‘ಟೆಡ್ಡಿ’ ಟ್ರೇಲರ್ ಔಟ್; ಇದು ಆರ್ಯ ನಟನೆಯ ಮೆಡಿಕಲ್ ಕ್ರೈಂ ತಮಿಳು ಸಿನಿಮಾ

ಆರ್ಯ ಮತ್ತು ಸಯೇಷಾ ನಟನೆಯ ‘ಟೆಡ್ಡಿ’ ತಮಿಳು ಚಿತ್ರದ ಟ್ರೈಲರ್ ಬಿಡುಗಡೆಯಾಗಿದೆ. ಶಕ್ತಿ ಸೌಂದರ್ ರಾಜನ್ ನಿರ್ದೇಶನದ ಈ ಸಿನಿಮಾದಲ್ಲಿ ಟೆಡ್ಡಿ ಬೇರ್‌ ಕೂಡ ಒಂದು ಮಹತ್ವದ ಪಾತ್ರವಿದೆ! ‌ಟ್ರೇಲರ್ ವೀಕ್ಷಿಸಿದರೆ, ನಿರ್ದೇಶಕರು ಹಾಲಿವುಡ್ ಚಿತ್ರವೊಂದರ ಸ್ಫೂರ್ತಿಯಿಂದ ಚಿತ್ರಕಥೆ ಹೆಣೆದಿರುವಂತಿದೆ. ಹಾಲಿವುಡ್ ಸ್ಫೂರ್ತಿಗೆ ತಮಿಳು ಸಿನಿಮಾ ಮಸಾಲೆ ಬೆರೆಸಿದ್ದಾರೆ. ಆರ್ಯ ಹೀರೋ ಆಗಿ ನಟಿಸಿದ್ದು ಅವರೊಂದಿಗೆ ಟೆಡ್ಡಿ ಇರುವ ಹತ್ತಾರು ಸನ್ನಿವೇಶಗಳು ಕಾಣಿಸುತ್ತವೆ. ಇಲ್ಲಿ ಟೆಡ್ಡಿ, ನಾಯಕನೊಂದಿಗೆ ಮಾತನಾಡುತ್ತಾ ಆತನ ಸ್ನೇಹಿತನಂತೆ ಓಡಾಡುತ್ತದೆ.

ಶಕ್ತಿ ಸೌಂದರ್ ರಾಜನ್‌ ಅವರ ಹಿಂದಿನ ಚಿತ್ರಗಳಿಗೂ ಹಾಲಿವುಡ್ ಪ್ರೇರಣೆಯಿತ್ತು. ನೈಗಾಳ್‌ ಜಾಕಿರಾಥೈ (ಟರ್ನರ್ ಅಂಡ್ ಹೂಚ್‌), ಮಿರುಧನ್‌ (ಝೋಂಬಿ ಥ್ರಿಲ್ಲರ್‌ಗಳು), ಅರ್ಮಗೆಡಾನ್‌ (ಟಿಕ್ ಟಿಕ್ ಟಿಕ್‌) ಕೆಲವು ಪ್ರಮುಖ ಉದಾಹರಣೆ. ಇದೀಗ ಅವರಿಗೆ ‘ಟೆಡ್‌’ ಚಿತ್ರಕ್ಕೆ ಮ್ಯಾಕ್‌ಫರ್ಲೇನ್‌ ಅವರ ಟೆಡ್ ಮೂವಿ ಸರಣಿಗಳೇ ಪ್ರೇರಣೆ ಎನ್ನಲಾಗಿದೆ. ಇಲ್ಲಿ ಟೆಡ್ಡಿ ತಮಾಷೆಯ ಗೊಂಬೆಯಲ್ಲಿ. ಮೆಡಿಕಲ್ ಕ್ರೈಂ ಥ್ರಿಲ್ಲರ್‌ ಕತೆಯ ಹಿನ್ನೆಲೆಯಲ್ಲಿ ಟೆಡ್ಡಿ ಪ್ರಮುಖ ಪಾತ್ರಧಾರಿಯಾಗಿ ಕಾಣಿಸುತ್ತದೆ.

ಮೆಡಿಕಲ್‌ ಕ್ರೈಂಗೆ ಸಂಬಂಧಿಸಿದಂತೆ ದೊಡ್ಡ ವ್ಯೂಹವೊಂದನ್ನು ಬೇಧಿಸುವಲ್ಲಿ ನಾಯಕನಿಗೆ ಹೆಗಲುಕೊಡುತ್ತದೆ ಟೆಡ್ಡಿ. ನಾಯಕಿಯಾಗಿ ಸಾಯೇಷಾ ನಟಿಸಿದ್ದು, ಸತೀಶ್ ಮತ್ತು ಸಾಕ್ಷಿ ಅಗರ್‌ವಾಲ್‌ ಪ್ರಮುಖ ಪಾತ್ರಗಳಲ್ಲಿದ್ದಾರೆ. ಈ ಸಿನಿಮಾ ಥಿಯೇಟರ್‌ನಲ್ಲಿ ಬಿಡುಗಡೆಯಾಗುತ್ತಿಲ್ಲ. ಮಾರ್ಚ್‌ 12ರಿಂದ ಡಿಸ್ನೀ ಪ್ಲಸ್ ಹಾಟ್‌ಸ್ಟಾರ್‌ ಓಟಿಟಿ ಫ್ಲಾಟ್‌ಫಾರ್ಮ್‌ನಲ್ಲಿ ಪ್ರಸಾರವಾಗಲಿದೆ.

Related Posts

error: Content is protected !!