Categories
ಸಿನಿ ಸುದ್ದಿ

ಮೈಂಡ್ ಇಟ್ ಅಂದ್ರು ಯತಿರಾಜ್‌: ಸಂಚಾರಿ ವಿಜಯ್ ನೆನಪಿಸುವ ಕಿರುಚಿತ್ರ ಮೂಲಕ ಸಂದೇಶ ಕೊಟ್ಟ ಕಲಾವಿದ

ಕಲಾವಿದ ಯತಿರಾಜ್‌ ಲಾಕ್‌ಡೌನ್‌ ಟೈಮ್‌ನಲ್ಲಿ ಸುಮ್ಮನೆ ಕೂರಲಿಲ್ಲ. ಸದಾ ಸಿನಿಮಾ ಧ್ಯಾನಿಸುವ ಯತಿರಾಜ್‌, ಕೊರೊನಾ ಲಾಕ್‌ಡೌನ್‌ ಸಮಯದಲ್ಲಿ ಅವರು ಒಂದಷ್ಟು ಮನಮಿಡಿಯುವಂತಹ ಕಿರುಚಿತ್ರಗಳನ್ನು ನಿರ್ದೇಶಿಸುವ ಮೂಲಕ ಗಮನ ಸೆಳೆದಿದ್ದರು. ಈಗ ಮತ್ತೊಂದು ಕಿರುಚಿತ್ರ ನಿರ್ದೇಶಿಸುವ ಮೂಲಕ ಸೈ ಎನಿಸಿಕೊಂಡಿದ್ದಾರೆ. ಹೌದು, ಅವರ ಕಿರುಚಿತ್ರದ ಹೆಸರು “ಮೈಂಡ್‌ ಇಟ್‌”. ಇತ್ತೀಚೆಗಷ್ಟೇ ನಟ ಸಂಚಾರಿ ವಿಜಯ್‌ ಅಗಲಿದ್ದಾರೆ. ಅವರು ಪ್ರಯಾಣ ಮಾಡುವ ಸಂದರ್ಭದಲ್ಲಿ ಹೆಲ್ಮಟ್‌ ಹಾಕಿಕೊಂಡಿದ್ದರೆ, ಅವರ ಜೀವ ಉಳಿಯುತ್ತಿತ್ತು ಎಂದು ಎಲ್ಲಾ ಕಡೆ ಸುದ್ದಿಯಾಗಿತ್ತು. ಈ ವಿಷಯವನ್ನೇ ಆಧರಿಸಿ, ನಟ ಯತಿರಾಜ್ ನಿರ್ದೇಶನ ಮಾಡುವುದರ ಜೊತೆಯಲ್ಲಿ ಅವರು ಪ್ರಮುಖ ಪಾತ್ರದಲ್ಲೂ ಕಾಣಿಸಿಕೊಂಡಿದ್ದಾರೆ. “ಮೈಂಡ್ ಇಟ್” ಹೆಸರಲ್ಲಿ ಆರು ನಿಮಿಷದ ಹದಿನೈದನೆ ಕಿರುಚಿತ್ರವನ್ನು ಅವರು ತಮ್ಮದೆ ಸಂಸ್ಥೆ ’ಕಲಾವಿದ ಫಿಲಂ ಅಕಾಡೆಮಿ’ ಮೂಲಕ ನಿರ್ಮಾಣ ಮಾಡಿದ್ದಾರೆ. ಯೂ ಟ್ಯೂಬ್‌ದಲ್ಲಿ ವೀಕ್ಷಿಸಿದ ಹಲವರು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ.

ಅದೊಂದು ಸುಂದರ ಸಂಸಾರ. ಆತ ರಂಗಭೂಮಿ ಕಲಾವಿದ. ಅಡಿಷನ್‌ನಲ್ಲಿ ಇವರ ಅಭಿನಯ ಕಂಡು ನಿರ್ದೇಶಕ ಮತ್ತು ನಿರ್ಮಾಪಕರು ನಾಯಕನಾಗಿ ಚಿತ್ರಕ್ಕೆ ಆಯ್ಕೆ ಮಾಡುತ್ತಾರೆ. ಖುಷಿಯನ್ನು ಪತ್ನಿಯೊಂದಿಗೆ ಹಂಚಿಕೊಂಡು, ಮುಂಗಡ ಹಣ ಪಡೆಯಲು ಹೆಲ್ಮೆಟ್ ಧರಿಸದೆ ಹೋಗುತ್ತಾರೆ. ದಾರಿಯಲ್ಲಿ ಫೋನ್ ಬಂತೆಂದು ಮಾತಾಡುವಾಗ, ಹಳ್ಳದಿಂದ ಪಾರಾಗುವ ಸಲುವಾಗಿ, ಆಯ ತಪ್ಪಿ ಕೆಳೆಗೆ ಬೀಳುತ್ತಾರೆ. ಫುಟ್‌ಪಾತ್‌ಗೆ ಬಿದ್ದ ಅವರ ತಲೆಗೆ ಬಲವಾದ ಪೆಟ್ಟು ಬೀಳುತ್ತೆ. ನಂತರ ತೀವ್ರ ರಕ್ತ ಸ್ರಾವಗೊಂಡು ಅಲ್ಲಿಯೇ ಪ್ರಾಣ ಕಳೆದುಕೊಳ್ಳುವುದರೊಂದಿಗೆ ಸಿನಿಮಾ ಕೂಡ ಮುಗಿಯುತ್ತದೆ.

ಪತ್ನಿ ಪಾತ್ರದಲ್ಲಿ ನಯನ, ನಿರ್ಮಾಪಕರಾಗಿ ಬೆಂ.ಕೋ.ಶ್ರೀನಿವಾಸ್, ನಿರ್ದೇಶಕರಾಗಿ ಪರಮೇಶ್ ಹಾಗೂ ಬೇಬಿ ಸ್ಮೃತಿ ನಟಿಸಿದ್ದಾರೆ. ಸೋನುಸಾಗರ ಅವರ ಛಾಯಾಗ್ರಹಣ ಮತ್ತು ಸಂಕಲನವಿದೆ. ವಿನುಮನಸು ಮತ್ತು ಮಾರುತಿ ಮೀರಜ್ ಸಂಗೀತವಿದೆ. ನಟ ವಸಿಷ್ಠ ಸಿಂಹ ಹಿನ್ನಲೆ ಧ್ವನಿ ನೀಡಿದ್ದಾರೆ.

Categories
ಸಿನಿ ಸುದ್ದಿ

ಅದೊಂದು‌ ಕಾರಣಕ್ಕೆ‌ ನಟ ಸಂಚಾರಿ ವಿಜಯ್ ತುಂಬಾ ನೊಂದಿದ್ದರು – ನಟ ಸತೀಶ್ ನೀನಾಸಂ ಬಿಚ್ಚಿಟ್ಟ ವಿಷಯವಿದು…

ನಟ ಸಂಚಾರಿ ವಿಜಯ್ ಈಗಿಲ್ಲ. ಅವರೇನಿದ್ದರೂ ಈಗ ನೆನಪು ಮಾತ್ರ.‌ ಈಗ ಅವರ ಆಂತರಿಕ‌ ಬದುಕಿನ ರೋಚಕ‌ ಗಳು ಬಯಲಿಗೆ ಬರುತ್ತಿದ್ದು, ಅವೆಲ್ಲ ಅವರನ್ನು‌ ಬೆಚ್ಚಿ ಬೀಳಿಸುತ್ತಿವೆ. ವಿಚಿತ್ರ ಅಂದ್ರೆ, ಕನ್ನಡ ಚಿತ್ರ ರಂಗಕ್ಕೆ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟ ನಟನೊಬ್ಬ ಜಾತಿಯ ಅವಮಾನದ
ತೀವ್ರವಾಗಿ ನೊಂದಿದ್ದರು‌ ಎನ್ನುವ ಸಂಗತಿಯನ್ನು ವಿಜಯ್ ಆತ್ಮೀಯರು ಆದ ನಟ ಸತೀಶ್ ನೀನಾಸಂ ಬಹಿರಂಗಪಡಿಸಿದ್ದಾರೆ. ಗೆಳೆಯ ವಿಜಯ್ ಅವರ ನಟನೆಯ ಜರ್ನಿ ಹಾಗೂ ಅನುಭವಿಸಿದ ಅವಮಾನಗಳ‌ ಕುರಿತು ‘ಕನ್ನಡ ಪಿಕ್ಚರ್” ಯೂಟ್ಯೂಬ್ ಚಾನಲ್‌ನಲ್ಲಿ ಮುಕ್ತವಾಗಿ ಹೇಳಿಕೊಂಡಿದ್ದಾರೆ.

‘ವಿಜಯ್ ರಾಷ್ಟ್ರ ಪ್ರಶಸ್ತಿ ತಂದುಕೊಟ್ಟರೂ ಸಮಾಜದಲ್ಲಿ ಸಾಕಷ್ಟು ಅವಮಾನ ಎದುರಿಸಿದ್ದರು. ಕಷ್ಟಗಳು ಎನ್ನುವುದಕ್ಕಿಂತ ನೋವು ಅನುಭವಿಸಿದ್ದರು. ಈ ಸಮಾಜದ ವ್ಯವಸ್ಥೆಯಿಂದ ಜೀವನದಲ್ಲಿ ನೊಂದಿದ್ದರು. ಪ್ರಾಣಿಗಳ ಮೇಲೆ ತೋರುವ ಮನುಷ್ಯತ್ವ, ಮನುಷ್ಯರ ಮೇಲೆ ಏಕಿಲ್ಲ ಎಂದು ಹಲವು ಬಾರಿ ಸಂಕಟ ಪಟ್ಟಿದ್ದರು” ಎಂದು ನಟ ಸತೀಶ್ ನೀನಾಸಂ ಹೇಳಿಕೊಂಡಿದ್ದಾರೆ.

‘ಸಂಚಾರಿ ವಿಜಯ್ ಈಗಿಲ್ಲ ಅಂತ ಕಣ್ಣೀರು ಹಾಕುವ ಜನ, ಅವರಿದ್ದಾಗ ನೀವು ಕೊಟ್ಟ ನೋವುಗಳನ್ನು ಒಮ್ಮೆ ನೆನಪಿಸಿಕೊಳ್ಳಿ. ಕರ್ನಾಟಕದ ಹೆಮ್ಮೆ ಅಂತ ಕೊಂಡಾಡಿದ ಮಂದಿ ಎಷ್ಟು ನೋವು ಕೊಟ್ಟಿದ್ದೀರಾ ಅಂತ ನೋಡ್ಕೊಳ್ಳಿ. ಎಲ್ಲವೂ ಸರಿ ಇದೆ, ಎಲ್ಲವೂ ಚೆನ್ನಾಗಿದೆ ಅಂತ ಎಷ್ಟು ದಿನ ಮುಚ್ಚಿಟ್ಟುಕೊಂಡು ಹೋಗ್ತೀರಾ, ಜಾತಿ ಯಾವುದು, ಊರು ಯಾವುದು, ಕೆಲಸ ಯಾವುದು ಅಂತ ನೋಡದೆ ಒಬ್ಬ ಮನುಷ್ಯ ಎಂದು ನೋಡುವುದು ಯಾವಾಗ” ಎಂದು ಬೇಸರ ಹೊರಹಾಕಿದರು.

