ನಟಿ ಶ್ರೀಲೀಲಾ ಭಾವುಕರಾಗಿದ್ದಾರೆ! ಅರೇ ಅವರೇಕೆ ಹಾಗಾದರು ಎಂಬ ಪ್ರಶ್ನೆ ಸಹಜ. ಆದರೆ, ಅವರು ಭಾವುಕರಾಗಿರೋದು ನಿಜ. ಹಾಗಂತ ಅದು ಸಿನಿಮಾ ದೃಶ್ಯದಲ್ಲಲ್ಲ. ಬದಲಾಗಿ ರಿಯಲ್ ಆಗಿ ಭಾವುಕರಾಗಿದ್ದಾರೆ. ಅಂದಹಾಗೆ, ವಿಷಯ ಏನೆಂದರೆ, ಶ್ರೀ ಲೀಲ ಅವರು ಇಬ್ಬರು ದಿವ್ಯಾಂಗ ಮಕ್ಕಳನ್ನು ದತ್ತು ಪಡೆದಿದ್ದಾರೆ.
ಹೌದು, ಶ್ರೀಲೀಲ ಅವರು ಮಾತೃಶ್ರೀ ಮನೋವಿಕಾಸ ಕೇಂದ್ರದ ಇಬ್ಬರು ಮಕ್ಕಳನ್ನು ದತ್ತು ಪಡೆಯುವ ಮೂಲಕ ಭಾವುಕ ಕ್ಷಣಗಳನ್ನು ಅನುಭವಿಸಿದ್ದಾರೆ. ಮಾತೃಶ್ರೀ ಮನೋವಿಕಾಸ ಕೇಂದ್ರದ ಎಂಟು ತಿಂಗಳ ಮಗು ಗುರು ಮತ್ತು ಶೋಭಿತ ಎನ್ನುವ ಹೆಣ್ಣು ಮಗಳನ್ನು ದತ್ತು ಪಡೆದ ಶ್ರೀಲಿಲ ಕಣ್ತುಂಬಿಕೊಂಡಿದ್ದಾರೆ. ಬೈ ಟು ಲವ್ ಚಿತ್ರದಲ್ಲಿ ಮಗುವಿನ ಜೊತೆ ನಟಿಸಿರುವ ಶ್ರೀಲೀಲ, ಆ ಮಗುವಿನೊಂದಿಗೆ ಬೆಸೆದಿದ್ದ ಬಂಧ ಮತ್ತು ಮಾತೃ ಶ್ರೀಮನೋವಿಕಾಸ ಕೇಂದ್ರದಲ್ಲಿ ಆ ಮಕ್ಕಳನ್ನು ನೋಡಿದ ಕ್ಷಣವೇ ಅವರು ಭಾವುಕರಾದರು.
ಅದೇ ಫೀಲಿಂಗ್‌ನಲ್ಲಿದ್ದ ಅವರು ಇಬ್ಬರು ಮಕ್ಕಳನ್ನ ದತ್ತು ಪಡೆದು ಇತರರಿಗೆ ಮಾದರಿಯಾಗಿ, ಸ್ಫೂರ್ತಿ ತುಂಬಿದ್ದಾರೆ. ಈ ವೇಳೆ ಬೈ ಟು ಲವ್ ಚಿತ್ರದ ನಿರ್ದೇಶಕ ಹರಿ ಸಂತು ಅವರು ನಟಿ ಶ್ರೀಲೀಲ ಅವರಿಗೆ ಸಾಥ್ ನೀಡಿದರು. ಅಂದಹಾಗೆ, ಶ್ರೀಲೀಲ ಅಭಿನಯದ ಬೈಟು ಲವ್ ಚಿತ್ರಕ್ಕೂ ಮಕ್ಕಳಿಗೂ ವಿಶೇಷ ನಂಟಿದ್ದು, ಈ ಸಿನಿಮಾ ಇಂದಿನ ಪೀಳಿಗೆಗೆ ಬದುಕಿನ ಪಾಠ ಮಾಡಲಿದಯಂತೆ. ಅಂತಹ ವಿಶೇಷ ವಿಚಾರಗಳು ಚಿತ್ರದಲ್ಲಿವೆ ಎಂಬುದು ಶ್ರೀಲೀಲ ಮಾತು. ಬೈ ಟು ಲವ್ ಚಿತ್ರ ಫೆಬ್ರವರಿ 18ಕ್ಕೆ ರಾಜ್ಯದಾದ್ಯಂತ ರಿಲೀಸ್ ಆಗ್ತಿದೆ.
ಅಲ್ಲು ಅರ್ಜುನ್ ಅಭಿನಯದ ‘ಪುಷ್ಪ’ ಚಲನಚಿತ್ರ ದೇಶಾದ್ಯಂತ ಸದ್ದು ಮಾಡುತ್ತಿರುವುದು ಗೊತ್ತೇ ಇದೆ. ರಕ್ತಚಂದನ ಮಾಫಿಯಾವನ್ನೇ ಕೇಂದ್ರವನ್ನಾಗಿಸಿ ಆಂಧ್ರದ ದಟ್ಟಾರಣ್ಯದಲ್ಲಿ ನಡೆಯುವ ಆ ಕರಾಳ ದಂಧೆ ಪ್ರೇಕ್ಷಕರನ್ನು ತುದಿಗಾಲಿನಲ್ಲಿ ಇರಿಸುವಂತೆ ಮಾಡಿದೆ. ‘ಪುಷ್ಪ’ ಚಿತ್ರದ ಮಾದರಿಯಲ್ಲೇ ನಮ್ಮ ರಾಜ್ಯದ ಪಶ್ಚಿಮ ಘಟ್ಟದಲ್ಲಿ ಬಹುದೊಡ್ಡ ದಂಧೆ ಕಾರ್ಯನಿರ್ವಹಿಸುತ್ತಿದೆ. ಈ ಮಾಫಿಯಾದ ಬ್ಯಾಕ್‌ಡ್ರಾಪ್‌ನಲ್ಲೇ ಸಂಚಾರಿ ವಿಜಯ್ ಅಭಿನಯದ `ಮೇಲೊಬ್ಬ ಮಾಯಾವಿ’ ಚಿತ್ರ ಕೂಡ ಇದೀಗ ಬಿಡುಗಡೆಗೆ ಸಿದ್ಧವಾಗಿದೆ.
ಅರಣ್ಯಪ್ರದೇಶವನ್ನೇ ಹೊದ್ದುಕೊಂಡಿರುವ ದಕ್ಷಿಣ ಕನ್ನಡ ಮತ್ತು ಕೊಡಗು ಗಡಿಭಾಗದ ಪುಷ್ಪಗಿರಿ ಅಭಯಾರಣ್ಯ ಭಾಗದಲ್ಲಿ ಹರಳು ಕಲ್ಲು ದಂಧೆ ಮತ್ತೆ ಕಾರ್ಯಾರಂಭಗೊಂಡಿದೆ. ಕೊಡಗು-ದಕ್ಷಿಣ ಕನ್ನಡ ಜಿಲ್ಲೆಗೆ ಹೊಂದಿಕೊಂಡಿರುವ ಪುಷ್ಪಗಿರಿ ಅರಣ್ಯದಲ್ಲಿ ಈ ನಿಗೂಢ ಹರಳುಕ ಲ್ಲಿನ ಗಣಿಗಾರಿಕೆ ನಡೆಯುತ್ತಿದೆ. ಆಭರಣ, ಉಂಗುರುಗಳಿಗೆ ಬಳಸುವ ಈ ಹರಳಿನ ಕಲ್ಲಿಗಾಗಿ ಅಕ್ರಮ ದಂಧೆಕೋರರು ಹುಡುಕಾಟ ನಡೆಸುತ್ತಿದ್ದು ಅರಣ್ಯ ಇಲಾಖೆ ಮಾತ್ರ ಕಣ್ಮುಚ್ಚಿ ಕುಳಿತಿದೆ. ದಶಕಗಳ ಹಿಂದೆ ನಿಂತು ಹೋಗಿದ್ದ ಹರಳು ಕಲ್ಲಿನ ಗಣಿಗಾರಿಕೆ ಮತ್ತೆ ಆರಂಭಗೊಂಡಿದ್ದು ಕೂಜಿಮಲೆ, ಸುಟ್ಟತ್ ಮಲೆ ಅರಣ್ಯ ಪ್ರದೇಶದಲ್ಲಿ ಹೊಳೆಯುವ ಕಲ್ಲಿಗಾಗಿ ಹುಡುಕಾಟ ನಡೆಸಲಾಗುತ್ತಿದೆ. ಅಚ್ಚರಿಯ ವಿಚಾರವೆಂದರೆ, `ಮೇಲೊಬ್ಬ ಮಾಯಾವಿ’ ಚಿತ್ರತಂಡ ಈ ಅಪಾಯದ ಜಾಗಗಳಲ್ಲೇ ಚಿತ್ರೀಕರಣವನ್ನು ಮಾಡಿತ್ತು.
