
ಹಳ್ಳಿ ಅಂದಮೇಲೆ ಪಡ್ಡೆ ಹುಡುಗ್ರು ಇದ್ದೇ ಇರ್ತಾರೆ. ಪಡ್ಡೆಗಳು ಅಂದ್ರೆ ಒಂದಷ್ಟು ತಲೆಹರಟೆ ಕೂಡ ಸಹಜ. ಊರಲ್ಲಿ ಜಾತ್ರೆ, ಹರಿದಿನ ಸೇರಿದಂತೆ ಇನ್ನಿತರೆ ಕಾರ್ಯಕ್ರಮಗಳು ಜರುಗಿದರೆ, ತಮ್ಮದೇ ಒಂದು ಸಂಘ ಕಟ್ಟಿಕೊಂಡ ಯುವಕರು ಆ ಮೂಲಕ ಮುಂದೆ ನಿಂತು ಸಂಭ್ರಮದಿಂದಲೇ ಅದನ್ನೆಲ್ಲ ಆಚರಿಸೋದು ಕಾಮನ್. ಈಗ ಇಲ್ಲೇಕೆ ಯುವಕರ ಸಂಘದ ಬಗ್ಗೆ ಹೇಳ್ತಾ ಇದೀವಿ ಎಂಬ ಪ್ರಶ್ನೆಗೆ ಉತ್ತರ “ಚಿ.ತು.ಯುವಕರ ಸಂಘ” ಎಂಬ ಸಿನಿಮಾ.

ಹೌದು, “ಚಿ.ತು.ಯುವಕರ ಸಂಘ” ಇದು ಹೊಸ ಬಗೆಯ ಸಿನಿಮಾ. ಹೆಸರೇ ಹೇಳುವಂತೆ ಇದೊಂದು ಪಕ್ಕಾ ಹಳ್ಳಿಗಾಡಲ್ಲಿ ನಡೆಯುವ ಚಿತ್ರ. ಅದರಲ್ಲೂ ಹಳ್ಳಿ ಹುಡುಗರ ಸುತ್ತಮುತ್ತ ನಡೆಯೋ ಕಥೆ ಇದು. ಸದ್ಯಕ್ಕೆ ಮೊದಲ ಹಂತದ ಚಿತ್ರೀಕರಣ ಮುಗಿದಿದೆ. ಎರಡನೇ ಹಂತದ ಚಿತ್ರೀಕರಣಕ್ಕೆ ಚಿತ್ರತಂಡ ಸಜ್ಜಾಗಿದೆ. ಇನ್ನು, ಚಿತ್ರತಂಡ ಮೋಷನ್ ಪೋಸ್ಟರ್ ರಿಲೀಸ್ ಆಗಿದ್ದು, ನಾರಾಯಣಗೌಡ ಅವರು ಮೋಷನ್ ಪೋಸ್ಟರ್ ರಿಲೀಸ್ ಮಾಡಿ ಶುಭಕೋರಿದ್ದಾರೆ.

ಈ ಚಿತ್ರಕ್ಕೆ ಶಿವರಾಜ್ ರಾಮನಗರ ನಿರ್ದೇಶಕರು. ಇದು ಮೊದಲ ನಿರ್ದೇಶನದ ಚಿತ್ರ. ಇದಕ್ಕೂ ಮುನ್ನ ಅವರು “ಭುಜಂಗ”,”ಉಡುಂಬ”,”ದಾರಿ ಯಾವುದಯ್ಯ ವೈಕುಂಠಕೆ” ಚಿತ್ರಗಳಲ್ಲಿ ಅಸೋಸಿಯೇಟ್ ಆಗಿ ಕೆಲಸ ಮಾಡಿದ್ದಾರೆ. ತಮ್ಮ ಸಿನಿಮಾ ಬಗ್ಗೆ ಹೇಳುವ ಶಿವರಾಜ್ ರಾಮನಗರ, ” ಇದು ನಮ್ಮ ಮೊದಲ ಸಿನಿಮಾ. ಕಥೆ ಬಗ್ಗೆ ಹೇಳುವುದಾದರೆ, ಊರಲ್ಲಿ ಕೆಲಸ ಕಾರ್ಯ ಇಲ್ಲದೆ ಅರಾಮಾಗಿ ಶೋಕಿ ಮಾಡಿಕೊಂಡಿರುವ ನಾಲ್ವರು ಹುಡುಗರೊಂದಿಗೆ ಚಿತ್ರದ ನಾಯಕನೂ ಊರೂರು ಅಲೆದಾಡುತ್ತಿರುತ್ತಾನೆ. ಅಂತಹವರ ಲೈಫಲ್ಲಿ ಕೆಲವು ಘಟನೆಗಳು ನಡೆದು ಹೋಗುತ್ತದೆ.

