವಾಯಿತು- ಧನ್ಯವಾದ ದರ್ಶನ್

ಜಗ್ಗೇಶ್‌ ಟ್ವೀಟ್‌ ಮೂಲಕ ದಚ್ಚುಗೆ ಧನ್ಯವಾದ 

ಹೀಗಂತ ನಟ ಜಗ್ಗೇಶ್‌, ಟ್ವೀಟ್‌ ಮಾಡಿದ್ದಾರೆ. ಯಾವಾಗ ದರ್ಶನ್‌ ಅವರು ವಾಹಿನಿಯೊಂದರ ಮೂಲಕ ಜಗ್ಗೇಶ್‌ ಅವರಿಗೆ ಕ್ಷಮೆ ಇರಲಿ ಅಂತ ಹೇಳಿಕೆ ಕೊಟ್ಟರೋ, ಆಗಲೇ, ಜಗ್ಗೇಶ್‌ ಅವರು ತಮ್ಮ ಟ್ವೀಟ್‌ ಮೂಲಕ ದರ್ಶನ್‌ ಅವರಿಗೆ ಧನ್ಯವಾದ ಅರ್ಪಿಸಿದ್ದಾರೆ. ಅವರ ಟ್ವೀಟ್‌ನಲ್ಲಿ ” ಸಮಯ ಸಂದರ್ಭ, ವಿಷ ಘಳಿಗೆ, ಪ್ರೀತಿ ವಿಶ್ವಾಸಕ್ಕೆ, ತಾತ್ಕಾಲಿಕ ಸಮಸ್ಯೆ. ವೈಶಾಲ್ಯತೆ ಚಿಂತನೆ ಹೃದಯ ಇದ್ದಾಗ, ಅಪನಂಬಿಕೆ ದೂರ ಸರಿದು, ಮತ್ತೆ ಸೂರ್ಯ ಪ್ರಜ್ವಲಿಸುತ್ತಾನೆ.

ಕನ್ನಡಕ್ಕೆ ಒಗ್ಗಟ್ಟಿರಲಿ, ಧನ್ಯವಾದ ದಾಸ ದರ್ಶನ್. ಮನಸು ಹಗುರವಾಯಿತು. ಧನ್ಯವಾದ ಮಾಧ್ಯಮ ಮಿತ್ರರಿಗೆ, ಧನ್ಯವಾದ ಕನ್ನಡದ ಮನಗಳಿಗೆ, ಇನ್ನೆಂದೂ  ಇಂತಹ ದಿನ ಬರದಿರಲಿ” ಎಂದು ಟ್ವೀಟ್‌ ಮಾಡಿದ್ದಾರೆ.

 

Categories
ಸಿನಿ ಸುದ್ದಿ

ಬದಲಾವಣೆ ಬಯಸೋದಲ್ಲ, ನಾವು ಬದಲಾಗಬೇಕು… ಮುಂದುವರೆದ ಅಧ್ಯಾಯ ಡೈಲಾಗ್ ಟೀಸರ್‌ ಗೆ ಭರಪೂರ ಮೆಚ್ಚುಗೆ

ನಟ ಆದಿತ್ಯ ಅಭಿನಯದ “ಮುಂದುವರೆದ ಅಧ್ಯಾಯ” ಚಿತ್ರ ಇನ್ನೇನು ಬಿಡುಗಡೆಗೆ ರೆಡಿಯಾಗುತ್ತಿದೆ. ಅದಕ್ಕೂ ಮೊದಲು ಚಿತ್ರ ಈಗ ಜೋರು ಸದ್ದು ಮಾಡುತ್ತಿದೆ. ಅದಕ್ಕೆ ಕಾರಣ, ಚಿತ್ರದ ಡೈಲಾಗ್‌ ಟೀಸರ್.‌ ಹೌದು, ಚಿತ್ರದ ಡೈಲಾಗ್‌ ಟೀಸರ್‌ ಅನ್ನು ಚಿತ್ರತಂಡ ಬಿಡುಗಡೆ ಮಾಡಿದೆ. ಬಿಡುಗಡೆ ಮಾಡಿದ ಕೆಲವೇ ಗಂಟೆಗಳಲ್ಲಿ ಲಕ್ಷಗಟ್ಟಲೆ ವೀಕ್ಷಣೆ ಪಡೆದು, ಎಲ್ಲೆಡೆಯಿಂದಲೂ ಮೆಚ್ಚುಗೆ ಪಡೆಯುತ್ತಿದೆ. ಬಾಲು ಚಂದ್ರಶೇಖರ್ ನಿರ್ದೇಶನದ ಮೊದಲ ಚಿತ್ರವಿದು. ಇನ್ನು ‌ಕಣಜ‌ ಎಂಟರ್ಪ್ರೈಸಸ್ ನಿರ್ಮಾಣದ ಈ ಚಿತ್ರಕ್ಕೆ ಆದಿತ್ಯ ಹೀರೋ.