ಪುಷ್ಪಗಿರಿ ಅರಣ್ಯವಲಯದ ಕೂಜಿಮಲೆ ಮತ್ತು ಸುಟ್ಟತ್ ಮಲೆಯಲ್ಲಿ ಈಗ ಅಕ್ರಮ ದಂಧೆ ಮತ್ತೇ ಗರಿಗೆದರಿದೆ. ಕಳೆದ ಎರಡು ದಶಕಗಳ ಹಿಂದೆ ಸುಬ್ರಹ್ಮಣ್ಯ ಮತ್ತು ಕೊಡಗಿಗೆ ಹೊಂದಿಕೊಂಡಿರುವ ಕೂಜಿಮಲೆ ಮತ್ತು ಸುಟ್ಟತ್ ಮಲೆ ಎಂಬ ಬೆಟ್ಟಗಳಲ್ಲಿ ಹರಳು ಕಲ್ಲು ಪತ್ತೆಯಾಗಿತ್ತು. ಈ ಕಲ್ಲಿಗೆ ಆಗ ಕೆಜಿಯೊಂದಕ್ಕೆ 500 ರೂಪಾಯಿ ಇಂದ ಆರಂಭವಾಗಿ ಸಾವಿರಾರು ರೂಪಾಯಿ ಬೆಲೆ ದೊರೆಯುತ್ತಿತ್ತು. ಆದರೀಗ ಈ ಹರಳು ಕಲ್ಲಿಗೆ ರಾಜಸ್ಥಾನ ,ಗುಜರಾತ್ , ಮುಂಬೈ ಆಭರಣ ತಯಾರಿಕರಿಂದ ಭಾರೀ ಬೇಡಿಕೆ ಇದೆ. ಒಂದು ಮಾಹಿತಿಯ ಪ್ರಕಾರ ಈ ಹರಳು ಕಲ್ಲಿಗೆ ಪ್ರಸ್ತುತ 1 ಕೆಜಿಗೆ 30 ರಿಂದ 40 ಸಾವಿರ ರೂಪಾಯಿ ಇದೆ ಎಂದು ಹೇಳಲಾಗಿದೆ. ಈ ಎಲ್ಲಾ ಅಂಶಗಳನ್ನು ಚಿತ್ರತಂಡ `ಮೇಲೊಬ್ಬ ಮಾಯಾವಿ’ಯಲ್ಲಿ ಮನೋರಂಜನೆಯೊಂದಿಗೆ ಪ್ರೇಕ್ಷಕರ ಮುಂದಿಡಲಿದೆ.
ಈ ದಂಧೆಯಿಂದ ಪೃಕೃತಿಗೂ ಅಪಾರ ನಷ್ಟವುಂಟಾಗುತ್ತಿದೆ. ಒಂದು ಕಾಲದಲ್ಲಿ ಹರಳುಕಲ್ಲು ದಂಧೆಯಿಂದಾಗಿ ಹೊಡೆದಾಟ, ಬಡಿದಾಟ ನಡೆದು ಹಲವು ಮಂದಿಯ ಪ್ರಾಣಕ್ಕೆ ಕುತ್ತು ಬಂದಿತ್ತು. ಸುಟ್ಟತ್ ಮಲೆ ಮತ್ತು ಕೂಜಿಮಲೆ ಹರಳು ಕಲ್ಲಿನ ದಂಧೆಗೆ ಅರಣ್ಯ ಇಲಾಖೆ ಕಡಿವಾಣ ಹಾಕಿತ್ತು. ಇದೀಗ ಮತ್ತೆ ಇಲ್ಲಿ ದಂಧೆ ಶುರುವಾಗಿದೆ. ಅದರ ಮೇಲೆ `ಮೇಲೊಬ್ಬ ಮಾಯಾವಿ’ ಚಿತ್ರ ಪ್ರಕೃತಿಯ ಮೇಲೆ ನಡೆಯುತ್ತಿರುವ ವಿಕೃತಿಯ ಮೇಲೂ ಬೆಳಕು ಚೆಲ್ಲಲ್ಲಿದೆ.
ಶ್ರೀ ಕಟೀಲ್ ಸಿನಿಮಾಸ್’ ಬ್ಯಾನರ್‌ನಲ್ಲಿ ಭರತ್ ಕುಮಾರ್, ತನ್ವಿ ಅಮಿನ್ ಕೊಲ್ಯ ನಿರ್ಮಾಪಕರು. ನಿರ್ದೇಶಕ ಬಿ.ನವೀನ್‌ಕೃಷ್ಣ, ಸಂಚಾರಿ ವಿಜಯ್ ಅವರ ಇರುವೆ’ ಅನ್ನುವ ಪಾತ್ರ ಕಟ್ಟಿಕೊಡುವ ಮೂಲಕ ಚಿತ್ರರಂಗಕ್ಕೆ ಎಂಟ್ರಿ ಕೊಡುತ್ತಿದ್ದಾರೆ. ಅನನ್ಯ ಶೆಟ್ಟಿ ನಾಯಕಿಯಾಗಿದ್ದು, ಬಿಗ್‌ಬಾಸ್ ಖ್ಯಾತಿಯ ಚಕ್ರವರ್ತಿ ಚಂದ್ರಚೂಡ್ ಮೊದಲ ಬಾರಿಗೆ ಪೂರ್ಣ ಪ್ರಮಾಣದ ಖಳನಟನಾಗಿ ಕಾಣಿಕೊಳ್ಳುತ್ತಿದ್ದಾರೆ. ಅಷ್ಟೇ ಅಲ್ಲ, ಅವರಿಲ್ಲಿ ಸಂಭಾಷಣೆ, ಚಿತ್ರಕಥೆಯ ಜೊತೆಯಲ್ಲಿ ಹಾಡನ್ನೂ ಬರೆದಿದ್ದಾರೆ. ಚಿತ್ರದಲ್ಲಿ ಕೃಷ್ಣಮೂರ್ತಿ ಕವತ್ತಾರ್, ಪವಿತ್ರಾ ಜಯರಾಮ್, ಬೆನಕ ನಂಜಪ್ಪ, ಎಮ್.ಕೆ.ಮಠ, ನವೀನ್‌ಕುಮಾರ್, ಲಕ್ಷ್ಮಿ ಅರ್ಪಣ್ , ಮುಖೇಶ್, ಡಾ.ಮನೋನ್ಮಣಿ ಇತರರು ಇದ್ದಾರೆ.
ಚಿತ್ರಕ್ಕೆ ದಿ. ಎಲ್.ಎನ್.ಶಾಸ್ತ್ರೀಯವರ ಸಂಗೀತವಿದೆ. ಹಿನ್ನಲೆ ಸಂಗೀತ ಮಣಿಕಾಂತ್ ಕದ್ರಿ ಮಾಡಿದ್ದಾರ. ಕೆ.ಗಿರೀಶ್ ಕುಮಾರ್ ಅವರ ಸಂಕಲನವಿದೆ. ದೀಪಿತ್ ಬಿಜೈ ರತ್ನಾಕರ್ ಕ್ಯಾಮೆರಾ ಹಿಡಿದಿದ್ದಾರೆ. ರಾಮು ನೃತ್ಯ ಸಂಯೋಜನೆಯಿದೆ. ಚಿತ್ರ ಇಷ್ಟರಲ್ಲೇ ರಿಲೀಸ್ ಆಗಲಿದೆ.
ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್ ಅಭಿನಯದ ರಾಣ ಚಿತ್ರದ ಹಾಡುಗಳು ಹೊರಬಂದಿವೆ. ನಟ ದುನಿಯಾ ವಿಜಯ್ ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಅಷ್ಟೇ ಅಲ್ಲ, ನಿರ್ಮಾಪಕ ಕೆ.ಮಂಜು ಅವರ ಹುಟ್ಟುಹಬ್ಬದ ಸಂಭ್ರಮ ಕೂಡ ಹಾಡು ಬಿಡುಗಡೆ ವೇಳೆ ನಡೆದಿದೆ.
ಹೌದು, ಕೆ.ಮಂಜು ಅರ್ಪಿಸಿರುವ ಗುಜ್ಜಾಲ್ ಟಾಕೀಸ್ ಬ್ಯಾನರ್‌ನಲ್ಲಿ ಪುರುಷೋತ್ತಮ ಗುಜ್ಜಾಲ್ ನಿರ್ಮಿಸುತ್ತಿರುವ, ನಂದ ಕಿಶೋರ್ ನಿರ್ದೇಶನದ ರಾಣ ಚಿತ್ರದ ಹಾಡುಗಳನ್ನು ದುನಿಯಾ ವಿಜಯ್ ರಿಲೀಸ್ ಮಾಡಿದ್ದಾರೆ. ಈ ಚಿತ್ರಕ್ಕೆ ಶ್ರೇಯಸ್ ಹೀರೋ. ಇನ್ನು ಶಿವು ಭೇರ್ಗಿ ಬರೆದಿರುವ “ಮಳ್ಳಿ ಮಳ್ಳಿ” ಎಂಬ ಹಾಡಿಗೆ ನಾಯಕ ಶ್ರೇಯಸ್ ಹಾಗೂ ಸಂಯುಕ್ತ ಹೆಗಡೆ ಹೆಜ್ಜೆ ಹಾಕಿದ್ದಾರೆ. ಇಮ್ರಾನ್ ನೃತ್ಯ ನಿರ್ದೇಶನವಿದೆ. ಹಾಡಿಗೆ ಶಿವು ಅದ್ಭುತವಾದ ಸೆಟ್ ಹಾಕಿದ್ದಾರೆ.
ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ. ನಾನು ಈ ಸಮಾರಂಭಕ್ಕೆ ಬರಲು ಮುಖ್ಯ ಕಾರಣ ಕೆ.ಮಂಜು ಅವರು ಮಗನ ಮೇಲಿಟ್ಟರುವ ಪ್ರೀತಿ. ಈ ಹಾಡನ್ನು ನೋಡಿದರೆ ಶ್ರೇಯಸ್ ಪಟ್ಟಿರುವ ಶ್ರಮ ಗೊತ್ತಾಗುತ್ತೆ. ಸಂಯಕ್ತ ಅವರ ನಟನೆಯೂ ಚೆನ್ನಾಗಿದೆ. ಸಿನಿಮಾ ಕೂಡ ಚೆನ್ನಾಗಿ ಬಂದಿದೆ ಎಂಬ ನಂಬಿಕೆ ಇದೆ. ಚಿತ್ರ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು ದುನಿಯಾ ವಿಜಯ್.