”ಕಾಜಿ’ ಅಂತ ಸಾಕ್ಷ್ಯಚಿತ್ರ ಮಾಡಿದೆ. ಆ ಸಮಯದಲ್ಲಿ ಒಬ್ಬರು ಕಾಮೆಂಟ್ ಮಾಡಿದರು. ‘ಈ ರೀತಿ ಸಿನಿಮಾದಲ್ಲಿ ತೋರಿಸಬೇಡಿ, ಅಮೆರಿಕಾದಲ್ಲಿ ನಮ್ಮ ಬಡತನ ನೋಡಿದ್ರೆ ಅವಮಾನ ಆಗುತ್ತೆ’ ಅಂದ್ರು. ಹಾಗಾದ್ರೆ, ಇಲ್ಲಿರೋ ಬಡತನ, ಸಮಸ್ಯೆ, ಜಾತಿ ಸಮಸ್ಯೆ ಮುಚ್ಚಾಕ್ತೀರಾ ನೀವು. 21ನೇ ಶತಮಾನದಲ್ಲಿ ಎಲ್ಲವೂ ಅಭಿವೃದ್ದಿ ಹೊಂದಿದೆ, ವಿಮಾನ, ವಿಜ್ಞಾನ, ಆವಿಷ್ಕಾರ ಎಷ್ಟೇ ಅಗಿದ್ದರೂ ಮನುಷ್ಯತ್ವದಲ್ಲಿ ಮನುಷ್ಯರು ಬಹಳ ಹಿಂದೆ ಇದ್ದಾರೆ. ಪ್ರಾಣಿಗಿಂತ ಹೀನಾಯವಾಗಿದ್ದಾರೆ” ಎಂದು ಸತೀಶ್ ಅಸಮಾಧಾನ ವ್ಯಕ್ತಪಡಿಸಿದರು.

”ಸಂಚಾರಿ ವಿಜಯ್‌ಗೂ ಈ ಜಾತಿ ಅವಮಾನ ಆಗಿತ್ತು. ಅನೇಕ ಬಾರಿ ನನ್ನೊಂದಿಗೆ ಈ ವಿಚಾರ ಚರ್ಚಿಸಿದ್ದರು. ಸಮಯ ಬಂದಾಗ, ಎಲ್ಲವನ್ನು ವಿವರವಾಗಿ ಹೇಳ್ತೀನೆ, ತುಂಬಾ ಜನ ಅದನ್ನು ಮುಚ್ಚಿಟ್ಟಿದ್ದಾರೆ, ನಾನು ಹೇಳ್ತೇನೆ. ಅವನಿಗೆ ಈ ಸಮಾಜ ಕೊಟ್ಟ ಅಪಮಾನ ಎಂತಹದ್ದು ಎಂದು ಎಲ್ಲರೂ ತಿಳಿಯಲಿ” ಎಂದು ಸತೀಶ್ ಆಕ್ರೋಶವಾಗಿ ಮಾತನಾಡಿದರು.

Categories
ಸಿನಿ ಸುದ್ದಿ

ಕೋಟೆ ನಾಡಿನ ಹುಡುಗರ ಸಲ್ಯೂಟ್ ವಾರಿಯರ್ಸ್‌ ಆಲ್ಬಂ ಸಾಂಗ್‌ ; ಚಿತ್ರದುರ್ಗ ಪ್ರತಿಭೆಗಳ ಹಾಡಿಗೆ ಎಸ್‌ಪಿ, ಸಿಇಓ ಚಾಲನೆ…

ಕೊರೊನಾ ವಿಷಯ ಕುರಿತಂತೆ ಈಗಾಗಲೇ, ಹಾಡು, ಜಾಹಿರಾತು, ಕಿರುಚಿತ್ರ ಅಷ್ಟೇ ಯಾಕೆ ಸಿನಿಮಾಗಳು ತಯಾರಾಗಿವೆ. ಕೆಲವು ರಿಲೀಸ್ ಕೂಡ ಆಗಿವೆ. ಆ ಸಾಲಿಗೆ ಈಗ ‘ಸಲ್ಯೂಟ್ ವಾರಿಯರ್ಸ್’ ಆಲ್ಬಂ ಸಾಂಗ್ ಕೂಡ ಒಂದು.
ಹೌದು, ಇದು ಕೋಟೆ ನಾಡು ಚಿತ್ರದುರ್ಗ ಪ್ರತಿಭೆಗಳೇ ಸೇರಿ ಚಿತ್ರೀಕರಿಸುತ್ತಿರುವ ಹಾಡು. ಸದ್ಯ ಹಾಡಿನ ಚಿತ್ರೀಕರಣಕ್ಕೆ ಚಾಲನೆ ಸಿಕ್ಕಿದೆ. ಶೂಟಿಂಗ್ ಬಳಿಕ ಯುವಕರ ತಂಡ, ಸಾಂಗ್ ಬಿಡುಗಡೆ ಮಾಡಲು ತಯಾರು ನಡೆಸುತ್ತಿದೆ.
ಇನ್ನು ಈ ಹುಡುಗರ ಪ್ರಯತ್ನ ಮೆಚ್ಚಿಕೊಂಡ ಚಿತ್ರದುರ್ಗ ಎಸ್.ಪಿ. ಮತ್ತು ಸಿಇಓ ಚಾಲನೆ ನೀಡಿ ಶುಭ ಹಾರೈಸಿದ್ದಾರೆ.

ಜಿಲ್ಲಾ ಪೊಲೀಸ್ ಕಚೇರಿಯಲ್ಲಿ ಕೊರೊನಾ ಕುರಿತ ಜಾಗೃತಿ ಗೀತೆ ‘ಸಲ್ಯೂಟ್ ವಾರಿಯರ್ಸ್‌’ ಕನ್ನಡ ಆಲ್ಬಂ ಸಾಂಗ್ ಮುಹೂರ್ತ ನಡೆಯಿತು. ಈ ವೇಳೆ ಆಲ್ಬಂ ಸಾಂಗ್ ಗೆ ಚಾಲನೆ ಕೊಟ್ಟ ಜಿಲ್ಲಾ ಪೊಲೀಸ್ ವರಿಷ್ಠಾಧಿಕಾರಿ ಜಿ.ರಾಧಿಕಾ,
‘ಸರ್ಕಾರ ಕೊರೊನಾ ಲಾಕ್‌ಡೌನ್ ಸಡಿಲಿಕೆ ಮಾಡಿರಬಹುದು ಆದರೂ ಜನರು ಮೂರನೇ ಅಲೆಯ ಬಗ್ಗೆ ಎಚ್ಚರಿಕೆಯಿಂದ ಇರಬೇಕು. ಜಿಲ್ಲಾಡಳಿತ, ಜಿಲ್ಲಾ ಪಂಚಾಯತ್, ಜಿಲ್ಲಾ ಪೊಲೀಸ್ ಇಲಾಖೆ ಚಿತ್ರದುರ್ಗವನ್ನು ಕೊರೊನಾ ಮುಕ್ತ ಮಾಡಲು ಸನ್ನದ್ಧವಾಗಿದೆ. ಇನ್ನು ಪ್ರತಿಭಾವಂತ ಹುಡುಗರು ಸೇರಿ ಮಾಡಿರುವ ‘ಸಲ್ಯೂಟ್ ವಾರಿಯರ್ಸ್‌’ ಸಾಂಗ್ ಅದ್ಬುತವಾಗಿ ಮೂಡಿಬಂದಿದೆ. ಚಿತ್ರೀಕರಣ ಯಶಸ್ವಿಯಾಗಲಿ ಎಂದಿದ್ದಾರೆ.

ಸರ್ಕಾರ ವಿವಿಧ ರೀತಿಯಲ್ಲಿ ಜನಜಾಗೃತಿ ಕಾರ್ಯ ಮಾಡುತ್ತಿದ್ದು ಅದನ್ನು ಅರಿತ ಮಾತರಂ ಲ್ಯಾಪ್ ಕ್ರಿಯೇಷನ್ ತಂಡವು ಒಂದು ಅರ್ಥಪೂರ್ಣ ಹಾಡು ರಚಿಸಿದೆ. ಇವರ ಹೊಸ ಹೆಜ್ಜೆಗೆ ಶುಭವಾಗಲಿ. ಇವರಿಂದ ಇನ್ನೂ ಹೆಚ್ಚು ಕ್ರಿಯಾಶೀಲ ಕಾರ್ಯಗಳು ಬರಲಿ ಎಂದು ಶುಭ ಹಾರೈಸಿದ್ದಾರೆ.

ಸಾಂಗ್ ಚಿತ್ರೀಕರಣಕ್ಕೆ ಚಾಲನೆ ನೀಡಿದ ಜಿಲ್ಲಾ ಪಂಚಾಯಿತಿ ಮುಖ್ಯ ಕಾರ್ಯನಿರ್ವಾಹಕ ಅಧಿಕಾರಿ ಡಾ.ನಂದಿನಿದೇವಿ, ‘ನಮ್ಮ ಜಿಲ್ಲೆಯನ್ನು ಹೋಲಿಕೆ ಮಾಡಿ ನೋಡಿದಾಗ ಕೊರೊನಾ ಸಂಖ್ಯೆ ಕಡಿಮೆ ಇದೆ. ಎಲ್ಲರೂ ಮಾಸ್ಕ್ ಧರಿಸಿ, ಸ್ಯಾನಿಟೈಸರ್ ಬಳಸಿ ಸಾಮಾಜಿಕ ಅಂತರ ಕಾಯ್ದುಕೊಳ್ಳೋಣ, ಮುಂದೆ ಮೂರನೆ ಅಲೆಯನ್ನು ತಡೆಯಲೂ ಎಲ್ಲರೂ ಸಿದ್ಧರಾಗೋಣ ಮತ್ತು ಎಚ್ಚರದಿಂದ ಇರೋಣ ಎಂದರು.