ಉಳಿದಂತೆ ಚಿತ್ರದಲ್ಲಿ ಮುಖ್ಯಮಂತ್ರಿ ಚಂದ್ರು, ಜೈ ಜಗದೀಶ್‌, ಸಂದೀಪ್‌ ಕುಮಾರ್‌, ಅಜಯ್‌ ರಾಜ್‌, ಚಂದನ ಗಡ, ಆಶಿಕಾ ಸೋಮಶೇಖರ್‌, ವಿನಯ್‌ ಕೃಷ್ಣಸ್ವಾಮಿ, ವಿನೋದ್‌, ಶೋಭನ್‌ ಇತರರು ನಟಿಸಿದ್ದಾರೆ. ಅನೂಪ್ ಸೀಳಿನ್ ಹಿನ್ನಲೆ‌ ಸಂಗೀತವಿದೆ. ಜಾನಿ ನಿತಿನ್ ಸಂಗೀತ ನೀಡಿದ್ದಾರೆ. ದಿಲೀಪ್ ಛಾಯಾಗ್ರಹಣವಿದೆ. “ಉಗ್ರಂ” ಶ್ರೀಕಾಂತ್ ಸಂಕಲನ ಮಾಡಿದ್ದಾರೆ. ಚಿತ್ರ ಈಗಾಗಲೇ ಬಿಡುಗಡೆಗೆ ಸಜ್ಜಾಗಿದ್ದು, ಮಾರ್ಚ್ 18ರಂದು ಬಿಡುಗಡೆಯಾಗಲಿದೆ.


ಸದ್ಯಕ್ಕೆ ಡೈಲಾಗ್‌ ಟೀಸರ್‌ಗೆ ಸಿಕ್ಕಾಪಟ್ಟೆ ಮೆಚ್ಚುಗೆ ಸಿಗುತ್ತಿದೆ. ಅದಕ್ಕೆ ಕಾರಣ ಡೈಲಾಗ್ಸ್ ಹಾಗೂ ಹಿನ್ನಲೆ‌ ಸಂಗೀತ. ಅಲ್ಲಿರುವ ಒಂದಷ್ಟು ಡೈಲಾಗ್‌ ಬಗ್ಗೆ ಹೇಳುವುದಾದರೆ, “ನಾವೇ ಗೆಲ್ಲಿಸಿದ ರಾಜಕಾರಣಿಗಳನ್ನ ಬೈತೀವಿ, ನಮ್ಮನ್ನ ಕಾಯೋ ಪೊಲೀಸರನ್ನ ಬೈತೀವಿ, ಸುದ್ದಿ ಮುಟ್ಟಿಸೋ ವಾಹಿನಿಗಳನ್ನ ಬೈತೀವಿ, ಕಷ್ಟ ನಿವಾರಿಸೋ ಡಾಕ್ಟರ್‌ಗಳನ್ನ ಬೈತೀವಿ, ಅನ್ನ ಹಾಕೋ ರೈತ, ಪಾಠ ಮಾಡೋ ಮೇಷ್ಟ್ರು , ಊಟ ಕೊಡೊ ಹೋಟ್ಲು, ಮನೆ ತಲುಪಿಸೋ ಡ್ರೈವರ್ , ನಮ್ಮನ್ನ ತಿದ್ದೋ ಕಲಾವಿದ ಹೀಗೆ … ಎಲ್ಲರನ್ನೂ ಬೈತಿವಿ. ಆದರೆ ನಾವೂ ಇವ್ರಲ್ಲೇ ಒಬ್ಬರಾಗಿದಿವಿ ಅನ್ನೋದೇ ಮರೀತಿವಿ. ಬದಲಾವಣೆ ಬಯಸುವುದಲ್ಲ. ನಾವು ಬದಲಾಗೋದು.

ಎಷ್ಟೋ ಕ್ರೈಂ ಕಥೆಗಳ ನಡುವೆ ಒಂದು ಕ್ರಾಂತಿಯ ಕಥೆ… ಈ ನನ್ನ ಮುಂದುವರೆದ ಅಧ್ಯಾಯ” ಹೀಗೆ ಸಾಗುವ ಡೈಲಾಗ್‌ ಟೀಸರ್‌ನಲ್ಲಿ ಒಂದಷ್ಟು ವಿಷಯವಿದೆ ಅನ್ನುವುದಂತೂ ನಿಜ. ಈ ಡೈಲಾಗ್‌ ಟೀಸರ್‌ ನೋಡಿದವರಿಗೆ ಸಿನಿಮಾ ನೋಡಲೇಬೇಕು ಎಂಬಷ್ಟರಮಟ್ಟಿಗೆ ಕುತೂಹಲ ಮೂಡಿಸಿರುವುದಂತೂ ದಿಟ.