ಹೀರೋ ಶ್ರೇಯಸ್ ಮಾತಿಗೆ ಮೊದಲು ಅಪ್ಪು ಅವರನ್ನು ನೆನೆದರು. ನಂತರ ಮಾತಿಗಿಳಿದ ಅವರು, ಸಂಯುಕ್ತ ಹೆಗಡೆ ಒಳ್ಳೆಯ ನೃತ್ಯಗಾರ್ತಿ. ಅವರೊಡನೆ ನೃತ್ಯ ಮಾಡುವುದು ಅಷ್ಟು ಸುಲಭವಲ್ಲ. ಹಾಗಾಗಿ ಹೆಚ್ಚು ಅಭ್ಯಾಸ ಮಾಡಿದ್ದೆ. ಈ ನಿಟ್ಟಿನಲ್ಲಿ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಹಾಗೂ ಅವರ ಸಹಾಯಕರ ಸಹಕಾರ ಮರೆಯಲು ಸಾಧ್ಯವಿಲ್ಲ. ಚಿತ್ರೀಕರಣ ಬಹುತೇಕ ಮುಗಿದಿದೆ. ಸ್ವಲ್ಪ ಮಾತ್ರ ಬಾಕಿಯಿದೆ. ನಿರ್ಮಾಪಕ ಪುರುಷೋತ್ತಮ್, ನಿರ್ದೇಶಕ ನಂದಕಿಶೋರ್ ಹಾಗೂ ನಮ್ಮ ತಂದೆ ಕೆ.ಮಂಜು ಅವರಿಗೆ ಧನ್ಯವಾದ ಎಂದರು ಶ್ರೇಯಸ್.
ನೀವೆಲ್ಲರೂ ಹಾಡು ಚೆನ್ನಾಗಿದೆ ಎಂದು ಹೇಳಿದ್ದು ನನಗೆ ಖುಷಿ ಕೊಟ್ಟಿದೆ. ನನಗೆ ಚಿಕ್ಕ ವಯಸ್ಸಿನಿಂದಲೂ ನೃತ್ಯದಲ್ಲಿ ಆಸಕ್ತಿ. ಈ ಹಾಡಿನಲ್ಲಿ ನೃತ್ಯಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ನಿರ್ಮಾಪಕರು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ನಂದಕಿಶೋರ್ ಅವರ ನಿರ್ದೇಶನ ಹಾಗೂ ಶ್ರೇಯಸ್ ಅವರ ಅಭಿನಯ ಚೆನ್ನಾಗಿದೆ ಎಂಬುದು ಸಂಯುಕ್ತ ಹೆಗಡೆ ಮಾತು.
ಇದೊಂದು ಬ್ಯಾಚುಲರ್ ಪಾರ್ಟಿ ಕುರಿತ ಹಾಡು. ಇದರಲ್ಲಿ ಸಂಯುಕ್ತ ಹೆಗಡೆ ಮತ್ತು ಶ್ರೇಯಸ್ ಚೆನ್ನಾಗಿ ನಟಿಸಿದ್ದಾರೆ. ಶಿವು ಅವರ ಕಲಾ ನಿರ್ದೇಶನ, ಶಿವು ಭೇರ್ಗಿ ಅವರ ಗೀತೆ , ಇಮ್ರಾನ್ ನೃತ್ಯ ನಿರ್ದೇಶನ ಎಲ್ಲವೂ ಚೆನ್ನಾಗಿದೆ. ಕೆ.ಮಂಜು ಅವರ ಹುಟ್ಚುಹಬ್ಬಕ್ಕೆ ಹಾಡು ಬಿಡುಗಡೆ ಮಾಡಿದ್ದೇವೆ. ಮೇ ವೇಳೆಗೆ ಚಿತ್ರವನ್ನು ತೆರೆಗೆ ತರಲು ಸಿದ್ದತೆ ನಡೆಯುತ್ತಿದೆ ಎಂದು ನಿರ್ಮಾಪಕ ಪುರಷೋತ್ತಮ್ ಗುಜ್ಜಾಲ್ ವಿವರಿಸಿದರು.
ನಿರ್ದೇಶಕ ನಂದಕಿಶೋರ್, ಛಾಯಾಗ್ರಾಹಕ ಶೇಖರ್ ಚಂದ್ರ, ನಟಿ ರಜನಿ ಭಾರದ್ವಾಜ್ ಸಿನಿಮಾ ಕುರಿತು ಮಾತನಾಡಿದರು. ರಮೇಶ್ ರೆಡ್ಡಿ, ದೀಪಕ್ ಇದ್ದರು. ಚಂದನ್ ಶೆಟ್ಟಿ ಸಂಗೀತ ನೀಡಿದ್ದಾರೆ.
ಧರ್ಮ ಕೀರ್ತಿರಾಜ್ ಅವರನ್ನು ಕ್ಯಾಟ್‌ಬರೀಸ್ ಅಂತ ಕರೆಯುವುದುಂಟು. ಅದರಲ್ಲೂ ಅವರನ್ನು ಆಕ್ಷನ್ ಬಾಯ್ ಆಗಿ ನೋಡಿದವರಿಲ್ಲ. ಲವರ್‌ಬಾಯ್ ಆಗಿಯೇ ಅವರು ಕಾಣಿಸಿಕೊಂಡಿರೋದುಂಟು. ಈಗ ಅವರು ಪಕ್ಕಾ ರಗಡ್ ಲುಕ್ ನಲ್ಲಿ ಕಾಣಿಸಿಕೊಂಡಿರುವ ಸಿನಿಮಾ ಬಿಡುಗಡೆಗೆ ಸಜ್ಜಾಗುತ್ತಿದೆ. ಹೌದು, ಅದರ ಹೆಸರು ಖಡಕ್. ಇತ್ತೀಚೆಗೆ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ. ಖಡಕ್ ಚಿತ್ರದ ಹಾಡು ಬಿಡುಗಡೆಗೆ ನಟ ವಿನೋದ್ ಪ್ರಭಾಕರ್, ನಿರ್ದೇಶಕ ನಾಗತಿಹಳ್ಳಿ ಚಂದ್ರಶೇಖರ್, ಪ್ರಥಮ್ ಸೇರಿದಂತೆ ಹಲವರು ಆಗಮಿಸಿ ಚಿತ್ರತಂಡಕ್ಕೆ ಶುಭಕೋರಿದ್ದಾರೆ.
ಚಿತ್ರರಂಗ ಕೊರೋನ ಸಮಯದಲ್ಲಿ ಸಾಕಷ್ಟು ನಷ್ಟ ಅನುಭವಿಸಿದೆ. ಈಗ ಮತ್ತೆ ಚಿತ್ರರಂಗದ ಚಟುವಟಿಕೆಗಳು ಗರಿಗೆದರುತ್ತಿದೆ. ನಿರ್ಮಾಪಕ ವಲ್ಲಿ, ನನ್ನ ಅನೇಕ ಚಿತ್ರಗಳಿಗೆ ವಸ್ತ್ರಾಲಂಕಾರ ಮಾಡಿದ್ದಾರೆ. ತಾವು ಚಿತ್ರರಂಗದಲ್ಲಿ ದುಡಿದ ದುಡ್ಡನ್ನು ಮತ್ತೆ ಚಿತ್ರರಂಗಕ್ಕೆ ಹಾಕುತ್ತಿದ್ದಾರೆ. ಅವರ ಈ ಕಾರ್ಯ ನಿಜಕ್ಕೂ ಮೆಚ್ಚುವಂತದ್ದು ಎಂದು ನಾಗತಿಹಳ್ಳಿ ಚಂದ್ರಶೇಖರ್ ಹೇಳಿದರು.
ನಟ ವಿನೋದ್ ಪ್ರಭಾಕರ್ ಮಾತನಾಡಿ, ಟ್ರೇಲರ್ ಹಾಗೂ ಹಾಡುಗಳು ಚೆನ್ನಾಗಿವೆ. ನನ್ನ ಹಾಗೂ ಧರ್ಮನ ಸ್ನೇಹ ತುಂಬಾ ವರ್ಷಗಳದ್ದು. ನಾನು ಇಲ್ಲಿಗೆ ಬರಲು ಆ ಸ್ನೇಹವೇ ಕಾರಣ. ಇಡೀ ತಂಡಕ್ಕೆ ಒಳ್ಳೆಯದಾಗಲಿ ಎಂದರು ಅವರು. ಈ ವೇಳೆ ನಟ ಪ್ರಥಮ್ ಚಿತ್ರತಂಡಕ್ಕೆ ಶುಭ ಹಾರೈಸಿದರು.
ಇದೊಂದು ಆಕ್ಷನ್ ಥ್ರಿಲ್ಲರ್ ಚಿತ್ರ. ಇದೇ ಮೊದಲ ಬಾರಿ ನಾನು ಪೊಲೀಸ್ ಅಧಿಕಾರಿ ಪಾತ್ರದಲ್ಲಿ ಕಾಣಿಸಿಕೊಂಡಿದ್ದೀನಿ. ಚಿತ್ರ ಸದ್ಯದಲ್ಲೇ ತೆರೆಗೆ ಬರಲಿದೆ ನೋಡಿ ಹಾರೈಸಿ ಎಂದರು ನಾಯಕ ಧರ್ಮ ಕೀರ್ತಿರಾಜ್. ತಮ್ಮ ಪಾತ್ರದ ಬಗ್ಗೆ ನಾಯಕಿ ಅನೂಶ ರೈ ವಿವರಿಸಿದರು. ಸಂಗೀತ ಕುರಿತು ಎಂ.ಎನ್ ಕೃಪಾಕರ್ ಮಾತನಾಡಿದರು.
