ರಾಣಗೆ ದುನಿಯಾ ಸಾಥ್‌ !‌ ಕೆ.ಮಂಜು ಬರ್ತ್‌ ಡೇಗೆ ಹಾಡಿನ ಕೊಡುಗೆ…

ನಿರ್ಮಾಪಕ ಕೆ.ಮಂಜು ಅವರ ಪುತ್ರ ಶ್ರೇಯಸ್‌ ಅಭಿನಯದ ರಾಣ ಚಿತ್ರದ ಹಾಡುಗಳು ಹೊರಬಂದಿವೆ. ನಟ ದುನಿಯಾ ವಿಜಯ್‌ ಹಾಡುಗಳನ್ನು ಬಿಡುಗಡೆ ಮಾಡುವ ಮೂಲಕ ಚಿತ್ರತಂಡಕ್ಕೆ ಶುಭಕೋರಿದ್ದಾರೆ. ಅಷ್ಟೇ ಅಲ್ಲ, ನಿರ್ಮಾಪಕ ಕೆ.ಮಂಜು ಅವರ ಹುಟ್ಟುಹಬ್ಬದ ಸಂಭ್ರಮ ಕೂಡ ಹಾಡು ಬಿಡುಗಡೆ ವೇಳೆ ನಡೆದಿದೆ.

ಹೌದು, ಕೆ.ಮಂಜು ಅರ್ಪಿಸಿರುವ ಗುಜ್ಜಾಲ್ ಟಾಕೀಸ್‌ ಬ್ಯಾನರ್‌ನಲ್ಲಿ ಪುರುಷೋತ್ತಮ ಗುಜ್ಜಾಲ್ ನಿರ್ಮಿಸುತ್ತಿರುವ, ನಂದ ಕಿಶೋರ್ ನಿರ್ದೇಶನದ ರಾಣ ಚಿತ್ರದ ಹಾಡುಗಳನ್ನು ದುನಿಯಾ ವಿಜಯ್‌ ರಿಲೀಸ್‌ ಮಾಡಿದ್ದಾರೆ. ಈ ಚಿತ್ರಕ್ಕೆ ಶ್ರೇಯಸ್‌ ಹೀರೋ. ಇನ್ನು ಶಿವು ಭೇರ್ಗಿ ಬರೆದಿರುವ “ಮಳ್ಳಿ ಮಳ್ಳಿ” ಎಂಬ ಹಾಡಿಗೆ ನಾಯಕ ಶ್ರೇಯಸ್‌ ಹಾಗೂ ಸಂಯುಕ್ತ ಹೆಗಡೆ ಹೆಜ್ಜೆ ಹಾಕಿದ್ದಾರೆ. ಇಮ್ರಾನ್ ನೃತ್ಯ ನಿರ್ದೇಶನವಿದೆ. ಹಾಡಿಗೆ ಶಿವು ಅದ್ಭುತವಾದ ಸೆಟ್ ಹಾಕಿದ್ದಾರೆ.

ಹಾಡು ತುಂಬಾ ಚೆನ್ನಾಗಿ ಮೂಡಿಬಂದಿದೆ. ನಾನು ಈ ಸಮಾರಂಭಕ್ಕೆ ಬರಲು ಮುಖ್ಯ ಕಾರಣ ಕೆ.ಮಂಜು ಅವರು ಮಗನ ಮೇಲಿಟ್ಟರುವ ಪ್ರೀತಿ. ಈ ಹಾಡನ್ನು ನೋಡಿದರೆ ಶ್ರೇಯಸ್‌ ಪಟ್ಟಿರುವ ಶ್ರಮ ಗೊತ್ತಾಗುತ್ತೆ. ಸಂಯಕ್ತ ಅವರ ನಟನೆಯೂ ಚೆನ್ನಾಗಿದೆ. ಸಿನಿಮಾ ಕೂಡ ಚೆನ್ನಾಗಿ ಬಂದಿದೆ ಎಂಬ ನಂಬಿಕೆ ಇದೆ. ಚಿತ್ರ ಯಶಸ್ಸು ಕಾಣಲಿ ಎಂದು ಶುಭ ಹಾರೈಸಿದರು ದುನಿಯಾ ವಿಜಯ್.