Categories
ಸಿನಿ ಸುದ್ದಿ

‘ಪ್ರೀತಿ, ಮದುವೆ ಇತ್ಯಾದಿ’ಯಲ್ಲಿ ಶ್ವೇತಾ ಪ್ರಸಾದ್; ಕಿರಿಕ್ ಕೀರ್ತಿ ನಿರ್ದೇಶನದ ಚಿತ್ರದ ಹೀರೋ ಲಿಖಿತ್ ಶೆಟ್ಟಿ

ನಿರೂಪಕ ಕಿರಿಕ್ ಕೀರ್ತಿ ಚೊಚ್ಚಲ ನಿರ್ದೇಶನದ ‘ಪ್ರೀತಿ, ಮದುವೆ ಇತ್ಯಾದಿ’ ಚಿತ್ರದ ನಾಯಕಿಯಾಗಿ ಶ್ವೇತಾ ಪ್ರಸಾದ್ ಆಯ್ಕೆಯಾಗಿದ್ದಾರೆ. ಈ ಹಿಂದಿನ ‘ಸಂಕಷ್ಟಕರ ಗಣಪತಿ’ ಚಿತ್ರದ ನಟ ಲಿಖಿತ್ ಶೆಟ್ಟಿ ಚಿತ್ರದ ಹೀರೋ ಎನ್ನುವುದು ವಾರದ ಹಿಂದೆಯೇ ಖಾತ್ರಿಯಾಗಿತ್ತು. ಇದೀಗ ‘ರಾಧಾ ರಮಣ’ ಧಾರಾವಾಹಿ ಖ್ಯಾತಿಯ ಶ್ವೇತಾ ಪ್ರಸಾದ್ ಚಿತ್ರದ ನಾಯಕಿಯಾಗಿ ನಟಿಸಲಿದ್ದಾರೆ. ಮಾರ್ಚ್‌ ಮಧ್ಯದಲ್ಲಿ ಸಿನಿಮಾ ಶೂಟಿಂಗ್ ಆರಂಭಿಸಲಿದೆ ಎನ್ನಲಾಗಿದೆ.

‘ಶ್ರೀರಸ್ತು ಶುಭಮಸ್ತು’ ಸೀರಿಯಲ್‌ ಮೂಲಕ ಕಿರುತೆರೆಗೆ ಪದಾರ್ಪಣೆ ಮಾಡಿದ ಶ್ವೇತಾ ಪ್ರಸಾದ್ ಅವರಿಗೆ ‘ರಾಧಾ ರಮಣ’ ಧಾರಾವಾಹಿ ದೊಡ್ಡ ಹೆಸರು ತಂದುಕೊಟ್ಟಿತು. ನಂತರ ದೀಪಕ್ ಮಧುವನಹಳ್ಳಿ ನಿರ್ದೇಶನದ ‘ಕಳ್ಬೆಟ್ಟದ ದರೋಡೆಕೋರರು’ ಚಿತ್ರದೊಂದಿಗೆ ಬೆಳ್ಳಿತೆರೆಗೆ ಪರಿಚಯವಾದರು. ಇದೀಗ ‘ಪ್ರೀತಿ, ಮದುವೆ ಇತ್ಯಾದಿ’ ತಂಡಕ್ಕೆ ಸೇರ್ಪಡೆಗೊಂಡಿದ್ದಾರೆ. ಚಿತ್ರದ ಹೀರೋ ಲಿಖಿತ್ ತುಳು ಚಿತ್ರರಂಗದಲ್ಲಿ ಪರಿಚಿತ ಹೆಸರು. ‘ಫ್ಯಾಮಿಲಿ ಪ್ಯಾಕ್‌’ ಚಿತ್ರೀಕರಣ ಮುಗಿಸಿರುವ ಅವರು ಕೀರ್ತಿ ನಿರ್ದೇಶನದಲ್ಲಿ ನಟಿಸಲಿದ್ದಾರೆ. ಆರ್‌ಜೆ ಆಗಿ ಪರಿಚಯವಾದ ಕಿರಿಕ್ ಕೀರ್ತಿ ಬಿಗ್‌ಬಾಸ್‌ ಮನೆಗೂ ಹೋಗಿ ಬಂದಿದ್ದರು. ‘ಪ್ರೀತಿ, ಮದುವೆ ಇತ್ಯಾದಿ’ಯೊಂದಿಗೆ ನಿರ್ದೇಶಕರಾಗುತ್ತಿದ್ದಾರೆ.