ನಂದಿನಿ ಕಂಬೈನ್ಸ್ ಮೂಲಕ ವಲ್ಲಿ ಹಾಗೂ ಸಿದ್ದರಾಮಯ್ಯ ಸಿಂಗಾಪುರ ಈ ಚಿತ್ರ ನಿರ್ಮಾಣ ಮಾಡಿದ್ದಾರೆ. ಟಿ.ಎನ್ ನಾಗೇಶ್ ನಿರ್ದೇಶಿಸಿದ್ದಾರೆ. ಶಂಕರ್ ಛಾಯಾಗ್ರಹಣ ಈ ಚಿತ್ರಕ್ಕಿದೆ. ಚಿತ್ರದಲ್ಲಿ ಕಬೀರ್ ದುಹಾನ್ ಸಿಂಗ್, ಸುಮನ್, ಕಮಲ್ ಇತರರು ಇದ್ದಾರೆ. ನಮ್ಮ ಮ್ಯೂಸಿಕ್ ಸಂಸ್ಥೆ ಮೂಲಕ ಚಿತ್ರದ ಹಾಡುಗಳು ಬಿಡುಗಡೆಯಾಗಿವೆ.
ಸಿನಿಮಾ ನಟರೆಂದರೆ ಅದೇನೋ ಗೊತ್ತಿಲ್ಲ. ಒಂದಷ್ಟು ಅಭಿಮಾನಿಗಳು ಪ್ರೀತಿಯ ಅಭಿಮಾನ ತೋರಿಸುತ್ತಾರೆ. ಅದರಲ್ಲೂ ನಾಯಕ ನಟರನ್ನು ಆರಾಧ್ಯ ದೈವ ಅನ್ನುವಂತೆಯೇ ಆರಾಧಿಸುತ್ತಾರೆ. ಅಂತೆಯೇ ನಾಯಕ ನಟರು ಕೂಡ ಅಭಿಮಾನಿಗಳನ್ನೂ ದೇವರು ಅಂತಾನೂ ಕರೆಯುತ್ತಾರೆ. ಅವರಿಂದಲೇ ನಾವು ಅನ್ನುತ್ತಲೇ ಸದಾ ಫ್ಯಾನ್ಸ್ ಖುಷಿಪಡಿಸುವಂತಹ ಸಿನಿಮಾ ಕೊಡುವಲ್ಲಿ ನಿರತರಾಗುತ್ತಾರೆ. ಇಲ್ಲೀಗ ಹೇಳ ಹೊರಟಿರುವ ವಿಷಯ ಅಂದರೆ, ಅದು ಡಾ.ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿಯೊಬ್ಬರ ಬಗ್ಗೆ.
ಹೌದು, ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ತೋರಣಗಟ್ಟೆ ಎಂಬ ಗ್ರಾಮದಲ್ಲಿ ಡಾ.ವಿಷ್ಣುವರ್ಧನ್ ಅವರ ಅಪ್ಪಟ ಅಭಿಮಾನಿಯೊಬ್ಬ ಡಾ.ವಿಷ್ಣುವರ್ಧನ್ ಅವರ ಪುತ್ಥಳಿ ಎದುರೇ ಮದುವೆ ಆಗುವ ಮೂಲಕ ವಿಶೇಷ ಪ್ರೀತಿ ತೋರಿದ್ದಾರೆ. ನಿಜಕ್ಕೂ ಇದು ವಿಷ್ಣುವರ್ಧನ್ ಮೇಲಿನ ಅತಿಯಾದ ಪ್ರೀತಿ ಮತ್ತು ಗೌರವಕ್ಕೆ ಸಾಕ್ಷಿ ಎನ್ನಬಹುದು.
ಶುಕ್ರವಾರ ಬೆಳಗ್ಗೆ ದಾವಣಗೆರೆ ಜಿಲ್ಲೆಯ ಜಗಳೂರು ತಾಲೂಕಿನ ತೋರಣಗಟ್ಟೆ ಗ್ರಾಮದ ಡಾ.ವಿಷ್ಣುವರ್ಧನ್ ಅವರ ಅಭಿಮಾನಿ ನಾಗರಾಜ್ ಕೆಸಿ ಎಂಬುವವರು ದೇವಸ್ಥಾನ ಅಥವಾ ಕಲ್ಯಾಣ ಮಂಟಪದಲ್ಲಿ ವಿವಾಹ ಆಗಬಹುದಿತ್ತು. ಆದರೆ, ಅದರ ಬದಲಾಗಿ ಅವರು ಡಾ.ವಿಷ್ಣು ಅವರ ಪುತ್ಥಳಿ ಎದುರು ವಿವಾಹವಾಗುವ ಮೂಲಕ ತಮ್ಮ ಅಭಿಮಾನ ತೋರಿದ್ದಾರೆ. ಅಂದಹಾಗೆ, ಈ ರೀತಿಯ ಮದುವೆ ಇದೇ ಮೊದಲು ಅನ್ನೋದು ವಿಶೇಷ.
ಟ್ಯಾಕ್ಸಿ ಚಾಲಕನೊಬ್ಬನ ಜೀವನದ ಕಥಾನಕ ಇರುವ ಯೆಲ್ಲೋ ಬೋರ್ಡ್ ಚಿತ್ರದಲ್ಲಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಹಾಡೊಂದನ್ನು ಹಾಡಿದ್ದಾರೆ. ತ್ರಿಲೋಕ್ ರೆಡ್ಡಿ ನಿರ್ದೇಶನದ ಈ ಚಿತ್ರದಲ್ಲಿ ಪ್ರದೀಪ್ ಟ್ಯಾಕ್ಸಿ ಚಾಲಕರಾಗಿ ಕಾಣಿಸಿಕೊಂಡಿದ್ದಾರೆ. ಟಾಕ್ಸಿ ಚಾಲಕರೆಲ್ಲ ಕೆಟ್ಟವರಲ್ಲ. ಅವರಲ್ಲೂ ಒಳ್ಳೆಯವರಿರುತ್ತಾರೆ. ಅವರಿಂದಲೂ ಸಮಾಜ ಸುಧಾರಣೆ ಸಾಧ್ಯ ಎನ್ನುವ ವಿಭಿನ್ನ ಕಥಾಹಂದರ ಇಟ್ಟುಕೊಂಡು ನಿರ್ಮಾಣವಾಗಿರುವ ಚಿತ್ರವಿದು. ಅಹಲ್ಯಾ ಸುರೇಶ್ ಹಾಗೂ ಸ್ನೇಹ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ, ವಿಂಟೇಜ್ ಫಿಲಂಸ್ ಮೂಲಕ ನವೀನ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಅವರು ಮೊದಲ ಬಾರಿಗೆ ರ‍್ಯಾಪ್‌ಸಾಂಗ್ ಹಾಡಿರುವುದು ವಿಶೇಷ. ಅಂದಹಾಗೆ, ಇತ್ತೀಚೆಗೆ ಈ ಹಾಡು ಬಿಡುಗಡೆಯಾಗಿದ್ದು, ಎಲ್ಲೆಡೆ ಒಳ್ಳೆಯ ಮೆಚ್ಚುಗೆ ಪಡೆದುಕೊಂಡಿದೆ. ಸದ್ಯದಲ್ಲೇ ಚಿತ್ರದ ಟ್ರೇಲರ್ ಕೂಡ ಬಿಡುಗಡೆಯಾಗಲಿದೆ. ಮಾರ್ಚ್ ೪ಕ್ಕೆ ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.
ನಿರ್ದೇಶಕ ತ್ರಿಲೋಕ್ ಮಾತನಾಡಿ, “ನಾವು ಈ ಸಿನಿಮಾ ಶುರು ಮಾಡುವಾಗ ಚಾಲಕರಿಗೆಂದೇ ಒಂದು ಹಾಡನ್ನು ಪ್ಲಾನ್ ಮಾಡಿದ್ದೆವು. ಅದನ್ನು ನಿರ್ದೇಶಕ ಚೇತನ್ ಅವರಿಂದ ಬರೆಸಿದೆವು, ಯಾರ ಕೈಲಿ ಹಾಡಿಸಬೇಕು ಅಂತ ಯೋಚಿಸುತ್ತಿರುವಾಗ ಮೊದಲು ಕಣ್ಣಮುಂದೆ ಬಂದದ್ದೇ ಅಪ್ಪು. ಪ್ರದೀಪ್ ಮೂಲಕ ಪುನೀತ್‌ರನ್ನು ಅಪ್ರೋಚ್ ಮಾಡಿದಾಗ ಅವರು ಖುಷಿಯಿಂದಲೇ ಒಪ್ಪಿ ಹಾಡಿಕೊಟ್ಟರು ಎಂದು ನೆನಪಿಸಿಕೊಂಡರು ಅವರು. ನಾಯಕ ಪ್ರದೀಪ್ ಅವರಿಗೆ ಅಪ್ಪು ಸರ್ ಬಳಿ ಹಾಡು ಹಾಡಿಸಿದ್ದೇ ದೊಡ್ಡ ಖುಷಿಯಾಗಿದೆಯಂತೆ. ಅವರೇ ಹೇಳುವಂತೆ, “ನನ್ನ ಹತ್ತು ವರ್ಷಗಳ ಸಿನಿ ಜರ್ನಿಯಲ್ಲಿ ಮೊದಲ ಸಲ ಪುನೀತ್ ಅವರು ನನ್ನ ಚಿತ್ರಕ್ಕೆ ಪ್ರೀತಿಯಿಂದಲೇ ಹಾಡಿದ್ದಾರೆ. ಆರಂಭದಲ್ಲಿ ಜಾಲಿಡೇಸ್ ಚಿತ್ರದ ಆಡಿಯೋ ಬಿಡುಗಡೆಗೂ ಅವರು ಬಂದು ಹಾರೈಸಿದ್ದರು, ಮೊದಲ ಬಾರಿಗೆ ಡ್ರೈವರ್‌ಗಳ ಮೇಲೆ ಸಿನಿಮಾ ಮಾಡಿದ್ದೀರಿ, ಒಳ್ಳೇದಾಗಲಿ, ಹಾಡು ಚೆನ್ನಾಗಿದೆ ಎಂದು ಯಾವುದೇ ಸಂಭಾವನೆ ತೆಗೆದುಕೊಳ್ಳದೆ ಹಾಡಿದರು. ಎಲ್ಲಾ ಡ್ರೈವರ್‌ಗಳಿಗೆ ನನ್ನ ಕಡೆಯಿಂದ ಕೊಡುಗೆ ಎನ್ನುವ ಮೂಲಕ ಪ್ರೀತಿ ತೋರಿದ್ದಾರೆ. ಅವರು ಎಂದೆಂದಿಗೂ ನಮ್ಮೊಂದಿಗೆ ಇರುತ್ತಾರೆ ಅಂದರು ಪ್ರದೀಪ್.