‘ಸಲ್ಯೂಟ್ ವಾರಿಯರ್ಸ್‌’ ಸಾಂಗ್ ಕ್ರಿಯೇಟಿವ್ ಹೆಡ್ ಮಾಲತೇಶ್ ಅರಸ್ ಹರ್ತಿಕೋಟೆ, ‘ನಿಜವಾದ ವಾರಿಯರ್ಸ್‌ ಗಳು ಇಲ್ಲಿ ನಾಯಕರಾಗಿ ನಾಯಕಿಯರಾಗಿ ಕಾಣಿಸಿಕೊಳ್ಳಲಿದ್ದಾರೆ. ನಮ್ಮ ಈ ಹಾಡಿನಲ್ಲಿ ಎಸ್‌ಪಿ. ಡಿಸಿ, ಸಿಇಒ ಪ್ರಮುಖವಾಗಿದ್ದು ಜಿಲ್ಲೆಯ ಎಲ್ಲಾ ಪೊಲೀಸರು, ವೈದ್ಯರು, ನರ್ಸಗಳು, ಆಸ್ಪತ್ರೆ ಬ್ರದರ್ಸ್, ನಗರಸಭೆ ಪೌರ ಕಾರ್ಮಿಕರು, ಪತ್ರಕರ್ತರು, ಆಶಾ ಕಾರ್ಯಕರ್ತೆಯರು, ಅಂಗನವಾಡಿ ಕಾರ್ಯಕರ್ತೆಯರು, ಬೆಸ್ಕಾಂ ಸಿಬ್ಬಂದಿ, ಹೋಮ್ ಗಾಡ್ಸ್, ಪಿಡಿಒ, ಗ್ರಾಪಂ ಸಿಬ್ಬಂದಿ, ಡಿಸಿ ಕಚೇರಿ, ಜಿಪಂ ಕಚೇರಿಯ ಸಿಬ್ಬಂದಿಗಳನ್ನು ಚಿತ್ರಿಕರಣ ಮಾಡಲಾಗುವುದು ಎಂದರು.

ಸಲ್ಯೂಟ್ ವಾರಿಯರ್ಸ್‌
ಆಲ್ಬಂಗೆ ದೇವರತ್ನ ಮಂಜು ಸಾಹಿತ್ಯ ಬರೆದು ನಿರ್ದೇಶನ‌ ಮಾಡಲಿದ್ದಾರೆ.’ಇದು ಕೊರೊನಾ ಜಾಗೃತಿ ಗೀತೆಯಾಗಿದ್ದು ಇದರಲ್ಲಿ ವಾರಿಯರ್ಸ್‌ ಗಳನ್ನು ಸಾರ್ವಜನಿಕರು ಅಭಿನಂದಿಸುವ ಉದ್ದೇಶವೂ ಇದೆ. ಚಿತ್ರದುರ್ಗದ ವಾರಿಯರ್ಸ್‌ ಗಳೇ ಇದರಲ್ಲಿ ಇರುತ್ತಾರೆ ಚಿತ್ರದುರ್ಗದ ಪ್ರಮುಖ ಸ್ಥಳಗಳಲ್ಲಿ ಚಿತ್ರೀಕರಣ ನಡೆಯಲಿದೆ. ಐದು ದಿನಗಳ ಕಾಲ ಚಿತ್ರೀಕರಣ ಮಾಡಿ ನಂತರ ಎಲ್ಲರನ್ನು ಒಂದೆಡೆ ಸೇರಿಸಿ ಕ್ಲೈಮ್ಯಾಕ್ಸ್ ಶೂಟಿಂಗ್ ನಡೆಸಲಾಗುವುದು ಎಂದರು.

ಮುಹೂರ್ತದಲ್ಲಿ ಅಡಿಷನಲ್ ಎಸ್.ಪಿ ನಂದಗಾವಿ ಮತ್ತು ಜಿಲ್ಲೆಯ ಎಲ್ಲಾ ಡಿವೈಎಸ್‌ಪಿ, ಎಲ್ಲಾ ವೃತ್ತ ನಿರೀಕ್ಷಕರು, ಸಬ್ ಇನ್ಸ್ ಪೆಕ್ಟರ್ ಹಾಗೂ ಸಲ್ಯೂಟ್ ವಾರಿಯರ್ಸ್‌ ಸಾಂಗ್ ಸಂಗೀತ ನಿರ್ದೇಶಕರಾದ ಮುನ್ನಾ, ನಿವೃತ್ತ ಪೊಲೀಸ್ ಅಧಿಕಾರಿ ದೇವೇಂದ್ರಪ್ಪ ತಂಡದ ಅಶೋಕ್, ರಾಘವೇಂದ್ರ, ಚಂದನ್, ಶಶಿಡ್ರೋಣ್, ಕಿಶೋರ್‌ಚಿನ್ನು, ಪಾಟೀಲ್, ಚೇತನ್, ತೇಜು, ಮದನ್ ರಾಹುಲ್ ಮತ್ತು ಚಿತ್ರತಂಡ ಭಾಗವಹಿಸಿದ್ದರು.

Categories
ಸಿನಿ ಸುದ್ದಿ

ವಾಣಿಜ್ಯ ಮಂಡಳಿ ಹೀಗೇಕೆ ಮಾಡಿತು…? ಇದು ಒಬ್ಬ ಶ್ರೇಷ್ಟ ನಟನಿಗೆ‌ ಮಾಡಿದ‌ ಅವಮಾನ ! – ನಿರ್ದೇಶಕ ಲಿಂಗದೇವರು ಬೇಸರ


ಕನ್ನಡ ಚಿತ್ರರಂಗಕ್ಕೆ ಹೆಮ್ಮೆ ಆಗುವಂತೆ ರಾಷ್ದ ಪ್ರಶಸ್ತಿ ತಂದುಕೊಟ್ಟ ನಟನೆಗೆ ‌ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಅಷ್ಟು ಗೌರವ ನೀಡುವುದು ಬೇಡವೇ? ಹೌದು, ಕೋವಿಡ್ 19 ವೇಳೆ ನಿಧನರಾದ ಕನ್ನಡ ಚಿತ್ರೋದ್ಯಮದ ಹಲವಾರು ಮಂದಿಗೆ ಗುರುವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಆಯೋಜಿಸಿದ್ದ ಶ್ರದ್ದಾಂಜಲಿ ಸಭೆಯಲ್ಲಿ ಮೃತ ನಟ ಸಂಚಾರಿ ವಿಜಯ್ ಗೆ ಅಂತಹದೊಂದು ಗೌರವೇ ಸಿಗದೆ ಹೋಯಿತು. ಅದೀಗ ಸಾರ್ವಜನಿಕ ವಲಯದಲ್ಲಿ ತೀವ್ರ ಆಕ್ಷೇಪ ವ್ಯಕ್ತವಾಗಿದೆ. ಹಿರಿಯ ನಿರ್ದೇಶಕ ಬಿ.ಎಸ್. ಲಿಂಗದೇವರು ಈ ಬಗ್ಗೆ ಹೇಳಿಕೆ ನೀಡಿದ್ದು, ವಾಣಿಜ್ಯ ಮಂಡಳಿ‌ನಿರ್ಲಕ್ಷ್ಯ ಖಂಡನಾರ್ಹ ಎಂದಿದ್ದಾರೆ. ಅಷ್ಟೇ ಅಲ್ಲ, ಇದು ವಿಜಯ್ ಕುಟುಂಬಕ್ಮೆ ತೋರಿದ ಅಗೌರವ ಎಂದು ಕಿಡಿಕಾರಿದ್ದಾರೆ‌.

ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಹಾಗೂ ದಕ್ಷಿಣ ಭಾರತ ಚಲನಚಿತ್ರ ಮಂಡಳಿಯ ಮಾಜಿ ಅಧ್ಯಕ್ಷರಾಗಿದ್ದ ಕನ್ನಡ ಚಿತ್ರರಂಗದ ಆಧಾರ ಸ್ತಂಭಗಳಲ್ಲಿ ಒಬ್ಬರಾದ ಕೆ.ಸಿ.ಎನ್. ಚಂದ್ರಶೇಖರ್ ಅವರು ನಿಧನರಾದರು.ಅವರೊಂದಿಗೆ ಇತ್ತೀಚೆಗೆ
ಕೆಲವರು ಕೋವಿಡ್ ಬಲಿಯಾದರು. ಇನ್ನು ಕೆಲವರು ಕೋವಿಡೇತರ ಅನಾರೋಗ್ಯಕ್ಕೆ ಅಗಲಿದರು. ಅವರಿಗೆಲ್ಲ ಗುರುವಾರ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಯು ಶ್ರದ್ಧಾಂಜಲಿ ಸಲ್ಲಿಸುವ ಸಭೆಯೊಂದನ್ನು ಇಂದು ಕರೆದಿತ್ತು.


ಪುಷ್ಪನಮನ ಸಲ್ಲಿಸುವ ಸಲುವಾಗಿ ವೇದಿಕೆಯಲ್ಲಿ ಕೆ.ಸಿ.ಎನ್.ಚಂದ್ರಶೇಖರ್, ರಾಮು ಮತ್ತು ಅಣ್ಣಯ್ಯ ಚಂದ್ರಶೇಖರ್ ಅವರ ಭಾವಚಿತ್ರಗಳನ್ನು ಇಡಲಾಗಿತ್ತು. ಅಗಲಿದ ಉಳಿದ ನಿರ್ಮಾಪಕರು, ನಿದೇಶಕರು, ತಂತ್ರಜ್ಞರು, ಕಲಾವಿದರು, ಕಾರ್ಮಿಕರು ಮುಂತಾದವರ ಭಾವಚಿತ್ರಗಳನ್ನು ಒಂದರ ಹಿಂದೊಂದು ಬರುವಂತೆ ಟಿವಿಯಲ್ಲಿ ಅಳವಡಿಸಲಾಗಿತ್ತು.

ಗತಿಸಿದ ಎಲ್ಲರ ಭಾವಚಿತ್ರಗಳನ್ನು ವೇದಿಕೆಯ ಮೇಲೆ ಜೋಡಿಸಿ ಇಡುವುದು ಅಸಾಧ್ಯ ಕೂಡ ‌.ಅದರೂ ಒಬ್ಬ ರಾಷ್ಟ್ರ ಪ್ರಶಸ್ತಿ ವಿಜೇತ ನಟ ಇನ್ನಿಲ್ಲ ಅನ್ನೋದಕ್ಕೆ ಗೌರವ ಸಲ್ಲಿಸುವುದಕ್ಕಾದರೂ ಅಲ್ಲಿ ವಿಜಯ್ ಅವರ ಭಾವಚಿತ್ರವಾದರೂ ಇರಬೇಕಿತ್ತು. ಆದರೆ ವಾಣಿಜ್ಯ ಮಂಡಳಿ ಅದ್ಯಾಕೋ ಮರೆತು ಬಿಟ್ಟಿತು.ಇದು ಗೊತ್ತಿಲ್ಲದೆಯೇ ಆದ ಅಚಾತುರ್ಯವೇ ಆಗಿದ್ದರೂ, ಒಬ್ನ ಶ್ರೇಷ್ಟ ನಟನಿಗೆ ಮಾಡಿದ ಅವಮಾನ ಅನ್ನೋದು ವಿಜಯ್ ಅಭಿಮಾನಿಗಳ ದೂರು.