Categories
ಸಿನಿ ಸುದ್ದಿ

‘ಟೆಡ್ಡಿ’ ಟ್ರೇಲರ್ ಔಟ್; ಇದು ಆರ್ಯ ನಟನೆಯ ಮೆಡಿಕಲ್ ಕ್ರೈಂ ತಮಿಳು ಸಿನಿಮಾ

ಆರ್ಯ ಮತ್ತು ಸಯೇಷಾ ನಟನೆಯ ‘ಟೆಡ್ಡಿ’ ತಮಿಳು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಶಕ್ತಿ ಸೌಂದರ್ ರಾಜನ್ ನಿರ್ದೇಶನದ ಈ ಸಿನಿಮಾದಲ್ಲಿ ಟೆಡ್ಡಿ ಬೇರ್‌ ಕೂಡ ಒಂದು ಮಹತ್ವದ ಪಾತ್ರವಿದೆ! ‌ಟ್ರೇಲರ್ ವೀಕ್ಷಿಸಿದರೆ, ನಿರ್ದೇಶಕರು ಹಾಲಿವುಡ್ ಚಿತ್ರವೊಂದರ ಸ್ಫೂರ್ತಿಯಿಂದ ಚಿತ್ರಕಥೆ ಹೆಣೆದಿರುವಂತಿದೆ. ಹಾಲಿವುಡ್ ಸ್ಫೂರ್ತಿಗೆ ತಮಿಳು ಸಿನಿಮಾ ಮಸಾಲೆ ಬೆರೆಸಿದ್ದಾರೆ. ಆರ್ಯ ಹೀರೋ ಆಗಿ ನಟಿಸಿದ್ದು ಅವರೊಂದಿಗೆ ಟೆಡ್ಡಿ ಇರುವ ಹತ್ತಾರು ಸನ್ನಿವೇಶಗಳು ಕಾಣಿಸುತ್ತವೆ. ಇಲ್ಲಿ ಟೆಡ್ಡಿ, ನಾಯಕನೊಂದಿಗೆ ಮಾತನಾಡುತ್ತಾ ಆತನ ಸ್ನೇಹಿತನಂತೆ ಓಡಾಡುತ್ತದೆ.

ಶಕ್ತಿ ಸೌಂದರ್ ರಾಜನ್‌ ಅವರ ಹಿಂದಿನ ಚಿತ್ರಗಳಿಗೂ ಹಾಲಿವುಡ್ ಪ್ರೇರಣೆಯಿತ್ತು. ನೈಗಾಳ್‌ ಜಾಕಿರಾಥೈ (ಟರ್ನರ್ ಅಂಡ್ ಹೂಚ್‌), ಮಿರುಧನ್‌ (ಝೋಂಬಿ ಥ್ರಿಲ್ಲರ್‌ಗಳು), ಅರ್ಮಗೆಡಾನ್‌ (ಟಿಕ್ ಟಿಕ್ ಟಿಕ್‌) ಕೆಲವು ಪ್ರಮುಖ ಉದಾಹರಣೆ. ಇದೀಗ ಅವರಿಗೆ ‘ಟೆಡ್‌’ ಚಿತ್ರಕ್ಕೆ ಮ್ಯಾಕ್‌ಫರ್ಲೇನ್‌ ಅವರ ಟೆಡ್ ಮೂವಿ ಸರಣಿಗಳೇ ಪ್ರೇರಣೆ ಎನ್ನಲಾಗಿದೆ. ಇಲ್ಲಿ ಟೆಡ್ಡಿ ತಮಾಷೆಯ ಗೊಂಬೆಯಲ್ಲಿ. ಮೆಡಿಕಲ್ ಕ್ರೈಂ ಥ್ರಿಲ್ಲರ್‌ ಕತೆಯ ಹಿನ್ನೆಲೆಯಲ್ಲಿ ಟೆಡ್ಡಿ ಪ್ರಮುಖ ಪಾತ್ರಧಾರಿಯಾಗಿ ಕಾಣಿಸುತ್ತದೆ.

ಮೆಡಿಕಲ್‌ ಕ್ರೈಂಗೆ ಸಂಬಂಧಿಸಿದಂತೆ ದೊಡ್ಡ ವ್ಯೂಹವೊಂದನ್ನು ಬೇಧಿಸುವಲ್ಲಿ ನಾಯಕನಿಗೆ ಹೆಗಲುಕೊಡುತ್ತದೆ ಟೆಡ್ಡಿ. ನಾಯಕಿಯಾಗಿ ಸಾಯೇಷಾ ನಟಿಸಿದ್ದು, ಸತೀಶ್ ಮತ್ತು ಸಾಕ್ಷಿ ಅಗರ್‌ವಾಲ್‌ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಸಿನಿಮಾ ಥಿಯೇಟರ್‌ನಲ್ಲಿ ಬಿಡುಗಡೆಯಾಗುತ್ತಿಲ್ಲ. ಮಾರ್ಚ್‌ 12ರಿಂದ ಡಿಸ್ನೀ ಪ್ಲಸ್ ಹಾಟ್‌ಸ್ಟಾರ್‌ ಓಟಿಟಿ ಫ್ಲಾಟ್‌ಫಾರ್ಮ್‌ನಲ್ಲಿ ಪ್ರಸಾರವಾಗಲಿದೆ.

