ತಬಲ ನಾಣಿಗೆ ಹೆಂಡ್ತಿ ಬೇಕಂತೆ! ಬರಲಿದೆ ಹೀಗೊಂದು ಕಾಮಿಡಿ ಚಿತ್ರ: ಮತ್ತೆ ಅಂಧನಾಗಿ ಮೋಡಿ ಮಾಡಲಿದ್ದಾರೆ ನಾಣಿ…

ಹಾಸ್ಯ ನಟ ತಬಲನಾಣಿ ಅವರು ಮತ್ತೊಂದು ಸಿನಿಮಾ ಒಪ್ಪಿಕೊಂಡಿದ್ದಾರೆ. ಆ ಚಿತ್ರಕ್ಕೆ “ನನಗೂ ಹೇಂಡ್ತಿ ಬೇಕು” ಎಂದು ಹೆಸರಿಡಲಾಗಿದೆ. ಹೆಸರಲ್ಲೇ ಒಂದು ಮಜಾ ಇದೆ ಅಂದಮೇಲೆ ಚಿತ್ರದ ಕಥೆ ಮತ್ತು ಮಾತುಗಳಲ್ಲೂ ಆ ಮಜಾ ಇದ್ದೇ ಇರುತ್ತದೆ. ಈ ಚಿತ್ರದಲ್ಲಿ ಅವರು ವಿಶೇಷ ಪಾತ್ರ ನಿರ್ವಹಿಸುತ್ತಿದ್ದಾರೆ. ಅಲ್ಲಿಗೆ, ಈ ಸಿನಿಮಾದ ಹೈಲೈಟ್‌ ಅವರೇ. ತಬಲ ನಾಣಿ ಸಿನಿಮಾ ಅಂದಮೇಲೆ ಅಲ್ಲಿ ಮಾತಿಗೇನೂ ಬರ ಇರೋದಿಲ್ಲ. ಅದರಲ್ಲೂ ಸಖತ್‌ ಪಂಚಿಂಗ್‌ ಫನ್ನಿ ಡೈಲಾಗ್‌ಗಳದ್ದೇ ಕಾರುಬಾರು. ಮತ್ತೆ ಜನರನ್ನು ನಗಿಸೋಕೆ ನಾಣಿ ಸಜ್ಜಾಗಿದ್ದಾರೆ. ಅವರನ್ನು ಸಜ್ಜು ಮಾಡಿರೋದು ನಿರ್ದೇಶಕ ಕೆ.ಶಂಕರ್.‌ ಅವರಿಗೆ ಹಣ ಹಾಕಿ ಸಾಥ್‌ ನೀಡಿರೋದು ಭರತ್‌ ಗೌಡ ಹಾಗು ಹುಲ್ಲೂರ್‌ ಮಂಜುನಾಥ್. ಕೋಟೆ ನಾಡು ಚಿತ್ರದುರ್ಗದಲ್ಲಿ ನಡೆಯೋ ಕಥೆಯಲ್ಲಿ ನೂರಾರು ತಿರುವುಗಳಿದ್ದು, ಇದೊಂದು ಅಪ್ಪಟ ಕೌಟುಂಬಿಕ ಸಿನಿಮಾ ಎಂಬುದು ಚಿತ್ರತಂಡದ ಮಾತು….

ಕನ್ನಡದಲ್ಲಿ ಈಗಾಗಲೇ ಸಾಕಷ್ಟು ಹಾಸ್ಯಮಯ ಸಿನಿಮಾಗಳು ಬಂದಿವೆ. ಅದರಲ್ಲೂ ಹಾಸ್ಯ ಸಿನಿಮಾಗಳಿಗೆ ಸಾಕಷ್ಟು ಬೇಡಿಕೆಯೂ ಇದೆ. ಈಗ ಮತ್ತೊಂದು ಹಾಸ್ಯಮಯ ಸಿನಿಮಾ ಶುರುವಾಗುತ್ತಿದೆ. ಹಾಸ್ಯ ಅಂದಾಕ್ಷಣ, ಥಟ್ಟನೆ ನೆನಪಾಗೋದೇ ತಬಲ ನಾಣಿ. ಹೌದು, ತಬಲ ನಾಣಿ ಅವರನ್ನು ನೋಡಿದ ಕೂಡಲೇ ಸಿನಿಮಾ ಮಂದಿಗೆ ಒಂದು ರೀತಿ ಖುಷಿ. ಅದಕ್ಕೆ ಕಾರಣ, ಅವರ ಪಂಚಿಂಗ್‌ ಡೈಲಾಗ್‌ಗಳು, ಆಗಾಗ ಹರಿಬಿಡುವ ಡಬ್ಬಲ್‌ ಮೀನಿಂಗ್‌ ಮಾತುಗಳು. ಇವೆಲ್ಲದರಿಂದಲೇ ಅವರ ಸಿನಿಮಾಗಳು ಸಕ್ಸಸ್‌ ಆಗಿದ್ದು ಗೊತ್ತೇ ಇದೆ. ತಬಲ ನಾಣಿ ಅವರ ಸಿನಿಮಾಗಳಲ್ಲಿ ಮಾತುಗಳೇ ಬಂಡವಾಳ. ಅಂಥದ್ದೊಂದು ಮಾತುಗಳ ಮಳೆ ಸುರಿಸುವಂತಹ ಮತ್ತೊಂದು ಸಿನಿಮಾಗೆ ಸಜ್ಜಾಗಿದ್ದಾರೆ ತಬಲ ನಾಣಿ.

ಆ ಸಿನಿಮಾಗೆ “ನನಗೂ ಹೆಂಡ್ತಿ ಬೇಕು” ಎಂದು ಹೆಸರಿಡಲಾಗಿದೆ. ಈ ಚಿತ್ರದ ಶೀರ್ಷಿಕೆ ನೋಡಿದ ಕೂಡಲೇ ಇದೊಂದು ಪಕ್ಕಾ ಕಾಮಿಡಿ ಸಿನಿಮಾ ಅನಿಸದೇ ಇರದು. ಈ ಸಿನಿಮಾಗೆ ಕೆ.ಶಂಕರ್‌ ನಿರ್ದೇಶಕರು. ಕಥೆ, ಚಿತ್ರಕಥೆ, ಸಂಭಾಷಣೆ ಜವಾಬ್ದಾರಿಯೂ ಇವರದೇ. ಇನ್ನು, ಈ ಚಿತ್ರ ಲೈರಾ ಎಂಟರ್‌ಪ್ರೈಸಸ್‌ ಬ್ಯಾನರ್‌ನಡಿ ನಿರ್ಮಾಣವಾಗುತ್ತಿದ್ದು, ಭರತ್‌ ಗೌಡ ಹಾಗು ಹುಲ್ಲೂರ್‌ ಮಂಜುನಾಥ್‌ ಅವರು ನಿರ್ಮಾಣ ಮಾಡುತ್ತಿದ್ದಾರೆ. ಇತ್ತೀಚೆಗೆ ನವರಂಗ ಬಳಿ ಇರುವ ಶ್ರೀ ಗಣಪತಿ ದೇವಾಲಯದಲ್ಲಿ ಚಿತ್ರಕ್ಕೆ ಮುಹೂರ್ತ ನೆರವೇರಿದೆ. ನಿರ್ಮಾಪಕ ಹಾಗು ಕರ್ನಾಟಕ ಚಲನಚಿತ್ರ ವಾಣಿಜ್ಯ ಮಂಡಳಿ ಕಾರ್ಯದರ್ಶಿ ಎನ್.ಎಂ..ಸುರೇಶ್‌ ಅವರು ಕ್ಯಾಮೆರಾ ಚಾಲನೆ ಮಾಡಿದರೆ, ಉದ್ಯಮಿ ಸಿ.ರಮೇಶ್‌ ಅವರು ಕ್ಲಾಪ್‌ ಮಾಡಿ ಚಿತ್ರತಂಡಕ್ಕೆ ಶುಭ ಹಾರೈಸಿದ್ದಾರೆ.

