ಕನ್ನಡದಲ್ಲಿ ಈಗಾಗಲೇ ತರಹೇವಾರಿ ಸಿನಿಮಾಗಳು ಬಂದಿವೆ. ಬರುತ್ತಲೂ ಇವೆ. ಅದರಲ್ಲೂ ನಿಷ್ಕಲ್ಮಶ ಪ್ರೀತಿ ಕುರಿತಾದ ಅದೆಷ್ಟೋ ಕಥೆಗಳು ಬಂದಿವೆ. ಬರುತ್ತಲೂ ಇವೆ. ಸಿನಿಮಾಗಳಲ್ಲಿ ಬ್ಯೂಟಿಫುಲ್ ಕಪಲ್ಸ್ ಕಥೆಗಳಿಗೇನೂ ಬರವಿಲ್ಲ. ಅಂತಹ ನೂರಾರು ಬ್ಯೂಟಿಫುಲ್ ಕಪಲ್ ಲವ್‌ಸ್ಟೋರಿಗಳೂ ಬಂದಿವೆ. ಅಂಥದ್ದೊಂದು ಕಪಲ್ ಲವ್‌ಸ್ಟೋರಿ ಇಟ್ಟುಕೊಂಡು ಹೀಗೊಂದು ಸಿನಿಮಾ ಮೂಡಿಬರುತ್ತಿದೆ. ಈಗಾಗಲೇ ಶೇ.೯೦ರಷ್ಟು ಚಿತ್ರೀಕರಣ ಕೂಡ ಮುಗಿದಿದೆ. ಅಂದಹಾಗೆ, ಆ ಸಿನಿಮಾದ ಹೆಸರು ಪರಿಶುದ್ಧಂ. ಈ ಹೆಸರು ಕೇಳಿದಾಕ್ಷಣ ಇಲ್ಲಿ ಎಲ್ಲವೂ ಪರಿಶುದ್ಧವಾಗಿಯೇ ಇರುತ್ತೆ ಅನ್ನೋದು ಪಕ್ಕಾ. ಹೌದು, ಪರಿಶುದ್ಧಂ ಒಂದೊಳ್ಳೆಯ ಬಾಂಧವ್ಯದ ಕಥೆ. ಇಲ್ಲಿ ಸ್ನೇಹ ಇರಲಿ, ಪ್ರೀತಿ ಇರಲಿ, ಸಂಬಂಧಗಳಿರಲಿ ಎಲ್ಲವೂ ಪರಿಶುದ್ಧವಾಗಿರುತ್ತವೆ ಅನ್ನೋದರ ಸುತ್ತ ಸಾಗುವ ಕಥೆ ಇಲ್ಲಿರಲಿದೆ ಎಂಬುದು ನಿರ್ದೇಶಕರ ಮಾತು.
ಈ ಸಿನಿಮಾಗೆ ಕಾರ್ತಿಕ್ ವೆಂಕಟೇಶ್ ನಿರ್ದೇಶಕರು. ಈ ಹಿಂದೆ ಇವರು ದರ್ಪಣ ಎಂಬ ಸಿನಿಮಾ ಮಾಡಿದ್ದರು. ಆ ಚಿತ್ರದಲ್ಲಿ ಇವರೊಂದು ದಾಖಲೆ ಬರೆದಿದ್ದರು. ಅದೇನೆಂದರೆ, ಸಿನಿಮಾದ ೨೧ ವಿಭಾಗದಲ್ಲಿ ಇವರೇ ಕೆಲಸ ಮಾಡಿದ್ದರು. ಈಗ ಪರಿಶುದ್ಧಂ ಅವರ ಎರಡನೇ ನಿರ್ದೇಶನದ ಚಿತ್ರ. ಈ ಸಿನಿಮಾಗೆ ನಿರ್ಮಾಣ ಮತ್ತು ಸಂಗೀತ ನಿರ್ದೇಶನದ ಜವಾಬ್ದಾರಿಯೂ ಇವರದೇ. ಇವರೊಂದಿಗೆ ನಿರ್ಮಾಣದಲ್ಲಿ ಕುಮಾರ್ ರಾಥೋಡ್ ಮತ್ತು ರೋಹನ್ ಕಿಡಿಯೂರ್ ಕೂಡ ಸಾಥ್ ನೀಡಿದ್ದಾರೆ ಅನ್ನೋದು ವಿಶೇಷ. ತಮ್ಮ ಸಿನಿಮಾ ಕುರಿತು ನಿರ್ದೇಶಕ ಕಾರ್ತಿಕ್ ವೆಂಕಟೇಶ್ ಅವರು ಸಾಕಷ್ಟು ನಿರೀಕ್ಷೆ ಇಟ್ಟುಕೊಂಡಿದ್ದಾರೆ. ಅದಕ್ಕೆ ಕಾರಣ, ಕಥೆ ಮತ್ತು ನಟಿ ಸ್ಪರ್ಶ ರೇಖಾ. ಹೌದು, ಅ ಕುರಿತು ನಿರ್ದೇಶಕರು ಹೇಳೋದಿಷ್ಟು. ಸ್ಪರ್ಶ ರೇಖಾ ಅವರು ಒಂದು ರೀತಿ ಲಕ್ಕಿ. ನನಗೂ ಅಷ್ಟೇ. ಕಾರಣ, ಈ ಹಿಂದೆ ನಾನು ಒಂದು ಸಿನಿಮಾದ ಆಡಿಯೋ ಲಾಂಚ್‌ಗೆ ಆಹ್ವಾನಿಸಿದ್ದೆ. ಅವರು ಬಂದು ಹೋದ ಬಳಿಕ ನನಗೆ ಅದೃಷ್ಟ ಹೆಚ್ಚಾಯ್ತು. ಇನ್ನುಳಿದಂತೆ ಸುದೀಪ್ ಅವರ ಮೊದಲ ಸಿನಿಮಾದಲ್ಲೂ ಅವರಿದ್ದರು. ನಂತರ ಸ್ಟಾರ್ ಹೇಗೆಲ್ಲಾ ತಿರುಗಿತು ಎಲ್ಲರಿಗೂ ಗೊತ್ತಿದೆ. ದರ್ಶನ್ ಜೊತೆಯಲ್ಲೂ ಅವರಿದ್ದಾರೆ. ಹಾಗಾಗಿ ಸ್ಪರ್ಶ ರೇಖಾ ಅವರೊಂದಿಗೆ ನಾನು ಸಿನಿಮಾ ಮಾಡುತ್ತಿರುವ ಖುಷಿ ಇದೆ. ನನಗೂ ಅಂಥದ್ದೊಂದು ಅದೃಷ್ಟ ಸಿಗಲಿ ಅಂತ ಬಯಸುತ್ತೇನೆ ಅನ್ನುವ ಅವರು, ಮುಂದೆಯೂ ಅವರೊಂದಿಗೆ ಸಿನಿಮಾ ಮಾಡ್ತೀನಿ ಅಂತಾರೆ.