Categories
ಸಿನಿ ಸುದ್ದಿ

ಸಲಗ ಚಿತ್ರ ನೋಡ್ತೀನಿ ಅಂದ್ರು ತೇಜಸ್ವಿ ಸೂರ್ಯ – ಸಲಗ ತಂಡಕ್ಕೆ ಶುಭಕೋರಿದ ಸಂಸದ

“ದುನಿಯಾ” ವಿಜಯ್‌ ಅಭಿನಯಿಸಿ, ಮೊದಲ ಬಾರಿಗೆ ನಿರ್ದೇಶಿಸಿರುವ “ಸಲಗ” ಚಿತ್ರ ಇನ್ನೇನು ಬಿಡುಗಡೆಗೆ ಸಜ್ಜಾಗಿದೆ. ಬಿಡುಗಡೆ ಮುನ್ನವೇ ಸಾಕಷ್ಟು ಕುತೂಹಲವನ್ನೂ ಮೂಡಿಸಿದೆ. ಚಿತ್ರರಂಗದಲ್ಲಿ ಸದ್ಯಕ್ಕೆ ಪೋಸ್ಟರ್‌ ಮತ್ತು ಹಾಡುಗಳ ಮೂಲಕ ಎಲ್ಲೆಡೆ ನಿರೀಕ್ಷೆ ಹುಟ್ಟಿಸಿರುವ “ಸಲಗ” ಚಿತ್ರವನ್ನು ನೋಡಲು ಸ್ವತಃ ಸಂಸದ ತೇಜಸ್ವಿ ಸೂರ್ಯ ಅವರೇ ಉತ್ಸುಕಗೊಂಡಿದ್ದಾರೆ.

ಹೌದು, ಇತ್ತೀಚೆಗೆ “ಸಲಗ” ಚಿತ್ರ ನಿರ್ದೇಶಕ “ದುನಿಯಾ” ವಿಜಯ್‌ ಹಾಗೂ ನಿರ್ಮಾಪಕ ಕೆ.ಪಿ.ಶ್ರೀಕಾಂತ್‌ ಅವರು ಸಂಸದ ತೇಜಸ್ವಿ ಸೂರ್ಯ‌ ಅವರನ್ನು ಭೇಟಿ ಮಾಡಿ ಒಂದಷ್ಟು ಚರ್ಚಿಸಿದ್ದಾರೆ. ಬೆಂಗಳೂರು ದಕ್ಷಿಣ ಕ್ಷೇತ್ರದ ಸಂಸದ ತೇಜಸ್ವಿ ಸೂರ್ಯ ಅವರು ತಮ್ಮದೇ ಕ್ಷೇತ್ರದಲ್ಲಿರುವ ದುನಿಯಾ ವಿಜಯ್ ಅವರ ಮನೆಗೆ ಇತ್ತೀಚೆಗಷ್ಟೇ, ಭೇಟಿ ನೀಡಿದ್ದರು. ನಿರ್ಮಾಪಕ ಕೆ.ಪಿ ಶ್ರೀಕಾಂತ್ ಅವರಿಗೆ ಬಹಳ‌ ಆತ್ಮೀಯರಾಗಿರುವ ತೇಜಸ್ವಿ ಸೂರ್ಯ, ಕ್ಷೇತ್ರದಲ್ಲಿ ರೌಂಡ್ಸ್ ಮಾಡುವ ವೇಳೆ “ದುನಿಯಾ” ವಿಜಯ್‌ ಅವರ ಮನೆಗೆ ಶ್ರೀಕಾಂತ್ ಜೊತೆಗೆ ಭೇಟಿ ನೀಡಿದ್ದಾರೆ.

“ಸಲಗ” ಚಿತ್ರದ ಬಗ್ಗೆ ಸಾಕಷ್ಟು ವಿಚಾರಗಳನ್ನ ತಿಳಿದುಕೊಂಡಿರುವ ತೇಜಸ್ವಿ ಅವರು, ಚಿತ್ರದ ಟೀಸರ್‌, ಟ್ರೇಲರ್‌ ಹಾಗು ಹಾಡುಗಳನ್ನೂ ನೋಡಿದ್ದಾರೆ. ಆ ಬಗ್ಗೆ ಮೆಚ್ಚುಗೆ ವ್ಯಕ್ತಪಡಿಸಿ, ಚಿತ್ರದ ಕುರಿತು ಕುತೂಹಲ ವ್ಯಕ್ತಪಡಿಸಿದ್ದಾರೆ. ಈ ವೇಳೆ ಅವರು ಸಿನಿಮಾ ನೋಡ್ತೀನಿ ಅಂತಾನೂ ಹೇಳಿದ್ದಾರೆ. “ದುನಿಯಾ” ವಿಜಯ್ ಅವರ ಚೊಚ್ಚಲ‌ ನಿರ್ದೇಶನಕ್ಕೆ ಒಳ್ಳೆಯದಾಗಲಿ ಎಂದು ಶುಭಕೋರಿದ್ದಾರೆ ತೇಜಸ್ವಿ ಸೂರ್ಯ.