ಸದ್ಯ ಈ ಹಾಡಿಗೆ ಎಲ್ಲಾ ಚಾಲಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ, ನಮಗೆ ಬೆಲೆಕೊಟ್ಟು ಒಳ್ಳೇ ಸಾಂಗ್ ಮಾಡಿದ್ದೀರಿ ಎಂದು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ, ಹೀರೋಯಿಸಂ ಇಲ್ಲದ ಪಾತ್ರವಿದು. ಯಾರೋ ಒಬ್ಬರು ಮಾಡುವ ತಪ್ಪಿಗೆ, ಎಲ್ಲ ಟ್ಯಾಕ್ಸಿ ಚಾಲಕರನ್ನೂ ದೂಷಿಸುವುದು ತಪ್ಪು ಎಂಬ ಸಂದೇಶ ಇಲ್ಲಿದೆ. ಕಾರ್ಯಕಾರಿ ನಿರ್ಮಾಪಕ ನವೀನ್, “ಇಂದು ಅಪ್ಪು ಸಾಂಗ್ ರಿಲೀಸ್ ಆಗಿದೆ. ಇದಕ್ಕೆ ಡ್ರೈರ್‌ಗಳಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಅವರ ಕೈಲೇ ಈ ಹಾಡನ್ನು ಬಿಡುಗಡೆ ಮಾಡಿಸಬೇಕೆಂದು ತುಂಬಾ ಆಸೆಯಿತ್ತು. ಆದರೆ ಆಗಲಿಲ್ಲ, ಅಪ್ಪು ಅವರ ಒಂದು ಪ್ರತಿಕ್ರಿಯೆಯನ್ನೂ ತೆಗೆದುಕೊಳ್ಳಲಾಗಲಿಲ್ಲವಲ್ಲ ಎಂಬ ಗಿಲ್ಟ್ ನನ್ನನ್ನು ಕಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಟ್ಯಾಕ್ಸಿ ಚಾಲಕನ ಕನಸು ಮತ್ತು ಆಸೆಗಳ ಸುತ್ತ ಹೆಣೆದ ಕಥೆಯಿದು, ಒಂದು ಕೊಲೆಯ ಆರೋಪ ಹೊತ್ತು ನಾಯಕ ಅದರಿಂದ ಹೇಗೆ ಹೊರಬರುತ್ತಾನೆ ಎಂದು ಈ ಚಿತ್ರದಲ್ಲಿ ಹೇಳಲಾಗಿದೆ, ಅದ್ವಿಕ್ ಅವರ ಸಂಗೀತವಿದೆ. ಪ್ರವೀಣ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.
ಸಾಮಾನ್ಯವಾಗಿ ಲವರ್ಸ್ ಡೇ ಬಂತೆಂದರೆ ಸಾಕು, ಹಲವು ಸಿನಿಮಾ ತಂಡಗಳು ಸಾಂಗು, ಟೀಸರ್, ಪೋಸ್ಟರ್ , ಟ್ರೇಲರ್ ಹೀಗೆ ರಿಲೀಸ್ ಮಾಡುವುದು ವಾಡಿಕೆ. ಈಗ ಪ್ರೇಮಿಗಳ ದಿನ ಹತ್ತಿರ ಬರುತ್ತಿದೆ. ಹಾಗಾಗಿ ಇಲ್ಲೊಂದು ಚಿತ್ರತಂಡ ಅಂದು ದಸರಾ ಬೊಂಬೆ ಹಬ್ಬಕ್ಕೆ ಒಂದು ಲಿರಿಕಲ್ ವಿಡಿಯೋ ಸಾಂಗ್ ರಿಲೀಸ್ ಮಾಡುತ್ತಿದೆ.
ಹೌದು, ಫೆಬ್ರವರಿ 14 ಪ್ರೇಮಿಗಳ ದಿನ. ಅಂದು ಅಗ್ರಸೇನಾ ಸಿನಿಮಾ ತಂಡ, ದಸರಾ ಬೊಂಬೆ ಲಿರಿಕಲ್ ವಿಡಿಯೋ ಬಿಡುಗಡೆ ಮಾಡುತ್ತಿದೆ. ಈ ಗೀತೆಯನ್ನು ವಿಭಿನ್ನವಾಗಿ ಚಿತ್ರೀಕರಣ ಮಾಡಲಾಗಿದೆ. ಕೆಜಿಎಫ್ ಖ್ಯಾತಿಯ ಮೋಹನ್ ಮಾಸ್ಟರ್ ನೃತ್ಯ ನಿರ್ದೇಶಿಸಿದರೆ, ಈ ಗೀತೆಗೆ ನಿರ್ದೇಶಕ ಚೇತನ್ ಕುಮಾರ್ ಸಾಹಿತ್ಯ ಬರೆದಿದ್ದಾರೆ. ವಿಜಯಪ್ರಕಾಶ್ ಅವರು ಹಾಡಿದ್ದಾರೆ.
ಈ ಚಿತ್ರದಲ್ಲಿ ಐದು ಹಾಡುಗಳಿದ್ದು ಎಲ್ಲವೂ ವಿಭಿನ್ನವಾಗಿ ಮೂಡಿಬಂದಿದೆ. ಈ ಚಿತ್ರದ ಆಡಿಯೋ ಹಕ್ಕನ್ನು ಆನಂದ್ ಆಡಿಯೋ ಸಂಸ್ಥೆ ಖರೀದಿಸಿದೆ. ಆನಂದ್ ಆಡಿಯೋ ದವರು ಈ ಮೂಲಕ ಹೊಸ ನಿರ್ಮಾಪಕರಿಗೆ ಹಾಗೂ ನಿರ್ದೇಶಕರಿಗೆ ಪ್ರೋತ್ಸಾಹಿಸಿದ್ದಾರೆ. ಚಿತ್ರಕ್ಕೆ ಮರುಗೇಶ್ ಕಣ್ಣಪ್ಪ ಕಥೆ ಚಿತ್ರಕಥೆ ಬರೆದು ನಿರ್ದೇಶನ ಮಾಡಿದ್ದಾರೆ. ರಘು ನಿಡುವಳ್ಳಿ ಸಂಭಾಷಣೆ ಬರೆದಿದ್ದಾರೆ. ರಾಮರೆಡ್ಡಿ ಚಿತ್ರಕ್ಕೆ ಛಾಯಾಗ್ರಹಣ ಮಾಡಿದ್ದಾರೆ. ವಿಜಯ್ ಎಂ.ಕುಮಾರ್ ಸಂಕಲನವಿದೆ. ಮೋಹನ್ ಭಜರಂಗಿ ನೃತ್ಯವಿದೆ. ರಮೇಶ್ ಸಾಹಸ ಮಾಡಿದ್ದಾರೆ. ಚಿತ್ರಕ್ಕೆ ಮಮತಾ ಜಯರಾಮರೆಡ್ಡಿ ನಿರ್ಮಾಪಕರು. ಅಮರ್ ವಿರಾಜ್ ಹಾಗೂ ರಚನಾ ದಶರತ್ ನಾಯಕ, ನಾಯಕಿಯಾಗಿದ್ದಾರೆ.
ಕನ್ನಡದಲ್ಲಿ ಈಗಾಗಲೇ ತರಹೇವಾರಿ ಸಿನಿಮಾಗಳು ಬಂದಿವೆ. ಬರುತ್ತಲೂ ಇವೆ. ಅದರಲ್ಲೂ ನಿಷ್ಕಲ್ಮಶ ಪ್ರೀತಿ ಕುರಿತಾದ ಅದೆಷ್ಟೋ ಕಥೆಗಳು ಬಂದಿವೆ. ಬರುತ್ತಲೂ ಇವೆ. ಸಿನಿಮಾಗಳಲ್ಲಿ ಬ್ಯೂಟಿಫುಲ್ ಕಪಲ್ಸ್ ಕಥೆಗಳಿಗೇನೂ ಬರವಿಲ್ಲ. ಅಂತಹ ನೂರಾರು ಬ್ಯೂಟಿಫುಲ್ ಕಪಲ್ ಲವ್‌ಸ್ಟೋರಿಗಳೂ ಬಂದಿವೆ. ಅಂಥದ್ದೊಂದು ಕಪಲ್ ಲವ್‌ಸ್ಟೋರಿ ಇಟ್ಟುಕೊಂಡು ಹೀಗೊಂದು ಸಿನಿಮಾ ಮೂಡಿಬರುತ್ತಿದೆ. ಈಗಾಗಲೇ ಶೇ.೯೦ರಷ್ಟು ಚಿತ್ರೀಕರಣ ಕೂಡ ಮುಗಿದಿದೆ. ಅಂದಹಾಗೆ, ಆ ಸಿನಿಮಾದ ಹೆಸರು ಪರಿಶುದ್ಧಂ. ಈ ಹೆಸರು ಕೇಳಿದಾಕ್ಷಣ ಇಲ್ಲಿ ಎಲ್ಲವೂ ಪರಿಶುದ್ಧವಾಗಿಯೇ ಇರುತ್ತೆ ಅನ್ನೋದು ಪಕ್ಕಾ. ಹೌದು, ಪರಿಶುದ್ಧಂ ಒಂದೊಳ್ಳೆಯ ಬಾಂಧವ್ಯದ ಕಥೆ. ಇಲ್ಲಿ ಸ್ನೇಹ ಇರಲಿ, ಪ್ರೀತಿ ಇರಲಿ, ಸಂಬಂಧಗಳಿರಲಿ ಎಲ್ಲವೂ ಪರಿಶುದ್ಧವಾಗಿರುತ್ತವೆ ಅನ್ನೋದರ ಸುತ್ತ ಸಾಗುವ ಕಥೆ ಇಲ್ಲಿರಲಿದೆ ಎಂಬುದು ನಿರ್ದೇಶಕರ ಮಾತು.