ರಾಷ್ಟ್ರಪ್ರಶಸ್ತಿ ಪಡೆದು ನಾಡಿಗೆ ಹೆಮ್ಮೆ ತಂದ ಸಂಚಾರಿ ವಿಜಯ್ ಅವರು ಅನೇಕ ಸಮಾಜಮುಖಿ ಕೆಲಸ ಮಾಡಿ ಕನ್ನಡಿಗರ ಮನ, ಮನೆ ಮಾತಾಗಿದ್ದಾರೆ. ವಿಜಯ್ ಮಿದುಳು ನಿಷ್ಕ್ರಿಯವಾದ ನಂತರ, ಆರು ಮಂದಿಗೆ ಹೊಸ ಬದುಕು ನೀಡುವ ಉದ್ದೇಶದಿಂದ, ಅವರ ಅಂಗಾಂಗ ದಾನ ಮಾಡುವ ಉದಾತ್ತ ನಿರ್ಧಾರ ಮಾಡುವ ಮೂಲಕ ಸಮಾಜಕ್ಕೆ ಮಾದರಿಯಾಗಿದ್ದಾರೆ ವಿಜಯ್ ಕುಟುಂಬದವರು. ಈ ಎಲ್ಲಾ ಹಿನ್ನೆಲೆಯಲ್ಲಿಯೇ ವಿಜಯ್ ಅಂತಿಮ ಸಂಸ್ಕಾರದ ವೇಳೆ ಸರ್ಕಾರದ ಗೌರವ ಸಂದಿತ್ತು. ಅದು ನಾಡಿಗೆ ಗೌರವ ತಂದು ಕೊಟ್ಟವರಿಗೆ ವಿದಾಯದ ವೇಳೆ ಸಂದ ಗೌರವ. ಕನ್ನಡ ಚಿತ್ರರಂಗದ ಪ್ರಾತಿನಿಧಿಕ ಸಂಸ್ಥೆ ಎಂದು ತನ್ನನ್ನು ಕರೆದುಕೊಳ್ಳುವ ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿಗೆ ಇದು ಕೂಡ ಗೊತ್ತಾಗದೆ ಹೋಯಿತಾ ಎನ್ನುವುದು ನಿರ್ದೇಶಕ ಲಿಂಗದೇವರು ಅವರ ನೋವಿನ ಪ್ರಶ್ನೆ.

ಪ್ರಶಸ್ತಿ ವಿಜೇತ, ಸಮಾಜ ಮುಖಿ ಕಲಾವಿದನಿಗೆ ಶ್ರದ್ಧಾಂಜಲಿ ವೇಳೆ ಸೂಕ್ತ ಗೌರವ ನೀಡದೇ ಇರುವುದು ನಿಜಕ್ಕೂ ಖಂಡನಾರ್ಹ ಮತ್ತು ವಿಜಯ್ ಕುಟುಂಬಕ್ಕೆ ತೋರಿದ ಅಗೌರವ ಎಂದಿರುವ ನಿರ್ದೇಶಕ‌ ಲಿಂಗದೇವರು, ಒಂದು ವೇಳೆ, ವಾಣಿಜ್ಯ ಮಂಡಳಿಯು ನಿರ್ಮಾಪಕರು, ವಿತರಕರು ಮತ್ತು ಪ್ರದರ್ಶಕರು ಮಾತ್ರ ಸದಸ್ಯರಾಗಿರುವ ಸಂಸ್ಥೆ ಎಂದು ಹೇಳುವುದಿದ್ದರೆ, ಉಳಿದವರ ಭಾವಚಿತ್ರಗಳನ್ನು ಅಲ್ಲಿ ಹಾಕಬೇಕಾದ ಅಗತ್ಯ ಇರಲಿಲ್ಲ ಎಂದು‌ಕಿಡಿಕಾರಿದ್ದಾರೆ.

Categories
ಸಿನಿ ಸುದ್ದಿ

ವಿಜಿ ಸರ್… ಗುಂಡಿ ತೋಡಿ ಹೂಳುವ ಸೀಕ್ವೆನ್ಸ್ ಮಾಡ್ತೀರಾ?ʼʼ ಅಂದಿದ್ದಕ್ಕೆ…ʻʻಒಂದಲ್ಲಾ ಒಂದಿನಾ ಮಲ್ಕೋಬೇಕಾಲ್ಲಾ…ʼʼ ಅಂತ ನಗ್ತಾ ಹೇಳಿದ್ರಿ.. ಆದರೀಗ…

ಸಂಚಾರಿ ವಿಜಯ್, ದೈಹಿಕವಾಗಿ ಇಲ್ಲ. ಆದರೆ, ಅವರು ತಮ್ಮ ಸಿನಿಮಾಗಳ ಮೂಲಕ ಅದೇ ನಗು ಹೊತ್ತು ಜೊತೆಗಿದ್ದಾರೆ. ಅವರ ಅಭಿನಯದ ‘ಮೇಲೊಬ್ಬ ಮಾಯಾವಿ’ ರಿಲೀಸ್ ಗೆ ರೆಡಿಯಾಗಿದೆ. ಚಿತ್ರದ ಹಾಡೊಂದು ಸಂಚಾರಿ ವಿಜಯ್ ಅವರಿಗೆ ತುಂಬಾನೇ ಇಷ್ಟವಾಗಿತ್ತು. ಬೇಗ ರಿಲೀಸ್ ಮಾಡಿ ಅಂತ ಅದೆಷ್ಟೋ ಸಲ ಹೇಳಿದ್ದರು ವಿಜಯ್. ಆದರೆ, ಕಾರಣಾಂತರಗಳಿಂದ ಆಗಿರಲಿಲ್ಲ. ಈಗ ನಿರ್ದೇಶಕ ನವೀನ್ ಕೃಷ್ಣ ಸಾಂಗ್ ರಿಲೀಸ್ ಮಾಡಿದ್ದಾರೆ. ನಿಜಕ್ಕೂ ಹಾಡು ನೋಡಿದವರ ಕಣ್ಣು ಒದ್ದೆಯಾಗದೇ ಇರದು. ಅಂದಹಾಗೆ, ನಿರ್ದೇಶಕರು ಸಂಚಾರಿ ವಿಜಯ್ ಬಗ್ಗೆ ಮನದಾಳದ ಮಾತು ಹಂಚಿಕೊಂಡಿದ್ದಾರೆ.

ಓವರ್ ಟು ನವೀನ್ ಕೃಷ್ಣ…

ವಿಜಿ ಸರ್…
ʻಮೇಲೊಬ್ಬ ಮಾಯಾವಿʼ ನನ್ನ ನಿಮ್ಮ ಜೊತೆಯಾಗಿಸಿತು. ಒಂದೇ ಸಿನಿಮಾದ ಒಡನಾಟದಲ್ಲಿ ಒಡಹುಟ್ಟಿದವರಿಗಿಂತ ಹತ್ತಿರವಾದ್ರಿ. ಯಾರಲ್ಲೂ ಹಂಚಿಕೊಳ್ಳಲಾಗದ, ಹಂಚಿಕೊಳ್ಳಬಾರದ ಸಂಕಟಗಳನ್ನು ಮಗುವಿನಂತೆ ಹಂಚಿಕೊಂಡ್ರಿ. ನಾನೊಬ್ಬ ಡೈರೆಕ್ಟರ್, ನೀವೊಬ್ಬ ಆಕ್ಟರ್ ಅನ್ನುವ ಕೊಂಡಿಯನ್ನು ಬಹುಬೇಗ ಕಳಚಿದ್ರಿ. ಸದಾ ಹೊಸತನ್ನು ಯೋಚಿಸುವ.. ಸದಾ ಸಂತೋಷವನ್ನು ಹಂಚುವ.. ಎಲ್ಲರಿಗೂ ಒಳ್ಳೆಯದನ್ನು ಬಯಸುವ ನಿಮ್ಮ ಜೀವನ ಸೂತ್ರವನ್ನು ಇಡೀ ತಂಡಕ್ಕೆ ಉಚಿತವಾಗಿ ಹಂಚಿದಿರಿ.


ಊಟವನ್ನು ಇಷ್ಟ ಪಡುವ ನೀವು… ಸಾಕಷ್ಟು ಬಾರಿ ಕೈತುತ್ತು ಕೊಟ್ರಿ… ನಿಮ್ಮ ನಟನೆಯ ಸ್ಕಿಲ್ ಅನ್ನು ಯಾವುದೇ ಆಮಿಷವಿಲ್ಲದೇ ಹಂಚಿದಿರಿ…
ಇವತ್ತು ರಿಲೀಸ್ ಆಗಿರುವ ವಿಡಿಯೋ ಸಾಂಗ್ ಅನ್ನು ಅವಾಗವಾಗ ʻʻಡೈರೆಕ್ಟ್ರೆ ಬೇಗ ರಿಲೀಸ್ ಮಾಡಿ ಅಂದ್ರಿʼʼ…

ಈ ಸಮಯದಲ್ಲಿ ರಿಲೀಸ್ ಮಾಡುವ ಮನಸ್ಥಿತಿ ನಮ್ಮದಲ್ಲ.. ಇಡೀ ತಂಡ ದಿಗ್ಭ್ರಮೆಯಲ್ಲಿದೆ. ಆದರೂ ರಿಲೀಸ್ ಮಾಡಿರೋದು ನಮ್ಮ ತಂಡದ ಜೊತೆ ನೀವೂ ಕೂತು ನೋಡ್ತಿದ್ದೀರಿ ಅನ್ನೋ ಉದ್ದೇಶಕ್ಕೆ.


ʻʻವಿಜಿ ಸರ್.. ಗುಂಡಿ ತೋಡಿ ಹೂಳುವ ಸೀಕ್ವೆನ್ಸ್ ಮಾಡ್ತೀರಾ… ಒಪ್ಪಿಗೇನಾ?ʼʼ ಅಂದಿದ್ದಕ್ಕೆ.. ʻʻಒಂದಲ್ಲಾ ಒಂದಿನಾ ಮಲ್ಕೋಬೇಕಾಲ್ಲಾ…ʼʼ ಅಂತ ನಗ್ತಾ ಹೇಳಿದ್ರಿ.. ಆದರೀಗ!!
ಸರ್…, ಈ ಸಾಂಗ್ ಬಗ್ಗೆ ನಾನು ಚಂದ್ರಣ್ಣ ( ಚಕ್ರವರ್ ಸರ್ ) ಸಾಕಷ್ಟು ಡಿಸ್ಕಸ್ ಮಾಡಿದ್ವಿ. ಚಂದ್ರಣ್ಣ ನಾನು ಕೊಟ್ಟ ಇನ್ಪುಟ್ಸ್ ಅನ್ನು ತುಂಬಾ ಸೀರಿಯಸ್ ಆಗಿ ತಗೊಂಡು, ನಿಮ್ಮ ಒಪ್ಪಿಗೆಯನ್ನು ಪಡೆದೇ ಶೂಟ್ ಮಾಡಲಾಯ್ತು. ಬಾಲ್ಯದ ಗೆಳೆಯ.. ನಿರ್ಮಾಪಕ ಪುತ್ತೂರು ಭರತ್, ಯಾವುದಕ್ಕೂ ನೋ ಅಂದಿಲ್ಲ. ಎಲ್ಲಾ ರಿಸ್ಕ್ ಗಳನ್ನು ತನ್ನ ಹೆಗಲ ಮೇಲೆ ಹೊತ್ತು ನಡೆದ್ರು ಈ ಕ್ಷಣಕ್ಕೂ….