ಕೆಲಸ ಕಾರ್ಯ ಇಲ್ಲದೆ ಇರೋದು ವೇಸ್ಟ್. ಕೆಲಸ ಮಾಡುವಾಗ ಸಿಗುವ ಗೌರವವೇ ಬೇರೆ ಎಂಬುದನ್ನು ಅರಿತ ಆ ಯುವಕರು, ತಮ್ಮ ಕಾಲ ಮೇಲೆ ತಾವು ನಿಲ್ಲಬೇಕು ಅಂತ ನಿರ್ಧರಿಸುತ್ತಾರೆ. ಆಮೇಲೆ ಏನೆಲ್ಲಾ ಆಗುತ್ತೆ ಅನ್ನೋದೇ ಚಿತ್ರ. ಇನ್ನು, ಇದೊಂದು ಹಾಸ್ಯ ಪ್ರಧಾನ ಸಿನಿಮಾ. ಹಾಸ್ಯ ಮೂಲಕವೇ, ಚಿತ್ರ ಸಾಗುತ್ತದೆ. ರಾಮನಗರ, ಚನ್ನಪಟ್ಟಣ, ಮಂಡ್ಯ ಸುತ್ತಮುತ್ತ ಚಿತ್ರೀಕರಣ ನಡೆದಿದೆ. ಚೇತನ್ ರಾಜ್ ಫಿಲ್ಮ್ಸ್ಸ್ ಮೂಲಕ ಚೇತನ್ ರಾಜ್ ನಿರ್ಮಾಣ ಮಾಡಿದ್ದಾರೆ. ಚಿತ್ರಕ್ಕೆ ಕಿರಣ್ ತೋಟಂಬೈಲು ಸಂಗೀತ ನೀಡಿದ್ದಾರೆ. ರಾಜು ಹೆಮ್ಮಿಗೆಪುರ ಛಾಯಾಗ್ರಹಣವಿದೆ.

ಇವರಿಗೆ ಇದು ಮೊದಲ ಸಿನಿಮಾ. ಚಿತ್ರದಲ್ಲಿ ಸನತ್ ಹೀರೋ ಆಗಿದ್ದಾರೆ. ಈ ಹಿಂದೆ “ಕಮರೊಟ್ಟು ಚೆಕ್ಪೋಸ್ಟ್ ” ಚಿತ್ರದಲ್ಲಿ ಹೀರೋ ಆಗಿ ನಟಿಸಿದ್ದಾರೆ. ನಿರ್ಮಾಪಕ ಚೇತನ್ ರಾಜ್ ಈ ಚಿತ್ರ ನಿರ್ಮಿಸಿದ್ದರು. ಮತ್ತೆ ಈ ಇವರಿಬ್ಬರ ಕಾಂಬಿನೇಷನ್ನಲ್ಲಿ ಚಿತ್ರ ಮೂಡಿಬಂದಿದೆ. ಇನ್ನು ಚಿತ್ರದಲ್ಲಿ ವಿರಾನಿಕ ಶೆಟ್ಟಿ ನಾಯಕಿಯಾಗಿದ್ದಾರೆ. ಉಳಿದಂತೆ ಹೀರೋ ಸನತ್ ಜೊತೆಗೆ “ಫ್ರೆಂಚ್ ಬಿರಿಯಾನಿ” ಖ್ಯಾತಿಯ ಮಹಂತೇಶ್, “ಕಾಮಿಡಿ ಕಿಲಾಡಿಗಳು” ಸಂತು, “ಕಿರಿಕ್ ಪಾರ್ಟಿ” ಸಲ್ಮಾನ್, ಪವನ್, ಬಲರಾಜವಾಡಿ, ಚಂದ್ರಕಲಾ ಮೋಹನ್, ರಾಜೇಂದ್ರ ಕಾರಂತ್, ಬಿರಾದಾರ್, ಚಂದ್ರ ಪ್ರಭ, ಕುರಿ[ಪ್ರತಾಪ್ ಇತರರು ಇದ್ದಾರೆ.


