ಈ ಸಿನಿಮಾಗೆ ಕಾರ್ತಿಕ್ ವೆಂಕಟೇಶ್ ನಿರ್ದೇಶಕರು. ಈ ಹಿಂದೆ ಇವರು ದರ್ಪಣ ಎಂಬ ಸಿನಿಮಾ ಮಾಡಿದ್ದರು. ಆ ಚಿತ್ರದಲ್ಲಿ ಇವರೊಂದು ದಾಖಲೆ ಬರೆದಿದ್ದರು. ಅದೇನೆಂದರೆ, ಸಿನಿಮಾದ ೨೧ ವಿಭಾಗದಲ್ಲಿ ಇವರೇ ಕೆಲಸ ಮಾಡಿದ್ದರು. ಈಗ ಪರಿಶುದ್ಧಂ ಅವರ ಎರಡನೇ ನಿರ್ದೇಶನದ ಚಿತ್ರ. ಈ ಸಿನಿಮಾಗೆ ನಿರ್ಮಾಣ ಮತ್ತು ಸಂಗೀತ ನಿರ್ದೇಶನದ ಜವಾಬ್ದಾರಿಯೂ ಇವರದೇ. ಇವರೊಂದಿಗೆ ನಿರ್ಮಾಣದಲ್ಲಿ ಕುಮಾರ್ ರಾಥೋಡ್ ಮತ್ತು ರೋಹನ್ ಕಿಡಿಯೂರ್ ಕೂಡ ಸಾಥ್ ನೀಡಿದ್ದಾರೆ ಅನ್ನೋದು ವಿಶೇಷ. ತಮ್ಮ ಸಿನಿಮಾ ಕುರಿತು ನಿರ್ದೇಶಕ ಕಾರ್ತಿಕ್ ವೆಂಕಟೇಶ್ ಅವರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದಕ್ಕೆ ಕಾರಣ, ಕಥೆ ಮತ್ತು ನಟಿ ಸ್ಪರ್ಶ ರೇಖಾ. ಹೌದು, ಅ ಕುರಿತು ನಿರ್ದೇಶಕರು ಹೇಳೋದಿಷ್ಟು. ಸ್ಪರ್ಶ ರೇಖಾ ಅವರು ಒಂದು ರೀತಿ ಲಕ್ಕಿ. ನನಗೂ ಅಷ್ಟೇ. ಕಾರಣ, ಈ ಹಿಂದೆ ನಾನು ಒಂದು ಸಿನಿಮಾದ ಆಡಿಯೋ ಲಾಂಚ್‌ಗೆ ಆಹ್ವಾನಿಸಿದ್ದೆ. ಅವರು ಬಂದು ಹೋದ ಬಳಿಕ ನನಗೆ ಅದೃಷ್ಟ ಹೆಚ್ಚಾಯ್ತು. ಇನ್ನುಳಿದಂತೆ ಸುದೀಪ್ ಅವರ ಮೊದಲ ಸಿನಿಮಾದಲ್ಲೂ ಅವರಿದ್ದರು. ನಂತರ ಸ್ಟಾರ್ ಹೇಗೆಲ್ಲಾ ತಿರುಗಿತು ಎಲ್ಲರಿಗೂ ಗೊತ್ತಿದೆ. ದರ್ಶನ್ ಜೊತೆಯಲ್ಲೂ ಅವರಿದ್ದಾರೆ. ಹಾಗಾಗಿ ಸ್ಪರ್ಶ ರೇಖಾ ಅವರೊಂದಿಗೆ ನಾನು ಸಿನಿಮಾ ಮಾಡುತ್ತಿರುವ ಖುಷಿ ಇದೆ. ನನಗೂ ಅಂಥದ್ದೊಂದು ಅದೃಷ್ಟ ಸಿಗಲಿ ಅಂತ ಬಯಸುತ್ತೇನೆ ಅನ್ನುವ ಅವರು, ಮುಂದೆಯೂ ಅವರೊಂದಿಗೆ ಸಿನಿಮಾ ಮಾಡ್ತೀನಿ ಅಂತಾರೆ.
ಹಾಗಾದರೆ ಪರಿಶುದ್ಧಂ ಕಥೆ ಏನು? ಇದಕ್ಕೆ ಉತ್ತರಿಸೋ ನಿರ್ದೇಶಕರು, ಗಂಡ ಹೆಂಡತಿ ಸಂಬಂಧವೇ ಪರಿಶುದ್ಧವಾಗಿರುತ್ತೆ. ಅವರ ಮಧ್ಯೆ ಮೂರನೇ ವ್ಯಕ್ತಿಗೆ ಪ್ರವೇಶವಿಲ್ಲ. ಆಕರ್ಷಣೆ ಬೇರೆ, ಪ್ರೀತಿಯೇ ಬೇರೆ, ಇದರ ಮೇಲೆ ಸಿನಿಮಾ ಕಥೆ ಸಾಗುತ್ತದೆ. ಇಲ್ಲಿ ಸ್ಪರ್ಶ ರೇಖಾ ಮತ್ತು ರೋಹನ್ ಕಿಡಿಯೂರು ಆಕರ್ಷಣೆಯಾಗಿದ್ದಾರೆ. ಉಳಿದಂತೆ ಚಿತ್ರದಲ್ಲಿ ಯತಿರಾಜ್, ವಿಕ್ಟರಿ, ದಿಶಾ ಪೂವಯ್ಯ, ಮೈಸೂರು ರಮಾನಂದ, ರಮೇಶ್ ಪಂಡಿತ್, ಕುರಿ ರಂಗ ಇತರರು ಇದ್ದಾರೆ. ಕೃಷ್ಣ ಸಾರಥಿ ಹಾಗು ಕೃಷ್ಣ ಪ್ರೀತಂ ಚಿತ್ರಕ್ಕೆ ಕ್ಯಾಮೆರಾ ಹಿಡಿದರೆ, ಆಯೂರ್ ಸ್ವಾಮಿ ಸಂಕಲನ ಮಾಡಿದ್ದಾರೆ. ಈಗಾಗಲೇ ಶೇ.೯೦ರಷ್ಟು ಬೆಂಗಳೂರಲ್ಲಿ ಚಿತ್ರೀಕರಣ ನಡೆದಿದೆ. ಮಲೇಶಿಯಾ, ಬ್ಯಾಂಕಾಕ್, ಕೌಲಲಂಪುರದಲ್ಲಿ ಒಂದು ಹಾಡನ್ನು ಚಿತ್ರೀಕರಿಸುವ ಯೋಜನೆ ಚಿತ್ರತಂಡಕ್ಕಿದೆ.
ಈ ಚಿತ್ರದಲ್ಲೊಂದು ದಾಖಲೆ ಇದೆ. ಅದೇನೆಂದರೆ, ಸ್ಪರ್ಶ ರೇಖಾ ಅವರಿಗೆ ಪ್ಯಾಥೋ ಸಾಂಗ್ ಇಡಲಾಗಿದ್ದು, ಅದು ಇಂಡಿಯನ್ ಸಿನಿಮಾ ಹಿಸ್ಟರಿಯಲ್ಲೇ ಕೇವಲ ಎರಡೇ ಸ್ವರದ ಮೇಲೆ ಆ ಸಾಂಗ್ ಕಂಪೋಸ್ ಮಾಡಲಾಗಿದೆಯಂತೆ. ಅದರಲ್ಲೂ ಆ ಹಾಡಲ್ಲಿ ಶುರುವಾಗುವ ಅಕ್ಷರಗಳಲ್ಲೆವೂ “ಕ”ನಿಂದಲೇ ಶುರುವಾಗುತ್ತೆ ಅನ್ನೋದು ವಿಶೇಷವಂತೆ. ಇನ್ನು, ಲುಲು ಮಾಲ್‌ನಲ್ಲಿ ಮೊದಲ ಬಾರಿ ಚಿತ್ರೀಕರಿಸಿದ ಮೊದಲ ಸಿನಿಮಾವಂತೆ. ಸದ್ಯ ಮಾತಿನ ಭಾಗದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಅಂದಹಾಗೆ, ಈ ಚಿತ್ರ ಏಪ್ರಿಲ್ ೨೮ರಂದು ಬಿಡುಗಡೆಯಾಗಲಿದೆಯಂತೆ. ಅದೇನೆ ಇರಲಿ, ಈ ಸಿನಿಮಾ ನೋಡುವ ಮಂದಿ ಬಳಿಕ ಪರಿಶುದ್ಧ ಪ್ರೀತಿ, ಗೆಳೆತನ ಬಾಂಧವ್ಯ ಇಟ್ಟುಕೊಂಡರೆ ಈ ಸಿನಿಮಾ ಮಾಡಿದ್ದಕ್ಕೂ ಸಾರ್ಥಕ.