ಕೊನೆಯದಾಗಿ , ವಿಜಿ ಸರ್ ನಿಮ್ಮ ಫೋಟೋ ಹಾಕಿ ʻರಿಪ್ʼ ಅನ್ನೊಲ್ಲ.. ನಮ್ಮ ಇಡೀ ಮಾಯಾವಿ ತಂಡದ ಕೊನೆ ಉಸಿರಿರುವವರೆಗೂ ನಿಮ್ಮ ನಿಮ್ಮ ಮುಗ್ಧ ಮಗುವಿನಂತ ನಗುವಿನ ಜೊತೆಗಿರುತ್ತೆ. ಸರ್.. ಬನ್ನಿ ನಾನು ನೀವು ಚಂದ್ರಣ್ಣ ಬೆಸ್ಟ್ ಒಟ್ಟೊಟ್ಟಾಗಿ ಜಗಳ ಮಾಡೋಣ.. ಅಟ್ಲೀಸ್ಟ್ ಮೂವರೂ ಒಂದು ಹಗ್ ಮಾಡೋಣ… ʻಮಿಸ್ ಯೂʼ… ಅನ್ನೋಕೂ ಆಗ್ತಿಲ್ಲ…’ ಎಂದು ಹೇಳಿದ್ದಾರೆ ನಿರ್ದೇಶಕ ಬಿ.ನವೀನ್ ಕೃಷ್ಣ.

Categories
ಸಿನಿ ಸುದ್ದಿ

ಚರಿತ್ರೆ ಸೃಷ್ಟಿಸಿದ ಈ ನಟನಿಗೆ ತನ್ನ ತಾಯಿಯ ಆತ್ಮ ಚರಿತ್ರೆ ಬರೆಯವ ಕನಸು ನನಸಾಗದೇ ಉಳಿಯಿತು..!

‘ಸರ್‌, ಬರವಣಿಗೆ ಅಂತ ಬಂದಾಗ ನಂಗೆ ತುಂಬಾ ಕಾಡೋದು ನನ್ನಮ್ಮನ ಬದುಕಿನ ಕಥೆ. ಅದನ್ನ ಬರೀಬೇಕು ಅನ್ನೋದು ನನ್ನ ಕನಸು…

ನಟ ಸಂಚಾರಿ ವಿಜಯ್‌ ಅವರಿಗಿದ್ದ ಬರವಣಿಗೆಯ ಕನಸಿದು. ಅದು ನನಸಾಗದೆ ಉಳಿದು ಹೋದದ್ದು ಬಹುದೊಡ್ಡ ದುರಂತ. ʼಸಿನಿ ಲಹರಿʼ ಸಂಸ್ಥೆ ನೂರು ದಿನದ ಸಂಭ್ರಮದ ಸರಳ ಕಾರ್ಯಕ್ರಮಕ್ಕೆ ಬಂದ ವೇಳೆ, ನೆನಪಿನ ಡೈರಿಗೆ ಒಂದೆಡೆ ಅನಿಸಿಕೆ ಬರೆಯುವಾಗ ಅವರು ಈ ಮಾತು ಹೇಳಿದ್ದರು. ಈಗ ಇವೆಲ್ಲ ನೆನಪಿಸಿಕೊಳ್ಳುವಾಗ ಮನಸು ಭಾರವಾಗುತ್ತೆ. ಆದರೆ, ಅವರಿಗಿದ್ದ ಕನಸು, ಹಂಬಲ, ಆಕಾಂಕ್ಷೆಯ ಕೆಲಸಗಳನ್ನು ಸ್ಮರಿಸಿಕೊಂಡಾಗ ಅವರ ಅಗಾಧ ವ್ಯಕ್ತಿತ್ವ ನಮ್ಮ ಕಣ್ಣ ಮುಂದೆ ಬರುತ್ತದೆ.
ಸಂಚಾರಿ ವಿಜಯ್‌ ಬರೀ ನಟ ಮಾತ್ರವಲ್ಲ, ಅಪ್ಪಟ ಸಾಹಿತ್ಯ ಅಭಿಮಾನಿಯೂ ಹೌದು. ನಾಡಿನ ಅನೇಕ ಸಾಹಿತಿಗಳ ಅಮೂಲ್ಯ ಪುಸ್ತಕಗಳನ್ನ ಓದಿ ತಿಳಿದುಕೊಂಡಿದ್ದ ಮಾತ್ರವಲ್ಲ ಆ ಬಗ್ಗೆ ಚರ್ಚೆ ನಡೆಸುತ್ತಿದ್ದರು. ಸಿನಿಮಾ ರಂಗಕ್ಕೆ ಬಂದ ಹೊಸಬರಿಗೂ ಓದಿ ಎಂದು ಹೇಳುತ್ತಿದ್ದರು.

ಇತ್ತೀಚೆಗೆ ಹೆಸರಾಂತ ರಂಗಕರ್ಮಿ ಹಾಗೂ ನಟ ಗಿರೀಶ್‌ ಕಾರ್ನಾಡ್‌ ಅವರ ‘ಆಡಾಡುತಾ ಆಯುಷ್ಯʼ ಕೃತಿಯ ಆಡಿಯೋ ಪುಸ್ತಕಕ್ಕೆ ವಿಜಯ್‌ ಧ್ವನಿ ನೀಡಿದಾಗ ಅವರು ಆ ಪುಸ್ತಕದ ಬಗ್ಗೆ ಸೋಷಲ್‌ ಮೀಡಿಯಾದಲ್ಲಿ ಅನಿಸಿಕೆ ಹಂಚಿಕೊಂಡಿದ್ದರು. ಒಂದ್ರೀತಿ ಆ ಪುಸ್ತಕವನ್ನು ತಮ್ಮದೇ ನೋಟದಲ್ಲಿ ವಿಮರ್ಶಿಸುವುದರ ಜತೆಗೆ ಆ ಕೃತಿ ತಮ್ಮ ಅನುಭಾವವನ್ನು ಹೆಚ್ಚಿಸಿದ ಬಗೆಯನ್ನು ಅಲ್ಲಿ ತೆರೆದಿಟ್ಟಿದ್ದರು. ಹಾಗೆಯೇ ಲಾಕ್‌ ಡೌನ್‌ ದಿನಗಳಲ್ಲಿ ಅವರು ನಾಡಿನ ಅನೇಕ ಸಾಹಿತಿಗಳ ಪುಸ್ತಕ ಓದಿನಲ್ಲಿ ಹೆಚ್ಚು ಸಮಯ ಕಳೆಯುತ್ತಿರುವ ಬಗ್ಗೆ ಮಾತನಾಡಿದ್ದರು. ತೀರಾ ಇತ್ತೀಚೆಗೆ ಅವರು ಸಂದರ್ಶನವೊಂದರಲ್ಲಿ ಮಾತಾಡುತ್ತಿದ್ದಾಗ ಬೆಂಗಳೂರಿಗೆ ಅರಂಭದ ದಿನಗಳು, ಆ ದಿನಗಳಲ್ಲಿ ಕಂಡ ಬೆಂಗಳೂರು, ಬೆರಗು ಮೂಡಿಸಿದ ಈ ಊರಿನ ಬಗ್ಗೆಯೂ ಬರೀಬೇಕೆನ್ನುವ ಪ್ರಯತ್ನಕ್ಕೂ ಕೈ ಹಾಕಿದ್ದರು. ಅದರ ಮೊದಲ ಪ್ರಯತ್ನವಾಗಿ ಬೆಂಗಳೂರಿನ ಮೆಜೆಸ್ಟಿಕ್‌ ಕುರಿತು ಅವರು ಬರೆದಿದ್ದ ಅನುಭವದ ಬರಹಕ್ಕೆ ಸೋಷಲ್‌ ಮೀಡಿಯಾದಲ್ಲಿ ಬಾರೀ ಮೆಚ್ಚುಗೆ ಸಿಕ್ಕಿತ್ತು. ಇದರ ಜತೆಗೆ ಅವರು ತಮ್ಮ ಬದುಕಿನಲ್ಲಿ ಇಂದಲ್ಲ ನಾಳೆ ಬರೆಯಲೇಬೇಕು ಅಂದುಕೊಂಡಿದ್ದು ಅವರ ತಾಯಿಯ ಬದುಕಿನ ಕಥೆಯನ್ನು. ಹೌದು, ಈ ವಿಚಾರವನ್ನು ಅವರು ಕೆಲವು ದಿನಗಳ ಹಿಂದೆ ‘ಸಿನಿ ಲಹರಿ’ ಜತೆಗೆ ಮಾತನಾಡುತ್ತಿದ್ದಾಗ ಔಪಚಾರಿಕವಾಗಿ ಹೇಳಿಕೊಂಡಿದ್ದರು.