ಹೀರೋ ಶ್ರೇಯಸ್‌ ಮಾತಿಗೆ ಮೊದಲು ಅಪ್ಪು ಅವರನ್ನು ನೆನೆದರು. ನಂತರ ಮಾತಿಗಿಳಿದ ಅವರು, ಸಂಯುಕ್ತ ಹೆಗಡೆ ಒಳ್ಳೆಯ ನೃತ್ಯಗಾರ್ತಿ.‌ ಅವರೊಡನೆ ನೃತ್ಯ ಮಾಡುವುದು ಅಷ್ಟು ಸುಲಭವಲ್ಲ. ಹಾಗಾಗಿ ಹೆಚ್ಚು ಅಭ್ಯಾಸ‌ ಮಾಡಿದ್ದೆ. ಈ ನಿಟ್ಟಿನಲ್ಲಿ ನೃತ್ಯ ನಿರ್ದೇಶಕ ಇಮ್ರಾನ್ ಸರ್ದಾರಿಯಾ ಹಾಗೂ ಅವರ‌ ಸಹಾಯಕರ ಸಹಕಾರ ಮರೆಯಲು ಸಾಧ್ಯವಿಲ್ಲ. ಚಿತ್ರೀಕರಣ ಬಹುತೇಕ ಮುಗಿದಿದೆ.‌ ಸ್ವಲ್ಪ ಮಾತ್ರ ಬಾಕಿಯಿದೆ. ನಿರ್ಮಾಪಕ ಪುರುಷೋತ್ತಮ್, ನಿರ್ದೇಶಕ ನಂದಕಿಶೋರ್ ಹಾಗೂ ನಮ್ಮ ತಂದೆ ಕೆ.ಮಂಜು ಅವರಿಗೆ ಧನ್ಯವಾದ ಎಂದರು ಶ್ರೇಯಸ್.‌

ನೀವೆಲ್ಲರೂ ಹಾಡು ಚೆನ್ನಾಗಿದೆ ಎಂದು ಹೇಳಿದ್ದು ನನಗೆ ಖುಷಿ ಕೊಟ್ಟಿದೆ. ನನಗೆ ಚಿಕ್ಕ ವಯಸ್ಸಿನಿಂದಲೂ ನೃತ್ಯದಲ್ಲಿ ಆಸಕ್ತಿ. ಈ ಹಾಡಿನಲ್ಲಿ ನೃತ್ಯಕ್ಕೆ ಹೆಚ್ಚು ಒತ್ತು ಕೊಟ್ಟಿದ್ದಾರೆ. ನಿರ್ಮಾಪಕರು ಅದ್ದೂರಿಯಾಗಿ ನಿರ್ಮಾಣ ಮಾಡುತ್ತಿದ್ದಾರೆ. ನಂದಕಿಶೋರ್ ಅವರ ನಿರ್ದೇಶನ ಹಾಗೂ ಶ್ರೇಯಸ್‌ ಅವರ ಅಭಿನಯ ಚೆನ್ನಾಗಿದೆ ಎಂಬುದು ಸಂಯುಕ್ತ ಹೆಗಡೆ ಮಾತು.

ಇದೊಂದು ಬ್ಯಾಚುಲರ್ ಪಾರ್ಟಿ ಕುರಿತ ಹಾಡು.‌ ಇದರಲ್ಲಿ ಸಂಯುಕ್ತ ಹೆಗಡೆ ಮತ್ತು ಶ್ರೇಯಸ್‌ ಚೆನ್ನಾಗಿ ನಟಿಸಿದ್ದಾರೆ. ಶಿವು ಅವರ ಕಲಾ ನಿರ್ದೇಶನ,‌ ಶಿವು ಭೇರ್ಗಿ ಅವರ ಗೀತೆ , ಇಮ್ರಾನ್ ನೃತ್ಯ ನಿರ್ದೇಶನ‌ ಎಲ್ಲವೂ ಚೆನ್ನಾಗಿದೆ. ಕೆ.ಮಂಜು ಅವರ ಹುಟ್ಚುಹಬ್ಬಕ್ಕೆ ಹಾಡು ಬಿಡುಗಡೆ ಮಾಡಿದ್ದೇವೆ. ಮೇ ವೇಳೆಗೆ ಚಿತ್ರವನ್ನು ತೆರೆಗೆ ತರಲು ಸಿದ್ದತೆ ನಡೆಯುತ್ತಿದೆ ಎಂದು ನಿರ್ಮಾಪಕ ಪುರಷೋತ್ತಮ್ ಗುಜ್ಜಾಲ್ ವಿವರಿಸಿದರು.

ನಿರ್ದೇಶಕ ನಂದಕಿಶೋರ್, ಛಾಯಾಗ್ರಾಹಕ ಶೇಖರ್ ಚಂದ್ರ, ನಟಿ ರಜನಿ‌ ಭಾರದ್ವಾಜ್ ಸಿನಿಮಾ ಕುರಿತು ಮಾತನಾಡಿದರು. ‌ರಮೇಶ್ ರೆಡ್ಡಿ,‌‌ ದೀಪಕ್ ಇದ್ದರು. ಚಂದನ್ ಶೆಟ್ಟಿ ಸಂಗೀತ ನೀಡಿದ್ದಾರೆ.

Related Posts

error: Content is protected !!