ಕೆಲವು ಸಿನಿಮಾಗಳೇ ಹಾಗೆ. ಬಿಡುಗಡೆ ಮುನ್ನವೇ ಒಂದಷ್ಟು ಕುತೂಹಲ ಮೂಡಿಸಿಬಿಡುತ್ತವೆ. ಆ ಸಾಲಿಗೆ “ಕನ್ನೇರಿ” ಸಿನಿಮಾ ಕೂಡ ಅಂಥದ್ದೊಂದು ಕುತೂಹಲ ಮೂಡಿಸಿದೆ. ಅದಕ್ಕೆ ಕಾರಣ, ಈ ಹಿಂದೆ “ಮೂಕ ಹಕ್ಕಿ” ಚಿತ್ರ ನಿರ್ದೇಶಿಸಿದ್ದ ನೀನಾಸಂ ಮಂಜು. ಹೌದು, ನಿರ್ದೇಶಕ ನೀನಾಸಂ ಮಂಜು ಅವರು “ಮೂಕಹಕ್ಕಿ” ಮೂಲಕ ಒಂದೊಳ್ಳೆಯ ಕಥೆ ಹೇಳಿದ್ದರು. ಅದು ಎಲ್ಲರ ಮನ ಮುಟ್ಟಿತ್ತು. ಈಗ ಅವರು “ಕನ್ನೇರಿ” ಸಿನಿಮಾ ಮೂಲಕ ನೈಜ ಘಟನೆಯಾಧಾರಿತ ಕಥೆ ಹೇಳಲು ಸಜ್ಜಾಗಿದ್ದಾರೆ.
ಈಗಾಗಲೇ “ಬೆಟ್ಟ ಕಣಿವೆಗಳ ಹೊಟ್ಟೇಲಿ ಗೂಡುಕಟ್ಟಿ’ ಹಾಡಿನ ಮೂಲಕ ಗಮನಸೆಳೆದಿದ್ದ ಕನ್ನೇರಿ ಸಿನಿಮಾದ ಮತ್ತೊಂದು ಹಾಡು ರಿಲೀಸ್ ಆಗಿದೆ. “ನೆಲೆ ಇರದ ಕಾಲು..” ಹಾಡು ರಿಲೀಸ್ ಆಗಿದೆ. ಈ ಲಿರಿಕಲ್ ವೀಡಿಯೋ ಎ2 ಮ್ಯೂಸಿಕ್ ನಲ್ಲಿ ಬಿಡುಗಡೆಯಾಗಿದ್ದು, ಎಲ್ಲೆಡೆಯಿಂದಲೂ ಒಳ್ಳೆಯ ಮೆಚ್ಚುಗೆ ಪಡೆದುಕೊಂಡಿದೆ.
ಕಾಡ ಮಕ್ಕಳ ಒಡಲ ಬೇಗುದಿಯ ನೋವಿನ ಕಥೆ ಈ ಹಾಡಿನಲ್ಲಿದ್ದು ವಿ. ರಘು ಶಾಸ್ತ್ರಿ ಸಾಹಿತ್ಯ ಬರೆದು, ವಾಣಿ ಹರಿಕೃಷ್ಣ ಆ ಹಾಡಿಗೆ ದನಿಯಾಗಿದ್ದಾರೆ. ಸಾಕಷ್ಟು ಮೆಚ್ಚುಗೆ ಗಳಿಸಿಕೊಳ್ಳುತ್ತಿರುವ ‘ನೆಲೆ ಇರದ ಕಾಲು’ ಹಾಡನ್ನು ಇತ್ತೀಚೆಗೆ ಕರ್ನಾಟಕ ಚಲನಚಿತ್ರ ಅಕಾಡೆಮಿ ಅಧ್ಯಕ್ಷರಾದ ಸುನೀಲ್ ಪುರಾಣಿಕ್ ಅವರು ಬಿಡುಗಡೆ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ಪಿ.ಪಿ.ಹೆಬ್ಬಾರ್ ಮತ್ತು ಚಂದ್ರಶೇಖರ್ ಅವರು ಬುಡ್ಡಿದೀಪ ಸಿನಿಮಾ ಹೌಸ್ ಬ್ಯಾನರ್ ನಡಿ ‘ಕನ್ನೇರಿ’ ಚಿತ್ರವನ್ನು ನಿರ್ಮಿಸಿದ್ದಾರೆ. ಚಿತ್ರದಲ್ಲಿ ಅರ್ಚನಾ ಮಧು ಸೂಧನ್ ಮುಖ್ಯ ಭೂಮಿಕೆಯಲ್ಲಿ ಅಭಿನಯಿಸಿದ್ದು, ಅರುಣ್ ಸಾಗರ್, ಅನಿತಾ ಭಟ್, ಸರ್ದಾರ್ ಸತ್ಯ, ಎಂ.ಕೆ.ಮಠ್, ಕರಿಸುಬ್ಬು ಚಿತ್ರದಲ್ಲಿದ್ದಾರೆ.
ಕದ್ರಿ ಮಣಿಕಾಂತ್ ಸಂಗೀತವಿದೆ. ಗಣೇಶ್ ಹೆಗ್ಡೆ ಕ್ಯಾಮೆರಾ ಹಿಡಿದರೆ, ಸುಜಿತ್ ಎಸ್. ನಾಯಕ್ ಸಂಕಲನವಿದೆ. ಸದ್ಯ ಹಾಡಿನ ಮೂಲಕವೇ ಜೋರು ಸದ್ದು ಮಾಡುತ್ತಿರುವ ಕನ್ನೇರಿ ಹೊಸಬಗೆಯ ಸಿನಿಮಾವಂತೂ ಹೌದು. ಅಷ್ಟೇ ಅಲ್ಲ, ಮತ್ತೊಂದು ಭಾವುಕತೆ ಹೆಚ್ಚಿಸುವ ಸಿನಿಮಾ ಕೊಡುವ ಉತ್ಸಾಹದಲ್ಲಿ ನಿರ್ದೇಶಕರಿದ್ದಾರೆ.
ಹಾಸ್ಯ ನಟ ತಬಲನಾಣಿ ಅವರು ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಆ ಚಿತ್ರಕ್ಕೆ “ನನಗೂ ಹೇಂಡ್ತಿ ಬೇಕು” ಎಂದು ಹೆಸರಿಡಲಾಗಿದೆ. ಹೆಸರಲ್ಲೇ ಒಂದು ಮಜಾ ಇದೆ ಅಂದಮೇಲೆ ಚಿತ್ರದ ಕಥೆ ಮತ್ತು ಮಾತುಗಳಲ್ಲೂ ಆ ಮಜಾ ಇದ್ದೇ ಇರುತ್ತದೆ. ಈ ಚಿತ್ರದಲ್ಲಿ ಅವರು ವಿಶೇಷ ಪಾತ್ರ ನಿರ್ವಹಿಸುತ್ತಿದ್ದಾರೆ. ಅಲ್ಲಿಗೆ, ಈ ಸಿನಿಮಾದ ಹೈಲೈಟ್ ಅವರೇ. ತಬಲ ನಾಣಿ ಸಿನಿಮಾ ಅಂದಮೇಲೆ ಅಲ್ಲಿ ಮಾತಿಗೇನೂ ಬರ ಇರೋದಿಲ್ಲ. ಅದರಲ್ಲೂ ಸಖತ್ ಪಂಚಿಂಗ್ ಫನ್ನಿ ಡೈಲಾಗ್‌ಗಳದ್ದೇ ಕಾರುಬಾರು. ಮತ್ತೆ ಜನರನ್ನು ನಗಿಸೋಕೆ ನಾಣಿ ಸಜ್ಜಾಗಿದ್ದಾರೆ. ಅವರನ್ನು ಸಜ್ಜು ಮಾಡಿರೋದು ನಿರ್ದೇಶಕ ಕೆ.ಶಂಕರ್. ಅವರಿಗೆ ಹಣ ಹಾಕಿ ಸಾಥ್ ನೀಡಿರೋದು ಭರತ್ ಗೌಡ ಹಾಗು ಹುಲ್ಲೂರ್ ಮಂಜುನಾಥ್. ಕೋಟೆ ನಾಡು ಚಿತ್ರದುರ್ಗದಲ್ಲಿ ನಡೆಯೋ ಕಥೆಯಲ್ಲಿ ನೂರಾರು ತಿರುವುಗಳಿದ್ದು, ಇದೊಂದು ಅಪ್ಪಟ ಕೌಟುಂಬಿಕ ಸಿನಿಮಾ ಎಂಬುದು ಚಿತ್ರತಂಡದ ಮಾತು….
ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಹಾಸ್ಯಮಯ ಸಿನಿಮಾಗಳು ಬಂದಿವೆ. ಅದರಲ್ಲೂ ಹಾಸ್ಯ ಸಿನಿಮಾಗಳಿಗೆ ಸಾಕಷ್ಟು ಬೇಡಿಕೆಯೂ ಇದೆ. ಈಗ ಮತ್ತೊಂದು ಹಾಸ್ಯಮಯ ಸಿನಿಮಾ ಶುರುವಾಗುತ್ತಿದೆ. ಹಾಸ್ಯ ಅಂದಾಕ್ಷಣ, ಥಟ್ಟನೆ ನೆನಪಾಗೋದೇ ತಬಲ ನಾಣಿ. ಹೌದು, ತಬಲ ನಾಣಿ ಅವರನ್ನು ನೋಡಿದ ಕೂಡಲೇ ಸಿನಿಮಾ ಮಂದಿಗೆ ಒಂದು ರೀತಿ ಖುಷಿ. ಅದಕ್ಕೆ ಕಾರಣ, ಅವರ ಪಂಚಿಂಗ್ ಡೈಲಾಗ್‌ಗಳು, ಆಗಾಗ ಹರಿಬಿಡುವ ಡಬ್ಬಲ್ ಮೀನಿಂಗ್ ಮಾತುಗಳು. ಇವೆಲ್ಲದರಿಂದಲೇ ಅವರ ಸಿನಿಮಾಗಳು ಸಕ್ಸಸ್ ಆಗಿದ್ದು ಗೊತ್ತೇ ಇದೆ. ತಬಲ ನಾಣಿ ಅವರ ಸಿನಿಮಾಗಳಲ್ಲಿ ಮಾತುಗಳೇ ಬಂಡವಾಳ. ಅಂಥದ್ದೊಂದು ಮಾತುಗಳ ಮಳೆ ಸುರಿಸುವಂತಹ ಮತ್ತೊಂದು ಸಿನಿಮಾಗೆ ಸಜ್ಜಾಗಿದ್ದಾರೆ ತಬಲ ನಾಣಿ.