ʼ ಸರ್‌, ನಾನೀಗ ಸಾಹಿತ್ಯದ ವಿದ್ಯಾರ್ಥಿ. ನಾಡಿನ ಅನೇಕ ಸಾಹಿತಿಗಳು, ಲೇಖಕರ ಪುಸ್ತಕಗಳನ್ನು ಈಗ ಕೊಂಡು ಓದುತ್ತಿದ್ದೇನೆ. ಈಗಾಗಲೇ ಕುವೆಂಪು. ಅನಂತ ಮೂರ್ತಿ, ಬೈರಪ್ಪ, ತೇಜಸ್ವಿ, ಲಂಕೇಶ್‌ ಸೇರಿದಂತೆ ಕೆಲವರ ಕೆಲವು ಪುಸ್ತಕಗಳನ್ನು ತಕ್ಕ ಮಟ್ಟಿಗೆ ಓದಿದ್ದೇನೆ. ಸದ್ಯಕ್ಕೆ ಈಗ ನಾನು ನಾಡಿನ ಹೆಸರಾಂತ ಸಾಹಿತಿ ಕುಂವೀ ಅವರ ಆತ್ಮ ಚರಿತ್ರೆ ʼಗಾಂಧಿ ಕ್ಲಾಸುʼ ಓದಿ ಮುಗಿಸಿದೆ. ಹೀಗೆ ಒಂದಷ್ಟು ಓದಿ, ಬರವಣಿಗೆಯಲ್ಲಿ ತೊಡಗಿಸಿಕೊಳ್ಳಬೇಕು ಅನ್ಕೊಂಡಿದ್ದೇವೆ. ಯಾಕಂದ್ರೆ ಎದೆ ಗೊಡಿನಲ್ಲಿ ಒಂದಷ್ಟು ಕಚ್ಚಾ ಸರಕು ಸೇರಿಕೊಂಡಿವೆ. ತುಂಬಾ ಗಾಢವಾಗಿ ಕಾಡುವ ಸರಕುಗಳು ಅವು. ಅವುಗಳನ್ನು ನಾನು ಬರವಣಿಗೆ ಮೂಲಕ ಹಡೆಯಲೇಬೇಕಿದೆ. ಹಾಗಾದರೂ ಮನಸ್ಸಿಗೆ ಒಂದು ನೆಮ್ಮದಿ ಸಿಗಬಹುದೇನೋ. ಅದರಲ್ಲೂ ನನ್ನ ತಾಯಿಯ ಬದುಕಿನ ಬಗ್ಗೆ ಬರೀಬೇಕು ಅನ್ನೋದು ನನ್ನ ಕನಸು. ಹಾಗಂತ ಅವರ ಬದುಕಿನ ಕಥೆಯನ್ನು ಸಾರ್ವಜನಿಕಗೊಳಿಸಬೇಕು ಅಂತಲ್ಲ. ನನ್ನೊಳಗೆ ಕಾಡುವ ಆ ನೋವು, ಸಂಕಟ, ವ್ಯಥೆಯನ್ನು ಅಕ್ಷರ ರೂಪಕ್ಕೆ ತರುವ ಮೂಲಕವಾದರೂ ಹೆತ್ತವಳಿಗೆ ನ್ಯಾಯ ಸಲ್ಲಿಸಬೇಕು ಅನ್ನೋದಷ್ಟೇ ಅದರ ಉದ್ದೇಶʼ

ಅಂತ ನಟ ಸಂಚಾರಿ ವಿಜಯ್‌ ತಮ್ಮ ತಾಯಿ ಆತ್ಮ ಚರಿತ್ರೆ ಬರೆಯುವ ಕನಸನ್ನು ಸಿನಿ ಲಹರಿ ಜತೆಗೆ ಹಂಚಿಕೊಂಡಿದ್ದರು. ಆದರೆ, ಈಗ ಅವರೇ ಇಲ್ಲ ಅನ್ನೋದು ಅತ್ಯಂತ ದುಃಖ ಮತ್ತು ನೋವಿನ ಸಂಗತಿ.
ಇಷ್ಟಕ್ಕೂ ನಟ ಸಂಚಾರಿ ವಿಜಯ್‌ ಎಲ್ಲವನ್ನೂ ಬಿಟ್ಟು ತನ್ನ ತಾಯಿಯ ಆತ್ಮ ಕಥೆ ಬರೆಯೋದು ತಮ್ಮ ಕನಸು ಅಂತ ಹೇಳಿದ್ದಾದರೂ ಯಾಕೆ? ಅದೊಂದು ದುರಂತ ಕಥೆ. ಜಾತಿ ಕಾರಣಕ್ಕೆ ವಿಜಯ್‌ ತಾಯಿ ತೀರಾ ಅವಮಾನ ಅನುಭವಿಸಿದ ಕಥೆ ಇದೆ. ಈಗ ಸಂಚಾರಿ ವಿಜಯ್‌ ನಮ್ಮವನು ಅಂತ ಒಪ್ಪಿಕೊಂಡ ಸಮಾಜವೇ , ವಿಜಯ್‌ ತಾಯಿ ಅವರನ್ನು ನಿಕೃಷ್ಟವಾಗಿ ನಡೆಸಿಕೊಂಡು, ಅವಮಾನಿಸಿದ ದುರಂತ ಕಥೆಯಲ್ಲಿ ಹುಟ್ಟಿ ಬೆಳೆದು ಬಂದವರು ನಟ ಸಂಚಾರಿ ವಿಜಯ್.‌ ಆ ಕಥೆ ಇನ್ನೆಷ್ಟು ಘೋರವಿತ್ತು ಅನ್ನೋದು ಅವರಿಗೇ ಗೊತ್ತು. ಅದನ್ನೇ ಅವರು ಬರೆಯಬೇಕು ಅಂತಂದುಕೊಂಡಿದ್ದು ಅನ್ನೋದನ್ನ ಅವರ ಆಪ್ತರು ಈಗ ಬಹಿರಂಗ ಪಡಿಸಿದ್ದಾರೆ.

Categories
ಸಿನಿ ಸುದ್ದಿ

ಸಂಚಾರಿ ವಿಜಯ್‌ ಹೆಸರಲ್ಲಿ ನೂರು ಗಿಣಿಗಳ ದತ್ತು ಪಡೆದ ಚಕ್ರವರ್ತಿ ಚಂದ್ರಚೂಡ್‌

ನಟ ಸಂಚಾರಿ ವಿಜಯ್‌ ಇರುವಷ್ಟು ದಿನ ಸದಾ ಒಂದಷ್ಟು ಸೇವೆ ಮೂಲಕ ದಿನ ಸವೆಸುತ್ತಿದ್ದದ್ದು ಎಲ್ಲರಿಗೂ ಗೊತ್ತಿದೆ. ಅವರಿಲ್ಲ ಎಂಬ ಬೇಸರ ಎಲ್ಲರಲ್ಲೂ ಇದೆ. ಆದರೆ, ಅವರು ಇಂದಿಗೂ ಸಿನಿಮಾಗಳ ಮೂಲಕ ಎಲ್ಲರ ಜೊತೆಯಲ್ಲಿದ್ದಾರೆ. ಬಹಳಷ್ಟು ಮಂದಿ ಸಂಚಾರಿ ವಿಜಯ್‌ ಅವರ ಗೆಳೆತನದ ಸವಿನೆನಪಿಗೆ ಹಲವು ಕಾರ್ಯಕ್ರಮ ರೂಪಿಸಲು ರೆಡಿಯಾಗಿದ್ದಾರೆ. ಅದಕ್ಕೂ ಮೊದಲೇ ಪತ್ರಕರ್ತ, ನಿರ್ದೇಶಕ ಚಕ್ರವರ್ತಿ ಚಂದ್ರಚೂಡ್, ಸಂಚಾರಿ ವಿಜಯ್ ಹೆಸರಲ್ಲೇ ಒಂದೊಳ್ಳೆಯ ಕೆಲಸ ಮಾಡುವ ಮೂಲಕ ಗಮನ ಸೆಳೆದಿದ್ದಾರೆ. ಹೌದು, ದಾವಣಗೆರೆಯ ಇಂದಿರಾ ಪ್ರಿಯದರ್ಶನಿ ಪ್ರಾಣಿ ಸಂಗ್ರಹಾಲಯದಲ್ಲಿ ನೂರು ಗಿಣಿಗಳನ್ನು ಅವರು ದತ್ತು ಪಡೆದುಕೊಂಡಿದ್ದಾರೆ. ಸಂಚಾರಿ ವಿಜಯ್ ಹೆಸರಲ್ಲಿ ಆ ಗಿಣಿಗಳನ್ನು ಒಂದು ವರ್ಷಕ್ಕೆ ದತ್ತು ಪಡೆದುಕೊಂಡಿದ್ದಾರೆ.

ಈ ವಿಷಯವನ್ನು ಸ್ವತಃ ಇನ್ಸ್ಟಾಗ್ರಾಂನಲ್ಲಿ ಹಂಚಿಕೊಂಡಿರುವ ಚಕ್ರವರ್ತಿ ಚಂದ್ರಚೂಡ್, “ಸಂಚಾರಿ ವಿಜಯ್ ನಿನಗೆ ಗಿಣಿ ಇಷ್ಟ. ಅದಕ್ಕೇ ನಿನ್ ಹೆಸರಲ್ಲೊಂದು ತಗೊಂಡಿದೀನಿ ನೋಡಿ ಸ್ವಾಮಿ..” ಎಂದು ಬರೆದುಕೊಂಡಿದ್ದಾರೆ.

ಕೋವಿಡ್ ಸಂಕಷ್ಟದಿಂದ ಮೃಗಾಲಯಗಳಲ್ಲಿರುವ ಪ್ರಾಣಿ-ಪಕ್ಷಿಗಳಿಗೆ ನೆರವು ಬೇಕಿದೆ, ದಯವಿಟ್ಟು ದತ್ತು ಪಡೆಯುವುದರ ಮೂಲಕ ಪ್ರಾಣಿಗಳನ್ನು ರಕ್ಷಿಸಬೇಕು ಎಂದು ದರ್ಶನ್‌ ಅವರು ಈ ಹಿಂದೆ ಮನವಿ ಮಾಡಿಕೊಂಡಿದ್ದರು.

ದರ್ಶನ್ ಅವರ ಮನವಿ ಬಳಿಕ ರಾಜ್ಯಾದ್ಯಂತ ಮೃಗಾಲಯಗಳಲ್ಲಿ ಪ್ರಾಣಿಗಳನ್ನು ದತ್ತು ತೆಗೆದುಕೊಳ್ಳುವವರ ಸಂಖ್ಯೆ ಹೆಚ್ಚಾಗಿದೆ. ಅದರಲ್ಲೂ ದರ್ಶನ್‌ ಅವರ ಫ್ಯಾನ್ಸ್‌ ಜೊತೆಗೆ ಈಗೀಗ ಸಿನಿಮಾ ಕ್ಷೇತ್ರದಲ್ಲಿ ಕೆಲಸ ಮಾಡುವ ಅನೇಕ ನಟ,ನಟಿಯರು ಕೂಡ ಪ್ರಾಣಿ-ಪಕ್ಷಿಗಳನ್ನು ದತ್ತು ಪಡೆದುಕೊಳ್ಳುತ್ತಿದ್ದಾರೆ.