Categories
ಸಿನಿ ಸುದ್ದಿ

ನಾನು ಬಿಗ್‌ಬಾಸ್‌ ಮನೆಗೆ ಹೋಗಿದ್ದು ಅಮ್ಮನ ಚಿಕಿತ್ಸೆ ವೆಚ್ಚ ಭರಿಸಲು – ರಾಖಿ ಸಾವಂತ್ ಹೇಳಿಕೆ

ನಟಿ ರಾಖಿ ಸಾವಂತ್‌ ಇಂದು ಇನ್‌ಸ್ಟಾಗ್ರಾಂನಲ್ಲಿ ಕ್ಯಾನ್ಸರ್‌ನಿಂದ ಬಳಲುತ್ತಿರುವ ತಮ್ಮ ತಾಯಿಯ ಫೋಟೋ ಹಂಚಿಕೊಂಡಿದ್ದಾರೆ. ಅವರ ಆರೋಗ್ಯಕ್ಕಾಗಿ ಹಾರೈಸಿ ಎನ್ನುವುದು ಅವರ ಮನವಿ. ಸದಾ ವಿವಾದಗಳಿಂದ ಸುದ್ದಿಯಲ್ಲಿರುತ್ತಿದ್ದ ರಾಖಿ ಸಾವಂತ್‌ ಮೊನ್ನೆಯಷ್ಟೇ ಮುಗಿದ ಬಿಗ್‌ಬಾಸ್‌ 14ನೇ ಸೀಸನ್‌ ಸ್ಪರ್ಧಿಯಾಗಿದ್ದರು. ಬಿಗ್‌ಬಾಸ್ ಮನೆಯಲ್ಲಿದ್ದಷ್ಟೂ ದಿನ ಆಗಿಂದಾಗ್ಗೆ ಅವರು ಅನಾರೋಗ್ಯಕ್ಕೆ ಈಡಾಗಿರುವ ತಮ್ಮ ತಾಯಿಯ ಬಗ್ಗೆ ಪ್ರಸ್ತಾಪಿಸುತ್ತಿದ್ದರು. ಇಂದು ತಾಯಿಯ ಫೋಟೋ ಹಂಚಿಕೊಂಡು, ಅವರ ಆರೋಗ್ಯಕ್ಕಾಗಿ ಪ್ರಾರ್ಥಿಸಿ ಎಂದು ಬರೆದಿದ್ದಾರೆ.

ಮೊನ್ನೆ ಬಿಗ್‌ಬಾಸ್‌ನಲ್ಲಿ ಫೈನಲ್ ತಲುಪಿದ ಐವರು ಸ್ಪರ್ಧಿಗಳಲ್ಲಿ ರಾಖಿ ಸಾವಂತ್ ಕೂಡ ಒಬ್ಬರಾಗಿದ್ದರು. ರಾಹುಲ್ ವೈದ್ಯ, ರುಬಿನಾ ದಲೈಕ್‌, ನಿಕ್ಕಿ ತಂಬೋಲಿ, ಅಲಿ ಗೋನಿ ಫೈನಲ್ ಪಟ್ಟಿಯಲ್ಲಿದ್ದ ಇತರೆ ಸ್ಪರ್ಧಿಗಳು. ಈ ಹಂತದಲ್ಲಿ ಹಣದ ಅಗತ್ಯವಿದ್ದ ರಾಖಿ ಸ್ಪರ್ಧೆಯಿಂದ ಹೊರಗುಳಿಯಲು ನಿರ್ಧರಿಸಿದರು. ಅದರಂತೆ ಅವರು ಹದಿನಾಲ್ಕು ಲಕ್ಷ ರೂಪಾಯಿ ತೆಗೆದುಕೊಂಡು ಬಿಗ್‌ಬಾಸ್‌ ಮನೆಯಿಂದ ಹೊರಬಿದ್ದರು.

 

“ಕಾನ್ಸರ್‌ನಿಂದ ಬಳಲುತ್ತಿರುವ ಅಮ್ಮನಿಗೆ ಕಿಮೋತೆರಪಿ ಮಾಡಿಸಲು ನನಗೆ ಹಣದ ಅವಶ್ಯಕತೆ ಇತ್ತು. ನಾನು ಬಿಗ್‌ಬಾಸ್ ಮನೆಗೆ ಹೋಗಿದ್ದೂ ಕೂಡ ಅದೇ ಕಾರಣಕ್ಕೆ. ತಾಯಿಯ ಅನಾರೋಗ್ಯವಲ್ಲದೆ ನನಗೆ ಹಲವಾರು ವೈಯಕ್ತಿಕ ಸಮಸ್ಯೆಗಳಿದ್ದು, ಮಾನಸಿಕವಾಗಿ ನೊಂದಿದ್ದೇನೆ. ಇದೆಲ್ಲರದ ಹೊರತಾಗಿಯೂ ನಾನು ಬಿಗ್‌ಬಾಸ್ ಮನೆಯಲ್ಲಿ ಖುಷಿಯಾಗಿದ್ದೆ. ಪ್ರೇಕ್ಷಕರನ್ನು ರಂಜಿಸಲು ಶ್ರಮಿಸಿದ್ದೇನೆ. ಬಿಗ್‌ಬಾಸ್‌ ನನ್ನ ಬದುಕಿನಲ್ಲಿ ಮತ್ತೆ ವಿಶ್ವಾಸ ತುಂಬಿದೆ” ಎನ್ನುತ್ತಾರೆ ನಟಿ ರಾಖಿ ಸಾವಂತ್‌.