ನಿರ್ದೇಶಕ ಕೆ.ಶಂಕರ್‌ ಅವರಿಗೆ ಇದು ಮೂರನೇ ನಿರ್ದೇಶನದ ಸಿನಿಮಾ. ತಮ್ಮ ಹಾಸ್ಯಮಯ ಸಿನಿಮಾ ಕುರಿತು ಹೇಳಿಕೊಂಡ ನಿರ್ದೇಶಕ ಕೆ.ಶಂಕರ್‌, “ಇದೊಂದು ಪಕ್ಕಾ ಔಟ್‌ ಆಂಡ್‌ ಔಟ್‌ ಕಾಮಿಡಿ ಸಿನಿಮಾ. “ನನಗೂ ಹೆಂಡ್ತಿ ಬೇಕು” ಎಂಬ ಶೀರ್ಷಿಕೆಯೇ ಚಿತ್ರದ ಸಾರಾಂಶವನ್ನು ಹೇಳುತ್ತೆ. ಚಿತ್ರದ ಒನ್‌ ಲೈನ್‌ ಸ್ಟೋರಿ ಕುರಿತು ಹೇಳುವುದಾದರೆ, ಚಿತ್ರದಲ್ಲೊಬ್ಬ ಅಂಧ ತಾನು ಮದುವೆ ಆಗಬೇಕು ಎಂಬ ಆಸೆ ಇಟ್ಟುಕೊಳ್ಳುತ್ತಾನೆ. ಆದರೆ, ಅವನಿಗೆ ಯಾವುದೇ ಕಾರಣಕ್ಕೂ ಮದುವೆ ಆಗಲೇಬಾರದು ಅಂತ ಒಂದಷ್ಟು ಮಂದಿ ತೊಂದರೆ ಕೊಡೋಕೆ ಮುಂದಾಗುತ್ತಾರೆ. ಅಂತಹ ಮಂದಿಯ ಮಧ್ಯೆ ಆ ಅಂಧ ಮದ್ವೆ ಆಗುತ್ತಾನೋ ಇಲ್ಲವೋ ಅನ್ನೋದು ತಮಾಷೆಯ ಜೊತೆ ಜೊತೆಗೆ ಹಾಸ್ಯಮಯವಾಗಿಯೇ ಸಿನಿಮಾ ಸಾಗುತ್ತದೆ.

ಇದರ ನಡುವೆ, ಕಣ್ಣು ಇರುವವರ ಮಧ್ಯೆಯೇ ಕಣ್ಣಿಲ್ಲದವ ಅವರನ್ನು ಹೇಗೆಲ್ಲಾ ಯಾಮಾರಿಸಿ, ತನ್ನ ಗುರಿ ಮುಟ್ಟುತ್ತಾನೆ ಅನ್ನೋದು ಸಸ್ಪೆನ್ಸ್.‌ ಇಡೀ ಚಿತ್ರದ ಕಥೆ ಚಿತ್ರದುರ್ಗದಲ್ಲಿ ನಡೆಯುತ್ತೆ. ಒಟ್ಟಾರೆ ಚಿತ್ರದ ಸಾರಾಂಶ ಏನೆಂದರೆ, ಯಾರೇ ಇರಲಿ, ಬದುಕಲ್ಲಿ ಒಂದೊಳ್ಳೆಯ ಪ್ಲಾನ್‌ ಮಾಡಿಕೊಳ್ಳದೇ ಇದ್ದರೆ ಲೈಫ್‌ ಏನಾಗುತ್ತೆ, ಪ್ಲಾನ್‌ ಮಾಡಿಕೊಂಡರೆ ಲೈಫ್‌ ಹೇಗಿರುತ್ತೆ ಅನ್ನುವುದರ ಸುತ್ತ ಕಥೆ ಸಾಗುತ್ತದೆ. ಇದು ಫ್ಯಾಮಿಲಿ ಕುಳಿತು ನೋಡಬಹುದಾದ ಸಿನಿಮಾ ಆಗಲಿದೆ” ಎಂದು ವಿವರ ಕೊಡುತ್ತಾರೆ ನಿರ್ದೇಶಕ ಕೆ.ಶಂಕರ್.‌

