ಟ್ಯಾಕ್ಸಿ ಚಾಲಕನೊಬ್ಬನ ಜೀವನದ ಕಥಾನಕ ಇರುವ ಯೆಲ್ಲೋ ಬೋರ್ಡ್ ಚಿತ್ರದಲ್ಲಿ ಪವರ್‌ಸ್ಟಾರ್ ಪುನೀತ್ ರಾಜ್‌ಕುಮಾರ್ ಅವರು ಹಾಡೊಂದನ್ನು ಹಾಡಿದ್ದಾರೆ. ತ್ರಿಲೋಕ್ ರೆಡ್ಡಿ ನಿರ್ದೇಶನದ ಈ ಚಿತ್ರದಲ್ಲಿ ಪ್ರದೀಪ್ ಟ್ಯಾಕ್ಸಿ ಚಾಲಕರಾಗಿ ಕಾಣಿಸಿಕೊಂಡಿದ್ದಾರೆ. ಟಾಕ್ಸಿ ಚಾಲಕರೆಲ್ಲ ಕೆಟ್ಟವರಲ್ಲ. ಅವರಲ್ಲೂ ಒಳ್ಳೆಯವರಿರುತ್ತಾರೆ. ಅವರಿಂದಲೂ ಸಮಾಜ ಸುಧಾರಣೆ ಸಾಧ್ಯ ಎನ್ನುವ ವಿಭಿನ್ನ ಕಥಾಹಂದರ ಇಟ್ಟುಕೊಂಡು ನಿರ್ಮಾಣವಾಗಿರುವ ಚಿತ್ರವಿದು. ಅಹಲ್ಯಾ ಸುರೇಶ್ ಹಾಗೂ ಸ್ನೇಹ ನಾಯಕಿಯರಾಗಿ ಕಾಣಿಸಿಕೊಂಡಿದ್ದಾರೆ, ವಿಂಟೇಜ್ ಫಿಲಂಸ್ ಮೂಲಕ ನವೀನ್ ಅವರು ಈ ಚಿತ್ರವನ್ನು ನಿರ್ಮಿಸಿದ್ದಾರೆ. ಈ ಚಿತ್ರದಲ್ಲಿ ಪುನೀತ್ ರಾಜ್‌ಕುಮಾರ್ ಅವರು ಮೊದಲ ಬಾರಿಗೆ ರ‍್ಯಾಪ್‌ಸಾಂಗ್ ಹಾಡಿರುವುದು ವಿಶೇಷ. ಅಂದಹಾಗೆ, ಇತ್ತೀಚೆಗೆ ಈ ಹಾಡು ಬಿಡುಗಡೆಯಾಗಿದ್ದು, ಎಲ್ಲೆಡೆ ಒಳ್ಳೆಯ ಮೆಚ್ಚುಗೆ ಪಡೆದುಕೊಂಡಿದೆ. ಸದ್ಯದಲ್ಲೇ ಚಿತ್ರದ ಟ್ರೇಲರ್ ಕೂಡ ಬಿಡುಗಡೆಯಾಗಲಿದೆ. ಮಾರ್ಚ್ ೪ಕ್ಕೆ ಚಿತ್ರ ಬಿಡುಗಡೆ ಮಾಡಲು ಚಿತ್ರತಂಡ ಸಜ್ಜಾಗಿದೆ.
ನಿರ್ದೇಶಕ ತ್ರಿಲೋಕ್ ಮಾತನಾಡಿ, “ನಾವು ಈ ಸಿನಿಮಾ ಶುರು ಮಾಡುವಾಗ ಚಾಲಕರಿಗೆಂದೇ ಒಂದು ಹಾಡನ್ನು ಪ್ಲಾನ್ ಮಾಡಿದ್ದೆವು. ಅದನ್ನು ನಿರ್ದೇಶಕ ಚೇತನ್ ಅವರಿಂದ ಬರೆಸಿದೆವು, ಯಾರ ಕೈಲಿ ಹಾಡಿಸಬೇಕು ಅಂತ ಯೋಚಿಸುತ್ತಿರುವಾಗ ಮೊದಲು ಕಣ್ಣಮುಂದೆ ಬಂದದ್ದೇ ಅಪ್ಪು. ಪ್ರದೀಪ್ ಮೂಲಕ ಪುನೀತ್‌ರನ್ನು ಅಪ್ರೋಚ್ ಮಾಡಿದಾಗ ಅವರು ಖುಷಿಯಿಂದಲೇ ಒಪ್ಪಿ ಹಾಡಿಕೊಟ್ಟರು ಎಂದು ನೆನಪಿಸಿಕೊಂಡರು ಅವರು.