Categories
ಸಿನಿ ಸುದ್ದಿ

ಶಿವರಾಜಕುಮಾರ್ ಸಿನಿರಂಗ ಸ್ಪರ್ಶಕ್ಕೆ 35- ಸಂಭ್ರಮಕ್ಕೆ ಶಿವಣ್ಣ ಪ್ರೀಮಿಯರ್ ಲೀಗ್ ಸೀಸನ್ 1

ಶಿವರಾಜಕುಮಾರ್‌ ಅವರು ಕನ್ನಡ ಸಿನಿಮಾರಂಗಕ್ಕೆ ಬಂದು ೩೫ ವರ್ಷಗಳು ಸಂದಿವೆ. ಈ ಮೂರುವರೆ ದಶಕವನ್ನು ಯಶಸ್ವಿಯಾಗಿ ಮುಗಿಸಿರುವ ಶಿವರಾಜಕುಮಾರ್‌ ಅವರಿಗೆ ಎಲ್ಲೆಡೆಯಿಂದಲೂ ಶುಭಾಶಯ ಹರಿದುಬಂದಿದೆ. ಈಗ ಅವರು ಚಿತ್ರರಂಗಕ್ಕೆ ಎಂಟ್ರಿ ಕೊಟ್ಟು 35 ವರ್ಷ ಪೂರೈಸಿದ ಹಿನ್ನಲೆಯಲ್ಲಿಯೇ ಅವರ ಪ್ರೀತಿಯ ಅಭಿಮಾನಿಗಳು ಆ ಸಂಭ್ರಮದಲ್ಲೇ ಕ್ರಿಕೆಟ್‌ ಪಂದ್ಯಾವಳಿ ಆಯೋಜಿಸಿದ್ದರು‌.

. “ಶಿವಣ್ಣ ಪ್ರೀಮಿಯರ್‌ ಲೀಗ್‌ ಸೀಸನ್‌ ೧” ಫೆಬ್ರವರಿ ೨೦ ಮತ್ತು ೨೧ರಂದು ಎರಡು ದಿನಗಳ ಕಾಲ ಯಶಸ್ವಿಯಾಗಿ ನಡೆದಿದೆ. ಅಂದಹಾಗೆ, ಶಿವ ಸೈನ್ಯ ಮತ್ತು ಶಿವು ಅಡ್ಡ ಬನಶಂಕರಿ ಆಯೋಜಿಸಿದ್ದ ಈ ಟೂರ್ನಮೆಂಟ್‌ಗೆ ಅಭಿಮಾನಿಗಳು, ಸಿನಿಮಾ ತಂತ್ರಜ್ಞರು, ಕಲಾವಿದರು, ಸಿನಿಮಾ ತಂಡಗಳು, ಸಿನಿಮಾ ಪತ್ರಕರ್ತರು ಸೇರಿದಂತೆ ಒಟ್ಟು 12 ತಂಡಗಳು ಭಾಗವಹಿಸಿದ್ದವು.

ಈ ಟೂರ್ನಮೆಂಟ್‌ನಲ್ಲಿ ಭಾಗವಹಿಸಿದ್ದ ರುಸ್ತುಂ ರೈಮ್ಸ್ ( ರೇಮ್ಸ್ ಸಿನೆಮಾ ತಂಡ) ವಿಜಯಶಾಲಿಯಾದರೆ, ರನ್ನರ್ ಅಪ್ ತಂಡವಾಗಿ ಶಿವಸೈನ್ಯ ಸ್ಪಾರ್ಟನ್ಸ್ (ಶಿವಣ್ಣ ಅಭಿಮಾನಿ ಸಂಘ) ಹೊರಹೊಮ್ಮಿದೆ. ಇನ್ನು, ಈ ಕ್ರಿಕೆಟ್‌ ಪಂದ್ಯಾವಳಿಗೆ ಚಾಲನೆ ನೀಡಿ, ಶುಭಕೋರಿದ್ದು ಶಾಸಕ ವಿ.ಸೋಮಣ್ಣ, ಜೊತೆಯಲ್ಲಿ ಅರುಣ್ ಸೋಮಣ್ಣ ಹಾಗೂ ಉಮೇಶ್ ಶೆಟ್ಟಿ ಕೂಡ ಪಂದ್ಯಾವಳಿಗೆ ಸಾಥ್‌ ಕೊಟ್ಟರು.

ಇಡೀ ಟೂರ್ನಮೆಂಟ್ ನಲ್ಲಿ ಮೊದಲ ದಿನದಿಂದ ಕೊನೆ ಕ್ಷಣದವರೆಗೂ ಜೊತೆ ಇದ್ದು, ಎಲ್ಲಾ ವಿಚಾರಗಳಿಗೂ ಸಾಥ್ ಕೊಟ್ಟಿದ್ದು ನಿರ್ಮಾಪಕ ಭಾ.ಮ. ಹರೀಶ್. ವಿಜಯನಗರದ ಬಿಜಿಎಸ್ ಗ್ರೌಂಡ್‌ನಲ್ಲಿ ನಡೆದ ಈ ಪಂದ್ಯಾವಳಿಯಲ್ಲಿ ಧೀರನ್ ರಾಮ್ ಕುಮಾರ್, ದುನಿಯಾ ವಿಜಯ್, ನಿರ್ಮಾಪಕ ಕೆ ಪಿ ಶ್ರೀಕಾಂತ್, ನಟಿ ಸುಮನ್ ನಗರ್ಕರ್ ಹೀಗೆ ಹಲವರು ಆಗಮಿಸಿ, ಕ್ರಿಕೆಟ್‌ ಪಂದ್ಯಾವಳಿ ವೀಕ್ಷಿಸಿ, ಯಶಸ್ವಿಗೊಳಿಸಿದರು.