ಈ ಚಿತ್ರ ಬಹುತೇಕ ಚಿತ್ರದುರ್ಗ ಹಾಗು ಬೆಂಗಳೂರಲ್ಲಿ ನಡೆಯಲಿದೆ. ಸುಮಾರು ೪೫ ದಿನಗಳ ಕಾಲ ಚಿತ್ರೀಕರಣ ನಡೆಯಲಿದ್ದು, ಸಿನಿಮಾದಲ್ಲಿ ತಬಲ ನಾಣಿ ಹೈಲೈಟ್.‌ ಅವರೇ ಚಿತ್ರದ ಹೀರೋ. ಇನ್ನು ಚಿತ್ರದಲ್ಲಿ ಚೈತನ್ಯ, ಪ್ರಿಯಾ, ಧರ್ಮ, ಮುಖ್ಯಮಂತ್ರಿ ಚಂದ್ರು, ಭೈರತಿ ಭಾನುಪ್ರಕಾಶ್‌, ಟೆನ್ನಿಸ್‌ ಕೃಷ್ಣ, ಪಾಟೀಲ್‌, ಕಿಲ್ಲರ್‌ ವೆಂಕಟೇಶ್‌, ಗಣೇಶ್‌ರಾವ್‌ ಕೇಸರ್‌ಕರ್‌, ಲಕ್ಷ್ಮಣ ರಾವ್‌, ಬ್ಯಾಂಕ್‌ ಜನಾರ್ಧನ್‌, ಶ್ರೀಧರ್‌, ಹುಲ್ಲೂರ್‌ ಮಂಜುನಾಥ್‌, ಬಿಗ್‌ ಬಾಸ್‌ ಮಂಜು, ಪುಣ್ಯಶ್ರೀ, ಮಾ.ಧೃವ ಚಂದನ್‌ ಅಭಿನಯಿಸಲಿದ್ದಾರೆ. ಚಿತ್ರಕ್ಕೆ ಟಿ.ರವಿಕುಮಾರ್‌ (ಎಸ್‌ಎಲ್‌ವಿ ರವಿ) ಕ್ಯಾಮೆರಾ ಹಿಡಿದರೆ, ಸಂಜೀವ್‌ ರೆಡ್ಡಿ ಸಂಕಲನ ಮಾಡುತ್ತಿದ್ದಾರೆ. ಹರಿ ನೃತ್ಯ ನಿರ್ದೇಶನವಿದೆ. ವೇಲು ಸಾಹಸ ಮಾಡಲಿದ್ದಾರೆ. ರವಿ. ಬಿ.ಎಸ್.‌, ಸತೀಶ್‌ ಪಾಲನೇತ್ರಪ್ಪ, ಶಿವಣ್ಣ, ಪ್ರಸನ್ನ ಸಹ ನಿರ್ದೇಶನವಿದೆ.

ಇನ್ನು, ತಬಲ ನಾಣಿ ಅವರು ಈಗಾಗಲೇ ಅಂಧ ಪಾತ್ರದಲ್ಲಿ ಸೈ ಎನಿಸಿಕೊಂಡಿರುವುದು ಎಲ್ಲರಿಗೂ ಗೊತ್ತಿದೆ. ಮತ್ತೊಮ್ಮೆ ಅವರು ಅಂಧನಾಗಿ ಕಾಣಿಸಿಕೊಳ್ಳುತ್ತಿದ್ದು, ಅದರಲ್ಲೂ “ನನಗೂ ಹೆಂಡ್ತಿ ಬೇಕು” ಅಂತ ಹೊರಟಿದ್ದಾರೆ. ಈ ಹಿಂದಿನ ಎಲ್ಲಾ ಸಿನಿಮಾಗಳಲ್ಲಿ ಅವರು ಕಚಗುಳಿ ಇಟ್ಟು ಪ್ರೇಕ್ಷಕರನ್ನು ನಗಿಸಿದ್ದಾರೆ. ಇಲ್ಲೂ ಅದು ಮುಂದುವರೆಯಲಿದೆ ಎಂಬುದು ಚಿತ್ರತಂಡದ ಹೇಳಿಕೆ.

Related Posts

error: Content is protected !!