Categories
ಸಿನಿ ಸುದ್ದಿ

ಸಾಯಿಕುಮಾರ್ ಬ್ರದರ್ಸ್‌ ನೆರವು ; ಕನ್ನಡ ಸಿನಿಮಾ ಕಾರ್ಮಿಕರಿಗೆ ಹಣ ಸಹಾಯ

ಕೊರೊನಾ ಹಾವಳಿ ಎಲ್ಲೆಡೆ ಹೆಚ್ಚಾಗಿ, ಎಲ್ಲಾ ಕ್ಷೇತ್ರಗಳಲ್ಲಿ ಕೆಲಸ ಮಾಡುವ ಜನರಿಗೆ ತೊಂದರೆಯಾಗಿದೆ. ಅಂತೆಯೆ ಸಿನಿಮಾ ಮಂದಿಗೂ ಸಂಕಷ್ಟ ಎದುರಾಗಿದೆ. ಈಗಾಗಲೇ ಹಲವು ಸ್ಟಾರ್‌ ನಟರು, ಸರ್ಕಾರ, ಸಂಘ-ಸಂಸ್ಥೆಗಳು ಸಿನಿಮಾ ಕಾರ್ಮಿಕರ ನೆರವಿಗೆ ಧಾವಿಸಿದ್ದು ಗೊತ್ತೇ ಇದೆ. ಈಗ‌ ತೆಲುಗು ನಟ ಸಾಯಿಕುಮಾರ್ ಸಹೋದರರು ಕೂಡ ಕರ್ನಾಟಕ ಚಲನಚಿತ್ರ ಕಾರ್ಮಿಕರಿಗೆ ನೆರವಾಗಿದ್ದಾರೆ.‌

ಹೌದು, ಕೊರೊನಾ ಹೊಡೆತಕ್ಕೆ ಸಿನಿಮಾ ಕಾರ್ಮಿಕರ ಕಷ್ಟ ಹೇಳತೀರದ್ದು. ಈ ಸಮಯದಲ್ಲಿ ಅವರಿಗೆ ನೆರವಾಗಬೇಕು ಎಂಬ ಉದ್ದೇಶದಿಂದಲೇ ನಟರಾದ ಸಾಯಿಕುಮಾರ್, ರವಿಶಂಕರ್ ಹಾಗು ನಿರ್ದೇಶಕ ಅಯ್ಯಪ್ಪ ಪಿ.ಶರ್ಮ ಸಹೋ ಐದು ಲಕ್ಷ ರೂಪಾಯಿಗಳನ್ನು ಕರ್ನಾಟಕ ಚಲನಚಿತ್ರ ಕಾರ್ಮಿಕರ ಒಕ್ಕೂಟಕ್ಕೆ ನೀಡಿದ್ದಾರೆ. ನಾವು ಬೇರೆ ರಾಜ್ಯದಲ್ಲಿ ಜನಿಸಿದ್ದರೂ, ನಮ್ಮ ಜನಪ್ರಿಯತೆಯ ಹೆಚ್ಚು ಪಾಲು ಕರ್ನಾಟಕದ್ದು. ಹಾಗಾಗಿ ನಾವು ನಮ್ಮ ಕೈಲಾದ ಸಹಾಯ ಮಾಡಿದ್ದೇವೆ ಎನ್ನುವುದು ಸಾಯಿಕುಮಾರ್ ಸಹೋದರರ ಮಾತು.

Categories
ಸಿನಿ ಸುದ್ದಿ

ಬಾಲಿವುಡ್‌ಗೆ ಕಾಲಿಟ್ಟ ಧರ್ಮ ಕೀರ್ತಿರಾಜ್! ಸದ್ದಿಲ್ಲದೆ ಮಾಡಿದ್ರು ಹಿಂದಿ ಆಲ್ಬಂ ಸಾಂಗ್…

’ನವಗ್ರಹ’ ಚಿತ್ರದ ಮೂಲಕ ಕನ್ನಡ ಚಿತ್ರರಂಗಕ್ಕೆ ಎಂಟ್ರಿಯಾದ ಧರ್ಮಕೀರ್ತಿರಾಜ್, ತಕ್ಕಮಟ್ಟಿಗೆ ಗುರುತಿಸಿಕೊಂಡಿರುವ ಹೀರೋ. ಆ ಚಿತ್ರದ ’ಕಣ್ ಕಣ್ಣ ಸಲಿಗೆ’ ಹಾಡಿನ ಮೂಲಕ ಅಚ್ಚುಮೆಚ್ಚಿನ ಹೀರೋ ಎನಿಸಿಕೊಂಡರು. ನಂತರದ ದಿನಗಳಲ್ಲಿ ನಾಯಕನಾಗಿ ಹಲವು ಚಿತ್ರಗಳಲ್ಲಿ ನಟಿಸಿ ಕನ್ನಡದಲ್ಲಿ ತಮ್ಮದೆ ಛಾಪು ಮೂಡಿಸಿದ್ದು ಗೊತ್ತೇ ಇದೆ. ಈಗ ಈ ಧರ್ಮ ಕೀರ್ತಿರಾಜ್ ಅವರು ಹೊಸ ಸುದ್ದಿಗೆ ಕಾರಣರಾಗಿದ್ದಾರೆ. ಹೌದು, ಅವರೀಗ ಬಾಲಿವುಡ್‌ಗೂ ಎಂಟ್ರಿ ಕೊಟ್ಟಿದ್ದಾರೆ.

ಅರೇ, ಧರ್ಮ ಕೀರ್ತಿರಾಜ್ ಬಾಲಿವುಡ್ ಅಂಗಳಕ್ಕೆ ಜಿಗಿದಿದ್ದಾರೆ ಅಂದಾಕ್ಷಣ, ಹೊಸ ಸಿನಿಮಾ ಅಂದುಕೊಂಡರೆ ಆ ಊಹೆ ತಪ್ಪು. ಅವರು ಬಾಲಿವುಡ್ ಎಂಟ್ರಿಯಾಗಿರೋದು ಸಿನಿಮಾ ಮೂಲಕವಲ್ಲ. ಹಿಂದಿ ಆಲ್ಬಂ ಸಾಂಗ್ ಮೂಲಕ ಹೆಜ್ಜೆ ಇಟ್ಟಿದ್ದಾರೆ. ಅಂದಹಾಗೆ, ಆ ಆಲ್ಬಂ ಹೆಸರು ’ಕಿತ್ನಾ ಮಜಾ ಹೈ’. ಇದು ನಾಲ್ಕು ನಿಮಿಷದ ಹಿಂದಿ ವಿಡಿಯೋ ಆಲ್ಬಂ. ಪ್ರೀತಿಯಲ್ಲಿ ಮೋಸ ಹೋಗಿ ಆತ್ಮಹತ್ಯೆಗೆ ಶರಣಾಗುವ ಹುಡುಗಿಯನ್ನು ಕಾಪಾಡುವ, ಕಥೆ ಈ ಹಾಡಲ್ಲಿ ಸಾಗುತ್ತೆ. ರವಿಶರ್ಮ ಈ ಆಲ್ಬಂ ವಿಡಿಯೊ ಸಾಂಗ್ ನಿರ್ದೇಶನ ಮಾಡಿದ್ದಾರೆ. ಅಜಯ್‌ ದೇವಗನ್ ಮತ್ತು ರಣ್‌ಭೀರ್‌ಕಪೂರ್ ಚಿತ್ರಗಳಿಗೆ ಕೆಲಸ ಮಾಡಿರುವ ಪಪ್ಪುಮಲ ಕ್ರಿಯೇಟೀವ್ ನಿರ್ದೇಶಕರಾಗಿ ಇಲ್ಲಿ ಕೆಲಸ ಮಾಡಿದ್ದಾರೆ.

ಯುನೈಟೆಡ್ ಫಿಲಿಂಸ್ ಎಂಟರ್‌ಟೈನ್‌ಮೆಂಟ್ ಸಂಸ್ಥೆಯೊಂದಿಗೆ ಸೇರಿಕೊಂಡು ಅಶೋಕ್ ಜೈನ್ ನಿರ್ಮಾಣ ಮಾಡಿದ್ದಾರೆ.
ಹೊಸ ಪ್ರತಿಭೆ ನಗ್ಮಾಕ್ತರ್ ಇಲ್ಲಿ ನಾಯಕಿಯಾಗಿ ನಟಿಸಿದ್ದಾರೆ. ಇನ್ನು, ಸಾಹಿತ್ಯ ಬರೆದು ಸಂಗೀತ ನೀಡಿ ಗೀತೆಗೆ ಧ್ವನಿಯಾಗಿರುವ ಅಲ್ತಾಫ್‌ ಸಯ್ಯದ್ ಕೂಡ ಈ ಹಾಡಲ್ಲಿ ಹಾಡಲ್ಲಿ ಕಾಣಿಸಿಕೊಂಡಿದ್ದಾರೆ.

ಶ್ರೀಕಾಂತ್ ಅಸತಿ ಛಾಯಾಗ್ರಹಣವಿದೆ. ರಾಕೇಶ್‌ ಮೆಹತಾ ಸಂಕಲನವಿದೆ. ಸದ್ಯ ಯೂಟ್ಯೂಬ್‌ ನಲ್ಲಿ ರಿಲೀಸ್ ಆಗಿರುವ ಈ ಹಾಡು ಸಿಕ್ಕಾಪಟ್ಟೆ ವೈರಲ್ ಮೆಚ್ಚುಗೆ ಪಡೆದಿದೆ.

Categories
ಸಿನಿ ಸುದ್ದಿ

ಸಂಚಾರಿ ವಿಜಯ್‌ ಇಲ್ಲ ಎನ್ನುವ ವಾಸ್ತವದ ಜತೆಗೆ ಅವರ ಆಶಯದೊಂದಿಗೆ ಅವರನ್ನು ಜೀವಂತವಾಗಿರಿಸುವ ಕೆಲಸದತ್ತ ನಿಮ್ಮ ಲಹರಿ…

ಗೆಳೆಯ ಸಂಚಾರಿ ವಿಜಯ್‌ ಇನ್ನಿಲ್ಲ. ಅವರು ಬದುಕುಳಿಯಲಿ ಎನ್ನುವ ಲಕ್ಷಾಂತರ ಜನರ ಪ್ರಾರ್ಥನೆ ಕೊನೆಗೂ ಫಲಿಸಲಿಲ್ಲ. ಅವರು ಮಾಡುತ್ತಾ ಬಂದ ಪುಣ್ಯದ ಕೆಲಸಗಳು ಕೈ ಹಿಡಿಯಲಿಲ್ಲ. ವಿಧಿಯಾಟದ ಮುಂದೆ ಎಲವೂ ಕೈಚೆಲ್ಲಿ ಹೋದವು. ದುರಾದೃಷ್ಟವಶಾತ್, ರಾಷ್ಟ್ರ ಪ್ರಶಸ್ತಿ ವಿಜೇತ ನಟ ಸಂಚಾರಿ ವಿಜಯ್‌ ಇನ್ನೆಂದಿಗೂ ಬಾರದ ಲೋಕಕ್ಕೆ ಪಯಣ ಬೆಳೆಸಿಯೇ ಬಿಟ್ಟರು. ಕನ್ನಡ ಚಿತ್ರರಂಗಕ್ಕೆ ಮಾತ್ರವಲ್ಲ ಭಾರತೀಯ ಚಿತ್ರರಂಗಕ್ಕೇ ಅವರ ಸಾವು ತುಂಬಲಾರದ ನಷ್ಟ. ಅದರಲ್ಲೂ ನಿಮ್ಮ ನೆಚ್ಚಿನ ʼಸಿನಿಲಹರಿʼ ಸಂಸ್ಥೆಗೆ ಅಪಾರವಾದ ನಷ್ಟ.

