ಪುನೀತ್ ರಾಜಕುಮಾರ್ ನಟನೆಯ ‘ಜೇಮ್ಸ್’ ಸಿನಿಮಾ ಸದ್ಯ ಕಾಶ್ಮೀರದಲ್ಲಿದೆ. ನಿರ್ದೇಶಕ ಚೇತನ್‌ಕುಮಾರ್ ಹಿಮದ ನಾಡಿನಲ್ಲಿ ಭರದ ಚಿತ್ರೀಕರಣ ನಡೆಸಿದ್ದಾರೆ. ಬಿಡುವಿನ ವೇಳೆಯಲ್ಲಿ ಅಲ್ಲಿನ ನಿವಾಸಿಗಳೊಂದಿಗೆ ಬೆರೆಯುತ್ತಿದ್ದಾರೆ ಅಪ್ಪು. ಕಾಶ್ಮೀರಿ ಕುಟುಂಬವೊಂದರ ಜೊತೆಗಿನ ಅವರ ಮಾತುಕತೆ, ಮಗು ಜೊತೆಗಿನ ಅವರ ಸೆಲ್ಫಿ ಗಮನಸೆಳೆಯುತ್ತಿವೆ. ಚಿತ್ರದ ತಂತ್ರಜ್ಞರ ಫೋಟೋಗಳೂ ಹೊರಬಿದ್ದಿದ್ದು, ಕೊರೆಯುವ ಚಳಿಯಲ್ಲಿ ನಡೆದಿರುವ ಚಿತ್ರೀಕರಣಕ್ಕೆ ಸಾಕ್ಷ್ಯ ನುಡಿಯುತ್ತಿವೆ.
ಇತ್ತೀಚಿನವರೆಗೂ ‘ಜೇಮ್ಸ್’ ಚಿತ್ರಕ್ಕೆ ಉತ್ತರ ಕರ್ನಾಟಕದಲ್ಲಿ ಚಿತ್ರೀಕರಣ ನಡೆದಿತ್ತು. ಅಲ್ಲಿನ ಶೆಡ್ಯೂಲ್ ಮುಗಿದ ನಂತರ ಚಿತ್ರತಂಡ ಕಾಶ್ಮೀರಕ್ಕೆ ಹಾರಿದೆ. ಅಲ್ಲಿ ಹಾಡು, ಆಕ್ಷನ್ ಸೇರಿದಂತೆ ಕೆಲವು ಪ್ರಮುಖ ಸನ್ನಿವೇಶಗಳು ಚಿತ್ರಣಗೊಳ್ಳಲಿವೆ. ಸಾಂಗ್ ಶೂಟಿಂಗ್ ಸಂದರ್ಭವೊಂದರಲ್ಲಿ ನೃತ್ಯನಿರ್ದೇಶಕ ಎ.ಹರ್ಷ ಕ್ಯಾಮರಾಗೆ ಪೋಸು ಕೊಟ್ಟಿದ್ದಾರೆ. ಇನ್ನು ವಿಜಯ್ ಅವರ ಸಂಯೋಜನೆಯಲ್ಲಿ ಸಾಹಸ ದೃಶ್ಯಗಳು ಚಿತ್ರೀಕರಣಗೊಳ್ಳಲಿವೆ.
ಈ ಹಿಂದಿನ ಸೂಪರ್‌ಹಿಟ್ ‘ರಾಜಕುಮಾರ’ ಚಿತ್ರದಲ್ಲಿ ಪುನೀತ್‌ರಿಗೆ ಜೋಡಿಯಾಗಿದ್ದ ಪ್ರಿಯಾ ಆನಂದ್ ‘ಜೇಮ್ಸ್’ನಲ್ಲಿ ಮತ್ತೆ ಪವರ್‌ಸ್ಟಾರ್‌ಗೆ ಜೊತೆಯಾಗಿದ್ದಾರೆ. ಅನುಪ್ರಭಾಕರ್, ರಂಗಾಯಣ ರಘು, ಸಾಧು ಕೋಕಿಲ, ಮೇಕಾ ಶ್ರೀಕಾಂತ್, ಮುಖೇಶ್ ರಿಷಿ, ಆದಿತ್ಯ ಮೆನನ್ ಪ್ರಮುಖ ಪಾತ್ರಗಳಲ್ಲಿ ಅಭಿನಯಿಸುತ್ತಿದ್ದಾರೆ. ಸಂಗೀತ ಸಂಯೋಜನೆ ಚರಣ್ ರಾಜ್ ಅವರದು.