ಆ ಸಿನಿಮಾಗೆ “ನನಗೂ ಹೆಂಡ್ತಿ ಬೇಕು” ಎಂದು ಹೆಸರಿಡಲಾಗಿದೆ. ಈ ಚಿತ್ರದ ಶೀರ್ಷಿಕೆ ನೋಡಿದ ಕೂಡಲೇ ಇದೊಂದು ಪಕ್ಕಾ ಕಾಮಿಡಿ ಸಿನಿಮಾ ಅನಿಸದೇ ಇರದು. ಈ ಸಿನಿಮಾಗೆ ಕೆ.ಶಂಕರ್ ನಿರ್ದೇಶಕರು. ಕಥೆ, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿಯೂ ಇವರದೇ. ಇನ್ನು, ಈ ಚಿತ್ರ ಲೈರಾ ಎಂಟರ್‌ಪ್ರೈಸಸ್ ಬ್ಯಾನರ್‌ನಡಿ ನಿರ್ಮಾಣವಾಗುತ್ತಿದ್ದು, ಭರತ್ ಗೌಡ ಹಾಗು ಹುಲ್ಲೂರ್ ಮಂಜುನಾಥ್ ಅವರು ನಿರ್ಮಾಣ ಮಾಡುತ್ತಿದ್ದಾರೆ. ಇತ್ತೀಚೆಗೆ ನವರಂಗ ಬಳಿ ಇರುವ ಶ್ರೀ ಗಣಪತಿ ದೇವಾಲಯದಲ್ಲಿ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ನಿರ್ಮಾಪಕ ಹಾಗು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಎನ್.ಎಂ..ಸುರೇಶ್ ಅವರು ಕ್ಯಾಮೆರಾ ಚಾಲನೆ ಮಾಡಿದರೆ, ಉದ್ಯಮಿ ಸಿ.ರಮೇಶ್ ಅವರು ಕ್ಲಾಪ್ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.
ನಿರ್ದೇಶಕ ಕೆ.ಶಂಕರ್ ಅವರಿಗೆ ಇದು ಮೂರನೇ ನಿರ್ದೇಶನದ ಸಿನಿಮಾ. ತಮ್ಮ ಹಾಸ್ಯಮಯ ಸಿನಿಮಾ ಕುರಿತು ಹೇಳಿಕೊಂಡ ನಿರ್ದೇಶಕ ಕೆ.ಶಂಕರ್, “ಇದೊಂದು ಪಕ್ಕಾ ಔಟ್ ಆಂಡ್ ಔಟ್ ಕಾಮಿಡಿ ಸಿನಿಮಾ. “ನನಗೂ ಹೆಂಡ್ತಿ ಬೇಕು” ಎಂಬ ಶೀರ್ಷಿಕೆಯೇ ಚಿತ್ರದ ಸಾರಾಂಶವನ್ನು ಹೇಳುತ್ತೆ. ಚಿತ್ರದ ಒನ್ ಲೈನ್ ಸ್ಟೋರಿ ಕುರಿತು ಹೇಳುವುದಾದರೆ, ಚಿತ್ರದಲ್ಲೊಬ್ಬ ಅಂಧ ತಾನು ಮದುವೆ ಆಗಬೇಕು ಎಂಬ ಆಸೆ ಇಟ್ಟುಕೊಳ್ಳುತ್ತಾನೆ. ಆದರೆ, ಅವನಿಗೆ ಯಾವುದೇ ಕಾರಣಕ್ಕೂ ಮದುವೆ ಆಗಲೇಬಾರದು ಅಂತ ಒಂದಷ್ಟು ಮಂದಿ ತೊಂದರೆ ಕೊಡೋಕೆ ಮುಂದಾಗುತ್ತಾರೆ. ಅಂತಹ ಮಂದಿಯ ಮಧ್ಯೆ ಆ ಅಂಧ ಮದ್ವೆ ಆಗುತ್ತಾನೋ ಇಲ್ಲವೋ ಅನ್ನೋದು ತಮಾಷೆಯ ಜೊತೆ ಜೊತೆಗೆ ಹಾಸ್ಯಮಯವಾಗಿಯೇ ಸಿನಿಮಾ ಸಾಗುತ್ತದೆ.
ಇದರ ನಡುವೆ, ಕಣ್ಣು ಇರುವವರ ಮಧ್ಯೆಯೇ ಕಣ್ಣಿಲ್ಲದವ ಅವರನ್ನು ಹೇಗೆಲ್ಲಾ ಯಾಮಾರಿಸಿ, ತನ್ನ ಗುರಿ ಮುಟ್ಟುತ್ತಾನೆ ಅನ್ನೋದು ಸಸ್ಪೆನ್ಸ್. ಇಡೀ ಚಿತ್ರದ ಕಥೆ ಚಿತ್ರದುರ್ಗದಲ್ಲಿ ನಡೆಯುತ್ತೆ. ಒಟ್ಟಾರೆ ಚಿತ್ರದ ಸಾರಾಂಶ ಏನೆಂದರೆ, ಯಾರೇ ಇರಲಿ, ಬದುಕಲ್ಲಿ ಒಂದೊಳ್ಳೆಯ ಪ್ಲಾನ್ ಮಾಡಿಕೊಳ್ಳದೇ ಇದ್ದರೆ ಲೈಫ್ ಏನಾಗುತ್ತೆ, ಪ್ಲಾನ್ ಮಾಡಿಕೊಂಡರೆ ಲೈಫ್ ಹೇಗಿರುತ್ತೆ ಅನ್ನುವುದರ ಸುತ್ತ ಕಥೆ ಸಾಗುತ್ತದೆ. ಇದು ಫ್ಯಾಮಿಲಿ ಕುಳಿತು ನೋಡಬಹುದಾದ ಸಿನಿಮಾ ಆಗಲಿದೆ” ಎಂದು ವಿವರ ಕೊಡುತ್ತಾರೆ ನಿರ್ದೇಶಕ ಕೆ.ಶಂಕರ್.
ಈ ಚಿತ್ರ ಬಹುತೇಕ ಚಿತ್ರದುರ್ಗ ಹಾಗು ಬೆಂಗಳೂರಲ್ಲಿ ನಡೆಯಲಿದೆ. ಸುಮಾರು ೪೫ ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು, ಸಿನಿಮಾದಲ್ಲಿ ತಬಲ ನಾಣಿ ಹೈಲೈಟ್. ಅವರೇ ಚಿತ್ರದ ಹೀರೋ. ಇನ್ನು ಚಿತ್ರದಲ್ಲಿ ಚೈತನ್ಯ, ಪ್ರಿಯಾ, ಧರ್ಮ, ಮುಖ್ಯಮಂತ್ರಿ ಚಂದ್ರು, ಭೈರತಿ ಭಾನುಪ್ರಕಾಶ್, ಟೆನ್ನಿಸ್ ಕೃಷ್ಣ, ಪಾಟೀಲ್, ಕಿಲ್ಲರ್ ವೆಂಕಟೇಶ್, ಗಣೇಶ್‌ರಾವ್ ಕೇಸರ್‌ಕರ್, ಲಕ್ಷ್ಮಣ ರಾವ್, ಬ್ಯಾಂಕ್ ಜನಾರ್ಧನ್, ಶ್ರೀಧರ್, ಹುಲ್ಲೂರ್ ಮಂಜುನಾಥ್, ಬಿಗ್ ಬಾಸ್ ಮಂಜು, ಪುಣ್ಯಶ್ರೀ, ಮಾ.ಧೃವ ಚಂದನ್ ಅಭಿನಯಿಸಲಿದ್ದಾರೆ. ಚಿತ್ರಕ್ಕೆ ಟಿ.ರವಿಕುಮಾರ್ (ಎಸ್‌ಎಲ್‌ವಿ ರವಿ) ಕ್ಯಾಮೆರಾ ಹಿಡಿದರೆ, ಸಂಜೀವ್ ರೆಡ್ಡಿ ಸಂಕಲನ ಮಾಡುತ್ತಿದ್ದಾರೆ. ಹರಿ ನೃತ್ಯ ನಿರ್ದೇಶನವಿದೆ. ವೇಲು ಸಾಹಸ ಮಾಡಲಿದ್ದಾರೆ. ರವಿ. ಬಿ.ಎಸ್., ಸತೀಶ್ ಪಾಲನೇತ್ರಪ್ಪ, ಶಿವಣ್ಣ, ಪ್ರಸನ್ನ ಸಹ ನಿರ್ದೇಶನವಿದೆ.
ಇನ್ನು, ತಬಲ ನಾಣಿ ಅವರು ಈಗಾಗಲೇ ಅಂಧ ಪಾತ್ರದಲ್ಲಿ ಸೈ ಎನಿಸಿಕೊಂಡಿರುವುದು ಎಲ್ಲರಿಗೂ ಗೊತ್ತಿದೆ. ಮತ್ತೊಮ್ಮೆ ಅವರು ಅಂಧನಾಗಿ ಕಾಣಿಸಿಕೊಳ್ಳುತ್ತಿದ್ದು, ಅದರಲ್ಲೂ “ನನಗೂ ಹೆಂಡ್ತಿ ಬೇಕು” ಅಂತ ಹೊರಟಿದ್ದಾರೆ. ಈ ಹಿಂದಿನ ಎಲ್ಲಾ ಸಿನಿಮಾಗಳಲ್ಲಿ ಅವರು ಕಚಗುಳಿ ಇಟ್ಟು ಪ್ರೇಕ್ಷಕರನ್ನು ನಗಿಸಿದ್ದಾರೆ. ಇಲ್ಲೂ ಅದು ಮುಂದುವರೆಯಲಿದೆ ಎಂಬುದು ಚಿತ್ರತಂಡದ ಹೇಳಿಕೆ.