ಯಾಕಂದ್ರೆ ʼಸಿನಿಲಹರಿʼಯ ನಿಜ ಮಾರ್ಗದರ್ಶಿ ಅಗಿದ್ದರು ವಿಜಯ್. ಈಗ ನಿಜಕ್ಕೂ ಒಬ್ಬ ಹಿತೈಷಿಯನ್ನು ʼಸಿನಿಲಹರಿʼ ಕಳೆದುಕೊಂಡಿದೆ. ನಾವಿಬ್ಬರು ಸೇರಿ ಕಳೆದ ವರ್ಷದ ಕೊನೆಯ ದಿನಗಳಲ್ಲಿ ʼಸಿನಿ ಲಹರಿʼ ಅಂತ ನೂತನ ವೆಬ್‌ ಸೈಟ್‌ ಶುರು ಮಾಡುವ ಹೊಸ ಸಾಹಸಕ್ಕೆ ಕೈ ಹಾಕಿದ್ದಾಗ, ಶುರು ಮಾಡಿ, ನಾವಿದ್ದೇವೆ ಅಂತ ಬೆನ್ನಿಗೆ ನಿಂತವರಲ್ಲಿ ನಮ್ಮ ಸಂಚಾರಿ ವಿಜಯ್‌ ಮೊದಲಿಗರು.

ಗೆಳೆಯರೆಂದರೆ ಯಾವುದೂ, ಎಂತೂ ಅಂತ ಹಿಂದು ಮುಂದು ನೋಡದೆ ಸಹಾಯಕ್ಕೆ ನಿಲ್ಲುವ ವ್ಯಕ್ತಿತ್ವ ಅವರದು. ʼಸಿನಿ ಲಹರಿʼ ಆರಂಭದ ಹೊತ್ತಿಗೆ ಅವರು ಹಾಗೆ ಹೇಳಿ ಬೆನ್ನಿಗೆ ನಿಂತಿದ್ದು ಮಾತ್ರವಲ್ಲ, ಕೋವಿಡ್‌ ಭೀತಿಯ ನಡುವೆಯೇ ನಾವು ವೆಬ್‌ ಉದ್ಘಾಟನೆ ಮಾಡುತ್ತೇವೆ ಅಂದಾಗ ಮೀನಾಮೇಷ ಎಣಿಸದೆ ಕಾರ್ಯಕ್ರಮಕ್ಕೆ ಬಂದರು. ಹಾಗೆಯೇ ಅದರ
ಜರ್ನಿಯ ಉದ್ದಕ್ಕೂ ಜತೆಗಿದ್ದು ಸಲಹೆ ನೀಡುತ್ತಾ ಬಂದರು. ವೆಬ್‌ ಸೈಟ್‌ ಶುರುವಾಗಿ ನೂರು ದಿವಸ ಪೂರೈಸಿದ ಹೊತ್ತಿಗೆ ನಾವು ಕಚೇರಿಯಲ್ಲಿ ಹಮ್ಮಿಕೊಂಡ ಸರಳ ಕಾರ್ಯಕ್ರಮಕ್ಕೂ ಅತಿಥಿಯಾಗಿ ಬಂದು ಕೇಕ್‌ ಕತ್ತರಿಸಿ ಖುಷಿ ಪಟ್ಟಿದ್ದರು.

ಮಾಧ್ಯಮದಲ್ಲಿ ಈಗಷ್ಟೇ ಬೆಳೆಯುತ್ತಿರುವ ನಮ್ಮಂತಹ ಹುಡುಗರಿಗೆ ಒಬ್ಬ ನಟ ಬೆಂಬಲಕ್ಕೆ ನಿಲ್ಲುವುದು ಅಂದ್ರೆ ತಮಾಷೆ ಅಲ್ಲ. ಆ ವಾಸ್ತವ ಏನು ಅನ್ನೋದು ಮಾಧ್ಯಮದಲ್ಲಿದ್ದವರಿಗೆ ಗೊತ್ತಿದೆ. ಆದರೆ, ಸಂಚಾರಿ ವಿಜಯ್‌ ಮಾತ್ರ ಹಾಗಲ್ಲ. ಸ್ಟಾರ್‌ ಎಂಬ ತಮ್ಮೊಳಗಿನ ಅಹಂ ಮೀರಿ ಎಲ್ಲರನ್ನು ಸಮ ಭಾವದಿಂದಲೇ ಅಪ್ಪಿಕೊಂಡಿದ್ದರು, ಒಪ್ಪಿಕೊಂಡಿದ್ದರು. ಆ ಮಟ್ಟಿಗೆ ವಿಜಯ್‌ ಅವರದ್ದು ಅಪರೂಪದ ವ್ಯಕ್ತಿತ್ವ. ನಟ ಸಂಚಾರಿ ವಿಜಯ್‌ ತೀರಾ ಭಿನ್ನ ಅಂತೆನಿಸಿಕೊಂಡಿದ್ದೇ ತಮ್ಮ ಸರಳ, ಸಜ್ಜನಿಕೆಯ ವ್ಯಕ್ತಿತ್ವದಿಂದ.

ಮಾಧ್ಯಮದಲ್ಲಿ ಅವರು ಯಾರನ್ನೂ ಸಣ್ಣವರು-ದೊಡ್ಡವರು ಅಂತ ಬೇರ್ಪಡಿಸಿ ಕಂಡವರೇ ಅಲ್ಲ. ಅವರ ದೃಷ್ಟಿಯಲ್ಲಿ ಎಲ್ಲರೂ ಒಂದೇ. ಯಾರೇ ಮಾತನಾಡಿಸಲಿ, ಅಥವಾ ಯಾವುದೇ ಕ್ಷಣ ಫೋನ್‌ ಕಾಲ್‌ ಮಾಡಿದರೂ ರೆಸ್ಪಾನ್ಸ್‌ ಮಾಡುವ ಮಾನವೀಯ ಗುಣದ ವ್ಯಕ್ತಿ ವಿಜಯ್.‌ ಹಾಗೆಲ್ಲ ಮಾಧ್ಯಮದವರ ಜತೆಗೆ ತಾವು ಪರಿಚಯ ಇದ್ದೇನೆ ಅಂತ ಯಾವತ್ತಿಗೂ ತಮ್ಮ ಬಗ್ಗೆ ಒಂದು ಆರ್ಟಿಕಲ್‌ ಬರೀಬಹುದಾ ಅಂತಲೂ ಕೇಳಿರಲಿಲ್ಲ. ನಮಗಷ್ಟೇ ಅಲ್ಲ, ಮಾಧ್ಯಮದ ಯಾವುದೇ ಪರ್ತಕರ್ತರ ಬಳಿಯೂ ಹಾಗೆ ಕೇಳಿಕೊಂಡಿದ್ದು ದಾಖಲೆಯೂ ಇಲ್ಲ. ಅಂತಹ ಸಣ್ಣತನ ಅವರಗಿರಲಿಲ್ಲ. ಅದೆಲ್ಲವನ್ನು ಮೀರಿ ಎಲ್ಲಾ ಮಾಧ್ಯಮದವರ ಜತೆಗೆ ಅತ್ಯಂತ ನಿಷ್ಕಲ್ಮಶ ಸ್ನೇಹ ಸಂಪಾದಿಸಿಕೊಂಡಿದ್ದರು.

ಸಮಯ ಸಿಕ್ಕಾಗ ”ಸಿನಿ ಲಹರಿ’ಯ ಪ್ರತಿ ಬರಹಗಳನ್ನು ಗಮನಿಸುತ್ತಿದ್ದ ಅವರು, ಅದು ಹಾಗಲ್ಲ ಹೀಗೆ ಅಂತ ಸಲಹೆ ನೀಡುತ್ತಿದ್ದರು. ಆ ಮೂಲಕವೇ ‘ಸಿನಿ ಲಹರಿ’ಯ ಫ್ಯಾಮಿಲಿ ಮೆಂಬರ್‌ ಕೂಡ ಆಗಿದ್ದರು. ಆ ಮೂಲಕ ‘ಸಿನಿಲಹರಿ’ಗೂ ಒಂದು ಮೆರಗು ಸಿಕ್ಕಿತ್ತು. ರಾಷ್ಟ್ರಪ್ರಶಸ್ತಿ ವಿಜೇತ ನಟ ಒಂದು ಸಂಸ್ಥೆಯ ಫ್ಯಾಮಿಲಿ ಮೆಂಬರ್‌ ಆಗಿದ್ದರೂ ಅನ್ನೋದು ಅದು ನಮ್ಮ ಪಾಲಿಗೆ ಸಿಕ್ಕ ಬಹುದೊಡ್ಡ ಕ್ರೆಡಿಟ್‌ ಆಗಿತ್ತು.

ಈಗ ಅವರಿಲ್ಲ ಅನ್ನೋದನ್ನು ಹೇಗೆ ಅರಗಿಸಿಕೊಳ್ಳಬೇಕೋ ಗೊತ್ತಿಲ್ಲ. ಆದರೂ ಅವರಿಲ್ಲ. ಆದರೆ ಅವರು ಆಶಯಗಳಿವೆ. ಕಷ್ಟದಲ್ಲಿದ್ದವರಿಗೆ ನೆರವಾಗುವುದು, ಎಷ್ಟೇ ಸ್ಟಾರ್‌ ಕಿರೀಟ ಬಂದರೂ ಸರಳವಾಗಿರುವುದು, ನೊಂದವರ ಧ್ವನಿಯಾಗುವುದು, ಸದಾ ನಗು ನಗುತ್ತಾ ಬಾಳವುದು. ಇದು ವಿಜಯ್‌ ಬದುಕು. ಅದನ್ನೇ ನಾವು ಕೂಡ ಪಾಲಿಸುವ ಮೂಲಕ ಅವರ ಆತ್ಮಕ್ಕೆ ಶಾಂತಿ ದೊರಕಿಸಿಕೊಡಬೇಕಿದೆ.


ಆ ನಿಟ್ಟಿನಲ್ಲಿ ‘ಸಿನಿ ಲಹರಿ’ ಅವರ ಹೆಸರಲ್ಲಿ ನೊಂದವರ, ಅಸಹಾಯಕರ ಪರವಾಗಿ ಎಂದೆಂದಿಗೂ ಇರುತ್ತೆ ಎನ್ನುವ ಭರವಸೆಯೊಂದಿಗೆ ಸಂಚಾರಿ ವಿಜಯ್‌ ಅವರ ಆತ್ಮಕ್ಕೆ ಶಾಂತಿ ಕೋರುತ್ತದೆ.

ವಿಜಯ್ ಭರಮಸಾಗರ- ದೇಶಾದ್ರಿ ಹೊಸ್ಮನೆ


error: Content is protected !!