ಹಾಗಾದರೆ ಪರಿಶುದ್ಧಂ ಕಥೆ ಏನು? ಇದಕ್ಕೆ ಉತ್ತರಿಸೋ ನಿರ್ದೇಶಕರು, ಗಂಡ ಹೆಂಡತಿ ಸಂಬಂಧವೇ ಪರಿಶುದ್ಧವಾಗಿರುತ್ತೆ. ಅವರ ಮಧ್ಯೆ ಮೂರನೇ ವ್ಯಕ್ತಿಗೆ ಪ್ರವೇಶವಿಲ್ಲ. ಆಕರ್ಷಣೆ ಬೇರೆ, ಪ್ರೀತಿಯೇ ಬೇರೆ, ಇದರ ಮೇಲೆ ಸಿನಿಮಾ ಕಥೆ ಸಾಗುತ್ತದೆ. ಇಲ್ಲಿ ಸ್ಪರ್ಶ ರೇಖಾ ಮತ್ತು ರೋಹನ್ ಕಿಡಿಯೂರು ಆಕರ್ಷಣೆಯಾಗಿದ್ದಾರೆ. ಉಳಿದಂತೆ ಚಿತ್ರದಲ್ಲಿ ಯತಿರಾಜ್, ವಿಕ್ಟರಿ, ದಿಶಾ ಪೂವಯ್ಯ, ಮೈಸೂರು ರಮಾನಂದ, ರಮೇಶ್ ಪಂಡಿತ್, ಕುರಿ ರಂಗ ಇತರರು ಇದ್ದಾರೆ. ಕೃಷ್ಣ ಸಾರಥಿ ಹಾಗು ಕೃಷ್ಣ ಪ್ರೀತಂ ಚಿತ್ರಕ್ಕೆ ಕ್ಯಾಮೆರಾ ಹಿಡಿದರೆ, ಆಯೂರ್ ಸ್ವಾಮಿ ಸಂಕಲನ ಮಾಡಿದ್ದಾರೆ. ಈಗಾಗಲೇ ಶೇ.೯೦ರಷ್ಟು ಬೆಂಗಳೂರಲ್ಲಿ ಚಿತ್ರೀಕರಣ ನಡೆದಿದೆ. ಮಲೇಶಿಯಾ, ಬ್ಯಾಂಕಾಕ್, ಕೌಲಲಂಪುರದಲ್ಲಿ ಒಂದು ಹಾಡನ್ನು ಚಿತ್ರೀಕರಿಸುವ ಯೋಜನೆ ಚಿತ್ರತಂಡಕ್ಕಿದೆ.
ಈ ಚಿತ್ರದಲ್ಲೊಂದು ದಾಖಲೆ ಇದೆ. ಅದೇನೆಂದರೆ, ಸ್ಪರ್ಶ ರೇಖಾ ಅವರಿಗೆ ಪ್ಯಾಥೋ ಸಾಂಗ್ ಇಡಲಾಗಿದ್ದು, ಅದು ಇಂಡಿಯನ್ ಸಿನಿಮಾ ಹಿಸ್ಟರಿಯಲ್ಲೇ ಕೇವಲ ಎರಡೇ ಸ್ವರದ ಮೇಲೆ ಆ ಸಾಂಗ್ ಕಂಪೋಸ್ ಮಾಡಲಾಗಿದೆಯಂತೆ. ಅದರಲ್ಲೂ ಆ ಹಾಡಲ್ಲಿ ಶುರುವಾಗುವ ಅಕ್ಷರಗಳಲ್ಲೆವೂ “ಕ”ನಿಂದಲೇ ಶುರುವಾಗುತ್ತೆ ಅನ್ನೋದು ವಿಶೇಷವಂತೆ. ಇನ್ನು, ಲುಲು ಮಾಲ್‌ನಲ್ಲಿ ಮೊದಲ ಬಾರಿ ಚಿತ್ರೀಕರಿಸಿದ ಮೊದಲ ಸಿನಿಮಾವಂತೆ. ಸದ್ಯ ಮಾತಿನ ಭಾಗದ ಚಿತ್ರೀಕರಣ ಮುಗಿದಿದ್ದು, ಪೋಸ್ಟ್ ಪ್ರೊಡಕ್ಷನ್ ಕೆಲಸ ನಡೆಯುತ್ತಿದೆ. ಅಂದಹಾಗೆ, ಈ ಚಿತ್ರ ಏಪ್ರಿಲ್ ೨೮ರಂದು ಬಿಡುಗಡೆಯಾಗಲಿದೆಯಂತೆ. ಅದೇನೆ ಇರಲಿ, ಈ ಸಿನಿಮಾ ನೋಡುವ ಮಂದಿ ಬಳಿಕ ಪರಿಶುದ್ಧ ಪ್ರೀತಿ, ಗೆಳೆತನ ಬಾಂಧವ್ಯ ಇಟ್ಟುಕೊಂಡರೆ ಈ ಸಿನಿಮಾ ಮಾಡಿದ್ದಕ್ಕೂ ಸಾರ್ಥಕ.
ರಕ್ಷಾ ಶಂಕರ್ ಎಂಟರ್‌ಟೈನ್‌ಮೆಂಟ್ ಬ್ಯೂರೋ ಸಿನಿಲಹರಿ