ನಾಯಕ ಪ್ರದೀಪ್ ಅವರಿಗೆ ಅಪ್ಪು ಸರ್ ಬಳಿ ಹಾಡು ಹಾಡಿಸಿದ್ದೇ ದೊಡ್ಡ ಖುಷಿಯಾಗಿದೆಯಂತೆ. ಅವರೇ ಹೇಳುವಂತೆ, “ನನ್ನ ಹತ್ತು ವರ್ಷಗಳ ಸಿನಿ ಜರ್ನಿಯಲ್ಲಿ ಮೊದಲ ಸಲ ಪುನೀತ್ ಅವರು ನನ್ನ ಚಿತ್ರಕ್ಕೆ ಪ್ರೀತಿಯಿಂದಲೇ ಹಾಡಿದ್ದಾರೆ. ಆರಂಭದಲ್ಲಿ ಜಾಲಿಡೇಸ್ ಚಿತ್ರದ ಆಡಿಯೋ ಬಿಡುಗಡೆಗೂ ಅವರು ಬಂದು ಹಾರೈಸಿದ್ದರು, ಮೊದಲ ಬಾರಿಗೆ ಡ್ರೈವರ್‌ಗಳ ಮೇಲೆ ಸಿನಿಮಾ ಮಾಡಿದ್ದೀರಿ, ಒಳ್ಳೇದಾಗಲಿ, ಹಾಡು ಚೆನ್ನಾಗಿದೆ ಎಂದು ಯಾವುದೇ ಸಂಭಾವನೆ ತೆಗೆದುಕೊಳ್ಳದೆ ಹಾಡಿದರು. ಎಲ್ಲಾ ಡ್ರೈವರ್‌ಗಳಿಗೆ ನನ್ನ ಕಡೆಯಿಂದ ಕೊಡುಗೆ ಎನ್ನುವ ಮೂಲಕ ಪ್ರೀತಿ ತೋರಿದ್ದಾರೆ. ಅವರು ಎಂದೆಂದಿಗೂ ನಮ್ಮೊಂದಿಗೆ ಇರುತ್ತಾರೆ ಅಂದರು ಪ್ರದೀಪ್.
ಸದ್ಯ ಈ ಹಾಡಿಗೆ ಎಲ್ಲಾ ಚಾಲಕರಿಂದ ಉತ್ತಮ ಪ್ರತಿಕ್ರಿಯೆ ಸಿಗುತ್ತಿದೆ, ನಮಗೆ ಬೆಲೆಕೊಟ್ಟು ಒಳ್ಳೇ ಸಾಂಗ್ ಮಾಡಿದ್ದೀರಿ ಎಂದು ಪ್ರಶಂಸೆ ವ್ಯಕ್ತಪಡಿಸುತ್ತಿದ್ದಾರೆ, ಹೀರೋಯಿಸಂ ಇಲ್ಲದ ಪಾತ್ರವಿದು. ಯಾರೋ ಒಬ್ಬರು ಮಾಡುವ ತಪ್ಪಿಗೆ, ಎಲ್ಲ ಟ್ಯಾಕ್ಸಿ ಚಾಲಕರನ್ನೂ ದೂಷಿಸುವುದು ತಪ್ಪು ಎಂಬ ಸಂದೇಶ ಇಲ್ಲಿದೆ. ಕಾರ್ಯಕಾರಿ ನಿರ್ಮಾಪಕ ನವೀನ್, “ಇಂದು ಅಪ್ಪು ಸಾಂಗ್ ರಿಲೀಸ್ ಆಗಿದೆ. ಇದಕ್ಕೆ ಡ್ರೈರ್‌ಗಳಿಂದ ಉತ್ತಮ ಪ್ರತಿಕ್ರಿಯೆ ಬರುತ್ತಿದೆ. ಅವರ ಕೈಲೇ ಈ ಹಾಡನ್ನು ಬಿಡುಗಡೆ ಮಾಡಿಸಬೇಕೆಂದು ತುಂಬಾ ಆಸೆಯಿತ್ತು. ಆದರೆ ಆಗಲಿಲ್ಲ, ಅಪ್ಪು ಅವರ ಒಂದು ಪ್ರತಿಕ್ರಿಯೆಯನ್ನೂ ತೆಗೆದುಕೊಳ್ಳಲಾಗಲಿಲ್ಲವಲ್ಲ ಎಂಬ ಗಿಲ್ಟ್ ನನ್ನನ್ನು ಕಾಡುತ್ತಿದೆ ಎಂದು ಬೇಸರ ವ್ಯಕ್ತಪಡಿಸಿದರು. ಟ್ಯಾಕ್ಸಿ ಚಾಲಕನ ಕನಸು ಮತ್ತು ಆಸೆಗಳ ಸುತ್ತ ಹೆಣೆದ ಕಥೆಯಿದು, ಒಂದು ಕೊಲೆಯ ಆರೋಪ ಹೊತ್ತು ನಾಯಕ ಅದರಿಂದ ಹೇಗೆ ಹೊರಬರುತ್ತಾನೆ ಎಂದು ಈ ಚಿತ್ರದಲ್ಲಿ ಹೇಳಲಾಗಿದೆ, ಅದ್ವಿಕ್ ಅವರ ಸಂಗೀತವಿದೆ. ಪ್ರವೀಣ್ ಅವರ ಛಾಯಾಗ್ರಹಣ ಚಿತ್ರಕ್ಕಿದೆ.