Categories
ಸಿನಿ‌ ಆ್ಯಡ್ ಸಿನಿ ಸುದ್ದಿ

ಹಿಮದ ನಾಡಲ್ಲಿ ‘ಜೇಮ್ಸ್’ ಚಿತ್ರತಂಡ ; ಕಾಶ್ಮೀರಿ ಮಗು ಜೊತೆ ಪುನೀತ್ ಸೆಲ್ಫಿ!

ಪುನೀತ್ ರಾಜಕುಮಾರ್ ನಟನೆಯ ‘ಜೇಮ್ಸ್‌’ ಸಿನಿಮಾ ಸದ್ಯ ಕಾಶ್ಮೀರದಲ್ಲಿದೆ. ನಿರ್ದೇಶಕ ಚೇತನ್‌ಕುಮಾರ್‌ ಹಿಮದ ನಾಡಿನಲ್ಲಿ ಭರದ ಚಿತ್ರೀಕರಣ ನಡೆಸಿದ್ದಾರೆ. ಬಿಡುವಿನ ವೇಳೆಯಲ್ಲಿ ಅಲ್ಲಿನ ನಿವಾಸಿಗಳೊಂದಿಗೆ ಬೆರೆಯುತ್ತಿದ್ದಾರೆ ಅಪ್ಪು. ಕಾಶ್ಮೀರಿ ಕುಟುಂಬವೊಂದರ ಜೊತೆಗಿನ ಅವರ ಮಾತುಕತೆ, ಮಗು ಜೊತೆಗಿನ ಅವರ ಸೆಲ್ಫಿ ಗಮನಸೆಳೆಯುತ್ತಿವೆ. ಚಿತ್ರದ ತಂತ್ರಜ್ಞರ ಫೋಟೋಗಳೂ ಹೊರಬಿದ್ದಿದ್ದು, ಕೊರೆಯುವ ಚಳಿಯಲ್ಲಿ ನಡೆದಿರುವ ಚಿತ್ರೀಕರಣಕ್ಕೆ ಸಾಕ್ಷ್ಯ ನುಡಿಯುತ್ತಿವೆ.

ಇತ್ತೀಚಿನವರೆಗೂ ‘ಜೇಮ್ಸ್’ ಚಿತ್ರಕ್ಕೆ ಉತ್ತರ ಕರ್ನಾಟಕದಲ್ಲಿ ಚಿತ್ರೀಕರಣ ನಡೆದಿತ್ತು. ಅಲ್ಲಿನ ಶೆಡ್ಯೂಲ್‌ ಮುಗಿದ ನಂತರ ಚಿತ್ರತಂಡ ಕಾಶ್ಮೀರಕ್ಕೆ ಹಾರಿದೆ. ಅಲ್ಲಿ ಹಾಡು, ಆಕ್ಷನ್ ಸೇರಿದಂತೆ ಕೆಲವು ಪ್ರಮುಖ ಸನ್ನಿವೇಶಗಳು ಚಿತ್ರಣಗೊಳ್ಳಲಿವೆ. ಸಾಂಗ್‌ ಶೂಟಿಂಗ್ ಸಂದರ್ಭವೊಂದರಲ್ಲಿ ನೃತ್ಯನಿರ್ದೇಶಕ ಎ.ಹರ್ಷ ಕ್ಯಾಮರಾಗೆ ಪೋಸು ಕೊಟ್ಟಿದ್ದಾರೆ. ಇನ್ನು ವಿಜಯ್ ಅವರ ಸಂಯೋಜನೆಯಲ್ಲಿ ಸಾಹಸ ದೃಶ್ಯಗಳು ಚಿತ್ರೀಕರಣಗೊಳ್ಳಲಿವೆ.

ಈ ಹಿಂದಿನ ಸೂಪರ್‌ಹಿಟ್‌ ‘ರಾಜಕುಮಾರ’ ಚಿತ್ರದಲ್ಲಿ ಪುನೀತ್‌ರಿಗೆ ಜೋಡಿಯಾಗಿದ್ದ ಪ್ರಿಯಾ ಆನಂದ್‌ ‘ಜೇಮ್ಸ್‌’ನಲ್ಲಿ ಮತ್ತೆ ಪವರ್‌ಸ್ಟಾರ್‌ಗೆ ಜೊತೆಯಾಗಿದ್ದಾರೆ. ಅನುಪ್ರಭಾಕರ್‌, ರಂಗಾಯಣ ರಘು, ಸಾಧು ಕೋಕಿಲ, ಮೇಕಾ ಶ್ರೀಕಾಂತ್‌, ಮುಖೇಶ್ ರಿಷಿ, ಆದಿತ್ಯ ಮೆನನ್‌ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಸಂಗೀತ ಸಂಯೋಜನೆ ಚರಣ್ ರಾಜ್‌ ಅವರದು.

error: Content is protected !!